Monday, May 18, 2009

ಇಂದಿನ ಇತಿಹಾಸ History Today ಮೇ 18

ಇಂದಿನ ಇತಿಹಾಸ

ಮೇ 18

ಬಿಹಾರದಲ್ಲಿ ಮರಗಳನ್ನು ಕಡಿಯುವುದು ನಿಷಿದ್ಧ. ಅಂತ್ಯ ಸಂಸ್ಕಾರಕ್ಕಾಗಿ ಬಡವರು ಏನು ಮಾಡಬೇಕು? ಅದಕ್ಕೆ ದನ ಕರುಗಳ ಸಗಣಿಯಿಂದ ಮಾಡಿದ ಒಣ ಬೆರಣಿ (ಕುಳ್ಳು) ಬಳಸಿ ದೇಹಕ್ಕೆ ಚಿತೆ ಹತ್ತಿಸುವ ಉಪಾಯವನ್ನು ಬಿಹಾರಿನ ಬಡವರು ಕಂಡುಕೊಂಡದ್ದು ಬೆಳಕಿಗೆ ಬಂತು. 

2008: ಬಿಹಾರದಲ್ಲಿ ಮರಗಳನ್ನು ಕಡಿಯುವುದು ನಿಷಿದ್ಧ. ಅಂತ್ಯ ಸಂಸ್ಕಾರಕ್ಕಾಗಿ ಬಡವರು ಏನು ಮಾಡಬೇಕು? ಅದಕ್ಕೆ ದನ ಕರುಗಳ ಸಗಣಿಯಿಂದ ಮಾಡಿದ ಒಣ ಬೆರಣಿ (ಕುಳ್ಳು) ಬಳಸಿ ದೇಹಕ್ಕೆ ಚಿತೆ ಹತ್ತಿಸುವ ಉಪಾಯವನ್ನು ಬಿಹಾರಿನ ಬಡವರು ಕಂಡುಕೊಂಡದ್ದು ಬೆಳಕಿಗೆ ಬಂತು. ಐದಡಿ ಆಳ ನೆಲ ಅಗಿದು ಅದರಲ್ಲಿ ಸುತ್ತಲೂ ಒಣಗಿದ ಬೆರಣಿಗಳನ್ನು ಜೋಡಿಸಲಾಗುತ್ತದೆ. ಕೆಳಗೊಂದು ಪದರು ಬೆರಣಿ ಜೋಡಿಸಿ ಅದರ ಮೇಲೆ  ಮೃತದೇಹ ಮಲಗಿಸಲಾಗುತ್ತದೆ. ಮೇಲೆ ಮತ್ತೆರಡು ಪದರು ಬೆರಣಿಗಳನ್ನು ಜೋಡಿಸಿ ಬುಡಕ್ಕೆ ಚಿತೆ ಇಡಲಾಗುತ್ತದೆ. ಸಾಮಾನ್ಯವಾಗಿ ದೇಹಕ್ಕೆ ಚಿತೆ ಹತ್ತಿಸುವ ಅಂತ್ಯಸಂಸ್ಕಾರ ಪದ್ಧತಿಯಲ್ಲಿ ಒಂದು ದೇಹಕ್ಕೆ ಕನಿಷ್ಠ 290 ಕೆ.ಜಿ ಕಟ್ಟಿಗೆ ಬೇಕು. ಆದರೆ ನೆರೆಹಾವಳಿಯಿಂದ ತತ್ತರಿಸಿದ ಬಿಹಾರಿನ ಜನತೆಗೆ ಅದರಲ್ಲೂ ಕಡುಬಡವರಿಗೆ ಅಷ್ಟೊಂದು ಕಟ್ಟಿಗೆ ವ್ಯಯಿಸುವುದು ಮತ್ತು ಅದಕ್ಕೆ ದುಡ್ಡು ಹೊಂದಿಸುವುದು ಕಷ್ಟ. ಅದರ ಬದಲು ತಮ್ಮದೇ ದನಕರುಗಳ ಸಗಣಿ ಬಳಸಿ ಬೆರಣಿ ಮಾಡಿ ಅದನ್ನು ಅಂತ್ಯಸಂಸ್ಕಾರಕ್ಕೆ ಬಳಸುವುದು ಸುಲಭ ಎಂಬುದನ್ನು ಇಲ್ಲಿನ ಜನ ಲೆಕ್ಕ ಹಾಕಿ ಕಂಡುಕೊಂಡರು. ಉತ್ತರ ಕರ್ನಾಟಕದಲ್ಲೂ ಅಂತ್ಯಸಂಸ್ಕಾರ ಮಾಡುವಾಗ ಚಿತೆಗೆ ಕುಳ್ಳು (ಬೆರಣಿ) ಬಳಸುವ ಪದ್ಧತಿ ಚಾಲ್ತಿಯಲ್ಲಿದೆ.

2008:  ಬೆಂಗಳೂರು ನಗರದ ದೇವರಜೀವನಹಳ್ಳಿ, ಕೋಲಾರ ಜಿಲ್ಲೆಯ ನರಸಾಪುರ, ಟೇಕಲ್, ಬೆಳ್ಳೂರು, ತಮಿಳುನಾಡಿನ ಹೊಸೂರಿನಲ್ಲಿ ಸಂಭವಿಸಿದ ಪ್ರತ್ಯೇಕ ಕಳ್ಳಬಟ್ಟಿ ಸಾರಾಯಿ ದುರಂತಗಳು 30 ಜೀವಗಳನ್ನು ಬಲಿ ತೆಗೆದುಕೊಂಡವು. 33 ಮಂದಿ ಅಸ್ವಸ್ಥರಾಗಿ ಬೌರಿಂಗ್ ಆಸ್ಪತ್ರೆಗೆ ದಾಖಲಾದರು.

2008: ಚಿತ್ರದುರ್ಗಕ್ಕೆ 15 ಕಿ.ಮೀ. ದೂರದ ಕುರುಮರಡಿಕೆರೆ ಬಳಿ ಕ್ರಿ.ಪೂ. 2,500 ವರ್ಷಗಳಷ್ಟು ಹಿಂದೆ, ನವಶಿಲಾಯುಗದ ಕಾಲದಲ್ಲಿ ಬಾಳಿ ಬದುಕಿದ್ದ ಮಾನವ ಬಳಸಿದ ಕಲ್ಲಿನ ಕೊಡಲಿ ಪತ್ತೆಯಾಯಿತು. ಕನ್ನಡ ವಿಶ್ವವಿದ್ಯಾಲಯದ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ಅಧ್ಯಾಪಕ ಡಾ.ಎಸ್.ವೈ. ಸೋಮಶೇಖರ್ ಹಾಗೂ ಅದೇ ವಿಭಾಗದ ಸಂಶೋಧಕರಾದ ಎಸ್. ನಾಗರಾಜಪ್ಪ ಮತ್ತು ಬಿ.ಟಿ. ಚಾರುಲತಾ ಕುರುಮರಡಿಕೆರೆ ಸುತ್ತಮತ್ತ ನಡೆಸಿದ ಕ್ಷೇತ್ರಕಾರ್ಯದಲ್ಲಿ ಕೊಡಲಿ ದೊರಕಿತು. ಇದರಿಂದ ಇಲ್ಲಿ ಸುಮಾರು 5,000 ವರ್ಷಗಳ ಹಿಂದೆ ಮಾನವ ವಾಸಿಸುತಿದ್ದುದು ಬೆಳಕಿಗೆ ಬಂತು.

2008: ಪಶ್ಚಿಮ ಬಂಗಾಳದಲ್ಲಿ ಪಂಚಾಯ್ತಿ ಚುನಾವಣೆಯ ಮೂರನೇ ಹಾಗೂ ಅಂತಿಮ ಹಂತದ ಮತದಾನ ಸಂದರ್ಭದಲ್ಲಿ ಸಂಭವಿಸಿದ ಘರ್ಷಣೆಯಲ್ಲಿ ಎಂಟು ಜನರ ಹತ್ಯೆಯಾಗಿ 25ಕ್ಕೂ ಹೆಚ್ಚು ಜನರು ಗಾಯಗೊಂಡರು.

2008: ನಿರ್ಮಾಣ ಹಂತದಲ್ಲಿದ್ದ ಕಟ್ಟಡ ಕುಸಿದ ಪರಿಣಾಮ 12 ಕೂಲಿ ಕಾರ್ಮಿಕರು ಸಾವನ್ನಪ್ಪಿ ಇತರ 20ಕ್ಕೂ ಹೆಚ್ಚು ಕಾರ್ಮಿಕರು ಗಾಯಗೊಂಡ ಘಟನೆ ಗುಡಗಾಂವದ ಫರೂಕ್ ನಗರ ತಾಲ್ಲೂಕಿನ ಖೇಡಕ್ ಗ್ರಾಮದಲ್ಲಿ ನಡೆಯಿತು.

