ಇಂದಿನ ಇತಿಹಾಸ
ಮೇ 15
ಕರ್ನಾಟಕ ಲೇಖಕಿಯರ ಸಂಘವು ಲೇಖಕಿ ಮಾಲತಿ ಪಟ್ಟಣಶೆಟ್ಟಿ ಅವರನ್ನು 2008ನೇ ಸಾಲಿನ `ಅನುಪಮಾ ಪ್ರಶಸ್ತಿ'ಗೆ ಆಯ್ಕೆ ಮಾಡಿತು. ಮಾಲತಿ ಪಟ್ಟಣಶೆಟ್ಟಿ ಅವರ ಒಟ್ಟು ಸಾಹಿತ್ಯ ಸಾಧನೆ ಮತ್ತು ಮಹಿಳಾ ಸಾಹಿತ್ಯಕ್ಕೆ ಅವರ ಕೊಡುಗೆ, ಸಂಸ್ಕೃತಿ ಕ್ಷೇತ್ರದಲ್ಲಿ ಅವರು ಗಳಿಸಿದ ಮನ್ನಣೆ ಮತ್ತು ಕ್ರಿಯಾಶೀಲತೆಯನ್ನು ನಿರಂತರವಾಗಿ ಉಳಿಸಿಕೊಂಡು ಬಂದಿರುವ ಅಂಶಗಳನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಸಂಘದ ಅಧ್ಯಕ್ಷೆ ಡಾ. ಕೆ.ಆರ್.ಸಂಧ್ಯಾರೆಡ್ಡಿ ಪ್ರಕಟಿಸಿದರು.
2008: ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯಾವತಿ ಅವರ ಅಕ್ರಮ ಆಸ್ತಿ ಗಳಿಕೆಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಯನ್ನು ಜುಲೈ 14 ರವರೆಗೆ ಸ್ಥಗಿತಗೊಳಿಸಲಾಗುವುದು ಎಂದು ಕೇಂದ್ರ ತನಿಖಾ ಘಟಕ (ಸಿಬಿಐ) ಸುಪ್ರೀಂ ಕೋರ್ಟಿಗೆ ಭರವಸೆ ನೀಡಿತು. ತನಿಖೆಯನ್ನು ಪ್ರಶ್ನಿಸಿ ಮಾಯಾವತಿ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್ ಮತ್ತು ಎಂ.ಕೆ.ಶರ್ಮ ಅವರನ್ನು ಒಳಗೊಂಡ ಪೀಠವು ಸಿಬಿಐಗೆ ನೋಟಿಸ್ ಜಾರಿಗೊಳಿಸಿತು.
2008: ಚೀನಾ ಭೂಕಂಪದಲ್ಲಿ ಮಡಿದವರ ಸಂಖ್ಯೆ 50 ಸಾವಿರಕ್ಕೆ ಏರಿದೆ ಎಂದು ಬೀಜಿಂಗ್ ಮಾಧ್ಯಮಗಳು ವರದಿ ಮಾಡಿದವು.
2008: `ಹೊಗೇನಕಲ್ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ವಿಷಯಕ್ಕೆ ಸಂಬಂಧಿಸಿದಂತೆ ನನ್ನಿಂದ ಏನೂ ತಪ್ಪಾಗಿಲ್ಲ. ಆದಾಗ್ಯೂ ಕ್ಷಮೆ ಯಾಚಿಸುತ್ತೇನೆ. ಹೊಗೇನಕಲ್ ವಿಚಾರವಾಗಿ ಕನ್ನಡ ಪರ ಸಂಘಟನೆಗಳು ಇನ್ನು ಮೈಸೂರಿನಿಂದಲೇ ಪ್ರತಿಭಟನೆಯನ್ನು ಆರಂಭಿಸಲಿದ್ದು ನಾನೂ ಸಕ್ರಿಯವಾಗಿ ಭಾಗವಹಿಸುತ್ತೇನೆ' ಎಂದು ಹಿರಿಯ ನಟ ಡಾ. ವಿಷ್ಣುವರ್ಧನ್ ಮೈಸೂರಿನಲ್ಲಿ ಪ್ರಕಟಿಸಿದರು.
2008: ಬೇಲೂರು ತಾಲ್ಲೂಕಿನ ಹೆಬ್ಬಾಳು ಗ್ರಾಮದ ಒಂದೇ ಮನೆಯ ಐವರು ಅಣ್ಣತಮ್ಮಂದಿರು ಈದಿನ ಒಂದೇ ಮಂಟಪದಲ್ಲಿ ವಿವಾಹವಾದರು. ಗ್ರಾಮದ ಅವಿಭಕ್ತ ಕುಟುಂಬದ ಮುಖ್ಯಸ್ಥ ಮಲ್ಲೇಗೌಡರ ಐವರು ಸಹೋದರರು ಒಂದೇ ಮನೆಯಲ್ಲಿ ವಾಸವಾಗಿದ್ದು ಅವರು, ಗ್ರಾಮದ ಹೆಬ್ಬಾಳು ಮಂಜಯ್ಯ ಅವರ ನಾಲ್ವರು ಗಂಡುಮಕ್ಕಳು 2007ರ ನವೆಂಬರಿನಲ್ಲಿ ಒಂದೇ ಮನೆಯ ನಾಲ್ವರು ಸಹೋದರಿಯರನ್ನು ಮದುವೆಯಾದ ಘಟನೆಯಿಂದ ಸ್ಫೂರ್ತಿ ಪಡೆದು ಈದಿನ ಒಂದೇ ಮಂಟಪದಲ್ಲಿ ತಮ್ಮ ಐವರು ಮಕ್ಕಳಿಗೂ ಮದುವೆ ಮಾಡಿಸಿದರು. ಮಲ್ಲೇಗೌಡರ ಮಕ್ಕಳಾದ ಚಂದ್ರಶೇಖರ್ ಹಾಗೂ ಕುಮಾರ್, ನಂಜೇಗೌಡರ ಮಕ್ಕಳಾದ ಗಿರೀಶ್ ಹಾಗೂ ಹಾಲಪ್ಪ ಮತ್ತು ಪುಪ್ಪೇಗೌಡರ ಮಗ ದಿನೇಶ್ ಅವರು ಕ್ರಮವಾಗಿ ಶಕುಂತಲ, ಚಂದ್ರಕಲಾ, ಗುಣ, ರೇಖಾ ಮತ್ತು ದೊಡ್ಡ ಪವಿತ್ರರಿಗೆ ಒಂದೇ ಮಂಪಟದಲ್ಲಿ 10.20 ರಿಂದ 11.50ರವರೆಗೆ ಕುಳೀರ ಲಗ್ನದಲ್ಲಿ ತಾಳಿ ಕಟ್ಟುವುದರ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
2008: ಅಸ್ಸಾಮಿನ ಉತ್ತರ ಕಾಚಾರ್ ಹಿಲ್ಸ್ ಜಿಲ್ಲೆಯಲ್ಲಿ ದಿಮಾ ಹಾಲಮ್ ಡೌಗಹ್ (ಜೆವೆಲ್) ಗುಂಪಿನ ಉಗ್ರರು ಇಬ್ಬರು ರೈಲ್ವೆ ನೌಕರರು ಸೇರಿದಂತೆ 12 ಮಂದಿಯನ್ನು ಗುಂಡಿಟ್ಟು ಕೊಂದು ರೈಲಿಗೆ ಬೆಂಕಿ ಹಚ್ಚಿದರು. ಲುಂಡಿಂಗ್ ಮತ್ತು ಹಫ್ಲೊಂಗ್ ಬಳಿ ಈ ಘಟನೆ ನಡೆಯಿತು.
2008: ಹಿರಿಯ ವೈದ್ಯ ಡಾ. ಟಿ.ಎಲ್.ದೇವರಾಜ್ ಅವರಿಗೆ ಪ್ರಸಕ್ತ ವರ್ಷದ ಶ್ರೀರಾಮ ನಾರಾಯಣ ವೈದ್ಯಶ್ರೀ ಪ್ರಶಸ್ತಿ ಲಭಿಸಿತು. ಆಯುರ್ವೇದ ಇಲಾಖೆಯ ನಿವೃತ್ತ ಉಪನಿರ್ದೇಶಕ ದೇವರಾಜ್ ಅವರು ಈ ಪ್ರಶಸ್ತಿಗೆ ಆಯ್ಕೆಯಾದ ಪ್ರಥಮ ಕನ್ನಡಿಗ ಎಂಬ ಹೆಗ್ಗಳಿಗೆ ಪಾತ್ರರಾಗಿದ್ದಾರೆ ಎಂದು ಭಾರತೀಯ ವೈದ್ಯಕೀಯ ಮಂಡಳಿಯ ಸದಸ್ಯ ಡಾ. ಕೆ.ಸಿ.ಬಲ್ಲಾಳ ತಿಳಿಸಿದರು. ದೇವರಾಜ್ ಅವರು 36ಕ್ಕೂ ಹೆಚ್ಚು ಕೃತಿಗಳನ್ನು ಬರೆದಿದ್ದು, ಅದರಲ್ಲಿ ಕೆಲ ಕೃತಿಗಳು ಇಂಗ್ಲಿಷ್, ಹಿಂದಿ ಮತ್ತು ರಷ್ಯನ್ ಭಾಷೆಗಳಿಗೆ ಅನುವಾದಗೊಂಡಿವೆ. `ಆಯುರ್ವೇದದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ' ಎಂಬ ಕೃತಿಗೆ ನಾರಾಯಣ ವೈದ್ಯ ಆಯುರ್ವೇದ ಸಂಶೋಧನಾ ಟ್ರಸ್ಟ್ ಈ ಪ್ರಶಸ್ತಿ ಲಭಿಸಿದೆ.
2008: ಕರ್ನಾಟಕ ಲೇಖಕಿಯರ ಸಂಘವು ಲೇಖಕಿ ಮಾಲತಿ ಪಟ್ಟಣಶೆಟ್ಟಿ ಅವರನ್ನು 2008ನೇ ಸಾಲಿನ `ಅನುಪಮಾ ಪ್ರಶಸ್ತಿ'ಗೆ ಆಯ್ಕೆ ಮಾಡಿತು. ಮಾಲತಿ ಪಟ್ಟಣಶೆಟ್ಟಿ ಅವರ ಒಟ್ಟು ಸಾಹಿತ್ಯ ಸಾಧನೆ ಮತ್ತು ಮಹಿಳಾ ಸಾಹಿತ್ಯಕ್ಕೆ ಅವರ ಕೊಡುಗೆ, ಸಂಸ್ಕೃತಿ ಕ್ಷೇತ್ರದಲ್ಲಿ ಅವರು ಗಳಿಸಿದ ಮನ್ನಣೆ ಮತ್ತು ಕ್ರಿಯಾಶೀಲತೆಯನ್ನು ನಿರಂತರವಾಗಿ ಉಳಿಸಿಕೊಂಡು ಬಂದಿರುವ ಅಂಶಗಳನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಸಂಘದ ಅಧ್ಯಕ್ಷೆ ಡಾ. ಕೆ.ಆರ್.ಸಂಧ್ಯಾರೆಡ್ಡಿ ಪ್ರಕಟಿಸಿದರು.
2007: ಸೈನಿಕರಿಗೆ ಗುಣಮಟ್ಟದ ತರಬೇತಿ ನೀಡುವ ಮೂಲಕ ದೇಶಕ್ಕೆ ಉತ್ತಮ ಸೇನಾಧಿಕಾರಿಗಳು ಮತ್ತು ಯೋಧರನ್ನು ಕೊಡುಗೆಯಾಗಿ ನೀಡಿ ಖ್ಯಾತಿ ಪಡೆದಿರುವ ಬೆಳಗಾವಿಯ ಮರಾಠಾ ಲಘು ಪದಾತಿ ದಳದ (ಎಂಎಲ್ ಐ ಆರ್ ಸಿ) ಯೋಧರು ಸೇರಿದಂತೆ 12 ಜನರಿದ್ದ ಭಾರತೀಯ ಯೋಧರ ತಂಡ ಹಾಗೂ 13 ಶೆರ್ಪಾಗಳ ತಂಡ ವಿಶ್ವದ ಅತಿ ಎತ್ತರದ ಮೌಂಟ್ ಎವರೆಸ್ಟ್ ಮೇಲೆ ತ್ರಿವರ್ಣ ಧ್ವಜ ಹಾರಿಸುವ ಮೂಲಕ ಇತಿಹಾಸ ನಿರ್ಮಿಸಿದವು. ಭಾರತೀಯ ಭೂಸೇನೆಯ ಮುಖ್ಯಸ್ಥ ಹಾಗೂ ಮರಾಠಾ ಲಘು ಪದಾತಿದಳದ ಕರ್ನಲ್ ಜನರಲ್ ಜೋಗೀಂದರ್ ಜಸ್ವಂತ್ಸಿಂಗ್ (ಜೆ.ಜೆ.ಸಿಂಗ್) ಮಾರ್ಗದರ್ಶನದಲ್ಲಿ ಲೆಫ್ಟಿನೆಂಟ್ ಕ್ಯಾಪ್ಟನ್ ಥಾಪಾ ಈ ಸಾಹಸ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದರು. ಎರಡು ತಂಡಗಳಾಗಿ ಈ ಸಾಹಸ ನಡೆಸಲಾಯಿತು. ಒಂದು ತಂಡ ಈದಿನ ಹಾಗೂ ಇನ್ನೊಂದು ತಂಡ ಮರುದಿನ (ಮೇ 16) ಮೌಂಟ್ ಎವರೆಸ್ಟ್ ಶಿಖರ ಏರಿತು. ಶೆರ್ಪಾಗಳ ತಂಡದ ನೇತೃತ್ವವನ್ನು ಸಿರ್ಧರ್ ಚಿರೀಂಗ್ ದೋರ್ಜಿ ವಹಿಸಿದ್ದರು.
2007: ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೆ ಅವರು ಮಿಲೆನಿಯಂ ಅಭಿವೃದ್ಧಿ ಗುರಿಗಳಿಗೆ ಹೆಚ್ಚಿನ ಕೊಡುಗೆ ನೀಡಿದ್ದಕ್ಕಾಗಿ ನ್ಯೂಯಾರ್ಕ್ ವಿಶ್ವಸಂಸ್ಥೆ ಕೇಂದ್ರ ಕಚೇರಿಯಲ್ಲಿ ಮೂರನೇ `ಯುಎನ್ ವಿಮೆನ್ ಟುಗೆದರ್ ಅವಾರ್ಡ್' ವಿಶ್ವಸಂಸ್ಥೆ ಮಹಿಳಾ ಪ್ರಶಸ್ತಿ ಪಡೆದರು. ಖಾದಿ ಅಭಿವೃದ್ಧಿ, ನೇಕಾರರ ಅಭಿವೃದ್ಧಿ ಮತ್ತು ಕುಶಲಕರ್ಮಿಗಳ ಅಭಿವೃದ್ಧಿಗಾಗಿ ನೀಡಿದ ಕೊಡುಗೆಗಾಗಿ ವಸುಂಧರಾ ರಾಜೆ ಅವರಿಗೆ ಈ ಪ್ರಶಸ್ತಿ ಲಭಿಸಿತು. ಇದರೊಂದಿಗೆ ಈ ಪ್ರತಿಷ್ಠಿತ ಪ್ರಶಸ್ತಿ ಪಡೆದ ಭಾರತದ ಪ್ರಪ್ರಥಮ ಮಹಿಳಾ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ವಸುಂಧರಾ ಪಾತ್ರರಾದರು.
2007: ದಯಾನಿಧಿ ಮಾರನ್ ರಾಜೀನಾಮೆಯ ಬಳಿಕ ಪರಿಸರ ಖಾತೆಯ ಸಚಿವರಾಗಿದ್ದ ಎ. ರಾಜ ಅವರನ್ನು ಮಾಹಿತಿ ತಂತ್ರಜ್ಞಾನ ಮತ್ತು ಸಂಪರ್ಕ ಖಾತೆಯ ಸಚಿವರನ್ನಾಗಿ ಪ್ರಧಾನಿ ಮನಮೋಹನ್ ಸಿಂಗ್ ನೇಮಕ ಮಾಡಿದರು.
2007: ನ್ಯಾಟೋ ನೇತೃತ್ವದ ಸೇನಾಪಡೆ ಹಿಂದಿನ ರಾತ್ರಿ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ 60 ತಾಲಿಬಾನ್ ಉಗ್ರಗಾಮಿಗಳು ಹತರಾದರು.
2007: ಮೇ 9ರಂದು ಮದುರೈಯಲ್ಲಿ `ದಿನಕರನ್' ದೈನಿಕ ಕಚೇರಿಯ ಮೇಲೆ ನಡೆದ ದಾಳಿಯ ಪ್ರಮುಖ ಆರೋಪಿ `ಅಟ್ಯಾಕ್ ಪಾಂಡಿ' ಮದುರೈ ಗ್ರಾಮಾಂತರ ಪೊಲೀಸರಿಗೆ ಶರಣಾಗತನಾದ.
2007: ಅನಿಲ್ ಶರ್ಮಾ ಅವರ `ಅಪ್ನೆ' ಚಿತ್ರವು ಜೂನ್ 29ರಂದು ದೇಶ - ವಿದೇಶಗಳಲ್ಲಿ 900 ಕಡೆ ಏಕಕಾಲದಲ್ಲಿ ಬಿಡುಗಡೆಯಾಗುವುದು ಎಂದು ಪ್ರಕಟಿಸಲಾಯಿತು. 8 ತಿಂಗಳಲ್ಲಿ ಪೂರ್ಣಗೊಂಡ ಈ ಚಿತ್ರದಲ್ಲಿ ಧರ್ಮೇಂದ್ರ ಅವರ ಮಕ್ಕಳಾದ ಸನ್ನಿ ಡಿಯೋಲ್, ಕತ್ರಿನಾ ಕೈಫ್, ಶಿಲ್ಪಾಶೆಟ್ಟಿ ಅಭಿನಯಿಸಿದ್ದು ಬ್ಯಾಂಕಾಕ್, ನ್ಯೂಯಾರ್ಕ್ ಮತ್ತು ಕೆನಡಾದಲ್ಲಿ ಚಿತ್ರೀಕರಣ ನಡೆಸಲಾಗಿತ್ತು.
2006: ಇಪ್ಪತ್ನಾಲ್ಕು ವರ್ಷಗಳ ಹಿಂದೆ ಪರ್ವತಾರೋಹಣ ಕಾಲದಲ್ಲಿ ಸಂಭವಿಸಿದ ಅಪಘಾತದಲ್ಲಿ ತನ್ನ ಎರಡೂ ಕಾಲುಗಳನ್ನು ಕಳೆದುಕೊಂಡ ನ್ಯೂಜಿಲ್ಯಾಂಡಿನ ಪರ್ವತಾರೋಹಿ ಮಾರ್ಕ್ ಇಂಗ್ಲಿಸ್ ಈದಿನ `ಎವರೆಸ್ಟ್ ಶಿಖರಾರೋಹಣ' ಮಾಡುವ ಮೂಲಕ ವಿಶ್ವದ ಅತ್ಯುನ್ನತ ಪರ್ವತ ಶಿಖರವನ್ನು ಏರಿದ ಮೊತ್ತ ಮೊದಲ `ಕಾಲುಗಳಿಲ್ಲದ ವ್ಯಕ್ತಿ' ಎಂಬ ಹೆಗ್ಗಳಿಕೆಗೆ ಪಾತ್ರರಾದರು. 47 ವರ್ಷದ ಈ ಸಾಧಕ 1982ರಲ್ಲಿ ಫಿಲ್ ಧೂಲೆ ಜೊತೆಗೆ ನ್ಯೂಜಿಲೆಂಡಿನ ಅತ್ಯುನ್ನತ ಶಿಖರ ಮೌಂಟ್ ಕುಕ್ ಏರುತ್ತಿದ್ದಾಗ ಮಂಜುಗಡ್ಡೆಯ ಗುಹೆಯೊಳಗೆ 14 ದಿನಗಳ ಕಾಲ ಸಿಕ್ಕಿಹಾಕಿಕೊಂಡಿದ್ದರು. ಆಗ ಕಾಲುಗಳಲ್ಲಿ ಹಿಮ ಹುಣ್ಣಾಗಿ ತೊಡೆಯಿಂದ ಕೆಳಗಿನ ಎರಡೂ ಕಾಲುಗಳನ್ನು ಕತ್ತರಿಸಿ ಹಾಕಲಾಗಿತ್ತು. ಆ ಬಳಿಕ ಬದುಕನ್ನು ಸವಾಲಾಗಿ ಸ್ವೀಕರಿಸಿದ ಇಗ್ಲಿಸ್ ಕಾಲು ರಹಿತರ ಪರ್ವತಾರೋಹಣ ಸೇರಿದಂತೆ ಹಲವಾರು ಸಾಹಸ ಕೃತ್ಯಗಳಲ್ಲಿ ಪಾಲ್ಗೊಂಡಿದ್ದರು.
2006: ಸಂಗ್ರಹಾಲಯವಾಗಿ ಪರಿವರ್ತನೆಗೊಳ್ಳಲಿರುವ ಐ ಎನ್ ಎಸ್ ಚಪಲ್ ಸಮರನೌಕೆಯು ಆಗ್ರಾ ಐ ಎನ್ ಎಸ್ ಕದಂಬ ನೌಕಾ ನೆಲೆಯಿಂದ ಈದಿನ ಕಾರವಾರದ ರಬೀಂದ್ರನಾಥ ಟ್ಯಾಗೋರ್ ಕರಾವಳಿಗೆ ಆಗಮಿಸಿತು. ಕ್ಷಿಪಣಿ ಉಡಾವಣಾ ವಾಹನವಾಗಿ 28 ವರ್ಷಗಳ ಸೇವೆ ಸಲ್ಲಿಸಿದ್ದ ಈ ಸಮರನೌಕೆ 2005ರ ನವೆಂಬರಿನಲ್ಲಿ ಸೇವೆಯಿಂದ ನಿವೃತ್ತಿ ಪಡೆದಿತ್ತು. 275 ಟನ್ ತೂಕ, 38.5 ಮೀಟರ್ ಎತ್ತರ, 7.2 ಮೀಟರ್ ಅಗಲ ಇರುವ ಈ ನೌಕೆಯು ಈಗ ಕಾರ್ಯಾಚರಣೆ ನಡೆಸುವ ಸಾಮರ್ಥ್ಯವನ್ನು ಕಳೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಕಾರವಾರ ನೌಕಾನೆಲೆಯಲ್ಲಿ ಇದನ್ನು ವಸ್ತುಸಂಗ್ರಹಾಲಯವಾಗಿ ಪರಿವರ್ತಿಸಿ ಇರಿಸಲು ನಿರ್ಧರಿಸಲಾಗಿದೆ.
2006: ಇರಾಕಿನ ಪದಚ್ಯುತ ಅಧ್ಯಕ್ಷ ಸದ್ದಾಂ ಹುಸೇನ್ ವಿರುದ್ಧ ತನಿಖೆ ನಡೆಸುತ್ತಿರುವ ನ್ಯಾಯಾಲಯದಲ್ಲಿ ಗ್ರಾಮಸ್ಥರ ಕೊಲೆ, ಮಕ್ಕಳು ಮಹಿಳೆಯರಿಗೆ ಚಿತ್ರಹಿಂಸೆ ಮತ್ತು 399 ಜನರನ್ನು ಅಕ್ರಮವಾಗಿ ಬಂಧಿಸಿ ದೌರ್ಜನ್ಯ ನಡೆಸಿದ ಆರೋಪಗಳನ್ನು ಹೊರಿಸಲಾಯಿತು. 1982ರಲ್ಲಿ ದುಜೈಲ್ನಲ್ಲಿ ಸದ್ದಾಂ ಹತ್ಯೆಗೆ ದಾಳಿ ನಡೆದ ಹಿನ್ನೆಲೆಯಲ್ಲಿ ಅಲ್ಲಿನ ಭದ್ರತಾ ಪಡೆಗಳು ನೂರಾರು ಮಂದಿಯನ್ನು ಬಂಧಿಸಿ ಹಿಂಸೆಗೆ ಗುರಿಪಡಿಸಿದ್ದವು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಆರೋಪ ಪಟ್ಟಿ ಸಲ್ಲಿಸಲಾಯಿತು.
2006: ರಾಯ್ ಬರೇಲಿ ಕ್ಷೇತ್ರದಿಂದ ಸಂಸತ್ ಸದಸ್ಯರಾಗಿ ಆಯ್ಕೆಯಾದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಲೋಕಸಭೆಯಲ್ಲಿ ಈದಿನ ಪ್ರಮಾಣವಚನ ಸ್ವೀಕರಿಸಿದರು. ತಿರುವನಂತಪುರದಲ್ಲಿ ಸಿಪಿಎಂ ಹಿರಿಯ ಮುಖಂಡ ವಿ.ಎಸ್. ಅಚ್ಯುತಾನಂದನ್ (82) ಕೇರಳದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾದರು.
1993: ಭಾರತದ ನಿವೃತ್ತ ಸೇನಾ ಪ್ರಮುಖ ಕೆ.ಎಂ. ಕಾರ್ಯಪ್ಪ ಅವರು ಈದಿನ ನಿಧನರಾದರು. 1899ರ ಜನವರಿ 28ರಂದು ಮಡಿಕೇರಿಯಲ್ಲಿ ಜನಿಸಿದ ಕಾರ್ಯಪ್ಪ 1918ರಲ್ಲಿ ಮೊದಲ ಮಹಾಯುದ್ಧ ಮುಗಿದ ಸಮಯಲ್ಲಿ ಕಿಂಗ್ಸ್ ಕಮಿಷನ್ ಸೈನಿಕರಿಗಾಗಿ ಭಾರತದಲ್ಲಿ ಆಯ್ಕೆ ನಡೆಸಿದಾಗ ಆಯ್ಕೆಯಾದ ಕಾರ್ಯಪ್ಪ ಕಿಂಗ್ಸ್ ಕಮಿಷನ್ಡ್ ಇಂಡಿಯನ್ ಆಫೀಸರ್ಸ್ (ಕೆಸಿಐಒ) ಮೊದಲ ತಂಡದ ತರಬೇತಿ ಪಡೆದರು. ಕ್ರೀಡೆ ಮತ್ತು ಸಂಗೀತದಲ್ಲಿ ಇವರಿಗೆ ಅಪಾರ ಆಸಕ್ತಿ ಇತ್ತು.
1966: ಕಲಾವಿದೆ ರಾಧಿ ರಂಜಿನಿ ಜನನ.
1952: ಕಲಾವಿದ ಶಿವರುದ್ರಯ್ಯ ಕೆ. ಜನನ.
1951: ಕಲೆಯ ಹಲವು ಪ್ರಕಾರಗಳಾದ ಕಲಾ ಇತಿಹಾಸ, ಕಲಾ ಬರಹ, ಕಲಾ ಸಂಘಟನೆ ಮುಂತಾದುವುಗಳಲ್ಲಿ ತೊಡಗಿಸಿಕೊಂಡ ಕಲಾವಿದ ಎನ್. ಮರಿಶಾಮಾಚಾರ್ ಅವರು ಸಿ.ಎಂ. ನಂಜುಂಡಾಚಾರ್- ಲಿಂಗಮ್ಮ ದಂಪತಿಯ ಮಗನಾಗಿ ದೇವನಹಳ್ಳಿ ಬಳಿಯ ವಿಜಯಪುರದಲ್ಲಿ ಜನಿಸಿದರು.
1941: ಕಲಾವಿದ ಟಿ.ಎ.ಎಸ್. ಮಣಿ ಜನನ.
1918: ಅಮೆರಿಕವು ನ್ಯೂಯಾರ್ಕ್ ನಗರ ಮತ್ತು ವಾಷಿಂಗ್ಟನ್ ಡಿ.ಸಿ. ಮಧ್ಯೆ ನಿಯಮಿತ ಏರ್ ಮೇಲ್ ಸೇವೆಯನ್ನು ಆರಂಭಿಸಿತು. ಇದು ಜಗತ್ತಿನಲ್ಲೇ ಪ್ರಪ್ರಥಮ ನಿಯಮಿತ ಏರ್ ಮೇಲ್ ಸೇವೆಯಾಗಿತ್ತು.
1914: ತೇನ್ ಸಿಂಗ್ ನೋರ್ಗೆ (1914-84) ಜನ್ಮದಿನ. ಇವರು ನ್ಯೂಜಿಲೆಂಡಿನ ಸರ್ ಎಡ್ಮಂಡ್ ಹಿಲರಿ ಜೊತೆಗೆ ಮೊತ್ತ ಮೊದಲ ಬಾರಿಗೆ ಜಗತ್ತಿನ ಅತಿ ಎತ್ತರದ ಎವರೆಸ್ಟ್ ಪರ್ವತವನ್ನು ಏರಿದರು.
1859: ಪಿಯರ್ ಕ್ಯೂರಿ (1859-1906) ಹುಟ್ಟಿದ ದಿನ. ಫ್ರೆಂಚ್ ಭೌತ ರಸಾಯನ ತಜ್ಞನಾದ ಈತ ತನ್ನ ಪತ್ನಿ ಮೇಡಂ ಕ್ಯೂರಿ ನೆರವಿನೊಂದಿಗೆ ರೇಡಿಯಂ ಮತ್ತು ಪೊಲೋನಿಯಂನ್ನು ಸಂಶೋಧಿಸಿದ.
1845: ಮುಂಬೈಯ ಜೆಮ್ ಸೆಟ್ ಜಿ ಜೀಜೆಭಾಯ್ ಆಸ್ಪತ್ರೆಯು ಗವರ್ಮರ್ ಸರ್ ಜಾರ್ಜ್ ಆರ್ಥರ್ ಬಾರ್ಟ್ ಅವರಿಂದ ಉದ್ಘಾಟನೆಗೊಂಡಿತು.
1817: ಮಹರ್ಷಿ ದೇಬೇಂದ್ರನಾಥ ಟ್ಯಾಗೋರ್ (1817-1905) ಜನ್ಮದಿನ. ಹಿಂದೂ ತತ್ವಜ್ಞಾನಿ ಹಾಗೂ ಧಾರ್ಮಿಕ ಸುಧಾರಕರಾಗಿದ್ದ ಇವರು 1863ರಲ್ಲಿ `ಶಾಂತಿ ನಿಕೇತನ'ವನ್ನು ಸ್ಥಾಪಿಸಿದರು. ಇವರ ಪುತ್ರ ರಬೀಂದ್ರನಾಥ ಟ್ಯಾಗೋರ್ ಅವರು ಶಾಂತಿನಿಕೇತನಕ್ಕೆ ಖ್ಯಾತಿಯನ್ನು ತಂದುಕೊಟ್ಟರು.
(ಸಂಗ್ರಹ: ನೆತ್ರಕೆರೆ ಉದಯಶಂಕರ)
No comments:
Post a Comment