My Blog List

Wednesday, October 21, 2009

ಇಂದಿನ ಇತಿಹಾಸ History Today ಅಕ್ಟೋಬರ್ 21

ಇಂದಿನ ಇತಿಹಾಸ

ಅಕ್ಟೋಬರ್ 21

ಸರ್ಕಾರಕ್ಕೇ ಸವಾಲೆಸೆದಿದ್ದ ಮಹಾರಾಷ್ಟ್ರ ನವನಿರ್ಮಾಣ ಸೇನಾ (ಎಮ್ಮೆನ್ನೆಸ್) ಮುಖ್ಯಸ್ಥ ರಾಜ್ ಠಾಕ್ರೆ ಅವರನ್ನು ಈದಿನ ಬೆಳಗಿನ ಜಾವ 4 ಗಂಟೆಗೆ ರತ್ನಗಿರಿಯಲ್ಲಿ ಪೊಲೀಸರು ಬಂಧಿಸಿದರು. ಈ ಸುದ್ದಿ ಹರಡುತ್ತಿದ್ದಂತೆ ಮಹಾರಾಷ್ಟ್ರದೆಲ್ಲೆಡೆ ಹಿಂಸಾ ಘಟನೆಗಳು ವರದಿಯಾದವು.

2008: ಸರ್ಕಾರಕ್ಕೇ ಸವಾಲೆಸೆದಿದ್ದ ಮಹಾರಾಷ್ಟ್ರ ನವನಿರ್ಮಾಣ ಸೇನಾ (ಎಮ್ಮೆನ್ನೆಸ್) ಮುಖ್ಯಸ್ಥ ರಾಜ್ ಠಾಕ್ರೆ ಅವರನ್ನು ಈದಿನ ಬೆಳಗಿನ ಜಾವ 4 ಗಂಟೆಗೆ ರತ್ನಗಿರಿಯಲ್ಲಿ ಪೊಲೀಸರು ಬಂಧಿಸಿದರು. ಈ ಸುದ್ದಿ ಹರಡುತ್ತಿದ್ದಂತೆ ಮಹಾರಾಷ್ಟ್ರದೆಲ್ಲೆಡೆ ಹಿಂಸಾ ಘಟನೆಗಳು ವರದಿಯಾದವು. ಮುಂಬೈ, ನಾಸಿಕ್, ಪುಣೆ, ಥಾಣೆ ಮುಂತಾದ ನಗರಗಳಲ್ಲಿ ಎಮ್ಮೆನ್ನೆಸ್ ಕಾರ್ಯಕರ್ತರು ದಾಂದಲೆ ನಡೆಸಿದರು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ, ಅಶ್ರುವಾಯು ಶೆಲ್ ಸಿಡಿಸಬೇಕಾಯಿತು. ಬಸ್, ಪೊಲೀಸ್ ವ್ಯಾನ್, ಆಟೋ, ಟ್ಯಾಕ್ಸಿ ಹೀಗೆ ಕಣ್ಣಿಗೆ ಬಿದ್ದ ವಾಹನಗಳಿಗೆ ಎಮ್ಮೆನ್ನೆಸ್ ಕಾರ್ಯಕರ್ತರು ಬೆಂಕಿ ಹಚ್ಚಿದರು.

2008: ಆಸ್ಟ್ರೇಲಿಯಾ ತಂಡದ ವಿರುದ್ಧ ಮೊಹಾಲಿಯಲ್ಲಿ ಕೊನೆಗೊಂಡ ಎರಡನೇ ಕ್ರಿಕೆಟ್ ಟೆಸ್ಟ್ ವೇಳೆ ಐಸಿಸಿ ನೀತಿ ಸಂಹಿತೆ ಉಲ್ಲಂಘಿಸಿದ ಭಾರತದ ವೇಗದ ಬೌಲರ್ ಜಹೀರ್ ಖಾನ್ ಮೇಲೆ ರೆಫರಿ ಕ್ರಿಸ್ ಬ್ರಾಡ್ ಅವರು ಪಂದ್ಯ ಶುಲ್ಕದ ಶೇ. 80 ರಷ್ಟು ಮೊತ್ತ ದಂಡ ವಿಧಿಸಿದರು. ನಾಲ್ಕನೇ ದಿನದಾಟದಲ್ಲಿ ಆಸೀಸ್ ಬ್ಯಾಟ್ಸ್ ಮನ್ ಹೇಡನ್ ಔಟಾಗಿ ಪೆವಿಲಿಯನ್ ಗೆ ತೆರಳುತ್ತಿದ್ದ ಸಂದರ್ಭ ಜಹೀರ್ ಅವರ ಬಳಿಗೆ ಧಾವಿಸಿ ದೊಡ್ಡ ಸ್ವರದಲ್ಲಿ ಕಿರುಚಿದ್ದರು.

2008: ಮೊಬೈಲ್ ಫೋನ್ ಬಳಕೆ ಸಿಗರೇಟಿಗಿಂತ ಆರೋಗ್ಯಕ್ಕೆ ಅಪಾಯಕಾರಿ. ದೀರ್ಘಕಾಲ ಸೆಲ್ ಫೋನ್ ಬಳಸುವುದರಿಂದ ಮೆದುಳಿನ ಗೆಡ್ಡೆ, ಕ್ಯಾನ್ಸರುಗಳಿಗೆ ಕಾರಣವಾಗುತ್ತದೆ ಎಂದು ಅಧ್ಯಯನ ವರದಿಯೊಂದು ಬಳಕೆದಾರರನ್ನು ಎಚ್ಚರಿಸಿತು. ಅಮೆರಿಕದ ಇಲಿನಾಯ್ನ ಲೇಕ್ ಫಾರೆಸ್ಟ್ ಆಸ್ಪತ್ರೆಯ ನರರೋಗ ತಜ್ಞ ರಾನ್ ಪಾವ್ಲ್ ಅವರ ನೇತೃತ್ವದ ತಂಡ ಈ ಅಂಶವನ್ನು ಬಹಿರಂಗ ಪಡಿಸಿತು. ಮೊಬೈಲ್ ಫೋನ್ ಬಳಕೆಯಿಂದ ಮೆದುಳಿನ ಗೆಡ್ಡೆ, ಕ್ಯಾನ್ಸರ್ ರೋಗ ಬರುವುದು ಎಂಬ ಆರೋಪದಲ್ಲಿ ನಿಜಾಂಶ ಇದೆಯೇ ಎಂಬ ವಿಷಯದಲ್ಲಿ ತಂಡ ಅಧ್ಯಯನ ನಡೆಸಿತ್ತು. ಮೊಬೈಲ್ ಫೋನುಗಳನ್ನು ಸಣ್ಣಮಕ್ಕಳು, ವಿದ್ಯಾರ್ಥಿಗಳು, ಹದಿಹರೆಯದವರು, ಯುವಜನರು ಹೆಚ್ಚು ಬಳಸುವುದು ಅಪಾಯಕಾರಿ. ಅವರ ಮೆದುಳು ಬೆಳವಣಿಗೆ ಹಂತದಲ್ಲಿ ಇರುವುದರಿಂದ ಹೆಚ್ಚಿನ ಹಾನಿಯಾಗುತ್ತದೆ. ಹತ್ತುವರ್ಷಗಳಿಗಿಂತ ಹೆಚ್ಚುಕಾಲ ಸೆಲ್ ಫೋನ್ ಬಳಸಿದ ಹಿರಿಯರಿಗೂ ಕ್ಯಾನ್ಸರ್, ಮೆದುಳು ಗಡ್ಡೆಯ ಸಾಧ್ಯತೆ ಹೆಚ್ಚು. ಮೆದುಳು ಸೆಲ್ ಫೋನಿನ ವಿದ್ಯುತ್ ಕಾಂತೀಯ ಕ್ಷೇತ್ರದ (ಇ ಎಲ್ ಎಫ್) ವ್ಯಾಪ್ತಿಯಲ್ಲಿ ಬರುವುದರಿಂದ ರೋಗ ಸಾಧ್ಯತೆ ಹೆಚ್ಚು. ಸೆಲ್ ಫೋನನ್ನು ತಲೆಯ ಯಾವಭಾಗದಲ್ಲಿ ಹೆಚ್ಚು ಬಳಸಲಾಗುವುದೋ ಅಲ್ಲಿ ಕ್ಯಾನ್ಸರ್ ಸಾಧ್ಯತೆ ಹೆಚ್ಚು ಅನ್ನುತ್ತದೆ ವರದಿ. ಮೊಬೈಲ್ ಫೋನ್ ಮತ್ತು ಮೆದುಳಿನ ಕ್ಯಾನ್ಸರ್ ಇತ್ಯಾದಿಗಳ ರೋಗ ಸಂಬಂಧ ದೃಢಪಟ್ಟಿದೆ. ಕಳೆದ ಒಂದು ದಶಕದಿಂದೀಚೆಗೆ ಪ್ರಕರಣಗಳು ಹೆಚ್ಚಿವೆ. ಮನೆಯಲ್ಲಿ ಬಳಸುವ ನಿಸ್ತಂತು ಫೋನುಗಳೂ (ಕಾರ್ಡ್ ಲೆಸ್ ಫೋನ್) ಇದೇ ಪರಿಣಾಮ ಉಂಟುಮಾಡುತ್ತವೆ ಎಂದು ವರದಿ ತಿಳಿಸಿತು.

2008: ಮಣಿಪುರದ ರಾಜಧಾನಿ ಇಂಫಾಲದಲ್ಲಿ ಬಿಗಿ ಭದ್ರತೆಯ ಪೊಲೀಸ್ ಕಮಾಂಡೊ ತರಬೇತಿ ಕೇಂದ್ರದ ಬಳಿ ಈದಿನ ಸಂಜೆ ಶಕ್ತಿಶಾಲಿ ಬಾಂಬ್ ಸ್ಛೋಟಿಸಿದ್ದರಿಂದ ಕನಿಷ್ಠ 11 ಮಂದಿ ಸತ್ತು ಹಲವರು ಗಾಯಗೊಂಡರು. ಸಂಜೆ 7.30ಕ್ಕೆ ಈ ಸ್ಛೋಟ ಸಂಭವಿಸಿತು.

2008: ರಾಜ್ಯ ವೀರಶೈವ ಪಂಚಮಸಾಲಿ ಸಂಘ ಪ್ರಸಕ್ತ ಸಾಲಿನ ವೀರರಾಣಿ ಕಿತ್ತೂರು ಚನ್ನಮ್ಮ ಪ್ರಶಸ್ತಿಗೆ ಬೆಂಗಳೂರಿನ ಜಯದೇವ ಹೃದ್ರೋಗ ಸಂಸ್ಥೆಯ ಮಾಜಿ ನಿರ್ದೇಶಕ ಡಾ. ಪ್ರಭುದೇವ ಅವರನ್ನು ಆಯ್ಕೆ ಮಾಡಿತು. ಪ್ರಶಸ್ತಿಯನ್ನು ಹೊನ್ನಾಳಿ ತಾಲ್ಲೂಕು ಸಾಸ್ವೆಹಳ್ಳಿಯಲ್ಲಿ ಯುವ ವೀರರಾಣಿ ಕಿತ್ತೂರು ಚನ್ನಮ್ಮ ಅವರ 185ನೇ ವಿಜಯೋತ್ಸವ ಹಾಗೂ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರುಗಳ ಪುರಪ್ರವೇಶ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುವುದೆಂದು ಜಿಲ್ಲಾ ವೀರಶೈವ ಪಂಚಮಸಾಲಿ ಸಂಘ ಅಧ್ಯಕ್ಷ ಬಿ.ಸಿ.ಉಮಾಪತಿ ಪ್ರಕಟಿಸಿದರು.

2007: ಹಿಮಾಲಯದಂಚಿನ ಹಲವು ಕಡೆ ಕೆಲವು ವಿಶಿಷ್ಟ ಗೋತಳಿಗಳು ಕಣ್ಮರೆಯಾಗ ತೊಡಗಿರುವುದು ಅಧ್ಯಯನವೊಂದರಿಂದ ದೃಢಪಟ್ಟಿತು. ಈ ಅಧ್ಯಯನದಲ್ಲಿ ಗುಜ್ಜರ್ ಜನರ ಬದುಕು, ವಹಿವಾಟುಗಳ ಬಗ್ಗೆಯೂ ವಿಶೇಷ ಗಮನ ನೀಡಲಾಗಿದೆ. ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಉತ್ತರ ಭಾರತದ ಕೆಲವು ಕಡೆ ಕಳೆದ ನಾಲ್ಕು ದಶಕಗಳಲ್ಲಿ ಅಪರೂಪದ ಗೋವು, ಕುರಿ, ಕುದುರೆ ಮತ್ತು ನಾಯಿಗಳ ತಳಿಗಳು ಕಣ್ಮರೆಯಾಗಿವೆ ಎಂದೂ ಈ ಅಧ್ಯಯನ ತಿಳಿಸಿತು. ಬುಡಕಟ್ಟು ಜನಾಂಗಳ ಬಗ್ಗೆ ವಿಶೇಷ ಸಂಶೋಧನೆಗಳನ್ನು ನಡೆಸುತ್ತಿರುವ ಕೇಂದ್ರ ಸರ್ಕಾರದ ಬುಡಕಟ್ಟು ಸಂಶೋಧನೆ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನವು ನಡೆಸಿರುವ ಈ ಅಧ್ಯಯನದಲ್ಲಿ 1968ರಿಂದ ಈ ಅಪರೂಪದ ತಳಿಗಳು ಕಾಣೆಯಾಗುತ್ತಿವೆ ಎಂದು ತಿಳಿಸಲಾಗಿದ್ದು, `ಜಮ್ಮು ಮತ್ತು ಕಾಶ್ಮೀರದಲ್ಲಿ ವಿದೇಶಿ ತಳಿಗಳನ್ನು ಅದೇ ವರ್ಷ ಮೊದಲ ಬಾರಿಗೆ ರೈತರಿಗೆ ನೀಡಲಾಗಿತ್ತು' ಎಂದು ಸ್ಮರಿಸಲಾಗಿದೆ. `ಅಧಿಕ ಉಣ್ಣೆ ಮತ್ತು ಮಾಂಸಕ್ಕಾಗಿ ವಿದೇಶಿ ತಳಿಗಳನ್ನು ಸಾಕಲು ರೈತರಿಗೆ ಆ ಸಂದರ್ಭದಲ್ಲಿ ಪ್ರೋತ್ಸಾಹ ನೀಡಲಾಗಿತ್ತು' ಎಂದು ಬುಡಕಟ್ಟು ಸಂಶೋಧನೆ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಕಾರ್ಯದರ್ಶಿ ಡಾ.ಜಾವೇದ್ ರಾಹಿ ತಿಳಿಸಿದರು. `ಇಂತಹ ಅಪರೂಪದ ತಳಿಗಳನ್ನು ಉಳಿಸಿಕೊಳ್ಳುವ ದಿಸೆಯಲ್ಲಿ ಈವರೆಗೂ ಯಾವುದೇ ಸಂಶೋಧನೆಗಳೂ ನಡೆದಿಲ್ಲ' ಎಂದಿರುವ ಅವರು ಕುರಿತಳಿಗಳಾದ ಘಿರೋಡ್ ಫಾಂಫ್ರಿ, ಪುಂಚಿ ಬೇಕರ್ ವಾಲಿ, ಬನಿ, ಕರ್ನಾಯ್ ಮುಂತಾದ ತಳಿಗಳಂತೂ ಮಾಯವಾಗಿವೆ ಎಂದರು. ಇದೇ ರೀತಿ ಯಾರ್ಕಂಡಿ, ನುಕ್ರಾ ಮತ್ತು ಭಾರ್ಸಿ ಮುಂತಾದ ಕುದುರೆಯ ತಳಿಗಳೂ ಈಗ ಕಾಣುತ್ತಿಲ್ಲ ಎಂದು ಹೇಳಿದರು. ಗುಜ್ಜರ್ ಗಳ ಕೊಟ್ಟಿಗೆಗಳಲ್ಲಿ ಇವತ್ತು ಆಸ್ಟ್ರೇಲಿಯಾದ ತಳಿಗಳಷ್ಟೇ ಕಂಡು ಬರುತ್ತಿವೆ ಎಂದೂ ಅವರು ತಿಳಿಸಿದರು. ಲಡಾಖ್ ಪ್ರದೇಶದ ಬ್ರೋಕ್ಟಾ, ಚಾಂಗ್ಪಾ ಮತ್ತು ದಾರ್ದ್ ಬುಡಕಟ್ಟು ಜನ ತಮ್ಮ ಕೊಟ್ಟಿಗೆಗಳಲ್ಲಿ ಇವತ್ತಿಗೂ ಕೆಲವು ಅಪರೂಪದ ಸ್ಥಳೀಯ ತಳಿಗಳನ್ನು ಪೋಷಿಸುತ್ತಿದ್ದಾರೆ ಎಂದು ಅಧ್ಯಯನ ಹೇಳಿತು. ಆಸ್ಟ್ರೇಲಿಯ, ಕೆನಡಾ, ಅಮೆರಿಕ, ಇಂಗ್ಲೆಂಡ್, ರಶ್ಯಾ ಮತ್ತು ಬ್ರೆಜಿಲ್ ಮುಂತಾದ ದೇಶಗಳು ತಮ್ಮಲ್ಲಿನ ಅಪರೂಪದ ತಳಿಗಳನ್ನು ರಕ್ಷಿಸುತ್ತಿವೆ. ಭಾರತದಲ್ಲಿ ಮಾತ್ರ ಹಾಗಾಗಿಲ್ಲ ಎಂದೂ ಈ ವರದಿ ತಿಳಿಸಿತು. ಪ್ರಸಕ್ತ ಗುಜ್ಜರ್ ಸೇರಿದಂತೆ ಹಲವು ಬುಡಕಟ್ಟಿನ ಮಂದಿ ಈ ವಿದೇಶಿ ತಳಿಗಳ ಬಗ್ಗೆ ತೃಪ್ತಿಯನ್ನಂತೂ ಹೊಂದಿಲ್ಲ. ಹೀಗಾಗಿ ಇವರು ಹಳೆಯ ಅಪರೂಪದ ತಳಿಗಳನ್ನೇ ಸಾಕಲು ಇಚ್ಛಿಸಿದ್ದಾರೆ. ಆದರೆ ಅವರಿಗೆ ಆ ತಳಿಗಳು ಈಗ ಸಿಗುತ್ತಲೇ ಇಲ್ಲ ಎಂದೂ ಈ ವರದಿ ಹೇಳಿತು. ಈ ಹಿನ್ನೆಲೆಯಲ್ಲಿ ಸರ್ಕಾರವು ಹಳೆಯ ತಳಿಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದು ಗುಜ್ಜರ್ ಸೇರಿದಂತೆ ಹಲವು ಬುಡಕಟ್ಟುಗಳ ಮಂದಿ ಒತ್ತಾಯಿಸುತ್ತಿದ್ದಾರೆ ಎಂದೂ ಈ ಅಧ್ಯಯನ ತಿಳಿಸಿತು.

2007: ಮಕ್ಕಳು ಶಾಲೆಯಿಂದ ಮನೆಗೆ ವಾಪಸಾಗುವವರೆಗೆ ಹೆತ್ತವರ ಆತಂಕ ಈಚಿನ ದಿನಗಳಲ್ಲಿ ಹೆಚ್ಚು. ಉದ್ಯಮಿಗಳಾಗಿದ್ದರೆ ಅಂತಹವರ ಮಕ್ಕಳು ಅಪಹರಣಕ್ಕೆ ಒಳಗಾಗುವ ಭೀತಿ ಒಂದೆಡೆಯಾದರೆ, ವಾಹನ ದಟ್ಟಣೆಯ ನಡುವೆ ಮಕ್ಕಳೆಲ್ಲಿ ಸಿಲುಕಿಕೊಳ್ಳುವರೋ ಎಂಬ ಭಯ ಮಧ್ಯಮ ವರ್ಗದವರಿಗೆ. `ಮೊಬೈಲ್ ಫೋನ್' ಲೋಕದಲ್ಲಿನ ವಿಶಿಷ್ಟ ಸಂಶೋಧನೆಯೊಂದು ಹೆತ್ತವರ ಇಂತಹದೊಂದು ಆತಂಕಕ್ಕೆ ಪರಿಹಾರ ಒದಗಿಸುವ ಸಾಧ್ಯತೆ ಇದೆ ಎಂದು ನವದೆಹಲಿಯ ಎಸ್ ಐ ಆರ್ ಎಫ್ ಟೆಕ್ನಾಲಜಿ ಸಂಸ್ಥೆಯ ಆಡಳಿತ ನಿರ್ದೇಶಕ ಅಶುತೋಷ್ ಪಾಂಡೆ ಪ್ರಕಟಿಸಿದರು. `ನಮ್ಮ ಸಂಸ್ಥೆಯು ಮಾರುಕಟ್ಟೆಗೆ ನೀಡಲಿರುವ ನೂತನ ಮೊಬೈಲ್ ಉಪಗ್ರಹ ಆಧಾರಿತ ಕಾರ್ಯಕ್ರಮವಾಗಿದ್ದು, ಆ ಮೂಲಕ ದೂರವಾಣಿಯಲ್ಲಿ ಮಾತನಾಡುವವರಿಗೆ ಸಂಬಂಧಪಟ್ಟ ಮೊಬೈಲ್ ಯಾವ ಸ್ಥಳದಲ್ಲಿದೆ ಎಂಬ ಮಾಹಿತಿ ಕೂಡಾ ಸಿಗುತ್ತದೆ' ಎಂಬುದು ಅವರ ವಿವರಣೆ. `ಶಾಲೆಗೆ ಹೋಗುವ ಮಗುವಿನ ಕಿಸೆಯಲ್ಲಿ ಈ ಮೊಬೈಲ್ ಇರಿಸಿದರೆ, ಆ ಮಗು ಇರುವ ಸ್ಥಳದ ಖಚಿತ ಮಾಹಿತಿಯು ದೂರದ ಮನೆಯಲ್ಲಿಯೋ, ಕಚೇರಿಯಲ್ಲಿಯೋ ಕುಳಿತ ಹೆತ್ತವರಿಗೆ ಲಭ್ಯ. ಮೊಬೈಲಿನೊಳಗೆ ಕಾರ್ಯಕ್ರಮವೊಂದನ್ನು ಹುದುಗಿಸಿಟ್ಟು ಹೆತ್ತವರು ತಮ್ಮ ಮಗು ಓದುವ ಶಾಲೆಯ ಸುತ್ತಲೂ ವೃತ್ತದೋಪಾದಿಯಲ್ಲಿ ಗುರುತಿಸಿಡಬೇಕು. ಮಗು ಯಾವುದೇ ಕ್ಷಣ ಆ ನಿಗದಿತ ವೃತ್ತವನ್ನು ದಾಟಿದ ತತ್ ಕ್ಷಣ ಹೆತ್ತವರ ಮೊಬೈಲ್ ರಿಂಗಣಿಸತೊಡಗುತ್ತದೆ' ಎಂಬ ಮಾಹಿತಿಯನ್ನೂ ಪಾಂಡೆ ನೀಡಿದರು. `ಆ ನಂತರ ಮೊಬೈಲಿನೊಂದಿಗಿನ `ಭದ್ರತಾ ಕಾರ್ಯಕ್ರಮ'ದ ಮೂಲಕ ಆ ಮಗು ಯಾವ ಸ್ಥಳದಲ್ಲಿದೆ ಎಂಬುದನ್ನು ಖಚಿತವಾಗಿಯೇ ಪತ್ತೆ ಹಚ್ಚಬಹುದು' ಎಂಬುದು ಅವರ ಹೇಳಿಕೆ. ಯಾರು ಎಲ್ಲಿದ್ದಾರೆ ಎಂಬ ಬಗ್ಗೆ ಖಚಿತ ಮಾಹಿತಿ ನೀಡುವ `ರೇಡಿಯೊ ಕಾಲರ್'ನಂತಹ ಮೊಬೈಲ್ ಸಲಕರಣೆಯು ಭಾರತದ ಮಾರುಕಟ್ಟೆಯಲ್ಲಿ ಶೀಘ್ರ ಲಭಿಸಲಿದೆ ಎಂಬುದು ಅವರ ಭರವಸೆ.

2007: ಮಾರಕ ರೋಗ ಏಡ್ಸ್ ಗೆ ಕಾರಣವಾಗಿರುವ ಎಚ್ ಐ ವಿ ವೈರಸ್ಸಿನ ಸೋಂಕಿನ ವಿರುದ್ಧ ಹೋರಾಡುವ ಸಹಜ ರೋಗ ನಿರೋಧಕ ಶಕ್ತಿ ಕೆಲವರಲ್ಲಿ ಇರುವುದು ಅಧ್ಯಯನವೊಂದರಿಂದ ಪತ್ತೆಯಾಯಿತು. ಎಚ್ ಐ ವಿ ವೈರಸ್ಸಿನ ಸೋಂಕಿಗೊಳಗಾದ ಕೆಲವರಲ್ಲಿ ಮಾತ್ರ ಈ ಅಂಶ ಕಂಡು ಬಂದಿದೆ. ಇದರಿಂದ ಎಚ್ ಐ ವಿ ವೈರಸ್ಸಿನ ಸೋಂಕಿನ ವಿರುದ್ಧ ಲಸಿಕೆಯನ್ನು ಅಭಿವೃದ್ಧಿ ಪಡಿಸಬಹುದು ಎಂದು ಚಂಡೀಗಢದ ಪ್ರಸಿದ್ಧ ವೈದ್ಯಕೀಯ ಕಾಲೇಜಿನ ಡಾ. ಅಜಯ್ ವಾಂಚೂ ತಿಳಿಸಿದರು. ಈ ಅಧ್ಯಯನವನ್ನು ಭಾರತೀಯ ವೈದ್ಯಕೀಯ ಸಂಶೋಧನ ಮಂಡಳಿ ಚಂಡೀಗಢದ ಪಿಜಿಮೆರ್ ನ ಔಷಧೀಯ ವಿಭಾಗದ ಸಹಯೋಗದೊಂದಿಗೆ ನಡೆಸಿತು. `ವೈರಸ್ಸಿನ ಸೋಂಕಿಗೆ ಒಂದಕ್ಕಿಂತ ಹೆಚ್ಚು ಬಾರಿ ಒಳಗಾದಾಗ ವೈರಸ್ಸಿನ ವಿರುದ್ಧ ಹೋರಾಡುವ ರೋಗ ನಿರೋಧಕ ಶಕ್ತಿ ಉಂಟಾಗುತ್ತದೆ. ಆದರೆ ಈ ಶಕ್ತಿ ಕೆಲವರಲ್ಲಿ ಮಾತ್ರವೇ ಇರುತ್ತದೆ' ಎಂದು ಪತ್ರಿಕಾಗೋಷ್ಠಿಯಲ್ಲಿ ಡಾ. ಅಜಯ್ ವಾಂಚೂ ಪ್ರತಿಪಾದಿಸಿದರು. `ವಂಶವಾಹಿ ತಳಿಯ ವಿಶಿಷ್ಟತೆಯ ಕಾರಣದಿಂದ ಕೆಲವರು ಕೆಲವು ರೋಗಗಳ ಸೋಂಕಿಗೆ ಒಳಗಾಗುವುದಿಲ್ಲ. ಎಚ್ ಐ ವಿ ವೈರಸ್ಸಿನ ಸಂಪರ್ಕಕ್ಕೆ ಬಂದ ಎಲ್ಲರೂ ಸೋಂಕಿಗೆ ಒಳಗಾಗುವುದಿಲ್ಲ. ಈ ವಿಶಿಷ್ಟ ಗುಣವನ್ನು ಆಫ್ರಿಕಾದ ಕೆಲವು ಲೈಂಗಿಕ ಕಾರ್ಯಕರ್ತೆಯರಲ್ಲಿ ಗುರುತಿಸಬಹುದು' ಎಂದೂ ವಾಂಚೂ ಅಭಿಪ್ರಾಯ.

2008: ಬಿಜೆಪಿಯ ಹಿರಿಯ ನಾಯಕ ಹಾಗೂ ರಾಜ್ಯಸಭೆ ಮಾಜಿ ಸದಸ್ಯ ಜೆ.ಪಿ. ಮಾಥೂರ್ ದೆಹಲಿಯ ರಾಮ ಮನೋಹರ ಲೋಹಿಯಾ ಆಸ್ಪತ್ರೆಯಲ್ಲಿ ಈದಿನ ಬೆಳಿಗ್ಗೆ 5 ಗಂಟೆ ಸುಮಾರಿಗೆ ನಿಧನರಾದರು. ಬ್ರಹ್ಮಚಾರಿಯಾಗಿದ್ದ ಅವರಿಗೆ 86 ವರ್ಷ ವಯಸ್ಸಾಗಿತ್ತು. ದೀರ್ಘ ಕಾಲದಿಂದ ಕ್ಯಾನ್ಸರಿನಿಂದ ಬಳಲುತ್ತಿದ್ದ ಅವರು ಈ ಮೊದಲು ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದರು. ಕೊನೆಯದಾಗಿ ರಾಮ ಮನೋಹರ ಲೋಹಿಯಾ ಆಸ್ಪತ್ರೆಗೆ ದಾಖಲಾಗಿದ್ದರು. 1945ರಲ್ಲಿ ಪ್ರಚಾರಕರಾಗಿ ಆರೆಸ್ಸೆಸ್ಸಿಗೆ ಸೇರಿದ ಮಾಥೂರ್ ಅವರು ಜನಸಂಘದ ಮೂಲಕ ರಾಜಕೀಯ ಹೆಜ್ಜೆಗಳನ್ನು ಗುರುತಿಸಿ ಕೊಂಡರು. ಜನಸಂಘ ಮುಂದೆ ಬಿಜೆಪಿಯಾಗಿ ಅಸ್ತಿತ್ವಕ್ಕೆ ಬಂದಾಗ ಅದರ ಸ್ಥಾಪಕ ಸದಸ್ಯರಲ್ಲಿ ಮಾಥೂರ್ ಒಬ್ಬರಾಗಿದ್ದರು. ಬಿಜೆಪಿ ನಾಯಕ ಎಲ್.ಕೆ. ಅಡ್ವಾಣಿ ಅವರ ಜತೆ ಆಪ್ತ ಸಂಬಂಧ ಹೊಂದಿದ್ದ ಮಾಥೂರ್ ಪಕ್ಷದ ಹಲವು ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದರು. ಉತ್ತರ ಪ್ರದೇಶದ ಬಿಜನೌರ್ ಜಿಲ್ಲೆಯಲ್ಲಿ 1921ರ ನವೆಂಬರ್ 9ರಂದು ಜನಿಸಿದ ಮಾಥೂರ್ ಮೂರು ಬಾರಿ ರಾಜ್ಯಸಭೆ ಸದಸ್ಯರಾಗಿದ್ದರು. ಒಂದು ಸಲ ಲೋಕಸಭೆಯಲ್ಲಿ ಬಿಜೆಪಿಯ ಉಪ ನಾಯಕರಾಗಿ ಸೇವೆ ಸಲ್ಲಿಸಿದ್ದರು.

2007: ವ್ಯಕ್ತಿಯೊಬ್ಬರನ್ನು ಹತ್ಯೆ ಮಾಡಿದ ಆರೋಪ ಎದುರಿಸುತ್ತಿದ್ದ ನಕಲಿ ಛಾಪಾ ಕಾಗದ ಹಗರಣದ ಪ್ರಮುಖ ಆರೋಪಿ ಅಬ್ದುಲ್ ಕರೀಮ್ ತೆಲಗಿ ಹಾಗೂ ಆತನ ಮೂವರು ಸಹಚರರು ತಪ್ಪಿತಸ್ಥರು ಎಂದು ಮುಂಬೈ ನ್ಯಾಯಾಲಯವೊಂದು ತೀರ್ಪು ನೀಡಿತು.

2007: ವಿವಿಧ ಜಾನಪದ ಕಲಾ ತಂಡಗಳ ಆಕರ್ಷಕ ನೃತ್ಯ, ವಾದ್ಯಗಳ ನಿನಾದ, ನೆರಳು ಬೆಳಕಿನ ಚಿತ್ತಾರದ ನಡುವೆ ಎಂಟು ದಿನಗಳ ಕಾಲ ಹೈದರಾಬಾದಿನಲ್ಲಿ ನಡೆದ ವಿಶ್ವದ ಎರಡನೇ ಅತ್ಯಂತ ದೊಡ್ಡ ಕ್ರೀಡಾಕೂಟ ಎನಿಸಿದ `4ನೇ ಸಿಐಎಸ್ ಎಂ ವಿಶ್ವ ಸೇನಾ ಕ್ರೀಡಾಕೂಟ' ಮುಕ್ತಾಯವಾಯಿತು. ಕೂಟದಲ್ಲಿ 46 ಚಿನ್ನ, 26 ಬೆಳ್ಳಿ ಹಾಗೂ 28 ಕಂಚಿನ ಪದಕ ಗೆದ್ದ ರಷ್ಯಾ ತಂಡ ತನ್ನ ಅಗ್ರಸ್ಥಾನವನ್ನು ಕಾಪಾಡಿಕೊಂಡಿತು. ಚೀನಾ 36 ಚಿನ್ನ, 22 ಬೆಳ್ಳಿ ಹಾಗೂ 13 ಕಂಚಿನ ಪದಕಗಳೊಂದಿಗೆ ಎರಡನೇ ಸ್ಥಾನ ಪಡೆಯಿತು. ಭಾರತ ತಂಡ ಇದೇ ಮೊತ್ತ ಮೊದಲ ಬಾರಿಗೆ 2 ಬಂಗಾರ, 1 ಬೆಳ್ಳಿ ಹಾಗೂ 7 ಕಂಚಿನ ಪದಕಗಳೊಂದಿಗೆ ಒಟ್ಟು 10 ಪದಕಗಳನ್ನು ತನ್ನ ಬಗಲಿಗೆ ಹಾಕಿಕೊಂಡಿತು.

2006: ಹಂಪಿ ಉತ್ಸವಕ್ಕೆ ಸಿದ್ಧವಾಗುತ್ತಿದ್ದ ವೇಳೆಯಲ್ಲಿ ಬಳ್ಳಾರಿ ಜಿಲ್ಲೆಯ ವಿಶ್ವಖ್ಯಾತಿಯ ಹಂಪಿಯ ವಿಷ್ಣು ದೇವಾಲಯ ಆವರಣದಲ್ಲಿ ವಿಜಯನಗರ ಕಾಲದ ಏಳು ಅಪರೂಪದ ಶಂಖಗಳು ಪತ್ತೆಯಾದವು. ಐತಿಹಾಸಿಕವಾಗಿ ಹೆಚ್ಚು ಮಹತ್ವ ಇರುವ ಈ ಶಂಖಗಳು ಶ್ವೇತ ವರ್ಣದವಾಗಿದ್ದು ಹೆಚ್ಚು ತೂಕದಿಂದ ಕೂಡಿವೆ.

2006: ಕರ್ನಾಟಕದ ಜೆಡಿ (ಎಸ್)- ಬಿಜೆಪಿ ಸಮ್ಮಿಶ್ರ ಸರ್ಕಾರದ ಮಹತ್ವಾಕಾಂಕ್ಷಿ `ಭಾಗ್ಯಲಕ್ಷ್ಮಿ' ಯೋಜನೆ ಜಾರಿ ಸಂಬಂಧ ಸರ್ಕಾರಿ ಆದೇಶ ಹೊರಬಿತ್ತು. 2006ರ ಮಾರ್ಚ್ 31ರ ನಡುರಾತ್ರಿ ನಂತರ ಜನಿಸಿದ ಬಡ ಕುಟುಂಬದ ಹೆಣ್ಣು ಮಗುವಿನ ಹೆಸರಿನಲ್ಲಿ ಸರ್ಕಾರ 10,000 ರೂಪಾಯಿ ಠೇವಣಿ ಇಡಲಿದ್ದು ಇದಕ್ಕೆ ಆಡಳಿತಾತ್ಮಕ ಒಪ್ಪಿಗೆ ನೀಡಲಾಯಿತು. 18 ವರ್ಷ ತುಂಬಿದಾಗ ಆ ಮಗುವಿಗೆ ಬಡ್ಡಿ ಸಹಿತವಾಗಿ ಈ ಹಣವನ್ನು ನೀಡಲಾಗುವುದು.

2000: ಸ್ಯಾಂಟಿಯಾಗೋದಲ್ಲಿ ನಡೆದ ಜಾಗತಿಕ ಜ್ಯೂನಿಯರ್ ಅಥ್ಲೆಟಿಕ್ ಚಾಂಪಿಯನ್ ಶಿಪ್ ನಲ್ಲಿ ಡಿಸ್ಕಸ್ ನಲ್ಲಿ ಸ್ವರ್ಣಪದಕ ಗೆಲ್ಲುವ ಮೂಲಕ ಸೀಮಾ ಅಂಟಿಲ್ ಅವರು ಅಥ್ಲೆಟಿಕ್ಸಿನಲ್ಲಿ ಜಾಗತಿಕ ಪ್ರಶಸ್ತಿ ಗೆದ್ದ ಪ್ರಥಮ ಭಾರತೀಯಳೆಂಬ ಕೀರ್ತಿಗೆ ಭಾಜನರಾದರು. ಆದರೆ ಆಕೆಯ ಸಂತಸ ಅಲ್ಪಕಾಲದ್ದಾಗಿತ್ತು. ಉತ್ತೇಜಕ ಮದ್ದು ಸೇವಿಸಿದ್ದು ಹೌದೆಂದು ರುಜುವಾತಾದುದರ ವಿರುದ್ಧ ಆಕೆ ಸಲ್ಲಿಸಿದ್ದ ಮೇಲ್ಮನವಿ ವಜಾಗೊಂಡದ್ದನ್ನು ಅನುಸರಿಸಿ ಆಕೆಗೆ ನೀಡಲಾಗಿದ್ದ ಪದಕವನ್ನು 2001ರಲ್ಲಿ ಕಿತ್ತುಕೊಳ್ಳಲಾಯಿತು.

1999: ಚಿತ್ರ ನಿರ್ಮಾಪಕ ಬಿ.ಆರ್. ಚೋಪ್ರಾ ಅವರಿಂದ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸ್ವೀಕಾರ.

1995: ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಎಲ್.ಕೆ. ಅಡ್ವಾಣಿ ಅವಿರೋಧ ಆಯ್ಕೆ.

1990: ದೂರದರ್ಶನದಿಂದ ಮಧ್ಯಾಹ್ನದ ಸುದ್ದಿ ಪ್ರಸಾರ ಆರಂಭ.

1983: ಸಿಖ್ ಉಗ್ರಗಾಮಿಗಳ ದುಷ್ಕೃತ್ಯದಿಂದ ಜಮ್ಮು ತಾವಿ ಸಿಯಾಲ್ಡಾ ಎಕ್ಸ್ ಪ್ರೆಸ್ ರೈಲು ಈದಿನ ಬೆಳಗಿನ ಜಾವ ಅಂಬಾಲ ಬಳಿ ಹಳಿತಪ್ಪಿ 17 ಪ್ರಯಾಣಿಕರು ಮೃತರಾದರು. ಅಂಬಾಲ- ಲೂಧಿಯಾನ ವಲಯದ ಗೋವಿಂದಗಢದ ಸಮೀಪ ಈ ದುರ್ಘಟನೆ ನಡೆಯಿತು. ಕನಿಷ್ಠ 133 ಮಂದಿ ಗಾಯಗೊಂಡರು. ರೈಲಿನ 11 ಬೋಗಿಗಳು ಉರುಳಿದವು.

1973: ಡ್ಯಾನಿಷ್ ಶಿಲ್ಪಿ ಜೋರ್ನ್ ಉಟ್ ಜೋನ್ ಅವರ ವಿನ್ಯಾಸದ ಸಿಡ್ನಿ ಒಪೇರಾ ಹೌಸನ್ನು ರಾಣಿ ಎರಡನೇ ಎಲಿಜಬೆತ್ ಉದ್ಘಾಟಿಸಿದರು.

1958: ಕೇರಳದ ಬೆಟ್ಟಗಳಲ್ಲಿರುವ ಗುಡಿರಳ್ಳಿ ಮತ್ತು ತಾಳಾಯರ್ ಎಂಬಲ್ಲಿನ ಎಸ್ಟೇಟುಗಳಲ್ಲಿ ಮುಷ್ಕರ ಹೂಡಿದ ಕಮ್ಯೂನಿಸ್ಟ್ ನಾಯಕತ್ವದ ಕಾರ್ಮಿಕರ ಮೇಲೆ ಪೊಲೀಸರು ಗುಂಡು ಹಾರಿಸಿದಾಗ ಇಬ್ಬರು ಕಾರ್ಮಿಕರು ಸತ್ತು ನಾಲ್ವರು ಗಾಯಗೊಂಡರು.

1953: ಸಾಹಿತಿ ಕುಸುಮಲತಾ ಜನನ.

1951: ಡಾ. ಶ್ಯಾಮ ಪ್ರಸಾದ ಮುಖರ್ಜಿ ಅವರು ಭಾರತೀಯ ಜನಸಂಘವನ್ನು ದೆಹಲಿಯಲ್ಲಿ ಸ್ಥಾಪಿಸಿದರು.

1946: ಸಾಹಿತಿ ಎಚ್. ಆರ್. ರಘುನಾಥ ಭಟ್ ಜನನ.

1945: ಫ್ರಾನ್ಸಿನಲ್ಲಿ ಮತದಾನ ಮಾಡಲು ಮಹಿಳೆಯರಿಗೆ ಮೊದಲ ಬಾರಿಗೆ ಅವಕಾಶ.

1943: ನೇತಾಜಿ ಸುಭಾಶ್ ಚಂದ್ರ ಬೋಸ್ ಅವರು ಸಿಂಗಪುರದಲ್ಲಿ ಸ್ವತಂತ್ರ ಭಾರತದ ತಾತ್ಕಾಲಿಕ ಸರ್ಕಾರವನ್ನು ಸ್ಥಾಪಿಸಿದರು.

1939: ಸಾಹಿತಿ ಸೀತಾರಾಮ ಪ್ರಭು ಜನನ.

1934: ಲೋಕನಾಯಕ ಜಯಪ್ರಕಾಶ ನಾರಾಯಣ ಮತ್ತು ಸ್ನೇಹಿತರಿಂದ ಕಾಂಗ್ರೆಸ್ ಸಮಾಜವಾದಿ ಪಕ್ಷದ ರಚನೆ.

1931: ಚಿತ್ರನಟ ಶಮ್ಮಿ ಕಪೂರ್ ಜನ್ಮದಿನ.

1931: ಸಾಹಿತಿ ಚಂದ್ರಕಾಂತ ಕುಸನೂರ ಜನನ.

1931: ಸಾಹಿತಿ ಲೀಲಾಶೇಖರ್ ಜನನ.

1920: ಇತಿಹಾಸ ತಜ್ಞ, ಶಿಲಾ ಶಾಸನ ತಜ್ಞ ಬಾ.ರಾ. ಗೋಪಾಲ್ (21-10-1920ರಿಂದ 16-6-1997) ಅವರು ಬಾಲಕೃಷ್ಣನ್- ಜಾನಕಿ ದಂಪತಿಯ ಮಗನಾಗಿ ಚಿಕ್ಕಬಳ್ಳಾಪುರದಲ್ಲಿ ಜನಿಸಿದರು.

1577: ಸಿಖ್ ಗುರು ರಾಮದಾಸ್ ಅವರಿಂದ ಅಮೃತಸರ ನಗರ ಸ್ಥಾಪನೆಗೊಂಡಿತು. ಮೊದಲಿಗೆ ಅದನ್ನು ರಾಮದಾಸ್ ಪುರ ಎಂದೇ ಕರೆಯಲಾಯಿತು. ಐದನೇ ಸಿಖ್ ಗುರು ಅರ್ಜುನ್ ದೇವ್ ಅವರು ಈ ನಗರಕ್ಕೆ `ಅಮೃತಸರ' ಹೆಸರನ್ನು ನೀಡಿದರು. ಗುರು ರಾಮದಾಸ್ ಅವರು ಈ ನಗರದಲ್ಲಿ `ಅಮೃತ ಸರೋವರ' ತೋಡಿದ್ದುದರ ನೆನಪಿಗೆ ಗುರು ಅಜರ್ುನ್ ದೇವ್ ಈ ಹೆಸರನ್ನು ಇರಿಸಿದರು. ಅಮೃತ ಸರದ ಸ್ವರ್ಣದೇಗುಲದಲ್ಲಿ ಹರ್ಮಿಂದರ್ ಸಾಹಿಬ್ ನ್ನು ಗುರು ಅರ್ಜುನ್ ದೇವ್ ನಿರ್ಮಿಸಿದರು.

No comments:

Advertisement