2008: ಪಾಕಿಸ್ಥಾನದ ಕರಾಚಿ ನಗರದಲ್ಲಿ ಸಾರ್ವಜನಿಕರ ಆಕ್ರೋಶಕ್ಕೆ ಮತ್ತೆ ಇಬ್ಬರು ದರೋಡೆಕೋರರು ಜೀವ ತೆತ್ತರು. ಒಂದೇ ವಾರದಲ್ಲಿ ಇಂತಹ ಘಟನೆ ನಡೆದದ್ದು ಇದು ಎರಡನೇ ಬಾರಿ. ಈ ವಾರದ ಆರಂಭದಲ್ಲಿ ಮೂವರು ದರೋಡೆಕೋರರನ್ನು ಸಾರ್ವಜನಿಕರು ಬೆಂಕಿ ಹಚ್ಚಿ ದಹಿಸಿದ ಘಟನೆ ನಡೆದಿತ್ತು. ಈದಿನ ಸುಮಾರು 20 ಶಸ್ತ್ರಧಾರಿ ದರೋಡೆಕೋರರು ಬಸ್ ಪ್ರಯಾಣಿಕರನ್ನು ಲೂಟಿ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾಗ ಸಾರ್ವಜನಿಕರ ಕೈಗೆ ಸಿಕ್ಕಿ ಬಿದ್ದರು. ಅವರನ್ನು ಹಿಗ್ಗಾಮುಗ್ಗಾ ಥಳಿಸಿದ ಸಾರ್ವಜನಿಕರು ಅವರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದರು. ಇವರಲ್ಲಿ ತೀವ್ರವಾಗಿ ಸುಟ್ಟುಹೋಗಿದ್ದ ಇಬ್ಬರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. 

2008: ರಾನ್ ಬ್ಯಾಕ್ಸಿ ಮುಖ್ಯಸ್ಥ ಮಾಲ್ವಿಂದರ್ ಮೋಹನ್ ಸಿಂಗ್ ಸೇರಿದಂತೆ ಐವರು ಭಾರತೀಯರು ವಿಶ್ವ ಔಷಧ ಕ್ಷೇತ್ರದಲ್ಲಿ ಪ್ರಭಾವಿಗಳಾಗಿದ್ದಾರೆ ಎಂದು ಇಂಗ್ಲೆಂಡಿನ ನಿಯತಕಾಲಿಕ ವರದಿ ಮಾಡಿತು. ಒಟ್ಟು 40 ಜನ ಪ್ರಭಾವಿಗಳ ಪೈಕಿ ಎಂ. ವೆಂಕಟೇಶ್ವರಲು (ಮಾಜಿ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ) 16ನೇ ಸ್ಥಾನದಲ್ಲಿ, ರಾನ್ ಬಾಕ್ಸಿ ಮುಖ್ಯಸ್ಥ ಮಾಲ್ವಿಂದರ್ ಮೋಹನ್ ಸಿಂಗ್ (21ನೇ ಸ್ಥಾನ), ಭಾರತೀಯ ಔಷಧಿ ಉತ್ಪಾದಕರ ಸಂಘದ ಅಧ್ಯಕ್ಷ ರಂಜಿತ್ ಶಹಾನಿ (24ನೇ ಸ್ಥಾನ), ಅರವಿಂದ ಫಾರ್ಮ್ ಅಧ್ಯಕ್ಷ ರಾಮ ಪ್ರಸಾದ್ ರೆಡ್ಡಿ (35ನೇ ಸ್ಥಾನ) ಹಾಗೂ ಪನೇಶಿಯಾ ಬಯೋಟೆಕ್ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ಜೈನ್ (40ನೇ ಸ್ಥಾನ) ಸ್ಥಾನ ಗಿಟ್ಟಿಸಿಕೊಂಡರು. ಪಟ್ಟಿಯ ಮೊದಲನೇ ಸ್ಥಾನದಲ್ಲಿ ನೋಬೆಲ್ ಪುರಸ್ಕೃತ ಮಾರ್ಲೊ ಆರ್ ಕೇಪಚ್ಚಿ, ಸರ್ ಮಾರ್ಟಿನ್ ಜೆ ಇವಾನ್ಸ್ ಹಾಗೂ ಒಲಿವರ್ ಸ್ಮಿತ್ ಇದ್ದರು.

2008: ಮೂತ್ರಪಿಂಡ ತಜ್ಞ ಹಾಗೂ ಮದ್ರಾಸ್ ಇನ್ಸ್ಟಿಟ್ಯೂಟ್ ಆಫ್ ನೆಫ್ರೊಲಾಜಿ ನಿರ್ದೇಶಕ ಡಾ. ರಾಜನ್ ರವಿಚಂದ್ರನ್ ಅವರಿಗೆ ಅಮೆರಿಕದ ಪ್ರತಿಷ್ಠಿತ ಕಾಲೇಜ್ ಆಫ್ ಫಿಜಿಸಿಯನ್ಸ್ (ಎಫ್ ಎ ಸಿ ಪಿ) ಫೆಲೋಷಿಪ್  ದೊರಕಿತು.  

2008: ಎರಡನೇ ಜಾಗತಿಕ ಮಹಾಯುದ್ಧದಲ್ಲಿ ಅಮೆರಿಕ ಸೇನೆ ಹಾಕಿದ್ದ ಸ್ಫೋಟವಾಗದ ಬೃಹತ್ ಬಾಂಬ್ ಒಂದನ್ನು ಪರಿಣತರು ಟೋಕಿಯೊ ಬಳಿ ನಿಷ್ಕ್ರಿಯಗೊಳಿಸಿದರು. ಈ ಹಿನ್ನೆಲೆಯಲ್ಲಿ ಇಲ್ಲಿನ ಸುಮಾರು 16,490 ನಿವಾಸಿಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿತ್ತು. ತುಕ್ಕು ಹಿಡಿದಿದ್ದ ಈ ಬಾಂಬನ್ನು ಜಪಾನಿನ ಸ್ವಯಂ-ರಕ್ಷಣಾ ಪಡೆಯ ಸಿಬ್ಬಂದಿ ನಿಷ್ಕ್ರಿಯಗೊಳಿದರು.

2007: ನೈಜೀರಿಯಾದ ಅತಿದೊಡ್ಡ ತೈಲ ಸಂಸ್ಕರಣಾ ಘಟಕ ಪೋರ್ಟ್ ಹಾಕೋರ್ಟ್ ರಿಫೈನರಿಯನ್ನು ಸ್ವಾಧೀನಪಡಿಸಿಕೊಳ್ಳುವ ಯತ್ನದಲ್ಲಿ ಉಕ್ಕು ಉದ್ಯಮದ ಸಾಮ್ರಾಟ ಭಾರತೀಯ ಮೂಲದ ಲಕ್ಷ್ಮೀ ನಿವಾಸ್ ಮಿತ್ತಲ್ ಅವರಿಗೆ ಸೋಲಾಯಿತು.

2007: ಕರ್ನಾಟಕ ನಗರ ಹಾಗೂ ಗ್ರಾಮಾಂತರ ಪ್ರದೇಶ ಯೋಜನೆ (ಅಕ್ರಮ ನಿವೇಶನ ಹಾಗೂ ಕಟ್ಟಡಗಳ ಸಕ್ರಮೀಕರಣ) ನಿಯಮವನ್ನು (2007) ರಾಜ್ಯಪತ್ರದಲ್ಲಿ ಪ್ರಕಟಿಸುವ ಮೂಲಕ ರಾಜ್ಯ ಸರ್ಕಾರವು ಸಕ್ರಮೀಕರಣಕ್ಕೆ ವಿಧ್ಯುಕ್ತ ಚಾಲನೆ ನೀಡಿತು. ಕಂದಾಯ ಭೂಮಿಯಲ್ಲಿನ ಅಕ್ರಮ ಕಟ್ಟಡ ಹಾಗೂ ನಿವೇಶನಗಳನ್ನು ಸಕ್ರಮಗೊಳಿಸುವ ಸಂಬಂಧಿ ಸರ್ಕಾರ ಈ ಅಧಿಸೂಚನೆ ಹೊರಡಿಸಿತು.

2007: ನಿಯಮಗಳನ್ನು ಗಾಳಿಗೆ ತೂರಿ ಪ್ರೇಯಸಿ ಶಹಾ ರಿಜಾ ಅವರಿಗೆ ಉದಾರವಾಗಿ ಬಡ್ತಿ ನೀಡಿ ಸಂಬಳ ಹೆಚ್ಚಿಸಿದ ಆರೋಪ ಎದುರಿಸುತ್ತಿರುವ ವಿಶ್ವಬ್ಯಾಂಕ್ ಅಧ್ಯಕ್ಷ ಪೌಲ್ ವುಲ್ಫೋವಿಜ್ ಅವರು ಕೊನೆಗೂ ಒತ್ತಡಕ್ಕೆ ಮಣಿದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು.

2007: ಮುಂಬೈಯಲ್ಲಿ 1993ರಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟದಲ್ಲಿ ತಪ್ಪಿತಸ್ಥರೆಂದು ಸಾಬೀತಾದ ಐವರಿಗೆ ಸ್ಫೋಟಕಗಳು, ಮದ್ದುಗುಂಡುಗಳು ಹಾಗೂ ಶಸ್ತ್ರಾಸ್ತ್ರ ಕಳ್ಳ ಸಾಗಾಣಿಕೆಯಲ್ಲಿ ನೆರವು ನೀಡಿದ್ದಕ್ಕಾಗಿ ಹಾಗೂ ಶಸ್ತ್ರಾಸ್ತ್ರ ಕಳ್ಳ ಸಾಗಾಣಿಕೆಯಲ್ಲಿ ನೆರವು ನೀಡಿದ್ದಕ್ಕಾಗಿ ವಿಶೇಷ ಟಾಡಾ ನ್ಯಾಯಾಲಯವು ದೀರ್ಘಕಾಲದ ವಿಚಾರಣೆಯ ಬಳಿಕ ಕಸ್ಟಮ್ಸ್ ಕಾಯ್ದೆಯ ಅಡಿಯಲ್ಲಿ ಮೂರು ವರ್ಷಗಳ ಕಠಿಣ ಶಿಕ್ಷೆ ವಿಧಿಸಿತು. ಈ ಮೂಲಕ, 14 ವರ್ಷಗಳ ಹಿಂದೆ ನಡೆದ ಈ ಕ್ರಿಮಿನಲ್ ಪ್ರಕರಣದ 100 ಮಂದಿ ಅಪರಾಧಿಗಳಿಗೆ ನ್ಯಾಯಾಲಯ ಶಿಕ್ಷೆಯ ಪ್ರಮಾಣ ಪ್ರಕಟಿಸಲು ಆರಂಭಿಸಿತು. 1993ರ ಮಾರ್ಚ್ 12ರಂದು ಮುಂಬೈಯಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟಗಳಲ್ಲಿ 257 ಜನ ಮೃತರಾಗಿ 700 ಮಂದಿ ಗಾಯಗೊಂಡಿದ್ದರು.

2007: ಕೇಂದ್ರ ಸಚಿವ ಸಂಪುಟದಲ್ಲಿ ರಾಜ್ಯ ಸಚಿವೆಯಾಗಿ ಡಿಎಂಕೆ ಸಂಸದೆ ವಿ. ರಾಧಿಕಾ ಸೆಲ್ವಿ ಪ್ರಮಾಣ ವಚನ ಸ್ವೀಕರಿಸಿದರು. ತಮಿಳುನಾಡಿನ ತಿರುಚೆಂದೂರಿನಿಂದ ಇದೇ ಪ್ರಥಮ ಬಾರಿಗೆ ಸಂಸದೆಯಾಗಿ ಆವರು ಆಯ್ಕೆಯಾಗಿದ್ದರು.

2007: ಆಂಧ್ರ ಪ್ರದೇಶದ ರಾಜಧಾನಿ ಹೈದರಾಬಾದಿನ ಚಾರಿತ್ರಿಕ ಮೆಕ್ಕಾ ಮಸೀದಿಯಲ್ಲಿ ಪಾರ್ಥನೆ ವೇಳೆಯಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ 16 ಜನ ಮೃತರಾಗಿ 50ಕ್ಕೂ ಹೆಚ್ಚು ಮಂದಿ ಗಾಯಗೊಂಡರು.

2007: ಬಳ್ಳಾರಿ ಜಿಲ್ಲೆಯ ಕೂಡ್ಲಿಗಿಯ ಕಾನಾಹೊಸಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ 13ರಲ್ಲಿ ಬೆಳಗಿನ ಜಾವ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮದುಮಗಳು ಸೇರಿ ಮದುವೆ ದಿಬ್ಬಣದ 19 ಮಂದಿ ಮೃತರಾಗಿ 26 ಮಂದಿ ಗಾಯಗೊಂಡರು.

2007: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯದ ಕುಲಪತಿಯಾಗಿ ಭಾರತೀಯ ವಿಜ್ಞಾನ ಸಂಸ್ಥೆಯ (ಐ ಐ ಎಸ್ ಸಿ) ಎಲೆಕ್ಟ್ರಿಕಲ್ ಸೈನ್ಸ್ ವಿಭಾಗದ ಮುಖ್ಯಸ್ಥ ಡಾ. ಎಚ್.ವಿ. ಖಿಂಚ ನೇಮಕಗೊಂಡರು.

2006: ನೇತಾಜಿ ಅವರಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಎ.ಕೆ. ಮುಖರ್ಜಿ ಆಯೋಗವು ಸಲ್ಲಿಸಿದ ವರದಿಯನ್ನು ತಿರಸ್ಕರಿಸಿದ ಯುಪಿಎ ಸರ್ಕಾರದ ಕ್ರಮವನ್ನು ಲೋಕಸಭಾ ಸದಸ್ಯರು ಪಕ್ಷಭೇದ ಮರೆತು ತೀವ್ರ ಆಕ್ಷೇಪ ವ್ಯಕ್ತಪಡಿಸಿ, ವರದಿ ಬಗ್ಗೆ ಸದನದಲ್ಲಿ ಚರ್ಚೆಗೆ ಆಗ್ರಹಿಸಿದರು.

2006: ನೇಪಾಳದ ದೊರೆಯ ರಾಜಕೀಯ ಹಾಗೂ ಸೇನಾ ಅಧಿಕಾರವನ್ನು ಮೊಟಕುಗೊಳಿಸುವ ಪ್ರಸ್ತಾವವನ್ನು ನೇಪಾಳ ಸಂಸತ್ತು ಅಂಗೀಕರಿಸಿತು. ಜೊತೆಗೇ ನೇಪಾಳವು ಜಾತ್ಯತೀತ ರಾಷ್ಟ್ರ ಎಂದು ಘೋಷಿಸಿತು.

2006:  ಉಪಗ್ರಹವನ್ನು ಹೊತ್ತ ಎಚ್-2ಎ ಹೆಸರಿನ ರಾಕೆಟನ್ನು ಜಪಾನ್ ದಕ್ಷಿಣ ಕಾಗೊಶಿಮಾದ ತಾನೆಗಶಿಮಾ ಬಾಹ್ಯಕಾಶ ಕೇಂದ್ರದಿಂದ ಗಗನಕ್ಕೆ ಹಾರಿಸಿತು. ಒಂದು ತಿಂಗಳಿಗೂ ಕಡಿಮೆ ಅವಧಿಯಲ್ಲಿ ಜಪಾನ್ ಮಾಡಿದ ಎರಡನೇ ಸಾಹಸ ಇದಾಗಿದ್ದು, ಹಲವು ದುರಂತಗಳ ಬಳಿಕ ರಾಷ್ಟ್ರದ ಬಾಹ್ಯಾಕಾಶ ಕಾರ್ಯಕ್ರಮಗಳಿಗೆ ಅಗತ್ಯ ಉತ್ತೇಜನ ನೀಡಿತು. ರಾಕೆಟ್ 4.7 ಟನ್ ತೂಕದ ಉಪಗ್ರಹವನ್ನು ಗಗನಕ್ಕೆ ಒಯ್ದು ಸಮರ್ಪಕವಾಗಿ ಕಕ್ಷೆಗೆ ಸೇರಿಸಿತು.

1974: ಭಾರತವು ರಾಜಸ್ಥಾನದ ಪೋಖ್ರಾನಿನಲ್ಲಿ ತನ್ನ ಮೊತ್ತ ಮೊದಲ ಅಣ್ವಸ್ತ್ರ ಪರೀಕ್ಷಾ ಸ್ಫೋಟ ನಡೆಸಿತು.

1969: ಚಂದ್ರನಲ್ಲಿ ಮಾನವನನ್ನು ಇಳಿಸಲು ಸಿದ್ಧತೆಗಳನ್ನು ನಡೆಸುವ ಸಲುವಾಗಿ ಅಮೆರಿಕವು ಬಾಹ್ಯಾಕಾಶ ನೌಕೆ ಅಪೋಲೋ 10ನ್ನು ಗಗನಕ್ಕೆ ಹಾರಿಸಿತು.

1965: ಕಲಾವಿದೆ ಮಾಲಾ ರಾಣಿ ಜನನ.

1952: ಕಲಾವಿದ ಶ್ರೀಧರ್ ಜೆ.ಕೆ. ಜನನ.

1945: ತೈಲವರ್ಣ ಚಿತ್ರಕಲೆಯಲ್ಲಿ ಅಗಾಧ ಸಾಧನೆ ಮಾಡಿರುವ ಎಸ್. ಕೃಷ್ಣಪ್ಪ ಅವರು ನೇಕಾರ ಕುಟುಂಬದ ಸಂಪಂಗಿರಾಮಯ್ಯ- ನಾರಾಯಣಮ್ಮ ದಂಪತಿಯ ಮಗನಾಗಿ ಬೆಂಗಳೂರು ಜಿಲ್ಲೆಯ ಸರ್ಜಾಪುರದಲ್ಲಿ ಜನಿಸಿದರು.

1915: ಕಲಾವಿದ ಶೆಲ್ವ ಪಿಳ್ಳೈ ಅಯ್ಯಂಗಾರ್ ಜನನ.

1912: ಮೂಕಿ ಚಿತ್ರಗಳ ದಿನಗಳಲ್ಲಿ ಬ್ರಿಟಿಷ್ ಸಹಯೋಗದೊಂದಿಗೆ ನಿರ್ಮಿಸಲಾದ ಮೊತ್ತ ಮೊದಲ ಭಾರತೀಯ ಚಿತ್ರ `ಪುಂಡಲೀಕ' ಮುಂಬೈಯ ಕೊರೋನೇಷನ್ ಸಿನೆಮಾಟೋಗ್ರಾಫಿನಲ್ಲಿ ಬಿಡುಗಡೆಯಾಯಿತು. ಎನ್. ಜಿ. ಚಿತ್ರೆ ಮತ್ತು ಪಿ.ಆರ್. ಟಿಪ್ನಿಸ್ ಇದನ್ನು ಜಂಟಿಯಾಗಿ ನಿರ್ದೇಶಿಸಿದ್ದರು. (ದಾದಾಸಾಹೇಬ್ ಫಾಲ್ಕೆ ಅವರ `ರಾಜಾ ಹರಿಶ್ಚಂದ್ರ' ಚಿತ್ರ ಒಂದು ವರ್ಷ ತಡವಾಗಿ ಬಿಡುಗಡೆಗೊಂಡರೂ ಅದು ಸಂಪೂರ್ಣ ದೇಶೀಯವಾಗಿ ನಿರ್ಮಾಣಗೊಂಡದ್ದರಿಂದ ಅದೇ ಮೊತ್ತ ಮೊದಲ ಭಾರತೀಯ ಚಿತ್ರ ಎಂದು ದಾಖಲಾಗಿದೆ.)

1836: ಆಸ್ಟ್ರಿಯಾದ ಚೆಸ್ ಮಾಸ್ಟರ್ ವಿಲ್ಹೆಮ್ ಸ್ಟೀನಿಜ್ (1836-1900) ಹುಟ್ಟಿದ ದಿನ. ಅತ್ಯಂತ ಹೆಚ್ಚು ಕಾಲ (1866ರಿಂದ 1894ರವರೆಗೆ) ಜಾಗತಿಕ ಚೆಸ್ ಚಾಂಪಿಯನ್ ಆಗಿದ್ದ ವಿಲ್ಹೆಮ್ 1894ರಲ್ಲಿ ಎಮ್ಯಾನುವೆಲ್ ಲಸ್ಕರ್ ಅವರ ಎದುರು ಸೋತು ಜಾಗತಿಕ ಚೆಸ್ ಚಾಂಪಿಯನ್ ಶಿಪ್ ಕಳೆದುಕೊಂಡರು.

1048: ಪರ್ಷಿಯಾದ ಕವಿ, ಗಣಿತತಜ್ಞ, ಖಗೋಳತಜ್ಞ ಉಮರ್ ಖಯ್ಯಾಂ (1048-1131) ಜನ್ಮದಿನ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement