My Blog List

Sunday, June 14, 2009

ಇಂದಿನ ಇತಿಹಾಸ History Today ಜೂನ್ 08

ಇಂದಿನ ಇತಿಹಾಸ

ಜೂನ್ 08

ನಗಾರಿಯ ಸದ್ದು ಹಾಗೂ ವೇದ ಮಂತ್ರ ಘೋಷಗಳ ಮಧ್ಯೆ ಬ್ರಿಟನ್ನ ಪ್ರಪ್ರಥಮ ಹಿಂದೂ ಶಾಲೆಗೆ ಉತ್ತರ ಲಂಡನ್ನಿನ ಹ್ಯಾರೋದಲ್ಲಿ ಭೂಮಿಪೂಜೆ ನೆರವೇರಿ ಸಲಾಯಿತು.`ಕೃಷ್ಣ-ಅವಂತಿ' ಹೆಸರಿನ ಈ ಪ್ರಾಥಮಿಕ ಶಾಲೆಯಲ್ಲಿ ಯೋಗ ಹಾಗೂ ಸಂಸ್ಕೃತ ಪಾಠ ಕಲಿಸಲಾಗುತ್ತದೆ.

2008: ನಗಾರಿಯ ಸದ್ದು ಹಾಗೂ ವೇದ ಮಂತ್ರ ಘೋಷಗಳ ಮಧ್ಯೆ ಬ್ರಿಟನ್ನ ಪ್ರಪ್ರಥಮ ಹಿಂದೂ ಶಾಲೆಗೆ ಉತ್ತರ ಲಂಡನ್ನಿನ ಹ್ಯಾರೋದಲ್ಲಿ ಭೂಮಿಪೂಜೆ ನೆರವೇರಿಸಲಾಯಿತು.`ಕೃಷ್ಣ-ಅವಂತಿ' ಹೆಸರಿನ ಈ ಪ್ರಾಥಮಿಕ ಶಾಲೆಯಲ್ಲಿ ಯೋಗ ಹಾಗೂ ಸಂಸ್ಕೃತ ಪಾಠ ಕಲಿಸಲಾಗುತ್ತದೆ. ಕಟ್ಟುನಿಟ್ಟಾಗಿ ಸಸ್ಯಾಹಾರಿ ನಿಯಮವನ್ನು ಜಾರಿಗೆ ತರಲು ಇಲ್ಲಿ ತರಕಾರಿಯನ್ನೂ ಬೆಳೆಯಲಾಗುತ್ತದೆ.

2007: `ಏರಿಯಾನ್-5' ರಾಕೆಟ್ ಮೂಲಕ ಹಾರಿಬಿಡಲಾದ ಉಪಗ್ರಹ ಅಪ್ಪಟ ದೇಶೀ ತಂತ್ರಜ್ಞಾನದ ಇನ್ಸಾಟ್ 4 ಬಿ ಉಪಗ್ರಹವನ್ನು ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಹಾಸನದ ಎಂ.ಸಿ.ಎಫ್. ಆವರಣದಲ್ಲಿ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ದೇಶಕ್ಕೆ ಅರ್ಪಿಸಿದರು. ಇನ್ಸಾಟ್-4 ಬಿ ಉಪಗ್ರಹವು ಒಟ್ಟು 12 ಟ್ರಾನ್ಸ್ ಪಾಂಡರ್ ಮತ್ತು 12 ಕೆಯು ಬ್ಯಾಂಡುಗಳನ್ನು ಒಳಗೊಂಡಿದೆ. ದೇಶದ ದೂರಸಂಪರ್ಕ, ಡಿಟಿಎಚ್, ಟೆಲಿ ಎಜುಕೇಷನ್, ಟೆಲಿ ಮೆಡಿಸಿನ್ ಮೊದಲಾದ 10 ಕಾರ್ಯಕ್ರಮಗಳಿಗೆ ಇದರಂದ ಪ್ರಯೋಜನವಾಗುವುದು.

2007: ದೇಶದ ಪ್ರತಿಷ್ಠಿತ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ `ಇಸ್ರೋ' ಹೆಸರಿನಲ್ಲಿ ಬಾಹ್ಯಾಕಾಶ ವಿಜ್ಞಾನಿ ಯು.ಆರ್. ರಾವ್ ಅವರಿಗೆ `ಜೀವಮಾನದ ಸಾಧನೆ' ಪ್ರಶಸ್ತಿಯನ್ನು ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಪ್ರದಾನ ಮಾಡಿದರು.

2007: ಮನೋಹರ ಪಾರಿಕ್ಕರ್ ನೇತೃತ್ವದ ಬಿಜೆಪಿ ಸರ್ಕಾರವನ್ನು 2005ರಲ್ಲಿ ಪದಚ್ಯುತಿಗೊಳಿಸಲು ಪ್ರಮುಖ ಪಾತ್ರ ವಹಿಸಿ ನಂತರ ಕಾಂಗ್ರೆಸ್ಸಿಗೆ ಸೇರ್ಪಡೆಯಾಗಿದ್ದ ದಿಗಂಬರ ಕಾಮತ್ ಅವರು ಗೋವಾದ 19ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು.

2007: ಬಾರಾಬಂಕಿ ಜಿಲ್ಲೆಯಲ್ಲಿ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರ ಹೆಸರಿನಲ್ಲಿದ್ದ ಕೃಷಿ ಭೂಮಿಯನ್ನು ರದ್ದು ಪಡಿಸಿರುವ ವಿಭಾಗಾಧಿಕಾರಿ ನ್ಯಾಯಾಲಯದ ಆದೇಶಕ್ಕೆ ಅಲಹಾಬಾದ್ ಹೈಕೋರ್ಟಿನ ಲಖನೌ ಪೀಠವು ತಡೆಯಾಜ್ಞೆ ನೀಡಿತು.

2007: ಅಧಿಸೂಚಿತ ಧಾರ್ಮಿಕ ಪ್ರದೇಶದ ವ್ಯಾಪ್ತಿಯಲ್ಲಿ ಅನ್ಯಧರ್ಮದ ಪ್ರಚಾರ ನಿಷೇಧಿಸುವ ಸುಗ್ರೀವಾಜ್ಞೆಯನ್ನು ಆಂಧ್ರಪ್ರದೇಶ ಸರ್ಕಾರ ಹೊರಡಿಸಿತು. ಈ ಸುಗ್ರೀವಾಜ್ಞೆ ತಿರುಪತಿಗೂ ಅನ್ವಯಿಸುವುದು. ತಿರುಪತಿ, ತಿರುಮಲೆ ಪ್ರದೇಶದಲ್ಲಿ ಹಿಂದೂಗಳು ಹೊರತು ಪಡಿಸಿ ಬೇರೆ ಯಾವುದೇ ಧರ್ಮದವರು ಧಾರ್ಮಿಕ ಪ್ರಚಾರ ಮಾಡುವುದನ್ನು ಈ ಸುಗ್ರೀವಾಜ್ಞೆಯು ನಿಷೇಧಿಸುತ್ತದೆ. ಕ್ರೈಸ್ತರ ಮತ ಪ್ರಚಾರದ ಹಿನ್ನೆಲೆಯಲ್ಲಿ ಈ ಸುಗ್ರೀವಾಜ್ಞೆ ಭಾರಿ ಮಹತ್ವ ಪಡೆಯಿತು.

2007: ವಿಶ್ವಸಂಸ್ಥೆಯ 10 ಕೋಟಿ ಡಾಲರ್ ಮೊತ್ತದ ಗುತ್ತಿಗೆ ವ್ಯವಹಾರವನ್ನು ತಮ್ಮ ಸ್ನೇಹಿತನ ಕಂಪೆನಿಗೆ ದೊರಕಿಸಿಕೊಡಲು ಲಂಚ ಪಡೆದು ಪ್ರಭಾವ ಬೀರಿದ ಭಾರತೀಯ ಮೂಲದ ವಿಶ್ವಸಂಸ್ಥೆ ಮಾಜಿ ಅಧಿಕಾರಿ ಸಂಜಯ ಬಹೆಲ್ ಅವರಿಗೆ ಅಮೆರಿಕದ ನ್ಯಾಯಾಲಯವೊಂದು 30 ವರ್ಷಗಳ ಸೆರೆವಾಸ ವಿಧಿಸಿತು.

2007: ಇಂದೋರಿನ ಖ್ಯಾತ ಪ್ರಸೂತಿ ಹಾಗೂ ಉದರ ದರ್ಶಕ ತಜ್ಞೆ ಅರ್ಚನಾ ಬಾಸೆರ್ ಅವರು ಮಹಿಳೆಯೊಬ್ಬಳ ದೇಹದಿಂದ 10 ಕಿ.ಗ್ರಾಂ.ಗೂ ಹೆಚ್ಚು ಭಾರವಿದ್ದ ಗಡ್ಡೆಯನ್ನು ತೆಗೆದು ಗಿನ್ನೆಸ್ ದಾಖಲೆಗೆ ಸೇರ್ಪಡೆಯಾದರು. ಗಿನ್ನೆಸ್ ವಿಶ್ವದಾಖಲೆಗಳ ಪುಸ್ತಕವು ಈ ಬಗ್ಗೆ ಪ್ರಮಾಣ ಪತ್ರ ನೀಡಿತು.

2006: ಸೂಪರ್ ಸಾನಿಕ್ ಯುದ್ಧ ವಿಮಾನ ಸುಖೋಯ್-30 ಎಂಕೆಐಯನ್ನು ಗಗನದಲ್ಲಿ ಹಾರಿಸುವ ಮೂಲಕ ಕೇವಲ ಹಾರುವುದಷ್ಟೇ ಅಲ್ಲ, ಪೈಲಟ್ ಆಗಿ ಅದನ್ನು ನಡೆಸಿದ ಭಾರತದ ಪ್ರಪ್ರಥಮ ರಾಷ್ಟ್ರಪತಿ ಎಂಬ ಹೆಗ್ಗಳಿಕೆಗೆ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಭಾಜನರಾದರು. ಜಲಾಂತರ್ಗಾಮಿಯಲ್ಲಿ ಪಯಣಿಸಿದ ಹಾಗೂ ಅತೀ ಎತ್ತರದಲ್ಲಿರುವ ಸಿಯಾಚಿನ್ನಿಗೆ ತೆರಳಿ ಸೈನಿಕರ ಜೊತೆಗೆ ಮಾತನಾಡಿದ ಮೊದಲ ರಾಷ್ಟ್ರಪತಿ ಎಂಬ ಹೆಗ್ಗಳಿಕೆ ಈಗಾಗಲೇ ಅವರಿಗೆ ಇತ್ತು. 75 ವರ್ಷ ವಯಸ್ಸಿನ ರಾಷ್ಟ್ರಪತಿ ಕಲಾಂ ಗಂಟೆಗೆ 1500 ಕಿ.ಮೀ. ವೇಗದಲ್ಲಿ 40 ನಿಮಿಷಗಳ ಕಾಲ ಸಮರ ವಿಮಾನದ ಹಾರಾಟ ನಡೆಸಿದರು.

2006: ಇರಾಕಿನಲ್ಲಿ ಹಲವು ಆತ್ಮಹತ್ಯಾ ದಾಳಿ ನಡೆಸಿ ರಕ್ತ ಸಿಕ್ತ ಅಧ್ಯಾಯಕ್ಕೆ ಕಾರಣನಾಗಿದ್ದ ಅಲ್ ಖೈದಾ ಬೆಂಬಲಿತ ಉಗ್ರಗಾಮಿ ಅಬು ಮಸಬ್ ಅಲ್ ಜರ್ಕಾವಿಯನ್ನು ಅಮೆರಿಕ ಮತ್ತು ಇರಾಕ್ ಜಂಟಿ ಕಾರ್ಯಾಚರಣೆಯಲ್ಲಿ ಹತ್ಯೆಗೈದವು.

2001: ಬ್ರಿಟಿಷ್ ಪ್ರಧಾನಿ ಟೋನಿ ಬ್ಲೇರ್ ದಾಖಲೆ ಮತಗಳ ಅಂತರದೊಂದಿಗೆ ಗೆದ್ದು ಎರಡನೇ ಅವಧಿಗೆ ಅಧಿಕಾರಕ್ಕೆ ಬಂದರು.

1999: ಲಿಯಾಂಡರ್ ಪೇಸ್ ಮತ್ತು ಮಹೇಶ ಭೂಪತಿ ಅವರದ್ದು ಜಗತ್ತಿನಲ್ಲಿ ನಂಬರ್ 1 ಡಬಲ್ಸ್ ಟೀಮ್ ಎಂಬುದಾಗಿ ಎಟಿಪಿ (ಅಸೋಸಿಯೇಶನ್ ಆಫ್ ಟೆನಿಸ್ ಪ್ರೊಫೆಷನಲ್ಸ್) ಪ್ರಕಟಿಸಿತು.

1968: ಕರ್ನಾಟಕ ಘರಾಣಾದ ಖ್ಯಾತ ಗಾಯಕ ಮಧುರೆ ಮಣಿ ಅಯ್ಯರ್ ನಿಧನರಾದರು.

1957: ಅಮೆರಿಕದ ಕಾರ್ಟೂನಿಸ್ಟ್ ಸ್ಕಾಟ್ ಕಾರ್ಟೂನಿಸ್ಟ್ ಸ್ಕಾಟ್ ಆಡಮ್ಸ್ ಜನ್ಮದಿನ. `ಡಿಲ್ ಬರ್ಟ್' ಎಂಬ ಕಾರ್ಟೂನ್ ಸ್ಟ್ರಿಪ್ ಮೂಲಕ ಇವರು ಖ್ಯಾತರಾಗಿದ್ದಾರೆ.

1955: ಟಿಮ್ ಬೆರ್ನರ್ಸ್ ಲೀ ಜನ್ಮದಿನ. ಇವರು ಈಗ ಡಬ್ಲ್ಯುಡಬ್ಲ್ಯುಡಬ್ಲ್ಯು ಎಂದು ಪರಿಚಿತವಾಗಿರುವ `ವರ್ಲ್ಡ್ ವೈಡ್ ವೆಬ್' ನ್ನು ವಿನ್ಯಾಸ ಮಾಡಿದ ವ್ಯಕ್ತಿ. ಈತನಿಗೆ ಈಚೆಗೆ `ಮಿಲೆನಿಯಂ ಪ್ರಶಸ್ತಿ' ಲಭಿಸಿದೆ.

1948: ಏರ್ ಇಂಡಿಯಾದ `ಮಲಬಾರ್ ಪ್ರಿನ್ಸೆಸ್' ಹೆಸರಿನ ಅಂತಾರಾಷ್ಟ್ರೀಯ ವಿಮಾನ ಮೊದಲ ಬಾರಿಗೆ ಮುಂಬೈ ವಿಮಾನ ನಿಲ್ದಾಣದಿಂದ ಹೊರಟಿತು. ಕೈರೋ ಮತ್ತು ಜಿನೀವಾ ಮೂಲಕ ಲಂಡನ್ನಿಗೆ ಹೋಗುತ್ತಿದ್ದ ಈ ವಿಮಾನ ವಾರಕ್ಕೊಮ್ಮೆ ಹಾರಾಟ ನಡೆಸುತ್ತಿತ್ತು.

1946: ರವೀಂದ್ರ ಕರ್ಜಗಿ ಜನನ.

1943: ಸಾಹಿತಿ ವಿಷ್ಣುಮೂರ್ತಿ ಜನನ.

1938: ಸಾಹಿತಿ ದಯಾನಂದ ತೊರ್ಕೆ ಜನನ.

1936: ಇಂಡಿಯನ್ ಸ್ಟೇಟ್ ಬ್ರಾಡ್ ಕಾಸ್ಟಿಂಗ್ ಸರ್ವೀಸ್ ತನ್ನ ಹೆಸರನ್ನು `ಆಲ್ ಇಂಡಿಯಾ ರೇಡಿಯೋ' ಎಂಬುದಾಗಿ ಬದಲಾಯಿಸಿತು.

1918: ತಂದೆ ಬರೆದ ಕಾವ್ಯಗಳಿಗೆ ದೃಶ್ಯ ರೂಪ ನೀಡಿದ ಕಲಾವಿದ ಎಸ್. ಶ್ರೀಕಂಠ ಶಾಸ್ತ್ರಿ ಅವರು ಕುಕ್ಕೆ ಸುಬ್ರಹ್ಮಣ್ಯ ಶಾಸ್ತ್ರಿಗಳು - ಸಂಕಮ್ಮ ದಂಪತಿಯ ಮಗನಾಗಿ ಶಿವಮೊಗ್ಗದಲ್ಲಿ ಜನಿಸಿದರು.

1915: ಸಾಹಿತಿ ಕಯ್ಯಾರ ಕಿಂಞಣ್ಣ ರೈ ಜನನ.

1902: ಸಂಶೋಧಕ, ಛಂದಸ್ಸು, ನಿಘಂಟು ಕ್ಷೇತ್ರದ ವಿದ್ವಾಂಸ ಸೇಡಿಯಾಪು ಕೃಷ್ಣಭಟ್ಟ ಅವರು ರಾಮಭಟ್ಟ- ಮೂಕಾಂಬಿಕೆ ದಂಪತಿಯ ಪುತ್ರನಾಗಿ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲ್ಲೂಕಿನ ಸೇಡಿಯಾಪು ಗ್ರಾಮದಲ್ಲಿ ಜನಿಸಿದರು.

1625: ಗಿಯಾನ್ ಡೊಮಿನಿಕೊ ಕ್ಯಾಸಿನಿ (1625-1712) ಜನ್ಮದಿನ. ಇಟಲಿ ಸಂಜಾತ ಫ್ರೆಂಚ್ ಖಗೋಳತಜ್ಞನಾದ ಈತ ಶನಿಗ್ರಹದ `ಎ' ಮತ್ತು `ಬಿ' ಬಳೆಗಳ ಮಧ್ಯೆ ಭಾರೀ ಪ್ರಮಾಣದಲ್ಲಿ ಕಪ್ಪು ಬಳೆಗಳು ಇರುವುದು ಸೇರಿದಂತೆ ಅನೇಕ ಖಗೋಳ ಸಂಶೋಧನೆಗಳನ್ನು ನಡೆಸಿದ ವ್ಯಕ್ತಿ. ಕ್ಯಾಸಿನಿ ಹೆಸರಿನ ನೌಕೆಯೊಂದು ಈಗ ಶನಿಯ ಒಂದು ಉಪಗ್ರಹ `ಟೈಟಾನ್' ನನ್ನು ಸುತ್ತುತ್ತಿದೆ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement