Tuesday, August 4, 2009

ಇಂದಿನ ಇತಿಹಾಸ History Today ಜುಲೈ 30

ಇಂದಿನ ಇತಿಹಾಸ

ಜುಲೈ 30


ಭಾರತದಲ್ಲಿ ಆಗಸ್ಟ್ 3ರಂದು ಬಿಡುಗಡೆಯಾಗುವುದಕ್ಕೆ ಒಂದು ದಿನ ಮೊದಲೇ (ಈದಿನ) ಜೋಹಾನ್ಸ್ ಬರ್ಗಿನಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ `ಗಾಂಧಿ ಮೈ ಫಾದರ್' ಚಿತ್ರದ ಚೊಚ್ಚಲ ಪ್ರದರ್ಶನ (ಪ್ರೀಮಿಯರ್ ಶೋ) ನಡೆಯಿತು. ದಕ್ಷಿಣ ಆಫ್ರಿಕದ ಮಾಜಿ ಅಧ್ಯಕ್ಷ ನೆಲ್ಸನ್ ಮಂಡೇಲಾ ಮತ್ತು ದಕ್ಷಿಣ ಆಫ್ರಿಕಾದ ಇಡೀ ಸಚಿವ ಸಂಪುಟವೇ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಚಲನಚಿತ್ರವನ್ನು ವೀಕ್ಷಿಸಿತು. ಮಹಾತ್ಮ ಗಾಂಧಿ ಅವರು ತಮ್ಮ ರಾಜಕೀಯ ಜೀವನವನ್ನು ಆರಂಭಿಸಿದ ರಾಷ್ಟ್ರದಲ್ಲಿ `ಗಾಂಧಿ ಮೈ ಫಾದರ್' ಚಿತ್ರದ ಜಾಗತಿಕ ಮಟ್ಟದ ಪ್ರದರ್ಶನದ ಉದ್ಘಾಟನೆ ಮಾಡುತ್ತಿರುವುದು ನನಗೆ ಅತ್ಯಂತ ಖುಷಿಯ ವಿಷಯ. ಭಾರತವು ನಮಗೆ `ಬ್ಯಾರಿಸ್ಟರ್ ಗಾಂಧಿ'ಯನ್ನು ನೀಡಿತು, ಪ್ರತಿಯಾಗಿ ದಕ್ಷಿಣ ಆಫ್ರಿಕವು `ಮಹಾತ್ಮ ಗಾಂಧಿ'ಯನ್ನು ಹಿಂದಿರುಗಿಸಿತು' ಎಂದು ಮಂಡೇಲಾ ತಮ್ಮ ಸಂದೇಶದಲ್ಲಿ ನುಡಿದರು.

2015: ರಾಮೇಶ್ವರಂ: 27 ಜುಲೈ 2015ರ ಸೋಮವಾರ ನಿಧನರಾಗಿದ್ದ ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಅಂತ್ಯಕ್ರಿಯೆಯನ್ನು ತಮಿಳುನಾಡಿನ ರಾಮೇಶ್ವರಂನಲ್ಲಿ 30-07-2015ರ ಗುರುವಾರ 11.30 ಸುಮಾರಿಗೆ ಮುಸ್ಲಿಮ್ ವಿಧಿ ವಿಧಾನದಂತೆ ನೆರವೇರಿಸಲಾಯಿತು. ರಾಮೇಶ್ವರಂನ ಪೇಯಿಕರುಂಬು ಎಂಬ ಸ್ಥಳದಲ್ಲಿ 1.5 ಎಕರೆ ಸ್ಥಳವನ್ನು ಗುರುತಿಸಿದ್ದು, ಅಲ್ಲಿ ಕಲಾಂ ಅವರ ಕುಟುಂಬದ ಸದಸ್ಯರು ಅಂತ್ಯಕ್ರಿಯೆ ನೆರವೇರಿಸಿದರು. ಮುಸ್ಲಿಂ ವಿಧಿ ವಿಧಾನದಂತೆ ಬೆಳಗ್ಗೆ ಕಲಾಂ ಪಾರ್ಥಿವ ಶರೀರವನ್ನು ಸ್ಥಳೀಯ ಮಸೀದಿಗೆ ಕೊಂಡೊಯ್ದು ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ನಂತರ ನಿಗದಿ ಪಡಿಸಿದ ಸ್ಥಳಕ್ಕೆ ಪಾರ್ಥಿವ ಶರೀರವನ್ನು ತರಲಾಯಿತು. ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಗಣ್ಯರು ಕಲಾಂ ಅವರಿಗೆ ಅಂತಿಮ ನಮನ ಸಲ್ಲಿಸಿದರು. ಭೂಸೇನೆ, ವಾಯು ಪಡೆ, ನೌಕಾ ಪಡೆಯ ಮುಖ್ಯಸ್ಥರು ಗೌರವಾರ್ಪಣೆ ಸಲ್ಲಿಸಿದರು. ನಂತರ ಸೇನಾ ಪಡೆಯ ಯೋಧರು ವಿಶೇಷ ಗೌರವಾರ್ಪಣೆ ಸಲ್ಲಿಸಿದ ನಂತರ ಕುಟುಂಬ ಸದಸ್ಯರು ಕಲಾಂ ಅವರ ಅಂತ್ಯಕ್ರಿಯೆ ನೆರವೇರಿಸಿದರು. ಈ ಸಂದರ್ಭದಲ್ಲಿ ಸ್ಥಳದಲ್ಲಿ, ಸಮಾಧಿ ಸ್ಥಳದ ಆಸುಪಾಸಿನ ಕಟ್ಟಡಗಳು, ಮರ-ಗಿಡಗಳ ಮೇಲೆ ಕುಳಿತಿದ್ದ ಸಾವಿರಾರು ಜನರು ‘ಭಾರತ್ ಮಾತಾಕಿ ಜೈ’ ಎಂಬ ಘೊಷಣೆಯನ್ನು ಕೂಡಿ ತಮ್ಮ ಪ್ರೀತಿಯ ‘ಜನತೆಯ ರಾಷ್ಟ್ರಪತಿ’ಗೆ ಅಂತಿಮ ವಿದಾಯ ಹೇಳಿದರು.
2015:  ನವದೆಹಲಿ: ದೇಶದ ನ್ಯಾಯಾಂಗ ಇತಿಹಾಸದಲ್ಲಿ ನಸುಕಿನ ಜಾವ 3ರ ಸುಮಾರಿಗೆ ಸುಪ್ರೀಂಕೋರ್ಟ್ ಕಲಾಪ ಆರಂಭಿಸುವ ಮೂಲಕ ಸುಪ್ರೀಂಕೋರ್ಟ್ 30-07-2015r ಗುರುವಾರ ಇತಿಹಾಸ ಸೃಷ್ಟಿಸಿತು. ಸಾವಿನ ಕುಣಿಕೆಯಿಂದ ಪಾರಾಗುವ ಅಂತಿಮ ಯತ್ನವಾಗಿ ಯಾಕುಬ್ ಮೆಮನ್ ಹಿಂದಿನ ರಾತ್ರಿ ಮಹಾರಾಷ್ಟ್ರ ರಾಜ್ಯಪಾಲರು ಹಾಗೂ ಬಳಿಕ ರಾಷ್ಟ್ರಪತಿಯವರು ತನ್ನ ಕ್ಷಮಾದಾನ ಅರ್ಜಿ ತಿರಸ್ಕರಿದ್ದನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಯ ಅಭೂತಪೂರ್ವ ವಿಚಾರಣೆ ಮೂಲಕ ಈ ಇತಿಹಾಸ ಸೃಷ್ಟಿಯಾಯಿತು. ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಬುಧವಾರ ರಾತ್ರಿ 10.45ಕ್ಕೆ ಯಾಕುಬ್ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಿದರು. ಇದಾದ ಬೆನ್ನಲ್ಲೇ ಭಾರತದ ಮುಖ್ಯ ನ್ಯಾಯಮೂರ್ತಿ ಎಚ್.ಎಲ್. ದತ್ತು ಅವರ ಮನೆಗೆ ತೆರಳಿದ ವಕೀಲರ ಗುಂಪೊಂದು ಯಾಕೂಬ್ ಪರ ಅರ್ಜಿ ಸಲ್ಲಿಸಿ ಅದರ ತುರ್ತು ವಿಚಾರಣೆಗೆ ಮನವಿ ಮಾಡಿದರು. ಕ್ಷಮಾದಾನ ಅರ್ಜಿ ತಿರಸ್ಕರಿಸಿದ್ದನ್ನು ಪ್ರಶ್ನಿಸಲು ಅನುಕೂಲವಾಗುವಂತೆ ಯಾಕುಬ್ ಮೆಮನ್​ಗೆ ವಿಧಿಸಲಾಗಿರುವ ಗಲ್ಲು ಶಿಕ್ಷೆಯ ಜಾರಿಗೆ 14 ದಿನಗಳ ತಡೆ ನೀಡುವಂತೆ ವಕೀಲರು ಕೋರಿದರು. ಸಮಾಲೋಚನೆಗಳ ಬಳಿಕ ಮುಖ್ಯನ್ಯಾಯಮೂರ್ತಿಯವರು ಬುಧವಾರ ಯಾಕುಬ್ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದಲ್ಲಿ ತ್ರಿಸದಸ್ಯ ಪೀಠವನ್ನು ಅರ್ಜಿಯ ವಿಚಾರಣೆಗಾಗಿ ರಚಿಸಿದರು. ಮುಖ್ಯ ನ್ಯಾಯಮೂರ್ತಿಯವರ ಮನೆಯಿಂದ ತುಗ್ಲಕ್ ರಸ್ತೆಯಲ್ಲಿದ್ದ ಹಿರಿಯ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ಮನೆಗೂ ತೆರಳಿದ ವಕೀಲರು ಅಂತಿಮವಾಗಿ ಕೆಲವು ಕಿ.ಮೀ. ದೂರದಲ್ಲಿದ್ದ ಸುಪ್ರೀಂಕೋರ್ಟ್​ಗೆ ತೆರಳಿದರು. ರಾತ್ರಿ 1.35ರ ವೇಳೆಗೆ ನ್ಯಾಯಮೂರ್ತಿಗಳಾದ ಮಿಶ್ರಾ, ಪ್ರಫುಲ್ಲ ಚಂದ್ರ ಪಂತ್ ಮತ್ತು ಅಮಿತ್ ರಾಯ್ ಅವರು ಅರ್ಜಿಯ ವಿಚಾರಣೆಗಾಗಿ 2.30ರ ವೇಳೆಗೆ ನ್ಯಾಯಾಲಯಕ್ಕೆ ಬರಲು ಒಪ್ಪಿದರು. ಮೂವರೂ ನ್ಯಾಯಮೂರ್ತಿಗಳು ಸುಪ್ರೀಂಕೋರ್ಟ್​ಗೆ 2.30ಕ್ಕೆ ಆಗಮಿಸಿದರೂ, ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ ಅವರು ಬರುವುದು ತಡವಾದ್ದರಿಂದ ನಸುಕಿನ 3.20ಕ್ಕೆ ಮರುವಿಮರ್ಶಾ ಅರ್ಜಿಯ ವಿಚಾರಣೆ ಆರಂಭವಾಯಿತು. ನಸುಕಿನ ವೇಳೆಯಲ್ಲಿ ನಡೆದ ಸುಮಾರು 90 ನಿಮಿಷಗಳ ಕಲಾಪಗಳ ಬಳಿಕ 4.50ಕ್ಕೆ ಸುಪ್ರೀಂಕೋರ್ಟ್ ಯಾಕುಬ್ ಅರ್ಜಿಯನ್ನು ಪುನಃ ತಿರಸ್ಕರಿಸಿತು. ಇದರೊಂದಿಗೆ ಯಾಕುಬ್ ಗಲ್ಲು ಜಾರಿ ಅಂತಿಮವಾಗಿ ಖಚಿತಗೊಳ್ಳುವುದರ ಜೊತೆಗೇ ಸುಪ್ರೀಂಕೋರ್ಟ್ ಕಲಾಪದಲ್ಲಿ ಇತಿಹಾಸ ಸೃಷ್ಟಿಯಾಯಿತು.
 
2015: ನಾಗಪುರ:  1993ರ ಮುಂಬೈ ಸರಣಿ ಸ್ಪೋಟದ ಅಪರಾಧಿ, ಉಗ್ರ ಯಾಕುಬ್ ಮೆಮನ್​ಗೆ 30-07-2015 ರ ಗುರುವಾರ ಬೆಳಗ್ಗೆ 7 ಗಂಟೆಗೆ ಸುಮಾರಿಗೆ ನಾಗಪುರದ ಕೇಂದ್ರ ಕಾರಾಗೃಹದಲ್ಲಿ ಗಲ್ಲು ಶಿಕ್ಷೆ ವಿಧಿಸಲಾಯಿತು.  ಗಲ್ಲು ಶಿಕ್ಷೆ ತಪ್ಪಿಸಿಕೊಳ್ಳಲು ಯಾಕುಬ್ ನಡೆಸಿದ ಕೊನೆಯ ಕ್ಷಣದ ಪ್ರಯತ್ನಗಳೆಲ್ಲವೂ ಫಲ ನೀಡದ ಕಾರಣ ಈದಿನ ಆತನನ್ನು ಗಲ್ಲಿಗೇರಿಸಲಾಯಿತು. ಗಲ್ಲು ಶಿಕ್ಷೆಗೆ ತಡೆ ನೀಡುವಂತೆ ಯಾಕುಬ್ ಸುಪ್ರೀಂ ಕೋರ್ಟಿಗೆ ಮುಖ್ಯ ನ್ಯಾಯಮೂರ್ತಿ ಎಚ್.ಎಲ್.ದತ್ತು ಅವರ ನಿವಾಸದಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ನಂತರ ಸುಪ್ರೀಂ ಕೋರ್ಟ್​ನ ತ್ರಿಸದಸ್ಯ ಪೀಠ ಕೊಠಡಿ ಸಂಖ್ಯ 4 ರಲ್ಲಿ ಸುಮಾರು 90 ನಿಮಿಷ ವಿಚಾರಣೆ ನಡೆಸಲಾಯಿತು. 3.20 ಕ್ಕೆ ವಿಚಾರಣೆ ಪೂರ್ಣಗೊಳಿಸಿದ ಪೀಠ ಗಲ್ಲು ಶಿಕ್ಷೆಯನ್ನು ಕಾಯಂ ಗೊಳಿಸಿತು. ಬುಧವಾರ ಸುಪ್ರೀಂ ಕೋರ್ಟ್​ನ ತ್ರಿಸದಸ್ಯ ಪೀಠ ಯಾಕುಬ್​ನ ಕ್ಯುರೇಟಿವ್ ಅರ್ಜಿಯನ್ನು ತಿರಸ್ಕರಿಸಿತ್ತು ಮತ್ತು ಗಲ್ಲು ಶಿಕ್ಷೆಯನ್ನು ವಿಧಿಸುವಂತೆ ತಿಳಿಸಿತ್ತು. ಉಗ್ರ ಯಾಕುಬ್ ಮೆಮನ್ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ಕಳೆದ ವರ್ಷ ಮೇನಲ್ಲೇ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ತಿರಸ್ಕರಿಸಿದ್ದರು. ಆದರೆ ಬುಧವಾರ ಸುಪ್ರೀಂಕೋರ್ಟ್​ನಲ್ಲಿ ತನಗೆ ಗಲ್ಲು ಶಿಕ್ಷೆ ಆಗಬಹುದು ಎಂಬ ಆತಂಕದಿಂದ ಯಾಕುಬ್ ಎರಡನೇ ಬಾರಿಗೆ ಕ್ಷಮಾದಾನ ಅರ್ಜಿಯನ್ನು ಸಲ್ಲಿಸಿದ್ದ. ಸುಪ್ರೀಂ ಗಲ್ಲು ಶಿಕ್ಷೆ ಎತ್ತಿಹಿಡಿದರೂ ರಾಷ್ಟ್ರಪತಿಗಳ ಕ್ಷಮಾದಾನ ಅರ್ಜಿ ಇತ್ಯರ್ಥವಾಗುವ ವರೆಗೆ ಮರಣದಂಡನೆ ಮುಂದೂಡಬಹುದು ಎಂಬುದೇ ಇದರ ಹಿಂದಿರುವ ಉದ್ದೇಶವಾಗಿತ್ತು. ಆದರೆ ಸುಪ್ರೀಂ ತೀರ್ಪ ಹೊರಬೀಳುತ್ತಿದ್ದಂತೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಕೂಡ ಕ್ಷಮಾದಾನ ಅರ್ಜಿಯನ್ನು ತ್ವರಿತಗತಿಯಲ್ಲಿ ಇತ್ಯರ್ಥ ಪಡಿಸಿದರು.


2008: ಬಹುವಿವಾದ ಸೃಷ್ಟಿಸಿರುವ ರಾಮ ಸೇತುವೆಗೆ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳಲು ಪರ್ಯಾಯ ಮಾರ್ಗ ಕಂಡುಹಿಡಿಯುವಂತೆ ಸುಪ್ರೀಂಕೋರ್ಟ್ ನೀಡಿರುವ ಸಲಹೆ ಕುರಿತು ಪರಿಶೀಲನೆ ನಡೆಸುತ್ತಿರುವುದಾಗಿ ಕೇಂದ್ರ ಸರ್ಕಾರ ಹೇಳಿತು. ಸೇತುಸಮುದ್ರಂ ಕುರಿತು ಸುಪ್ರೀಂ ಕೋರ್ಟಿನಲ್ಲಿ ಹಿರಿಯ ನ್ಯಾಯವಾದಿ ಫಾಲಿ ಎಸ್. ನಾರಿಮನ್ ಅವರು ಸರ್ಕಾರದ ಪರವಾಗಿ ವಾದ ಮಂಡಿಸುತ್ತಾ ಮುಖ್ಯ ನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್ ನೇತೃತ್ವದ ಪೀಠಕ್ಕೆ ಈ ವಿಚಾರ ತಿಳಿಸಿದರು. ರಾಮೇಶ್ವರಂ ದ್ವೀಪ ಮತ್ತು ಧನುಷ್ಕೋಡಿ ನಡುವೆ ರಾಮಸೇತುವೆಗೆ ಪರ್ಯಾಯ ಮಾರ್ಗ ಕಂಡುಹಿಡಿಯುವಂತೆ ಸುಪ್ರೀಂಕೋರ್ಟ್ ನೀಡಿದ್ದ ಸಲಹೆ ಮೇರೆಗೆ ಬಗ್ಗೆ ಪ್ರಧಾನಿಯವರಿಗೆ ಪತ್ರ ಬರೆದಿದ್ದು, ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ನಾರಿಮನ್ ತಿಳಿಸಿದರು.

2007: ಭಾರತದಲ್ಲಿ ಆಗಸ್ಟ್ 3ರಂದು ಬಿಡುಗಡೆಯಾಗುವುದಕ್ಕೆ ಒಂದು ದಿನ ಮೊದಲೇ (ಈದಿನ) ಜೋಹಾನ್ಸ್ ಬರ್ಗಿನಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ `ಗಾಂಧಿ ಮೈ ಫಾದರ್' ಚಿತ್ರದ ಚೊಚ್ಚಲ ಪ್ರದರ್ಶನ (ಪ್ರೀಮಿಯರ್ ಶೋ) ನಡೆಯಿತು. ದಕ್ಷಿಣ ಆಫ್ರಿಕದ ಮಾಜಿ ಅಧ್ಯಕ್ಷ ನೆಲ್ಸನ್ ಮಂಡೇಲಾ ಮತ್ತು ದಕ್ಷಿಣ ಆಫ್ರಿಕಾದ ಇಡೀ ಸಚಿವ ಸಂಪುಟವೇ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಚಲನಚಿತ್ರವನ್ನು ವೀಕ್ಷಿಸಿತು. ಮಹಾತ್ಮ ಗಾಂಧಿ ಅವರು ತಮ್ಮ ರಾಜಕೀಯ ಜೀವನವನ್ನು ಆರಂಭಿಸಿದ ರಾಷ್ಟ್ರದಲ್ಲಿ `ಗಾಂಧಿ ಮೈ ಫಾದರ್' ಚಿತ್ರದ ಜಾಗತಿಕ ಮಟ್ಟದ ಪ್ರದರ್ಶನದ ಉದ್ಘಾಟನೆ ಮಾಡುತ್ತಿರುವುದು ನನಗೆ ಅತ್ಯಂತ ಖುಷಿಯ ವಿಷಯ. ಭಾರತವು ನಮಗೆ `ಬ್ಯಾರಿಸ್ಟರ್ ಗಾಂಧಿ'ಯನ್ನು ನೀಡಿತು, ಪ್ರತಿಯಾಗಿ ದಕ್ಷಿಣ ಆಫ್ರಿಕವು `ಮಹಾತ್ಮ ಗಾಂಧಿ'ಯನ್ನು ಹಿಂದಿರುಗಿಸಿತು' ಎಂದು ಮಂಡೇಲಾ ತಮ್ಮ ಸಂದೇಶದಲ್ಲಿ ನುಡಿದರು. ಗಾಂಧೀಜಿಯವರ ಹಿರಿಯ ಪುತ್ರ ಹರಿಲಾಲ್ ಜೊತೆಗಿನ ಸಂಕೀರ್ಣ ಸಂಬಂಧದ ಸುತ್ತ ಹೆಣೆಯಲಾಗಿರುವ ಕಥೆಯನ್ನು ಹೊಂದಿರುವ ಈ ಚಿತ್ರ ಜಗತ್ತಿನಾದ್ಯಂತ 2007ರ ಆಗಸ್ಟ್ 3ರಂದು ಬಿಡುಗಡೆಯಾಯಿತು.

