Thursday, July 9, 2009

ಇಂದಿನ ಇತಿಹಾಸ History Today ಜುಲೈ 09

ಇಂದಿನ ಇತಿಹಾಸ

ಜುಲೈ 09

ವನ್ಯ ಜೀವಿ ಮಂಡಳಿಯ ಸಲಹೆಯ ಮೇರೆಗೆ ಬಂಗಾಳದ ಹುಲಿಯನ್ನು ರಾಷ್ಟ್ರೀಯ ಪ್ರಾಣಿಯಾಗಿ ಭಾರತ ಸರ್ಕಾರ ಮಾನ್ಯ ಮಾಡಿತು. ಈ ಹುಲಿ ಕೆಂಪು ಮಿಶ್ರಿತ ಹಳದಿ ಚರ್ಮ ಅದರ ಮೇಲೆ ಕಪ್ಪು ಪಟ್ಟಿಯನ್ನು ಹೊಂದಿ ರಾಜ ಗಾಂಭೀರ್ಯವನ್ನು ಪಡೆದಿದೆ.

2008: ಶಿವಸೇನೆಯ ಮಾಜಿ ಸಂಸದ ಮಧುಕರ್ ಸರ್ಪೋತದಾರ್ ಹಾಗೂ ಇಬ್ಬರು ಕಾರ್ಯಕರ್ತರಿಗೆ 1992- 93ರಲ್ಲಿ ನಡೆದ ಕೋಮುಗಲಭೆಗೆ ಸಂಬಂಧಿಸಿದಂತೆ ಮುಂಬೈ ನಗರ ನ್ಯಾಯಾಲಯವು ಒಂದು ವರ್ಷ ಜೈಲು ಶಿಕ್ಷೆ ಮತ್ತು ತಲಾ 5 ಸಾವಿರ ರೂಪಾಯಿ ದಂಡ ವಿಧಿಸಿತು.

2007: ಮಾಜಿ ಪ್ರಧಾನಿ ಮತ್ತು ಹಿರಿಯ ಸಮಾಜವಾದಿ ನಾಯಕ ಚಂದ್ರಶೇಖರ್ ಅವರ ಅಂತ್ಯಸಂಸ್ಕಾರವನ್ನು ಈದಿನ ಸಂಜೆ ನವದೆಹಲಿಯ ಯಮುನಾ ನದಿ ದಂಡೆಯಲ್ಲಿರುವ ರಾಜ್ ಘಾಟಿನನ ಏಕತಾ ಸ್ಥಳದಲ್ಲಿ ಸಕಲ ಸರ್ಕಾರಿ ಗೌರವದೊಡನೆ ನೆರವೇರಿಸಲಾಯಿತು. ಹಿಂದೂ ಧಾರ್ಮಿಕ ವಿಧಿ-ವಿಧಾನಗಳನ್ವಯ ವೇದ ಪಠಣಗಳೊಂದಿಗೆ ಚಂದ್ರಶೇಖರ್ ಅಂತಿಮ ಸಂಸ್ಕಾರವನ್ನು ಅವರ ಪುತ್ರರಾದ ಪಂಕಜ್ ಮತ್ತು ನೀರಜ್ ಅವರು ನೆರವೇರಿಸಿದರು.

2007: ವೃತ್ತಿರಂಗಭೂಮಿಯ ಹಿರಿಯ ಕಲಾವಿದ ವಿಜಾಪುರದ ಕೆ.ಬಿ.ಶಂಕರ್, ಹಾರ್ಮೋನಿಯಂ ಮೇಷ್ಟ್ರು ಹಗರಿ ಬೊಮ್ಮನಹಳ್ಳಿ ತಾಲ್ಲೂಕಿನ ದೇವೇಂದ್ರ ರೆಡ್ಡಿ ನಂದಿಪುರ, ನಟ ಬೆಂಗಳೂರಿನ ಮೈಕೋ ಚಂದ್ರು ಸೇರಿದಂತೆ ಹದಿನೈದು ಮಂದಿ ರಂಗಭೂಮಿಯ ಹಿರಿಯ ಕಲಾವಿದರಿಗೆ ಕರ್ನಾಟಕ ನಾಟಕ ಅಕಾಡೆಮಿಯ 2006- 07ರ ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಲಾಯಿತು. `ನಾಟಕ ಕ್ಷೇತ್ರಕ್ಕೆ ಶಿಷ್ಟ ಕೊಡುಗೆ ನೀಡಿದ ಕವಿ ಎಚ್.ಡುಂಡಿರಾಜ್ ಅವರನ್ನು ಗೌರವ ಪ್ರಶಸ್ತಿಗೆ, ಪ್ರಭಾತ್ ಕಲಾವಿದರು ಸಂಸ್ಥೆಯನ್ನು ಕೆ.ಹಿರಣ್ಣಯ್ಯ ಪುರಸ್ಕಾರಕ್ಕೆ ಹಾಗೂ ಆರು ಮಂದಿಯನ್ನು ಸಿಜಿಕೆ ಯುವರಂಗ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ ಎಂದು ಅಕಾಡೆಮಿ ಅಧ್ಯಕ್ಷ ಶ್ರೀನಿವಾಸ ಕಪ್ಪಣ್ಣ ಬೆಂಗಳೂರಿನಲ್ಲಿ ಪ್ರಕಟಿಸಿದರು.

2007: ಮೋಸ, ನಕಲಿ ದಾಖಲೆ ಸೃಷ್ಟಿ ಸೇರಿದಂತೆ ನಾಲ್ಕು ವಿವಿಧ ಆರೋಪಗಳಿಗೆ ಗುರಿಯಾದ ಚಿತ್ರ ನಟ ಶ್ರೀನಿವಾಸ ಮೂರ್ತಿ ಅವರಿಗೆ ಏಳು ವರ್ಷ ಶಿಕ್ಷೆ ಹಾಗೂ ಮೂರು ಸಾವಿರ ರೂಪಾಯಿ ದಂಡ ವಿಧಿಸಿ ನಗರದ ಆರನೇ ಎಸಿಎಂಎಂ ಕೋರ್ಟ್ ಆದೇಶ ನೀಡಿತು. 1988ರಲ್ಲಿ ಬಿಡುಗಡೆಗೊಂಡ `ಬಾಳ ನೌಕೆ' ಚಿತ್ರಕ್ಕೆ ಸಂಬಂಧಿಸಿದಂತೆ ಅವರು ಈ ಆರೋಪಗಳಿಗೆ ಗುರಿಯಾಗಿದ್ದರು.

2007: `ದಲಾಲ್ ಸ್ಟ್ರೀಟ್' ಎಂದೂ ಕರೆಯಿಸಿಕೊಳ್ಳುವ ಷೇರುಪೇಟೆಯ 133ನೇ ಸ್ಥಾಪನಾ ದಿನವಾಗಿರುವ ಈದಿನ ಮುಂಬೈ ಷೇರು ಪೇಟೆಯ ಸೂಚ್ಯಂಕವು ಬ್ಯಾಂಕ್ ಮತ್ತು ಮಾಹಿತಿ ತಂತ್ರಜ್ಞಾನದ ಷೇರುಗಳ ಖರೀದಿ ಬೆಂಬಲದ ಫಲವಾಗಿ 81.61 ಅಂಶಗಳಷ್ಟು ಏರಿಕೆ ದಾಖಲಿಸಿ 15,000 ಅಂಶಗಳ ಮೈಲಿಗಲ್ಲು ದಾಟಿ ಹೊಸ ದಾಖಲೆ ಬರೆಯಿತು.

2006: ಬರ್ಲಿನ್ನಿನಲ್ಲಿ ನಡೆದ ವಿಶ್ವಕಪ್ ಫುಟ್ಬಾಲ್ ಪೈನಲ್ ಪಂದ್ಯದಲ್ಲಿ ಇಟೆಲಿಯು ಫ್ರಾನ್ಸನ್ನು ಪೆನಾಲ್ಟಿ ಶೂಟೌಟಿನಲ್ಲಿ 5-3 ಗೋಲುಗಳಿಂದ ಸೋಲಿಸಿ 2006ರ 18ನೇ ವಿಶ್ವ ಕಪ್ಪನ್ನು ತನ್ನ ಮಡಿಲಿಗೆ ಹಾಕಿಕೊಂಡಿತು. ಸ್ಟುಟ್ ಗರ್ಟಿನಲ್ಲಿ ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಪೋರ್ಚುಗಲ್ ತಂಡವನ್ನು 3-1 ಗೋಲುಗಳಿಂದ ಸೋಲಿಸುವ ಮೂಲಕ ಜರ್ಮನಿ ಮೂರನೇ ಸ್ಥಾನವನ್ನು ಪಡೆದು `ಪೀಫಾ' ವಿಶ್ವಕಪ್ ಫುಟ್ಬಾಲ್ ಕಂಚಿನ ಪದಕವನ್ನು ಗೆದ್ದುಕೊಂಡಿತು.

2006: ದೇಶದ ಪ್ರತಿಷ್ಠಿತ ಅತ್ಯಾಧುನಿಕ ಮಧ್ಯಮ ಶ್ರೇಣಿಯ ಖಂಡಾತರ ಅಗ್ನಿ - 3 ಕ್ಷಿಪಣಿಯನ್ನು ಒರಿಸ್ಸಾದ ಕಡಲ ತೀರದ ವೀಲರ್ ದ್ವೀಪದಿಂದ ಪರೀಕ್ಷಾರ್ಥ ಹಾರಿಬಿಡಲಾಯಿತು. ಆದರೆ ತಾಂತ್ರಿಕ ದೋಷದ ಪರಿಣಾಮವಾಗಿ ಸಮುದ್ರಕ್ಕೆ ಬಿದ್ದಿತು.

2006: ರಷ್ಯಾದ ಸೈಬೀರ್ ಏರ್ ಲೈನ್ಸ್ಗೆ ಸೇರಿದ ವಿಮಾನವೊಂದು ಸೈಬೀರಿಯಾದ ಇರ್ಕುತ್ಸ್ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಾಗ ಅಪಘಾತಕ್ಕೆ ಈಡಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮವಾಗಿ ಚಾಲಕ, ಸಿಬ್ಬಂದಿ ಸೇರಿದಂತೆ 150ಕ್ಕೂ ಹೆಚ್ಚು ಜನ ಮೃತರಾದರು.

2006: `ಬಿಗ್ ಬಿ' ಎಂದೇ ಖ್ಯಾತರಾದ ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ಗೆ ಬ್ರಿಟನ್ನಿನ ಲೈಸೆಸ್ಟರಿನ ಡಿ. ಮೊಂಟ್ ಫೋರ್ಡ್ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿತು.

1969: ವನ್ಯ ಜೀವಿ ಮಂಡಳಿಯ ಸಲಹೆಯ ಮೇರೆಗೆ ಬಂಗಾಳದ ಹುಲಿಯನ್ನು ರಾಷ್ಟ್ರೀಯ ಪ್ರಾಣಿಯಾಗಿ ಭಾರತ ಸರ್ಕಾರ ಮಾನ್ಯ ಮಾಡಿತು. ಈ ಹುಲಿ ಕೆಂಪು ಮಿಶ್ರಿತ ಹಳದಿ ಚರ್ಮ ಅದರ ಮೇಲೆ ಕಪ್ಪು ಪಟ್ಟಿಯನ್ನು ಹೊಂದಿ ರಾಜ ಗಾಂಭೀರ್ಯವನ್ನು ಪಡೆದಿದೆ.

1942: ಆನ್ ಫ್ರಾಂಕ್ ಮತ್ತು ಆಕೆಯ ಕುಟುಂಬ ನಾಝಿಗಳ ದಾಳಿಯಿಂದ ಪಾರಾಗಲು ಆ್ಯಮ್ಸ್ಟರ್ಡ್ಯಾಮಿನಲ್ಲಿ ಆಶ್ರಯ ಪಡೆದರು. ಆ್ಯಮ್ಸ್ಟರ್ಡ್ಯಾಮಿನ ಪ್ರಿನ್ಸ್ ಗ್ರಾಚಿನಲ್ಲಿ ಕಳೆದ `ಅಜ್ಞಾತವಾಸ'ದ ಕುರಿತು ಆನ್ ಫ್ರಾಂಕ್ ಬರೆದ ದಿನಚರಿ ಮುಂದೆ ಜಾಗತಿಕ ಖ್ಯಾತಿ ಪಡೆಯಿತು. ಅವರು ಆಶ್ರಯಪಡೆದಿದ್ದ ತಾಣ ಮ್ಯೂಸಿಯಂ ಆಯಿತು.

1922: ಜಾನಿ ವೀಸ್ ಮುಲ್ಲರ್ 100 ಮೀಟರುಗಳನ್ನು ಒಂದು ನಿಮಿಷಕ್ಕೂ ಕಡಿಮೆ ಅವಧಿಯಲ್ಲಿ (58.6 ಸೆಕೆಂಡುಗಳು) ಈಜಿದ ಜಗತ್ತಿನ ಮೊತ್ತ ಮೊದಲಿನ ಈಜುಗಾರ ಎಂಬ ಖ್ಯಾತಿ ಗಳಿಸಿದರು. ಮುಂದೆ ಇವರು ಚಿತ್ರನಟನಾಗಿ `ಟಾರ್ಜಾನ್- ದಿ ಏಪ್ ಮ್ಯಾನ್' ಚಿತ್ರದ ಮೂಲಕ ಮಿಂಚಿದರು. ಮೊದಲ `ಟಾರ್ಜಾನ್' ಚಿತ್ರವಲ್ಲದೆ ಇನ್ನೂ 11 `ಟಾರ್ಜಾನ್' ಚಿತ್ರಗಳಲ್ಲಿ ಜಾನಿ ನಟಿಸಿದರು.

1838: ಮುಂಬೈಯ ಗವರ್ನರ್ ಆಗಿದ್ದ ಸರ್ ರಾಬರ್ಟ್ ಗ್ರಾಂಟ್ (1780-1838) ಮೃತರಾದರು. ಇವರ ಹೆಸರನ್ನೇ ಗ್ರಾಂಟ್ ಮೆಡಿಕಲ್ ಕಾಲೇಜಿಗೆ ನೀಡಲಾಯಿತು.

1877: ವಿಂಬಲ್ಡನ್ನಿನ ಆಲ್ ಇಂಗ್ಲೆಂಡ್ ಕ್ರೊಕೆಟ್ ಮತ್ತು ಲಾನ್ ಟೆನಿಸ್ ಕ್ಲಬ್ಬಿನಲ್ಲಿ ಮೊತ್ತ ಮೊದಲ `ವಿಂಬಲ್ಡನ್ ಚಾಂಪಿಯನ್ ಶಿಪ್' ಆರಂಭವಾಯಿತು

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement