Friday, November 20, 2009

ಇಂದಿನ ಇತಿಹಾಸ History Today ನವೆಂಬರ್ 07

ಇಂದಿನ ಇತಿಹಾಸ

ನವೆಂಬರ್ 07

ಸಾಮಾನ್ಯವಾಗಿ ಎಲ್ಲರೂ ತಮ್ಮ ಹೆಸರು `ಚಿಕ್ಕದಾಗಿ ಆಕರ್ಷಕವಾಗಿ' ಇರಬೇಕು ಎಂದು ಬಯಸುತ್ತಾರೆ. ಆದರೆ ಬ್ರಿಟಿಷ್ ವಿದ್ಯಾರ್ಥಿಯೊಬ್ಬ ತನ್ನ ಮೂಲ ಹೆಸರನ್ನು ಬದಲಾಯಿಸಿಕೊಂಡು ಗಿನ್ನೆಸ್ ಪುಸ್ತಕದ ದಾಖಲೆಯಲ್ಲಿ ಸೇರಿದ. ಈತನ ಮೂಲ ಹೆಸರು: ಜಾರ್ಜ್ ಗ್ಯಾರಟ್. ಬದಲಾಯಿಸಿಕೊಂಡ ಹೆಸರು: ಕ್ಯಾಪ್ಟನ್ ಫಂಟಾಸ್ಟಿಕ್ ಫಾಸ್ಟರ್ ದ್ಯಾನ್ ಸೂಪರ್ಮನ್ ಸ್ಪೈಡರ್ಮನ್ ಬ್ಯಾಟಮನ್ ವೋಲ್ವೊರೈನ್ ಹಲ್ಕ್ ಅಂಡ್ ದ ಫ್ಲಾಸ್ ಕಂಬೈನ್ಡ್. ಈ ಹೆಸರು ಆಂಗ್ಲ ವರ್ಣ ಮಾಲೆಯಲ್ಲಿ ಬರೋಬ್ಬರಿ 81 ಅಕ್ಷರಗಳನ್ನು ಹೊಂದಿದೆ.

2008: ಸಾಮಾನ್ಯವಾಗಿ ಎಲ್ಲರೂ ತಮ್ಮ ಹೆಸರು `ಚಿಕ್ಕದಾಗಿ ಆಕರ್ಷಕವಾಗಿ' ಇರಬೇಕು ಎಂದು ಬಯಸುತ್ತಾರೆ. ಆದರೆ ಬ್ರಿಟಿಷ್ ವಿದ್ಯಾರ್ಥಿಯೊಬ್ಬ ತನ್ನ ಮೂಲ ಹೆಸರನ್ನು ಬದಲಾಯಿಸಿಕೊಂಡು ಗಿನ್ನೆಸ್ ಪುಸ್ತಕದ ದಾಖಲೆಯಲ್ಲಿ ಸೇರಿದ. ಈತನ ಮೂಲ ಹೆಸರು: ಜಾರ್ಜ್ ಗ್ಯಾರಟ್. ಬದಲಾಯಿಸಿಕೊಂಡ ಹೆಸರು: ಕ್ಯಾಪ್ಟನ್ ಫಂಟಾಸ್ಟಿಕ್ ಫಾಸ್ಟರ್ ದ್ಯಾನ್ ಸೂಪರ್ಮನ್ ಸ್ಪೈಡರ್ಮನ್ ಬ್ಯಾಟಮನ್ ವೋಲ್ವೊರೈನ್ ಹಲ್ಕ್ ಅಂಡ್ ದ ಫ್ಲಾಸ್ ಕಂಬೈನ್ಡ್. ಈ ಹೆಸರು ಆಂಗ್ಲ ವರ್ಣ ಮಾಲೆಯಲ್ಲಿ ಬರೋಬ್ಬರಿ 81 ಅಕ್ಷರಗಳನ್ನು ಹೊಂದಿದೆ. ಆನ್ ಲೈನಿನಲ್ಲಿ ಈತ ಬದಲಾಯಿಸಿಕೊಂಡಿರುವ ಹೆಸರಿಗಾಗಿ 10 ಪೌಂಡುಗಳನ್ನು ಪಾವತಿ ಮಾಡಿದ್ದ. `ನನ್ನ ಕುಟುಂಬದ ಸದಸ್ಯರೂ ಸಹ ಈ ರೀತಿ ಹೆಸರು ಬದಲಾಯಿಸಲು ಇಚ್ಛೆ ಪಡುತ್ತಾರೆ. ಅದಕ್ಕೆಂದೇ `ಸೂಪರ್ ಹೀರೋ'ಗಳ ಹೆಸರನ್ನು ಆಯ್ಕೆ ಮಾಡುತ್ತೇನೆ. ನನ್ನ ಹಲವು ಗೆಳೆಯರು ಈ ಬಗ್ಗೆ ಹಾಸ್ಯ ಮಾಡುತ್ತಾರೆ' ಎನ್ನುತ್ತಾನೆ ಈತ. ಗಿನ್ನೆಸ್ ದಾಖಲೆಗಳಲ್ಲಿ 57 ಅಕ್ಷರಗಳ ಹೆಸರು ಅತಿ ಉ್ದದವಾದದ್ದು ಎಂದು ಈ ಹಿಂದೆ ದಾಖಲಾಗಿತ್ತು.

2008: ಅಮೆರಿಕದ ನೂತನ ಅಧ್ಯಕ್ಷ ಬರಾಕ್ ಒಬಾಮ ಅವರು ಶ್ವೇತಭವನದ ಆಡಳಿತ ಮುಖ್ಯಸ್ಥರಾಗಿ ಜನಪ್ರತಿನಿಧಿ ಸಭೆಯ ಸದಸ್ಯ ತಮ್ಮದೇ ಪಕ್ಷದ ಪ್ರಭಾವಿ ವ್ಯಕ್ತಿ ರ್ಯಾಮ್ ಇಮಾನ್ಯುಯೆಲ್ ಅವರನ್ನು ನೇಮಕ ಮಾಡಿದರು. ಶ್ವೇತಭವನದ ಸಿಬ್ಬಂದಿ ಮುಖ್ಯಸ್ಥರು ಅತ್ಯಂತ ದಕ್ಷವಾಗಿ ಕೆಲಸ ನಿರ್ವಹಿಸಬೇಕಾಗುತ್ತದೆ. ಅಧ್ಯಕ್ಷರು ಕೈಗೊಂಡ ನಿರ್ಧಾರಗಳನ್ನು ಕಾರ್ಯಾಚರಣೆಗೆ ತರಬೇಕಾಗುತ್ತದೆ. ಈ ಹುದ್ದೆಗೆ ರ್ಯಾಮ್ ಇಮಾನ್ಯುಯೆಲ್ ಅವರಷ್ಟು ಸಮರ್ಥ ವ್ಯಕ್ತಿ ಬೇರೊಬ್ಬರಿಲ್ಲ ಎಂದು ಒಬಾಮ ಹೇಳಿದರು.

2008: ಬರಾಕ್ ಒಬಾಮ ಗೌರವಾರ್ಥ ಆಂಟಿಗುವಾದ ಅತ್ಯುನ್ನತ ಪರ್ವತಕ್ಕೆ `ಮೌಂಟ್ ಒಬಾಮ' ಎಂದು ಮರುನಾಮಕರಣ ಮಾಡಲು ಅಲ್ಲಿನ ಪ್ರಧಾನಿ ನಿರ್ಧರಿಸಿದರು. `ಬೊಗ್ಗಿ ಪೀಕ್' ಎಂದೇ ಹೆಸರಾಗಿರುವ ಈ ಪರ್ವತ 396 ಮೀಟರ್ ಎತ್ತರವಿದ್ದು, ದೂರಸಂಪರ್ಕ ಉದ್ದೇಶಗಳಿಗಾಗಿ ಪ್ರಸಾರ ಕೇಂದ್ರವಾಗಿ ಬಳಸಿಕೊಳ್ಳಲಾಗುತ್ತಿದೆ. ಈ ದ್ವೀಪ ದೇಶದ ದಕ್ಷಿಣದ ತುದಿಯಲ್ಲಿ ಈ ಪರ್ವತವಿದ್ದು ಮರು ನಾಮಕರಣದಿಂದ ಹೆಚ್ಚಿನ ಪ್ರವಾಸಿಗಳನ್ನು ಆಕರ್ಷಿಸಲಿದೆ ಎಂದು ನಿರೀಕ್ಷಿಸಲಾಯಿತು.

2008: ಟಾಟಾ ಸ್ಟೀಲ್ ಕಂಪೆನಿ ಸ್ವಾಮ್ಯದ ಕೋರಸ್ ಸಂಸ್ಥೆ ಮಾರುಕಟ್ಟೆ ಕುಸಿತದ ಹಿನ್ನೆಲೆಯಲ್ಲಿ 400 ಉದ್ಯೋಗಗಳನ್ನು ಕಡಿತ ಮಾಡುವ ವಿಚಾರವನ್ನು ಲಂಡನ್ನಿನಲ್ಲಿ ಪ್ರಕಟಿಸಿತು. ಬ್ರಿಟನ್ನಿನಾದ್ಯಂತ ಇರುವ ಕಂಪೆನಿಯ ವಿತರಣಾ ಘಟಕಗಳಲ್ಲಿ ಉದ್ಯೋಗ ಕಡಿತ ಮಾಡಲಾಗುತ್ತಿದೆ. ಸೆಪ್ಟೆಂಬರಿನಿಂದ ವಹಿವಾಟು ಇಳಿಮುಖವಾಗಿದೆ ಎಂದು ಕಂಪೆನಿ ಹೇಳಿತು.

2008: ಮುಂದಿನ ವರ್ಷದಲ್ಲಿ 1.8 ಶತಕೋಟಿ ಅಮೆರಿಕ ಡಾಲರಿನಷ್ಟು ವೆಚ್ಚ ಕಡಿಮೆ ಮಾಡುವ ಉದ್ದೇಶದಿಂದ ಅಮೆರಿಕದ ಪ್ರಮುಖ ಕ್ರೆಡಿಟ್ ಕಾರ್ಡ್ ಸಮೂಹ ಅಮೆರಿಕನ್ ಎಕ್ಸ್ಪ್ರೆಸ್ ತನ್ನ 7000 ಸಿಬ್ಬಂದಿ ಕಡಿತಕ್ಕೆ ಯೋಜಿಸಿತು. ಇದರ ಮೂಲಕ ವಿಶ್ವದಾದ್ಯಂತ ಶೇ 10ರಷ್ಟು ಸಿಬ್ಬಂದಿ ಕಡಿತ ಉಂಟಾಗುವುದು.

2008: ಶಂಕಿತ ತಾಲಿಬಾನ್ ಉಗ್ರರು ನಡೆಸಿದ ಆತ್ಮಹತ್ಯಾದಳದ ಎರಡು ದಾಳಿ ಮತ್ತು ಸೇನಾಪಡೆಯ ವಾಯುದಾಳಿಯಿಂದ ಪಾಕಿಸ್ಥಾನದ ವಾಯವ್ಯ ಪ್ರದೇಶದಲ್ಲಿ 35ಕ್ಕೂ ಹೆಚ್ಚು ಜನರು ಹತ್ಯೆಗೀಡಾದರು. ಆದಿವಾಸಿಗಳ ಬಜೂರು ಜಿಲ್ಲೆಯ ಬಟ್ಮಲೆ ಗ್ರಾಮದಲ್ಲಿ ಅಲ್ಲಿನ ಸುಮಾರು 200 ನಿವಾಸಿಗಳು ಸಭೆ ನಡೆಸುತ್ತಿದ್ದಾಗ ಆತ್ಮಹತ್ಯಾ ದಳದ ವ್ಯಕ್ತಿಯೊಬ್ಬ ತನ್ನನ್ನು ಸ್ಫೋಟಿಸಿಕೊಂಡ. ಸ್ಥಳಿಯರ ಪ್ರಕಾರ ಈ ಸ್ಫೋಟದಲ್ಲಿ 18ರಿಂದ 19 ಜನರು ಮೃತರಾಗಿ, 40ಕ್ಕೂ ಹೆಚ್ಚು ಜನರು ಗಾಯಗೊಂಡರು.

2007: ಸತತ 27 ಗಂಟೆಗಳ ಶಸ್ತ್ರಚಿಕಿತ್ಸೆಯ ಬಳಿಕ ಈದಿನ ಬೆಳಿಗ್ಗೆ 10.30ಕ್ಕೆ ಸುಮಾರಿಗೆ ಮಂದಹಾಸದೊಂದಿಗೆ ತಮ್ಮ ವೈದ್ಯರ ತಂಡದೊಂದಿಗೆ ಶಸ್ತ್ರಚಿಕಿತ್ಸಾ ಸಮವಸ್ತ್ರದೊಂದಿಗೇ ಹೊರಬಂದ ಬೆಂಗಳೂರಿನ ನಾರಾಯಣ ಆರೋಗ್ಯ ನಗರದ ಸ್ಪರ್ಶ ಆಸ್ಪತ್ರೆಯ ಮುಖ್ಯಸ್ಥ ಡಾ. ಶರಣ್ ಪಾಟೀಲ್ ಅವರು, ಬಿಹಾರದ ಬಾಲಕಿ ಲಕ್ಷ್ಮಿಯ ದೇಹದ ಹೆಚ್ಚಿನ ಅನವಶ್ಯಕ ಅವಯವಗಳನ್ನು ತೆಗೆದುಹಾಕುವ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದೆ ಎಂದು ಪ್ರಕಟಿಸಿದರು. ಲಕ್ಷ್ಮಿಯ ಶಸ್ತ್ರಚಿಕಿತ್ಸೆಗೆ 40 ಗಂಟೆಗಳಷ್ಟು ದೀರ್ಘ ಅವಧಿ ಬೇಕಾಗಬಹುದು ಎಂದು ಮೊದಲು ಭಾವಿಸಲಾಗಿತ್ತು. ಆದರೆ 13 ಗಂಟೆ ಮೊದಲೇ ಅಂದರೆ ಕೇವಲ 27 ಗಂಟೆಗಳಲ್ಲೇ ಆಕೆಯ ದೇಹದ ಅನಗತ್ಯ ಭಾಗಗಳನ್ನು ತೆಗೆದುಹಾಕಿ ಅಂಗಾಂಗಳನ್ನು ಮರುಜೋಡಿಸುವ ಅತ್ಯಂತ ಜಟಿಲವಾದ ಕಾರ್ಯ ಕೊನೆಗೊಂಡಿತು. ಇಂತಹ ಶಸ್ತ್ರ ಚಿಕಿತ್ಸೆ ನಡೆದದ್ದು ದೇಶದಲ್ಲೇ ಇದು ಪ್ರಥಮ ಎನ್ನಲಾಗಿದೆ. ಲಕ್ಷ್ಮಿಯ ಮೂಲದೇಹದಲ್ಲಿ ಇದ್ದುದು ಒಂದೇ ಮೂತ್ರಪಿಂಡ. ಅವಳಿ ದೇಹದಲ್ಲಿದ್ದ ಮೂತ್ರಪಿಂಡವನ್ನು ಕಸಿಮಾಡಿ ಲಕ್ಷ್ಮಿಯ ದೇಹದೊಳಕ್ಕೆ ಸೇರಿಸುವ ಕೆಲಸ ಮೊದಲು ನಡೆಯಿತು. ದೇಹದಲ್ಲಿ ಸೇರಿಕೊಂಡಿದ್ದ ಅವಳಿ ದೇಹದ ಅವಶೇಷಗಳನ್ನು ಕತ್ತರಿಸಿ ತೆಗೆಯುವ ಕೆಲಸ ಮಧ್ಯರಾತ್ರಿ 12.30ರ ಹೊತ್ತಿಗೆ ಕೊನೆಗೊಂಡಿತು. ಬಳಿಕ ಕಾಲುಗಳು ಸೊಂಟದ ಮೂಳೆಗಳ ಜೋಡಣೆಯನ್ನು (ಪೆಲ್ವಿಕ್ ರಿಂಗ್ಸ್) ಸಮರ್ಪಕಗೊಳಿಸುವ ಮಹತ್ವದ ಕಾರ್ಯದ ಜತೆ ಪ್ಲಾಸ್ಟಿಕ್ ಸರ್ಜರಿಗಳೂ ನಡೆದವು. ಆಸ್ಪತ್ರೆಯ 36 ಮಂದಿ ವೈದ್ಯರು ಹಾಗೂ ಸಿಬ್ಬಂದಿ ಈ ಶಸ್ತ್ರಚಿಕಿತ್ಸೆಯಲ್ಲಿ ವಿವಿಧ ಹಂತಗಳಲ್ಲಿ ಪಾಲ್ಗೊಂಡರು.

2007: ತಾನು ನೀಡಿದ ಆದೇಶವನ್ನು 35 ವರ್ಷಗಳಿಂದ ಉಲ್ಲಂಘಿಸಿದ ಆರೋಪಕ್ಕೆ ಒಳಗಾದ ಕರ್ನಾಟಕ ಹಾಲು ಉತ್ಪಾದಕರ ಸಹಕಾರ ಮಹಾಮಂಡಳಕ್ಕೆ (ಕೆಎಂಎಫ್) ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀವ್ರ ಎಚ್ಚರಿಕೆ ನೀಡಿ, ಆದೇಶ ಜಾರಿಗೆ ತರಲು ನಿರ್ದೇಶಿಸಿತು. 1972ರ ಆಗಸ್ಟ್ 30ರಂದು ಸುಪ್ರೀಂ ಕೋರ್ಟ್, ಕೆಎಂಎಫ್ ವ್ಯಾಪ್ತಿಯಲ್ಲಿನ ಎರಡು ಎಕರೆ ಐದು ಗುಂಟೆ ಖಾಲಿ ನಿವೇಶನವನ್ನು ಅರ್ಜಿದಾರರಾದ ವೈ. ಎನ್. ಗಂಗಾಧರ ಶೆಟ್ಟಿ ಮತ್ತು ಇನ್ನಿತರರಿಗೆ ನೀಡಲು ಸೂಚಿಸಿತ್ತು. ಆದರೆ ಕೆಎಂಎಫ್ ಈ ಭೂಮಿಯನ್ನು ಹಸ್ತಾಂತರಿಸದೇ ಅಲ್ಲಿ ಕಟ್ಟಡಗಳನ್ನು ನಿರ್ಮಿಸಿತ್ತು. ನ್ಯಾಯಮೂರ್ತಿ ತರುಣ್ ಚಟರ್ಜಿ ಮತ್ತು ದಲ್ವೀರ್ ಭಂಡಾರಿ ಅವರನ್ನು ಒಳಗೊಂಡ ಪೀಠವು ಈ ಸಂಬಂಧ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಜಯಪ್ರಕಾಶ ರೆಡ್ಡಿ ಅವರಿಗೆ ಎಚ್ಚರಿಕೆ ನೀಡಿತು.

2007: ಮುಂಬೈ ಚಿನಿವಾರ ಪೇಟೆಯಲ್ಲಿ ಅಪರಂಜಿ ಚಿನ್ನವು ಈದಿನದ ವಹಿವಾಟಿನಲ್ಲಿ ಪ್ರತಿ 10 ಗ್ರಾಂಗಳಿಗೆ ರೂ 275ರಷ್ಟು ಹೆಚ್ಚಳಗೊಂಡು, ರೂ 10,735ಕ್ಕೆ ಏರಿಕೆಯಾಗಿ ಸಾರ್ವಕಾಲಿಕ ದಾಖಲೆ ಮಾಡಿತು. ಬೆಳ್ಳಿಯೂ ವರ್ಷದ ಗರಿಷ್ಠ ಮಟ್ಟವಾದ ಪ್ರತಿ ಕೆಜಿಗೆ ರೂ 20,740ರಷ್ಟಕ್ಕೆ ಹೆಚ್ಚಿತು.

2006: ಭಾರತೀಯ ಕ್ರಿಕೆಟ್ ತಂಡದ ಹಳೆಯ ಹುಲಿ ಆಲ್ ರೌಂಡ್ ಆಟಗಾರ ಪಾಹ್ಲನ್ ರತನ್ ಜಿ ಉಮ್ರಿಗರ್ (80) ನಿಧನ. ಭಾರತ ತಂಡದ ಪರವಾಗಿ 59 ಟೆಸ್ಟ್ ಪಂದ್ಯಗಳನ್ನು ಆಡ್ದಿದ ಉಮ್ರಿಗರ್ ಎಂಟು ಬಾರಿ ನಾಯಕನ ಜವಾಬ್ದಾರಿ ಹೊತ್ತಿದ್ದರು.

2006: ಖ್ಯಾತ ವಿಜ್ಞಾನಿ ಪ್ರೊ. ಸಿ.ಎನ್. ಆರ್. ರಾವ್ ಅವರಿಗೆ ಲಂಡನ್ ಭೌತಶಾಸ್ತ್ರ ಸಂಸ್ಥೆಯು ಗೌರವ ಫೆಲೋಷಿಪ್ ನೀಡಿತು. ಈ ಗೌರವಕ್ಕೆ ಪಾತ್ರರಾದ ಪ್ರಥಮ ಭಾರತೀಯ ವಿಜ್ಞಾನಿ ಎಂಬ ಹೆಗ್ಗಳಿಕೆಗೆ ರಾವ್ ಪಾತ್ರರಾದರು. ರಷ್ಯದ ನೊಬೆಲ್ ಪುರಸ್ಕೃತ ವಿಜ್ಞಾನಿ ಲಝಾರಿವಿಚ್ ಗಿಂಜ್ಬರ್ಗ್ ಜೊತೆಗೆ ರಾವ್ ಈ ಫೆಲೋಷಿಪ್ ಹಂಚಿಕೊಂಡರು.

2005: ವೋಲ್ಕರ್ ಸಮಿತಿ ವರದಿಯ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳ ಒತ್ತಡಕ್ಕೆ ಮಣಿದು ಪ್ರಧಾನಿ ಮನಮೋಹನ್ ಸಿಂಗ್ ಅವರು ನಟವರ್ ಸಿಂಗ್ ಅವರಿಂದ ವಿದೇಶಾಂಗ ವ್ಯವಹಾರ ಖಾತೆಯನ್ನು ಕಿತ್ತುಕೊಂಡು ತಮ್ಮ ಕೈಯಲ್ಲೇ ಇರಿಸಿಕೊಂಡರು.

2000: ಭಾರತದ ಹಿರಿಯ ಮುತ್ಸದ್ದಿ, ಹಸಿರು ಕ್ರಾಂತಿಯ ಮುಖ್ಯ ಶಿಲ್ಪಿ ಸಿ. ಸುಬ್ರಮಣಿಯಂ ತಮ್ಮ 90ನೇ ವಯಸ್ಸಿನಲ್ಲಿ ನಿಧನರಾದರು.

2000: ನ್ಯೂಯಾರ್ಕ್ ರಾಜ್ಯದಿಂದ ಅಮೆರಿಕನ್ ಸೆನೆಟ್ ಗೆ ಆಯ್ಕೆಯಾಗುವ ಮೂಲಕ ಹಿಲರಿ ರೋಢಾಮ್ ಕ್ಲಿಂಟನ್ ಅವರು ಸಾರ್ವಜನಿಕ ಹುದ್ದೆಗೆ ಆಯ್ಕೆಯಾದ ಮೊದಲ ಅಧ್ಯಕ್ಷರ ಪತ್ನಿ ಎಂಬ ಹೆಗ್ಗಳಿಕೆ ಗಳಿಸಿ ಇತಿಹಾಸ ನಿರ್ಮಿಸಿದರು.

1991: ಆರು ಖಂಡಗಳು ಸೇರಿದಂತೆ ಭೂಮಿಗೆ ಅತಿ ವೇಗವಾಗಿ ಪ್ರದಕ್ಷಿಣೆ ಹಾಕಲು ಸಲಾವುದ್ದೀನ್ `ಸಲೂ' ಚೌಧರಿ ಮತ್ತು ಅವರ ಪತ್ನಿ ನೀನಾ ದೆಹಲಿಯಿಂದ `ಕಾರು ಪ್ರಯಾಣ' ಹೊರಟರು. 39 ದಿನ, 20 ಗಂಟೆ ಮತ್ತು 15 ನಿಮಿಷಗಳ ದಾಖಲೆ ಅವಧಿಯಲ್ಲಿ ಅವರು 40,535 ಕಿ.ಮೀ. ಕ್ರಮಿಸಿದರು. ಗಿನ್ನೆಸ್ ಪಬ್ಲಿಕ್ ಲಿಮಿಟೆಡ್ ಜೊತೆಗೆ ಖಟ್ಲೆ ಹೂಡಿದ ಬಳಿಕ ಅವರನ್ನು ಭೂಮಿಗೆ ಪ್ರದಕ್ಷಿಣೆಗೈದ `ಮೊತ್ತ ಮೊದಲ ಅತಿ ವೇಗದ ಪುರುಷ ಹಾಗೂ ಮಹಿಳೆ' ಎಂಬುದಾಗಿ ಮಾನ್ಯ ಮಾಡಲಾಯಿತು. ಈ ಸಾಹಸವನ್ನು ಗೌರವಿಸುವ ಸಲುವಾಗಿ `ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್, ರೋಡ್ ಚಾಲೆಂಜ್ ಟ್ರೋಫಿ'ಯನ್ನು `ಚೌಧರಿ ಟ್ರೋಫಿ' ಎಂಬುದಾಗಿ ಕರೆಯಲು ಗಿನ್ನೆಸ್ ಅಧಿಕಾರಿಗಳು ನಿರ್ಧರಿಸಿದರು.

1991: ಅಮೆರಿಕನ್ ಬಾಸ್ಕೆಟ್ ಬಾಲ್ ಆಟಗಾರ ಮ್ಯಾಜಿಕ್ ಜಾನ್ಸನ್ (ಎನ್ ಬಿ ಎ) ಅವರು ತಾವು ಏಡ್ಸ್ ರೋಗಕ್ಕೆ ತುತ್ತಾಗಿರುವುದು ಪರೀಕ್ಷೆಗಳಲ್ಲಿ ದೃಢಪಟ್ಟಿದೆ ಎಂದು ಪ್ರಕಟಿಸಿ ಬಾಸ್ಕೆಟ್ ಬಾಲ್ ಕ್ರೀಡೆಯಿಂದ ನಿವೃತ್ತರಾಗುವುದಾಗಿ ಘೋಷಿಸಿದರು.

1990: ಭಾರತದ ಪ್ರಧಾನಿ ವಿ.ಪಿ. ಸಿಂಗ್ ನೇತೃತ್ವದ ರಾಷ್ಟ್ರೀಯ ರಂಗ ಸರ್ಕಾರವು ಲೋಕಸಭೆಯಲ್ಲಿ ವಿಶ್ವಾತಮತ ಗಳಿಸಲು ವಿಫಲಗೊಂಡಿತು. ಸಿಂಗ್ ರಾಜೀನಾಮೆ ಸಲ್ಲಿಸಿದರು..

1981: ಬಿಲ್ಲ ಮತ್ತು ರಂಗನಿಗೆ ವಿಧಿಸಿದ ಮರಣದಂಡನೆ ಸೇರಿದಂತೆ ದೇಶದಾದ್ಯಂತ ಗಲ್ಲು ಶಿಕ್ಷೆಗಳ ಜಾರಿಯನ್ನು ತಡೆ ಹಿಡಿದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿತು.

1956: ಸೈನಿಕ ರಾಜಕಾರಣಿ ಡ್ವೈಟ್ ಡೇವಿಡ್ ಐಸೆನ್ ಹೋವರ್ (`ಐಕ್') (66) ಅವರು ಇನ್ನೂ ನಾಲ್ಕು ವರ್ಷಗಳ ಅವಧಿಗೆ ಅಮೆರಿಕದ ಅಧ್ಯಕ್ಷರಾಗಿ ಪ್ರಚಂಡ ಬಹುಮತದಿಂದ ಚುನಾಯಿತರಾದರು.

1956: ಅಂತಾರಾಷ್ಟ್ರೀಯ ಪೊಲೀಸ್ ವಶಕ್ಕೆ ವಹಿಸುವ ಕಾರ್ಯಗಳ ಬಗ್ಗೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ದಾಗ್ ಹ್ಯಾಮರ್ ಷೀಲ್ಡ್ ಅವರು ವಿವರಣೆ ನೀಡಿದ ಬಳಿಕ ಈಜಿಪ್ಟಿನಲ್ಲಿ ಸ್ಥಾಪಿಸಲಾದ ಅಂತಾರಾಷ್ಟ್ರೀಯ ಪೊಲೀಸ್ ದಳಕ್ಕೆ ಸೇರಲು ಭಾರತ ತಾತ್ವಿಕ ಒಪ್ಪಿಗೆ ನೀಡಿತು.

1944: ಅಮೆರಿಕಾದ ಅಧ್ಯಕ್ಷ ಫ್ರಾಂಕ್ಲಿನ್ ಡಿ. ರೂಸ್ ವೆಲ್ಟ್ ಅವರು ಅಧ್ಯಕ್ಷರಾಗಿ ನಾಲ್ಕನೇ ಬಾರಿಗೆ ಆಯ್ಕೆಯಾದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

1938: ಭಾರತೀಯ ಸಂಸ್ಕೃತಿಯ ಪ್ರಚಾರಕ್ಕಾಗಿ ಕೆ.ಎಂ. ಮುನ್ಶಿ ಅವರು ಬಾಂಬೆಯಲ್ಲಿ (ಈಗಿನ ಮುಂಬೈ) ಭಾರತೀಯ ವಿದ್ಯಾ ಭವನವನ್ನು ಸ್ಥಾಪಿಸಿದರು.

1910: ವಿದ್ವಾಂಸ, ಸಂಶೋಧಕ, ಸಾಹಿತಿ ಸಂ.ಶಿ. ಭೂಸನೂರಮಠ (7-11-1910ರಿಂದ 6-11-1991) ಅವರು ಶಿವಮೂರ್ತಯ್ಯ- ರಾಚಮ್ಮ ದಂಪತಿಯ ಮಗನಗಿ ರೋಣ ತಾಲ್ಲೂಕು ನಿಡಗುಂದಿಯಲ್ಲಿ ಜನಿಸಿದರು.

1924: ಸಾಹಿತಿ ವಸಂತ ಮಧ್ವರಾಜ್ ಜನನ.

1893: ಸಾಹಿತಿ ಶಿ.ಶಿ. ಬಸವನಾಳ ಜನನ.

1888: ನೊಬೆಲ್ ಪ್ರಶಸ್ತಿ ವಿಜೇತ ಭೌತವಿಜ್ಞಾನಿ ಸರ್ ಚಂದ್ರಶೇಖರ ವೆಂಕಟರಾಮನ್ (1888-1970) ಹುಟ್ಟಿದ ದಿನ. ಇವರಿಗೆ ನೊಬೆಲ್ ಪ್ರಶಸ್ತಿ ತಂದುಕೊಟ್ಟ ಬೆಳಕಿನ ಸಿದ್ಧಾಂತ `ರಾಮನ್ ಎಫೆಕ್ಟ್' ಎಂದೇ ಖ್ಯಾತಿ ಪಡೆದಿದೆ.

1867: ಎರಡು ಬಾರಿ ನೊಬೆಲ್ ಪ್ರಶಸ್ತಿ ಗೆದ್ದ ಪೊಲಿಶ್ ಸಂಜಾತ ಫ್ರೆಂಚ್ ಭೌತ ವಿಜ್ಞಾನಿ ಮೇರೀ ಕ್ಯೂರೀ (1867-1934) ಹುಟ್ಟಿದ ದಿನ. ರೇಡಿಯೊ ಆಕ್ಟಿವಿಟಿ ಕುರಿತ ಸಂಶೋಧನೆಯಿಂದ ಈಕೆ ಖ್ಯಾತರಾಗಿದ್ದಾರೆ.

1862: ಕೊನೆಯ ಮೊಘಲ್ ಚಕ್ರವರ್ತಿ ಎರಡನೇ ಬಹಾದುರ್ ಶಹಾ ಬರ್ಮಾದ (ಈಗನ ಮ್ಯಾನ್ಮಾರ್) ರಂಗೂನಿನಲ್ಲಿ 87ನೇ ವಯಸ್ಸಿನಲ್ಲಿ ಮೃತನಾದ.

1858: ಭಾರತದ ರಾಷ್ಟ್ರೀಯ ನಾಯಕ ಬಿಪಿನ್ ಚಂದ್ರಪಾಲ್ (1858-1932) ಜನ್ಮದಿನ. 1906ರಲ್ಲಿ ಅರವಿಂದ ಘೋಷ್ ಸಂಪಾದಕತ್ವದಲ್ಲಿ ಇವರು `ವಂದೇ ಮಾತರಂ' ಪತ್ರಿಕೆ ಆರಂಭಿಸಿದ್ದರು.

1627: ನಾಲ್ಕನೇ ಮೊಘಲ್ ಚಕ್ರವರ್ತಿ ಜಹಾಂಗೀರ್ (1569-1627) ತನ್ನ 58ನೇ ವಯಸ್ಸಿನಲ್ಲಿ ಮೃತನಾದ.

No comments:

Advertisement