Saturday, August 22, 2009

ವಿಶ್ವ ಕೈತೋಟ ದಿನಾಚರಣೆ 23 ಆಗಸ್ಟ್ 2009

ಬನ್ನಿ! ಕೈಕೆಸರು ಮಾಡಿಕೊಳ್ಳೋಣ!!!

ವಿಶ್ವ ಕೈತೋಟ ದಿನಾಚರಣೆ 23 ಆಗಸ್ಟ್ 2009


ಕೈತೋಟ ಯಾರಿಗೆ ಗೊತ್ತಿಲ್ಲ?

ಕೈತೋಟ ಎಂದರೆ ಮನೆಯ ಹತ್ತೆಂಟು ಅಗತ್ಯಗಳನ್ನು ಪೂರೈಸುವ ಉದ್ಯಾನ. ಪೂಜೆಗೆ ಬೇಕಾದ ಹೂಪತ್ರೆ, ಅಡಿಗೆಗೆ ಅಗತ್ಯವಾದ ತರಕಾರಿ, ಬಾಳೆ ಎಲೆ, ಗೆಡ್ಡೆಗೆಣಸು, ಸಣ್ಣಪುಟ್ಟ ಕಾಯಿಲೆಗೆ ಬೇಕಾದ ಮನೆಮದ್ದು, ಮಕ್ಕಳಾಟದ ವನ, ಕಸಕಡ್ಡಿ ಅಡಿಗಿಸಿಡುವ ತಾಣ. . .

ಕೈತೋಟದಲ್ಲಿ ನಾವೇ ಬೆಳೆಸಿದ ತಾಜಾ ತರಕಾರಿ, ಹಣ್ಣು ಹಂಪಲು ತಿನ್ನುವ ಖುಷಿ ಬ್ರೆಡ್, ಆಪಲ್, ನ್ಯೂಡಲ್ಸಿನಲ್ಲಿ ಸಿಕ್ಕೀತೇ?



ಥಳಕು ಬಳಕಿನ ಬದುಕಿಗೆ ಮಾರುಹೋಗಿ, ಹಿತ್ತಲಿನಲ್ಲಿ ಕೈತೋಟ ಮಾಡುವ ಸಂಪ್ರದಾಯ ಕಣ್ಮರೆಯಾಗುತ್ತಿದೆ. 'ಅಯ್ಯೋ! ಜಾಗಇಲ್ಲ', 'ನೀರಿಲ್ಲ' 'ಆಳಿಲ್ಲ' ಎಂಬ ಸಬೂಬು. ನಮ್ಮ ಹಿರಿಯರು ನಮಗೆ ಕಲಿಸಿಕೊಟ್ಟ ಹಿತ್ತಲು ತೋಟ ಮಾಡುವ ಕಲೆ ನಮ್ಮ ಮಕ್ಕಳಿಗೆ ನಾವು ಕಲಿಸುತ್ತಿಲ್ಲ. ನಮ್ಮ ಮಕ್ಕಳು ನಮ್ಮಂತೇ ಅಂಗಡಿಯಿಂದ ಕೊಂಡು ತಂದ ವಿಷಮಿಶ್ರಿತ ಹಣ್ಣು ಹಂಪಲು ತರಕಾರಿ ತಿನ್ನುವಂತಾಗಬಾರದಲ್ಲವೇ?

ಕೈತೋಟದ ಸಂಭ್ರಮವನ್ನು, ಸ್ಥಳೀಯ ಆಹಾರ ಪದ್ಧತಿಗಳ ಮಹತ್ವವನ್ನು ಜನಸಾಮಾನ್ಯರಲ್ಲಿ ಜಾಗೃತಿಗೊಳಿಸಲು ಆಗಸ್ಟ್ 23ರಂದು ವಿಶ್ವಕೈತೋಟ ದಿನವನ್ನು ಆಚರಿಸಲಾಗುತ್ತದೆ.
ಅಂದು ವಿಶ್ವದಾದ್ಯಂತ ಕೈತೋಟ ಪ್ರಿಯರು ನೆಲ ಅಗೆದು, ಮಡಿಮಾಡಿ, ಬೀಜ ಬಿತ್ತಿ, ಗಿಡನೆಟ್ಟು, ಸಂಭ್ರಮಿಸುತ್ತಾರೆ. ಗೆಡ್ಡೆಗೆಣಸು ತಿಂದು, ಹಣ್ಣಿನ ಪಾನಕ ಕುಡಿದು, ಸಾವಯವ ಊಟ ಸವಿದು ಬಾಯಿ ಚಪ್ಪರಿಸುತ್ತಾರೆ. ಮಕ್ಕಳು, ಗೆಳೆಯರೊಟ್ಟಿಗೆ ಕುಣಿದು ಕುಪ್ಪಳಿಸುತ್ತಾರೆ.


ಇನ್ನೇಕೆ ತಡ! ನಿಮ್ಮ ಊರಿನ ಬಡಾವಣೆಯ ಕೈತೋಟ ಪ್ರಿಯರನ್ನೆಲ್ಲಾ ಒಟ್ಟುಗೂಡಿಸಿ ವಿಶ್ವ ಕೈತೋಟ ದಿನವನ್ನು ಆಚರಿಸಿ. ಕೈತೋಟ ದಿನದ ಸಂಭ್ರಮದಲ್ಲಿ ಪಾಲ್ಗೊಳ್ಳಿ.

ವಿಶ್ವ ಕೈತೋಟ ದಿನವನ್ನು ಕನ್ನಡನಾಡಿಗೆ ಪರಿಚಯಿಸಿದ ಜೈವಿಕ ಕೇಂದ್ರ, ಹುಳಿಮಾವು ಮತ್ತು ಸಹಜಸಮೃದ್ಧ-ಸಾವಯವ ಕೃಷಿಕರ ಬಳಗ ಆಗಸ್ಟ್ 22, 2009 ಶನಿವಾರ ಮಧ್ಯಾಹ್ನ 2 ಘಂಟೆಗೆ ಬನ್ನೇರು ಘಟ್ಟ ರಸ್ತೆಯಲ್ಲಿರುವ ಹುಳಿಮಾವಿನ ಜೈವಿಕ ಕೇಂದ್ರದಲ್ಲಿ ವಿಶ್ವ ಕೈತೋಟ ದಿನಾಚರಣೆಯನ್ನು ಏರ್ಪಡಿಸಿದೆ. ಕೈತೋಟ ವಿಧಾನಗಳ ಮಾಹಿತಿ, ವಿವಿಧ ಕೈತೋಟ ವಿಧಾನಗಳ ಪ್ರತ್ಯಕ್ಷಿತೆ, ಬೀಜ ವಿನಿಮಯ ಮತ್ತು ಆಸಕ್ತರ ಸಮ್ಮಿಲನ ಇದೆ.

ಬಿಡುವು ಮಾಡಿಕೊಂಡು ಬನ್ನಿ! ಬರುವಾಗ ಅಪರೂಪದ ಗಿಡ, ಬೀಜ, ಕೈತೋಟ ಬಗೆಗಿನ ಪುಸ್ತಕ ಹಿಡಿದು ತನ್ನಿ!

ವಿಶ್ವ ಕೈತೋಟದ ದಿನದ ಸಂಭ್ರಮ ಹಸಿರಿಗಾಗಿ ಕಾತರಿಸುವ ನಿಮಗಾಗಿ; ನಿಮ್ಮ ಮಕ್ಕಳ ನೆಮ್ಮದಿಯ ಭವಿಷ್ಯಕ್ಕಾಗಿ.

ವಿಶ್ವ ಕೈತೋಟ ದಿನದ ವಿವರಗಳಿಗೆ ಸಂಪರ್ಕಿಸಿ:
ಸಹಜ ಸಮೃದ್ಧ ಸಾವಯವ ಕೃಷಿಕರ ಬಳಗ,
080 23655302 / 9242133127

ತೋಟಗಾರಿಕೆ ಉಪ ನಿರ್ದೇಶಕರು,
ಜೈವಿಕ ಕೇಂದ್ರ, ಹುಳಿಮಾವು,
ಪೋನ್: 26582775, 9916433061

No comments:

Advertisement