2007: ಗೋವಾ ಮುಖ್ಯಮಂತ್ರಿ ದಿಗಂಬರ ಕಾಮತ್ ಅವರು ಈದಿನ ವಿಧಾನಸಭೆಯಲ್ಲಿ ನಡೆದ ವಿಶ್ವಾಸಮತ ಯಾಚನೆಯಲ್ಲಿ ಗೆಲುವು ಸಾಧಿಸಿದರು. ಬಹುಮತ ಕಳೆದುಕೊಂಡಿದ್ದ ಅವರು ಮತ್ತೆ ಅಧಿಕಾರ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದ ನಾಟಕೀಯ ಬೆಳವಣಿಗೆ ನಡೆಯಿತು. ವಿಧಾನಸಭಾಧ್ಯಕ್ಷ ಪ್ರತಾಪ್ ಸಿಂಗ್ ರಾಣೆ ಅವರು ಎಂಜಿಪಿಯ ಸುದೀನ್ ಮತ್ತು ದೀಪಕ್ ಧವಳೀಕರ್ ಹಾಗೂ ಕಾಂಗ್ರೆಸ್ಸಿಗೆ ರಾಜೀನಾಮೆ ಸಲ್ಲಿಸಿದ ವಿಕ್ಟೋರಿಯಾ ಫರ್ನಾಂಡಿಸ್ ಈ ಮೂವರು ಶಾಸಕರನ್ನು ಮತದಾನದಿಂದ ನಿರ್ಬಂಧಿಸಿ, ತಾವೇ ಕಾಂಗ್ರೆಸ್ ನೇತೃತ್ವ ಸಮ್ಮಿಶ್ರ ಸರ್ಕಾರದ ಪರವಾಗಿ ಮತ ಹಾಕಿದ್ದರಿಂದ ಕಾಮತ್ ಬಹುಮತ ಪಡೆದರು. ಇದರಿಂದ ಆಕ್ರೋಶಗೊಂಡ ಬಿಜೆಪಿ ನೇತೃತ್ವದ ವಿರೋಧಿ ಗೋವಾ ಪ್ರಜಾಸತ್ತಾತ್ಮಕ ಮೈತ್ರಿಕೂಟದ ಸದಸ್ಯರು (ಜಿಡಿಎ), ಸರ್ಕಾರ ರಾಜ್ಯಪಾಲರ ಆದೇಶವನ್ನು ಉಲ್ಲಂಘಿಸಿರುವುದಾಗಿ ತೀವ್ರ ಪ್ರತಿಭಟನೆ ನಡೆಸಿ ಸಭಾತ್ಯಾಗ ಮಾಡಿದರು.

2007: ಕೇಂದ್ರ ಮಾನವ ಸಂಪನ್ಮೂಲಗಳ ಅಭಿವೃದ್ಧಿ ಸಚಿವ ಅರ್ಜುನ್ ಸಿಂಗ್ ಹಾಗೂ ಕುಟುಂಬದ ಇತರ ಆರು ಸದಸ್ಯರ ವಿರುದ್ಧ ಉತ್ತರಪ್ರದೇಶ ಪೊಲೀಸರು ವರದಕ್ಷಿಣೆ ಕಿರುಕುಳ ಆರೋಪದ ಮೇಲೆ ಮೊಕದ್ದಮೆ ದಾಖಲಿಸಿದರು. ಮೊರಾದಾಬಾದ್ ಜಿಲ್ಲೆಯ ಚಾಂದೌಸಿ ಪೊಲೀಸ್ ಠಾಣೆಯಲ್ಲಿ ಹಿಂದಿನ ದಿನ ರಾತ್ರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನಿರ್ದೇಶನದ ಮೇರೆಗೆ ಐಪಿಸಿ 323, 234, 235, 498(ಎ), 506 ಹಾಗೂ 304 ಸೆಕ್ಷನ್ ಅಡಿ ಅಪರಾಧ ಪ್ರಕರಣ ದಾಖಲಿಸಿಕೊಳ್ಳಲಾಯಿತು. ಅರ್ಜುನ್ ಸಿಂಗ್ ಮೊಮ್ಮಗ ಅಭಿಜಿತ್ ಅವರ ಮಾವ ನೌರಲಿಯ ರಾಜಾ ಮಣ್ವಿಂದರ್ ಸಿಂಗ್ ಅವರು ನೀಡಿದ ದೂರಿನ ಮೇರೆಗೆ ಈ ಮೊಕದ್ದಮೆ ದಾಖಲಿಸಲಾಯಿತು. ಅಭಿಜಿತ್ ಪತ್ನಿ ಪ್ರಿಯಾಂಕಾ ಸಿಂಗ್ ಆರೋಪದ ಆಧಾರದಲ್ಲಿ, ಅರ್ಜುನ್ ಸಿಂಗ್ ಮತ್ತು ಪತ್ನಿ ಬೀನಾ ಸಿಂಗ್, ಪುತ್ರ ಅಭಿಮನ್ಯು ಸಿಂಗ್, ಮೊಮ್ಮಗ ಅಭಿಜಿತ್ ಸೇರಿದಂತೆ ಕುಟುಂಬದ ಒಟ್ಟು ಏಳು ಜನರ ವಿರುದ್ಧ ಅಪರಾಧ ಮೊಕದ್ದಮೆ ದಾಖಲಿಸಿಕೊಳ್ಳುವಂತೆ ಮೊರಾದಾಬಾದ್ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟರು ಪೊಲೀಸರಿಗೆ ಆದೇಶಿಸಿದ್ದರು.

2007: ಸಿಕ್ಕಿಮಿನ ಪ್ರಥಮ ಮುಖ್ಯಮಂತ್ರಿ ಹಾಗೂ ರಾಜ್ಯದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯ ಸ್ಥಾಪಕರಾದ ಹೆಂಡುಪ್ ದೋರ್ಜಿ ಖಂಗಸರ್ಪಾ ಅವರು ಈದಿನ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾದರು. ವಿಧುರರಾಗಿದ್ದ ಅವರಿಗೆ 103 ವರ್ಷ ವಯಸಾಗಿತ್ತು. ಕಾಜಿ ಸಾಬ್ ಎಂದೇ ಖ್ಯಾತರಾಗಿದ್ದ ಅವರು ಉತ್ತರ ಬಂಗಾಳದ ಕಲಿಪಾಂಗಿನಲ್ಲಿ ವಾಸವಾಗಿದ್ದರು. ಕಳೆದ ಕೆಲವು ವರ್ಷಗಳಿಂದ ಯಕೃತ್ತಿನ ಸಮಸ್ಯೆಯಿಂದ ಬಳಲುತ್ತಿದ್ದರು. ಭಾರತದ ಒಕ್ಕೂಟದಲ್ಲಿ ಸಿಕ್ಕಿಮ್ ರಾಜ್ಯದ ಸೇರ್ಪಡೆಗೆ ಪ್ರಮುಖ ಪಾತ್ರ ವಹಿಸಿದ್ದ ಅವರಿಗೆ 2002ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಸಿಕ್ಕಿಮ್ ಸರ್ಕಾರವು 2004ರಲ್ಲಿ ಅವರಿಗೆ ಸಿಕ್ಕಿಮ್ ರತ್ನ ಪ್ರಶಸ್ತಿ ನೀಡಿ ಗೌರವಿಸಿತ್ತು.

2007: ಭಯೋತ್ಪಾದನೆ ಸಂಚಿನಲ್ಲಿ ಭಾಗಿಯಾಗಿದ್ದ ಆರೋಪ ಹೊರಿಸಿ ಭಾರತೀಯ ಮೂಲದ ವೈದ್ಯ ಡಾ. ಮೊಹಮ್ಮದ್ ಹನೀಫನನ್ನು ನಾಲ್ಕು ವಾರಗಳ ಕಾಲ ಬಂಧಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಷಮೆ ಯಾಚಿಸಲು ಆಸ್ಟ್ರೇಲಿಯಾ ಪ್ರಧಾನಿ ಜಾನ್ ಹೋ ವರ್ಡ್ ನಿರಾಕರಿಸಿದರು.

2007: ಸ್ವೀಡನ್ನಿನ ಖ್ಯಾತ ಚಿತ್ರ ನಿರ್ದೇಶಕ ಮತ್ತು ನಿರ್ಮಾಪಕ ಇಂಗ್ಮಾರ್ ಬರ್ಗ್ ಮನ್ (89) ಅವರು ಈದಿನ ಸ್ಟಾಕ್ ಹೋಮಿನಲ್ಲಿ ನಿಧನರಾದರು. ಬರ್ಗ್ ಮನ್ ಅವರು ಅರ್ಧ ಶತಮಾನದಲ್ಲಿ 50 ಚಿತ್ರಗಳು ಹಾಗೂ 125 ನಾಟಕಗಳನ್ನು ನಿರ್ಮಿಸಿ ಸ್ಕಾಂಡಿನೇವಿಯಾದ ಸಾಂಸ್ಕೃತಿಕ ಲೋಕದಲ್ಲಿ ಖ್ಯಾತರಾಗಿದ್ದರು. ಅವರ ಖಾಸಗಿ ಬದುಕು ಸಹ ವರ್ಣರಂಜಿತವಾಗಿತ್ತು. ಸುಂದರ ಹಾಗೂ ಬುದ್ಧಿವಂತರಾಗಿದ್ದ ಐವರು ಮಹಿಳೆಯರನ್ನು ವಿವಾಹವಾಗಿದ್ದ ಅವರು ಅನೇಕ ನಟಿಯರ ಜತೆ ಸಂಬಂಧವಿಟ್ಟುಕೊಂಡು ವಿವಾದಕ್ಕೂ ಒಳಗಾಗಿದ್ದರು. ವೈಲ್ಡ್ ಸ್ಟ್ರೀವ್ ಬ್ಯಾರಿಸ್, ಸೀನ್ಸ್ ಫ್ರಾಮ್ ಮ್ಯಾರೇಜ್ ನಂತಹ ಚಿತ್ರಗಳು ಅವರಿಗೆ ಜಗತ್ತಿನಾದ್ಯಂತ ಖ್ಯಾತಿ ತಂದುಕೊಟ್ಟಿದ್ದವು.

2007: ಪಾಕಿಸ್ಥಾನದ ಈಶಾನ್ಯ ಪ್ರಾಂತ್ಯದಲ್ಲಿನ ಮಸೀದಿಯೊಂದನ್ನು ನೂರಾರು ಉಗ್ರರು ತಮ್ಮ ವಶಕ್ಕೆ ತೆಗೆದುಕೊಂಡು, ಅದಕ್ಕೆ `ಲಾಲ್ ಮಸೀದಿ' ಎಂದು ಹೆಸರಿಸಿ, ಈ ತಿಂಗಳು ಇಸ್ಲಾಮಾಬಾದಿನಲ್ಲಿ ಹತನಾದ ಉಗ್ರರ ನೇತಾರ ಅಬ್ದುಲ್ ರಶೀದ್ ಘಾಜಿಯ `ಆದರ್ಶ'ಗಳನ್ನು ಪಾಲಿಸುವುದಾಗಿ ಘೋಷಿಸಿದರು.ಇಸ್ಲಾಮಾಬಾದಿನ ಲಾಲ್ ಮಸೀದಿಯ ಪಕ್ಕಕ್ಕೆ ಇದ್ದ ಬಾಲಕಿಯರ ಮದರಸಾ `ಜಾಮಿಯಾ ಹಫ್ಸಾ' ಮಾದರಿಯಲ್ಲೇ ಬಾಲಕಿಯರಿಗೆ ತರಬೇತಿ ಶಾಲೆಯನ್ನು ಇಲ್ಲಿಯೂ ಆರಂಭಿಸುವುದಾಗಿ ಉಗ್ರರು ಸಾರಿದರು. ಲಾಲ್ ಮಸೀದಿಯನ್ನು ತೆರವುಗೊಳಿಸಿದ ನಂತರ `ಜಾಮಿಯಾ ಹಫ್ಸಾ'ವನ್ನು ಪಾಕ್ ಸೈನಿಕರು ಧ್ವಂಸಗೊಳಿಸಿದ್ದರು.

2007: ಮಾಜಿ ಸಚಿವ ಮೊಹಮ್ಮದ್ ಮೊಯಿನುದ್ದೀನ್ ಅವರು ಜುಲೈ 29ರ ಈದಿನ ಬೆಂಗಳೂರಿನಲ್ಲಿ ನಿಧನರಾದರು. 1985ರಲ್ಲಿ ಚಾಮರಾಜಪೇಟೆ ವಿಧಾನ ಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದ ಅವರು, ರಾಮಕೃಷ್ಣ ಹೆಗಡೆಯವರ ಸಚಿವ ಸಂಪುಟದಲ್ಲಿ ವಸತಿ ಖಾತೆಯ ರಾಜ್ಯ ಸಚಿವರಾಗಿದ್ದರು.ಭದ್ರಾವತಿಯಲ್ಲಿ ಜನಿಸಿದ್ದ ಇವರು ಬಿ.ಎಸ್ಸಿ ಪದವೀಧರರಾಗಿದ್ದರು. ಕರ್ನಾಟಕ ರೇಷ್ಮೆ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರು, ಗಂಜಾಂನಲ್ಲಿರುವ ಟಿಪ್ಪು ಸುಲ್ತಾನ್ ವಕ್ಫ್ಸ್ ಎಸ್ಟೇಟ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಶ್ರೀರಂಗಪಟ್ಟಣದ ಟಿಪ್ತು ಸುಲ್ತಾನ್ ಸಂಶೋಧನಾ ಸಂಸ್ಥೆ ಹಾಗೂ ವಸ್ತು ಸಂಗ್ರಹಾಲಯದ ಅಧ್ಯಕ್ಷರಾಗಿಯೂ ಅವರು ಕಾರ್ಯ ನಿರ್ವಹಿಸಿದ್ದರು.

2007: ಸ್ಯಾನ್ ಫೋರ್ಡಿನಲ್ಲಿ ಮುಕ್ತಾಯವಾದ ಆರು ಲಕ್ಷ ಅಮೆರಿಕನ್ ಡಾಲರ್ ಬಹುಮಾನ ಮೊತ್ತದ ವೆಸ್ಟ್ ಬ್ಯಾಂಕ್ ಕ್ಲ್ಯಾಸಿಕ್ ಡಬ್ಲ್ಯುಟಿಎ ಟೂರ್ನಿಯಲ್ಲಿ ಶ್ರೇಯಾಂಕಿತ ಆಟಗಾರ್ತಿಯರನ್ನು ಮಣ್ಣುಮುಕ್ಕಿಸಿ ಫೈನಲ್ ಪ್ರವೇಶಿಸಿದ್ದ ಸಾನಿಯಾ ಮಿರ್ಜಾ ಫೈನಲಿನಲ್ಲಿ ಮುಗ್ಗರಿಸಿದರು. ಸಾನಿಯಾ ಮಿರ್ಜಾ ಅವರು 3-6, 2-6 ನೇರ ಸೆಟ್ ಗಳಲ್ಲಿ ರಷ್ಯಾದ ಅನ್ನಾ ಚಕ್ವೆಟಾಜ್ ಅವರ ಕೈಯಲ್ಲಿ ಪರಾಭವಗೊಂಡರು.


2007: ಉದ್ಯಮಿ ಡಾ.ವಿಜಯ್ ಮಲ್ಯ ಅವರು ರಾಜಾಜಿನಗರದ ಸೆಲೆಕ್ಟ್ ಕ್ರಿಕೆಟ್ ಕ್ಲಬ್ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಕರ್ನಾಟಕ ರಾಜ್ಯ ಕ್ರಿಕೆಟ್ ಕಡೆಗೆ ಹೆಜ್ಜೆಯಿಟ್ಟರು.

2006: ಮೂವತ್ತೈದು ವರ್ಷಗಳ ಅವಧಿಯಲ್ಲಿ 8000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ 2400 ಮೆ.ವಾ. ಸಾಮರ್ಥ್ಯದ ಅತಿ ವಿವಾದಿತ ತೆಹ್ರಿ ಜಲ ವಿದ್ಯುತ್ ಸ್ಥಾವರವು ಕಡೆಗೂ ಈದಿನ ಕಾರ್ಯಾರಂಭ ಮಾಡಿತು. ಉತ್ತರದ ಗ್ರಿಡ್ ಜಾಲಕ್ಕೆ ಬೆಸೆದಿರುವ ಸ್ಥಾವರದ 250 ಮೆಗಾವ್ಯಾಟ್ ಸಾಮರ್ಥ್ಯದ ಮೊದಲ ಘಟಕದ ಕಾರ್ಯಾರಂಭಕ್ಕೆ ಕೇಂದ್ರ ಇಂಧನ ಸಚಿವ ಸುಶೀಲ್ ಕುಮಾರ್ ಶಿಂಧೆ ಚಾಲನೆ ನೀಡಿದರು. 1657 ಕೋಟಿ ರೂಪಾಯಿ ವೆಚ್ಚದ ತೆಹ್ರಿ ಪಂಪ್ ಸ್ಟೋರೇಜ್ ಯೋಜನೆಗೆ ಶಂಕುಸ್ಥಾಪನೆಯನ್ನೂ ನೆರವೇರಿಸಿದರು. ಏಷ್ಯದಲ್ಲೇ ಅತ್ಯಂತ ಎತ್ತರದ `ರಾಕ್ ಫಿಲ್ ಡ್ಯಾಮ್' ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಅಣೆಕಟ್ಟು ವಿದ್ಯುತ್ ಯೋಜನೆಯಿಂದ ಉತ್ತರ ಭಾರತದ 9 ರಾಜ್ಯಗಳ ವಿದ್ಯುತ್ ಪರಿಸ್ಥಿತಿ ಸುಧಾರಿಸುವುದು ಎಂದು ನಿರೀಕ್ಷಿಸಲಾಯಿತು. 35 ವರ್ಷಗಳ ಹಿಂದೆ ಯೋಜನೆಗೆ ಅಡಿಗಲ್ಲು ಹಾಕಿದಾಗ ಅದರ ವೆಚ್ಚ 200 ಕೋಟಿ ರೂಪಾಯಿ ಎಂದು ಅಂದಾಜು ಮಾಡಲಾಗಿತ್ತು.

2006: ಬಹರೇನಿನಲ್ಲಿ ಮೂರು ಮಹಡಿಯ ಕಟ್ಟಡವೊಂದರಲ್ಲಿ ಅಗ್ನಿ ಅನಾಹುತ ಸಂಭವಿಸಿ 16 ಭಾರತೀಯ ಕಾರ್ಮಿಕರು ಮೃತರಾದರು.

1995: ಜಾರ್ಖಂಡ್ ಸ್ವಾಯತ್ತ ಜಿಲ್ಲಾ ಮಂಡಳಿ ರಚನೆಗೆ ಅಧಿಸೂಚನೆ ಪ್ರಕಟಗೊಂಡಿತು.

1960: ಕರ್ನಾಟಕದ ಸಿಂಹ, ಶ್ರೇಷ್ಠ ಸೇನಾನಿ ಗಂಗಾಧರ ಬಾಲಕೃಷ್ಣ ದೇಶಪಾಂಡೆ ನಿಧನ.

1951: ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಜನನ.

1947: ಕಾಶ್ಮೀರದ ಭಾಗವಾದ ನೈಋತ್ಯ ಗಡಿ ಪ್ರದೇಶವನ್ನು (ಎನ್ ಡಬ್ಲ್ಯೂ ಎಫ್ ಸಿ) ಪಾಕಿಸ್ಥಾನ ಕೈವಶಪಡಿಸಿಕೊಂಡಿತು. ನವೆಂಬರಿನಲ್ಲಿ ಇಲ್ಲಿ ಪಾಕಿಸ್ಥಾನದ ಧ್ವಜಾರೋಹಣ ಮಾಡಲಾಯಿತು.

1928: ಜಾರ್ಜ್ ಈಸ್ಟ್ ಮನ್ ಅವರಿಂದ ಮೊದಲ ಬಣ್ಣದ ಸಿನಿಮಾ ಪ್ರಾತ್ಯಕ್ಷಿಕೆ.

1923: ಕನ್ನಡ ಹಾಗೂ ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಕೃತಿಗಳನ್ನು ರಚಿಸಿದ ಖ್ಯಾತ ವಿದ್ವಾಂಸ ಡಾ. ಕೆ. ಕೃಷ್ಣಮೂರ್ತಿ (30-7-
1923ರಿಂದ 18-7-1997) ಅವರು ಎನ್. ವೆಂಕಟಸುಬ್ಬಯ್ಯ- ಗೌರಮ್ಮ ದಂಪತಿಯ ಮಗನಾಗಿ ಹಾಸನ ಜಿಲ್ಲೆಯ ಕೇರಳಾಪುರದಲ್ಲಿ ಜನಿಸಿದರು. ಅವರು ರಚಿಸಿದ ಒಟ್ಟು ಗ್ರಂಥಗಳು 54.

1913: ದ್ವಿತೀಯ ಬಾಲ್ಕನ್ ಯುದ್ಧ ಸಮಾಪ್ತಿಗೊಂಡಿತು.

1883: ಕೈಗಾರಿಕೋದ್ಯಮಿ ಬದ್ರಿದಾಸ್ ಜನನ.

1622: ಶ್ರೇಷ್ಠ ಕವಿ, ಸಂತ ತುಳಸೀದಾಸರ ಪುಣ್ಯದಿನ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement