Tuesday, October 20, 2009

ಇಂದಿನ ಇತಿಹಾಸ History Today ಅಕ್ಟೋಬರ್ 20

ಇಂದಿನ ಇತಿಹಾಸ

ಅಕ್ಟೋಬರ್ 20

ಕೋಟಿಗಟ್ಟಲೆ ಹಣ ಬಿಡುಗಡೆಯಾದರೂ, ಬೆಂಗಳೂರು- ಮಂಗಳೂರು ನಡುವಿನ ಶಿರಾಡಿ ಘಾಟಿಯ 40 ಕಿ.ಮೀ. ರಸ್ತೆ ದುರಸ್ತಿ ಕಾಣದೇ ಇರುವುದನ್ನು ಗಂಭೀರವಾಗಿ ಪರಿಗಣಿಸಿದ ಕರ್ನಾಟಕ ಹೈಕೋರ್ಟ್, ರಸ್ತೆ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಪರಿಗಣಿಸಿ, ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿತು. ಕೇಂದ್ರ ಜಾಗೃತ ಆಯೋಗ ಮತ್ತು ಭಾರತೀಯ ವಿಜ್ಞಾನ ಸಂಸ್ಥೆಯ ತಾಂತ್ರಿಕ ತಜ್ಞರು ಸಿಬಿಐ ಜೊತೆಗೂಡಿ ತನಿಖೆ ನಡೆಸುವಂತೆ ಮುಖ್ಯ ನ್ಯಾಯಮೂರ್ತಿ ಪಿ.ಡಿ.ದಿನಕರನ್ ಹಾಗೂ ನ್ಯಾಯಮೂರ್ತಿ ವಿ.ಜಿ.ಸಭಾಹಿತ ಅವರನ್ನು ಒಳಗೊಂಡ ವಿಭಾಗೀಯ ಪೀಠ ನಿರ್ದೇಶಿಸಿತು.

2008: ಕೋಟಿಗಟ್ಟಲೆ ಹಣ ಬಿಡುಗಡೆಯಾದರೂ, ಬೆಂಗಳೂರು- ಮಂಗಳೂರು ನಡುವಿನ ಶಿರಾಡಿ ಘಾಟಿಯ 40 ಕಿ.ಮೀ. ರಸ್ತೆ ದುರಸ್ತಿ ಕಾಣದೇ ಇರುವುದನ್ನು ಗಂಭೀರವಾಗಿ ಪರಿಗಣಿಸಿದ ಕರ್ನಾಟಕ ಹೈಕೋರ್ಟ್, ರಸ್ತೆ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಪರಿಗಣಿಸಿ, ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿತು. ಕೇಂದ್ರ ಜಾಗೃತ ಆಯೋಗ ಮತ್ತು ಭಾರತೀಯ ವಿಜ್ಞಾನ ಸಂಸ್ಥೆಯ ತಾಂತ್ರಿಕ ತಜ್ಞರು ಸಿಬಿಐ ಜೊತೆಗೂಡಿ ತನಿಖೆ ನಡೆಸುವಂತೆ ಮುಖ್ಯ ನ್ಯಾಯಮೂರ್ತಿ ಪಿ.ಡಿ.ದಿನಕರನ್ ಹಾಗೂ ನ್ಯಾಯಮೂರ್ತಿ ವಿ.ಜಿ.ಸಭಾಹಿತ ಅವರನ್ನು ಒಳಗೊಂಡ ವಿಭಾಗೀಯ ಪೀಠ ನಿರ್ದೇಶಿಸಿತು. ಈ ತನಿಖೆಯನ್ನು 30 ದಿನಗಳಲ್ಲಿ ಮುಗಿಸುವಂತೆ ತಿಳಿಸಿದ ಪೀಠ, ತನಿಖೆಯ ಬಗ್ಗೆ ಕೋರ್ಟ್ಗೆ ವರದಿ ನೀಡುವಂತೆ ಸೂಚಿಸಿತು. ಇದರ ಜೊತೆಗೆ, ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ 30 ದಿನಗಳಲ್ಲಿ ಹೊಸದಾಗಿ ಟೆಂಡರ್ ಕರೆದು, 3 ತಿಂಗಳಿನಲ್ಲಿ ದುರಸ್ತಿ ಕಾರ್ಯ ಪೂರ್ಣಗೊಳಿಸುವಂತೆಯೂ ನಿರ್ದೇಶಿಸಿತು. ತಪ್ಪಿತಸ್ಥ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಕ್ರಿಮಿನಲ್ ಹಾಗೂ ಆಡಳಿತಾತ್ಮಕ ಕ್ರಮ ತೆಗೆದುಕೊಳ್ಳುವಂತೆಯೂ ಕೋರ್ಟ್ ಸೂಚಿಸಿತು. ಈ ರೀತಿ ಮಾಡುವ ಪೂರ್ವದಲ್ಲಿ ಆಯಾ ಗುತ್ತಿಗೆದಾರರು ಹಾಗೂ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡುವಂತೆ ಪೀಠ ಸ್ಪಷ್ಟಪಡಿಸಿತು. ಸಕಲೇಶಪುರ ಮತ್ತು ಉಪ್ಪಿನಂಗಡಿಯ ಮಧ್ಯೆ ಇರುವ ಈ ರಸ್ತೆ ರಿಪೇರಿಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶಿಸುವಂತೆ ಮಂಗಳೂರಿನ ಸದಾಶಿವರಾವ್ ಹಾಗೂ ಇತರರು ಹಾಗೂ ಬೆಂಗಳೂರಿನ ಬಿ. ಕೃಷ್ಣ ಭಟ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ, ರಸ್ತೆ ಕಾಮಗಾರಿಯಲ್ಲಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಶಾಮೀಲಾಗಿರುವ ಶಂಕೆ ಪೀಠ ವ್ಯಕ್ತಪಡಿಸಿ ಈ ರೀತಿ ಆದೇಶ ಹೊರಡಿಸಿತು. 34 ಕೋಟಿ ರೂಪಾಯಿ ವೆಚದಲ್ಲಿ ಕೈಗೊಂಡ ಈ ರಸ್ತೆ ದುರಸ್ತಿಯ ಕಾಮಗಾರಿಯಲ್ಲಿ ಬಹುತೇಕ ಹಣ ಬಿಡುಗಡೆಯಾದರೂ ರಸ್ತೆ ಮಾತ್ರ ದುರಸ್ತಿ ಆಗದೇ ಇರುವುದಕ್ಕೆ ನ್ಯಾಯಮೂರ್ತಿಗಳು ತೀವ್ರ ಅಚ್ಚರಿ ವ್ಯಕ್ತಪಡಿಸಿದರು. `ಸಿಂಗಲ್ ಆ್ಯಕ್ಸೆಲ್' ಹಾಗೂ `ಡಬಲ್ ಆ್ಯಕ್ಸೆಲ್' ಗಾಡಿಗಳು 9 ರಿಂದ 16.20 ಟನ್ ಭಾರ ಹಾಗೂ `ಮಲ್ಟಿಪಲ್ ಆ್ಯಕ್ಸೆಲ್ ಗಾಡಿಗಳು 26.40 ಟನ್ವರೆಗೆ ಭಾರವನ್ನು ಹೊತ್ತು ಈ ರಸ್ತೆಯಲ್ಲಿ ಚಲಿಸಬಹುದು. ಆದರೆ 45-50ಟನ್ಗಳಷ್ಟು ಭಾರವಾದ ಅದಿರು ತುಂಬಿರುವ ಲಾರಿಗಳು ಚಲಿಸುವ ಕಾರಣ ರಸ್ತೆ ಈ ಮಟ್ಟ ತಲುಪಿದೆ ಎಂದು ಸರ್ಕಾರಿ ವಕೀಲರು ತಿಳಿಸಿದರು.

2008: ಆಧುನಿಕ ತಮಿಳು ಸಿನೆಮಾ ರಂಗದ ಚಿತ್ರಗಳಿಗೆ ಹೊಸದಾರಿ ತೋರಿಸಿದ ಖ್ಯಾತ ತಮಿಳು ಚಿತ್ರ ನಿರ್ದೇಶಕ ಶ್ರೀಧರ್ (63) ಅವರು ಹೃದಯಾಘಾತದ ಪರಿಣಾಮವಾಗಿ ಚೆನ್ನೈಯಲ್ಲಿ ನಿಧನರಾದರು. ಪಾರ್ಶ್ವವಾಯುವಿಗೆ ತುತ್ತಾದ ಅವರು ಕಳೆದ ಕೆಲವು ವರ್ಷಗಳಿಂದ ಗಾಲಿ ಕುರ್ಚಿಯನ್ನು ಅವಲಂಬಿಸಿದ್ದರು. ತಮಿಳು ಚಿತ್ರಗಳಿಗೆ ತಮ್ಮದೇ ಮಾದರಿಯ ಸ್ಪರ್ಶ ನೀಡಿದ್ದ ಶ್ರೀಧರ್ `ತೆನಿಲವು'ನಂತಹ ಕೆಲವು ರಂಜನೀಯ ಹಾಸ್ಯ ಚಿತ್ರಗಳನ್ನು ನೀಡಿದ್ದರು. ಜೆಮಿನಿ ಗಣೇಶನ್ ಮತ್ತು ವೈಜಯಂತಿ ಮಾಲಾ ಬಾಲಿ ಅವರು ನಟಿಸಿದ್ದ ಈ ಚಿತ್ರ ಜಮ್ಮು ಮತ್ತು ಕಾಶ್ಮೀರದಲ್ಲಿ ಚಿತ್ರೀಕರಿಸಲಾಗಿದ್ದ ಮೊತ್ತ ಮೊದಲ ತಮಿಳು ಚಿತ್ರವಾಗಿತ್ತು. `ಕಾದಲಿಕ್ಕ ನೇರಮಿಲ್ಲೈ', ತಮಿಳಿನ ಖ್ಯಾತ ಚಿತ್ರನಟ ಶಿವಾಜಿ ಗಣೇಶನ್ ನಟಿಸಿದ `ಊಟಿ ವರೈ ಉರವು' ಮತ್ತಿತರ ಚಿತ್ರಗಳನ್ನು ನೀಡಿದ ಶ್ರೀಧರ್ ತಮಿಳು ಚಿತ್ರರಂಗಕ್ಕೆ ಹಲವಾರು ಹೊಸ ಮುಖಗಳನ್ನು ಪರಿಚಯಿಸಿದವರು. ಗತ ವರ್ಷಗಳ ನಾಯಕಿ ನಟಿ ಹಾಗೂ ಹಾಲಿ ಎಐಎಡಿಎಂಕೆ ಧುರೀಣೆ ಜೆ. ಜಯಲಲಿತಾ, ನಟಿಯಾಗಿ ಮಿಂಚಿದ ಗಗನಸಖಿ ಕಾಂಚನ, ನಟ ರವಿ ಚಂದ್ರನ್ ಇವರೆಲ್ಲ ಶ್ರೀಧರ್ ಗರಡಿಯಲ್ಲೇ ಪಳಗಿ ಬೆಳಕಿಗೆ ಬಂದವರು. ಶ್ರೀಧರ್ ಅವರ ಚಿತ್ರಗಳಲ್ಲಿ `ಕಲ್ಯಾಣ ಪರಿಸು' ಅತ್ಯಂತ ಜನಪ್ರಿಯತೆಯೊಂದಿಗೆ ಆಗ `ಹಿಟ್' ಎನಿಸಿದ್ದರೆ, `ಕಾದಲಿಕ್ಕ ನೇರಮಿಲ್ಲೈ' ಎಂದೆಂದಿಗೂ ಮರೆಯಲಾಗದ ರಂಜನೀಯ ಲಘು ಹಾಸ್ಯಮಯ ಚಿತ್ರವಾಗಿತ್ತು. ಜಯಲಲಿತಾ ಅವರನ್ನು ಶ್ರೀಧರ್ `ವೆಣ್ಣಿರಾಡೈ' ಚಿತ್ರದ ಮೂಲಕ ಚಿತ್ರರಂಗಕ್ಕೆ ಪರಿಚಯಿಸಿದ್ದರು. ಶ್ರೀಕಾಂತ್ ಎದುರು ಜಯಲಲಿತಾ ನಟಿಸಿದ್ದ ಈ ಚಿತ್ರ ತಮಿಳು ಚಿತ್ರರಂಗದ ಮೊತ್ತ ಮೊದಲ `ವಯಸ್ಕರ ಚಿತ್ರ'ವಾಗಿತ್ತು. ಶ್ರೀಕಾಂತ್ ಅವರಿಗೂ ಇದು ಚೊಚ್ಚಲ ನಟನೆಯಾಗಿತ್ತು. 50ಕ್ಕೂ ಹೆಚ್ಚು ತಮಿಳು ಚಿತ್ರಗಳನ್ನು ನಿರ್ದೇಶಿಸಿದ್ದ ಶ್ರೀಧರ್ ರಾಜ್ಯ ಸಂಗೀತ ನಾಟಕ ಅಕಾಡೆಮಿಯ `ಕಲೈಮಾಮನಿ' ಪ್ರಶಸ್ತಿಗೆ ಪಾತ್ರರಾಗಿದ್ದರು.

2008: ಪ್ರಮುಖ ಆಟೊ ಕಂಪೆನಿ ಟಾಟಾ ಮೋಟಾರ್ಸ್ ತನ್ನ ಜೆಮ್ಶೆಡ್ಪುರ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ 300 ಉದ್ಯೋಗಿಗಳಿಗೆ ಕೆಲಸಕ್ಕೆ ಹಾಜರಾಗದಿರಲು ಸೂಚಿಸಿತು. ಇವರ ಪೈಕಿ 100 ಜನ ಟ್ರಕ್ ವಿಭಾಗದವರಾಗಿದ್ದರೆ, 200 ಜನ ಎಂಜಿನ್ ವಿಭಾಗದಲ್ಲಿದ್ದವರು.

2008: ರಾಜ್ಯದ ಇಬ್ಬರು ಸಂಸದರಾದ ಮಂಜುನಾಥ ಕುನ್ನೂರ ಮತ್ತು ಮನೋರಮಾ ಮಧ್ವರಾಜ್ ಲೋಕಸಭಾ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದರು. ತಮ್ಮನ್ನು ಖುದ್ದಾಗಿ ಭೇಟಿ ಮಾಡಿದ್ದ ಧಾರವಾಡ ದಕ್ಷಿಣ ಕ್ಷೇತ್ರದ ಲೋಕಸಭಾ ಸದಸ್ಯ ಕುನ್ನೂರ ಅವರ ರಾಜೀನಾಮೆಯನ್ನು ಲೋಕಸಭಾ ಅಧ್ಯಕ್ಷ ಸೋಮನಾಥ ಚಟರ್ಜಿ ಅಂಗೀಕರಿಸಿದರು. ಮನೋರಮಾ ಅವರಿಗೆ ಚಟರ್ಜಿ ಭೇಟಿ ಸಾಧ್ಯವಾಗದ ಕಾರಣ ರಾಜೀನಾಮೆ ಪತ್ರ ಅಂಗೀಕಾರವಾಗಲಿಲ್ಲ.

2007: ರಿಪಬ್ಲಿಕ್ ಪಕ್ಷದ ಪ್ರತಿನಿಧಿ, ಭಾರತೀಯ ಮೂಲದ ಬಾಬಿ ಜಿಂದಾಲ್ ಅವರು ಅಮೆರಿಕದ ಲೂಸಿಯಾನ ರಾಜ್ಯದ ಗವರ್ನರ್ ಆಗಿ ಭಾರಿ ಬಹುಮತದಿಂದ ಆಯ್ಕೆಯಾದರು. ಮೂವತ್ತಾರು ವರ್ಷದ ಬಾಬಿ ಜಿಂದಾಲ್ 11 ಜನ ಪ್ರತಿಸ್ಪರ್ಧಿಗಳನ್ನು ಪರಾಭವಗೊಳಿಸುವ ಮೂಲಕ ಈ ಪ್ರತಿಷ್ಠಿತ ಹುದ್ದೆಗೆ ಆಯ್ಕೆಯಾದ ಮೊದಲ ಭಾರತೀಯ ಮೂಲದ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 2008ರ ಜನವರಿಯಲ್ಲಿ ಗವರ್ನರ್ ಆಗಿ ಅಧಿಕಾರ ಸ್ವೀಕರಿಸಿದ ನಂತರ ಜಿಂದಾಲ್ ಅವರು, ಅಮೆರಿಕದ ಪುನರ್ ಸಂಘಟನೆಯ ನಂತರದ 130 ವರ್ಷಗಳಲ್ಲಿ ರಾಜ್ಯವೊಂದರ ಮುಖ್ಯಸ್ಥರಾಗಿ ಆಯ್ಕೆಯಾದ ಮೊದಲ ಬಿಳಿಯೇತರ ವ್ಯಕ್ತಿ ಮತ್ತು ಅತಿ ಕಿರಿಯ ವಯಸ್ಸಿನ ಗವರ್ನರ್ ಎಂಬ ಕೀರ್ತಿಗೆ ಪಾತ್ರ. ಆಕ್ಸಫರ್ಡ್ ವಿಶ್ವವಿದ್ಯಾಲಯದಿಂದ ಶಿಕ್ಷಣ ಪಡೆದ ರೋಮನ್ ಕ್ಯಾಥೋಲಿಕ್ ಜನಾಂಗಕ್ಕೆ ಸೇರಿದ ಜಿಂದಾಲ್ ಅವರು ಈ ಹಿಂದೆಯೇ ಎರಡು ಬಾರಿ (ತಲಾ ಎರಡು ವರ್ಷಗಳ ಅವಧಿ) ಅಮೆರಿಕ ಕಾಂಗ್ರೆಸ್ಸಿನ ಸದಸ್ಯರಾಗಿ ಆಯ್ಕೆಯಾಗಿದ್ದರು. 24ರ ಯುವಕನಾಗಿದ್ದಾಗಲೇ ಲೂಸಿಯಾನ ರಾಜ್ಯದ ಆರೋಗ್ಯ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದರು.

2007: ಮುಂಬೈಯಲ್ಲಿ ನಡೆದ ನಡೆದ ಮೊಟ್ಟ ಮೊದಲ ಅಂತಾರಾಷ್ಟ್ರೀಯ ಟ್ವೆಂಟಿ-20 ಕ್ರಿಕೆಟಿನಲ್ಲಿ ದೋನಿ ನೇತೃತ್ವದ ಭಾರತ ತಂಡ ಆಸ್ಟ್ರೇಲಿಯಾವನ್ನು ಬಗ್ಗು ಬಡಿದು ಏಳು ವಿಕೆಟ್ಟುಗಳ ಜಯ ಗಳಿಸಿತು.

2006: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕು ಅಂಕಲಿ ಗ್ರಾಮದಲ್ಲಿ ತಮ್ಮ ಚಿಕ್ಕಪ್ಪ ಪ್ರಭಾಕರ ಕೋರೆ ಅವರನ್ನು ಗುಂಡು ಹಾರಿಸಿ ಕೊಲೆ ಮಾಡಲು ಯತ್ನಿಸಿದ್ದ ಆರೋಪಿ ಜಗದೀಶ ಕೋರೆ ಅವರನ್ನು ಪೊಲೀಸರು ಬಂಧಿಸಿದರು.

2006: ತೈಲ ಮತ್ತು ನೈಸರ್ಗಿ ಅನಿಲ ನಿಗಮವು (ಒಎನ್ಜಿಸಿ) ಮಂಗಳೂರಿನ ತನ್ನ ವಿಶೇಷ ಆರ್ಥಿಕ ವಲಯದಲ್ಲಿ ಮಂಗಳೂರು ಪೆಟ್ರೋಕೆಮಿಕಲ್ ಲಿಮಿಟೆಡ್ (ಎಂಪಿಎಲ್) ಸ್ಥಾಪಿಸಲು ಅನುಮತಿ ನೀಡಿತು.

2006: ಬ್ರಿಟನ್ ಮೂಲದ ಉಕ್ಕು ಉತ್ಪಾದನಾ ಕಂಪೆನಿ ಕೋರಸ್, ಟಾಟಾ ಸ್ಟೀಲ್ ಸಲ್ಲಿಸಿದ 7.6 ಶತಕೋಟಿ ಡಾಲರ್ (36,500 ಕೋಟಿ ರೂಪಾಯಿ) ಖರೀದಿ ಪ್ರಸ್ತಾವಕ್ಕೆ ಸಹಮತ ವ್ಯಕ್ತಪಡಿಸಿತು.

1991: ಖ್ಯಾತ ನೃತ್ಯಪಟು ಪಂಡಿತ್ ಕಲ್ಯಾಣದಾಸ್ ಮಹಾ ಪ್ರಸಾದ್ ನಿಧನ.

1990: ಮಹಾರಾಷ್ಟ್ರದ ಮಾಜಿ ರಾಜ್ಯಪಾಲ ಕೋನಾ ಪ್ರಭಾಕರ ರಾವ್ ನಿಧನ.

1984: ಸಾಗರದಾಳದ ಬದುಕಿಗೆ ಸಂಬಂಧಿಸಿದ ಅತ್ಯಂತ ದೊಡ್ಡದಾದ ಕೃತಕ ಪರಿಸರದ `ಮಾನೆಟರಿ ಬೇ ಅಕ್ವೇರಿಯಮ್' ಕ್ಯಾಲಿಫೋರ್ನಿಯಾದಲ್ಲಿ ಉದ್ಘಾಟನೆಗೊಂಡಿತು. ಸಾಗರದೊಳಗಿನ ಸುಮಾರು 525 ಜಾತಿಗಳ ಕನಿಷ್ಟ 6500 ಪ್ರಾಣಿಗಳಿಗೆ ಇಲ್ಲಿ ಅವಕಾಶ ಕಲ್ಪಿಸಿ ಪ್ರದರ್ಶನಕ್ಕೆ ಇಡಲಾಯಿತು. ಹ್ಯೂಲೆಟ್ ಪ್ಯಾಕಾರ್ಡಿನ ಡೇವಿಡ್ ಪ್ಯಾಕಾರ್ಡ್ ಒದಗಿಸಿದ 4 ಕೋಟಿ ಡಾಲರುಗಳ ಅನುದಾನದಿಂದ ಈ ಅಕ್ವೇರಿಯಮ್ ಸ್ಥಾಪನೆ ಸಾಧ್ಯವಾಯಿತು.

1981: ಕೇರಳದ ಮುಖ್ಯಮಂತ್ರಿ ಇ.ಕೆ. ನಯನಾರ್ ಮಂತ್ರಿ ಮಂಡಳವು ರಾಜೀನಾಮೆ ನೀಡಿತು. ಆಡಳಿತ ಪಕ್ಷವಾದ ವಾಮವಾದಿ ಪ್ರಜಾಸತ್ತಾತ್ಮಕ ರಂಗದಿಂದ ಹೊರಬರಲು ಕೇರಳ ಕಾಂಗ್ರೆಸ್ (ಮಣಿಗುಂಪು) ನಿರ್ಧರಿಸಿದ ಒಂದು ಗಂಟೆಯ ಒಳಗೆ ಮುಖ್ಯಮಂತ್ರಿ ನಯನಾರ್ ಅವರು ರಾಜ್ಯಪಾಲ ಶ್ರೀಮತಿ ಜ್ಯೋತಿ ವೆಂಕಟಾಚಲಂ ಅವರನ್ನು ಭೇಟಿ ಮಾಡಿದರು.

1978: `ನಜಾಫ್ ಗಢದ ತೆಂಡೂಲ್ಕರ್' ಎಂದೇ ಖ್ಯಾತರಾದ ಭಾರತದ ಖ್ಯಾತ ಕ್ರಿಕೆಟ್ ಆಟಗಾರ ವೀರೇಂದರ್ ಸೆಹ್ ವಾಗ್ ಜನ್ಮದಿನ.

1968: ಗ್ರೀಕ್ ಶಿಪ್ಪಿಂಗ್ ಮ್ಯಾಗ್ನೇಟ್ ಅರಿಸ್ಟಾಟಲ್ ಓನಾಸಿಸ್ ಅಮೆರಿಕದ ಅಧ್ಯಕ್ಷರಾಗಿದ್ದ ಕೆನಡಿ ಅವರ ಪತ್ನಿ ಜಾಕ್ವೆಲಿನ್ ಕೆನಡಿ ಅವರನ್ನು ಮದುವೆಯಾದರು.

1964: ಅಮೆರಿಕದ 31ನೇ ಅಧ್ಯಕ್ಷ ಹರ್ಬರ್ಟ್ ಹೂವರ್ ಅವರು ತಮ್ಮ 90ನೇ ವಯಸ್ಸಿನಲ್ಲಿನ್ಯೂಯಾರ್ಕಿನಲ್ಲಿ ನಿಧನರಾದರು.

1962: ಮೆಕ್ ಮಹೋನ್ ರೇಖೆಯನ್ನು ಉಲ್ಲಂಘಿಸಿ ಚೀನಾವು ಭಾರತದ ಮೇಲೆ ದಾಳಿ ಮಾಡಿತು. ಭಾರತದ ಈಶಾನ್ಯ ಗಡಿ ಮತ್ತು ಲಡಾಖಿನಲ್ಲಿ ಈ ದಾಳಿ ನಡೆಯಿತು. ಮೊದಲ ದಿನವೇ ಭಾರತದ 7ನೇ ಸೈನಿಕದಳ ಸೋತುಹೋಯಿತು. ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ಅಕ್ಟೋಬರ್ 26ರಂದು ತುರ್ತುಪರಿಸ್ಥಿತಿ ಘೋಷಿಸಲಾಯಿತು. ನವೆಂಬರ್ 21ರಂದು ಚೀನಾವು ಏಕಪಕ್ಷೀಯವಾಗಿ ಕದನ ವಿರಾಮ ಘೋಷಿಸಿತು.

1963: ಭಾರತದ ಮಾಜಿ ಕ್ರಿಕೆಟ್ ಆಟಗಾರ ನವಜೋತ್ ಸಿಂಗ್ ಸಿಧು ಜನ್ಮದಿನ.

1956: ಪ್ರಸ್ತುತ ಮೈಸೂರಿನ ವಿಧಾನಸಭೆಯ ಕಡೆಯ ಅಧಿವೇಶನ ತನ್ನ ಕಾಲದ ಸಾಧನೆಗಳ ಸಂತೋಷದ ಸ್ಮರಣೆಯೊಂದಿಗೆ ಮುಕ್ತಾಯಗೊಂಡಿತು. ನವೆಂಬರ್ 1ರಿಂದ ವಿಧಾನಸಭೆಯಲ್ಲಿ ಇತರ ಕನ್ನಡ ಪ್ರದೇಶಗಳ ಸೋದರ ಸದಸ್ಯರಿಗೆ ಸ್ಥಳಾವಕಾಶ ಲಭಿಸಿತು.

1954: ಸಾಹಿತಿ ಕಮಲಾ ಮೂರ್ತಿ ಜನನ.

1954: ಸಾಹಿತಿ ಪಿ. ರತ್ನ ನಗುವನಹಳ್ಳಿ ಜನನ.

1949: ನಗೆ ಬರಹಗಾರ, ಭಾಷಣಕಾರ, ಹಾಸ್ಯ ಧಾರಾವಾಹಿಗಳ ಕಥೆಗಾರ ಎಂ.ಎಸ್. ನರಸಿಂಹ ಮೂರ್ತಿ ಅವರು ಎಂ.ವಿ. ಸೂರಪ್ಪ- ಸಾವಿತ್ರಮ್ಮ ದಂಪತಿಯ ಮಗನಾಗಿ ಕೋಲಾರ ಜಿಲ್ಲೆಯ ಮಾಲೂರಿನಲ್ಲಿ ಜನಿಸಿದರು.

1935: ಸಾಹಿತಿ ಸುನಂದಾ ಬೆಳಗಾಂವಕರ ಜನನ.

1906: ಅಮೆರಿಕದ ಎಂಜಿನಿಯರ್ ಹಾಗೂ ಸಂಶೋಧಕ ಲೀ ಡೆ ಫಾರೆಸ್ಟ್ ಅವರು ತಾವು `ಎಲೆಕ್ಟ್ರಿಕಲ್ ವ್ಯಾಕ್ಯೂಮ್ ಟ್ಯೂಬ್' (ಈಗ ಇದನ್ನು ಟ್ರಿಯೋಡ್ ಎಂದು ಕರೆಯಲಾಗುತ್ತಿದೆ) ಸಂಶೋಧಿಸಿದ್ದನ್ನು ಬಹಿರಂಗ ಪಡಿಸಿದರು. ದುರ್ಬಲ ಸಂಕೇತಗಳನ್ನು ಪ್ರಬಲವಾಗಿ ಮಾಡುವ ಸಾಮರ್ಥ್ಯ ಈ ಟ್ಯೂಬಿಗೆ ಇದೆ. ಹಾಗಾಗಿ ರೇಡಿಯೋ ಸಂಶೋಧನೆಯಷ್ಟೇ ಮಹತ್ವದ ಸಂಶೋಧನೆ ಎಂದು ಇದು ಪರಿಗಣಿತವಾಗಿದೆ. ಅತಿದೂರದ ಸಂಪರ್ಕವನ್ನು ಸಾಧ್ಯವಾಗಿಸಿದ್ದು ಈ ಸಂಶೋಧನೆಯೇ.

No comments:

Advertisement