My Blog List

Tuesday, August 11, 2009

ಇಂದಿನ ಇತಿಹಾಸ History Today ಆಗಸ್ಟ್ 08

ಇಂದಿನ ಇತಿಹಾಸ

ಆಗಸ್ಟ್ 08


ಲಾಸ್ ಏಂಜೆಲಿಸ್ ನ ಕಾರ್ಸೋನಿನಲ್ಲಿ ಆರು ಲಕ್ಷ ಡಾಲರ್ ಬಹುಮಾನ ಮೊತ್ತದ ವೆಸ್ಟ್ ಬ್ಯಾಂಕ್ ಕ್ಲಾಸಿಕ್ ಡಬ್ಲ್ಯುಟಿಎ ಟೆನಿಸ್ ಟೂರ್ನಿಯ ಸಿಂಗಲ್ಸಿನಲ್ಲಿ ಕ್ವಾರ್ಟರ್ ಫೈನಲಿನಲ್ಲಿ 30ನೇ ರ್ಯಾಂಕಿಂಗಿನಲ್ಲಿದ್ದ ಸಾನಿಯಾ ಮಿರ್ಜಾ ಮಾಜಿ ಅಗ್ರ ಶ್ರೇಯಾಂಕಿತ ಆಟಗಾರ್ತಿ ಮಾರ್ಟಿನಾ ಹಿಂಗಿಸ್ ಅವರನ್ನು ಸೋಲಿಸಿ ಟೆನಿಸ್ ಜಗತ್ತನ್ನು ಅಚ್ಚರಿಯಲ್ಲಿ ಮುಳುಗಿಸಿದರು.

2008: ಬೀಜಿಂಗಿನ ರಾಷ್ಟ್ರೀಯ ಕ್ರೀಡಾಂಗಣದ್ಲಲಿ 17 ದಿನಗಳ 29ನೇ ಒಲಿಂಪಿಕ್ ರೋಮಾಂಚಕಾರಿಯಾಗಿ ಆರಂಭಗೊಂಡಿತು. ತನ್ನ ಎಂಟರ ನಂಟಿಗೆ ಅಂಟಿಕೊಂಡ ಚೀನಾ ಅಂದುಕೊಂಡದ್ದನ್ನೆಲ್ಲ ಅಚ್ಚುಕಟ್ಟಾಗಿ ಬೀಜಿಂಗಿನ ಹಕ್ಕಿ ಗೂಡಿನಲ್ಲಿ ಅನಾವರಣಗೊಳಿಸಿ ಹೊಸದೊಂದು ಕ್ರೀಡಾಭಾಷ್ಯ ಬರೆಯಿತು.

2015: ಶ್ರೀನಗರ: ಉತ್ತರ ಕಾಶ್ಮೀರದ ಕುಪ್ವಾರಾ ವಲಯದಲ್ಲಿ ಈದಿನ ಸಂಜೆ ಭದ್ರತಾ ಪಡೆ ಸಿಬ್ಬಂದಿ ಮತ್ತು ಶಂಕಿತ ಉಗ್ರರ ಗುಂಪಿನ ನಡುವೆ ಗುಂಡಿನ ಚಕಮಕಿ ಆರಂಭವಾಯಿತು. 20 ರಾಷ್ಟ್ರೀಯ ರೈಫಲ್ಸ್ ಮತ್ತು ವಿಶೇಷ ಕಾರ್ಯಾಚರಣೆ ಪಡೆಯ ಯೋಧರ ತುಕಡಿ ಗಡಿ ನಿಯಂತ್ರಣ ರೇಖೆಯ ಬಳಿ ಇರುವ ಸೇನಾಶಿಬಿರದ ಸುತ್ತಮುತ್ತ ಎಂದಿನಂತೆ ಗಸ್ತು ತಿರುಗುತ್ತಿರುವಾಗ ಗಡಿ ನಿಯಂತ್ರಣ ರೇಖೆಯ ಬಳಿ ಉಗ್ರರು ಸಾಗುತ್ತಿರುವುದನ್ನು ಗಮನಿಸಿದರು. ಅವರನ್ನು ತಡೆಯಲು ಯೋಧರು ಪ್ರಯತ್ನಿಸಿದಾಗ ಉಗ್ರರು ಗುಂಡಿನ ದಾಳಿ ಆರಂಭಿಸಿದ್ದಾಗಿ ಸೇನಾ ಮೂಲಗಳು ತಿಳಿಸಿದವು.
2015: ನವದೆಹಲಿ: ಮುಂಬೈ ಮೇಲಿನ 1993ರ ಸರಣಿ ಸ್ಪೋಟ ಅಪರಾಧಿ ಯಾಕುಬ್ ಮೆಮನ್ ಮರಣದಂಡನೆ ಜಾರಿಗೆ ಸಂಬಂಧಿಸಿದಂತೆ ಮೂರು ಪ್ರಮುಖ ಟಿವಿ ವಾಹಿನಿಗಳ ಸುದ್ದಿ ಪ್ರಸಾರ ಬಗ್ಗೆ ಅಸಮಾಧಾನಗೊಂಡ ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಈ ಟಿವಿ ವಾಹಿನಿಗಳಿಗೆ ಷೋಕಾಸ್ ನೋಟಿಸ್ ಜಾರಿ ಮಾಡಿತು. ಈ ಟಿವಿ ವಾಹಿನಿಗಳ ಪ್ರಸಾರದ ಕೆಲವು ಭಾಗಗಳು ಸಮರ್ಪಕವಾಗಿರಲಿಲ್ಲ ಎಂದು ಭಾವಿಸಿರುವ ಸಚಿವಾಲಯವು ಈ ಸಂಬಂಧ ನಿಮ್ಮ ವಿರುದ್ಧ ಏಕೆ ಕ್ರಮ ಕೈಗೊಳ್ಳಬಾರದು ಎಂದು ಪ್ರಶ್ನಿಸಿ ನೋಟಿಸ್ ನೀಡಿತು. ‘ನಿಮ್ಮ ಸುದ್ದಿ ಪ್ರಸಾರವು ಕಾರ್ಯಕ್ರಮ ಸಂಹಿತೆಯ ವಿಧಿಗಳನ್ನು ಹೇಗೆ ಉಲ್ಲಂಘಿಸಿಲ್ಲ’ ಎಂಬುದಾಗಿ ವಿವರಿಸುವಂತೆ ಸಚಿವಾಲಯವು ಈ ವಾಹಿನಿಗಳಿಗೆ ಸೂಚಿಸಿತು.ಕಾರ್ಯಕ್ರಮ ಸಂಹಿತೆ ಪ್ರಕಾರ ವಾಹಿನಿಗಳು ಅಶ್ಲೀಲ, ಮಾನಹಾನಿಕಾರಕ, ದುರುದ್ದೇಶಪೂರಿತ, ತಪ್ಪು ಹಾಗೂ ಸಲಹಾತ್ಮಕ ಮತ್ತು ಅರ್ಧ ಸತ್ಯದ ಸುದ್ದಿಗಳನ್ನು ಪ್ರಸಾರ ಮಾಡುವಂತಿಲ್ಲ. ಹಿಂಸೆಗೆ ಪ್ರಚೋದನೆ ನೀಡುವಂತಹ ಅಥವಾ ರಾಷ್ಟ್ರವಿರೋಧಿ ಭಾವನೆಗಳನ್ನು ಪ್ರಚೋದಿಸುವಂತಹ ಇಲ್ಲವೇ ಕಾನೂನು ಮತ್ತು ಸುವ್ಯವಸ್ಥೆಗೆ ವಿರುದ್ಧವಾದ ಯಾವುದೇ ಸುದ್ದಿಗಳನ್ನೂ ವಾಹಿನಿಗಳು ಪ್ರಸಾರ ಕಾರ್ಯಕ್ರಮ ಸಂಹಿತೆಯ ಪ್ರಕಾರ ಪ್ರಸಾರ ಮಾಡುವಂತಿಲ್ಲ.

2015: ಶ್ರೀನಗರ: ಜೀವಂತವಾಗಿ ಸೆರೆಸಿಕ್ಕಿರುವ ಪಾಕಿಸ್ತಾನ ಮೂಲದ ಉಗ್ರ ನವೀದ್ ಯಾನೆ ಉಸ್ಮಾನ್​ಗೆ ಆಶ್ರಯ ನೀಡಿದ್ದ ವ್ಯಕ್ತಿ ಸೇರಿದಂತೆ ಒಟ್ಟು 4 ಮಂದಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್​ಐಎ) ಸಿಬ್ಬಂದಿ ಬಂಧಿಸಿದರು. ಫುಲ್ವಾಮಾ ಜಿಲ್ಲೆಯ ನಿವಾಸಿಗಳಾದ ಫಯಾಜ್ ಅಹ್ಮದ್ ವಾನಿ, ಜಾವೇದ್ ಅಹ್ಮದ್ ವಾನಿ, ಮೊಹಮ್ಮದ್ ಅಲ್ತಾಫ್ ವಾನಿ ಮತ್ತು ಜಾವೇದ್ ಅಹ್ಮದ್ ಪರೆ ಬಂಧಿತರು. ಬಂಧಿತರೆಲ್ಲರೂ ಲಷ್ಕರ್ ಎ ತಯ್ಯಾಬದ ಸ್ಲೀಪರ್ ಸೆಲ್​ಗಳ ಸದಸ್ಯರೆಂದು ಎನ್​ಐಎ ಮೂಲಗಳು ತಿಳಿಸಿದವು. 3 ದಿನಗಳ ಹಿಂದೆ ಪಾಕಿಸ್ತಾನದ ಫೈಸಲಾಬಾದ್​ನ ನಿವಾಸಿ ಹಾಗೂ ಲಷ್ಕರ್ ಎ ತಯ್ಯಾಬದ ಉಗ್ರ ನವೀದ್ ಉಧಂಪುರದಲ್ಲಿ ಗಡಿ ಭದ್ರತಾ ಪಡೆಯ ಯೋಧರ ತುಕಡಿ ಮೇಲೆ ಗುಂಡಿನ ದಾಳಿ ನಡೆಸಿದ್ದ. ಗುಂಡಿನ ಚಕಮಕಿಯಲ್ಲಿ ಈತನ ಸಹಚರ ಮೃತಪಟ್ಟಿದ್ದ. ಆದರೆ ತಪ್ಪಿಸಿಕೊಳ್ಳುವಾಗ ನವೀದ್ ಕೈಗೆ ಒತ್ತೆ ಸೆರೆ ಸಿಕ್ಕಿದ್ದವರು  ಈತನನ್ನು ಜೀವಂತವಾಗಿ ಹಿಡಿದುಕೊಡುವಲ್ಲಿ ಯಶಸ್ವಿಯಾಗಿದ್ದರು. ಆನಂತರದ ವಿಚಾರಣೆಯಲ್ಲಿ ನವೀದ್ ತನ್ನನ್ನು ವ್ಯಕ್ತಿಯೊಬ್ಬರು ರಸ್ತೆ ಮಾರ್ಗದಲ್ಲಿ ಜಮ್ಮು ಪ್ರದೇಶಕ್ಕೆ ಕರೆತಂದಿದ್ದಾಗಿ ತಿಳಿಸಿದ್ದ. ಅಲ್ಲದೆ, ಕೆಲವು ಕಾಲ ತನಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದ್ದರೆಂದು ಹೇಳಿದ್ದ. ಈ ಹಿನ್ನೆಲೆಯಲ್ಲಿ ಆತನನ್ನು ಜಮ್ಮು ಪ್ರದೇಶಕ್ಕೆ ಕರೆತಂದಿದ್ದ ಎನ್​ಐಎ ಸಿಬ್ಬಂದಿ, ದಾಳಿಗೆ ಸಹಕರಿಸಿದವರನ್ನು ಗುರುತಿಸುವಂತೆ ತಿಳಿಸಿದ್ದರು. ಅದರಂತೆ ನವೀದ್ ಈ ನಾಲ್ಕು ಮಂದಿಯನ್ನು ಗುರುತಿಸಿದ್ದಾಗಿ ಎನ್​ಐಎ ಮೂಲಗಳು ಹೇಳಿದವು.

2015: ಶಿಮ್ಲಾ: ಹಿಮಾಚಲ ಪ್ರದೇಶದ ರಾಜಧಾನಿ ಶಿಮ್ಲಾದಿಂದ 250 ಕಿಮೀ ದೂರದಲ್ಲಿರುವ ಮಂಡಿ ಜಿಲೆಯ ಧರಂಪುರ ಪ್ರದೇಶದಲ್ಲಿ ಮೇಘಸ್ಪೋಟದ ಪರಿಣಾಮವಾಗಿ ಈದಿನ ಬೆಳಗ್ಗೆ ಸುರಿದ ಭಾರಿ ಮಳೆ- ದಿಢೀರ್ ಪ್ರವಾಹಕ್ಕೆ ಒಂದೇ ಕುಟುಂಬದ ಮೂವರು ಸೇರಿದಂತೆ ನಾಲ್ಕು ಮಂದಿ ಬಲಿಯಾಗಿರುವ ಭೀತಿ ವ್ಯಕ್ತವಾಯಿತು. ಹಠಾತ್ ಮಳೆ, ಪ್ರವಾಹದಿಂದಾಗಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಹಲವಾರು ವಾಹನಗಳು ಹಾಗೂ ಜಾನುವಾರುಗಳೂ ಕೊಚ್ಚಿ ಹೋದವು. ಬಹಳಷ್ಟು ಪ್ರದೇಶ ನೀರಿನಡಿಯಲ್ಲಿ ಮುಳುಗಿತು. ಭೂಕುಸಿತದಿಂದಾಗಿ ಮನೆಯೊಂದು ಕುಸಿದು ಬಿದ್ದು ಅದರೊಳಗಿದ್ದ ಒಂದೇ ಕುಟುಂಬದ ಮೂವರು ಜೀವಂತ ಹೂತು ಹೋಗಿರುವ ಶಂಕೆ ವ್ಯಕ್ತವಾಯಿತು. ಸಾಧುವೊಬ್ಬರು ಬಿಯಾಸ್ ನದಿಯ ಉಪನದಿಯಾದ ಸೋನ್ ಖುಡ್ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದರು. ಸೋನ್ ಖುಡ್ ಹಠಾತ್ತನೆ ಉಕ್ಕಿ ಹರಿದು ಅಂಗಡಿ, ಮನೆಗಳನ್ನು ಮುಳುಗಿಸುತ್ತಾ ಧರಂಪುರ ಬಸ್ ನಿಲ್ದಾಣಕ್ಕೆ ನುಗ್ಗಿದಾಗ ಅಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ಸುಮಾರು ಒಂದು ಡಜನ್ ಮಂದಿ ಪ್ರಾಣ ಉಳಿಸಿಕೊಳ್ಳಲು ಮೊದಲ ಮಹಡಿಗೆ ಧಾವಿಸಿದರು. ಪ್ರವಾಹದಲ್ಲಿ ಸಿಲುಕಿ ಮೂರು ಬಸ್ಸುಗಳು ಹಾನಿಗೊಂಡರೆ, ಮೂರು ಕಾರುಗಳು ಪ್ರವಾಹದಲ್ಲಿ ಕೊಚ್ಚಿ ಹೋದವು.ಪ್ರಬಲ ಪ್ರವಾಹ ರಕ್ಷಣಾ ಕಾರ್ಯಾಚರಣೆಗಳಿಗೂ ಅಡ್ಡಿಯಾಯಿತು.

 2015: ಮುಂಬೈ: ಮುಂಬೈಯಿಂದ ದೆಹಲಿಗೆ ಹೊರಟಿದ್ದ ಇಂಡಿಗೊ ವಿಮಾನವು ಗಗನಕ್ಕೆ ಏರಿದ 15 ನಿಮಿಷಗಳಲ್ಲಿಯೇ ತಾಂತ್ರಿಕ ತೊಂದರೆ ಕಾರಣ ಪುನಃ ಮುಂಬೈ ವಿಮಾನ ನಿಲ್ದಾಣಕ್ಕೇ ಮರಳಿದ ಘಟನೆ ಈದಿನ ಬೆಳಗ್ಗೆ ಘಟಿಸಿತು. 6ಇ-178 ವಿಮಾನದಲ್ಲಿ ಇದ್ದ ಎಲ್ಲಾ 150 ಮಂದಿ ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷಿತರಾಗಿದ್ದು, ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತಾಗಿ ಇಳಿಯಬೇಕಾದ ಸನ್ನಿವೇಶ ಉಂಟಾಗಲಿಲ್ಲ. ವಿಮಾನವು ಸುಮಾರು 15 ನಿಮಿಷ ತಡವಾಗಿ ಬೆಳಗ್ಗೆ 9.45ಕ್ಕೆ ಮುಂಬೈಯಿಂದ ಹೊರಟಿತ್ತು. ಆದರೆ ಗಗನಕ್ಕೆ ಏರಿದ ಸುಮಾರು 15 ನಿಮಿಷಗಳ ಬಳಿಕ ಕೆಲವು ತಾಂತ್ರಿಕ ತೊಂದರೆಗಳ ಕಾರಣ ವಿಮಾನವು ಮುಂಬೈಗೇ ವಾಪಸಾಗುವುದು ಎಂದು ಪೈಲಟ್ ಪ್ರಕಟಿಸಿದರು. ಇಂಧನ ವ್ಯವಸ್ಥೆಯಲ್ಲಿನ ಸೋರಿಕೆಯಿಂದಾಗಿ ವಿಮಾನವನ್ನು ಮುಂಬೈಗೆ ಹಿಂದೆ ತರಬೇಕಾಯಿತು ಎನ್ನಲಾಯಿತು.

 2015: ನವದೆಹಲಿ: ಬಿಹಾರ ಮತ್ತು ಹಿಮಾಚಲ ಪ್ರದೇಶಕ್ಕೆ ಹೊಸ ರಾಜ್ಯಪಾಲರ ನೇಮಕವಾಯಿತು. ಈ ಸಂಬಂಧ ಆದೇಶ ಹೊರಡಿಸಿದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು, ರಾಮ್ ರಾಥ್ ಕೋವಿಂದ್ ಅವರನ್ನು ಬಿಹಾರ ರಾಜ್ಯಪಾಲರಾಗಿ ಮತ್ತು ಆಚಾರ್ಯ ದೇವವ್ರತ ಅವರನ್ನು ಹಿಮಾಚಲ ಪ್ರದೇಶದ ರಾಜ್ಯಪಾಲರಾಗಿ ನಿಯುಕ್ತಿಗೊಳಿಸಿದರು.  ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಿದ ದಿನದಿಂದ ಇವರ ಕಾರ್ಯಾವಧಿ ಆರಂಭವಾಗುವುದು.

2015: ಚೆನೈ: ಕೇಂದ್ರ ನಗರಾಭಿವೃದ್ಧಿ ಸಚಿವಾಲಯ ಬಿಡುಗಡೆಗೊಳಿಸಿದ ದೇಶದ ಅತೀ ಸ್ವಚ್ಛ ನಗರಗಳ ಪಟ್ಟಿಯಲ್ಲಿ ಕರ್ನಾಟಕದ ಸಾಂಸ್ಕೃತಿಕ ನಗರ ಮೈಸೂರು ಮೊದಲ ಸ್ಥಾನ ಪಡೆದುಕೊಂಡಿತು. ‘ಸ್ವಚ್ಛ ಭಾರತ’ ಯೋಜನೆಯಡಿ ಆಯ್ದ 476 ನಗರಗಳ ಪೈಕಿ ಮೈಸೂರಿಗೆ ಪ್ರಥಮ ಸ್ಥಾನ ಲಭಿಸಿದ್ದು, ತಮಿಳು ನಾಡಿನ ತಿರುಚಿರಾಪಳ್ಳಿ ದ್ವಿತೀಯ ಸ್ಥಾನದಲ್ಲಿದೆ. ವಿಶೇಷವೆಂದರೆ ದೇಶದ ಮೊದಲ 10 ಸ್ವಚ್ಛ ನಗರಗಳ ಪಟ್ಟಿಯಲ್ಲಿ ಕರ್ನಾಟಕದ ನಾಲ್ಕು ನಗರಗಳು ಸ್ಥಾನ ಪಡೆದುಕೊಳ್ಳುವ ಮೂಲಕ ಗಮನ ಸೆಳೆದವು.  ಕರ್ನಾಟಕದ ಹಾಸನ, ಮಂಡ್ಯ, ಬೆಂಗಳೂರು ಹಾಗೂ ಪಶ್ಚಿಮ ಬಂಗಾಳದ ಹಲಿಸಹರ, ಗ್ಯಾಂಗ್ಟಕ್, ನವಿ ಮುಂಬೈ, ಕೊಚ್ಚಿ, ತಿರುವನಂತಪುರಂ ನಗರಗಳು ಪಟ್ಟಿಯಲ್ಲಿವೆ. 2014-15ನೇ ಸಾಲಿನಲ್ಲಿ ನಡೆದ ಸಮೀಕ್ಷೆಯಲ್ಲಿ ನಗರಗಳಲ್ಲಿ ಘನ ತ್ಯಾಜ್ಯ ವಿಲೇವಾರಿ, ಕುಡಿಯುವ ನೀರಿನ ಸೌಲಭ್ಯ, ತ್ಯಾಜ್ಯ ನೀರು ಸಂಸ್ಕರಣೆ ಸೇರಿದಂತೆ ಹಲವು ವಿಷಯಗಳಲ್ಲಿನ ಕಾರ್ಯವೈಖರಿಯನ್ನು ಪರಿಗಣಿಸಲಾಗಿತ್ತು. ಕಳೆದ ಕೆಲ ದಿನಗಳ ಹಿಂದಷ್ಟೇ ಸ್ವಚ್ಛ ಭಾರತ ಅಭಿಯಾನದ ಜಾಗೃತಿ ಕಾರ್ಯಕ್ರಮದ ಅನುಷ್ಠಾನದಲ್ಲಿ ಕರ್ನಾಟಕ ಮೊದಲ ಸ್ಥಾನ ಪಡೆದುಕೊಂಡಿದೆ ಎಂದು ಕೇಂದ್ರ ನಗರಾಭಿವೃದ್ಧಿ ಸಚಿವಾಲಯ ಘೋಷಿಸಿತ್ತು.
2015: ರಾಂಚಿ: ವಾಮಾಚಾರ ನಡೆಸುತ್ತಿದ್ದ ಆಪಾದನೆಯಲ್ಲಿ ಐವರು ಮಹಿಳೆಯರನ್ನು ನಸುಕಿನಲ್ಲಿ ರಾಂಚಿಗೆ 40 ಕಿಮೀ ದೂರದ ಮಂದಾರ ಗ್ರಾಮದಲ್ಲಿ ಹೊಡೆದು ಕೊಲ್ಲಲಾಗಿದೆ ಎಂದು ಪೊಲೀಸರು ತಿಳಿಸಿದರು. ‘ಐವರು ಮಹಿಳೆಯರನ್ನು ಬಡಿಗೆಗಳು ಮತ್ತು ಸರಳುಗಳಿಂದ ಹೊಡೆದು ಗ್ರಾಮಸ್ಥರು ಕೊಂದು ಹಾಕಿದ್ದಾರೆ. ದಾಳಿ ನಡೆಸಿದವರಲ್ಲಿ ಬಹುತೇಕ ಮಂದಿ ಯುವಕರು. ಮಹಿಳೆಯರನ್ನು ಹಿಂದಿನ ದಿನ ತಡರಾತ್ರಿಯಲ್ಲಿ ಅವರ ಮನೆಗಳಿಂದ ಎಳೆತರಲಾಗಿತ್ತು’ ಎಂದು ಪೊಲೀಸರು ಹೇಳಿದರು. ಈ ಮಹಿಳೆಯರು ಮಾಟ ಮಂತ್ರ ಮಾಡುವುದರಲ್ಲಿ ನಿರತರಾಗಿದ್ದರು ಎಂದು ಗ್ರಾಮಸ್ಥರು ಆಪಾದಿಸಿರುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.  ಮಾಟಗಾತಿಯರು ಎಂದು ಆಪಾದಿಸಿ ಜಾರ್ಖಂಡ್​ನಲ್ಲಿ ಕಳೆದ ಹಲವಾರು ವರ್ಷಗಳಿಂದ ಸುಮಾರು 750ಕ್ಕೂ ಹೆಚ್ಚು ಮಹಿಳೆಯರನ್ನು ಕೊಲ್ಲಲಾಗಿದೆ ಎಂದು ಪೊಲೀಸ್ ಮೂಲಗಳು ಹೇಳಿದವು.

2015: ನವದೆಹಲಿ: ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಪತ್ನಿ ಸುವ್ರಾ ಮುಖರ್ಜಿ ಅವರ ಆರೋಗ್ಯ ಸ್ಥಿತಿ ವಿಷಮಿಸಿದೆ ಎಂದು ಇಲ್ಲಿನ ಸೇನಾ ಆಸ್ಪತ್ರೆ ಮೂಲಗಳು ತಿಳಿಸಿದವು. ಕೆಲ ಕಾಲದಿಂದ ಅಸ್ವಸ್ಥರಾಗಿದ್ದ ಸುವ್ರಾ ಮುಖರ್ಜಿ ಅವರನ್ನು ಹಿಂದಿನ ದಿನ ಸಂಜೆ ಇಲ್ಲಿನ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ‘ಉಸಿರಾಟದ ಸಮಸ್ಯೆ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ಕರೆತರಲಾಗಿತ್ತು. ಅವರು ಹೃದ್ರೋಗಿಯಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ’ ಎಂದು ಆಸ್ಪತ್ರೆ ವಕ್ತಾರರು ಹೇಳಿದರು.

2015: ಪಟನಾ (ಬಿಹಾರ): ಪ್ರಧಾನಿ ನರೇಂದ್ರ ಮೋದಿ ಅವರು ಈದಿನದ ತಮ್ಮ ಗಯಾ ಪ್ರವಾಸ ಕಾಲಕ್ಕೆ ನಿಗದಿಯಾಗಿದ್ದ ಬೋಧ್ ಗಯಾ ಭೇಟಿಯನ್ನು ರದ್ದು ಪಡಿಸಿದರು. ಬಿಹಾರಿನ ಗಯಾ ಪ್ರವಾಸ ಕಾಲದಲ್ಲಿ ನಿಗದಿಯಾಗಿದ್ದ ತಮ್ಮ ಬೋಧ್ ಗಯಾ ಭೇಟಿಯನ್ನು ಸಂಬಂಧಪಟ್ಟ ವ್ಯಕ್ತಿಗಳಿಗೆ ಗೊತ್ತಿರುವ ಕಾರಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ರದ್ದು ಪಡಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು. ‘ಮೋದಿಯವರು ವಿಮಾನ ನಿಲ್ದಾಣಕ್ಕೆ ಹೋಗುವ ದಾರಿಯಲ್ಲಿ ಸಮೀಪದಲ್ಲೇ ಇರುವ ಬೋಧ ಗಯಾದ ಮಹಾಬೋಧಿ ದೇವಾಲಯಕ್ಕೆ ಭೇಟಿ ನೀಡುವುದಿಲ್ಲ. ಅವರ ಬೋಧ ಗಯಾ ಭೇಟಿ ರದ್ದಾಗಿದೆ. ಇದಕ್ಕೆ ಕಾರಣವೇನು ಎಂಬುದು ಸಂಬಂಧಪಟ್ಟವರಿಗೆ ಚೆನ್ನಾಗಿ ಗೊತ್ತು’ ಎಂದು ಗಯಾದಲ್ಲಿನ ಅಧಿಕಾರಿಯೊಬ್ಬರು ಹೇಳಿದರು. ಬೌದ್ಧರ ಪವಿತ್ರ ಸ್ಥಳವಾದ ಬೋಧ್ ಗಯಾವು ಗಯಾ ಪಟ್ಟಣದಿಂದ 12 ಕಿಮೀ ಮತ್ತು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 2 ಕಿಮೀ ದೂರದಲ್ಲಿದೆ. ಮುಜಾಫ್ಪರಪುರದಲ್ಲಿ ಜುಲೈ 25ರಂದು ಸಾರ್ವಜನಿಕ ಭಾಷಣ ಮಾಡಿದ್ದ ಮೋದಿ ಅವರು ಗಯಾಕ್ಕೆ ವಿಶೇಷ ವಿಮಾನದಲ್ಲಿ ಆಗಮಿಸಿ ತಮ್ಮ ಎರಡನೇ ಸಾರ್ವಜನಿಕ ಭಾಷಣ ಮಾಡುವರು. ‘ಸಮಯದ ಅಭಾವ ಕಾರಣ ಮೋದಿ ಅವರ ಪ್ರಸ್ತಾಪಿತ ಬೋಧ್ ಗಯಾ ಭೇಟಿ ರದ್ದಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಗಯಾದಲ್ಲಿ ಹೇಳಿದರು. 2013ರ ಜುಲೈ ತಿಂಗಳಿನಿಂದ ಆಗಾಗ ಸರಣಿ ಬಾಂಬ್ ಸ್ಪೋಟಗಳಿಗೆ ತುತ್ತಾಗಿರುವ ಬೋಧ್ ಗಯಾಕ್ಕೆ ಮೋದಿಯವರು ಭೇಟಿ ನೀಡಿದ್ದರೆ ಬೌದ್ಧ ರಾಷ್ಟ್ರಗಳಿಗೆ ಧನಾತ್ಮಕ ಸಂದೇಶವನ್ನು ನೀಡುತ್ತಿತ್ತು ಎಂದು ಬೌದ್ಧ ಭಿಕ್ಷು ಒಬ್ಬರು ಹೇಳಿದರು. ದೇವಾಲಯದ ಆಸುಪಾಸಿನಲ್ಲಿ 2013ರಿಂದ ಈವರೆಗೆ ಕನಿಷ್ಠ 10 ಬಾಂಬ್​ಗಳು ಸ್ಪೋಟಿಸಿದ್ದು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಮುಖ ಸುದ್ಧಿಗಳಾಗಿದ್ದವು.

 2015: ಜಮ್ಮು: ಕೆಲವು ಗಂಟೆಗಳಿಂದ ಸಾಕಷ್ಟು ಪ್ರಮಾಣದಲ್ಲಿ ಮಳೆಯಾದ ಪರಿಣಾಮ ಉಧಾಂಪುರ ಜಿಲ್ಲೆಯ ಖೇರಿ ಸಮೀಪ ಶ್ರೀನಗರ ಮತ್ತು ಜಮ್ಮು ಸಂಪರ್ಕ ಸಾಧಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತ ಸಂಭವಿಸಿ, ಅಮರನಾಥ ಯಾತ್ರಿಕರ ಪ್ರಯಾಣಕ್ಕೆ ಅಡ್ಡಿಯುಂಟಾಯಿತು. ಈ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಅಮರನಾಥ ಯಾತ್ರೆಯನ್ನು ರದ್ದು ಪಡಿಸಲಾಯಿತು. 300 ಕಿಲೋ ಮೀಟರ್​ನಷ್ಟು ದೂರ ಹೊಂದಿರುವ ಈ ಹೆದ್ದಾರಿ ಮೂಲಕವೇ ಜಮ್ಮುವಿನಿಂದ ಅಮರನಾಥಕ್ಕೆ ಸಾಗಬೇಕಾದ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ವಾಹನ ನಿರ್ವಹಣಾಧಿಕಾರಿ ಸಂಜಯ್ ಕೊತ್ವಾಲ್ ಹೇಳಿದರು.

2015: ಲಖನೌ: ಲಖನೌ ಪ್ರಯೋಗಾಲಯ ಪರೀಕ್ಷೆಯಲ್ಲಿ ‘ಮ್ಯಾಗಿ ನೂಡಲ್’ ಮಾದರಿ ವಿಫಲಗೊಂಡಿದ್ದು, ನಿಗದಿತ ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಸತುವಿನ ಅಂಶ ಪತ್ತೆಯಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು. ನೆರೆಯ ಬಾರಾಬಂಕಿಯಲ್ಲಿ ಸಂಗ್ರಹಿಸಲಾದ ‘ಮ್ಯಾಗಿ’ ಸ್ಯಾಂಪಲ್​ಗಳನ್ನು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಿದಾಗ ನಿಗದಿತ ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಸತುವಿನ ಅಂಶ ಇದ್ದುದು ಪತ್ತೆಯಾಯಿತು ಎಂದು ಅವರು ನುಡಿದರು. ಪರೀಕ್ಷಾ ವರದಿಗಳನ್ನು ಭಾರತೀಯ ಆಹಾರ ಸುರಕ್ಷತೆ ಗುಣಮಟ್ಟ ಪ್ರಾಧಿಕಾರಕ್ಕೆ (ಎಫ್​ಎಸ್​ಎಸ್​ಎಐ) ಕಳುಹಿಸಿಕೊಡಲಾಗುವುದು ಎಂದು ಅಡಿಷನಲ್ ಕಮಿಷನರ (ಆಹಾರ) ಆರ್.ಎಸ್. ಮೌರ್ಯ ಹೇಳಿದರು. ಮ್ಯಾಗಿಯಲ್ಲಿ ಮಾನೋಸೋಡಿಯಂ ಗ್ಲುಟಾಮೇಟ್ (ಎಂಎಸ್​ಜಿ) ಮತ್ತು ಸತುವಿನ ಅಂಶ ಮಿತಿಗಿಂತ ಹೆಚ್ಚಿದೆ ಎಂಬ ಪ್ರಾಥಮಿಕ ವರದಿಗಳ ಬಳಿಕ ರಾಜ್ಯಾದ್ಯಂತ 500 ಮಾದರಿಗಳನ್ನು ಸಂಗ್ರಹಿಸಲಾಯಿತು. ಇವುಗಳಲ್ಲಿ ಐದು ಮಾದರಿಗಳು ಸಂಪೂರ್ಣ ‘ಅಯೋಗ್ಯ’ ಎಂದು ಕಂಡು ಬಂದವು ಎಂದು ಅವರು ನುಡಿದರು. ಜೂನ್ ತಿಂಗಳಲ್ಲಿ ಮ್ಯಾಗಿ ಮೇಲೆ ನಿಷೇಧ ಹೇರಲಾಗಿತ್ತು. ಮ್ಯಾಗಿ ತಯಾರಕ ನೆಸ್ಲೆ ಕಂಪೆನಿ ನಿಷೇಧವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿತ್ತು. ಉತ್ತರ ಪ್ರದೇಶ ಮತ್ತು ಇತರ ಕೆಲವು ರಾಜ್ಯಗಳಲ್ಲಿ ಎಂಎಸ್​ಜಿ ಮತ್ತು ಸತುವಿನ ಅಂಶ ಅತ್ಯಂತ ಹೆಚಚಿನ ಪ್ರಮಾಣದಲ್ಲಿದೆ ಎಂಬುದು ಪತ್ತೆಯಾಗಿ ಕೋಲಾಹಲ ಎದ್ದ ಬಳಿಕ ತನ್ನ ಜನಪ್ರಿಯ ದಿಢೀರ್ ನೂಡಲ್ ’ಮ್ಯಾಗಿ’ಯನ್ನು ರಾಷ್ಟ್ರಾದ್ಯಂತ ಹಿಂತೆಗೆದುಕೊಳ್ಳಲು ನೆಸ್ಲೆ ಆದೇಶಿಸಿತ್ತು. ’ಮ್ಯಾಗಿ’ ಮಾನವ ಸೇವನೆಗೆ ಸುರಕ್ಷಿತವಾಗಿದ್ದು, ಭಾರತದ ಆಹಾರ ಗುಣಮಟ್ಟ ನಿಯಮಾವಳಿಗಳಿಗೆ ಅದು ಬದ್ಧವಾಗಿದೆ ಎಂದು ನೆಸ್ಲೆ ವಾದಿಸಿತ್ತು..

2015: ಕರಾಚಿ: ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ವಾಸಿಂ ಅಕ್ರಂ ಮೇಲೆ ಗುಂಡಿನ ದಾಳಿ ಮಾಡಿದ್ದ ದುಷ್ಕರ್ವಿುಯನ್ನು ಪೊಲೀಸರು ವಶಕ್ಕೆ ಪಡೆದಿರುವುದಾಗಿ ಪಾಕ್​ನ ಡಾನ್ ಪತ್ರಿಕೆ ವರದಿ ಮಾಡಿತು. ಖೈದಾಬಾದ್​ನ ದೌಡ್ ಚೌರಂಗಿ ಪ್ರದೇಶದಲ್ಲಿ ದಾಳಿ ಮಾಡಿದ ಪೊಲೀಸರು ಶಂಕಿತನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಅಕ್ರಂ ಅವರಿದ್ದ ಕಾರಿಗೆ ಡಿಕ್ಕಿ ಹೊಡೆದಿದ್ದ ಕಾರಿನ ಚಾಲಕ ಈತನೆಂದು ಪೊಲೀಸರು ತಿಳಿಸಿರುವುದಾಗಿ ವರದಿಯಲ್ಲಿ ತಿಳಿಸಲಾಯಿತು. ಅಕ್ರಂ ಅವರಿದ್ದ ಮರ್ಸಿಡೀಸ್ ಕಾರಿಗೆ ಮತ್ತೊಂದು ಕಾರು ಲಘುವಾಗಿ ಡಿಕ್ಕಿ ಹೊಡೆದಿತ್ತು. ಉಭಯ ಕಾರು ಚಾಲಕರು ವಾಗ್ವಾದ ನಡೆಸಿದ್ದರು. ಬಳಿಕ ಮತ್ತೊಂದು ಕಾರಿನಲ್ಲಿದ್ದವನೊಬ್ಬ ಅಕ್ರಂ ಅವರಿದ್ದ ಕಾರಿನ ಮೇಲೆ ಗುಂಡಿನ ದಾಳಿ ಮಾಡಿದ್ದ. ಅದೃಷ್ಟವಶಾತ್ ಅಕ್ರಂ ಪ್ರಾಣಾಪಾಯದಿಂದ ಪಾರಾಗಿದ್ದರು.

2015: ನವದೆಹಲಿ: ಭಾರತದ ನೆಲದಲ್ಲಿ ಗೋಹತ್ಯೆಯನ್ನು ಬಹಿರಂಗವಾಗಿ ಬೆಂಬಲಿಸಿದರೆ ಆಡಳಿತ ನಡೆಸುವುದು ದುಸ್ತರವಾಗುತ್ತದೆ ಎಂಬುದು ಮೊಘಲ್ ದೊರೆಗಳಿಗೆ ಗೊತ್ತಿತ್ತು. ಆದ್ದರಿಂದಲೇ ಅವರು ಅದನ್ನು ಬಹಿರಂಗವಾಗಿ ಬೆಂಬಲಿಸಲಿಲ್ಲ. ಆದರೆ ವಿಷಯವನ್ನು ಗ್ರಹಿಸುವಲ್ಲಿ ಬ್ರಿಟಿಷರು ಎಡವಿದರು ಎಂದು ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಹೇಳಿದರು. ಕೇಂದ್ರ ಕೃಷಿ ಸಚಿವಾಲಯದ ಸಹಯೋಗದಲ್ಲಿ ನವದೆಹಲಿಯಲ್ಲಿ ರಾಷ್ಟ್ರೀಯ ಗೋದಾನ್ ಮಹಾಸಂಘ ಆಯೋಜಿಸಿದ್ದ ಗೋಸಂರಕ್ಷಣೆ ಕುರಿತ ಸಮ್ಮೇಳನದಲ್ಲಿ ಅವರು ಮಾತನಾಡಿದರು. ಗೋವುಗಳನ್ನು ಕೊಲ್ಲುವುದರಿಂದ ಹಾಗೂ ಅದಕ್ಕೆ ಬಹಿರಂಗ ಬೆಂಬಲ ನೀಡುವುದರಿಂದ ಭಾರತದಲ್ಲಿ ದೀರ್ಘಕಾಲ ಆಡಳಿತ ನಡೆಸಲಾಗದೆಂಬುದು ಮೊಘಲರಿಗೆ ಗೊತ್ತಿತ್ತು. ನಾವು ಜನರ ಮನಸ್ಸು ಗೆಲ್ಲಬೇಕು ಇಲ್ಲವೇ ಗೋಮಾಂಸವನ್ನು ಭಕ್ಷಿಸಬೇಕು. ಎರಡನ್ನೂ ಏಕಕಾಲಕ್ಕೆ ಮಾಡಲು ಸಾಧ್ಯವಿಲ್ಲವೆಂಬ ಬಾಬರ್ ಉಯಿಲಿನಲ್ಲಿ ಇತ್ತೆಂಬ ಮಾತನ್ನು ಉಲ್ಲೇಖಿಸಿದರು. ಭಾರತಕ್ಕೆ ಬಂದ ಬ್ರಿಟಿಷರು ನಮ್ಮ ಸಂಸ್ಕೃತಿಯನ್ನು ಗೌರವಿಸುವ ಬದಲು ಅದನ್ನು ಹಾಳುಗೆಡವಲು ಪ್ರಯತ್ನಿಸಿದರು. ಸಿಡಿಮದ್ದುಗಳ ತುದಿಗೆ ಅವರು ದನದ ಕೊಬ್ಬು ಹಚ್ಚಿದ್ದೇ 1857 ಮೊದಲ ಸ್ವಾತಂತ್ರ್ಯ ಸಂಗ್ರಾಮಕ್ಕೆ ಕಾರಣವಾಯಿತು. ಭಾರತದಲ್ಲಿ ಗೋವುಗಳ ಬಗ್ಗೆ ಇರುವ ಗೌರವಾದರಗಳು ಏನೆಂಬುದು ಇದೊಂದರಿಂದಲೇ ಸ್ಪಷ್ಟವಾಗುತ್ತದೆ ಎಂದರು. ಕಾರಣದಿಂದಾಗಿ ಗೃಹಸಚಿವರಾಗಿ ತಾವು ಬಾಂಗ್ಲಾದೇಶಕ್ಕೆ ಗೋವುಗಳ ಕಳ್ಳಸಾಗಾಣಿಕೆಗೆ ತಡೆಗೆ ಸೂಕ್ತ ಕ್ರಮಕೈಗೊಂಡಿದ್ದಾಗಿ ಹೇಳಿದ ಅವರು, ಇಂಥ ಪ್ರಕರಣಗಳು ಗಣನೀಯವಾಗಿ ಕಡಿಮೆ ಮಾಡುವಲ್ಲಿ ಯಶಸ್ವಿಯಾಗಿರುವ ಗಡಿ ಭದ್ರತಾ ಪಡೆ ಯೋಧರನ್ನು ಅಭಿನಂದಿಸಿದರು. ಗೋಹತ್ಯೆ ತಡೆಗಟ್ಟುವ ಕಾಯ್ದೆ ರೂಪಿಸುವುದು ರಾಜ್ಯ ಸರ್ಕಾರಗಳ ವಿವೇಚನೆಗೆ ಬಿಟ್ಟ ವಿಷಯ. ಆದ್ದರಿಂದ ಬಗ್ಗೆ ರಾಜ್ಯ ಸರ್ಕಾರಗಳೇ ತೀರ್ಮಾನ ತೆಗೆದುಕೊಳ್ಳಬೇಕೆಂದು ಪರಿಸರ ಮತ್ತು ಅರಣ್ಯ ಖಾತೆಯ ಸಹಾಯಕ ಸಚಿವ ಪ್ರಕಾಶ್ ಜಾವ್ಡೇಕರ್ ಹೇಳಿದರು.

2007: ಭಾರತೀಯ ಚಿತ್ರರಂಗಕ್ಕೆ ಸಲ್ಲಿಸಿದ ಅನುಪಮ ಸೇವೆಗಾಗಿ ಖ್ಯಾತ ಚಿತ್ರ ನಿರ್ದೇಶಕ, ನಿರ್ಮಾಪಕ ಶ್ಯಾಮ್ ಬೆನಗಲ್ ಅವರಿಗೆ ಕೇಂದ್ರ ಸರ್ಕಾರ 2005ನೇ ಸಾಲಿನ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಿತು. ಈ ಪ್ರಶಸ್ತಿ ಎರಡು ಲಕ್ಷ ರೂಪಾಯಿ ನಗದು ಹಾಗೂ ಸ್ವರ್ಣ ಕಮಲ ಒಳಗೊಂಡಿದೆ. 72 ವರ್ಷದ ಬೆನಗಲ್ ಪ್ರಸ್ತುತ ರಾಜ್ಯಸಭೆಯ ಸದಸ್ಯರು. 1976ರಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಪಾತ್ರರಾಗಿದ್ದ ಅವರು 1991ರಲ್ಲಿ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿದ್ದರು. 70ರ ದಶಕದಲ್ಲಿ ಹಿಂದಿ ಚಿತ್ರ `ಅಂಕುರ್' ನಿರ್ದೇಶನದೊಂದಿಗೆ ಅವರು ಚಿತ್ರರಂಗ ಪ್ರವೇಶಿಸಿದರು. `ಅಂಕುರ್' ಚಿತ್ರರಂಗದಲ್ಲಿ ಹೊಸ ಅಲೆಗೆ ಕಾರಣವಾಯಿತು. ಅವರ ಚಿತ್ರಗಳ ಕಥಾವಸ್ತು ವೈವಿಧ್ಯಮಯವಾಗಿದ್ದು ಸಮಕಾಲೀನ ಭಾರತೀಯ ಸಮಾಜವನ್ನು ಪ್ರತಿಬಿಂಬಿಸಿದವು. ನಿಶಾಂತ್, ಮಂಥನ್, ಭೂಮಿಕಾ, ಜುನೂನ್, ಕಲಿಯುಗ್, ಮಂಡಿ, ತ್ರಿಕಾಲ್, ಸೂರಜ್ ಕಾ ಸಾತ್ವಾ ಘೋಡಾ, ಮಾಮೂ, ಸರ್ದಾರಿ ಬೇಗಂ, ಸಮರ್, ದಿ ಮೇಕಿಂಗ್ ಆಫ್ ಮಹಾತ್ಮ, ಜುಬೇದಾ ಹಾಗೂ ಸುಭಾಶ್ ಚಂದ್ರ ಬೋಸ್ - ಶ್ಯಾಮ್ ಅವರ ಕೆಲವು ಪ್ರಮುಖ ಚಿತ್ರಗಳು. ಸದಭಿರುಚಿಯ, ಚಿಂತನೆಗೆ ಹಚ್ಚುವಂತಹ 24 ಚಿತ್ರಗಳನ್ನು ನಿರ್ದೇಶಿಸಿರುವ ಬೆನಗಲ್, ಸಿನಿಮಾಗಳ ಹೊರತಾಗಿ ಹಲವು ಸಾಕ್ಷ್ಯಚಿತ್ರಗಳನ್ನು ನಿರ್ಮಿಸಿದವರು. ಕೈಗಾರೀಕರಣದ ಸಮಸ್ಯೆಗಳು, ಸಂಸ್ಕೃತಿ, ಸಂಗೀತ ಅವರ ಸಾಕ್ಷ್ಯಚಿತ್ರಗಳಿಗೆ ವಸ್ತು. ಬೆನಗಲ್ ಕಿರುತೆರೆಯಲ್ಲೂ ತಮ್ಮ ಛಾಪು ಒತ್ತಿದವರು. ಭಾರತೀಯ ಹಾಗೂ ಅಂತಾರಾಷ್ಟ್ರೀಯ ಕಥೆಗಾರರ ಸಣ್ಣಕಥೆಗಳನ್ನು ಆಧರಿಸಿದ ಹಲವು ಧಾರಾವಾಹಿಗಳು ದೂರದರ್ಶನದಲ್ಲಿ ಪ್ರಸಾರವಾಗಿ ಜನಪ್ರಿಯತೆ ಗಳಿಸಿವೆ. ಗ್ರಾಮೀಣ ಮಕ್ಕಳಿಗಾಗಿ `ಯುನಿಸೆಫ್' ಪ್ರಾಯೋಜಿತ ಶೈಕ್ಷಣಿಕ ಸರಣಿಯನ್ನೂ ಶ್ಯಾಮ್ ನಿರ್ದೇಶಿಸಿದ್ದಾರೆ. 1966ರಿಂದ 1973ರ ಅವಧಿಯಲ್ಲಿ ಸಮೂಹ ಸಂವಹನ ತಂತ್ರಜ್ಞಾನವನ್ನು ಬೋಧಿಸಿದ ಬೆನಗಲ್, 1980-83 ಹಾಗೂ 1989-92ರ ಅವಧಿಯಲ್ಲಿ `ಫಿಲ್ಮ್ ಅಂಡ್ ಟೆಲಿವಿಜನ್ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾ'ದ ಅಧ್ಯಕ್ಷರಾಗಿದ್ದರು. ತಮ್ಮ ಅಧಿಕಾರಾವಧಿಯಲ್ಲಿ ಚಲನಚಿತ್ರ ಶಿಕ್ಷಣಕ್ಕೆ ಹೊಸ ಸ್ವರೂಪ ನೀಡಿದರು. ಬೆನಗಲ್ ಮೂಲತಃ ಉಡುಪಿ ಜಿಲ್ಲೆಯ ಬೆನಗಲ್ ಗ್ರಾಮದವರು. ತಂದೆ ಉದ್ಯೋಗದ ನಿಮಿತ್ತ ವಲಸೆ ಹೋಗಿದ್ದರಿಂದ 1934ರ ಡಿಸೆಂಬರ್ 14ರಂದು ಹೈದರಾಬಾದ್ ಸಮೀಪದ ಅಲಿವಾಲ್ ನಲ್ಲಿ ಹುಟ್ಟಿ ಬೆಳೆದರು.

2007: ಕರ್ನಾಟಕ ರಾಜ್ಯದಲ್ಲಿ ಮಳೆ ತನ್ನ ಆರ್ಭಟವನ್ನು ಮುಂದುವರೆಸಿತು. ಕೊಡಗಿನಲ್ಲಿ ಮಳೆ ಸ್ವಲ್ಪ ಇಳಿಮುಖವಾದರೂ ಉತ್ತರ ಕನ್ನಡ ಮತ್ತು ಬಳ್ಳಾರಿಗಳಲ್ಲಿ ಅಪಾಯದ ಅಂಚು ತಲುಪಿತು. ತುಂಗಭದ್ರಾ ಜಲಾಶಯದಿಂದ ನದಿಗೆ ಅಧಿಕ ನೀರು ಬಿಟ್ಟ ಹಿನ್ನೆಲೆಯಲ್ಲಿ ತಾಲ್ಲೂಕಿನ 16 ಗ್ರಾಮಗಳು ನಡುಗಡ್ಡೆಯಾದವು. ಇಲ್ಲಿ ಸಿಕ್ಕಿಹಾಕಿಕೊಂಡಿದ್ದ 76 ಜನರ ಪೈಕಿ 50 ಜನರನ್ನು ಹರಿಗೋಲಿನ ಮೂಲಕ ರಕ್ಷಿಸಲಾಯಿತು.

2007: ಲಾಸ್ ಏಂಜೆಲಿಸ್ ನ ಕಾರ್ಸೋನಿನಲ್ಲಿ ಆರು ಲಕ್ಷ ಡಾಲರ್ ಬಹುಮಾನ ಮೊತ್ತದ ವೆಸ್ಟ್ ಬ್ಯಾಂಕ್ ಕ್ಲಾಸಿಕ್ ಡಬ್ಲ್ಯುಟಿಎ ಟೆನಿಸ್ ಟೂರ್ನಿಯ ಸಿಂಗಲ್ಸಿನಲ್ಲಿ ಕ್ವಾರ್ಟರ್ ಫೈನಲಿನಲ್ಲಿ 30ನೇ ರ್ಯಾಂಕಿಂಗಿನಲ್ಲಿದ್ದ ಸಾನಿಯಾ ಮಿರ್ಜಾ ಮಾಜಿ ಅಗ್ರ ಶ್ರೇಯಾಂಕಿತ ಆಟಗಾರ್ತಿ ಮಾರ್ಟಿನಾ ಹಿಂಗಿಸ್ ಅವರನ್ನು ಸೋಲಿಸಿ ಟೆನಿಸ್ ಜಗತ್ತನ್ನು ಅಚ್ಚರಿಯಲ್ಲಿ ಮುಳುಗಿಸಿದರು.

2007: ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಇತರೆ ಹಿಂದುಳಿದ ವರ್ಗಗಳವರಿಗೆ (ಒಬಿಸಿ) ಶೇ 27ರಷ್ಟು ಮೀಸಲಾತಿ ಕಲ್ಪಿಸುವ ನೀತಿಯಿಂದ `ಕೆನೆಪದರ' (ಆರ್ಥಿಕವಾಗಿ ಸಬಲರು) ಹೊರಗಿಡುವುದಾಗಿ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ ಮುಂದೆ ಮಹತ್ವದ ಹೇಳಿಕೆ ನೀಡಿತು. ಈ ಮೀಸಲಾತಿಯಿಂದ `ಕೆನೆಪದರ'ವನ್ನು ಹೊರಗಿಡಬೇಕು ಎಂದು ನ್ಯಾಯಾಲಯ ಬಯಸಿದಲ್ಲಿ ಕೇಂದ್ರ ಸರ್ಕಾರ ಅದನ್ನು ಪಾಲಿಸಲಿದೆ ಎಂದು ಸಾಲಿಸಿಟರ್ ಜನರಲ್ ಜಿ.ಇ. ವಹನಾವತಿ, ಮುಖ್ಯ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ನೇತೃತ್ವದ ಐವರು ನ್ಯಾಯಾಧೀಶರ ಸಂವಿಧಾನ ಪೀಠಕ್ಕೆ ತಿಳಿಸಿದರು. ಸರ್ಕಾರ ಜಾರಿಗೊಳಿಸಲು ಹೊರಟಿದ್ದ `ಒಬಿಸಿ' ಮೀಸಲಾತಿಗೆ ಸುಪ್ರೀಂಕೋರ್ಟ್ ಮಾರ್ಚ್ 29ರಂದು ನೀಡಿರುವ ತಡೆಯಾಜ್ಞೆಯನ್ನು ತೆರವುಗೊಳಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಅವರು ಕೇಂದ್ರದ ಪರವಾಗಿ ಈ ಹೇಳಿಕೆ ನೀಡಿದರು.

2007: ವಿಶ್ವದಲ್ಲೇ ಪ್ರಥಮ ಎನ್ನಬಹುದಾದ 4ನೇ ಪೀಳಿಗೆಯ ತದ್ರೂಪಿ ಹಂದಿಮರಿಯನ್ನು ಜಪಾನ್ ವಿಜ್ಞಾನಿಗಳು ಸೃಷ್ಟಿಸಿದ್ದು, ಈ ಸಂಶೋಧನೆ ಮಾನವ ಅಂಗಾಂಶ ಕಸಿಗೆ ಸಹಕಾರಿಯಾಗಲಿದೆ ಎಂಬ ನಿರೀಕ್ಷೆ ವ್ಯಕ್ತಪಡಿಸಿದರು. ಅಮೆರಿಕದ ವಿಜ್ಞಾನಿಗಳು ಇಲಿಯ 6ನೇ ತದ್ರೂಪಿ ಸೃಷ್ಟಿಸಿದ್ದೇ ಈವರೆಗಿನ ಸಾಧನೆಯಾಗಿತ್ತು. ಆದರೆ ಜಪಾನ್ ವಿಜ್ಞಾನಿಗಳು ಇಷ್ಟು ದೊಡ್ಡ ಗಾತ್ರದ ಪ್ರಾಣಿಯೊಂದರ 4ನೇ ತಲೆಮಾರಿನ ಪ್ರತಿರೂಪಿ ಸೃಷ್ಟಿಸುವ ಮೂಲಕ ಸಂಶೋಧನೆಯನ್ನು ಉತ್ತಮಪಡಿಸಿದರು. 4ನೇ ಪೀಳಿಗೆ ಹೇಗೆ ಎಂದರೆ ಎಂದರೆ ಈ ಹಂದಿಯ ಮೊದಲಿನ ಮೂರು ತಲೆಮಾರು ಕೂಡಾ ತದ್ರೂಪಿ ವಿಧಾನದಲ್ಲಿ ಜನಿಸಿದ್ದವು.

2007: ಅಮೇರಿಕದಲ್ಲಿರುವ ಭಾರತೀಯ ಮೂಲದ ನರಶಸ್ತ್ರ ಚಿಕಿತ್ಸಾ ತಜ್ಞ ಡಾ. ಕುಮಾರ ಬಾಹುಳ್ಯನ್ ತಾವು ಹುಟ್ಟಿ ಬೆಳೆದ ಕೇರಳದ ಚೆಮ್ಮನಾಕರಿ ಹಳ್ಳಿಯಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಿಸಲು 2 ಕೋಟಿ ಅಮೆರಿಕನ್ ಡಾಲರ್ (ಸುಮಾರು 80 ಕೋಟಿ ರೂಪಾಯಿ) ದಾನ ಮಾಡಿದರು. ಈಗ ಅಮೆರಿಕದಲ್ಲಿ ವೈದ್ಯರಾಗಿರುವ ಬಾಹುಳ್ಯನ್, ಕೋಟಿಗಟ್ಟಲೆ ಹಣ ಸಂಪಾದಿಸಿದ್ದು, ಐದು ಬೆಂಜ್ ಕಾರು, ಒಂದು ವಿಮಾನ ಇಟ್ಟುಕೊಂಡಿದ್ದಾರೆ. ಆದರೆ ಅವರು ಹುಟ್ಟಿದ್ದು ದಲಿತ ಕುಟುಂಬದಲ್ಲಿ. ಬೆಳೆದದ್ದು ಕಡು ಬಡತನದಲ್ಲಿ. ಈಗಿನ ಮಟ್ಟಕ್ಕೆ ಮರಲು ತನ್ನ ಹಳ್ಳಿಯವರ ಪ್ರೋತ್ಸಾಹವೇ ಕಾರಣ. ಆ ಋಣ ತೀರಿಸಲು ಇದೊಂದು ಪುಟ್ಟ ಯತ್ನ ಎನ್ನುತ್ತಾರೆ ಬಾಹುಳ್ಯನ್.

2006: ವಿದೇಶಾಂಗ ಖಾತೆ ಮಾಜಿ ಸಚಿವ ನಟವರ್ ಸಿಂಗ್ ಅವರನ್ನು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತು ಮಾಡಲಾಯಿತು. ಪಕ್ಷದ ವಿರುದ್ಧ ಅಪಪ್ರಚಾರದಲ್ಲಿ ತೊಡಗಿ ಅಗೌರವ ಉಂಟು ಮಾಡ್ದಿದಕ್ಕಾಗಿ ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕು ಎಂಬ ನಿರ್ಣಯವನ್ನೂ ಪಕ್ಷದ ಶಿಸ್ತು ಸಮಿತಿ ಕೈಗೊಂಡಿತು.

2006: ವಿಶ್ವ ಜೂನಿಯರ್ ಮಾಜಿ ಚಾಂಪಿಯನ್ ಭಾರತದ ಪೆಂಟ್ಯಾಲ ಹರಿಕೃಷ್ಣ ಅವರು ಹಂಗೇರಿಯ ಪಾಕ್ಸ್ ನಲ್ಲಿ ನಡೆದ ಮೂರನೇ ಮಾರ್ಕ್ಸ್ ಗಾರ್ಗಿ ಅಂತಾರಾಷ್ಟ್ರೀಯ ಚೆಸ್ ಟೂರ್ನಿಯ ಪ್ರಶಸ್ತಿಯನ್ನು ಗೆದ್ದು ಚಾಂಪಿಯನ್ ಶಿಪ್ ಪಟ್ಟವನ್ನು ತಮ್ಮದಾಗಿಸಿಕೊಂಡರು. ಹಂಗೇರಿಯ ಫರೆನ್ಸ್ ಬರ್ಕ್ ವಿರುದ್ಧ ಅವರು ಡ್ರಾ ಸಾಧಿಸಿ ಚಾಂಪಿಯನ್ ಶಿಪ್ ಗೆದ್ದುಕೊಂಡರು.

2005: ಖ್ಯಾತ ಸಾಹಿತಿ ಶಾಂತಾದೇವಿ ಮಾಳವಾಡ ನಿಧನರಾದರು.

2000: ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ (97) ನಿಧನರಾದರು.

1990: ಖ್ಯಾತ ಕೈಗಾರಿಕೋದ್ಯಮಿ ನವಲ್ ಗೋದ್ರೆಜ್ ನಿಧನ.

1974: ವಾಟರ್ ಗೇಟ್ ಹಗರಣದ ಹಿನ್ನೆಲೆಯಲ್ಲಿ ಅಮೆರಿಕದ ಅಧ್ಯಕ್ಷ ರಿಚರ್ಡ್ ನಿಕ್ಸನ್ ಅವರು ತಮ್ಮ ರಾಜೀನಾಮೆಯನ್ನು ಪ್ರಕಟಿಸಿದರು. ಹಗರಣದಿಂದಾಗಿ ರಾಜೀನಾಮೆ ನೀಡಿದ ಅಮೆರಿಕದ ಮೊತ್ತ ಮೊದಲ ಅಧ್ಯಕ್ಷರು ಇವರು.

1968: ರಿಚರ್ಡ್ ನಿಕ್ಸನ್ ಅವರು ಮಿಯಾಮಿ ತೀರದಲ್ಲಿ ನಡೆದ ರಿಪಬ್ಲಿಕನ್ ಪಕ್ಷದ ರಾಷ್ಟ್ರೀಯ ಸಮಾವೇಶದಲ್ಲಿ ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ ನಾಮಕರಣಗೊಂಡರು.

1968: ಭಾರತೀಯ ಕ್ರಿಕೆಟ್ ಆಟಗಾರ ಅಬೇ ಕುರುವಿಲ್ಲ ಜನ್ಮದಿನ.

1956: ದ್ವಿಭಾಷಾ ಮುಂಬೈ ರಾಜ್ಯ ರಚನೆಯನ್ನು ವಿರೋಧಿಸಿ ಅಹಮದಾಬಾದಿನಲ್ಲಿ ಜನ ಉಗ್ರ ಪ್ರದರ್ಶನ ನಡೆಸಿದಾಗ ಪೊಲೀಸರ ಗೋಲಿಬಾರ್, ಆಶ್ರುವಾಯು, ಲಾಠಿ ಪ್ರಹಾರಕ್ಕೆ ಬಲಿಯಾಗಿ ಐವರು ಮೃತರಾಗಿ 100ಕ್ಕೂ ಹೆಚ್ಚು ಮಂದಿ ಗಾಯಗೊಂಡರು.

1956: ಭಾರತ ಸರ್ಕಾರವು ನೇಮಿಸಿದ್ದ ನೇತಾಜಿ ಸುಭಾಶ್ ಚಂದ್ರ ಬೋಸ್ ತನಿಖಾ ಸಮಿತಿಯು `ನೇತಾಜಿ ಬೋಸರ ಮರಣವು ಸ್ಥಿರಪಟ್ಟಿದೆಯೆಂದೂ, ದ್ವಿತೀಯ ಯುದ್ಧದ ಕಾಲದಲ್ಲಿ ಫಾರೋಸಾದಲ್ಲಿ ಇದು ಸಂಭವಿಸಿದೆ' ಎಂಬ ತೀರ್ಮಾನಕ್ಕೆ ಬಂದಿತು.

1942: ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ಮುಂಬೈಯ ಗೊವಾಲಿಯಾ ಟ್ಯಾಂಕಿನಲ್ಲಿ (ಈಗಿನ ಆಗಸ್ಟ್ ಕ್ರಾಂತಿ ಮೈದಾನ) ನಿರ್ಣಯ ಒಂದನ್ನು ಅಂಗೀಕರಿಸುವ ಮೂಲಕ `ಭಾರತ ಬಿಟ್ಟು ತೊಲಗಿ' (ಕ್ವಿಟ್ ಇಂಡಿಯಾ) ಚಳವಳಿಗೆ ಚಾಲನೆ ನೀಡಿತು. ಮರುದಿನ ಸರ್ದಾರ್ ವಲ್ಲಭಭಾಯಿ ಪಟೇಲ್, ಜವಾಹರಲಾಲ್ ನೆಹರೂ ಮತ್ತಿತರ ನಾಯಕರ ಜೊತೆಗೆ ಬಂಧನಕ್ಕೆ ಒಳಗಾಗುವ ಮುನ್ನ ಮಹಾತ್ಮಾ ಗಾಂಧೀಜಿ ಅವರು `ಮಾಡು ಇಲ್ಲವೇ ಮಡಿ' ಸಂದೇಶವನ್ನು ರಾಷ್ಟ್ರಕ್ಕೆ ನೀಡಿದರು. ಇದು ಬ್ರಿಟಿಷ್ ಆಡಳಿತದ ವಿರುದ್ಧ ಭಾರತದಲ್ಲಿ ನಡೆದ ವ್ಯಾಪಕ ಮತ್ತು ತೀವ್ರ ಸ್ವರೂಪದ ಜನಾಂದೋಳನವಾಯಿತು.

1940: ಭಾರತೀಯ ಕ್ರಿಕೆಟ್ ಆಟಗಾರ ದಿಲಿಪ್ ಸರ್ ದೇಸಾಯಿ ಜನ್ಮದಿನ. ಬಲಗೈ ಬ್ಯಾಟ್ಸ್ ಮನ್ ಎಂದೇ ಇವರು ಖ್ಯಾತರಾಗಿದ್ದರು.

1934: ಸಾಹಿತಿ ಕಮಲ ಸಂಪಳ್ಳಿ ಜನನ.

1929: ಸಾಹಿತಿ ಮತ್ತೂರು ಕೃಷ್ಣಮೂರ್ತಿ ಜನನ.

1924: ಎಚ್. ಕೆ. ರಂಗನಾಥ್ ಜನನ.

1921: ಕೆ.ವಿ. ರತ್ನಮ್ಮ ಜನನ.

1917: ಹಾಸ್ಯ ಸಾಹಿತ್ಯದ ಹಿರಿಯಜ್ಜಿ ಎಂದೇ ಖ್ಯಾತರಾದ ಸುನಂದಮ್ಮ (8-8-1917ರಿಂದ 27-1-2006) ಅವರು ರಾಮಯ್ಯ- ನಾಗಮ್ಮ ದಂಪತಿಯ ಮಗಳಾಗಿ ಮೈಸೂರಿನಲ್ಲಿ ಜನಿಸಿದರು.

1900: ಅಮೆರಿಕ ಮತ್ತು ಗ್ರೇಟ್ ಬ್ರಿಟನ್ ನಡುವೆ ಮೊತ್ತ ಮೊದಲ ಡೇವಿಸ್ ಕಪ್ ಟೆನಿಸ್ ಪಂದ್ಯ ಮೆಸಾಚ್ಯುಸೆಟ್ಸಿನ ಬ್ರೂಕ್ಲಿನ್ನಿನಲ್ಲಿ ಆರಂಭವಾಯಿತು. ಡೇವಿಸ್ ಕಪ್ ಟ್ರೋಫಿಯನ್ನು ನೀಡಿದ ಅಮೆರಿಕದ ಟೆನಿಸ್ ಆಟಗಾರ ಡ್ವೈಟ್ ಎಫ್. ಡೇವಿಸ್ ಅವರು ಅಮೆರಿಕ ತಂಡದ ಪರವಾಗಿ ಆಟವಾಡಿ ಮೊದಲ ಎರಡು ಸ್ಪರ್ಧೆಗಳಲ್ಲಿ ಟ್ರೋಫಿಯನ್ನು ಗೆದ್ದುಕೊಂಡರು.

1890: ಸಾಹಿತಿ ಶೀನಪ್ಪ ಹೆಗಡೆ ಜನನ.

1815: ದೇಶಭ್ರಷ್ಟನಾದ ಬಳಿಕ ನೆಪೋಲಿಯನ್ ಬೋನಪಾರ್ಟೆ ದಕ್ಷಿಣ ಅಟ್ಲಾಂಟಿಕ್ ನ ಸೇಂಟ್ ಹೆಲೆನಾ ದ್ವೀಪಕ್ಕೆ ಪ್ರಯಾಣ ಬೆಳೆಸಿದ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement