ಇಂದಿನ ಇತಿಹಾಸ
ಮೇ 20
ಭಾರತದಲ್ಲಿ ಪ್ರನಾಳ ಶಿಶು ತಂತ್ರಜ್ಞಾನ (ಕೃತಕ ಗರ್ಭಧಾರಣೆ) ರೂಪುಗೊಂಡ ಮೂರು ದಶಕದ ಬಳಿಕ ಮೇಲೆ ವೈದ್ಯಕೀಯ ಬಳಗ ಇದೀಗ ಎಚ್ಚೆತ್ತುಕೊಂಡಿತು. ಅದನ್ನು ಅನ್ವೇಷಿಸಿದ ಡಾ.ಸುಭಾಶ್ ಮುಖರ್ಜಿ ಅವರಿಗೆ ರಾಷ್ಟ್ರೀಯ ಮಾನ್ಯತೆ ನೀಡಬೇಕೆಂದು ವೈದ್ಯಕೀಯ ಬಳಗ ಒತ್ತಾಯಿಸಿತು. 30 ವರ್ಷಗಳ ಹಿಂದೆ ತಾವು ಸಂಶೋಧನೆಯಲ್ಲಿ ತೊಡಗಿದ್ದಾಗ ತಮ್ಮದೇ ವೈದ್ಯಕೀಯ ಕ್ಷೇತ್ರದ ಪರಿಣಿತರು ಹಾಗೂ ಸರ್ಕಾರದಿಂದ ಸಾಕಷ್ಟು ತಾತ್ಸಾರಕ್ಕೆ ಗುರಿಯಾಗಿದ್ದ ಸುಭಾಶ್, ಕಡೆಗೆ ಇದೇ ಕಾರಣದಿಂದ ಬೇಸತ್ತು 1981ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.
2008: ಹುಬ್ಬಳ್ಳಿ ನಗರದ ತಿಮ್ಮಸಾಗರ ಗುಡಿ ಮುಖ್ಯರಸ್ತೆ ಲಿಮ್ಕಾ ವಿಶ್ವದಾಖಲೆಗೆ ಸೇರಿತು. ನಾಗರಿಕರು ವಿಮೆ ಮಾಡಿಸಿದ ಪ್ರಥಮ ರಸ್ತೆ ಎಂಬ ಹೆಗ್ಗಳಿಕೆ ಈ ರಸ್ತೆಯದ್ದು. ಈ ಭಾಗದ ನಿವಾಸಿಗಳು ರಸ್ತೆಗೆ 2 ಲಕ್ಷ ರೂ. ವಿಮೆ ಮಾಡಿಸಿದ್ದು, ಲಿಮ್ಕಾ ದಾಖಲೆ ಪುಸ್ತಕದಲ್ಲಿ ಈ ರಸ್ತೆ ಸ್ಥಾನ ಪಡೆಯಿತು. ಮೇ 20ರಂದು ಪ್ರಕಟವಾದ 2008ರ ಲಿಮ್ಕಾ ದಾಖಲೆಗಳ ಪುಸ್ತಕದಲ್ಲಿ ಈ ರಸ್ತೆಯ ಚಿತ್ರ ಹಾಗೂ ವಿಮೆ ಬಗೆಗಿನ ವಿವರ ಪ್ರಕಟಿಸಲಾಯಿತು. ಪಾಲಿಕೆ ಆಯುಕ್ತ ಪಿ.ಮಣಿವಣ್ಣನ್ ಅವರ ಅನುಮತಿ ಪಡೆದು, 2007ರ ಆಗಸ್ಟ್ ತಿಂಗಳಲ್ಲಿ ಡಾ.ಮೃತ್ಯುಂಜಯ ಸಿ.ಸಿಂಧೂರ ನೇತೃತ್ವದಲ್ಲಿ ನಾಗರಿಕರು ವಿಮೆ ಮಾಡಿಸಿದ್ದರು. 385 ಮೀಟರ್ ಉದ್ದದ ರಸ್ತೆಗೆ ಓರಿಯಂಟಲ್ ಇನ್ಶೂರೆನ್ಸ್ ಕಂಪೆನಿ ವಾರ್ಷಿಕ 303 ರೂ. ವಾರ್ಷಿಕ ವಿಮಾ ಕಂತು ತುಂಬಿಸಿಕೊಂಡು 2 ಲಕ್ಷ ರೂ ವಿಮೆ ಮಾಡಿತ್ತು. 2007ರ ಆಗಸ್ಟ್ ಎರಡರಿಂದ 2008ರ ಆ. 1ರವರೆಗೆ ವಿಮೆ ಮಾಡಿಸಲಾಗಿತ್ತು. ಈ ರಸ್ತೆಯ ದುರಸ್ತಿಗೆ ತಗುಲುವ ನಿರ್ವಹಣಾ ವೆಚ್ಚವನ್ನು ವಿಮಾ ಕಂಪೆನಿ ಪಾಲಿಕೆಗೆ ಭರಿಸುವುದಾಗಿ ಒಪ್ಪಂದವಾಗಿತ್ತು. ವಿಮಾ ಕಂಪೆನಿಗೆ ಪಾಲಿಕೆ ವತಿಯಿಂದ ಆಯುಕ್ತರು ನಿರಾಕ್ಷೇಪಣಾ ಪತ್ರ ನೀಡಿದ್ದರು
2008: ಕಳ್ಳಬಟ್ಟಿ ಕುಡಿದು ವಿವಿಧ ಕಡೆ ಆಸ್ಪತ್ರೆಗಳಿಗೆ ದಾಖಲಾಗಿದ್ದ ಬೆಂಗಳೂರು, ಕೋಲಾರ, ಹೊಸೂರು, ಕೃಷ್ಣಗಿರಿ, ಆನೇಕಲ್ ನ 56 ಮಂದಿ ಮೃತರಾದರು. ಇದರೊಂದಿಗೆ ಮೃತರ ಸಂಖ್ಯೆ 149ಕ್ಕೆ ಏರಿತು.
2008: ಕಪ್ಪೆಗಳು ಸಾಮೂಹಿಕವಾಗಿ ತಮ್ಮ ವಾಸಸ್ಥಾನಗಳಿಂದ ಹೊರಬಂದ ಕಾರಣ ನೈಋತ್ಯ ಚೀನಾದ ಝುನೈ ಪಟ್ಟಣದಲ್ಲಿ ಸಾವಿರಾರು ಜನ ಈದಿನ ರಾತ್ರಿಯಿಡೀ ತಮ್ಮ ಮನೆಯಿಂದ ಹೊರಗೆ ಬಯಲು ಪ್ರದೇಶದಲ್ಲಿ ಕಾಲ ಕಳೆದರು. ಕಪ್ಪೆಗಳು ಈ ರೀತಿ ಸಾವಿರಾರು ಸಂಖ್ಯೆಯಲ್ಲಿ ಚಲಿಸಿದ್ದರಿಂದ ಭೂಕಂಪವಾಗುವ ಸಾಧ್ಯತೆಯಿದೆ ಎಂದು ಜನ ಭಯಗ್ರಸ್ತರಾಗಿದ್ದರು. 71,000 ಜನರನ್ನು ಬಲಿ ತೆಗೆದುಕೊಂಡ ಮೇ 12ರ ಭೂಕಂಪಕ್ಕೂ ಮುನ್ನ ಕಪ್ಪೆಗಳು ಹೀಗೆ ಸಾಮೂಹಿಕವಾಗಿ ಹೊರಗೆ ಕಾಣಿಸಿಕೊಂಡಿದ್ದವು ಎನ್ನಲಾಗಿದೆ.
2008: ಭಾರತದಲ್ಲಿ ಪ್ರನಾಳ ಶಿಶು ತಂತ್ರಜ್ಞಾನ (ಕೃತಕ ಗರ್ಭಧಾರಣೆ) ರೂಪುಗೊಂಡ ಮೂರು ದಶಕದ ಬಳಿಕ ಮೇಲೆ ವೈದ್ಯಕೀಯ ಬಳಗ ಇದೀಗ ಎಚ್ಚೆತ್ತುಕೊಂಡಿತು. ಅದನ್ನು ಅನ್ವೇಷಿಸಿದ ಡಾ.ಸುಭಾಶ್ ಮುಖರ್ಜಿ ಅವರಿಗೆ ರಾಷ್ಟ್ರೀಯ ಮಾನ್ಯತೆ ನೀಡಬೇಕೆಂದು ವೈದ್ಯಕೀಯ ಬಳಗ ಒತ್ತಾಯಿಸಿತು. 30 ವರ್ಷಗಳ ಹಿಂದೆ ತಾವು ಸಂಶೋಧನೆಯಲ್ಲಿ ತೊಡಗಿದ್ದಾಗ ತಮ್ಮದೇ ವೈದ್ಯಕೀಯ ಕ್ಷೇತ್ರದ ಪರಿಣಿತರು ಹಾಗೂ ಸರ್ಕಾರದಿಂದ ಸಾಕಷ್ಟು ತಾತ್ಸಾರಕ್ಕೆ ಗುರಿಯಾಗಿದ್ದ ಸುಭಾಶ್, ಕಡೆಗೆ ಇದೇ ಕಾರಣದಿಂದ ಬೇಸತ್ತು 1981ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಪ್ರನಾಳ ಶಿಶು ತಂತ್ರಜ್ಞಾನ ಅನ್ವೇಷಿಸಿದ ಪ್ರಪಂಚದ ಎರಡನೇ ಸಂಶೋಧಕ ಎನ್ನುವ ಹೆಗ್ಗಳಿಕೆ ಕೂಡ ಸುಭಾಶ್ ಮುಖರ್ಜಿ ಅವರದ್ದು. ಇಂಗ್ಲೆಂಡಿನ ಓಲ್ಧಮ್ ಆಸ್ಪತ್ರೆಯಲ್ಲಿ ಡಾ.ಪ್ಯಾಟ್ರಿಕ್ ಸ್ಟೆಪ್ಟೋ ಮತ್ತು ಡಾ.ರಾಬರ್ಟ್ ಎಡ್ವರ್ಡ್ಸ್ ಜಗತ್ತಿನ ಪ್ರಪ್ರಥಮ ಪ್ರನಾಳ ಶಿಶು ಜನಿಸಲು ಕಾರಣವಾದ ನಾಲ್ಕೇ ತಿಂಗಳಲ್ಲಿ ಸುಭಾಶ್ ರೂಪಿಸಿದ್ದ ತಂತ್ರಜ್ಞಾನ ಕೂಡ ಫಲ ನೀಡಿತ್ತು! ಅವರ ಸಂಶೋಧನೆಯ ಫಲವಾಗಿ 1978ರಲ್ಲಿ ಜನಿಸಿದ ಕನುಪ್ರಿಯಾ ಅಗರ್ ವಾಲ್ ಗೆ ಈಗ 30ರ ಪ್ರಾಯ. ಮುಖರ್ಜಿ ಅವರ ಕೊಡುಗೆಯನ್ನು ಗುರುತಿಸಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು (ಐಸಿಎಂಆರ್) 2005-06ರಲ್ಲಿ ಮರಣೋತ್ತರ ಪುರಸ್ಕಾರ ನೀಡಿದ್ದರೂ ಅದು ಸಾಲದು; ತಮ್ಮ ಕಾಲದ ಇತರರಿಗಿಂತ ಹೆಚ್ಚು ದೂರದೃಷ್ಟಿಯ ವಿಜ್ಞಾನಿಯಾಗಿದ್ದ ಅವರ ಹೆಸರಿನಲ್ಲಿ ರಾಷ್ಟ್ರೀಯ ಅಧ್ಯಯನ ಮತ್ತು ಸಂಶೋಧನಾ ಕೇಂದ್ರವೊಂದನ್ನು ಸ್ಥಾಪಿಸಬೇಕು ಎಂಬುದು ವೈದ್ಯಕೀಯ ಬಳಗದ ಆಗ್ರಹ.
2008: ಸಾಂಪ್ರದಾಯಿಕ ತೊಗಲುಗೊಂಬೆ ಆಟದಲ್ಲಿ ಬಸವ, ಗಾಂಧಿ, ಭಾರತೀಯ ಸ್ವಾತಂತ್ರ್ಯ ಸಂಗ್ರಾಮದಂತಹ ಹೊಸ ಹೊಸ ವಿಷಯ-ವಸ್ತುಗಳ ಪ್ರಯೋಗಗಳನ್ನು ಮಾಡಿ ರಾಷ್ಟ್ರದ ಗಮನ ಸೆಳೆದ ಹಿರಿಯ ರಂಗ ಕಲಾವಿದ ಬಳ್ಳಾರಿಯ ಬೆಳಗಲ್ ವೀರಣ್ಣ (73) ಅವರನ್ನು 2007ರ ಪ್ರತಿಷ್ಠಿತ ಜಾನಪದಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು.
2008: ಮೆದುಳಿಗೆ ತೆರೆದ ಶಸ್ತ್ರಚಿಕಿತ್ಸೆಗೆ ಬದಲಾಗಿ ಲೇಸರ್ ಚಾಕುವನ್ನು ಬಳಸಿ ಅತ್ಯಾಧುನಿಕ ರೀತಿಯಲ್ಲಿ ಶಸ್ತ್ರಚಿಕಿತ್ಸೆ ಮಾಡುವ ವಿಧಾನವನ್ನು ವಿಜ್ಞಾನಿಗಳು ಸಂಶೋಧಿಸಿದರು. ವೈದ್ಯರು ರೇಡಿಯೋ ತರಂಗಗಳ ಮೂಲಕ ಗಾಮಾ ಕಿರಣದ ಚಾಕುವನ್ನು ಬಳಸಿ ಮೆದುಳಿನ ಗೆಡ್ಡೆಯ ಶಸ್ತ್ರಚಿಕಿತ್ಸೆಯನ್ನು ಮಾಡಬಹುದು. ನೋವಿರದ ಈ ಶಸ್ತ್ರಚಿಕಿತ್ಸೆಗೆ ಕೇವಲ ಎರಡು ಗಂಟೆ ಸಾಕು ಎಂಬುದು ವಿಜ್ಞಾನಿಗಳ ವಿವರಣೆ. ಮೆದುಳಿನಲ್ಲಿ ಆದ ಕ್ಯಾನ್ಸರನ್ನು ಸಂಪೂರ್ಣವಾಗಿ ಗುಣಪಡಿಸಲು ಈ ಶಸ್ತ್ರಚಿಕಿತ್ಸೆಯ ಮೂಲಕ ಆಗದಿದ್ದರೂ ರೋಗವನ್ನು ನಿಯಂತ್ರಿಸಿ ರೋಗಿಯು ಹೆಚ್ಚು ಕಾಲ ಬದುಕುವಂತೆ ಮಾಡಬಹುದು. ಮೆದುಳನ್ನು ಸ್ಕ್ಯಾನ್ ಮಾಡಿದ ನಂತರ ತಲೆಯ ಸುತ್ತ ಲೋಹದ ಪಟ್ಟಿಯನ್ನು ಕಟ್ಟಿ ಗೆಡ್ಡೆ ಇರುವ ಜಾಗಕ್ಕೆ ಗಾಮಾ ಕಿರಣದ ಚಾಕುವನ್ನು ಹಾಯಿಸಲಾಗುತ್ತದೆ ಎಂದು ವಿಜ್ಞಾನಿಗಳು ವಿವರಿಸುತ್ತಾರೆ.
2008: ಮುಸ್ಲಿಂ ಯುವಕರು ಭಯೋತ್ಪಾದನಾ ಕೃತ್ಯಗಳತ್ತ ವಾಲದಂತೆ ಅವರಿಗೆ ಪ್ರತಿ ಶುಕ್ರವಾರದ ನಮಾಜ್ ನಂತರ ವಿಶೇಷ ತರಬೇತಿ ಕಾರ್ಯಕ್ರಮಗಳನ್ನು ನೀಡಲು ಉತ್ತರ ಪ್ರದೇಶದ ಇಮಾಮರು ನಿರ್ಧರಿಸಿದರು. ಮುಸ್ಲಿಮರ ಪವಿತ್ರ ಗ್ರಂಥ ಕುರಾನ್ ಯಾವುದೇ ಭಯೋತ್ಪಾದಕ ಚಟುವಟಿಕೆಗಳನ್ನು ಒಪ್ಪುವುದಿಲ್ಲ. ನಿಷೇಧಿತ ಉಗ್ರಗಾಮಿ ಸಂಘಟನೆಗಳು ತಮ್ಮ ಭಯೋತ್ಪಾದನಾ ಚಟುವಟಿಕೆಗಳಿಗೆ ಯುವಕರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇಸ್ಲಾಮ್ ಹೆಸರಿನಲ್ಲಿ ಅವರನ್ನು ಶೋಷಣೆ ಮಾಡುತ್ತಿವೆ. ಈ ವಿಷಯವನ್ನು ಅವರಿಗೆ ಮನದಟ್ಟು ಮಾಡಲು ಈ ತರಗತಿಗಳು ಶ್ರಮಿಸಲಿವೆ ಎಂದು ಮುಸ್ಲಿಂ ಧರ್ಮ ಗುರುಗಳು ತಿಳಿಸಿದರು. `ಭಯೋತ್ಪಾದನೆ ವಿರುದ್ಧ ಚಳವಳಿ' ಎಂಬ ಅಭಿಯಾನದ ಹೆಸರಿನಲ್ಲಿ ಲಖನೌನ ಉಲೇಮಾ (ಮುಸ್ಲಿಂ ಪಂಡಿತರು) ಗಳು ಫೆಬ್ರುವರಿ ತಿಂಗಳಲ್ಲಿ ಸಭೆಯೊಂದನ್ನು ನಡೆಸಿದ್ದರು. ಈ ಸಂದರ್ಭದಲ್ಲಿ ಅವರು ರಾಜ್ಯದ ಎಲ್ಲ ಇಮಾಮರಿಗೂ ಪತ್ರ ಬರೆದು ಭಯೋತ್ಪಾದನಾ ಚಟುವಟಿಕೆಗಳ ವಿರುದ್ಧ ಜಾಗೃತಿ ಮೂಡಿಸಲು ಮನವಿ ಮಾಡಿದ್ದರು.
2008: ಆಂಧ್ರ ಪ್ರದೇಶದ ವಾರಂಗಲ್ ಜಿಲ್ಲೆಯ ಕೋಡಿಶಾಲಾ ಗ್ರಾಮದಲ್ಲಿ ನಸುಕಿನಲ್ಲಿ ಪೊಲೀಸರ ಜೊತೆಗೆ ಸಂಭವಿಸಿದ ಘರ್ಷಣೆಯಲ್ಲಿ ಪ್ರಜಾ ಪ್ರತಿಘಟನ ಸಂಘಟನೆಗೆ ಸೇರಿದ ಇಬ್ಬರು ನಕ್ಸಲೀಯರು ಹತರಾದರು.
2008: ಆರು ತಿಂಗಳುಗಳ ಬಳಿಕ ಭಾರತ ಮತ್ತು ಪಾಕಿಸ್ಥಾನ ಇಸ್ಲಾಮಾಬಾದಿನಲ್ಲಿ ಮಾತುಕತೆ ಪುನರಾರಂಭ ಮಾಡಿದವು. ಭಯೋತ್ಪಾದನೆ, ಕಾಶ್ಮೀರ ವಿಚಾರ ಹಾಗೂ ವಿಶ್ವಾಸ ಮೂಡಿಸುವ ಕ್ರಮಗಳಿಗೆ ಸಂಬಂಧಿಸಿದಂತೆ ವಿವಿಧ ದ್ವಿಪಕ್ಷೀಯ ವಿಷಯಗಳ ಬಗ್ಗೆ ಚರ್ಚಿಸಲು ಉಭಯ ರಾಷ್ಟ್ರಗಳ ವಿದೇಶಾಂಗ ಕಾರ್ಯದರ್ಶಿಗಳು ಈದಿನ ಇಲ್ಲಿ ಸಭೆ ಸೇರಿದರು.
2008: ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಪ್ರಣವ್ ಮುಖರ್ಜಿ ಅವರ ಭೇಟಿಯ ಸಂದರ್ಭದಲ್ಲಿ ಸದ್ಭಾವನೆಯ ದ್ಯೋತಕವಾಗಿ 99 ಮಂದಿ ಭಾರತೀಯರು ಅವರಲ್ಲೂ ಬಹುತೇಕ ಮಂದಿ ಮೀನುಗಾರರನ್ನು ಬಿಡುಗಡೆ ಮಾಡುವುದಾಗಿ ಪಾಕಿಸ್ಥಾನವು ಪ್ರಕಟಿಸಿತು. ಒಳಾಡಳಿತ ವ್ಯವಹಾರಗಳಿಗೆ ಸಂಬಂಧಿಸಿದಂತೆ ಪ್ರಧಾನಿಯ ಸಲಹೆಗಾರರಾಗಿರುವ ರಹಮಾನ್ ಮಲಿಕ್ ಅವರು ಭಾರತ- ಪಾಕ್ ವಿದೇಶಾಂಗ ಕಾರ್ಯದರ್ಶಿಗಳ ಮಾತುಕತೆ ಆರಂಭಕ್ಕೆ ಸ್ವಲ್ಪ ಮೊದಲು ಈ ಪ್ರಕಟಣೆ ಮಾಡಿದರು.
2007: ವೇದಾಂತ ಭಾರತಿ ಸಂಸ್ಥೆಯು ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಂಘಟಿಸಿದ ಅಭೂತಪೂರ್ವ `ಸೌಂದರ್ಯ ಲಹರಿ ಸ್ತೋತ್ರ ಸಮರ್ಪಣ' ಕಾರ್ಯಕ್ರಮದಲ್ಲಿ ಸಹಸ್ರಾರು ಮಹಿಳೆಯರು ಶಂಕರ ಭಗವತ್ಪಾದ ವಿರಚಿತ ಸೌಂದರ್ಯ ಲಹರಿ ಸ್ತೋತ್ರಗಳನ್ನು ಪಠಿಸಿ ಇತಿಹಾಸ ನಿರ್ಮಿಸಿದರು.
2007: ಪಶ್ಚಿಮ ಬಂಗಾಳದ ಸಿಂಗೂರಿನಲ್ಲಿ ಟಾಟಾ ಕಂಪೆನಿಯ ಸಣ್ಣ ಕಾರುಗಳ ಉತ್ಪಾದನಾ ಘಟಕಕ್ಕೆ ಸರ್ಕಾರ ಸ್ವಾಧೀನ ಪಡಿಸಿಕೊಂಡ ಜಮೀನನ್ನು ಮತ್ತೆ ಜನರ ವಶಕ್ಕೆ ತೆಗೆದುಕೊಳ್ಳಲು ಕೃಷಿ ಜಮೀನು ರಕ್ಷಾ ಸಮಿತಿ ಹಾಗೂ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಯತ್ನಿಸಿದಾಗ ಹಿಂಸಾಚಾರ ಭುಗಿಲೆದ್ದು 25ಕ್ಕೂ ಹೆಚ್ಚು ಮಂದಿ ಗಾಯಗೊಂಡರು.
2007: ಅಧಿಕ ರಕ್ತದ ಒತ್ತಡದಿಂದ ಬಳಲುತ್ತಿರುವವರಿಗಾಗಿ ರಕ್ತದಲ್ಲಿ ಸೋಡಿಯಂ ಕ್ಲೋರೈಡ್ ಅಂಶವನ್ನು ನಿಯಂತ್ರಿಸುವ `ಸಲೋನಿ-ಕೆ' ಎಂಬ ಹೆಸರಿನ ಸಸ್ಯಜನ್ಯ ಉಪ್ಪು ತಯಾರಿಸಿರುವುದಾಗಿ ಗುಜರಾತಿನ ಭಾವನಗರದ ಕೇಂದ್ರ ಉಪ್ಪು ಮತ್ತು ಸಮುದ್ರ ರಾಸಾಯನಿಕ ಸಂಶೋಧನಾ ಸಂಸ್ಥೆ ಪ್ರಕಟಿಸಿತು. ಸಮುದ್ರ ಕಳೆ ಮತ್ತು ಸಲಿಕೋರ್ನಿಯಾ ಬ್ರಚಿಟಾ ಎಂಬ ಸಸ್ಯವನ್ನು ಈ ಉಪ್ಪು ತಯಾರಿಸಲು ಇದೇ ಮೊದಲ ಬಾರಿಗೆ ಬಳಸಲಾಗಿದೆ ಎಂದು ಸಂಸ್ಥೆಯ ನಿರ್ದೇಶಕ ಪಿ.ಕೆ. ಘೋಷ್ ಪ್ರಕಟಿಸಿದರು.
2007: ಹವಾಮಾನ ವೈಪರೀತ್ಯದಿಂದ ಭಾರತದಲ್ಲಿ ಅತಿವೃಷ್ಟಿ ಹಾಗೂ ಭಾರಿ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇದ್ದು, ಕೆಲವೊಮ್ಮೆ ವಿಕೋಪದ ಪರಿಸ್ಥಿತಿ ಉದ್ಭವಿಸುವ ಸಾಧ್ಯತೆ ಇದೆ ಎಂದು ವಿಶ್ವಬ್ಯಾಂಕ್ ಅಧ್ಯಯನವೊಂದು ಎಚ್ಚರಿಕೆ ನೀಡಿತು.
2006: ರಾಷ್ಟ್ರದ ಅತ್ಯಂತ ಹಿರಿಯ ವ್ಯಕ್ತಿ ಎಂದು ನಂಬಲಾದ ರಾಜಸ್ತಾನದ ಜೈಪುರದ ಹಿರಿಯಜ್ಜ ಬಡೇ ಮಿಯಾ 130ನೇ ಜನ್ಮದಿನ ಆಚರಿಸಿಕೊಂಡು ಗಿನ್ನೆಸ್ ಪುಸ್ತಕದಲ್ಲಿ ಅತೀ ಹೆಚ್ಚು ವರ್ಷ ಬದುಕಿದ ವ್ಯಕ್ತಿ ಎಂಬುದಾಗಿ ಹೆಸರು ದಾಖಲುಸುವ ಇಚ್ಛೆ ವ್ಯಕ್ತಪಡಿಸಿದರು. ಪಿಂಚಣಿ ಕಾರ್ಡ್ ಪ್ರಕಾರ ಅವರು ಹುಟ್ಟಿದ್ದು 1878ರ ಮೇ 20ರಂದು. ಆದರೆ ತಾನು ಇನ್ನೂ ಹಿಂದೆಯೇ ಹುಟ್ಟಿರುವುದಾಗಿ ಈ ಅಜ್ಜನ ವಾದ.
2006: ದಕ್ಷಿಣ ಚೀನಾ ಸಮುದ್ರದಲ್ಲಿ ಬೀಸಿದ ಭಾರಿ ಚಂಡಮಾರುತಕ್ಕೆ ಸಿಲುಕಿ 160ಕ್ಕೂ ಹೆಚ್ಚು ಮೀನುಗಾರರು ಮೃತರಾದರು.
1983: ಭಾರತದ ಶ್ರೇಷ್ಠ ಹಾಕಿ ಆಟಗಾರರಲ್ಲಿ ಒಬ್ಬರಾದ ಪ್ರಿಥಿಪಾಲ್ ಸಿಂಗ್ ಅವರು ಈದಿನ ಬೆಳಗ್ಗೆ ಲೂಧಿಯಾನದಲ್ಲಿ ಅಪರಿಚಿತ ವ್ಯಕ್ತಿಯೊಬ್ಬನ ಗುಂಡೇಟಿಗೆ ಬಲಿಯಾದರು. ಪಂಜಾಬ್ ಕೃಷಿ ವಿವಿ ಕ್ಯಾಂಪಸ್ಸಿನಲ್ಲಿ ಈ ದುರ್ಘಟನೆ ಸಂಭವಿಸಿತು.
1982: ಕೇರಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ (ಐ) ನೇತೃತ್ವದ ಸಂಯುಕ್ತ ಪ್ರಜಾಸತ್ತಾತ್ಮಕ ರಂಗವು 77 ಸ್ಥಾನಗಳನ್ನು ಗೆದ್ದುಕೊಂಡು 140 ಸ್ಥಾನಬಲದ ವಿಧಾನಸಭೆಯಲ್ಲಿ ನಿಚ್ಚಳ ಬಹುಮತ ಗಳಿಸಿಕೊಂಡಿತು.
1975: ಸರ್ ಸೈಯದ್ ಅಹಮದ್ ಖಾನ್ ಮತ್ತು ಅವರ ಮಗ ಸೈಯದ್ ಮಹಮೂದ್ ಆಲಿಗಢದಲ್ಲಿ ಮಹಮ್ಮಡನ್ ಆಂಗ್ಲೋ - ಓರಿಯಂಟಲ್ ಸ್ಕೂಲ್ ಸ್ಥಾಪಿಸಿದರು. 1920ರಲ್ಲಿ ಅದು ಅಲಿಘಡ ಮುಸ್ಲಿಂ ವಿಶ್ವ ವಿದ್ಯಾಲಯವಾಯಿತು.
1957: ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಖ್ಯಾತ ಕಾಂಗ್ರೆಸ್ ಧುರೀಣ ಟಿ. ಪ್ರಕಾಶಂ ಅವರು ಹೈದರಾಬಾದಿನಲ್ಲಿ ನಿಧನರಾದರು.
1941: ಜರ್ಮನ್ ಸಮರನೌಕೆ ಬಿಸ್ಮಾರ್ಕ್ ಉತ್ತರ ಅಟ್ಲಾಂಟಿಕ್ ಸಾಗರದಲ್ಲಿ ಗ್ರೀನ್ ಲ್ಯಾಂಡ್ ಕರಾವಳಿ ಸಮೀಪ ಬ್ರಿಟಿಷರ ಎಚ್ ಎಂ ಎಸ್ ಹೂಡ್ ನೌಕೆಯನ್ನು ಮುಳುಗಿಸಿತು. ನೌಕೆಯಲ್ಲಿದ್ದ 1421 ಮಂದಿಯ ಪೈಕಿ ಕೇವಲ 3 ಮಂದಿಯನ್ನು ರಕ್ಷಿಸಲು ಸಾಧ್ಯವಾಯಿತು.
1819: ರಾಣಿ ವಿಕ್ಟೋರಿಯಾ ಜನ್ಮದಿನ. ವಿಕ್ಟೋರಿಯಾ (1819-1901) ಇಂಗ್ಲೆಂಡಿನ ಅತ್ಯಂತ ದೀರ್ಘ ಅವಧಿಯ ರಾಣಿ ಎಂಬುದಾಗಿ ಖ್ಯಾತಿ ಪಡೆದ ವ್ಯಕ್ತಿ.
1844: ಸ್ಯಾಮ್ಯುಯೆಲ್ ಮೋರ್ಸ್, ಬಾಲ್ಟಿಮೋರಿನಿಂದ ವಾಷಿಂಗ್ಟನ್ನಿಗೆ ಟೆಲಿಗ್ರಾಫ್ ಸಂದೇಶವನ್ನು ಕಳುಹಿಸುವ ಮೂಲಕ ಅಮೆರಿಕದ ಮೊತ್ತ ಮೊದಲ ಟೆಲಿಗ್ರಾಫ್ ಲೈನ್ ಉದ್ಘಾಟಿಸಿದ.
1686: ಡೇನಿಯಲ್ ಗ್ಯಾಬ್ರಿಯಲ್ ಫ್ಯಾರನ್ ಹೀಟ್ (1686-1736) ಜನ್ಮದಿನ. ಜರ್ಮನಿಯ ವೈದ್ಯನಾದ ಈತ ಆಲ್ಕೋಹಾಲ್ ಥರ್ಮಾಮೀಟರ್, ಮರ್ಕ್ಯುರಿ ಥರ್ಮಾಮೀಟರ್ ಹಾಗೂ ಉಷ್ಣಮಾಪಕವನ್ನು ಸಂಶೋಧಿಸಿದ. ಈತ ಸಂಶೋಧಿಸಿದ ಉಷ್ಣಮಾಪಕಕ್ಕೆ ಈತನ ಹೆಸರನ್ನೇ ಇಟ್ಟು ಗೌರವಿಸಲಾಯಿತು.
(ಸಂಗ್ರಹ: ನೆತ್ರಕೆರೆ ಉದಯಶಂಕರ)
No comments:
Post a Comment