Monday, April 27, 2009

ಇಂದಿನ ಇತಿಹಾಸ History Today ಏಪ್ರಿಲ್ 27

ಇಂದಿನ ಇತಿಹಾಸ

ಏಪ್ರಿಲ್ 27

ಜಗತ್ತಿನ ಅತಿ ಕಿರಿಯ ಪೈಲಟ್ ಮತ್ತು ಅತಿ ಕಿರಿಯ ಗಗನಯಾತ್ರಿ ಎಂಬ ಕೀರ್ತಿಗೆ ಪಾತ್ರರಾದ ಬೆಂಗಳೂರು ನಗರದ ಶ್ರೀಯಾ ದಿನಕರ್ ಅವರಿಗೆ ಭವಿಷ್ಯದ ಶಿಕ್ಷಣಕ್ಕಾಗಿ ಸ್ಲೋವೆನಿಯಾದ ವರ್ಲ್ಡ್ ಆಫ್ ಆರ್ಟ್ ಯೂರೋಪ್ ಸಂಸ್ಥೆ ಒಂದು ಲಕ್ಷ ಯೂರೋಗಳನ್ನು ದೇಣಿಗೆಯಾಗಿ ನೀಡಿತು. ಬೆಂಗಳೂರಿನ ವರ್ಡ್ ಆರ್ಟ್ಫೌಂಡೇಶನ್ ಮತ್ತು ವರ್ಡ್ ಆಫ್ ಆರ್ಟ್ ಯೂರೋಪ್ ಸಂಸ್ಥೆಗಳ ಸಹಯೋಗದಲ್ಲಿ ಬೆಂಗಳೂರಿನ ಕಬ್ಬನ್ ಉದ್ಯಾನದ ಬಾಲಭವನದಲ್ಲಿ ನಡೆದ ಅಂತಾರಾಷ್ಟ್ರೀಯ ಕಲಾ ಪ್ರಶಸ್ತಿ ವಿತರಣೆ ಸಮಾರಂಭದಲ್ಲಿ ಶ್ರೀಯಾ ಬಹುಮಾನದ ಚೆಕ್ ಸ್ವೀಕರಿಸಿದರು.

2008: ಆಫ್ಘಾನಿಸ್ಥಾನ ಅಧ್ಯಕ್ಷ ಹಮೀದ್ ಕರ್ಜೈ ಅವರ ಹತ್ಯೆಗೆ ಕಾಬೂಲಿನಲ್ಲಿ ತಾಲಿಬಾನ್ ಉಗ್ರಗಾಮಿಗಳು ಗುಂಡು ಮತ್ತು ರಾಕೆಟ್ ದಾಳಿಮೂಲಕ ಯತ್ನಿಸಿದರು. ಆದರೆ ಕರ್ಜೈ ಪ್ರಾಣಾಪಾಯವಿಲ್ಲದೆ ಪಾರಾದರು. ದೇಶದಲ್ಲಿ ಕಮ್ಯುನಿಸ್ಟ್ ಸರ್ಕಾರ ಪತನಗೊಂಡು, ಆಡಳಿತ ಮುಜಾಹಿದೀನ್ ಗಳ ವಶವಾದ 16ನೇ ವರ್ಷಾಚರಣೆ ಅಂಗವಾಗಿ ಏರ್ಪಡಿಸಿದ್ದ ಸಮಾರಂಭದಲ್ಲಿ ಕರ್ಜೈ ಮತ್ತು ಅವರ ಸಚಿವ ಸಹದ್ಯೋಗಿಗಳು, ರಾಜತಾಂತ್ರಿಕರು, ಉನ್ನತ ಮಟ್ಟದ ಅಧಿಕಾರಿಗಳು, ಮಾಜಿ ಯುದ್ಧ ವೀರರು ಭಾಗವಹಿಸಿದ್ದಾಗ ಈ ದಾಳಿ ನಡೆಯಿತು. ತಕ್ಷಣ ಜಾಗೃತಗೊಂಡ ಸೇನಾ ಸಿಬ್ಬಂದಿ ಕೆಲವು ಶಂಕಿತರನ್ನು ಬಂಧಿಸಿದರು. ದಾಳಿಯಲ್ಲಿ ಒಬ್ಬ ನಾಗರಿಕ ಮೃತನಾಗಿ, ಸಂಸದ ಸೇರಿದಂತೆ 11 ಮಂದಿ ಗಾಯಗೊಂಡರು. ಈ ದಾಳಿಗೆ ತಾನೇ ಕಾರಣ ಎಂದು ಹೊಣೆ ಹೊತ್ತುಕೊಂಡ ತಾಲಿಬಾನ್, ತನ್ನ ಕಡೆಯ ಮೂವರು ಯೋಧರು ಈ ಸಂದರ್ಭದಲ್ಲಿ ಸತ್ತರು.

 2008: ಭಾರತೀಯ ಮೂಲದ ಉಕ್ಕು ದೊರೆ ಲಕ್ಷ್ಮಿ ಮಿತ್ತಲ್ ಯೂರೋಪಿನ ಅತ್ಯಂತ ಶ್ರೀಮಂತ ವ್ಯಕ್ತಿ. ಅವರ ಒಟ್ಟು ಆಸ್ತಿ 27.7 ಶತಕೋಟಿ ಪೌಂಡ್ ಮೌಲ್ಯದಷ್ಟಿದ್ದು,  ಬ್ರಿಟನ್ನಿನ ಅತಿ ಶ್ರೀಮಂತ ಉದ್ಯಮಿ ಎನ್ನುವ ಹೆಗ್ಗಳಿಕೆಗೆ ಸತತ ನಾಲ್ಕನೇ ವರ್ಷವೂ ಭಾಜನರಾಗಿದ್ದಾರೆ ಎಂದು ವಿಶ್ವದ ಅತಿ ದೊಡ್ಡ ಶ್ರೀಮಂತರ ಪಟ್ಟಿ ಸಿದ್ಧಪಡಿಸಿದ `ಸಂಡೆ ಟೈಮ್ಸ್' ಪತ್ರಿಕೆ ತಿಳಿಸಿತು. ಒಂದು ವರ್ಷದಲ್ಲಿ 8.5 ಶತಕೋಟಿ  ಪೌಂಡುಗಳಷ್ಟು ಸಂಪತ್ತು ವೃದ್ಧಿ ಕಂಡ ಮಿತ್ತಲ್, ವಿಶ್ವದ  ಕುಬೇರರ ಪಟ್ಟಿಯಲ್ಲಿ 6ನೇ ಸ್ಥಾನ ಪಡೆದರು. ಅಂಬಾನಿ ಸಹೋದರರಾದ ಮುಖೇಶ್ ಹಾಗೂ ಅನಿಲ್ ಅವರ  ಒಟ್ಟು ಆಸ್ತಿ ಸೇರಿಸಿದರೆ ಅವರೇ ಜಗತ್ತಿನ ಅತಿ ದೊಡ್ಡ ಶ್ರೀಮಂತರಾಗುತ್ತಾರೆ. ಇವರ ಆಸ್ತಿ ಮೌಲ್ಯ 43 ಶತಕೋಟಿ ಪೌಂಡ್. ಇದು ಅಮೆರಿಕದ ವಾಲ್ ಮಾರ್ಟ್ ನ ಒಡೆಯರಾದ ವಾಲ್ಟನ್ ಕುಟುಂಬದ 38.4 ಶತಕೋಟಿ ಪೌಂಡ್ ಹಾಗೂ ಮೈಕ್ರೋಸಾಫ್ಟ್ ನ ಮುಖ್ಯಸ್ಥ ಬಿಲ್ ಗೇಟ್ಸ್ ಅವರ  29 ಶತಕೋಟಿ ಪೌಂಡಿಗಿಂತಲೂ ಹೆಚ್ಚು ಎಂದು ವರದಿ ಹೇಳಿತು.

2008: ಬೆಳಗಾವಿ ರೋಲರ್ ಸ್ಕೇಟಿಂಗ್ ಅಕಾಡೆಮಿಯ ಏಳು ವರ್ಷದ ಬಾಲಕ ಅನಿಕೇತ ರಮೇಶ  ಚಿಂಡಕ ಬೆಳಗಾವಿಯ ಆದರ್ಶನಗರದಲ್ಲಿ 82 ಟಾಟಾ ಸುಮೋ ವಾಹನಗಳಡಿ ಲಿಂಬೋ ಸ್ಕೇಟಿಂಗ್ ಮೂಲಕ ತೂರಿಬಂದು ದಾಖಲೆ ನಿರ್ಮಿಸಿದನು. ರೋಟರಿ ಕ್ಲಬ್ ಆಫ್ ಬೆಳಗಾವಿ ಸಹಯೋಗದೊಂದಿಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 57 ಸೆಕೆಂಡುಗಳಲ್ಲಿ 82 ಟಾಟಾ ಸುಮೋ ವಾಹನಗಳಡಿ ತೂರಿಬಂದು ತನ್ನ ಹಿಂದಿನ ದಾಖಲೆಯನ್ನು  ಅನಿಕೇತ ಮುರಿದನು. 2007ರ ಫೆಬ್ರುವರಿ 28 ರಂದು ಬೆಳಗಾವಿ ನಗರದಲ್ಲಿ 45.31 ಸೆಕೆಂಡುಗಳಲ್ಲಿ 57 ಟಾಟಾ ಸುಮೋ ವಾಹನಗಳಡಿ ತೂರಿಬಂದು ಬೆರಗುಗೊಳಿಸಿದ್ದ ಬಾಲಕ ಈದಿನ ಮಧ್ಯಾಹ್ನ 53 ಸೆಕೆಂಡುಗಳಲ್ಲಿ 81 ಸುಮೋ ವಾಹನಗಳಡಿ ತೂರಿಬಂದನು. ಬಳಿಕ 82 ವಾಹನಗಳಡಿ ತೂರಿಬಂದು ತನ್ನ ದಾಖಲೆಯನ್ನು ಮತ್ತಷ್ಟು ಎತ್ತರಕ್ಕೆ ಒಯ್ದನು. `ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ' ನಿರ್ದೇಶಕ ಸುರೇಶ ಹರ್ಮಿಲಾ, ಯೋಜನಾ ಅಧಿಕಾರಿ ಎಂ.ಎಸ್. ತ್ಯಾಗಿ ಹಾಗೂ ರೋಲ್ ಬಾಲ್ ಫೆಡರೇಷನ್ ಆಫ್ ಇಂಡಿಯಾ ಕಾರ್ಯದರ್ಶಿ ರಾಜು ದಾಬಡೆ ಅವರು ಅನಿಕೇತ ಚಿಂಡಕ ಸಾಧನೆಯನ್ನು ದಾಖಲು ಮಾಡಿಕೊಂಡರು. ಅನಿಕೇತನ ಪ್ರತಿಭೆಯನ್ನು ಜಗತ್ತಿಗೆ ಸಾರುವ ಉದ್ದೇಶದಿಂದ ನಗರದಲ್ಲಿ ಸುಮಾರು ಒಂದು ಲಕ್ಷ ರೂ. ವೆಚ್ಚದಲ್ಲಿ ಸ್ಕೇಟಿಂಗ್ ಟ್ರ್ಯಾಕ್ ನಿರ್ಮಿಸಲಾಗಿತ್ತು. 100ಕ್ಕೂ ಹೆಚ್ಚು ಸುಮೋ ವಾಹನಗಳನ್ನು ಬಾಡಿಗೆಗೆ  ಪಡೆಯಲಾಗಿತ್ತು. ಲಿಂಬೋ ಸ್ಕೇಟಿಂಗ್ ದೃಶ್ಯ ವೀಕ್ಷಣೆಗೆ ಭಾರೀ ಸಂಖ್ಯೆಯಲ್ಲಿ ಸಾರ್ವಜನಿಕರು   ಜಮಾಯಿಸಿದ್ದರು. ಅನಿಕೇತ ಈ ಕಿರಿಯ ವಯಸ್ಸಿನಲ್ಲೇ ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ 300ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಪಡೆದಿದ್ದಾನೆ. ಲಿಂಬೋ ಸ್ಕೇಟಿಂಗ್ ಸಾಧನೆ ಪರಿಗಣಿಸಿ ರಾಜ್ಯ ಸರ್ಕಾರ ಈ ಬಾಲಕನಿಗೆ ಕಲಾಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.

2008: ಚಿತ್ರನಟ ಜೈಜಗದೀಶ್ ಅವರು ಮಡಿಕೇರಿಯಲ್ಲಿ ನಡೆದ ಬಿಜೆಪಿ ಬಹಿರಂಗಸಭೆಯಲ್ಲಿ ಸುಷ್ಮಾ ಸ್ವರಾಜ್ ಸಮ್ಮುಖದಲ್ಲಿ ಬಿಜೆಪಿ ಸೇರಿದರು. ಬಿಎಸ್ಪಿಯಿಂದ ಮಡಿಕೇರಿ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿದ್ದ ಜೈಜಗದೀಶ್, `ಬಿ' ಫಾರಂ ಗೊಂದಲದಿಂದ ನಾಮಪತ್ರ ತಿರಸ್ಕೃತವಾದ ಹಿನ್ನೆಲೆಯಲ್ಲಿ ಬಿಜೆಪಿ ಸೇರಿದರು. 

2008: ಮೈಸೂರು ನಗರದ ಅಪರಾಧ ಪತ್ತೆ ದಳದ ಪೊಲೀಸರು ಮತ್ತು ಮಣಿಪುರಿ ಪೊಲೀಸರು ಜಂಟಿ ಕಾರ್ಯಾಚರಣೆ ಮೈಸೂರಿನ ವಸತಿ ಗೃಹವೊಂದರಲ್ಲಿದ್ದ 6 ಮಂದಿ ಶಂಕಿತ ಉಲ್ಫಾ ಉಗ್ರಗಾಮಿಗಳನ್ನು ಬಂದಿಸಿದರು. ಈಶಾನ್ಯ ರಾಜ್ಯದ 6 ಮಂದಿಯನ್ನು ವಶಕ್ಕೆ ತೆಗೆದುಕೊಂಡದ್ದನ್ನು ನಗರ ಪೊಲೀಸ್ ಆಯಕ್ತ ಡಾ.ಪಿ.ರವೀಂದ್ರನಾಥ್ ದೃಢಪಡಿಸಿದರು.

 2008: ಜಗತ್ತಿನ ಅತಿ ಕಿರಿಯ ಪೈಲಟ್ ಮತ್ತು ಅತಿ ಕಿರಿಯ ಗಗನಯಾತ್ರಿ ಎಂಬ ಕೀರ್ತಿಗೆ ಪಾತ್ರರಾದ ಬೆಂಗಳೂರು ನಗರದ ಶ್ರೀಯಾ ದಿನಕರ್ ಅವರಿಗೆ ಭವಿಷ್ಯದ ಶಿಕ್ಷಣಕ್ಕಾಗಿ ಸ್ಲೋವೆನಿಯಾದ ವರ್ಲ್ಡ್ ಆಫ್ ಆರ್ಟ್ ಯೂರೋಪ್ ಸಂಸ್ಥೆ ಒಂದು ಲಕ್ಷ ಯೂರೋಗಳನ್ನು ದೇಣಿಗೆಯಾಗಿ ನೀಡಿತು. ಬೆಂಗಳೂರಿನ ವರ್ಡ್ ಆರ್ಟ್ಫೌಂಡೇಶನ್ ಮತ್ತು ವರ್ಡ್ ಆಫ್ ಆರ್ಟ್ ಯೂರೋಪ್ ಸಂಸ್ಥೆಗಳ ಸಹಯೋಗದಲ್ಲಿ ಬೆಂಗಳೂರಿನ ಕಬ್ಬನ್ ಉದ್ಯಾನದ ಬಾಲಭವನದಲ್ಲಿ ನಡೆದ ಅಂತಾರಾಷ್ಟ್ರೀಯ ಕಲಾ ಪ್ರಶಸ್ತಿ ವಿತರಣೆ ಸಮಾರಂಭದಲ್ಲಿ ಶ್ರೀಯಾ ಬಹುಮಾನದ ಚೆಕ್ ಸ್ವೀಕರಿಸಿದರು. ವರ್ಲ್ಡ್ ಆಫ್ ಆರ್ಟ್ ಯೂರೋಪ್ ನಿರ್ದೇಶಕರಾದ ಮಿಹಾಲಿಯೋ ಲಿಸಾನಿನ್ ಮತ್ತು ಬೊಜಿಕಾ ಹ್ರೊಸೇವೆಕ್ ಬಹುಮಾನದ ಚೆಕ್ ಹಸ್ತಾಂತರಿಸಿದರು. ವರ್ಲ್ಡ್ ಆಫ್ ಆರ್ಟ್ ಯೂರೋಪ್ ಆಯೋಜಿಸಿದ್ದ ಅಂತಾರಾಷ್ಟ್ರೀಯ ಚಿತ್ರಕಲಾ ಸ್ಪರ್ಧೆಯಲ್ಲಿ ಶ್ರೀಯಾ ದಿನಕರ್ ಪ್ರಥಮ ಬಹುಮಾನ ಗಳಿಸಿದ್ದರು. ಬಹುಮಾನಿತ ಕೃತಿ 77 ಲಕ್ಷ ರೂಪಾಯಿಗೆ ಮಾರಾಟವಾಗಿದ್ದು, ಈ ಹಣವನ್ನು ಅವರು ಸ್ವಯಂಸೇವಾ ಸಂಸ್ಥೆಯೊಂದಕ್ಕೆ ನೀಡಿದ್ದರು.
ಜಗತ್ತಿನ ಕಿರಿಯ ಚಿತ್ರ ನಿರ್ದೇಶಕ ಎಂಬ ಖ್ಯಾತಿ ಪಡೆದಿರುವ ಮಾಸ್ಟರ್ ಕಿಶನ್ ಸೇರಿದಂತೆ ಹಲವು ಕಿರಿಯ ಕಲಾವಿದರಿಗೆ ಈ ಸಂದರ್ಭದಲ್ಲಿ `ಲಿಯೋನಾರ್ಡೊ ಡಾ ವಿಂಚಿ ಅಂತಾರಾಷ್ಟ್ರೀಯ ಕಲಾ ಪ್ರಶಸ್ತಿ'ಯನ್ನು ಪ್ರದಾನ ಮಾಡಲಾಯಿತು.

2007: ಗಾಲಿ ಕುರ್ಚಿಗೆ ಅಂಟಿಕೊಂಡೇ ಜೀವಿಸುತ್ತಿರುವ ಖಭೌತ ವಿಜ್ಞಾನಿ ಸ್ಟೀಫನ್ ಹಾಕಿನ್ಸ್ ಅವರು `ಬಾಹ್ಯಾಕಾಶದಲ್ಲಿ ತೂಕರಹಿತ ಅನುಭವ'ದ ತಮ್ಮ ಕನಸನ್ನು ನನಸಾಗಿಸಿಕೊಂಡರು. ಫ್ಲಾರಿಡಾ ಮೂಲದ ಜೀರೋ ಗ್ರಾವಿಟಿ ಕಾರ್ಪೊರೇಷನ್ ಬೋಯಿಂಗ್ 747 ವಿಮಾನದಲ್ಲಿ ಶೂನ್ಯ ಗುರುತ್ವಾಕರ್ಷಣೆ ನಿರ್ಮಿಸಿ ಸ್ಟೀಫನ್ ಅವರಿಗೆ ಈ ವಿಶಿಷ್ಟ ಅನುಭವ ದಕ್ಕುವಂತೆ ಮಾಡಿತು. `ವೊರ್ಮಿಟ್ ಕಾಮೆಟ್' ಹೆಸರಿನ ಪರಿವರ್ತಿತ ವಿಮಾನದಲ್ಲಿ ಅಟ್ಲಾಂಟಿಕ್ ಸಾಗರದ ಮೇಲೆ ಸಾಗುವಾಗ ಈ ಅನುಭವವನ್ನು ಹಾಕಿನ್ಸ್ ಪಡೆದರು. 9,754 ಮೀಟರ್ (32,000 ಅಡಿ ಎತ್ತರಕ್ಕೆ ಏರಿ 7315 ಮೀಟರಿನಷ್ಟು ಕೆಳಕ್ಕೆ ವಿಶಿಷ್ಟ ರೀತಿಯಲ್ಲಿ ಬರುವಾಗ ಹಾಕಿನ್ಸ್ ಜೊತೆಗಿದ್ದ ವೈದ್ಯರು ಮತ್ತು ದಾದಿಯರೂ ಈ ತೂಕರಹಿತ ಅನುಭವ ಪಡೆದರು.

2007: ಬ್ರಿಟಿಷರ ಒಡೆದು ಆಳುವ ಕುಟಿಲ ನೀತಿಯಿಂದಾಗಿಯೇ ಗೋಹತ್ಯೆ ಕಾಯ್ದೆ ಜಾರಿಗೆ ಬಂತು ಎಂದು ಸ್ವದೇಶೀ ಬಚಾವೋ ಆಂದೋಲನದ ನೇತಾರ ರಾಜೀವ ದೀಕ್ಷಿತ್ ಶಿವಮೊಗ್ಗದ ಹೊಸನಗರದಲ್ಲಿ ಶ್ರೀರಾಮಚಂದ್ರಾಪುರ ಮಠ ಸಂಘಟಿಸಿದ ವಿಶ್ವ ಗೋ ಸಮ್ಮೇಳನದಲ್ಲಿ ಅಭಿಪ್ರಾಯ ಪಟ್ಟರು. ಸಮ್ಮೇಳನದ ಏಳನೇ ದಿನ ಅವರು ಗೋ ಮಹಿಮಾ ಗೋಷ್ಠಿಯಲ್ಲಿ ಪಾಲ್ಗೊಂಡರು.

2007: ನಕಲಿ ಪಾಸ್ ಪೋರ್ಟ್ ಬಳಸಿ ಮಾನವ ಕಳ್ಳಸಾಗಣೆ ನಡೆಸಿದ ಆರೋಪಕ್ಕೆ ಒಳಗಾದ ತೆಲಂಗಾಣ ರಾಷ್ಟ್ರ ಸಮಿತಿ (ಟಿ ಆರ್ ಎಸ್) ಶಾಸಕ ಕೆ. ಲಿಂಗಯ್ಯ ಅವರು ಹೈದರಾಬಾದಿನ 7ನೇ ಮೆಟ್ರೋಪಾಲಿಟನ್ ನ್ಯಾಯಾಲಯದಲ್ಲಿ ಶರಣಾಗತರಾದರು.

2007: ಕೃಷ್ಣಾ ನದಿ ನೀರು ಬಳಕೆಗೆ ಸಂಬಂಧಿಸಿದಂತೆ ಕರ್ನಾಟಕದ ವಿರುದ್ಧ ಆಂಧ್ರಪ್ರದೇಶ ಸಲ್ಲಿಸಿದ್ದ ಅರ್ಜಿಯನ್ನು ಕೃಷ್ಣಾ ಜಲ ನ್ಯಾಯ ಮಂಡಳಿಯು ವಜಾ ಮಾಡಿತು.

2007: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರನ್ನು ಬಹಿರಂಗವಾಗಿ ಚುಂಬಿಸಿ ವಿವಾದಕ್ಕೆ ಗುರಿಯಾಗಿದ್ದ ಹಾಲಿವುಡ್ ನಟ ರಿಚರ್ಡ್ ಗೇರ್ ಅವರು ಈ ಘಟನೆಗೆ ಕ್ಷಮೆ ಯಾಚಿಸಿದರು. ಯಾವುದೇ ಮನ ನೋಯಿಸುವಂತಹ ತಪ್ಪು ಮಾಡಿದ್ದರೆ ದಯವಿಟ್ಟು ಕ್ಷಮಿಸಿ ಎಂಬುದಾಗಿ ಅವರು ಹೇಳಿಕೆಯಲ್ಲಿ ತಿಳಿಸಿದರು.

2007: ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು (ಸಿ ಇ ಟಿ) ತಮಿಳುನಾಡಿನಲ್ಲಿ ರದ್ದು ಪಡಿಸಿದ ತಮಿಳುನಾಡು ಸರ್ಕಾರದ  ನಿರ್ಣಯವನ್ನು ಮದ್ರಾಸ್ ಹೈಕೋರ್ಟ್ ಎತ್ತಿ ಹಿಡಿಯಿತು.  ತಮಿಳುನಾಡು ಸರ್ಕಾರವು ಅಂಗೀಕರಿಸಿದ ತಮಿಳುನಾಡು (ವೃತ್ತಿ ಶಿಕ್ಷಣ ಸಂಸ್ಥೆಗಳ ಪ್ರವೇಶ) ಕಾಯ್ದೆಯ (2006) ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಹಲವಾರು ರಿಟ್ ಅರ್ಜಿಗಳನ್ನು ಹೈಕೋರ್ಟ್ ವಜಾ ಮಾಡಿತು.

2006: ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ 6000 ಕೋಟಿ ರೂಪಾಯಿ ಅಂದಾಜು ವೆಚ್ಚದ ಬೆಂಗಳೂರು ಮೆಟ್ರೊ ರೈಲು ಯೋಜನೆಗೆ ಕೇಂದ್ರ ಸಚಿವ ಸಂಪುಟ ಮಂಜೂರಾತಿ ನೀಡಿತು. ಇದರೊಂದಿಗೆ 33 ಕಿ.ಮೀ. ಉದ್ದದ ಮೆಟ್ರೊ ರೈಲು ಯೋಜನೆಗೆ ಇದ್ದ ಕೊನೆಯ ಅಡ್ಡಿ ನಿವಾರಣೆ ಆಯಿತು. ಈ ಯೋಜನೆ 2011ಕ್ಕೆ ಪೂರ್ಣಗೊಳ್ಳಬೇಕು.

2006: ಹಿರಿಯ ಸಾಹಿತಿ, ಸಂಶೋಧಕ ಪ್ರೊ. ಎಲ್. ಬಸವರಾಜು ಅವರಿಗೆ ರಾಜ್ಯ ಸರ್ಕಾರದ 2005ನೇ ಸಾಲಿನ ಬಸವ ಪುರಸ್ಕಾರ ರಾಷ್ಟ್ರೀಯ ಪ್ರಶಸ್ತಿ ಲಭಿಸಿತು.

2006: ನೇಪಾಳದ ಹಿರಿಯ ಮುಖಂಡ ಗಿರಿಜಾ ಪ್ರಸಾದ್ ಕೊಯಿರಾಲ ಅವರು ನೇಪಾಳ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕರಾಗಿ ಅವಿರೋಧ ಆಯ್ಕೆಯಾದರು. ಇದೇ ವೇಳೆಯಲ್ಲಿ ಬಾಲಿವುಡ್ ನಟಿ ಮನಿಶಾ ಕೊಯಿರಾಲ ಅವರ ತಂದೆ, ಪ್ರಕಾಶ ಕೊಯಿರಾಲ ಅವರನ್ನು ನೇಪಾಳ ಕಾಂಗ್ರೆಸ್ಸಿನ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಲಾಯಿತು. ಈ ಇಬ್ಬರೂ ಧುರೀಣರು ಸಮೀಪ ಸಂಬಂಧಿಗಳು.

2006: ಹಿರಿಯ ಕವಿ ಪ್ರೊ. ಕೆ.ಎಸ್. ನಿಸಾರ್ ಅಹಮದ್ ಅವರು ಪ್ರತಿಷ್ಠಿತ 2006ನೇ ಸಾಲಿನ ಮಾಸ್ತಿ ಪ್ರಶಸ್ತಿಗೆ ಆಯ್ಕೆಯಾದರು.

2006: ಜಮ್ಮುವಿನ ಭದೇವ್ ವಿಧಾನಸಭಾ ಕ್ಷೇತ್ರಕ್ಕಾಗಿ ನಡೆದ ಉಪ ಚುನಾವಣೆಯಲ್ಲಿ ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಗುಲಾಂ ನಬಿ ಆಜಾದ್ ದಾಖಲೆ ಜಯ ಸಾಧಿಸಿದರು. ಎದುರಾಳಿ ಬಿಜೆಪಿ ಅಭ್ಯರ್ಥಿ ವಿರುದ್ಧ ಹಿಂದಿನ ಎಲ್ಲ ದಾಖಲೆಗಳನ್ನು ಮುರಿದ ಅವರು 66,129 ಮತಗಳ ಪೈಕಿ 62,072 ಮತಗಳನ್ನು ಬಗಲಿಗೆ ಹಾಕಿಕೊಂಡರು.

2006: ಗಂಗೊಳ್ಳಿಯಿಂದ ಮಂಗಳೂರಿನವರೆಗೆ ಅರಬ್ಬಿ ಸಮುದ್ರದಲ್ಲಿ 150 ಕಿ.ಮೀ. ದೂರವನ್ನು ಸತತ 24 ಗಂಟೆಗಳ ಕಾಲ ಈಜಿ ಕ್ರಮಿಸುವ ಮೂಲಕ ಬೆಂಗರೆ ದಯಾನಂದ ಖಾರ್ವಿ ಹೊಸ ದಾಖಲೆ ನಿರ್ಮಿಸಿದರು.

2006: ಮಾರ್ಚ್ 31ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್ ಐ ಎಲ್) 9069 ಕೋಟಿ ರೂಪಾಯಿ ನಿವ್ವಳ ಲಾಭ ಗಳಿಸಿದ್ದು, ಖಾಸಗಿ ಕ್ಷೇತ್ರದಲ್ಲಿನ ಭಾರತೀಯ ಕಂಪೆನಿಯೊಂದು ಗಳಿಸಿದ ಅತ್ಯಧಿಕ ಲಾಭ ಇದು ಎಂದು ಆರ್ ಐ ಎಲ್ ಅಧ್ಯಕ್ಷ , ಆಡಳಿತ ನಿರ್ದೇಶಕ ಮುಖೇಶ ಅಂಬಾನಿ ಮುಂಬೈಯಲ್ಲಿ ಪ್ರಕಟಿಸಿದರು.

1960: ರಕ್ಷಣಾ ಪಡೆಗಳ ಉನ್ನತಾಧಿಕಾರಿಗಳಿಗೆ ತರಬೇತಿ ನೀಡುವ ಸಲುವಾಗಿ ನವದೆಹಲಿಯಲ್ಲಿ ನ್ಯಾಷನಲ್ ಡಿಫೆನ್ಸ್ ಕಾಲೇಜನ್ನು ಆರಂಭಿಸಲಾಯಿತು.

1959: ಕಮಾಂಡರ್ ಕವಾಸ್ ಮಣೇಕ್ ಶಾ ನಾನಾವತಿ ತನ್ನ ಬ್ರಿಟಿಷ್ ಪತ್ನಿ ಸಿಲ್ವಿಯಾಳ ಪ್ರಿಯಕರ ಪ್ರೇಮ್ ಅಹುಜಾನನ್ನು ಗುಂಡಿಟ್ಟು ಕೊಂದ. ಈ ಪ್ರಕರಣ ದೇಶಾದ್ಯಂತ ಭಾರೀ ಕುತೂಹಲ ಕೆರಳಿಸಿತು. ಇದೊಂದು ಅಪಘಾತ ಎಂದು ಬಿಂಬಿಸಿದ ಪರಿಣಾಮವಾಗಿ ಆತನ ಪರ ಅನುಕಂಪದ ಹೊಳೆ ಹರಿಯಿತು. ಮುಂಬೈ ಸೆಷನ್ಸ್ ಕೋರ್ಟ್ ಆತ ನಿರಪರಾಧಿ ಎಂದೂ ತೀರ್ಪಿತ್ತಿತು. ನಂತರ ಸುಪ್ರೀಂಕೋರ್ಟ್ ಅದನ್ನು ತಳ್ಳಿಹಾಕಿ ನಾನಾವತಿ ಅಪರಾಧಿ ಎಂದು ತೀರ್ಪು ನೀಡಿತು. ಈ ಘಟನೆ ನಡೆಯದೇ ಇರುತ್ತಿದ್ದರೆ ನಾನಾವತಿ ಭಾರತದ ಮೊದಲ ಏರ್ ಕ್ರಾಫ್ಟ್ ಕ್ಯಾರಿಯರ್ ಐ ಎನ್ ಎಸ್ ವಿಕ್ರಾಂತ್ ನ ಮೊದಲ ಕಮಾಂಡರ್ ಆಗುತ್ತಿದ್ದ.

1897: ಅಮೋಘ ಭಾಷಣಕಾರ, ಸಾಹಿತ್ಯ, ಪತ್ರಿಕಾರಂಗಗಳಲ್ಲಿ ವಿಶಿಷ್ಟ ರೀತಿಯಲ್ಲಿ ಸೇವೆ ಸಲ್ಲಿಸಿದ ತಿರುಮಲೆ ತಾತಾಚಾರ್ಯ ಶರ್ಮ (ತಿ.ತಾ. ಶರ್ಮ) (27-4-1897 ರಿಂದ 20-10-1973) ಅವರು ಚಿಕ್ಕಬಳ್ಳಾಪುರದ ರಾಜಗುರು ಮನೆತನದಲ್ಲಿ ಶ್ರೀನಿವಾಸ ತಾತಾಚಾರ್ಯ- ಜಾನಕಿಯಮ್ಮ ತಿರುಮಲ ದಂಪತಿಯ ಪುತ್ರರಾಗಿ ಈ ದಿನ ಜನಿಸಿದರು.

1896: ನೈಲಾನ್ ಕಂಡು ಹಿಡಿದ ವ್ಯಾಲೇಸ್ ಹ್ಯೂಂ ಕ್ಯಾರೂತರ್ಸ್ ಈ ದಿನ ಜನಿಸಿದರು.

1882: ಅಮೆರಿಕದ ತತ್ವಜ್ಞಾನಿ, ಕವಿ, ಪ್ರಬಂಧಕಾರ ರಾಲ್ಫ್ ವಾಲ್ಡೊ ಎಮರ್ಸನ್ 78ನೇ ವಯಸ್ಸಿನಲ್ಲಿ ಮೆಸಾಚ್ಯುಸೆಟ್ಸಿನ ಕಾಂಕಾರ್ಡಿನಲ್ಲಿ ಮೃತನಾದ.

1857: ಆಧುನಿಕ ಸಂಖ್ಯಾಶಾಸ್ತ್ರದ ಹರಿಕಾರ ಕಾರ್ಲ್ ಪಿಯರ್ಸನ್ ಜನನ.

1521: ಪೋರ್ಚುಗೀಸ್ ಸಂಶೋಧಕ ಫರ್ಡಿನಾಂಡ್ ಮೆಗೆಲ್ಲನ್ ವಿಶ್ವ ಪರ್ಯಟನೆಗಾಗಿ ಹೊರಟಿದ್ದಾಗ ಫಿಲಿಪ್ಪೀನ್ಸ್ ಜನರಿಂದ ಹತನಾದ. ಫಿಲಿಪ್ಪೀನ್ಸಿನಲ್ಲೇ ಆತ ಹತನಾದರೂ ಆತನ ನೌಕೆ ಬಾಸ್ಕಿನ ಜುವಾನ್ ಸೆಬಾಸ್ಟಿಯನ್ ಡೆಲ್ ಕ್ಯಾನೊ ನೇತೃತ್ವದಲ್ಲಿ ಪಶ್ಚಿಮಾಭಿಮುಖವಾಗಿ ಸ್ಪೇನಿನತ್ತ ಯಾನ ಮುಂದುವರಿಸಿ ಜಗತ್ತಿಗೆ ಸುತ್ತು ಹಾಕಿದ ಮೊದಲ ನೌಕೆ ಎಂಬ ಹೆಗ್ಗಳಿಕೆಯನ್ನು ಪಡೆಯಿತು. 

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement