Monday, May 11, 2009

ಇಂದಿನ ಇತಿಹಾಸ History Today ಮೇ 11

ಇಂದಿನ ಇತಿಹಾಸ

ಮೇ 11

ಆಶಾ ರಾವತ್ (97 ರನ್) ಅವರ ಸೊಗಸಾದ ಬ್ಯಾಟಿಂಗ್ ಪ್ರದರ್ಶನದ ನೆರವಿನಿಂದ ಭಾರತ ತಂಡದವರು ಕೊಲಂಬೋದಲ್ಲಿ ಅಂತ್ಯಗೊಂಡ ಮಹಿಳಾ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದರು.

2008: ಹುಬ್ಬಳ್ಳಿ ನಗರದ ಒಂದನೇ ಜೆಎಂಎಫ್ಸಿ ನ್ಯಾಯಾಲಯದ ಸಭಾಭವನದಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ನಿಷೇಧಿತ ಭಯೋತ್ಪಾದಕ ಸಂಘಟನೆಗಳಾದ ಲಷ್ಕರ್-ಎ-ತೊಯ್ಬಾ (ಎಲ್ಇಟಿ) ಅಥವಾ ಸಿಮಿಯ ಕೈವಾಡ ಇರುವ ಶಂಕೆ ಇದ್ದು, ಸ್ಫೋಟಕ್ಕೆ ಬಳಸಲಾದ ಮೊಬೈಲ್ ಫೋನ್ ಸಿಮ್ ಕಾರ್ಡ್ ಸೇರಿದಂತೆ ಅನೇಕ ಮಹತ್ವದ ಸಾಕ್ಷ್ಯಾಧಾರಗಳು ಲಭ್ಯವಾದವು. ದೆಹಲಿಯಿಂದ ಆಗಮಿಸಿದ ರಾಷ್ಟ್ರೀಯ ಭದ್ರತಾ ದಳದ ಮೇಜರ್ ಪಾರಿತೋಷ ಉಪಾಧ್ಯಾಯ ನೇತೃತ್ವದ ನಾಲ್ವರು ಸದಸ್ಯರ ತಂಡ, ಬೆಂಗಳೂರಿನಿಂದ ಆಗಮಿಸಿದ ವಿಧಿವಿಜ್ಞಾನ ಸಂಸ್ಥೆಯ ಪ್ರಯೋಗಾಲಯದ ಉಪನಿರ್ದೇಶಕ ಜಯರಾಮ ನೇತೃತ್ವದ ನಾಲ್ವರು ಸದಸ್ಯರ ತಂಡವು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಸ್ಫೋಟದ ಸ್ವರೂಪ ಕುರಿತು ಅಧ್ಯಯನ ನಡೆಸಿತು.

2008: ಅಮೆರಿಕದ ಮಿಸ್ಸೌರಿ ಹಾಗೂ ಒಕ್ಲಹಾಮಾ ಸಿಟಿಯಲ್ಲಿ ಚಂಡಮಾರುತದಿಂದ ಕನಿಷ್ಠ 18 ಮಂದಿ ಸತ್ತಿರುವುದಾಗಿ ಅಧಿಕಾರಿಗಳು ಹೇಳಿದರು. ಮಿಸ್ಸೌರಿಯಲ್ಲಿ ಕನಿಷ್ಠ 12 ಮಂದಿ ಸತ್ತಿದ್ದು, ಇವರಲ್ಲಿ 10 ಮಂದಿ  ಒಕ್ಲಹಾಮಾ ಗಡಿಯಲ್ಲಿನ ನ್ಯೂಟೌನ್ ಕೌಂಟಿಯವರು. ವಾಯವ್ಯ ಒಕ್ಲಹಾಮಾದ ಪಿಚರಿನಲ್ಲಿ 6 ಮಂದಿ  ಸತ್ತರು ಎಂದು  ಮಿಸ್ಸೌರಿಯ ವಿಪತ್ತು  ನಿರ್ವಹಣಾ ಸಂಸ್ಥೆಯ ಅಧಿಕಾರಿ ಸೂಸಿ ಸ್ಟೋನರ್ ತಿಳಿಸಿದರು.

2008: ಶ್ರೀಲಂಕಾದ ಆಡಳಿತಾರೂಢ  ಮೈತ್ರಿಕೂಟವು (ಯುಪಿಎಫ್ಎ) ಹಿಂಸೆ ಪೀಡಿತ ಪೂರ್ವ ಪ್ರಾಂತ್ಯದಲ್ಲಿ ನಡೆದ ನಿರ್ಣಾಯಕ ಚುನಾವಣೆಯಲ್ಲಿ ಜಯಭೇರಿ ಬಾರಿಸಿತು.

2008: ಮ್ಯಾನ್ಮಾರಿನಲ್ಲಿ ಹಿಂದಿನ ದಿನ ನಡೆದ ಜನಮತಗಣನೆಯಲ್ಲಿ `ಭಾರಿ ಸಂಖ್ಯೆಯಲ್ಲಿ' ಜನರು ತಮ್ಮ ಮತ ಚಲಾಯಿಸಿದ್ದಾರೆ' ಎಂದು  ಸೇನಾಡಳಿತ ಹೇಳಿಕೊಂಡಿತು. ಆದರೆ ಚಂಡಮಾರುತ ಪೀಡಿತ ಪ್ರದೇಶಗಳಲ್ಲಿ ಜನರಿಗೆ ಪರಿಹಾರ  ವಿತರಿಸುವಲ್ಲಿ ಮಾತ್ರ ಅದು ಘೋರ ವೈಫಲ್ಯ ಕಂಡಿತು. ಮೇ 3ರಂದು ಅಪ್ಪಳಿಸಿದ ಭೀಕರ ಚಂಡಮಾರುತ 60 ಸಾವಿರಕ್ಕೂ ಅಧಿಕ ಜನರನ್ನು ಬಲಿ ತೆಗೆದುಕೊಂಡರೂ ಅದರ ಬಗ್ಗೆ ಅಂತಹ ಉಲ್ಲೇಖ  ಮಾಡದ ಸರ್ಕಾರ, ನೂತನ ಸಂವಿಧಾನ ರಚನೆಗೆ ಅವಕಾಶ ನೀಡುವ ಈ ಜನಮತಗಣನೆಗೇ ಬಹಳ ಪ್ರಾಮುಖ್ಯತೆ ನೀಡಿತು. ಸರ್ಕಾರದ `ನ್ಯೂ ಲೈಟ್ ಆಫ್ ಮ್ಯಾನ್ಮಾರ್' ದೈನಿಕ ಜನಮತಗಣನೆಯ ಬಗ್ಗೆ ದೊಡ್ಡದಾಗಿ ವಿವರಣೆ ನೀಡಿತು.

2008: ಪಶ್ಚಿಮ ಬಂಗಾಳದಲ್ಲಿ ನಡೆದ ಪಂಚಾಯತ್ ಚುನಾವಣೆಯ ಮತದಾನದ ಸಂದರ್ಭದಲ್ಲಿ ಹಲವೆಡೆ ಹಿಂಸಾಚಾರ ನಡೆಯಿತು. ಬರ್ಧಮನ್ ಜಿಲ್ಲೆಯಲ್ಲಿ ಮತಗಟ್ಟೆಯೊಂದರಲ್ಲಿ ಸಿಪಿಐ (ಎಂ) ಕಾರ್ಯಕರ್ತರು ನೂಕುನುಗ್ಗಲು ಉಂಟುಮಾಡಿದ್ದನ್ನು ವಿರೋಧಿಸಿದ ತೃಣಮೂಲ ಕಾಂಗ್ರೆಸ್ಸಿನ ಕಾರ್ಯಕರ್ತನನ್ನು ಹತ್ಯೆ ಮಾಡಲಾಯಿತು. ಘಟನೆಯಲ್ಲಿ ಮತ್ತೊಬ್ಬ ಗಾಯಗೊಂಡ.

2008: ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯನ್ನು ಭೇಟಿ ಮಾಡುವಾಗ ವಕೀಲರು ಕಪ್ಪು ಕೋಟು ಧರಿಸುವ ಅಗತ್ಯವಿಲ್ಲ. ಬಾರ್ ಕೌನ್ಸಿಲಿನಿಂದ ಪಡೆದ ಗುರುತಿನ ಪತ್ರವನ್ನು ತೋರಿಸಿದರೆ ಸಾಕಾಗುತ್ತದೆ ಎಂದು ಮುಂಬೈ ನಗರದ ವಕೀಲರೊಬ್ಬರು ಹೈಕೋರ್ಟ್ ತೀರ್ಪೊಂದನ್ನು ಉದ್ಧರಿಸಿ ಸ್ಪಷ್ಟಪಡಿಸಿದರು. ಜೈಲಿನಲ್ಲಿ ವಿಚಾರಣಾಧೀನ ಕೈದಿಯನ್ನು ಭೇಟಿಯಾಗುವಾಗ ವಕೀಲರು ವಸ್ತ್ರಸಂಹಿತೆಯನ್ನು ಪಾಲಿಸಬೇಕೆಂಬ ನಿಯಮವನ್ನು 1992ರಲ್ಲಿ ಹೈಕೋರ್ಟ್ ರದ್ದು ಮಾಡಿದೆ. ಹಾಗಾಗಿ ಜೈಲು ಅಧಿಕಾರಿಗಳು ವಕೀಲರ ಮೇಲೆ ಈ ನಿಯಮ ಹೇರುವಂತಿಲ್ಲ ಎಂದು ವಕೀಲ ಠಾಕೂರ್ ತೇಜ್ ಬಹ್ದಾದೂರ್ ಸಿಂಗ್ ಅವರು ಮುಂಬೈ ಕೇಂದ್ರ ಕಾರಾಗೃಹಕ್ಕೆ ಬರೆದ ಪತ್ರದಲ್ಲಿ ತಿಳಿಸಿದರು. ವಿಚಾರಣಾಧೀನ ಕೈದಿಯನ್ನು ಭೇಟಿಯಾಗುವಾಗ ವಕೀಲರು ಕಪ್ಪು ಕೋಟು ಧರಿಸಬೇಕೆಂದು ಜೈಲು ಅಧಿಕಾರಿಗಳು ಯಾವ ನಿಯಮದ ಪ್ರಕಾರ ಸೂಚಿಸುತ್ತಾರೆ ಎಂದು ವಿವರ ಕೇಳಿ ಠಾಕೂರ್ ಅವರು ಮಾಹಿತಿ ಹಕ್ಕು ಕಾಯ್ದೆ ಅಡಿ ಅರ್ಜಿ ಸಲ್ಲಿಸಿದ್ದರು. ಮಹಾರಾಷ್ಟ್ರ ಜೈಲು ಕೈಪಿಡಿ ಅನ್ವಯ ಮುನ್ನೆಚ್ಚರಿಕಾ ಕ್ರಮವಾಗಿ ಕೈದಿಗಳ ಸಂಬಂಧಿಕರು ಹಾಗೂ ವಕೀಲರನ್ನು ಗುರುತಿಸುವ ಉದ್ದೇಶದಿಂದ ಈ ನಿಯಮ ಅನುಸರಿಸಲಾಗುತ್ತಿದೆ ಎಂದು ಮಾಹಿತಿ ಅಧಿಕಾರಿಗಳು ಠಾಕೂರ್ ಅವರಿಗೆ ಉತ್ತರಿಸಿದ್ದರು.

2008: ಪರಿಸರ ಮಾಲಿನ್ಯ ತಡೆಗಟ್ಟಲು ಶ್ರಮಿಸಿದ ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಪ್ರೇಮ್ ಕುಮಾರ್ ಧುಮಾಲ್ ಅವರು `ಸ್ವರ್ಣ  ಮಯೂರ ಪ್ರಶಸ್ತಿ'ಗೆ ಆಯ್ಕೆಯಾದರು. ಕಾರ್ಖಾನೆಗಳಿಂದ ಆಗುವ ಪರಿಸರ ಹಾನಿಯನ್ನು ತಡೆಗಟ್ಟಲು ಮತ್ತು ಪಾಲಿಥೀನ್ ಚೀಲದ ಬಳಕೆಯನ್ನು ರದ್ದುಪಡಿಸಿ ಪರಿಸರ ಕಾಪಾಡಲು ಹಿಮಾಚಲ ಪ್ರದೇಶ ಸರ್ಕಾರ ಪರಿಣಾಮಕಾರಿ ಕ್ರಮ ಕೈಗೊಂಡಿತ್ತು. ಇದಕ್ಕಾಗಿ ಮುಖ್ಯಮಂತ್ರಿಯವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು.

2008: ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ಚೆನಾಬ್ ನದಿಗೆ ಸೇನಾ ವಾಹನವೊಂದು ಉರುಳಿ ಬಿದ್ದ ಪರಿಣಾಮವಾಗಿ ಎಂಟು ಮಂದಿ ಸೈನಿಕರು ಮೃತರಾದರು. ರಾಷ್ಟ್ರೀಯ ರೈಫಲ್ಸಿಗೆ ಸೇರಿದ ವಾಹನ ದೋಡಾ ಪಟ್ಟಣಕ್ಕೆ ತೆರಳುತ್ತಿದ್ದಾಗ ಘಟ್ಟ ಪ್ರದೇಶದಲ್ಲಿ ಆಯತಪ್ಪಿ ನದಿಗೆ ಉರುಳಿತು.

2008: ಆಶಾ ರಾವತ್ (97 ರನ್) ಅವರ ಸೊಗಸಾದ ಬ್ಯಾಟಿಂಗ್ ಪ್ರದರ್ಶನದ ನೆರವಿನಿಂದ ಭಾರತ ತಂಡದವರು ಕೊಲಂಬೋದಲ್ಲಿ ಅಂತ್ಯಗೊಂಡ ಮಹಿಳಾ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದರು. ಫೈನಲ್ ಪಂದ್ಯದಲ್ಲಿ ಮಿಥಾಲಿ ರಾಜ್ ಸಾರಥ್ಯದ ಭಾರತ ತಂಡದವರು 177 ರನ್ನುಗಳಿಂದ ಶ್ರೀಲಂಕಾ ಎದುರು ಗೆದ್ದರು. ಭಾರತ ನೀಡಿದ 261 ರನ್ನುಗಳ ಗುರಿಗೆ ಉತ್ತರವಾಗಿ ಶ್ರೀಲಂಕಾ 35.2 ಓವರುಗಳಲ್ಲಿ 83 ರನ್ನುಗಳಿಗೆ ಎಲ್ಲ ವಿಕೆಟ್ ಕಳೆದುಕೊಂಡಿತು. 

2008: ಜಾಗತಿಕ ಪ್ರಭಾವಿ ವ್ಯಕ್ತಿಗಳ ಪಟ್ಟಿಯನ್ನು ತಯಾರಿಸಿದ್ದ ಅಮೆರಿಕದ ಪ್ರಮುಖ ವಾಣಿಜ್ಯ ನಿಯತಕಾಲಿಕೆ `ಟೈಮ್', ವಿಶ್ವದ ಚತುರ ವ್ಯವಹಾರಿಗಳ ಪಟ್ಟಿಯಲ್ಲಿ ಭಾರತದ ಬೃಹತ್ ಟಾಟಾ ಸಮೂಹದ ರೂವಾರಿ ರತನ್ ಟಾಟಾ ಅವರನ್ನು ಸೇರ್ಪಡೆ ಮಾಡಿತು. `73 ಬಿಗ್ಗೆಸ್ಟ್ ಬ್ರೈನ್ ಇನ್ ಬಿಸಿನೆಸ್' ಪಟ್ಟಿಯನ್ನು ಪ್ರಕಟಿಸಿದ ಟೈಮ್  ಒಂದು ಲಕ್ಷ ರೂ ಕಾರು ನಿರ್ಮಿಸಿದ ರತನ್ ಟಾಟಾ ಅವರ ಕುರಿತು ವಿಶೇಷ ವರದಿಯನ್ನು ನೀಡಿತು.

2008: ಬನ್ನೇರುಘಟ್ಟ ರಸ್ತೆಯ ಡೇರಿ ವೃತ್ತದ ಸಮೀಪ ಶೋಭಾ ಡೆವಲಪರ್ಸ್ ನಿರ್ಮಿಸುತ್ತಿದ್ದ ಅಪಾರ್ಟ್ ಮೆಂಟಿನ 17ನೇ ಮಹಡಿಯಿಂದ ಲಿಫ್ಟ್ ಕುಸಿದು ಬಿದ್ದ ಪರಿಣಾಮ ಇಬ್ಬರು ಕೂಲಿ ಕಾರ್ಮಿಕರು ಮೃತರಾಗಿ ಏಳು ಮಂದಿ ಗಂಭೀರವಾಗಿ ಗಾಯಗೊಂಡರು.

2008: ನಯಾಗರ ಜಲಪಾತವನ್ನು ವೀಕ್ಷಿಸಲು ಹೊರಟಿದ್ದ ಭಾರತೀಯರಿದ್ದ ವ್ಯಾನ್ ನಿಯಂತ್ರಣ ತಪ್ಪಿ ಪೆನ್ಸಿಲ್ವೇನಿಯ ಹೆದ್ದಾರಿಯಲ್ಲಿ ಎದುರಿನಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಆರು ಜನರು ಮೃತರಾದರು.

2007: ದಲಿತರು, ಮುಸ್ಲಿಮರ ಜೊತೆಗೆ ಮೇಲ್ಜಾತಿಯ ಮಂದಿಯನ್ನೂ ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾದ ಮಾಯಾವತಿ ಅವರು ಆಳುವ ಸಮಾಜವಾದಿ ಪಕ್ಷ ಮತ್ತು ಉತ್ತರ ಪ್ರದೇಶವನ್ನು ತನ್ನ ಭದ್ರ ನೆಲೆಯನ್ನಾಗಿ ಮಾಡಿಕೊಂಡಿದ್ದ ಭಾರತೀಯ ಜನತಾ ಪಕ್ಷವನ್ನು ಬದಿಗೆ ಸರಿಸಿ ಬಹುಜನ ಸಮಾಜ ಪಕ್ಷವನ್ನು ಅಧಿಕಾರದತ್ತ ತರುವಲ್ಲಿ ಯಶಸ್ವಿಯಾದರು. ರಾಷ್ಟ್ರದ ರಾಜಕೀಯದ ದಿಕ್ಸೂಚಿಯಾಗಿರುವ ಈ ಬೃಹತ್ ರಾಜ್ಯಕ್ಕೆ ಮಾಯಾವತಿ ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗುವಂತಾಯಿತು. 403 ಬಲದ ವಿಧಾನಸಭೆಯಲ್ಲಿ 208 ಸ್ಥಾನ ಗೆದ್ದು ಅವರು ಪ್ರಚಂಡ ಬಹುಮತದ ಸಾಧನೆ ಮಾಡಿದರು. ಸಮಾಜವಾದಿ ಪಕ್ಷಕ್ಕೆ 97, ಬಿಜೆಪಿಗೆ 50, ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳಿಗೆ 21 ಸ್ಥಾನಗಳು ಲಭಿಸಿದರೆ 26 ಸ್ಥಾನಗಳೂ ಪಕ್ಷೇತರರು ಮತ್ತಿತರರ ಪಾಲಾದವು.

2007: ಸಚಿವರಾದ ಶರಣಬಸಪ್ಪ ದರ್ಶನಾಪೂರ ಮತ್ತು ಅಲ್ಕೋಡ್ ಹನುಮಂತಪ್ಪ ಅವರು ನಿಗದಿತ ಅವಧಿಯಲ್ಲಿ ಆಸ್ತಿ ವಿವರಗಳನ್ನು ಸಲ್ಲಿಸಲು ವಿಫಲರಾಗಿರುವ ಆರೋಪ ಸಾಬೀತಾಗಿದ್ದು, ಕರ್ನಾಟಕ ಲೋಕಾಯುಕ್ತ ಕಾಯ್ದೆಯ ಅಡಿಯಲ್ಲಿ ಇವರ ವಿರುದ್ಧ ಕ್ರಮ ಜರುಗಿಸುವಂತೆ ಲೋಕಾಯುಕ್ತ ಎನ್. ಸಂತೋಷ ಹೆಗ್ಡೆ ಅವರು ಮುಖ್ಯಮಂತ್ರಿಗಳಿಗೆ ಶಿಫಾರಸು ಮಾಡಿದರು.

2007: 2007ನೇ ಸಾಲಿನ ಖಾದ್ರಿ ಶಾಮಣ್ಣ ಪತ್ರಿಕೋದ್ಯಮ ಪ್ರಶಸ್ತಿಗೆ ಪತ್ರಕರ್ತೆ ಆರ್. ಪೂರ್ಣಿಮಾ ಆಯ್ಕೆಯಾದರು.

2006: ಫಿಜಿಯಲ್ಲಿ 2000 ಇಸವಿಯಲ್ಲಿ ರಕ್ತಪಾತಕ್ಕೆ ಕಾರಣವಾದ ಸೇನಾ ದಂಗೆಗೆ ಮಾಜಿ ಪ್ರಧಾನಿ ಸಿತವೇನಿ ರಬೂಕ ಕಾರಣ ಎಂದು ದೋಷಾರೋಪ ಹೊರಿಸಲಾಯಿತು. ಸೇನೆಯ ಮಾಜಿ ಮುಖ್ಯಸ್ಥ ಸಹ ಆಗಿದ್ದ ರಬೂಕ 1967 ಸೇರಿದಂತೆ ಎರಡು ಸಲ ಸೇನಾ ದಂಗೆಗೆ ಕಾರಣರಾಗಿದ್ದ ಪ್ರಜಾಸತ್ತಾತ್ಮಕವಾಗಿ ಚುನಾಯಿತವಾಗಿದ್ದ ಭಾರತೀಯ ಮೂಲದ ಮಹೇಂದ್ರ ಚೌಧರಿ ನೇತೃತ್ವದ ಸರ್ಕಾರವನ್ನು ರಚನೆಯಾದ ಆರು ತಿಂಗಳಲ್ಲೇ ಕೆಡವಲಾಗಿತ್ತು.

2006: ನಿವೃತ್ತ ಹೆವಿ ವೇಯ್ಟ್ ಬಾಕ್ಸಿಂಗ್ ಚಾಂಪಿಯನ್ ಫ್ಲಾಯ್ಡ್ ಪ್ಯಾಟರ್ಸನ್ (71) ನ್ಯೂಯಾರ್ಕಿನ ನ್ಯೂಪಾಲ್ಟ್ಜಿನಲ್ಲಿರುವ ತಮ್ಮ ಮನೆಯಲ್ಲಿ ನಿಧನರಾದರು. 1956ರಲ್ಲಿ ಆರ್ಕಿ ಮೂರೆ ಅವರನ್ನು ಪರಾಭವಗೊಳಿಸುವ ಮೂಲಕ ಹೆವಿ ವೇಯ್ಟ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ಪಡೆದ ಅತ್ಯಂತ ಕಿರಿಯ ಬಾಕ್ಸರ್ ಎಂಬ ಹೆಗ್ಗಳಿಕೆಗೆ ಪ್ಯಾಟರ್ಸನ್ ಪಾತ್ರರಾಗಿದ್ದರು. 1959ರಲ್ಲಿ ಸ್ವೀಡನ್ನಿನ ಇಂಗೆಮರ್ ಜೋಹಾನ್ಸನ್ ಎದುರು ನ್ಯೂಯಾರ್ಕಿನಲ್ಲಿ ಪರಾಭವಗೊಂಡಾಗ ಚಾಂಪಿಯನ್ ಶಿಪ್ ಕಳೆದುಕೊಂಡಿದ್ದ ಪ್ಯಾಟರ್ಸನ್ ಒಂದು ವರ್ಷದ ಬಳಿಕ ಪೋಲೋಗ್ರೌಂಡ್ಸಿನಲ್ಲಿ ಜೋಹಾನ್ಸನ್ ಅವರನ್ನು ಪರಾಭವಗೊಳಿಸಿ ಪುನಃ ಚಾಂಪಿಯನ್ ಷಿಪ್ ದಕ್ಕಿಸಿಕೊಂಡ ಮೊದಲ ಹೆವಿ ವೇಯ್ಟ್ ಚಾಂಪಿಯನ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು. 1972ರಲ್ಲಿ ತಮ್ಮ 37ನೇ ವಯಸ್ಸಿನಲ್ಲಿ ನಿವೃತ್ತಿ ಘೋಷಿಸಿದ್ದರು.

2006: ನ್ಯೂಯಾರ್ಕ್ ಟೈಮ್ಸ್ ನ ನಿರ್ವಾಹಕ ಸಂಪಾದಕ, ಪುಲಿಟ್ಜರ್ ಪ್ರಶಸ್ತಿ ವಿಜೇತ ವರದಿಗಾರ ಎ.ಎಂ. ರೋಸೆಂಥಾಲ್ (84) ನ್ಯೂಯಾರ್ಕಿನಲ್ಲಿ ನಿಧನರಾದರು. ಅವರು ಭಾರತದಲ್ಲೂ ಪತ್ರಿಕೆಯ ವಿದೇಶೀ ಬಾತ್ಮೀದಾರರಾಗಿ ದುಡಿದಿದ್ದರು.

2006: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಸತತ ಏಳನೇ ಬಾರಿಗೆ ಗೆದ್ದು ಅಧಿಕಾರ ಪಡೆಯುವ ಮೂಲಕ ಎಡರಂಗವು ವಿಶ್ವದಾಖಲೆ ನಿರ್ಮಾಣ ಮಾಡಿತು. ಜ್ಯೋತಿ ಬಸು ಬಳಿಕ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾದ ಬುದ್ಧದೇವ ಭಟ್ಟಾಚಾರ್ಯರಿಗೆ ರಾಜ್ಯದ ಮತದಾರರು ಮತ್ತೆ ಮಣೆ ಹಾಕಿದರು. ಕೇರಳದಲ್ಲಿ ಅಧಿಕಾರಾರೂಢ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟವನ್ನು ಸಿಪಿಎಂ ನೇತೃತ್ವದ ಎಡರಂಗ ಮೈತ್ರಿಕೂಟ ಅಧಿಕಾರದಿಂದ ಕೆಳಗಿಳಿಸಿತು. ತಮಿಳುನಾಡಿನಲ್ಲಿ ಜಯಲಲಿತಾ ನೇತೃತ್ವದ ಎಐಎಡಿಎಂಕೆಯನ್ನು ಸೋಲಿಸಿದ ಎಂ. ಕರುಣಾನಿಧಿ ನೇತೃತ್ವದ ಡಿಎಂಕೆ  ಮೈತ್ರಿಕೂಟ ಅಧಿಕಾರಕ್ಕೆ ಬಂತು. ಅಸ್ಸಾಮಿನಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾದರೆ, ಪುದುಚೆರಿಯಲ್ಲಿ ಕಾಂಗ್ರೆಸ್ ಮೈತ್ರ್ರಿಕೂಟ ವಿಜಯ ಸಾಧಿಸಿತು. ರಾಯ್ ಬರೇಲಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ 4 ಲಕ್ಷಗಳಿಗೂ ಅಧಿಕ ಮತಗಳ ಅಂತರದಿಂದ ವಿಜಯಿಯಾದರು.

1944: ಸಾಹಿತ್ಯ ಹಾಗೂ ಪತ್ರಿಕೋದ್ಯಮ ಎರಡೂ ಕ್ಷೇತ್ರಗಳಲ್ಲಿ ಜನಪ್ರಿಯರಾದ ಬಾಬು ಕೃಷ್ಣಮೂರ್ತಿ ಅವರು ವೆಂಕಟೇಶ ಶಾಸ್ತ್ರಿ- ಸೀತಮ್ಮ ದಂಪತಿಯ ಮಗನಾಗಿ ಬೆಂಗಳೂರಿನಲ್ಲಿ ಜನಿಸಿದರು. `ಮಂಗಳ' ಪತ್ರಿಕಾ ಸಂಪಾದಕರಾದ ಬಾಬು ನೇತೃತ್ವದಲ್ಲಿ ಬಾಲಮಂಗಳ, ಬಾಲ ಮಂಗಳ ಚಿತ್ರಕಥಾ, ಗಿಳಿವಿಂಡು ಪತ್ರಿಕೆಗಳು ಹೊರಬಂದವು. ಸ್ವಾತ್ರಂತ್ರ್ಯ ಹೋರಾಟಗಾರ ಚಂದ್ರಶೇಖರ ಆಜಾದ್ ಅವರ ಕುರಿತು ಸಂಶೋಧನೆ ನಡೆಸಿ ರಚಿಸಿದ `ಅಜೇಯ' ಬಾಬುಗೆ ಅಪಾರ ಖ್ಯಾತಿ ತಂದು ಕೊಟ್ಟಿತು. `ಅದಮ್ಯ',  'ಸಿಡಿಮದ್ದು', 'ನೆತ್ತರು', 'ನೇಣುಗಂಬ', `ರುಧಿರಾಭಿಷೇಕ' ಇತ್ಯಾದಿ ಸ್ವಾತಂತ್ರ್ಯ ಸಂಗ್ರಾಮದ ಚಿತ್ರಣ ನೀಡುವ ಹಾಗೂ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡ ಕ್ರಾಂತಿಕಾರಿಗಳ ಬಗ್ಗೆ ಬೆಳಕು ಚೆಲ್ಲುವ ಗ್ರಂಥಗಳು. ಪ್ರಸ್ತುತ ಕರ್ಮವೀರ ಸಾಪ್ತಾಹಿಕದ ಸಂಪಾದಕತ್ವದ ಹೊಣೆಗಾರಿಕೆ. ರಾಜ್ಯ ಸಾಹಿತ್ಯ ಅಕಾಡೆಮಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಇವರಿಗೆ ಬಂದಿವೆ.

 1998: ಭಾರತವು ರಾಜಸ್ಥಾನದ ಪೋಖ್ರಾನಿನಲ್ಲಿ ಮೂರು ಅಣ್ವಸ್ತ್ರಗಳ ಪರೀಕ್ಷಾ ಸ್ಫೋಟ ನಡೆಸಿತು. 1998ರ ಮೇ 13ರಂದು ಇನ್ನೆರಡು ಅಣ್ವಸ್ತ್ರಗಳನ್ನು ಸ್ಫೋಟಿಸಲಾಯಿತು. `ಆಪರೇಷನ್ ಶಕ್ತಿ' ಎಂಬುದಾಗಿ ಈ ಸ್ಫೋಟಗಳನ್ನು ಕರೆಯಲಾಯಿತು.

1997: ಮನುಷ್ಯ ಮತ್ತು ಯಂತ್ರದ ನಡುವೆ ನಡೆದ ಆರು ಆಟಗಳ ಚೆಸ್ ಪಂದ್ಯದಲ್ಲಿ ಐಬಿಎಂ ಕಂಪ್ಯೂಟರ್ `ಡೀಪ್ ಬ್ಲೂ' ಗ್ಯಾರಿ ಕ್ಯಾಸ್ಪರೋವ್ ಅವರನ್ನು ಸೋಲಿಸಿತು. ನ್ಯೂಯಾರ್ಕಿನಲ್ಲಿ ನಡೆದ ಈ ಪಂದ್ಯ ಮಾರ್ಚ್ 15ರಂದು ಆರಂಭವಾಗಿ, ಕ್ಯಾಸ್ಪರೋವ್ ಸೋಲಿನೊಂದಿಗೆ ಪರ್ಯವಸಾನಗೊಂಡಿತು. ಕ್ಯಾಸ್ಪರೋವ್ ಎರಡು ಆಟಗಳಲ್ಲಿ ಸೋತು ಒಂದನ್ನು ಗೆದ್ದರು. ಉಳಿದ ಮೂರು ಆಟಗಳು ಡ್ರಾ ಆದವು. 

1944: ಕಲಾವಿದ ವಜ್ರಮುನಿ ಜನನ.

1935: ಕಲಾವಿದೆ ವಾಸಂತಿ ಕದಿರೆ ಜನನ.

1934: ಕಲಾವಿದ ಗುಂಡಾಭಟ್ಟ ಜೋಶಿ ಜನನ.

1857: ಮೇ 10ರಂದು ಐರೋಪ್ಯ ಅಧಿಕಾರಿಗಳನ್ನು ಕೊಂದ ಮೀರತ್ತಿನ ಸಿಪಾಯಿಗಳ ದಂಡೊಂದು ದೆಹಲಿಯನ್ನು ವಶಪಡಿಸಿಕೊಂಡು ಕೆಂಪುಕೋಟೆಯಿಂದ ಕೊನೆಯ ಮೊಘಲ್ ದೊರೆ ಬಹಾದುರ್ ಶಹಾರನ್ನು `ಶಹೆನ್ ಶಾಹ್-ಎ- ಹಿಂದುಸ್ತಾನ್' (ಚಕ್ರವರ್ತಿ) ಎಂದು ಘೋಷಿಸಿತು. ಈ ಘಟನೆ ಸಿಪಾಯಿಗಳ ದಂಗೆಗೆ ರಚನಾತ್ಮಕ ರಾಜಕೀಯ ಅರ್ಥವನ್ನು ನೀಡಿತು. ಬ್ರಿಟಿಷರ ವಿರುದ್ಧ ಬಂಡ್ದೆದವರಿಗೆ ಸ್ಫೂರ್ತಿಯನ್ನೂ ನೀಡಿತು.

ಕ್ರಿ.ಪೂ. 330: ರೋಮನ್ ದೊರೆ ಕಾನ್ ಸ್ಟಾಂಟಿನ್ ರೋಮ್ ಸಾಮ್ರಾಜ್ಯದ ರಾಜಧಾನಿ ಬೈಝಾಂಟಿಯಮ್ ನ್ನು ಸ್ಥಾಪಿಸಿದ. ಆತನ ಗೌರವಾರ್ಥ ಈ ನಗರಕ್ಕೆ ಕಾನ್ ಸ್ಟಾಂಟಿನೋಪಲ್ ಎಂದು ಹೆಸರಿಡಲಾಯಿತು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement