Sunday, August 23, 2009

ಇಂದಿನ ಇತಿಹಾಸ History Today ಆಗಸ್ಟ್ 23

ಇಂದಿನ ಇತಿಹಾಸ

ಆಗಸ್ಟ್ 23

ಹೆಸರಾಂತ ಮಲೆಯಾಳಿ ಕವಿ ಡಾ. ಕೆ. ಅಯ್ಯಪ್ಪ ಫಣಿಕ್ಕರ್ (76) ತಿರುವನಂತಪುರದಲ್ಲಿ ನಿಧನರಾದರು. ಕೇರಳ ವಿಶ್ವವಿದ್ಯಾಲಯ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿದ್ದ ಅವರು ಭಾರತೀಯ ಸಾಹಿತ್ಯ, ಪಾಶ್ಚಾತ್ಯ ಸಾಹಿತ್ಯ, ಕಲೆ ಬಗ್ಗೆ ಅಧಿಕೃತವಾಗಿ ಮಾತನಾಡಬಲ್ಲ ವಿದ್ವಾಂಸರಾಗಿದ್ದರು.

2008: ಮುಖ್ಯಮಂತ್ರಿ ಮಧುಕೋಡಾ ನೇತೃತ್ವದ ಸರ್ಕಾರಕ್ಕೆ ಜಾರ್ಖಂಡ್ ಮುಕ್ತಿ ಮೋರ್ಚಾ ನೀಡಿದ್ದ ತನ್ನ ಬೆಂಬಲ ವಾಪಾಸು ಪಡೆದ ಹಿನ್ನೆಲೆಯಲ್ಲಿ ಮಧು ಕೋಡಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಇದರಿಂದಾಗಿ ಜಾರ್ಖಂಡಿನಲ್ಲಿ 12 ದಿನಗಳಿಂದ ನಡೆಯುತ್ತಿದ್ದ ರಾಜಕೀಯ ಪ್ರಹಸನಕ್ಕೆ ತೆರೆಬಿದ್ದಿತು. ಈದಿನ ಬೆಳಿಗ್ಗೆ ನವದೆಹಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾದ ಬೆನ್ನಲ್ಲೇ ರಾಂಚಿಗೆ ಆಗಮಿಸಿದ ಕೋಡಾ ರಾಜ್ಯಪಾಲ ಸೈಯದ್ ಸಿಬ್ತೆ ರಝಿ ಅವರನ್ನು ಭೇಟಿ ಮಾಡಿ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದರು.

2007: ಪಾಕಿಸ್ಥಾನ ಅಧ್ಯಕ್ಷ ಜನರಲ್ ಪರ್ವೇಜ್ ಮುಷರಫ್ ಅವರಿಗೆ ಮುಖಭಂಗವಾಗುವಂತೆ ಪಾಕಿಸ್ಥಾನಿ ಸುಪ್ರೀಂಕೋರ್ಟ್ ಮಹತ್ವದ ತೀರ್ಪಿನಲ್ಲಿ ಮಾಜಿ ಪ್ರಧಾನಿ ನವಾಜ್ ಷರೀಫ್ ಹಾಗೂ ಅವರ ಸಹೋದರ ಶಹಬಾಜ್ ಅವರಿಗೆ ಸ್ವದೇಶಕ್ಕೆ ಮರಳಲು ಅನುಮತಿ ನೀಡಿತು. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಇಫ್ತಿಕಾರ್ ಚೌಧುರಿ ನೇತೃತ್ವದ ಏಳು ನ್ಯಾಯಮೂರ್ತಿಗಳನ್ನು ಒಳಗೊಂಡ ನ್ಯಾಯಪೀಠವು ಷರೀಫ್ ಸಹೋದರರ ಕುರಿತು ಒಮ್ಮತದ ತೀರ್ಪು ನೀಡಿ, ಸ್ವದೇಶಕ್ಕೆ ಮರಳುವುದು ಹಾಗೂ ವಾಸಿಸುವುದು ಅವರ ಜನ್ಮಸಿದ್ಧ ಹಕ್ಕಾಗಿದೆ ಎಂದು ಹೇಳಿತು. ಈ ತೀರ್ಪಿನಿಂದಾಗಿ ಈ ವರ್ಷದ ಅಂತ್ಯದಲ್ಲಿ ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ಷರೀಫ್ ಸಹೋದರರು ಪಾಲ್ಗೊಳಲು ಅವಕಾಶ ಲಭಿಸಿದಂತಾಯಿತು. 1999ರ ಅಕ್ಟೋಬರಿನಲ್ಲಿ ನಡೆದ ಸೇನಾ ಕ್ರಾಂತಿಯಲ್ಲಿ ಸೇನಾಪಡೆಯ ಮುಖ್ಯಸ್ಥರಾಗಿದ್ದ ಮುಷರಫ್, ನವಾಜ್ ಷರೀಫ್ ಅವರನ್ನು ಪ್ರಧಾನಿ ಪಟ್ಟದಿಂದ ಪದಚ್ಯುತಗೊಳಿಸಿದ್ದರು. ಅಧಿಕಾರ ಕಳೆದುಕೊಂಡ ಒಂದು ವರ್ಷದ ಬಳಿಕ ಷರೀಫ್ ಸಹೋದರರು ದೇಶತ್ಯಾಗ ಮಾಡಿ, ಸೌದಿಅರೇಬಿಯಾದಲ್ಲಿ ಭೂಗತರಾಗಿ ವಾಸಿಸುತ್ತಿದ್ದರು. ಈ ವರ್ಷದ ಅಂತ್ಯದಲ್ಲಿ ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ಪಾಲ್ಗೊಳ್ಳಲು ತಮಗೆ ಅನುವು ಮಾಡಿಕೊಡಬೇಕು ಹಾಗೂ ಸ್ವದೇಶಕ್ಕೆ ಮರಳಲು ಅವಕಾಶ ನೀಡಬೇಕು ಎಂದು ಶರೀಫ್ ಹಾಗೂ ಅವರ ಸಹೋದರ ಶಹಬಾಜ್ ಸುಪ್ರೀಂಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದರು.

2007: ಅಧಿಕಾರ ಹಸ್ತಾಂತರಕ್ಕೆ ಸಂಬಂಧಿಸಿದಂತೆ ಗೊಂದಲಕಾರಿ ಹೇಳಿಕೆಗಳ ಮೂಲಕ ತಮ್ಮನ್ನು ಛೇಡಿಸುತ್ತಿರುವ ಜೆಡಿಎಸ್ ಗೆ ಚುರುಕು ಮುಟ್ಟಿಸುವುದಕ್ಕಾಗಿ ಸಂಪುಟ ಸಭೆಗೆ ಬಹಿಷ್ಕಾರ ಹಾಕಲು ಬಿಜೆಪಿ ಸಚಿವರು ವಿಫಲ ಯತ್ನ ನಡೆಸಿದರು. ಇದಕ್ಕೆ ಪ್ರತಿಯಾಗಿ ಮಧ್ಯಂತರ ಚುನಾವಣೆಗೆ ಹೋಗೋಣ ಎನ್ನುವ ಮುಖ್ಯಮಂತ್ರಿ ಎಚ್. ಡಿ.ಕುಮಾರಸ್ವಾಮಿ ಅವರ ಧಮಕಿಗೆ, ಚುನಾವಣೆಗೆ ತಾವೂ ಸಿದ್ಧ ಎನ್ನುವ ಉಪಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರತಿಸವಾಲು ಹಾಕಿದ ಹಿನ್ನೆಲೆಯಲ್ಲಿ ಎರಡೂ ಪಕ್ಷಗಳು ಕೊನೆಗೆ ಸಂಧಾನಕ್ಕೆ ಶರಣಾದವು.

2007: ಕರ್ನಾಟಕ ರಾಜ್ಯ ಹೆದ್ದಾರಿಯ ಶಹಾಪುರ- ಜೇವರ್ಗಿ ರಸ್ತೆಯ ನಡುವೆ ಮೂಡಬೂಳ ಕ್ರಾಸ್ ಬಳಿ ಸಂಭವಿಸಿದ ಅಪಘಾತದಲ್ಲಿ ಗೂಡ್ಸ್ ಟೆಂಪೊ ಹಾಗೂ ಲಾರಿ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ 11 ಮಂದಿ ಮೃತರಾದರು.

2007: ಕರ್ನಾಟಕ ಏಕೀಕರಣವಾದ ಐವತ್ತು ವರ್ಷಗಳ ನಂತರ ಇದೇ ಮೊದಲ ಬಾರಿಗೆ ಹೊಸ ತಾಲೂಕುಗಳ ರಚನೆಗೆ ರಾಜ್ಯ ಸರ್ಕಾರ ಮುಂದಾಯಿತು. ರಾಜ್ಯದಲ್ಲಿ ಎಲ್ಲೆಲ್ಲಿ ಹೊಸ ತಾಲೂಕುಗಳ ರಚನೆ ಆಗಬೇಕು ಎಂಬ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಅಧಿಕಾರಿಗಳ ಸಮಿತಿ ರಚಿಸಲು ಸಚಿವ ಸಂಪುಟ ಸಭೆ ತೀರ್ಮಾನಿಸಿತು.

2007: ರಾಮನಗರದಲ್ಲಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಗೃಹ ಸಚಿವ ಎಂ. ಪಿ. ಪ್ರಕಾಶ್ ಮತ್ತು ಕಂದಾಯ ಸಚಿವ ಜಗದೀಶ ಶೆಟ್ಟರ್ ಅವರು ನೂತನ ರಾಮನಗರ ಜಿಲ್ಲೆಯನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಿದರು. ಹೊಸದಾಗಿ ರಚನೆಯಾಗಿರುವ ರಾಮನಗರ ಜಿಲ್ಲೆಯ ಕೇಂದ್ರಸ್ಥಾನವಾಗಿರುವ ರಾಮನಗರ ವಿಧಾನಸಭಾ ಕ್ಷೇತ್ರ ರಾಜ್ಯಕ್ಕೆ ಮೂವರು ಮುಖ್ಯಮಂತ್ರಿಗಳನ್ನು ಮತ್ತು ದೇಶಕ್ಕೆ ಒಬ್ಬ ಪ್ರಧಾನಿಯನ್ನು ನೀಡಿದ ಹೆಗ್ಗಳಿಕೆ ಗಳಿಸಿಕೊಂಡಿದೆ. ಕೆಂಗಲ್ ಹನುಮಂತಯ್ಯನವರು, ಎಚ್.ಡಿ. ದೇವೇಗೌಡರು ಹಾಗೂ ಹಾಲಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಏರಿಸಿದ ಕ್ಷೇತ್ರವಿದು.

2006: ಭಾರತದ ಸಾಫ್ಟ್ ವೇರ್ ರಂಗದ ದೈತ್ಯ ಸಂಸ್ಥೆಯಾಗಿರುವ ವಿಪ್ರೋದ ಅಧ್ಯಕ್ಷ ಅಜೀಂ ಪ್ರೇಮ್ ಜಿ ಅವರು ಪೋರ್ಬ್ಸ್ ಪತ್ರಿಕೆ ನಡೆಸಿದ ಸಮೀಕ್ಷೆಯಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ವಿಶ್ವದ ಆರನೇ ದೊಡ್ಡ ಶ್ರೀಮಂತ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಒಟ್ಟು 13.3 ಶತಕೋಟಿ ಅಮೆರಿಕ ಡಾಲರ್ ಆದಾಯದೊಂದಿಗೆ ಆರನೇ ಸ್ಥಾನ ಪಡೆದಿರುವ ಪ್ರೇಮ್ ಜಿ ಗೂಗಲ್ ಸ್ಥಾಪಕ ಸರ್ಜೀ ಬ್ರಿನ್ ಮತ್ತು ಲ್ಯಾರಿ ಪೇಜ್, ಇಬೇ ಸಂಸ್ಥಾಪಕ ಪಿರ್ರಿ ಒಮಿಡ್ಯಾರ್ ಮತ್ತು ಜರ್ಮನಿಯ ಸಾಫ್ಟ್ ವೇರ್ ಕಂಪೆನಿ `ಸ್ಯಾಪ್' ಸಂಸ್ಥಾಪಕ ಹ್ಯಾಸ್ಸೋ ಪ್ಲಾಟೆನರ್ ಅವರನ್ನು ಹಿಂದೆ ಹಾಕಿದರು. 50 ಶತಕೋಟಿ ಡಾಲರ್ ನಿವ್ವಳ ಆದಾಯದ ಮೈಕ್ರೋಸಾಫ್ಟ್ ಅಧ್ಯಕ್ಷ ಬಿಲ್ ಗೇಟ್ಸ್ ಸತತ 12ನೇ ಬಾರಿ ನಂಬರ್ 1 ಶ್ರೀಮಂತ ಸ್ಥಾನ ಪಡೆದರು.

2006: ಕಾರ್ಕಳ - ಶೃಂಗೇರಿ ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಕೆರೆಕಟ್ಟೆ ವನ್ಯಜೀವಿ ವಿಭಾಗದ ಕಚೇರಿ ಮೇಲೆ ದಾಳಿ ನಡೆಸಿದ ನಕ್ಸಲೀಯರ ಗುಂಪೊಂದು ದಾಖಲೆಪತ್ರಗಳು ಮತ್ತು ಜೀಪಿಗೆ ಬೆಂಕಿ ಹಚ್ಚಿತು. ನಸುಕಿನ 1.30ರ ವೇಳೆಯಲ್ಲಿ ಈ ಘಟನೆ ನಡೆಯಿತು.

2006: ಮಾಜಿ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್ ಕರ್ನಾಟಕದ ಪಂಕಜ್ ಅಡ್ವಾಣಿ ಅವರು ಪ್ರತಿಷ್ಠಿತ ರಾಜೀವ್ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಆಯ್ಕೆಯಾದರು.

2006: ಹೆಸರಾಂತ ಮಲೆಯಾಳಿ ಕವಿ ಡಾ. ಕೆ. ಅಯ್ಯಪ್ಪ ಫಣಿಕ್ಕರ್ (76) ತಿರುವನಂತಪುರದಲ್ಲಿ ನಿಧನರಾದರು. ಕೇರಳ ವಿಶ್ವವಿದ್ಯಾಲಯ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿದ್ದ ಅವರು ಭಾರತೀಯ ಸಾಹಿತ್ಯ, ಪಾಶ್ಚಾತ್ಯ ಸಾಹಿತ್ಯ, ಕಲೆ ಬಗ್ಗೆ ಅಧಿಕೃತವಾಗಿ ಮಾತನಾಡಬಲ್ಲ ವಿದ್ವಾಂಸರಾಗಿದ್ದರು. ಮಲೆಯಾಳಿ ಸಾಹಿತ್ಯದ ಮೇಲೆ ಅಚ್ಚಳಿಯದ ಪ್ರಭಾವ ಬೀರಿದ್ದ ಫಣಿಕ್ಕರ್ ಅವರ `ಕುರುಕ್ಷೇತ್ರಂ' ಕಾವ್ಯ ಮಲೆಯಾಳಿ ಸಾಹಿತ್ಯಕ್ಕೆ ತಿರುವು ತಂದ ಕೃತಿ.

2006: ಪಾಕಿಸ್ಥಾನದ ಮಾಜಿ ಕ್ರಿಕೆಟ್ ಪಟು ವಾಸಿಂ ರಾಜಾ (54) ಅವರು ಲಂಡನ್ನಿನಲ್ಲಿ ಪ್ರದರ್ಶನ ಕ್ರಿಕೆಟ್ ಪಂದ್ಯವೊಂದರಲ್ಲಿ ಆಡುತ್ತಿದ್ದಾಗ ತೀವ್ರ ಹೃದಯಾಘಾತಕ್ಕೆ ಒಳಗಾಗಿ ಮೈದಾನದಲ್ಲೇ ಕುಸಿದು ಬಿದ್ದು ಮೃತರಾದರು.

1949: ಸಾಹಿತಿ ಎಂ.ವಿ. ಶರ್ಮ ತದ್ದಲಸೆ ಜನನ.

1947: ಸರ್ದಾರ ವಲ್ಲಭಭಾಯಿ ಪಟೇಲ್ ಅವರು ಜವಾಹರಲಾಲ್ ನೆಹರೂ ಸಂಪುಟದಲ್ಲಿ ಉಪ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರು. ಭಾರತದ ಮೊದಲ ಉಪ ಪ್ರಧಾನಿಯಾಗಿ ಹಾಗೂ ಗೃಹ ಸಚಿವರಾಗಿ, ಹರಿದು ಹಂಚಿಹೋಗಿದ್ದ ಭಾರತದ ರಾಜ್ಯಗಳನ್ನು ಒಂದುಗೂಡಿಸಿ `ಉಕ್ಕಿನ ಮನುಷ್ಯ' ಎಂಬ ಖ್ಯಾತಿಗೆ ಪಾತ್ರರಾದ ಸರ್ದಾರ್ ಪಟೇಲ್ ಅವರು ಭಾರತದ ಸ್ವಾತಂತ್ರ್ಯ ಹೋರಾಟದ ಅಗ್ರಗಣ್ಯ ನಾಯಕರಲ್ಲಿ ಒಬ್ಬರು.

1947: ಭಾರತೀಯ ಚಿತ್ರನಟಿ ಸಾಯಿರಾಬಾನು ಜನ್ಮದಿನ. ಈಕೆಯ ಮದುವೆ ಬಾಲಿವುಡ್ ನಟ ದಿಲೀಪ್ ಕುಮಾರ್ ಜೊತೆ ನಡೆಯಿತು.

1943: ಇತಿಹಾಸದಲ್ಲೇ ಅತಿದೊಡ್ಡ `ಟ್ಯಾಂಕ್ ಸಮರ' ಎಂದೇ ಖ್ಯಾತಿ ಪಡೆದ `ಕರ್ಸ್ಕ್ ಕದನ' ಕೊನೆಗೊಂಡಿತು. 6000 ಟ್ಯಾಂಕುಗಳು, 2 ಲಕ್ಷ ಪಡೆಗಳು ಮತ್ತು 4000 ಯುದ್ಧ ವಿಮಾನಗಳನ್ನು ಈ ಕದನದಲ್ಲಿ ಬಳಸಲಾಗಿತ್ತು. ಜುಲೈ 5ರಂದು ಆರಂಭವಾದ ಈ ಕದನ ಎರಡನೇ ಜಾಗತಿಕ ಸಮರ ಕಾಲದಲ್ಲಿ ರಷ್ಯದ ಪಶ್ಚಿಮ ಭಾಗದಲ್ಲಿ ಜರ್ಮನಿ ನಡೆಸಿದ ಅಯಶಸ್ವಿ ದಾಳಿ ಎನಿಸಿತು. ಕರ್ಸ್ಕ್ ನಗರಕ್ಕಾಗಿ ನಡೆದ ಈ ಕದನದ ಸೋಲು ಜರ್ಮನಿಯ ದಾಳಿ ಸಾಮರ್ಥ್ಯವನ್ನು ಕುಗ್ಗಿಸಿ, ಅದರ ಪೂರ್ವ ಭಾಗದ ಮೇಲಿನ 1944-45ರ ಸೋವಿಯತ್ ದಾಳಿಗಳಿಗೆ ದಾರಿ ಸುಗಮಗೊಳಿಸಿತು.

1944: ರೊಮೇನಿಯಾದ ರಾಜ ಮೈಕೆಲ್ ಅವರು ಪ್ರಧಾನಿ ಅಯೋನ್ ಅಂಟೋನೆಸ್ಕ್ ಅವರನ್ನು ಅಧಿಕಾರದಿಂದ ಪದಚ್ಯುತಗೊಳಿಸಿದರು.

1930: ಸಾಹಿತಿ ಕೆ.ಎಸ್. ಆಮೂರ ಜನನ.

1930: ಸಾಹಿತಿ ಲಲಿತಾ ವೃಷಭೇಂದ್ರ ಸ್ವಾಮಿ ಜನನ.

1926: ಇಟಲಿ ಸಂಜಾತ ಅಮೆರಿಕನ್ ಚಲನಚಿತ್ರ ನಟ ರುಡಾಲ್ಫ್ ವ್ಯಾಲೆಂಟಿನೊ ತಮ್ಮ 31ನೇ ವಯಸ್ಸಿನಲ್ಲಿ ಅಲ್ಸರ್ ಪರಿಣಾಮವಾಗಿ ಮೃತರಾದರು. ಆ ಕಾಲದ `ಗ್ರೇಟ್ ಲವರ್' ಎಂದೇ ಖ್ಯಾತಿ ಪಡೆದಿದ್ದ ಇವರ ಸಾವು ಸಾಮೂಹಿಕ ಹಿಸ್ಟೀರಿಯಾ ಮತ್ತು ಹಲವಾರು ಮಂದಿಯ ಆತ್ಮಹತ್ಯೆಗಳಿಗೆ ಕಾರಣವಾಯಿತು.

1913: ನಿಘಂಟು ತಜ್ಞ ಪ್ರೊ.ಜಿ. ವೆಂಕಟಸುಬ್ಬಯ್ಯ ಅವರು ಅರಮನೆ ವಿದ್ವಾಂಸ ಗಂಜಾಂ ತಿಮ್ಮಣ್ಣಯ್ಯ- ಸುಬ್ಬಮ್ಮ ದಂಪತಿಯ ಮಗನಾಗಿ ಮಂಡ್ಯ ಜಿಲ್ಲೆಯ ಕೈಗೋನಹಳ್ಳಿಯಲ್ಲಿ ಜನಿಸಿದರು. ವಿವಿಧ ಸಂಘ ಸಂಸ್ಥೆಗಳಲ್ಲಿ ಸೇವೆ ಜೊತೆಗೇ ಹಲವಾರು ಕೃತಿಗಳನ್ನು ರಚಿಸಿದ ವೆಂಕಟಸುಬ್ಬಯ್ಯ ಭಾಷಾಂತರ ಪಾಠಗಳು, ಕಾಲೇಜು ಭಾಷಾಂತರ, ಇಗೋ ಕನ್ನಡ ಸಾಮಾಜಿಕ ನಿಘಂಟು ಸೇರಿದಂತೆ 60ಕ್ಕೂ ಹೆಚ್ಚು ಕೃತಿ ರಚಿಸಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಶಂಬಾ ಪ್ರಶಸ್ತಿ, ಸೇಡಿಯಾಪು ಪ್ರಶಸ್ತಿ, ಶಿವರಾಮ ಕಾರಂತ ಪ್ರಶಸ್ತಿ, ಮುದ್ದಣ ಪುರಸ್ಕಾರ, ರಾಜ್ಯ ಪತ್ರಿಕಾ ಅಕಾಡೆಮಿ ವಿಶೇಷ ಪ್ರಶಸ್ತಿ, ಅಂಕಣ ಶ್ರೀ ಪ್ರಶಸ್ತಿ, ನಾಡೋಜ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಗೋರೂರು ಪ್ರಶಸ್ತಿ, ಮಾಸ್ತಿ ಪ್ರಶಸ್ತಿ ಅವರಿಗೆ ಲಭಿಸಿವೆ.

1879: ನವರೋಜಿ ವಾಡಿಯಾ ಅವರು ಮುಂಬೈಯಲ್ಲಿ ಬಾಂಬೆ ಡೈಯಿಂಗ್ ಅಂಡ್ ಮ್ಯಾನುಫ್ಯಾಕ್ಚರಿಂಗ್ ಕಂಪೆನಿ ಲಿಮಿಟೆಡ್ ನ್ನು ಸ್ಥಾಪಿಸಿದರು.

1573: ಅಕ್ಬರನು ರಾಜ್ಯದಲ್ಲಿ ವ್ಯಾಪಿಸಿದ ದಂಗೆಯ ಸುದ್ದಿ ಕೇಳಿ ಆಗ್ರಾವನ್ನು ಬಿಟ್ಟು ಅಹಮದಾಬಾದಿಗೆ ಹೊರಟ. 11 ದಿನಗಳ ಬಳಿಕ ಆತ ಅಹಮದಾಬಾದ್ ತಲುಪಿದ.

1305: ಮೊದಲ ವರ್ಷಗಳಲ್ಲಿ ಸ್ಕಾಟಿಷ್ ರೆಸಿಸ್ಟೆನ್ಸ್ ಪಡೆಗಳನ್ನು ಮುನ್ನಡೆಸಿದ ನಾಯಕ ಸ್ಕಾಟಿಷ್ ದೇಶಪ್ರೇಮಿ ಸರ್. ವಿಲಿಯಂ ವಾಲೇಸ್ ನನ್ನು ಲಂಡನ್ನಿನಲ್ಲಿ ಗಲ್ಲಿಗೇರಿಸಿ ನಂತರ ಸೀಳಿ, ತಲೆ ಕಡಿದು ಉಳಿದ ದೇಹವನ್ನು ನಾಲ್ಕು ಭಾಗಗಳಾಗಿ ಕತ್ತರಿಸಲಾಯಿತು. ಮರುವರ್ಷವೇ 1306ರಲ್ಲಿ ರಾಬರ್ಟ್ ಬ್ರೂಸ್ ದಂಗೆಯೆದ್ದು ಸ್ಕಾಟ್ ಲ್ಯಾಂಡಿಗೆ ಸ್ವಾತಂತ್ರ್ಯ ತಂದುಕೊಟ್ಟ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement