Saturday, April 25, 2009

ಇಂದಿನ ಇತಿಹಾಸ History Today ಏಪ್ರಿಲ್ 25

ಇಂದಿನ ಇತಿಹಾಸ

ಏಪ್ರಿಲ್ 25

ಬಾಲಿವುಡ್  ನಟ ಡಾ. ಶ್ರೀರಾಮ್ ಲಾಗೂ ಅವರಿಗೆ ಮುಂಬೈಯಲ್ಲಿ ಗಾಯಕಿ ಲತಾ ಮಂಗೇಶ್ಕರ್ ಅವರು ದೀನಾನಾಥ್ ಮಂಗೇಶ್ಕರ್ ಪ್ರಶಸ್ತಿ ಪ್ರದಾನ ಮಾಡಿದರು.

2008: ಬಾಲಿವುಡ್  ನಟ ಡಾ. ಶ್ರೀರಾಮ್ ಲಾಗೂ ಅವರಿಗೆ ಮುಂಬೈಯಲ್ಲಿ ಗಾಯಕಿ ಲತಾ ಮಂಗೇಶ್ಕರ್ ಅವರು ದೀನಾನಾಥ್ ಮಂಗೇಶ್ಕರ್ ಪ್ರಶಸ್ತಿ ಪ್ರದಾನ ಮಾಡಿದರು.

2008: ಕ್ರಿಕೆಟ್ ಪಂದ್ಯಗಳ ಸಂದರ್ಭದಲ್ಲಿ ಕ್ರೀಡಾಂಗಣಗಳಲ್ಲಿ `ಚಿಯರ್ ಗರ್ಲ್ಸ್' ತಂಡಗಳು ನೃತ್ಯ ಪ್ರದರ್ಶನ ನೀಡುವುದಕ್ಕೆ ನಿಷೇಧ ಹೇರುವ ಯೋಚನೆಯನ್ನು ಮಹಾರಾಷ್ಟ್ರ ಸರ್ಕಾರ ಕೈಬಿಟ್ಟಿತು. `ಅಶ್ಲೀಲ' ಭಾವ-ಭಂಗಿಗಳನ್ನು ತೋರಿದರೆ ಮಾತ್ರ ಕ್ರಮ ಕೈಗೊಳ್ಳುವುದಾಗಿ ಅದು ಎಚ್ಚರಿಸಿತು.

2008: ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮದ (ಎನ್ ಎಫ್ ಡಿ ಸಿ) ಅಧ್ಯಕ್ಷರನ್ನಾಗಿ ಹಿರಿಯ ನಟ ಓಂಪುರಿ ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿತು. ಏಪ್ರಿಲ್ 4ರಿಂದ ಅನ್ವಯವಾಗುವಂತೆ ಅವರ ನೇಮಕಾತಿ ಆಗಿದ್ದು, ಮುಂದಿನ ಮೂರು ವರ್ಷಗಳ ಕಾಲ ಅವರು ಈ ಸ್ಥಾನದಲ್ಲಿ ಮುಂದುವರೆಯುವರು. 1980ರ ದಶಕದಿಂದಲೂ ಎನ್ ಎಫ್ ಡಿ ಸಿ ಜತೆಗೆ ಸಂಪರ್ಕ ಇಟ್ಟುಕೊಂಡ ಓಂಪುರಿ ಅವರು, `ಅರ್ಧ ಸತ್ಯ', `ಜಾನೆ ಭಿ ದೋ ಯಾರ್ಹೊ...', `ಮಿರ್ಚ್ ಮಸಾಲಾ', `ಧಾರಾವಿ', `ಭವಾನಿ ಭವಾಯಿ', `ಕರೆಂಟ್' ಮೊದಲಾದ ಚಿತ್ರಗಳಲ್ಲಿ ನಟಿಸಿದವರು. ಈ ಹಿಂದೆ ಅಡಲ್ಯಾಬ್ಸಿನ ಮನಮೋಹನ ಶೆಟ್ಟಿ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಚಿತ್ರ ನಿರ್ದೇಶಕ ಹೃಷಿಕೇಶ ಮುಖರ್ಜಿ, ಬಾಲಿವುಡ್ಡಿನ ಕನಸಿನ ಕನ್ಯೆ ಹೇಮಾಮಾಲಿನಿ ಅವರು ಎನ್ ಎಫ್ ಡಿ ಸಿ ಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

 2008: ವಾಯುದಳಕ್ಕೆ ಬೆಂಬಲವಾಗಿ ಕಾರ್ಯ ನಿರ್ವಹಿಸಲು ಭೂಮಿಯಿಂದ ಆಕಾಶದತ್ತ ನಿಗದಿತ ಗುರಿಯತ್ತ ಬಹು ವೇಗವಾಗಿ ಚಿಮ್ಮುವ ಸಾಮರ್ಥ್ಯದ ಕ್ಷಿಪಣಿಗಳನ್ನು ಖರೀದಿಸಲು ಭಾರತೀಯ ಸೇನೆಯು 3,800 ಕೋಟಿ ರೂಪಾಯಿಗಳ ಜಾಗತಿಕ ಟೆಂಡರ್ ಕರೆಯಿತು. ಗಗನದಲ್ಲಿ 8ರಿಂದ 9 ಕಿ. ಮೀ. ಎತ್ತರದಲ್ಲಿ ಹಾರಾಡುವ ಯುದ್ಧ ವಿಮಾನಗಳನ್ನು ಹಾಗೂ ಮಾನವರಹಿತ ವಿಮಾನಗಳನ್ನು ಹೊಡೆದುರುಳಿಸುವ ಸಾಮರ್ಥ್ಯವನ್ನು ಈ ಕ್ಷಿಪಣಿಗಳು ಹೊಂದಿರುತ್ತವೆ ಎಂದು ಸೇನಾ ಮೂಲಗಳು ತಿಳಿಸಿದವು.

2008: ಇಂಗ್ಲೆಂಡಿನ ಬ್ರಿಸ್ಟಲ್ ನಗರದಲ್ಲಿರುವ ಭಾರತದ ಸಮಾಜ ಸುಧಾರಕ ರಾಜಾರಾಮ್ ಮೋಹನ್ ರಾಯ್ ಅವರ ಸಮಾಧಿ ಪುನರುಜ್ಜೀವನಕ್ಕೆ 165 ವರ್ಷಗಳ ಬಳಿಕ ಚಾಲನೆ ನೀಡಲಾಯಿತು. ಮೆದುಳಿಗೆ ಸಂಬಂಧಿಸಿದ ಕಾಯಿಲೆಗೆ ತುತ್ತಾಗಿ ರಾಜಾರಾಮ್ ಮೋಹನ್ ರಾಯ್ ಅವರು 1833ರ ಸೆಪ್ಟೆಂಬರ್ 27ರಂದು ಬ್ರಿಸ್ಟಲ್ ನಗರದಲ್ಲಿ ಅಸುನೀಗಿದ್ದು ಅವರ ಸಮಾಧಿಯನ್ನು ಇಲ್ಲಿಯೇ ನಿರ್ಮಿಸಲಾಗಿತ್ತು. ರಾಯ್ ಸಮಾಧಿ ಪುನರುಜ್ಜೀವನಕ್ಕಾಗಿ ಕೋಲ್ಕತ ಮಹಾನಗರ ಪಾಲಿಕೆಯು 50 ಸಾವಿರ ಪೌಂಡ್ ಸಂಗ್ರಹಿಸಿ ನೀಡಿತು. ಈ ಸ್ಥಳವು ಬಂಗಾಳ ಹಾಗೂ ಭಾರತದ ಇತರೆಡೆಯಿಂದ ಇಂಗ್ಲೆಂಡಿಗೆ ಬರುವ ಪ್ರವಾಸಿಗರಿಗೆ ಮುಖ್ಯ ದಾರ್ಶನಿಕ ಕೇಂದ್ರವಾಗಿದೆ.  

2008: ಭಯೋತ್ಪಾದನೆ ಪರಿಣಾಮವಾಗಿ ಕಣಿವೆಯಿಂದ ಗುಳೇ ಹೋಗಿದ್ದ ಕಾಶ್ಮೀರಿ ವಲಸಿಗರು ಆದಷ್ಟೂ ಬೇಗನೆ ಹಿಂತಿರುಗುವಂತಾಗಲು ಕೇಂದ್ರ ಸರ್ಕಾರವು 1600 ಕೋಟಿ ರೂಪಾಯಿಗಳ ಕೊಡುಗೆಯನ್ನು ಪ್ರಕಟಿಸಿತು. ವಾಪಸಾಗುವ ಕಾಶ್ಮೀರಿಗಳಿಗೆ ವಸತಿ ವ್ಯವಸ್ಥೆ, ನೌಕರಿ ಸವಲತ್ತು ಮತ್ತು  ಸಾಲದ ಮೇಲಿನ ಬಡ್ಡಿ ಮನ್ನಾ ಕೂಡಾ ಈ ಕೊಡುಗೆಗಳಲ್ಲಿ ಸೇರಿದೆ.

2008: ದಕ್ಷಿಣ ದೆಹಲಿಯ  ಲೋಧಿ ರಸ್ತೆಯಲ್ಲಿರುವ ಕೇಂದ್ರೀಯ ತನಿಖಾ ದಳ (ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್- ಸಿಬಿಐ) ಕಚೇರಿಯಲ್ಲಿ ಈದಿನ  ಮುಂಜಾನೆ ಭಾರಿ  ಬೆಂಕಿ  ಕಾಣಿಸಿಕೊಂಡಿತು. ಬೆಳಗ್ಗೆ  8.50ರ ಸುಮಾರಿಗೆ ಸಿಜಿಓ ಕಾಂಪ್ಲೆಕ್ಸಿನ  ಆರನೇ ಮಹಡಿಯ  ಕೊಠಡಿಯೊಂದರಲ್ಲಿ ಈ ಬೆಂಕಿ ಕಾಣಿಸಿಕೊಂಡಿತು. ಬೆಳಗ್ಗೆ  10.05ರ ವೇಳೆಗೆ ಬೆಂಕಿಯನ್ನು  ನಿಯಂತ್ರಿಸಲಾಯಿತು.

2008: ಹತ್ತನೇ ದರ್ಜೆಯ ಇಂಗ್ಲಿಷ್ ಬೋರ್ಡ್ ಪರೀಕ್ಷೆಯ ಸುಮಾರು 22,000ಕ್ಕೂ ಹೆಚ್ಚು  ಉತ್ತರ ಪತ್ರಿಕೆಗಳು ತಮಿಳುನಾಡಿನ ವೆಲ್ಲೂರು ಜಿಲ್ಲೆಯ ಮೌಲ್ಯ ಮಾಪನ ಕೇಂದ್ರದಲ್ಲಿ ಸಂಭವಿಸಿದ ಅಗ್ನಿ  ಅನಾಹುತದಲ್ಲಿ ಭಸ್ಮವಾದವು.

2007; ಸೌರವ್ಯೂಹದಿಂದ 20 ಜ್ಯೋತಿರ್ ವರ್ಷಗಳಷ್ಟು ದೂರದಲ್ಲಿ ಒಂದು ಗ್ರಹವನ್ನು ಖಗೋಳ ಶಾಸ್ತ್ರಜ್ಞರು ಪತ್ತೆ ಹಚ್ಚಿದ್ದು ಅದರಲ್ಲಿ ಜೈವಿಕಾಂಶ  ಇರಬಹುದು ಎಂದು ಪ್ರಕಟಿಸಿದರು. ಹೊಸ ಗ್ರಹವು ಭೂಗ್ರಹಕ್ಕಿಂತ ಐದು ಪಟ್ಟು ದೊಡ್ಡದಾಗಿದ್ದು, ಸೌರವ್ಯೂಹಕ್ಕೆ ಸನಿಹದಲ್ಲಿರುವ ಕೆಂಪು ಕುಬ್ಜ ತಾರೆ ಗ್ಲೆಸೆ-581ನ್ನು ಸುತ್ತುತ್ತಿದೆ, ಇದು ತುಲಾ ನಕ್ಷತ್ರ ರಾಶಿಯಲ್ಲಿದೆ ಎಂದು ಹೊಸ ಗ್ರಹವನ್ನು ಪತ್ತೆ ಹಚ್ಚಿದ ಸ್ವಿಜರ್ಲೆಂಡಿನ ಜಿನೀವಾ ಖಗೋಳಾಲಯದ ವಿಜ್ಞಾನಿಗಳಾದ ಸಿಫೈನ್ ಉಡ್ರಿ ಮತ್ತು ಸಹೋದ್ಯೋಗಿಗಳು ಹೇಳಿದರು.

2006: ಡಕಾಯತಿಯಿಂದ ರಾಜಕೀಯಕ್ಕೆ ಸೇರಿದ್ದ ಚಂಬಲ್ ರಾಣಿ ಕುಖ್ಯಾತಿಯ ಫೂಲನ್ ದೇವಿಯನ್ನು ಹತ್ಯೆಗೈದ ಪ್ರಮುಖ ಆರೋಪಿ ಶೇರ್ ಸಿಂಗ್ ರಾಣಾನನ್ನು ದೆಹಲಿ ಪೊಲೀಸರ ತನಿಖಾ ತಂಡವು ದೆಹಲಿಯಲ್ಲಿ ಬಂಧಿಸಿತು. ತಿಹಾರ್ ಸೆರೆಮನೆಯಿಂದ ಪರಾರಿಯಾಗಿ, ಎರಡು ವರ್ಷಗಳ ಬಳಿಕ ಆರೋಪಿ ಸೆರೆ ಸಿಕ್ಕಿದ. ಫೂಲನ್ ದೇವಿಯನ್ನು ದೆಹಲಿಯಲ್ಲಿ ಅವರ ಮನೆ ಎದುರಲ್ಲಿ
2001ರ ಜುಲೈಯಲ್ಲಿ ಹತ್ಯೆ ಮಾಡಲಾಗಿತ್ತು ಹತ್ಯೆಯಾದ ಎರಡೇ ದಿನದಲ್ಲಿ ಶೇರ್ ಸಿಂಗನನ್ನು ಡೆಹರಾಡೂನಿನಲ್ಲಿ ಪೊಲೀಸರು ಬಂದಿಸಿದ್ದರು. 2004ರಲ್ಲಿ ಆತ ತಿಹಾರ್ ಸೆರೆಮನೆಯಿಂದ ಪರಾರಿಯಾಗಿದ್ದ.

2006: ನೇಪಾಳದ ನೂತನ ಪ್ರಧಾನಿ ಸ್ಥಾನಕ್ಕೆ ನೇಪಾಳಿ ಕಾಂಗ್ರೆಸ್ ಅಧ್ಯಕ್ಷ , ಮಾಜಿ ಪ್ರಧಾನಿ ಗಿರಿಜಾ ಪ್ರಸಾದ್ ಕೊಯಿರಾಲ (84) ಅವರನ್ನು ಪ್ರಸ್ತಾಪಿಸಿ ಸಪ್ತಪಕ್ಷ ಮೈತ್ರಿಕೂಟ ನಿರ್ಣಯ ಅಂಗೀಕರಿಸಿತು. 19 ದಿನಗಳ ಪ್ರಜಾಪ್ರಭುತ್ವ ಪರ ಚಳವಳಿಯನ್ನೂ ಹಿಂತೆಗೆದುಕೊಂಡ ಮೈತ್ರಿಕೂಟ, ಸಂಸತ್ತಿಗೆ ಮರುಜೀವ ನೀಡುವುದಾಗಿ ದೊರೆ ಜ್ಞಾನೇಂದ್ರ ಅವರು ನೀಡಿದ ಆಹ್ವಾನಕ್ಕೆ ಒಪ್ಪಿ ಸರ್ಕಾರ ರಚನೆಗೆ ಮುಂದಾಯಿತು.

2006: ಗರ್ಭಿಣಿಯ ಪೋಷಾಕಿನಲ್ಲಿ ಶ್ರೀಲಂಕಾ ಸೇನೆಯ ಕೊಲಂಬೊ ಕೇಂದ್ರ ಕಚೇರಿ ಆವರಣದೊಳಕ್ಕೆ ಪ್ರವೇಶಿಸಿದ ಎಲ್ ಟಿಟಿಇ ಸಂಘಟನೆಯ ಮಹಿಳಾ ಮಾನವ ಬಾಂಬ್ ನಡೆಸಿದ ಆತ್ಮಾಹುತಿ ದಾಳಿಯಲ್ಲಿ ಹತ್ತು ಮಂದಿ ಸೈನಿಕರು ಮೃತರಾಗಿ ಸೇನಾ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಶರತ್ ಫಾನ್ಸೆಕಾ ತೀವ್ರವಾಗಿ ಗಾಯಗೊಂಡರು.

2006: ಲಾಭದ ಹುದ್ದೆ ಹೊಂದಿರುವ ಲೋಕಸಭಾ ಅಧ್ಯಕ್ಷ ಸೋಮನಾಥ ಚಟರ್ಜಿ, ಪಂಜಾಬ್, ಮಧ್ಯಪ್ರದೇಶ, ಒರಿಸ್ಸಾ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶ ಮತ್ತು ಛತ್ತೀಸ್ ಗಢ ಈ 6 ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರ ಸಚಿವ ಪ್ರಣವ್ ಮುಖರ್ಜಿ, ಶರದ್ ಪವಾರ್ ಮತ್ತು ಮೀರಾಕುಮಾರ್ ಸೇರಿದಂತೆ ಒಟ್ಟು 43 ಲೋಕಸಭೆ ಸದಸ್ಯರು ಮತ್ತು 200ಕ್ಕೂ ಹೆಚ್ಚು ಶಾಸಕರ ಹೆಸರನ್ನು  ಚುನಾವಣಾ ಆಯೋಗವು ತನ್ನ ವೆಬ್ ಸೈಟಿನಲ್ಲಿ ಪ್ರಕಟಿಸಿತು.

2006: ಬಸವ ವೇದಿಕೆಯು ಪ್ರತಿವರ್ಷ ನೀಡುವ ಪ್ರತಿಷ್ಠಿತ ಬಸವಶ್ರೀ ಪ್ರಶಸ್ತಿಗೆ ಈ ವರ್ಷ ಕೇರಳ ಹೈಕೋರ್ಟಿನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಡಾ.ವಿ.ಎಸ್. ಮಳಿಮಠ ಆಯ್ಕೆಯಾದರು. ವಚನ ಸಾಹಿತ್ಯ ಶ್ರೀ ಪ್ರಶಸ್ತಿಗೆ ಮಾಜಿ ಸಚಿವೆ ಲೀಲಾದೇವಿ ಆರ್ ಪ್ರಸಾದ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ಡಾ. ಅಜಯಕುಮಾರ್ ಸಿಂಗ್ ಆಯ್ಕೆಯಾದರು.

2006: ಶ್ರೀಶ್ರೀ ರವಿಶಂಕರ ಗುರೂಜಿ ಅವರಿಗೆ ತೈವಾನ್ ಸಾಂಸ್ಕತಿಕ ಮತ್ತು ಮಾನವ ಜೀವನ ಶಿಕ್ಷಣ ಸಂಸ್ಥೆಯು ಫರ್ವೆಂಟ್ ಗ್ಲೋಬಲ್ ಲವ್ ಆಫ್ ಲೈಫ್-2006 ಪ್ರಶಸ್ತಿಯನ್ನು ನೀಡಿತು.

2005: ಜಪಾನಿನ ಆಮ್ ಅಗಾಸಾಕಿ ನಿಲ್ದಾಣದ ಬಳಿ ಪ್ರಯಾಣಿಕ ರೈಲು ದುರಂತದಲ್ಲಿ 107 ಜನರ ಸಾವು.

1982: ಸತ್ಯಜಿತ್ ರೇ ಅವರ `ಶತ್ ರಂಜ್ ಕಿ ಖಿಲಾಡಿ' ಸಿನಿಮಾ ಪ್ರಸಾರದೊಂದಿಗೆ ಭಾರತದಲ್ಲಿ ಮೊತ್ತ ಮೊದಲ ಬಾರಿಗೆ ವರ್ಣರಂಜಿತ ರಾಷ್ಟ್ರೀಯ ಪ್ರಸಾರ ಆರಂಭವಾಯಿತು. 

1973: ಕಲಾವಿದ ರಮೇಶ ಕುಲಕರ್ಣಿ ಜನನ.

1968: ಭಾರತದ ಶಾಸ್ತ್ರೀಯ ಸಂಗೀತಗಾರ ಬಡೇ ಗುಲಾಂ ಅಲಿ ಅವರು ತಮ್ಮ 66ನೇ ವಯಸ್ಸಿನಲ್ಲಿ ಮೃತರಾದರು. ಪಾಟಿಯಾಲ ಘರಾಣಾ ಮತ್ತು ಖಯಾಲ್ ಹಾಡುಗಾರಿಕೆಯನ್ನು ಜನಪ್ರಿಯಗೊಳಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.

1945: ವಿಶ್ವಸಂಸ್ಥೆಯ ಸಂಘಟನೆಗಾಗಿ ಸುಮಾರು 50 ರಾಷ್ಟ್ರಗಳ ಪ್ರತಿನಿಧಿಗಳು ಸ್ಯಾನ್ ಫ್ರಾನ್ಸಿಸ್ಕೊದಲ್ಲಿ ಸಭೆ ಸೇರಿದರು. 

1926: ಕಲಾವಿದ ಅಂಬಳೆ ಸುಬ್ಬರಾವ್ ಜನನ.

1924: ಕಲಾವಿದ ಎಸ್. ರಾಘವೇಂದ್ರರಾವ್ ಕದಿರೆ ಜನನ.

1922: ಕಲಾವಿದ ಎಂ.ಆರ್. ದೊರೆಸ್ವಾಮಿ ಜನನ.

1916: ಗಮಕ ಗಂಧರ್ವರೆನಿಸಿದ್ದ ಬಿ. ಎಸ್. ಎಸ್. ಕೌಶಿಕ್ ಅವರು ಸುಬ್ಬಯ್ಯ- ಸುಬ್ಬಮ್ಮ ದಂಪತಿಯ ಮಗನಾಗಿ ಕೃಷ್ಣರಾಜಪೇಟೆ ತಾಲ್ಲೂಕು ಹೇಮಗಿರಿ ಕುಪ್ಪಹಳ್ಳಿಯಲ್ಲಿ ಜನಿಸಿದರು. 

1859: ಸುಯೆಜ್ ಕಾಲುವೆಗಾಗಿ ಅದರ ಯೋಜಕ ಫರ್ಡಿನಾಂಡ್ ಡಿ ಲೆಸ್ಸೆಪ್ಸ್ ಮಾರ್ಗದರ್ಶನದಲ್ಲಿ ನೆಲ ಅಗೆಯಲು ಆರಂಭಿಸಲಾಯಿತು. ಸರಿಯಾಗಿ 100 ವರ್ಷಗಳ ಬಳಿಕ 1959ರಲ್ಲಿ ಅಟ್ಲಾಂಟಿಕ್ ಸಾಗರಕ್ಕೆ ಗ್ರೇಟ್ ಲೇಕ್ಸ್ ನ್ನು ಸಂಪರ್ಕಿಸುವ ಸೇಂಟ್ ಲಾರೆನ್ಸ್ ಸಮುದ್ರಮಾರ್ಗವನ್ನು (ಸೀವೇ) ರಾಣಿ ಎರಡನೇ ಎಲಿಜಬೆತ್ ಹಾಗೂ ಅಧ್ಯಕ್ಷ ಐಸೆನ್ ಹೊವರ್ ಜಂಟಿಯಾಗಿ ಉದ್ಘಾಟಿಸಿದರು.

(ಸಂಗ್ರಹ: ನೆತ್ರಕೆರೆ ಉದಯಶಂಕರ) 

No comments:

Advertisement