ಸಮುದ್ರ ಮಥನ 26:
ಶುದ್ಧಿಯ ಒಳ-ಹೊರಗು
ಶುದ್ಧಿಯ ಒಳ-ಹೊರಗು
ಆಯ್ದುಕೊಂಡ ಹೆಗ್ಗುರಿಯ ಹಾದಿಯಿಂದ ಜಾರದಿರಲು, ಜಾರದೇ ಮತ್ತೆ ಮೇಲೆ ಏರಲು, ಕಡೆಯಲ್ಲಿ ಆ ಹೆಗ್ಗುರಿಯಲ್ಲಿ ಒಂದಾಗಲು ಅನುಕೂಲಿಸುವ ಪ್ರಶಸ್ತ ಪರಿಸ್ಥಿತಿಯೇ ಶುದ್ಧಿ. ಅದರಲ್ಲಿ ಸ್ನಾನವೂ ಬರಬಹುದು. ಸಂಪಾದನೆಯೂ ಸೇರಿಕೊಳ್ಳಬಹುದು. ಗಂಧ-ಪುಷ್ಟ-ಕುಂಕುಮ ಹೀಗೆ ಯಾವುದೂ ಜೊತೆಯಲ್ಲಿರಬಹುದು.
ಶುದ್ಧತೆ ಪ್ರಫುಲ್ಲತೆಗೆ ದಾರಿ. ಆದ್ದರಿಂದ ಶುದ್ಧವಾಗಿರಲು ಒಂದಿಷ್ಟು ಕಟ್ಟುಪಾಡುಗಳು ಅತ್ಯಗತ್ಯ.
ಈ ನೋಟದ ವಿನಾ ಶುದ್ಧತೆ, ಶುದ್ಧಾಚಾರಗಳು ಅರ್ಥಹೀನ. ಶುದ್ಧಾಚಾರದ ಮಡಿಯ ವಿಷಯದಲ್ಲೂ ಆಗಿರುವುದೂ ಇದೇ.
ಮಡಿ ಮೈ ಮೇಲೆ ಮಾತ್ರ ಅಂಟಿಕೊಂಡಿದೆ. ಒಳಗೆ ಇಳಿಯುತ್ತಿಲ್ಲ. ಆದ್ದರಿಂದ ಸ್ನಾನ ಮಾತ್ರದಿಂದ ಮಡಿಯಾಗುತ್ತದೆ. ಇಸ್ತ್ರಿಯಾದ ಬಟ್ಟೆ ಉಟ್ಟಾಗ ಮಡಿ ಗಟ್ಟಿಯಾಗಿ ನಿಲ್ಲುತ್ತದೆ. ಗಂಧ-ಕುಂಕುಮದಿಂದ ಭಕ್ತಿ ಬರುತ್ತದೆ. ಇಷ್ಟಾದರೆ ಸುತ್ತಲ ಜನ ಮರುಳಾಗುತ್ತದೆ. ಅಲ್ಲಿಗೆ ಮಡಿಯ ಪರಾಕಾಷ್ಠೆಯನ್ನು ತಲುಪಿದಂತಾಗುತ್ತದೆ.
ಆಗಲೇ ಬುದ್ಧಿ ಜೀವಿಗಳು ಪ್ರಶ್ನಿಸುವುದು. ಇಂತಿಪ್ಪ ಮಡಿ ಯಾವುದಕ್ಕೋಸ್ಕರ? ಅದು ನಿಮ್ಮ ನೆಮ್ಮದಿಗೋ? ಶೋಕಿಗೋ? ಮತ್ತೊಬ್ಬರನ್ನು ಹೊಸೆದುಹಾಕಲೋ? ಪ್ರಶ್ನೆಗಳಿಗೆ ಉತ್ತರಿಸಲು ಪೀಡಿಸುತ್ತಾರೆ.
ಆ ಪೀಡೆ ಶುದ್ಧಿಯ ಮರ್ಮವನ್ನು ತಿಳಿಯಲು ಪ್ರೇರೇಪಿಸಿದರೆ ಒಳ್ಳೆಯದು.
ಆಯ್ದುಕೊಂಡ ಹೆಗ್ಗುರಿಯ ಹಾದಿಯಿಂದ ಜಾರದಿರಲು, ಜಾರದೇ ಮತ್ತೆ ಮೇಲೆ ಏರಲು, ಕಡೆಯಲ್ಲಿ ಆ ಹೆಗ್ಗುರಿಯಲ್ಲಿ ಒಂದಾಗಲು ಅನುಕೂಲಿಸುವ ಪ್ರಶಸ್ತ ಪರಿಸ್ಥಿತಿಯೇ ಶುದ್ಧಿ. ಅದರಲ್ಲಿ ಸ್ನಾನವೂ ಬರಬಹುದು. ಸಂಪಾದನೆಯೂ ಸೇರಿಕೊಳ್ಳಬಹುದು. ಗಂಧ-ಪುಷ್ಟ-ಕುಂಕುಮ ಹೀಗೆ ಯಾವುದೂ ಜೊತೆಯಲ್ಲಿರಬಹುದು. ಒಟ್ಟಿನಲ್ಲಿ ಎಲ್ಲವೂ ಗುರಿಯ ಸಾಧನೆಗೆ ಅನುಕೂಲಕರ ಆಗಿರಬೇಕು. ಆ ಹಂತದ ನಿಷ್ಠೆ, ನಿಖರತೆ ಒಬ್ಬನ ಶುದ್ಧಾಚಾರದ ಮಡಿಯ ಮಾನದಂಡ.
ಸಾಧನೆಗೆ ಏನೊಂದೂ ನಿರ್ದಿಷ್ಟವಾಗಿ ನಿಲ್ಲಿಸಿಕೊಳ್ಳದೇ ಶುದ್ಧಿಯ ಸಾಧನೆ ಅನರ್ಥದಾಯಕ. ಅದರ ಐತಿಹಾಸಿಕ ಗಟ್ಟಿತನ ಅದು ಒಂದಷ್ಟು ಕಾಲ ನಡೆದುಕೊಂಡು ಹೋಗಲು ಅವಕಾಶ ಕಲ್ಪಿಸಬಹುದು. ನಂತರ ಆ ಶುದ್ಧಿ ತನ್ನ ಪ್ರಸ್ತುತತೆಯನ್ನು ಕಳೆದುಕೊಂಡು ಎಲ್ಲರ ಅಸಡ್ಡೆಗೆ ಒಳಗಾಗುತ್ತದೆ. ಆಗಲೂ ಸಂಪ್ರದಾಯಕ್ಕೆ ಕಟ್ಟುಬೀಳುವ ಅನಿವಾರ್ಯತೆ ಎದುರಾದರೆ ಶುದ್ಧಿಯನ್ನು ಕಾಪಾಡಿಕೊಳ್ಳುವ ಸಂಕಟಪಡಬೇಕಾಗುತ್ತದೆ. ತಾತ್ಸಾರಕ್ಕೆ ಗುರಿಯಾಗಬೇಕಾಗುತ್ತದೆ.
ಹಾಗಾಗಬಾರದು. ಶುದ್ಧಾಚಾರದ ಮಡಿ ಜೀವಂತವಾಗಿರಬೇಕು. ನಾಡಿನಾಡಿಗಳಲ್ಲಿ ಹರಿಯಬೇಕು. ನರನಾಡಿಗಳನ್ನು ಒಂದಕ್ಕೊಂದು ಬೆಸೆಯಬೇಕು. ಬದುಕು ಸುಂದರವಾಗುತ್ತದೆ. ಅಷ್ಟೇ ಅಲ್ಲದೇ, 'ತೀರ್ಥೀ ಕುರ್ವಂತಿ ತೀರ್ಥಾನಿ' - ಶುದ್ಧವಾಗಿರುವುದು ತನ್ನ ಸಂಪರ್ಕಕ್ಕೆ ಬಂದ ಎಲ್ಲವನ್ನೂ ತನ್ನಂತೆಯೇ ರೂಪಿಸುತ್ತದೆ. ಕಲ್ಮಶ ಇದ್ದರೆ ನಿವಾರಿಸುತ್ತದೆ. ಶುದ್ಧವಾದರೆ ತನ್ನನ್ನು ಅದರೊಂದಿಗೆ ಬೆಸೆದುಕೊಳ್ಳುತ್ತದೆ. ಸುತ್ತಮುತ್ತನ್ನು ಪ್ರಸನ್ನವಾಗಿಸುತ್ತದೆ.
ಆದ್ದರಿಂದ ಶುದ್ಧಿಯ ಬಯಕೆ ಒಳಗಿನಿಂದ ಬರಬೇಕು. ಆ ಬಯಕೆಗಾಗಿ ಹೊರಗಿನಿಂದಲೂ ಪ್ರಯತ್ನಿಸಬೇಕು.
ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ
No comments:
Post a Comment