Sunday, May 3, 2009

ಇಂದಿನ ಇತಿಹಾಸ History Today ಮೇ 1

ಇಂದಿನ ಇತಿಹಾಸ

ಮೇ 1

ಪ್ರಖ್ಯಾತ ಜಾದೂಗಾರ ಡೇವಿಡ್ ಬ್ಲೇನ್ ಅವರು 17 ನಿಮಿಷಗಳಿಗೂ ಹೆಚ್ಚುಕಾಲ ಉಸಿರಾಟ ಸ್ಥಗಿತಗೊಳಿಸಿ, ಬಳಿಕ ಆರಾಮ ಸ್ಥಿತಿಗೆ ಮರಳುವ ಮೂಲಕ ಹೊಸ ವಿಶ್ವ ದಾಖಲೆ ನಿರ್ಮಿಸಿದರು. ಡೇವಿಡ್ ಬ್ಲೇನ್ ಅವರ ಪ್ರಸ್ತುತ ದಾಖಲೆ ಕಾರ್ಯಕ್ರಮವನ್ನು ಟಿವಿಯಲ್ಲಿ `ದಿ ಒಪೇರಾ ವಿನ್ ಫ್ರೇ ಶೋ'ದಲ್ಲಿ ನೇರ ಪ್ರಸಾರ ಮಾಡಲಾಯಿತು. ನೀರು ತುಂಬಿದ ಜಾಡಿಯಲ್ಲಿ ಮುಳುಗಿ ಉಸಿರಾಡದೆ ಕುಳಿತಿದ್ದ ಡೇವಿಡ್ 17 ನಿಮಿಷ 4 ಸೆಕೆಂಡುಗಳ ಬಳಿಕ ಹೊರ ಬಂದಾಗ ಅಸ್ವಸ್ಥರಾಗಿರಲಿಲ್ಲ.

2008: ಪ್ರಖ್ಯಾತ ಜಾದೂಗಾರ ಡೇವಿಡ್ ಬ್ಲೇನ್ ಅವರು 17 ನಿಮಿಷಗಳಿಗೂ ಹೆಚ್ಚುಕಾಲ ಉಸಿರಾಟ ಸ್ಥಗಿತಗೊಳಿಸಿ, ಬಳಿಕ ಆರಾಮ ಸ್ಥಿತಿಗೆ ಮರಳುವ ಮೂಲಕ ಹೊಸ ವಿಶ್ವ ದಾಖಲೆ ನಿರ್ಮಿಸಿದರು. ಡೇವಿಡ್ ಬ್ಲೇನ್ ಅವರ ಪ್ರಸ್ತುತ ದಾಖಲೆ ಕಾರ್ಯಕ್ರಮವನ್ನು ಟಿವಿಯಲ್ಲಿ `ದಿ ಒಪೇರಾ ವಿನ್ ಫ್ರೇ ಶೋ'ದಲ್ಲಿ ನೇರ ಪ್ರಸಾರ ಮಾಡಲಾಯಿತು. ನೀರು ತುಂಬಿದ ಜಾಡಿಯಲ್ಲಿ ಮುಳುಗಿ ಉಸಿರಾಡದೆ ಕುಳಿತಿದ್ದ ಡೇವಿಡ್ 17 ನಿಮಿಷ 4 ಸೆಕೆಂಡುಗಳ ಬಳಿಕ ಹೊರ ಬಂದಾಗ ಅಸ್ವಸ್ಥರಾಗಿರಲಿಲ್ಲ. ಗಿನ್ನೆಸ್ ದಾಖಲೆಯಂತೆ ಈ ಹಿಂದೆ  ಸ್ವಿಜರ್ಲ್ಯಾಂಡಿನ ಪೀಟರ್ ಕಾಲ್ಟ್ ಅವರು 16.32 ನಿಮಿಷಗಳ ಕಾಲ ಉಸಿರು ಸ್ಥಗಿತ ಗೊಳಿಸಿ ಜಾಗತಿಕ ದಾಖಲೆ ನಿರ್ಮಿಸಿದ್ದರು.  ಡೇವಿಡ್ ಅವರು ಈ ದಾಖಲೆಯನ್ನು ಮೀರಿಸಿ ಹೊಸ ದಾಖಲೆ ನಿರ್ಮಿಸಿದರು. 

2008: ಪಶ್ಚಿಮ  ಇರಾನಿನಲ್ಲಿ 4.7 ಪ್ರಮಾಣದ ಭೂಕಂಪ ಸಂಭವಿಸಿದ್ದರಿಂದ ನೂರಕ್ಕೂ ಹೆಚ್ಚು ಜನರು ಗಾಯಗೊಂಡರು ಎಂದು  ಇರಾನ್ ಟಿವಿ ಹೇಳಿತು.

2008:  ಪ್ರಸಿದ್ಧ ಭಾರತೀಯ ಮೂಲದ ನ್ಯಾಯವಾದಿ ಕೆ. ಷಣ್ಮುಗಂ ಅವರು ಸಿಂಗಪುರದ ಕಾನೂನು ಸಚಿವರಾಗಿ ಅಧಿಕಾರ  ಸ್ವೀಕರಿಸಿದರು. ಈ ಹಿಂದೆ, ಭಾರತೀಯ ಮೂಲದ ಉಪಪ್ರಧಾನಿ ಪ್ರೊ. ಎಸ್. ಜಯಕುಮಾರ್ ಅವರು ಈ ಖಾತೆ ನೋಡಿಕೊಂಡಿದ್ದು ಅವರಿಂದ ಷಣ್ಮುಗಂ ಅಧಿಕಾರ ವಹಿಸಿಕೊಂಡರು. 49 ವಯಸ್ಸಿನ ಷಣ್ಮುಗಂ ವಕೀಲ ವೃತ್ತಿಯಲ್ಲಿ 23 ವರ್ಷಗಳ ಅನುಭವ ಹೊಂದಿದ್ದಾರೆ.

2008: ನ್ಯೂಯಾರ್ಕಿನ `ಟೈಮ್ಸ್' ಪತ್ರಿಕೆ ಪ್ರಕಟಿಸಿದ 2008ರ ವಿಶ್ವದ 100 ಅತ್ಯಂತ ಪ್ರಭಾವಿ ಗಣ್ಯರ ಪಟ್ಟಿಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಉದ್ಯಮಿ ರತನ್ ಟಾಟಾ ಮತ್ತು ಪೆಪ್ಸಿ ಕಂಪೆನಿಯ ಸಿಇಓ ಇಂದ್ರಾ ನೂಯಿ, ಟಿಬೆಟಿಯನ್ನರ ಧರ್ಮ ಗುರು ದಲೈಲಾಮ, ಚೀನಾ ಅಧ್ಯಕ್ಷ ಹು ಜಿಂಟಾವೊ ಸೇರಿದರು. ರಾಜಕೀಯ ನಾಯಕರ ವಿಭಾಗದಲ್ಲಿ ಸೋನಿಯಾ ಗಾಂಧಿ, ಟಾಟಾ ಮತ್ತು ನೂಯಿ ಅವರನ್ನು ಉದ್ಯಮಿಗಳ ವಿಭಾಗದಲ್ಲಿ ಪಟ್ಟಿ ಮಾಡಲಾಯಿತು. ಅಮೆರಿಕದ ಅಧ್ಯಕ್ಷೀಯ ಅಭ್ಯರ್ಥಿಗಳಾದ ಬರಾಕ್ ಒಬಾಮ, ಜಾನ್ ಮೆಕ್ಕೇನ್, ಹಿಲರಿ ಕ್ಲಿಂಟನ್, ಇರಾಕ್ ಶಿಯಾ ಧಾರ್ಮಿಕ ನಾಯಕ ಮುಕ್ತಾದ-ಅಲ್-ಸದ್ರಾ, ಅಮೆರಿಕ ಅಧ್ಯಕ್ಷ ಜಾರ್ಜ್ ಡಬ್ಲ್ಯು ಬುಷ್, ಬ್ರಿಟನ್ ಮಾಜಿ ಪ್ರಧಾನಿ ಟೋನಿ ಬ್ಲೇರ್ ಸೇರಿದಂತೆ ಜಗತ್ತಿನ ವಿವಿಧ ಕ್ಷೇತ್ರಗಳ ನೂರು ಗಣ್ಯರನ್ನು ಪಟ್ಟಿಯಲ್ಲಿ ಸೇರಿಸಲಾಯಿತು.

 2008:  ಲಂಡನ್ನಿನ `ದಿ ಡೈಲಿ ಟೆಲಿಗ್ರಾಫ್' ದೈನಿಕ ತಯಾರಿಸಿದ ಬ್ರಿಟನ್ನಿನ ಸಾರ್ವಜನಿಕ ವಲಯದ ಪ್ರಭಾವಿ 100 ಗಣ್ಯರ ಪಟ್ಟಿಯಲ್ಲಿ ಭಾರತೀಯ ಮೂಲದ ಶ್ರುತಿ ವಡೇರಾ 20ನೇ ಸ್ಥಾನ ಪಡೆದರು. ಶ್ರುತಿಯವರು ಚಾನ್ಸೆಲರ್ ಗೋರ್ಡಾನ್ ಬ್ರೌನ್ ಅವರ ವಿಶೇಷ ಸಲಹೆಗಾರರಾಗಿ ಎಂಟು ವರ್ಷಗಳ ಕಾಲ ಸೇವೆ ಸಲ್ಲಿಸಿದ ನಂತರ ಬ್ರಿಟನ್ ಪ್ರಧಾನಿಯವರ ವೈಟ್ ಹಾಲ್ನ ವಾಣಿಜ್ಯ ಮತ್ತು ಸ್ಪರ್ಧಾತ್ಮಕ ಉದ್ಯಮ ವಿಭಾಗದಲ್ಲಿ ಸಂಸದೀಯ ಅಧೀನ ಕಾರ್ಯದರ್ಶಿಯಾಗಿ ಸೇವೆ  ಸಲ್ಲಿಸಿದ್ದರು.

2008: ಚೀನಾದ ಜಿಯಾಜಿಂಗ್ ಮತ್ತು ಶಾಂಘಾಯ್ ನಗರಗಳ ಸಂಪರ್ಕಕ್ಕಾಗಿ ಸಮುದ್ರದ ಮೇಲೆ ನಿರ್ಮಿಸಿದ ಸೇತುವೆಯು ಸಮುದ್ರದ ಮೇಲಣ ವಿಶ್ವದ ಅತಿ ಉದ್ದದ ಸೇತುವೆಯಾಗಿದ್ದು (36 ಕಿ.ಮೀ) ಈದಿನ ಇದನ್ನು ಉದ್ಘಾಟಿಸಲಾಯಿತು.

2008: `ದೀದಿ' ಎಂದೇ ಎಲ್ಲರ ಬಾಯಲ್ಲೂ ಪ್ರೀತಿಯಿಂದ ಕರೆಸಿಕೊಳ್ಳುತ್ತಿದ್ದ ಖ್ಯಾತ ಗಾಂಧಿವಾದಿ ಹಾಗೂ ರಾಜ್ಯಸಭಾ ಸದಸ್ಯೆ ನಿರ್ಮಲಾ ದೇಶಪಾಂಡೆ (79) ಅವರು ಈದಿನ ಬೆಳಗಿನ ಜಾವ ನವದೆಹಲಿಯಲ್ಲಿ ನಿಧನರಾದರು. ಹಿಂದಿನ ದಿನ ಸಂಜೆ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮನೆಗೆ ಬಂದು ರಾತ್ರಿ ನಿದ್ರೆ ಹೋದ ಅವರು ಮತ್ತೆ ಕಣ್ತೆರೆಯದೆ `ಚಿರನಿದ್ರೆ'ಗೆ ಜಾರಿದರು ಎಂದು ಅವರ ಕುಟುಂಬದ ಮೂಲಗಳು ತಿಳಿಸಿದವು. ಅವಿವಾಹಿತರಾಗಿದ್ದ ಅವರು ತಮ್ಮ ಸಹೋದರಿಯನ್ನು ಅಗಲಿದರು. ಅಕ್ಟೋಬರ್ 17, 1929ರಂದು ನಾಗಪುರದಲ್ಲಿ ಜನಿಸಿದ್ದ ನಿರ್ಮಲಾ 1952ರಲ್ಲಿ ವಿನೋಬಾ ಭಾವೆ ಅವರು ಕೈಗೊಂಡ ಭೂದಾನ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ವಿನೋಬಾರ ಜೊತೆ ದೇಶದ್ಯಾಂತ ಸಾವಿರಾರು ಕಿಲೋ ಮೀಟರ್ ಪಾದಯಾತ್ರೆ ನಡೆಸಿದ್ದರು. ಕಟ್ಟಾ ಗಾಂಧಿವಾದಿಯಾಗಿದ್ದ ಅವರು 2006ರಲ್ಲಿ ಪದ್ಮವಿಭೂಷಣ ಪ್ರಶಸ್ತಿ, ರಷ್ಯಾದ `ಆರ್ಡರ್ ಆಫ್ ಫ್ರೆಂಡ್ ಶಿಪ್ ರಷ್ಯಾ' ಪ್ರಶಸ್ತಿ, ರಾಜೀವ್ ಗಾಂಧಿ ಸದ್ಭಾವನಾ ಪುರಸ್ಕಾರ ಹಾಗೂ ಪಾಟಿಯಾಲ, ಅಮರಾವತಿ ಮತ್ತು ಕಾಶಿ ವಿದ್ಯಾಪೀಠಗಳಿಂದ ಮೂರು ಗೌರವ ಡಾಕ್ಟರೇಟ್ ಗಳನ್ನೂ ಪಡೆದಿದ್ದರು ನಿರ್ಮಲಾ ಅವರ ತಂದೆ ಖ್ಯಾತ ಮರಾಠಿ ಲೇಖಕರೂ ಆಗಿದ್ದರು. ನಿರ್ಮಲಾ ಅವರೂ ಹಲವು ಪುಸ್ತಕಗಳನ್ನು ಬರೆದಿದ್ದು, ಅವುಗಳಲ್ಲಿ `ವಿನೋಬಾಕೆ ಸಾಥ್, ಕ್ರಾಂತಿ ಕಿ ರಾಹ್ ಪರ್, ಚಿಂಗ್ಲಿಂಗ್, ಸೀಮಂತ್ ಆಂಡ್ ವಿನೋಬಾ' ಪ್ರಮುಖ ಕೃತಿಗಳು. ಕಳೆದ ಶತಮಾನದ 60ರ ದಶಕದಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಶಾಂತಿ ಸ್ಥಾಪನೆಗೆ ಅವರು ಅವಿರತವಾಗಿ ಶ್ರಮಿಸಿದ್ದರು. ಪಂಜಾಬ್, ಜಮ್ಮು ಮತ್ತು ಕಾಶ್ಮೀರ, 2002ರಲ್ಲಿ ಗುಜರಾತ್ ಗಲಭೆ, 1999ರಲ್ಲಿ ಒರಿಸ್ಸಾದಲ್ಲಿ ನಡೆದ ಕ್ರೈಸ್ತ ಪಾದ್ರಿ ಗ್ರಹಾಂ ಸ್ಟೇನ್ಸ್ ಹತ್ಯೆ ಖಂಡಿಸಿ ದೇಶದ ವಿವಿಧೆಡೆ ಅವರು ಶಾಂತಿ ಸಂದೇಶ ಸಾರುವ ಮೂಲಕ ಸಾರ್ವಜನಿಕರಲ್ಲಿ ಅನುಕಂಪ ಮತ್ತು ಅಹಿಂಸೆಯ ಮಂತ್ರಗಳನ್ನು ಬೋಧಿಸಿದ್ದರು. ಭಾರತ ಮತ್ತು ಪಾಕ್ ನಡುವಿನ ಬಾಂಧವ್ಯ ವೃದ್ಧಿಗಾಗಿಯೂ ಅವರು ಸಾಕಷ್ಟು ಶ್ರಮಿಸಿದ್ದರು. 2000ದಲ್ಲಿ ನವದೆಹಲಿಯಿಂದ ಲಾಹೋರಿಗೆ ಹೊರಟ ಬಸ್ಸಿನಲ್ಲಿ ಮಹಿಳೆಯರ ತಂಡದ ಶಾಂತಿ ಯಾತ್ರೆಯ ನೇತೃತ್ವ ವಹಿಸಿದ್ದರು. ಭಾರತ ಹಾಗೂ ಪಾಕ್ ದೇಶಗಳ ನಿವೃತ್ತ ಸೇನಾ ಅಧಿಕಾರಿಗಳಿಗೆ ನೆರವು ನೀಡುವಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದರು. 1997ರಲ್ಲಿ 2 ವರ್ಷದ ಅವಧಿಗೆ ಹಾಗೂ 2004ರಲ್ಲಿ ನಿರ್ಮಲಾ ರಾಜ್ಯಸಭೆಗೆ ನೇಮಕಗೊಂಡಿದ್ದರು.

2008: ಅಗರ್ತಲ ಜಿಲ್ಲೆಯ ಇಬ್ಬರು ರೈತರನ್ನು ಬಾಂಗ್ಲಾದೇಶ ರೈಫಲ್ಸ್ (ಬಿಡಿಆರ್) ಶಸ್ತ್ರಧಾರಿ ಅಧಿಕಾರಿಗಳು ಅಪಹರಿಸಿದರು. ತಮ್ಮ ಹೊಲದಲ್ಲಿ ಕೆಲಸ ಮಾಡುತ್ತಿದ್ದ ನಬಾದ್ ವಿಪ್ ದಾಸ್ ಹಾಗೂ ಅವರ ಮಗ ರಂಜಿತ್ ಅವರು ಅಪಹರಣಕ್ಕೆ ಒಳಗಾದವರು. ಭಾರತದ ವ್ಯಾಪ್ತಿಯೊಳಗೆ ಬರುವ ಖೆಡಬರಿ ಪ್ರದೇಶದಲ್ಲಿನ ರಬ್ಬರ್ ಮರಗಳನ್ನು ಕತ್ತರಿಸಿ ತಮ್ಮ ದೇಶಕ್ಕೆ ಕಳ್ಳಸಾಗಣೆ ಮಾಡಲು ಯತ್ನಿಸುತ್ತಿದ್ದಾಗ ಬಾಂಗ್ಲಾದೇಶದ ಕೆಲವರು ಬಂಧಿತರಾಗಿದ್ದರು. ಇವರನ್ನು ಬಿಡಿಸಿಕೊಳ್ಳುವ ಉದ್ದೇಶದಿಂದ ಈ ರೈತರನ್ನು ಅಪಹರಿಸಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದರು.

2008: ಮುಂಬೈಯಲ್ಲಿ ಹಿಂದಿನ ದಿನ ನಡೆದ ಸಮಾರಂಭದಲ್ಲಿ ಕನ್ನಡದ ಹಿರಿಯ ಚಿತ್ರ ನಿರ್ಮಾಪಕ ಸಿ.ವಿ.ಎಲ್.ಶಾಸ್ತ್ರಿ ಅವರಿಗೆ ದಾದಾ ಸಾಹೇಬ್ ಫಾಲ್ಕೆ  ಅಕಾಡೆಮಿ ಪುರಸ್ಕಾರವನ್ನು ಬಾಲಿವುಡ್ ಮಾಜಿ  ಸೂಪರ್ ಸ್ಟಾರ್  ರಾಜೇಶ್  ಖನ್ನಾ ಪ್ರದಾನ ಮಾಡಿದರು. ಈ  ಸಂದರ್ಭದಲ್ಲಿ ಪ್ರಸಾದ್ ಗುಂಪಿನ ಎಂ.ಡಿ. ರಮೇಶ್ ಪ್ರಸಾದ್, ದಾದಾ ಸಾಹೇಬ್ ಫಾಲ್ಕೆ  ಅಕಾಡೆಮಿ ಅಧ್ಯಕ್ಷ  ಸಂತೋಷ್ ಸಿಂಗ್ ಜೈನ್ ಉಪಸ್ಥಿತರ್ದಿದರು.

 2008: ಪ್ರಸಾರ ಭಾರತಿಯ ನೂತನ ಅಧ್ಯಕ್ಷರಾಗಿ ನಿವೃತ್ತ ಐಎಎಸ್ ಅಧಿಕಾರಿ ಅರುಣ್ ಭಟ್ನಾಗರ್ ಅವರನ್ನು ನೇಮಕ ಮಾಡಲಾಯಿತು. ಮಧ್ಯಪ್ರದೇಶ ಕೇಡರಿನ 1966ರ ತಂಡದ ಐಎಎಸ್ ಅಧಿಕಾರಿಯಾದ ಭಟ್ನಾಗರ್ ಅವರು ಈ ಮೊದಲು ರಾಷ್ಟ್ರೀಯ ಸಲಹಾ ಸಮಿತಿಯ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು. ಈವರೆಗೂ ಪ್ರಸಾರ ಭಾರತಿ ಅಧ್ಯಕ್ಷರಾಗಿ ಎಂ.ವಿ.ಕಾಮತ್ ಅಧಿಕಾರದಲ್ಲಿದ್ದರು. ಇವರನ್ನು ಎನ್ ಡಿ ಎ ಸರ್ಕಾರ ನೇಮಕ ಮಾಡಿತ್ತು. ಪ್ರಸಾರ ಭಾರತಿ ಮಸೂದೆಗೆ ತಿದ್ದುಪಡಿ ತಂದ ನಂತರ ಇವರು ಮಾರ್ಚ್ 17ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

2008: ಚಲಿಸುವ ರೈಲನ್ನು ಹತ್ತುವ ಸಂದರ್ಭದಲ್ಲಿ ಮೃತರಾದ/ ಗಾಯಗೊಂಡ ವ್ಯಕ್ತಿಯ ಕುಟುಂಬವೂ ಪರಿಹಾರ ಪಡೆಯಲು ಅರ್ಹ ಎಂದು ಸುಪ್ರೀಂಕೋರ್ಟ್ ಹೇಳಿತು. ಚಲಿಸುವ ರೈಲನ್ನು ಹತ್ತುವ ಯತ್ನದಲ್ಲಿ ವ್ಯಕ್ತಿಯು ತನ್ನದೇ ತಪ್ಪಿನಿಂದ ರೈಲಿಗೆ ಸಿಲುಕಿದ್ದರೂ ಆತನ/ ಆಕೆಯ ಕುಟುಂಬ ಪರಿಹಾರ ಪಡೆಯಲು ಅರ್ಹ ಎಂದು ಕೋರ್ಟ್ ಸ್ಪಷ್ಟಪಡಿಸಿತು. ಒಂದೇ ವಿಷಯಕ್ಕೆ ಸಂಬಂಧಪಟ್ಟ ಕಾನೂನುಗಳಲ್ಲಿ ವ್ಯತ್ಯಾಸವಿದ್ದರೆ, ಅಂತಹ ಸಂದರ್ಭದಲ್ಲಿ ನ್ಯಾಯಾಲಯಗಳು ಸಾರ್ವಜನಿಕರಿಗೆ ಅನುಕೂಲವಾಗುವಂತಹ ಕಾನೂನಿಗೇ ಮಾನ್ಯತೆ ಕೊಡಬೇಕು ಎಂದೂ ನ್ಯಾಯಮೂರ್ತಿಗಳಾದ ಎಚ್.ಕೆ.ಸೇಮ ಮತ್ತು ಮಾರ್ಕಂಡೇಯ ಕಟ್ಜು ಅಭಿಪ್ರಾಯಪಟ್ಟರು. ಚಲಿಸುವ ರೈಲು, ಕಾರು ಮತ್ತಿತರ ಕೆಲವು ಚಾಲನೆಯಲ್ಲಿರುವ ವಸ್ತುಗಳು `ಮೂಲಭೂತ ಅಪಾಯಕಾರಿ ಚಟುವಟಿಕೆಗಳು ವ್ಯಾಪ್ತಿ'ಯಲ್ಲಿ ಬರುವುದರಿಂದ ಸಂತ್ರಸ್ತರಿಗೆ ಪರಿಹಾರ ಸಿಗಬೇಕು ಎಂದು ಪೀಠ ವಿವರಿಸಿತು. ಕೇರಳದಲ್ಲಿ ಚಲಿಸುವ ರೈಲು ಹತ್ತುವ ಯತ್ನದಲ್ಲಿ ಮೃತರಾದ ಮಹಿಳೆಯ ಕುಟುಂಬಕ್ಕೆ ಅಲ್ಲಿನ ಹೈಕೋರ್ಟ್ 2 ಲಕ್ಷ ರೂಪಾಯಿ ಪರಿಹಾರ ಕೊಡುವಂತೆ ತೀರ್ಪು ಕೊಟ್ಟಿತ್ತು. ಇದನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಸುಪ್ರೀಂಕೋರ್ಟಿನಲ್ಲಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಪೀಠ ಹೀಗೆ ಹೇಳಿ, ತೀರ್ಪನ್ನು ಕಾದಿರಿಸಿತು.

2008: ಭೂಕುಸಿತದಿಂದ ಸಂಭವಿಸಿದ ಅಪಘಾತದಲ್ಲಿ 12 ಕಾರ್ಮಿಕರು ಸ್ಥಳದಲ್ಲೇ ಸಾವಿಗೀಡಾಗಿ 18 ಕಾರ್ಮಿಕರು ಗಾಯಗೊಂಡ ದುರ್ಘಟನೆ ಜಮ್ಮುವಿನಲ್ಲಿ ಸಂಭವಿಸಿತು.

2008: ಬೆಂಗಳೂರಿನ ಪ್ರೆಸ್ ಕ್ಲಬ್ಬಿನಲ್ಲಿ ನಡೆದ ಸಮಾರಂಭದಲ್ಲಿ ಚಿತ್ರ ನಿರ್ಮಾಪಕಿ ಪಾರ್ವತಮ್ಮ ರಾಜಕುಮಾರ್ ಅವರು ಅ.ನಾ. ಪ್ರಹ್ಲಾದರಾವ್ ಅವರ 'ಬಂಗಾರದ ಮನುಷ್ಯ' ಕೃತಿಯ ಆಂಗ್ಲ ಅನುವಾದ 'ಡಾ. ರಾಜಕುಮಾರ್: ದಿ ಇನ್ ಇಮಿಟೆಬಲ್ ಆಕ್ಟರ್ ವಿತ್ ಎ ಗೋಲ್ಡನ್ ವಾಯ್ಸ್' ಪುಸ್ತಕ ಬಿಡುಗಡೆ ಮಾಡಿದರು. ಕವಿ ಪ್ರೊ. ಕೆ.ಎಸ್. ನಿಸಾರ್ ಅಹಮದ್ ಮುಖ್ಯ ಅತಿಥಿಯಾಗಿದ್ದರು. ಅಲ್ಲಾಡಿ ಜಯಶ್ರೀ ಅವರು ಪುಸ್ತಕವನ್ನು ಇಂಗ್ಲಿಷಿಗೆ ಭಾಷಾಂತರ ಮಾಡಿದ್ದರು.

2007: ಕರ್ನಾಟಕದಾದ್ಯಂತ ಒಟ್ಟು 1400ಕ್ಕೂ  ಹೆಚ್ಚು ಆನ್ ಲೈನ್ ಲಾಟರಿ ಅಂಗಡಿಗಳು ತಮ್ಮ ಆನ್ ಲೈನ್ ಲಾಟರಿ ವಹಿವಾಟು ಪುನರಾರಂಭಿಸಿದವು. ಏಪ್ರಿಲ್ 30ರಂದು ರಾಜ್ಯದ ಐದು ಜಿಲ್ಲೆಗಳಲ್ಲಿ ಕೇವಲ 750 ಮಾರಾಟಗಾರರು ತಮ್ಮ ಚಟುವಟಿಕೆ ಪುನರಾರಂಭಿಸಿದ್ದರು. ಈದಿನ ಶಿವಮೊಗ್ಗ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿಯೂ ಆನ್ ಲೈನ್ ಲಾಟರಿ ವಹಿವಾಟು ಪುನರಾರಂಭಗೊಂಡಿತು.

2007: ಐಟಿ, ಬಿಟಿ ಕಂಪೆನಿಗಳನ್ನು ಹೊರತುಪಡಿಸಿ ಉಳಿದ ಉದ್ಯಮಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಹಿಳೆಯರು ಜುಲೈ ತಿಂಗಳಿನಿಂದ `ರಾತ್ರಿ ಪಾಳಿ' ನಿರ್ವಹಿಸುವಂತಿಲ್ಲ, ಈ ಸಂಬಂಧ ಜುಲೈ ತಿಂಗಳಿನಲ್ಲಿ ರಾಜ್ಯ ಸರ್ಕಾರವು ಕಾನೂನು ಜಾರಿಗೊಳಿಸುವುದು ಎಂದು ಕಾರ್ಮಿಕ ಸಚಿವ ಇಕ್ಬಾಲ್ ಅನ್ಸಾರಿ ಪ್ರಕಟಿಸಿದರು.

2006: ಪಾಕಿಸ್ಥಾನ ಮೂಲದ ಲಷ್ಕರ್ -ಎ- ತೊಯಿಬಾ ಉಗ್ರಗಾಮಿ ಸಂಘಟನೆಯು ಜಮ್ಮು ಮತ್ತು ಕಾಶ್ಮೀರದಲ್ಲಿ ಮೂರು ಕಡೆ ನಡೆಸಿದ ಪ್ರತ್ಯೇಕ ಹತ್ಯಾಕಾಂಡಗಳಲ್ಲಿ ಒಟ್ಟು 35 ಜನ ಹಿಂದೂಗಳನ್ನು ಕೊಂದು ಹಾಕಿತು. ದೋಡಾ ಜಿಲ್ಲೆಯ ಕುಲ್ಹುಂಡ್ ಗ್ರಾಮದ ಪಚೋಲಿ ಮತ್ತು ಥಾವಾ ಎಂಬ 2 ಕಾಲೋನಿಗಳಲ್ಲಿ ಬೆಳಗಿನ ಜಾವ 10 ಜನ ಉಗ್ರಗಾಮಿಗಳ ತಂಡವು ವಿಚಾರಣೆಯ ನೆಪದಲ್ಲಿ ಗ್ರಾಮಸ್ಥರನ್ನು ಸಾಲಾಗಿ ನಿಲ್ಲಿಸಿ ಗುಂಡು ಹೊಡೆದು ಕೊಂದು ಹಾಕಿತು.

2006: ಖ್ಯಾತ ರಾಸಾಯನಿಕ ವಿಜ್ಞಾನಿ ಸಿ.ಎನ್.ಆರ್. ರಾವ್, ಜೈವಿಕ ವಿಜ್ಞಾನಿ ಒಬೈದ್ ಸಿದ್ದಿಖಿ ಮತ್ತು ಗಣಿತ ತಜ್ಞ ಸಿ.ಎಸ್. ಶೇಷಾದ್ರಿ ಅವರನ್ನು ತಮ್ಮ ಕ್ಷೇತ್ರಗಳಲ್ಲಿ ಸಲ್ಲಿಸಿದ ಗಣನೀಯ ಸೇವೆಗಾಗಿ `ರಾಷ್ಟ್ರೀಯ ಸಂಶೋಧನಾ ಪ್ರೊಫೆಸರ್ ಗಳು' ಎಂಬುದಾಗಿ ಹೆಸರಿಸಿ ಗೌರವಿಸಲಾಯಿತು. ಸಿ.ವಿ. ರಾಮನ್, ಎಸ್.ಎನ್. ಬೋಸ್, ಸತ್ಯಜಿತ್ ರೇ, ಉಸ್ತಾದ್ ಬಿಸ್ಮಿಲ್ಲಾ ಖಾನ್ ಮತ್ತು ಪಂಡಿತ್ ರವಿಶಂಕರ್, ತೀರಾ ಇತ್ತೀಚೆಗೆ ಮಹಾಶ್ವೇತಾದೇವಿ ಹಾಗೂ ಹಬೀಬ್ ತನ್ವರ್ ಈ ರಾಷ್ಟ್ರೀಯ ಗೌರವಕ್ಕೆ ಪಾತ್ರರಾದ ಪ್ರಮುಖರಲ್ಲಿ ಸೇರಿದ್ದಾರೆ.

1998: ಸುಮಾರು 760 ಕಿ.ಮೀ. ಉದ್ದದ ಕೊಂಕಣ ರೈಲ್ವೇಗೆ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಈ ದಿನ ಹಸಿರು ನಿಶಾನೆ ತೋರಿಸಿದರು. ಈ ಮಾರ್ಗವು ರತ್ನಗಿರಿಯಿಂದ ಮುಂದಕ್ಕೆ ವಿಸ್ತರಣೆಯಾಗಿದ್ದು, ನಿತ್ಯ ಹರಿದ್ವರ್ಣದ ಕಾಡುಗಳ ಮಧ್ಯೆ ಸಾಗುವುದು.

1960: ಮುಂಬೈ ಪ್ರಾಂತವು ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಾಗಿ ವಿಂಗಡನೆಗೊಂಡಿತು.

1948: ಕವಯಿತ್ರಿ ಶಶಿಕಲಾ ವೀರಯ್ಯ ಸ್ವಾಮಿ ಹುಟ್ಟಿದ ದಿನ. ವಿಜಾಪುರ ಜಿಲ್ಲೆಯ ಸಿಂಧಗಿಯಲ್ಲಿ ಸಿದ್ದಲಿಂಗಯ್ಯ - ಅನ್ನಪೂರ್ಣಾ ದೇವಿ ದಂಪತಿಯ ಪುತ್ರಿಯಾಗಿ ಜನಿಸಿದ ಶಶಿಕಲಾ ಅಖಿಲ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷ ಸ್ಥಾನ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಲ್ಲಿ ಪದಾಧಿಕಾರಿಯಾಗಿಯೂ ಸೇವೆ ಸಲ್ಲಿದವರು.

1933: ಇಂಗ್ಲೆಂಡ್ - ಭಾರತ ದೂರವಾಣಿ ಸೇವೆ ಆರಂಭವಾಯಿತು. ಭಾರತದ ರಾಜ್ಯ ಕಾರ್ಯದರ್ಶಿ ಸರ್ ಸ್ಯಾಮ್ಯುಯೆಲ್ ಹೋರ್ ಮತ್ತು ಮುಂಬೈಯ ಗವರ್ನರ್ ಸರ್ ಫ್ರೆಡರಿಕ್ ಸೈಕ್ಸ್ ಅವರ ಮಧ್ಯೆ ಮೊತ್ತ ಮೊದಲ ದೂರವಾಣಿ ಸಂಭಾಷಣೆ ನಡೆಯಿತು.

1897: ಸ್ವಾಮಿ ವಿವೇಕಾನಂದರು ಕೊಲ್ಕತದಲ್ಲಿ (ಅಂದಿನ ಕಲಕತ್ತ) ರಾಮಕೃಷ್ಣ ಮಿಷನ್ ಸ್ಥಾಪಿಸಿದರು.

1851: ಲಂಡನ್ನಿನ ಹೈಡ್ ಪಾರ್ಕಿನ ಕ್ರಿಸ್ಟಲ್ ಪ್ಯಾಲೇಸಿನಲ್ಲಿ ಎಲ್ಲ ರಾಷ್ಟ್ರಗಳ ಕೈಗಾರಿಕಾ ವಸ್ತುಗಳ ಬೃಹತ್ ಪ್ರದರ್ಶನ ಉದ್ಘಾಟನೆಗೊಂಡಿತು. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆದ ಮೊತ್ತ ಮೊದಲ ಪ್ರದರ್ಶನ. ಸಹಸ್ರಾರು ಸಂಶೋಧನೆಗಳಿಗೆ ಪ್ರದರ್ಶನಾವಕಾಶವನ್ನು ಇದು ಕಲ್ಪಿಸಿಕೊಟ್ಟಿತು.

1700: ಇಂಗ್ಲಿಷ್ ಕವಿ, ನಾಟಕಕಾರ ಮತ್ತು ವಿಮರ್ಶಕ ಜಾನ್ ಡ್ರೈಡೆನ್ ಮೃತನಾದ. ಲಾರೇಟ್ ಹುದ್ದೆಗೆ ಅಧಿಕೃತವಾಗಿ ನೇಮಕಗೊಂಡ ಮೊದಲ ಇಂಗ್ಲಿಷ್ ಕವಿ ಈತ. ಆದರೆ ನೂತನ ದೊರೆ ಮೂರನೇ ವಿಲಿಯಂಗೆ ಪ್ರಮಾಣವಚನ ಬೋಧಿಸಲು ನಿರಾಕರಿಸಿದ್ದಕ್ಕಾಗಿ ಈ ಹುದ್ದೆಯಿಂದ ಈತ ವಜಾಗೊಂಡ. 

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement