ಇಂದಿನ ಇತಿಹಾಸ
ಮೇ 31
ಭಾರತೀಯ ಮೂಲದ 8ನೇ ಗ್ರೇಡ್ ವಿದ್ಯಾರ್ಥಿ ಸಮೀರ್ ಮಿಶ್ರಾ ಅವರು `ಗೆರ್ಡಾನ್' ಪದವನ್ನು ಸರಿಯಾಗಿ ಉಚ್ಚಾರ ಮಾಡಿ, ಅದರ ಸ್ಪೆಲ್ಲಿಂಗ್ ಹೇಳುವ ಮೂಲಕ ಸ್ಕ್ರಿಪ್ಸ್ ನ್ಯಾಷನಲ್ ಸ್ಪೆಲ್ಲಿಂಗ್ ಬೀ ಸ್ಪರ್ಧೆಯನ್ನು ಗೆದ್ದುಕೊಂಡರು. 8ರಿಂದ 15ರ ವಯಸ್ಸಿನ ಒಟ್ಟು 288 ಮಂದಿ ಸ್ಪರ್ಧಿಸಿದ್ದರು. ಅಂತಿಮ 12 ಮಂದಿಯಲ್ಲಿ 4 ಮಂದಿ ಭಾರತೀಯರೇ ಆಗಿದ್ದರು.
2008: ಅಧಿವೇಶನದ ಆರಂಭದಲ್ಲೇ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡುವ ಸಂಪ್ರದಾಯಕ್ಕೆ ಬದಲಾಗಿ ಸರ್ಕಾರವು ಬಹುಮತ ಸಾಬೀತು ಪಡಿಸಿದ ಬಳಿಕ ಅಧಿವೇಶನವನ್ನು ಉದ್ದೇಶಿಸಿ ಮಾತನಾಡುವುದಾಗಿ ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ತಿಳಿಸಿದರು.
2008: ಪಾಕಿಸ್ಥಾನದ ಮಾನವ ಹಕ್ಕುಗಳ ಮಾಜಿ ಸಚಿವ ಅನ್ಸರ್ ಬರ್ನೆ ಅವರನ್ನು ಭಾರತಕ್ಕೆ ಆಗಮಿಸಿದ ಕೆಲವೇ ಕ್ಷಣಗಳಲ್ಲಿ ದುಬೈಗೆ ಗಡೀಪಾರು ಮಾಡಿದ ಘಟನೆ ಈದಿನ ರಾತ್ರಿ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆಯಿತು. ಕೇಂದ್ರ ಗೃಹ ಸಚಿವಾಲಯದ ಉನ್ನತ ಅಧಿಕಾರಿಗಳಿಂದ ಬಂದ ಆದೇಶದ ಮೇರೆಗೆ ಬರ್ನೆ ಅವರನ್ನು ಗಡೀಪಾರು ಮಾಡಲಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ವಿವರಿಸಿದರು. ಆದರೆ ಬರ್ನೆ ಆಗಮನ ಕುರಿತು ವಿದೇಶಾಂಗ ಸಚಿವಾಲಯಕ್ಕೆ ಯಾವುದೇ ಮಾಹಿತಿ ಇರಲಿಲ್ಲ. ಬರ್ನೆ ಗಡೀಪಾರಿನ ಕುರಿತು ವರದಿ ನೀಡಬೇಕೆಂದು ಅದು ಗೃಹ ಸಚಿವಾಲಯಕ್ಕೆ ವಿದೇಶಾಂಗ ಸಚಿವಾಲಯ ಸೂಚಿಸಿತು. ಕಾಶ್ಮೀರ್ ಸಿಂಗ್ ಬಿಡುಗಡೆ ಹಾಗೂ ಸರಬ್ಜಿತ್ ಸಿಂಗ್ ಗಲ್ಲು ಶಿಕ್ಷೆ ಮುಂದೂಡುವಿಕೆಯಲ್ಲಿ ಬರ್ನೆ ಮಹತ್ವದ ಪಾತ್ರ ವಹಿಸಿದ್ದರು. ಕೇಂದ್ರ ಸರ್ಕಾರ ಈ ಘಟನೆಗೆ ವಿಷಾದ ವ್ಯಕ್ತಪಡಿಸಿ, ಬರ್ನೆ ಅವರು ಭಾರತಕ್ಕೆ ಯಾವಾಗ ಬೇಕಾದರೂ ಬರಬಹುದು ಎಂದು ಹೇಳಿತು.
2008: ಕೇರಳಕ್ಕೆ ಮುಂಗಾರು ಪ್ರವೇಶಿಸಿತು. ನಿರೀಕ್ಷಿತ ನೈರುತ್ಯ ಮಾರುತದ ಅಬ್ಬರದೊಂದಿಗೆ ಕೇರಳದ ಬಹುತೇಕ ಕಡೆ ಭಾರಿ ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ತಿಳಿಸಿತು.
2008: ನೂತನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸಚಿವಾಲಯಕ್ಕೆ ಮೂವರು ಹಿರಿಯ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿತು. ಸಾರಿಗೆ ಇಲಾಖೆ ಆಯುಕ್ತ ಎಂ.ಲಕ್ಷ್ಮೀ ನಾರಾಯಣ ಅವರನ್ನು ಮುಖ್ಯಮಂತ್ರಿ ಗಳ ಕಾರ್ಯದರ್ಶಿಯಾಗಿ, ವಿಜಾಪುರ ಜಿಲ್ಲಾಧಿಕಾರಿ ಬಿ.ಜಿ.ನಂದಕುಮಾರ್ ಅವರನ್ನು ಮುಖ್ಯಮಂತ್ರಿಗಳ ಉಪ ಕಾರ್ಯದರ್ಶಿ, ವಾಣಿಜ್ಯ ತೆರಿಗೆ ಇಲಾಖೆಯ ಜಂಟಿ ಆಯುಕ್ತ ದಯಾಶಂಕರ ಅವರನ್ನು ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿಯಾಗಿ ನಿಯೋಜನೆ ಮಾಡಲಾಯಿತು. ಕೆಎಎಸ್ ಅಧಿಕಾರಿ ಬಿ.ಎನ್. ಕೃಷ್ಣಯ್ಯ ಅವರನ್ನು ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯ ಅಧಿಕಾರಿಯಾಗಿ ನೇಮಕ ಮಾಡಲಾಯಿತು.
2008: ಬೆಂಗಳೂರಿನಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಹಲವು ಬಡಾವಣೆಗಳಲ್ಲಿ ಮನೆಗಳಿಗೆ ನೀರು ನುಗ್ಗಿ, ವಿದ್ಯುತ್ ಕಂಬ ನೆಲಕ್ಕುರುಳಿ ಜನ ಜೀವನ ಅಸ್ತವ್ಯಸ್ತವಾಯಿತು.
2008: ಭಾರತೀಯ ಮೂಲದ 8ನೇ ಗ್ರೇಡ್ ವಿದ್ಯಾರ್ಥಿ ಸಮೀರ್ ಮಿಶ್ರಾ ಅವರು `ಗೆರ್ಡಾನ್' ಪದವನ್ನು ಸರಿಯಾಗಿ ಉಚ್ಚಾರ ಮಾಡಿ, ಅದರ ಸ್ಪೆಲ್ಲಿಂಗ್ ಹೇಳುವ ಮೂಲಕ ಸ್ಕ್ರಿಪ್ಸ್ ನ್ಯಾಷನಲ್ ಸ್ಪೆಲ್ಲಿಂಗ್ ಬೀ ಸ್ಪರ್ಧೆಯನ್ನು ಗೆದ್ದುಕೊಂಡರು. 8ರಿಂದ 15ರ ವಯಸ್ಸಿನ ಒಟ್ಟು 288 ಮಂದಿ ಸ್ಪರ್ಧಿಸಿದ್ದರು. ಅಂತಿಮ 12 ಮಂದಿಯಲ್ಲಿ 4 ಮಂದಿ ಭಾರತೀಯರೇ ಆಗಿದ್ದರು. 2ನೇ ಸ್ಥಾನವನ್ನು ಮತ್ತೊಬ್ಬ ಭಾರತೀಯ ಮೂಲದ ವಿದ್ಯಾರ್ಥಿ ಸಿದ್ಧಾರ್ಥ ಚಂದ್ ಪಡೆದರು. ಬಹುಮಾನ ರೂಪದಲ್ಲಿ ಮಿಶ್ರಾಗೆ 30 ಸಾವಿರ ಡಾಲರ್ ನಗದು ಲಭಿಸಿತು. 2005ರಲ್ಲಿ ಅನುರಾಗ್ ಕಾಶ್ಯಪ್ ಎಂಬ ವಿದ್ಯಾರ್ಥಿ `ಅಪೋಜಿತುರಾ' ಎಂಬ ಪದವನ್ನು ಸರಿಯಾಗಿ ಉಚ್ಚರಿಸಿ ಸ್ಪೆಲ್ಲಿಂಗ್ ಹೇಳಿ ಇದೇ ಪ್ರಶಸ್ತಿ ಗೆದ್ದಿದ್ದರು.
2008: ಇಥಿಯೋಪಿಯಾದ ಪೂರ್ವ ಭಾಗದಲ್ಲಿ ಸಂಭವಿಸಿದ ಹಠಾತ್ ಪ್ರವಾಹಕ್ಕೆ ಸಿಕ್ಕಿ 25 ಮಂದಿ ಮೃತರಾದರು. ವೇಬ್ ಮತ್ತು ಶೆಬೆಲ್ ನದಿಗಳು ಉಕ್ಕಿ ಹರಿದುದರಿಂದ ಜಿಜಿಗಾದಲ್ಲಿ ಈ ಸಾವು ಸಂಭವಿಸಿತು.
2008: ಪೆರುವಿನಲ್ಲಿ 1980-2000 ಅವಧಿಯಲ್ಲಿ ನಡೆದ ಆಂತರಿಕ ಯುದ್ಧದ ಸಂದರ್ಭದಲ್ಲಿ 100 ಮಕ್ಕಳನ್ನು ಗುಂಡಿಟ್ಟು ಕೊಂದು ಸಾಮೂಹಿಕವಾಗಿ ಹೂತ ಸ್ಥಳವೊಂದು ಅಯಾಕುಚೋ ಪ್ರಾಂತ್ಯದ ಪುಟಿಸ್ ಗುಡ್ಡಗಾಡು ಪ್ರದೇಶದಲ್ಲಿ ಪತ್ತೆಯಾಯಿತು. 1984ರಲ್ಲಿ ನೂರಾರು ಜನರನ್ನು ಕೊಂದ ಬಳಿಕ ಜನರು ಈ ಪ್ರದೇಶ ತೊರೆದಿದ್ದರು.
2008: ಮ್ಯಾನ್ಮಾರಿನ ಈಶಾನ್ಯ ಭಾಗದಲ್ಲಿ ಜನಾಂಗೀಯ ಶಾನ್ ಬಂಡುಕೋರರು ಗಿರಣಿಗೆ ಬೆಂಕಿ ಹಚ್ಚಿ ಎಂಟು ಜನರನ್ನು ಕೊಂದರು.
2008: ನೇಪಾಳದ ಸಿಂಹಾಸನವನ್ನು `ಶಾಂತಿಯುತ' ರೀತಿಯಲ್ಲಿ ತೊರೆಯಲು ದೊರೆ ಜ್ಞಾನೇಂದ್ರ ಸಮ್ಮತಿಸಿದ್ದರೂ, ತಮಗೆ, ತಮ್ಮ ಕುಟುಂಬಕ್ಕೆ ಸೂಕ್ತ ವಸತಿ ಮತ್ತು ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ. ಸಂವಿಧಾನ ರಚನಾ ಸಭೆಯ ಐತಿಹಾಸಿಕ ನಿರ್ಧಾರವನ್ನು ಗೌರವಿಸಲು ಮತ್ತು ಶಾಂತಿಯುತವಾಗಿ ಸಿಂಹಾಸನ ತೊರೆಯಲು ದೊರೆ ಒಪ್ಪಿದ್ದಾರೆ ಎಂದು ನಾರಾಯಣಹಿತಿ ಅರಮನೆಯನ್ನು ನೋಡಿಕೊಳ್ಳುವ ಕಾರ್ಯದರ್ಶಿ ಪ್ರದೀಪ್ ಆರ್ಯಾಲ್ ತಿಳಿಸಿದರು. ಸರ್ಕಾರವು ದೊರೆಗೆ ಔಪಚಾರಿಕ ಪತ್ರ ಕಳುಹಿಸಿ, 15 ದಿನಗಳ ಒಳಗೆ ಅರಮನೆ ತೊರೆಯಲು ಕೇಳಿಕೊಂಡಿತ್ತು. ಮೇ 28ರಂದು ಸಂವಿಧಾನ ರಚನಾ ಸಭೆಯು 240 ವರ್ಷಗಳ ಕಾಲದ ರಾಜಮನೆತನವನ್ನು ಕೊನೆಗೊಳಿಸುವ ಐತಿಹಾಸಿಕ ನಿರ್ಧಾರ ಕೈಗೊಂಡಿತ್ತು. ಈ ಮಧ್ಯೆ, ದೊರೆ ಜ್ಞಾನೇಂದ್ರ ಅವರು ಅರಮನೆ ತೊರೆದಿದ್ದಾರೆ ಎಂಬ ವದಂತಿಗಳನ್ನು ಗೃಹ ಸಚಿವ ಕೃಷ್ಣ ಪ್ರಸಾದ್ ಸಿತೂಲಾ ಅವರು ಅಲ್ಲಗಳೆದರು.
2008: ಪೆರು ಗಡಿಯ ಸಮೀಪದ ಬ್ರೆಜಿಲಿನ ಅಮೆಜಾನ್ ಪ್ರದೇಶದಲ್ಲಿ ಇದುವರೆಗೆ ಯಾರ ಸಂಪರ್ಕಕ್ಕೂ ಬಾರದ `ಇಂಡಿಯನ್' ಬುಡಕಟ್ಟು ಜನಾಂಗವೊಂದು ಪತ್ತೆಯಾಗಿದೆ ಎಂದು `ಫುನೈ' ಹೆಸರಿನ ಸರ್ಕಾರಿ ಪ್ರತಿಷ್ಠಾನ ಹೇಳಿತು.
2008: ಆಸ್ಟ್ರೇಲಿಯಾ ತಂಡದ ನಾಯಕ ರಿಕಿ ಪಾಂಟಿಂಗ್ ಅವರು ಟೆಸ್ಟ್ ಕ್ರಿಕೆಟ್ಟಿನಲ್ಲಿ 10 ಸಾವಿರ ರನ್ ಪೂರೈಸಿದ ಸಾಧನೆ ತಮ್ಮದಾಗಿಸಿದರು. ವೆಸ್ಟ್ ಇಂಡೀಸ್ ವಿರುದ್ಧ ಅಂಟಿಗುವಾದಲ್ಲಿ ಆರಂಭವಾದ ಎರಡನೇ ಕ್ರಿಕೆಟ್ ಟೆಸ್ಟ್ ಪಂದ್ಯದ ಮೊದಲ ದಿನ 61 ರನ್ ಗಳಿಸಿದ ಸಂದರ್ಭ ಅವರು ಈ ಮೈಲಿಗಲ್ಲು ನೆಟ್ಟರು. 33 ರ ಹರೆಯದ ಪಾಂಟಿಂಗ್ ಈ ಸಾಧನೆ ಮಾಡುತ್ತಿದ್ದಂತೆಯೇ ತಮ್ಮ ಬ್ಯಾಟ್ ಮೇಲೆತ್ತಿ ಸಂಭ್ರಮಿಸಿದರು. ಈ ವೇಳೆ ಬ್ಯಾಟಿಂಗ್ ಮಾಡುತ್ತಿದ್ದ ಸಹ ಆಟಗಾರ ಕಾಟಿಚ್ ಪಾಂಟಿಂಗ್ ಅವರನ್ನು ಅಭಿನಂದಿಸಿದರು. ಟೆಸ್ಟ್ ಕ್ರಿಕೆಟ್ಟಿನಲ್ಲಿ 10 ಸಾವಿರ ರನ್ ಪೂರೈಸಿದ ವಿಶ್ವದ ಏಳನೇ ಮತ್ತು ಆಸ್ಟ್ರೇಲಿಯಾದ ಮೂರನೇ ಬ್ಯಾಟ್ಸ್ ಮನ್ ಎಂಬ ಗೌರವಕ್ಕೆ ಪಾಂಟಿಂಗ್ ಪಾತ್ರರಾದರು. ಈ ಸಾಧನೆ ಮಾಡಿದ ಆಸ್ಟ್ರೇಲಿಯಾದ ಇತರ ಇಬ್ಬರೆಂದರೆ ಸ್ಟೀವ್ ವಾ ಮತ್ತು ಅಲನ್ ಬಾರ್ಡರ್. ಪಾಂಟಿಂಗ್ ತಮ್ಮ 118ನೇ ಟೆಸ್ಟ್ ಪಂದ್ಯದಲ್ಲಿ ಈ ಸಾಧನೆ ಮಾಡಿದರು. ಬ್ರಯನ್ ಲಾರಾ (111 ಟೆಸ್ಟ್) ಬಳಿಕ ಅತಿ ಕಡಿಮೆ ಪಂದ್ಯಗಳಲ್ಲಿ ಈ ಸಾಧನೆ ಮಾಡಿದ ಬ್ಯಾಟ್ಸ್ ಮನ್ ಎಂಬ ಗೌರವವನ್ನು ಪಾಂಟಿಂಗ್ ಪಡೆದರು. ಭಾರತದ ಸುನಿಲ್ ಗಾವಸ್ಕರ್, ಸಚಿನ್ ತೆಂಡೂಲ್ಕರ್ ಮತ್ತು ರಾಹುಲ್ ದ್ರಾವಿಡ್ ಅವರು `10 ಸಾವಿರ ರನ್ ಕ್ಲಬ್' ಸೇರಿದ ಇತರ ಬ್ಯಾಟ್ಸ್ ಮನ್ನರು.
2008: ಗಲಾಪಗೋಸ್ ದ್ವೀಪ ಸಮೂಹದಲ್ಲಿ ದೊಡ್ಡದಾದ ಇಸಬೆಲ್ಲಾ ದ್ವೀಪದ ಬೃಹತ್ ಜ್ವಾಲಾಮುಖಿ ಸೆರೋ ಅಝುಲ್ ಲಾವಾರಸ ಹೊರಸೂಸತೊಡಗಿತು. ಈ ಲಾವಾರಸ ಹೊರಸೂಸುವ ಈ ಚಿತ್ರವನ್ನು ಗಲಾಪಗೋಸ್ ರಾಷ್ಟ್ರೀಯ ಉದ್ಯಾನ ಅಧಿಕಾರಿಗಳು ಈದಿನ ಬಿಡುಗಡೆ ಮಾಡಿದರು.
2008: ಪುಣೆಯ ಖಡಕ್ ವಾಸ್ಲಾದಲ್ಲಿ ನಡೆದ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ (ಎನ್ಡಿಎ)ಯ ನಿರ್ಗಮನ ಪಥ ಸಂಚಲನದಲ್ಲಿ ಪಾಲ್ಗೊಂಡ್ದಿದ ಕೇಂದ್ರ ರಕ್ಷಣಾ ಸಚಿವ ಎ.ಕೆ.ಆಂಟನಿ ಅವರು ವೇದಿಕೆಯಲ್ಲೇ ಕಣ್ಣು ಕತ್ತಲೆ ಬಂದು ಕುಸಿದು ಬಿದ್ದು ಮೂರ್ಛೆ ಹೋದ ಪರಿಣಾಮ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು.
2008: ಆಋಷಿ ಕೊಲೆಗೆ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆಸುವಂತೆ ಕೋರಿ ಉತ್ತರ ಪ್ರದೇಶ ಸರ್ಕಾರ ಕಳುಹಿಸಿದ್ದ ಪತ್ರ ಕೇಂದ್ರ ಸರ್ಕಾರಕ್ಕೆ ತಲುಪಿತು. ಸಿಬ್ಬಂದಿ ಸಚಿವಾಲಯ ಈ ಪತ್ರವನ್ನು ಸಿಬಿಐಗೆ ರವಾನಿಸಿದ್ದು, ಜೋಡಿ ಕೊಲೆಯ ಹಿಂದಿನ ರಹಸ್ಯವನ್ನು ಭೇದಿಸುವಂತೆ ತಿಳಿಸಿತ್ತು. ನೋಯ್ಡಾದಲ್ಲಿ ಡಿಪಿಎಸ್ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದ ಆಋಷಿ ತನ್ನ ಮನೆಯಲ್ಲಿ 2008ರ ಮೇ 16ರಂದು ಕೊಲೆಯಾಗಿದ್ದಳು. ಈಕೆಯ ಜೊತೆಗೆ ಅವರ ಮನೆಯ ನೌಕರ ಹೇಮರಾಜನೂ ಕೊಲೆಯಾಗಿದ್ದ.
2008: ಗುರ್ಜರ್ ಚಳವಳಿಯನ್ನು ಸಮರ್ಪಕವಾಗಿ ನಿರ್ವಹಿಸಲಿಲ್ಲ ಎಂಬ ಕಾರಣಕ್ಕೆ ರಾಜಸ್ಥಾನ ಸರ್ಕಾರವು ಪೊಲೀಸ್ ಮಹಾ ನಿರ್ದೇಶಕ ಎ. ಎಸ್. ಗಿಲ್ ಅವರನ್ನು ದೀರ್ಘಕಾಲದ ರಜೆಯ ಮೇಲೆ ತೆರಳುವಂತೆ ಆದೇಶಿಸಿತು. ಭ್ರಷ್ಟಾಚಾರ ನಿಗ್ರಹ ದಳದ ವಿಶೇಷ ಪೊಲೀಸ್ ಮಹಾ ನಿರ್ದೇಶಕ ಕೆ. ಎಸ್. ಬೈನ್ಸ್ ಅವರು ನೂತನ ಡಿಜಿಪಿಯಾಗಿ ಅಧಿಕಾರ ವಹಿಸಿಕೊಂಡರು.
2008: ಸಿಡ್ನಿ ವಿಶ್ವವಿದ್ಯಾಲಯದ ಸಂಶೋಧಕ ಹಾಗೂ ಭಾರತದ ಶ್ರೇಷ್ಠ ಯುವ ವಿಜ್ಞಾನಿ ಪ್ರಶಸ್ತಿ ಪುರಸ್ಕೃತ ಡಾ.ರಾಜಕುಮಾರ ಶಿವಪ್ಪ ರಡ್ಡೇರ (35) ಈದಿನ ನಸುಕಿನ ಜಾವ ಹೃದಯಾಘಾತದಿಂದ ಮುಳವಾಡ ಗ್ರಾಮದಲ್ಲಿ ನಿಧನರಾದರು. ಬಸವನ ಬಾಗೇವಾಡಿ ತಾಲ್ಲೂಕು ಮುಳವಾಡ ಗ್ರಾಮದವರಾದ ಈ ಯುವ ವಿಜ್ಞಾನಿ ರಡ್ಡೇರ ಅವರಿಗೆ 2003ರಲ್ಲಿಭಾರತ ಸರಕಾರ `ಶ್ರೇಷ್ಠ ಯುವ ವಿಜ್ಞಾನಿ' ಪ್ರಶಸ್ತಿ ನೀಡಿ ಪುರಸ್ಕರಿಸಿತ್ತು.
2008: ಭೂಮಿ ಬಿಸಿಯಾಗುವಿಕೆ, ಜಾಗತಿಕ ತಾಪಮಾನದಿಂದ ಧ್ರುವ ಪ್ರದೇಶಗಳಲ್ಲಿನ ಹಿಮ ಗರಿಷ್ಠ ಪ್ರಮಾಣದಲ್ಲಿ ಕರಗುತ್ತ ಸಮುದ್ರದ ನೀರಿನ ಮಟ್ಟದಲ್ಲಿ ಆಗುವ ಹೆಚ್ಚಳವು ಅನೇಕ ದೇಶಗಳಲ್ಲಿ ಭಾರಿ ಅನಾಹುತಕ್ಕೆ ಎಡೆ ಮಾಡಿಕೊಡಲಿದೆ ಎಂದು ವಿಶ್ವಬ್ಯಾಂಕ್ ವರದಿ ಮತ್ತೊಮ್ಮೆ ಎಚ್ಚರಿಸಿತು. ಒಟ್ಟು 84 ಅಭಿವೃದ್ಧಿಶೀಲ ದೇಶಗಳ ಕರಾವಳಿ ಪ್ರದೇಶದಲ್ಲಿನ ಇತ್ತೀಚಿನ ಬದಲಾವಣೆಗಳ ಬಗ್ಗೆ ಉಪಗ್ರಹಗಳಿಂದ ಪಡೆದ ನಕ್ಷೆ ಮತ್ತು ಇತರ ಮಾಹಿತಿ ವಿಶ್ಲೇಷಿಸಿ ಈ ವರದಿ ಸಿದ್ಧಪಡಿಸಲಾಗಿದೆ.
ಸಮುದ್ರದ ನೀರಿನ ಮಟ್ಟ ಹೆಚ್ಚಳದಿಂದ ತೀರ ಪ್ರದೇಶದಲ್ಲಿ ವಾಸಿಸುವವರ ಜನಜೀವನ, ಒಟ್ಟು ರಾಷ್ಟ್ರೀಯ ಉತ್ಪನ್ನ (ಜಿಡಿಪಿ), ನಗರ ಪ್ರದೇಶ ಮತ್ತು ಕೃಷಿ ಯೋಗ್ಯ ಭೂಮಿ ಮೇಲೆ ಆಗುವ ಒಟ್ಟಾರೆ ಪರಿಣಾಮಗಳನ್ನು ವರದಿಯಲ್ಲಿ ಪಟ್ಟಿ ಮಾಡಲಾಗಿದೆ. `ಪರಿಸರ ನಿರಾಶ್ರಿತರ' ಹೊಸ ಸಮಸ್ಯೆ ಉದ್ಭವವಾಗಲಿದೆ ಎಂದು ವರದಿ ಎಚ್ಚರಿಸಿತು. ಸಮುದ್ರದಲ್ಲಿ ಒಂದು ಮೀಟರಿನಷ್ಟು ನೀರು ಹೆಚ್ಚಿದರೆ (ಅಂದಾಜು ಶೇ 0.3ರಷ್ಟು) ಅದರಿಂದ 1,94,000 ಚದರ ಕಿ.ಮೀಗಳಷ್ಟು ಭೂಮಿಯ 5.5 ಕೋಟಿ ಜನರು (ಒಟ್ಟು ಜನಸಂಖ್ಯೆಯ ಶೇ 1.28ರಷ್ಟು) ಸಂಕಷ್ಟಕ್ಕೆ ಒಳಗಾಗುವರು. ಈ ದೇಶಗಳ ಜಿಡಿಪಿ ನಷ್ಟವು ಶೇ 1.3ರಷ್ಟಾಗುವುದು. ಪ್ರತಿಯೊಂದು ದೇಶಗಳ ನಷ್ಟದ ಅಂದಾಜನ್ನು ಬೇರೆ, ಬೇರೆ ಮಾನದಂಡಗಳ ಆಧಾರದ ಮೇಲೆ ಲೆಕ್ಕ ಹಾಕಲಾಗಿದೆ ಎಂದು ವರದಿ ತಿಳಿಸಿತು. ಪಶ್ಚಿಮ ಬಂಗಾಳದ ಸುಂದರಬನ ಮತ್ತು ಒರಿಸ್ಸಾದ ಸತಭಯ ಪ್ರದೇಶದಲ್ಲಿ ಸಮುದ್ರ ರಾಜನ ಆರ್ಭಟಕ್ಕೆ ಕಳೆದ ಒಂದೂವರೆ ದಶಕದಲ್ಲಿ ಸಾಕಷ್ಟು ಭೂಮಿ ಜಲಾವೃತವಾಗಿದೆ. ಎರಡೂವರೆ ಕಿ.ಮೀಗಳಷ್ಟು ದೂರ ನೀರು ಆಕ್ರಮಿಸಿಕೊಂಡಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ. ಈ ಪ್ರದೇಶದಲ್ಲಿನ ಏಳು ಗ್ರಾಮಗಳ ಸಂಖ್ಯೆ ಈಗ ಒಂದಕ್ಕೆ ಇಳಿದಿದೆ. ಕೃಷಿ ಭೂಮಿಯಂತೂ ಇಲ್ಲವೇ ಇಲ್ಲ. ಇಂತಹ `ಪರಿಸರ ನಿರಾಶ್ರಿತರ' ಪರಿಸ್ಥಿತಿಯ ಗಂಭೀರತೆ ಸರ್ಕಾರದ ಅರಿವಿಗೆ ಬರಬೇಕು. ಇನ್ನಷ್ಟು ಭೂಮಿ ಸಮುದ್ರ ರಾಜನಿಗೆ ಆಪೋಶನಗೊಳ್ಳುವ ಮುನ್ನ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ವರದಿ ಹೇಳಿತು.
2008: ಆಲೋಚನೆಯಿಂದಲೇ ಯಂತ್ರಗಳನ್ನು ನಿಯಂತ್ರಿಸಲು ಸಾಧ್ಯ. ಮಾನವನಿಗೆ ಅಳವಡಿಸುವ ಯಾಂತ್ರಿಕ ಅಂಗಾಂಗಗಳನ್ನು ಬರೀ ಆಲೋಚನೆಯಿಂದಲೇ ಬೇಕಾದ ಹಾಗೆ ಬಳಸಲು ಸಾಧ್ಯ ಎನ್ನುವುದು ಕೋತಿಗಳ ಮೇಲಿನ ಪ್ರಯೋಗದಿಂದ ಸಾಬೀತಾಯಿತು. ಯಂತ್ರಗಳನ್ನು ನಿರ್ವಹಿಸುವ ಮೆದುಳಿನ ಆಲೋಚನಾ ಶಕ್ತಿಯ ಸಾಮರ್ಥ್ಯಕ್ಕೆ ಕೋತಿಗಳ ಮೇಲೆ ಪ್ರಯೋಗ ನಡೆಸಲಾಗಿತ್ತು. ಬೆನ್ನು ಹುರಿ ಗಾಯ, ಪಾರ್ಶ್ವವಾಯು ಮತ್ತಿತರ ಕಾಯಿಲೆಗಳಿಗೆ ಗುರಿಯಾಗಿ ಕೈಕಾಲು ಸ್ವಾಧೀನ ಕಳೆದುಕೊಳ್ಳುವವರಿಗೆ ಈ ಪ್ರಯೋಗದಿಂದ ಹೆಚ್ಚು ಉಪಯೋಗವಾಗಲಿದೆ. ಎರಡು ಕೋತಿಗಳ ಮೆದುಳಿನಲ್ಲಿ ಅಳವಡಿಸಿದ, ಸಂವೇದನೆ ಗ್ರಹಿಸುವ ಪುಟ್ಟ ಗಾತ್ರದ ಸಾಧನಗಳ ನೆರವಿನಿಂದ ಕೋತಿಗಳು ಯಾಂತ್ರಿಕ ತೋಳನ್ನು ನಿರ್ವಹಿಸುವುದನ್ನು ಸಮರ್ಪಕವಾಗಿ ತೋರಿಸಿವೆ. ಕೋತಿಗಳಿಗೆ ಅಳವಡಿಸಿದ ಯಾಂತ್ರಿಕ ಕೈಯನ್ನು ಅದರ ಆಲೋಚನೆಯಿಂದಲೇ ಯಶಸ್ವಿಯಾಗಿ ನಿರ್ವಹಿಸಲಾಯಿತು. ಪದಾರ್ಥ ತಲುಪಿಸಲು, ಆಹಾರ ಹಿಡಿಯಲು, ಯಾಂತ್ರಿಕ ಕೈಚಾಚಲು, ಅಗತ್ಯ ಬಿದ್ದಾಗ ಆಹಾರ ತುಂಡಿನ ಗಾತ್ರಕ್ಕೆ ಅನುಗುಣವಾಗಿ ಕೈಬೆರಳುಗಳ ಗಾತ್ರ ಕುಗ್ಗಿಸುವ, ಹಿಗ್ಗಿಸುವುದನ್ನೂ ಕೋತಿಗಳು ನಿರಾಯಾಸವಾಗಿ (ಯಾಂತ್ರಿಕವಾಗಿ) ನಿರ್ವಹಿಸಿದ್ದನ್ನು `ನೇಚರ್' ಪತ್ರಿಕೆ ವರದಿ ಮಾಡಿತು. ಈ ಪ್ರಯೋಗದಲ್ಲಿ ಕೋತಿಗಳಿಗೆ ಜೋಡಿಸಿದ ಕೃತಕ ಕೈಯನ್ನು ಅವುಗಳ ಮೆದುಳು ತನ್ನದೇ ದೇಹದ ಒಂದು ಅಂಗ ಎಂಬಂತೆ ಗುರುತಿಸುವಲ್ಲಿ ಸಂವೇದನೆಯ ಸಾಧನ ನೆರವಾಗಿತ್ತು. ಹೀಗಾಗಿ ಆ ಕೃತಕ ತೋಳನ್ನು ಸಹಜ ಕೈ ಎಂಬಂತೆ ಈ ಕೋತಿಗಳು ಬಳಸಿದ್ದವು. ಅಪಘಾತ ಮತ್ತು ಗಂಭೀರ ಸ್ವರೂಪದ ಕಾಯಿಲೆಗಳಲ್ಲಿ ಕೈಕಾಲುಗಳ ಮೇಲೆ ಸ್ವಾಧೀನ ಕಳೆದುಕೊಂಡವರಲ್ಲಿ ಹೊಸ ಭರವಸೆ ಮೂಡಿಸುವಲ್ಲಿ ಈ ಪ್ರಯೋಗ ಯಶಸ್ವಿಯಾಯಿತು.
2007: ಭಾಷಾ ಮಾಧ್ಯಮದ ಉಲ್ಲಂಘನೆಯ ಆರೋಪದಿಂದ ಮಾನ್ಯತೆ ಕಳೆದುಕೊಂಡ ಖಾಸಗಿ ಶಾಲೆಗಳ ಮಾನ್ಯತೆ ರದ್ದತಿಗೆ ತಾನು ಈ ಹಿಂದೆ ನೀಡಿದ ತಡೆಯಾಜ್ಞೆಯನ್ನು ಹೈಕೋರ್ಟ್ ಜೂನ್ 14ರವರೆಗೆ ವಿಸ್ತರಿಸಿತು.
2007: ಶಸ್ತ್ರಾಸ್ತ್ರ ಮದ್ದುಗುಂಡು, ಮದ್ದುಗುಂಡು ಸಾಗಣೆ, ಅಕ್ರಮವಾಗಿ ಶಸ್ತ್ರಾಸ್ತ್ರ ಹೊಂದಿರುವುದು ಮತ್ತು 1993ರ ಮುಂಬೈ ಸರಣಿ ಬಾಂಬ್ ಸ್ಫೋಟದ ಸಂಚಿನಲ್ಲಿ ವಹಿಸಿದ ಪಾತ್ರಕ್ಕಾಗಿ ಏಳು ಮಂದಿಗೆ ವಿಶೇಷ ಟಾಡಾ ನ್ಯಾಯಾಲಯವು ಐದು ವರ್ಷಗಳ ಕಠಿಣ ಸಜೆಯಿಂದ ಜೀವಾವಧಿ ಸಜೆವರೆಗಿನ ಶಿಕ್ಷೆಗಳನ್ನು ವಿಧಿಸಿತು.
2007: ಅಗ್ಗದ ದರದ ವಿಮಾನಯಾನ ಸಂಸ್ಥೆ ಏರ್ ಡೆಕ್ಕನ್ ತನ್ನ ಶೇಕಡಾ 26ರಷ್ಟು ಪಾಲನ್ನು ವಿಜಯ ಮಲ್ಯ ನೇತೃತ್ವದ ಯುಬಿ ಹೋಲ್ಡಿಂಗ್ಸ್ ಕಂಪೆನಿಗೆ ಮಾರಾಟ ಮಾಡಿರುವುದಾಗಿ ಘೋಷಿಸಿತು.
2007: ಜೈಬಾಸಾ ಬೊಕ್ಕಸದಿಂದ 1990ರ ದಶಕದಲ್ಲಿ 48 ಕೋಟಿ ರೂಪಾಯಿಗಳನ್ನು ಅಕ್ರಮವಾಗಿ ಪಡೆದುಕೊಂಡದ್ದಕ್ಕಾಗಿ ರೈಲ್ವೆ ಸಚಿವ ಲಾಲು ಪ್ರಸಾದ್ ಅವರ ಇಬ್ಬರು ಸೋದರಳಿಯಂದಿರು ಸೇರಿದಂತೆ ಒಟ್ಟು 58 ಮಂದಿಗೆ ಎರಡೂವರೆ ವರ್ಷಗಳಿಂದ 6 ವರ್ಷಗಳವರೆಗಿನ ಸೆರೆವಾಸದ ಶಿಕ್ಷೆಯನ್ನು ಮೇವು ಹಗರಣದ ವಿಚಾರಣೆ ನಡೆಸಿದ ವಿಶೇಷ ಸಿಬಿಐ ನ್ಯಾಯಾಲಯವು ವಿಧಿಸಿತು.
2007: ನೇತಾಜಿ ಸುಭಾಶ್ ಚಂದ್ರ ಬೋಸ್ ಅವರ ನಿಗೂಢ ಕಣ್ಮರೆ/ಸಾವಿಗೆ ಸಂಬಂಧಿಸಿದ ಕಡತವನ್ನು 30 ವರ್ಷಗಳ ಹಿಂದೆ ನಾಶ ಪಡಿಸಿದ್ದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕೇಳಿ ಕೇಂದ್ರೀಯ ಮಾಹಿತಿ ಆಯೋಗದ ಮುಂದೆ ಸಲ್ಲಿಸಲಾದ ಅರ್ಜಿಯನ್ನು ಪ್ರಧಾನ ಮಂತ್ರಿಗಳ ಕಚೇರಿ ಬಲವಾಗಿ ವಿರೋಧಿಸಿತು. ದೆಹಲಿ ಮೂಲಕ ಮಿಷನ್ ನೇತಾಜಿ ಸಂಸ್ಥೆ ಈ ಅರ್ಜಿ ಸಲ್ಲಿಸಿತ್ತು.
2006: ತತ್ ಕ್ಷಣ ಕರ್ತವ್ಯಕ್ಕೆ ಹಾಜರಾಗುವಂತೆ ಸುಪ್ರೀಂಕೋರ್ಟ್ ಆದೇಶಿಸಿದ್ದನ್ನು ಅನುಸರಿಸಿ ನವದೆಹಲಿಯ ಎಲ್ಲ ಪ್ರಮುಖ ವೈದ್ಯಕೀಯ ಕಾಲೇಜು ಆಸ್ಪತ್ರೆಗಳ ಸ್ಥಾನೀಯ ವೈದ್ಯರು ಮುಷ್ಕರಕ್ಕೆ ಅಂತ್ಯ ಘೋಷಿಸಿದರು. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿ ವಿವಾದದ ಹಿನ್ನೆಲೆಯಲ್ಲಿ 20 ದಿನಗಳಿಂದ ವೈದ್ಯರು ಅಸಹಕಾರ ಚಳವಳಿ ನಡೆಸಿದ್ದರು.
2006: ಬ್ರಹ್ಮೋಸ್ ಸೂಪರ್ ಸಾನಿಕ್ ಕ್ರೂಸ್ ಕ್ಷಿಪಣಿಯ 12ನೇ ಹಾರಾಟ ಪರೀಕ್ಷೆಯನ್ನು ರಾಜಸ್ಥಾನ ಮರುಭೂಮಿಯಲ್ಲಿ ಯಶಸ್ವಿಯಾಗಿ ನಡೆಸಲಾಯಿತು.
2006: ಒರಿಸ್ಸಾದ ಕರಾವಳಿಯ ಆತಾಲ ಗ್ರಾಮದ ನಿವಾಸಿ ಬಸುದೇವ್ ಭೋಯಿ ಅವರ ಪುತ್ರಿ 30 ವರ್ಷದ ಬಿಂಬಾಲಿ ಭೋಯಿ ಎಂಬ ತರುಣಿ ಈ ದಿನ ನಾಗದೇವತೆಯನ್ನು ಶಾಸ್ತ್ರೋಕ್ತವಾಗಿ ಮದುವೆಯಾದಳು. ತನ್ನನ್ನು ವರಿಸಲು ಬಂದ ಯಾವುದೇ ವರ ಒಪ್ಪದೇ ಹೋದುದರಿಂದ ಬೇಸತ್ತ ಆಕೆ ಕೊನೆಗೆ ನಾಗದೇವತೆಯನ್ನು ಮದುವೆಯಾಗಲು ನಿರ್ಧರಿಸಿದಳು. ಕೆಲವು ದಿನಗಳ ಹಿಂದೆ 30ರ ಹರೆಯದ ಯುವಕನೊಬ್ಬ ಆಕೆಯ ತಾಯಿಯ ಬಳಿ ನಿಮ್ಮ ಮಗಳು 14 ವರ್ಷದಿಂದ ಪೂಜಿಸುತ್ತಾ ಬಂದ ನಾಗರ ಹಾವನ್ನು ಮದುವೆಯಾಗಲಿ ಎಂದು ಹೇಳಿದ್ದು ಹಾಗೂ ಇದಕ್ಕೂ ಮೊದಲು ಒಂದು ದಿನ ಮನೆಯ ಹಿಂಬದಿಯ ಹುತ್ತದಲ್ಲಿ ಹಾವು ಬಿಂಬಾಲಿಗೆ ದರ್ಶನ ನೀಡಿದ ಘಟನೆ ನಡೆದು, ಆ ಬಳಿಕ ಆಕೆ ಆ ಹಾವಿನೊಂದಿಗೆ ಪ್ರೀತಿ ಹೊಂದಿದ್ದಳು. ಕುಟುಂಬ ಸದಸ್ಯರು ಮೊದಲು ಈ ಮದುವೆಗೆ ಒಪ್ಪದಿದ್ದರೂ ನಂತರ ಗ್ರಾಮದ ಹಿರಿಯರ ಸಲಹೆ ಮೇರೆಗೆ ಆಕೆಗೂ ಕಂಚಿನಿಂದ ಮಾಡಿದ ಹಾವಿನ ಪ್ರತಿರೂಪಕ್ಕೂ ಶಾಸ್ತ್ರೋಕ್ತವಾಗಿ ಮದುವೆ ನೆರವೇರಿಸಲಾಯಿತು.
1996: ಹಿರಿಯ ಸಮಾಜವಾದಿ ಚಿಂತಕ ಜೆ.ಎಚ್. ಪಟೇಲ್ ಅವರು ಈದಿನ ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು.
1988: ಈ ದಿನವನ್ನು `ತಂಬಾಕುರಹಿತ ದಿನ' ಎಂದು ಆಚರಿಸಬೇಕು ಎಂದು ವಿಶ್ವ ಸ್ವಾಸ್ಥ್ಯ ಸಂಸ್ಥೆ ಘೋಷಿಸಿತು.
1962: ನಾಝಿ ಕ್ರಿಮಿನಲ್ ಅಡಾಲ್ಫ್ ಇಚ್ಮನ್ ಗೆ ಇಸ್ರೇಲಿನಲ್ಲಿ ಗಲ್ಲು ವಿಧಿಸಲಾಯಿತು. ಇದು ಇಸ್ರೇಲಿನ ಪ್ರಪ್ರಥಮ ಗಲ್ಲು ಶಿಕ್ಷೆ.
1939: ಜೈನ ಸಾಹಿತ್ಯ, ಸಿದ್ಧಾಂತಗಳಿಗೆ ಮಹತ್ವದ ಕಾಣಿಕೆಗಳನ್ನು ನೀಡಿದ ಸಾಹಿತಿ ಡಾ. ಎಸ್.ಪಿ. ಪಾಟೀಲ ಅವರು ಪೀರಗೌಡ ಧರ್ಮ ಗೌಡ ಪಾಟೀಲ- ಪದ್ಮಾವತಿ ದಂಪತಿಯ ಪುತ್ರನಾಗಿ ಮಹಾರಾಷ್ಟ್ರದ ಸಾಂಗಲಿಯಲ್ಲಿ ಈದಿನ ಜನಿಸಿದರು.
1928: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಕ್ರಿಕೆಟಿಗ ಪಂಕಜ್ ಖಿರೋಡ್ ಜನನ.
1911: ಜಗತ್ತಿನ ಅತ್ಯಾಧುನಿಕ ನೌಕೆ `ಟೈಟಾನಿಕ್' ಬೆಲ್ ಫಾಸ್ಟ್ ನಿಂದ ತನ್ನ ಮೊದಲ ಪಯಣ ಆರಂಭಿಸಿತು.
1845; ರೂಕ್ಸ್ ಇವೆಲಿನ್ ಬೆಲ್ ಕ್ರಾಂಪ್ಟನ್ (1845-1940) ಜನ್ಮದಿನ. ಬ್ರಿಟಿಷ್ ಸಂಶೋಧಕನಾದ ಈತ ವಿದ್ಯುತ್ ದೀಪಗಳ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಿದ.
1818: ವಿಲಿಯಂ ಕ್ಯಾರೀ ಮತ್ತು ಸೆರಾಂಪೋರಿನ ಜೊಶುವಾ ಮಾರ್ಶ್ ಮ್ಯಾನ್ ನೇತೃತ್ವದಲ್ಲಿ ಬಂಗಾಳಿಯಲ್ಲಿ ಪ್ರಪ್ರಥಮ ಪ್ರಾದೇಶಿಕ ಭಾಷಾ ಪತ್ರಿಕೆ `ಸಮಾಚಾರ್ ದರ್ಪಣ್' ಪ್ರಕಟಣೆ ಆರಂಭವಾಯಿತು.
1578: ರೋಮ್ನ ಸಮಾಧಿ ಗುಹೆಗಳು ಅನಿರೀಕ್ಷಿತವಾಗಿ ಪತ್ತೆಯಾದವು. ಉತ್ತರ ರೋಮ್ನ ಪ್ರವೇಶದ್ವಾರದಲ್ಲಿ ಕೆಲವು ಕಾರ್ಮಿಕರ ಭೂಮಿ ಅಗೆಯುತ್ತಿದ್ದಾಗ ಸಮಾಧಿಗುಹೆಯೊಂದರ ಸುರಂಗ ಕಾಣಿಸಿ, ಸಮಾಧಿ ಗುಹೆ ಬೆಳಕಿಗೆ ಬಂತು. ಹದಿನೈದು ವರ್ಷಗಳ ನಂತರ ನಂತರ 1593ರಲ್ಲಿ 18ರ ತರುಣ ಆಂಟಾನಿಯೋ ಬೋಸಿಯೋ ಈ ಗುಹಾ ಸಮಾಧಿಗಳ ಪತ್ತೆ ಕಾರ್ಯ ಆರಂಭಿಸಿದ. ತಮ್ಮ ಜೀವಮಾನಪೂರ್ತಿ ಇದೇ ಕಾರ್ಯ ಮಾಡಿದ ಈತ ಈ ಸಮಾಧಿ ಗುಹೆಗಳ ಮಧ್ಯೆ ಸಂಪರ್ಕ ಇದ್ದುದನ್ನು ಪತ್ತೆ ಹಚ್ಚಿದ. ಅವುಗಳಿಗೆ 30 ಹೆಚ್ಚುವರಿ ಪ್ರವೇಶದ್ವಾರಗಳು ಇದ್ದುದನ್ನೂ ಪತ್ತೆ ಮಾಡಿದ. ಈ ಸಮಾಧಿ ಗುಹೆಗಳು ಮೂರನೇ ಶತಮಾನದಷ್ಟು ಪ್ರಾಚೀನ ಕಾಲದವು. ಸ್ಮಶಾನಗಳಲ್ಲಿ ಶವ ಹೂಳದಂತೆ ಬಹಿಷ್ಕೃತರಾಗಿದ್ದ ಕ್ರೈಸ್ತರು ಈ ಗುಹೆಗಳಲ್ಲಿ ಶವಗಳನ್ನು ಹೂಳುತ್ತಿದ್ದರು.
(ಸಂಗ್ರಹ: ನೆತ್ರಕೆರೆ ಉದಯಶಂಕರ)
No comments:
Post a Comment