Monday, February 22, 2010

ಇಂದಿನ ಇತಿಹಾಸ History Today ಜನವರಿ 20

ಇಂದಿನ ಇತಿಹಾಸ

ಜನವರಿ 20

ಜಾರ್ಜ್ ಬುಶ್ ಅವರ ಎಂಟು ವರ್ಷಗಳ ಆಡಳಿತದ ಬಳಿಕ ಭಾರಿ ಬದಲಾವಣೆಗಾಗಿ ಹಪಹಪಿಸುತ್ತಿದ್ದ ಮತ್ತು ಆರ್ಥಿಕ ಮುಗ್ಗಟ್ಟಿನಿಂದ ಜರ್ಜರಿತವಾದ ಅಮೆರಿಕದಲ್ಲಿ, ಭರವಸೆಯ ಮಿಂಚು ಹರಿಸಿದ ಬರಾಕ್ ಒಬಾಮ ಅವರು ಈದಿನ ವಾಷಿಂಗ್ಟನ್ನಿನಲ್ಲಿ ದೇಶದ 44ನೇ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಹೊಸ ಇತಿಹಾಸ ಸೃಷ್ಟಿಸಿದರು. ಇಲ್ಲಿನ ಕ್ಯಾಪಿಟೊಲ್ ಹಿಲ್ಲಿನಲ್ಲಿ ಮಧ್ಯಾಹ್ನ 12.35 ಗಂಟೆಗೆ ಸರಿಯಾಗಿ (ಭಾರತದ ಕಾಲಮಾನ ರಾತ್ರಿ 10.35 ಗಂಟೆ) ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಜಾನ್ ರಾಬರ್ಟ್ಸ್ ಅವರು ಒಬಾಮ ಅವರಿಗೆ ಅಧಿಕಾರ ಮತ್ತು ಗೋಪ್ಯತೆಯ ಪ್ರಮಾಣವಚನ ಬೋಧಿಸಿದರು.

2009: ಜಾರ್ಜ್ ಬುಶ್ ಅವರ ಎಂಟು ವರ್ಷಗಳ ಆಡಳಿತದ ಬಳಿಕ ಭಾರಿ ಬದಲಾವಣೆಗಾಗಿ ಹಪಹಪಿಸುತ್ತಿದ್ದ ಮತ್ತು ಆರ್ಥಿಕ ಮುಗ್ಗಟ್ಟಿನಿಂದ ಜರ್ಜರಿತವಾದ ಅಮೆರಿಕದಲ್ಲಿ, ಭರವಸೆಯ ಮಿಂಚು ಹರಿಸಿದ ಬರಾಕ್ ಒಬಾಮ ಅವರು ಈದಿನ ವಾಷಿಂಗ್ಟನ್ನಿನಲ್ಲಿ ದೇಶದ 44ನೇ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಹೊಸ ಇತಿಹಾಸ ಸೃಷ್ಟಿಸಿದರು. ಇಲ್ಲಿನ ಕ್ಯಾಪಿಟೊಲ್ ಹಿಲ್ಲಿನಲ್ಲಿ ಮಧ್ಯಾಹ್ನ 12.35 ಗಂಟೆಗೆ ಸರಿಯಾಗಿ (ಭಾರತದ ಕಾಲಮಾನ ರಾತ್ರಿ 10.35 ಗಂಟೆ) ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಜಾನ್ ರಾಬರ್ಟ್ಸ್ ಅವರು ಒಬಾಮ ಅವರಿಗೆ ಅಧಿಕಾರ ಮತ್ತು ಗೋಪ್ಯತೆಯ ಪ್ರಮಾಣವಚನ ಬೋಧಿಸಿದರು. ಮಾಜಿ ಅಧ್ಯಕ್ಷ ಅಬ್ರಹಾಂ ಲಿಂಕನ್ ಅವರು ಹಿಡಿದಿದ್ದ ಬೈಬಲ್ ಮುಟ್ಟಿ ಒಬಾಮ ಅಧಿಕಾರ ಸ್ವೀಕರಿಸಿದರು. ಇದಕ್ಕೆ ಸ್ವಲ್ಪ ಮೊದಲು ಉಪಾಧ್ಯಕ್ಷ ಜೋಯ್ ಬಿಡೆನ್ ಅಧಿಕಾರ ಸ್ವೀಕರಿಸಿದರು. ಇದೇ ಪ್ರಥಮ ಬಾರಿಗೆ, ಆಫ್ರಿಕನ್-ಅಮೆರಿಕಾ ಸಂಜಾತ ಪ್ರಜೆಯೊಬ್ಬರು ಜಗತ್ತಿನ ಅತ್ಯಂತ ಪ್ರಭಾವಶಾಲಿ ಅಧಿಕಾರ ಸ್ಥಾನವಾದ ಶ್ವೇತಭವನ ಪ್ರವೇಶಿಸಿದರು. ಕೊರೆಯುವ ಚಳಿಯಲ್ಲೂ ದೇಶದ ಮೂಲೆ ಮೂಲೆಗಳಿಂದ ಆಗಮಿಸಿದ 20 ಲಕ್ಷಕ್ಕೂ ಅಧಿಕ ಮಂದಿ ಈ ಐತಿಹಾಸಿಕ ಘಟನೆಗೆ ಪ್ರತ್ಯಕ್ಷ ಸಾಕ್ಷಿಗಳಾದರು.

2009: ಮಾಲೆಗಾಂವ್ ಸ್ಫೋಟ ಪ್ರಕರಣದ 11 ಆರೋಪಿಗಳ ವಿರುದ್ಧ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ದೋಷಾರೋಪ ಪಟ್ಟಿ ಸಲ್ಲಿಸುವ ಪ್ರಕ್ರಿಯೆಯನ್ನು ಆರಂಭಿಸಿತು. 2008ರ ಸೆಪ್ಟೆಂಬರ್ 29ರಂದು ನಡೆದಿದ್ದ ಈ ಸ್ಫೋಟಕ್ಕೆ ಏಳು ಮಂದಿ ಬಲಿಯಾಗಿ ಸುಮಾರು 70 ಜನ ಗಾಯಗೊಂಡಿದ್ದರು.

2009: 'ಚಿಂಗಾರಿ' ಹಾಗೂ 'ಚಿನಕುರುಳಿ' ಖ್ಯಾತಿಯ ಹಿರಿಯ ವ್ಯಂಗ್ಯಚಿತ್ರಕಾರ, ಲಲಿತಕಲಾ ಅಕಾಡೆಮಿ ಮಾಜಿ ಸದಸ್ಯ ಜಿ.ವೈ.ಹುಬ್ಳೀಕರ್ (68) ಅವರು ಕಿಡ್ನಿ ವೈಫಲ್ಯದಿಂದ ಬೆಂಗಳೂರಿನ ಸಂಜಯನಗರದ ನಾಗಶೆಟ್ಟಿಹಳ್ಳಿಯ ತಮ್ಮ ನಿವಾಸದಲ್ಲಿ ನಿಧನರಾದರು. ಅವರು 1964ರಿಂದ 1971ರವರೆಗೆ 'ಪ್ರಜಾವಾಣಿ' ಬಳಗದಲ್ಲಿ ಕಲಾವಿದರಾಗಿ ಸೇವೆ ಸಲ್ಲಿಸಿದ್ದರು. 1994ರ ನಂತರ 'ಪ್ರಜಾವಾಣಿ' ದಿನಪತ್ರಿಕೆಯಲ್ಲಿ ಪ್ರತಿದಿನ 'ಚಿನಕುರುಳಿ' ವ್ಯಂಗ್ಯಚಿತ್ರವನ್ನು ಹಲವು ವರ್ಷಗಳ ಕಾಲ ನಿರಂತರವಾಗಿ ರಚಿಸಿದ್ದರು. ರಾಜ್ಯೋತ್ಸವ ಪ್ರಶಸ್ತಿ, ಪತ್ರಿಕಾ ಅಕಾಡೆಮಿ ಪ್ರಶಸ್ತಿಯೂ ಸೇರಿದಂತೆ ಹಲವು ಪ್ರಶಸ್ತಿಗಳು ಹುಬ್ಳೀಕರ್ ಅವರಿಗೆ ಬಂದಿದ್ದವು. ಮೃತರ ಅಂತ್ಯಕ್ರಿಯೆ ಸಂಜೆ ಹೆಬ್ಬಾಳದ ರುದ್ರಭೂಮಿಯಲ್ಲಿ ನಡೆಯಿತು.

2009: ಸ್ವ ಸಹಾಯ ಸಂಘಗಳ ಮೂಲಕ ರಾಜ್ಯದ ಗ್ರಾಮೀಣ ಪ್ರದೇಶದ ಆರ್ಥಿಕ ದುರ್ಬಲರಿಗೆ ಅತಿ ಹೆಚ್ಚು ಸಾಲ ವಿತರಿಸಿರುವ ವಿಜಯ ಬ್ಯಾಂಕ್‌ ನಬಾರ್ಡ್ ಪ್ರಶಸ್ತಿಗೆ ಆಯ್ಕೆಯಾಯಿತು. ರಾಜ್ಯದ 49344 ಸ್ವಸಹಾಯ ಗುಂಪು ಸೇರಿ ಒಟ್ಟು 67409 ಎಸ್‌ಎಚ್‌ಜಿ ಜತೆ ಸಂಪರ್ಕ ಹೊಂದಿ 355.82 ಕೋಟಿ ರೂ. ಸಾಲ ವಿತರಣೆಗೆ ನೆರವು ನೀಡಿರುವುದಕ್ಕಾಗಿ ವಿಜಯ ಬ್ಯಾಂಕ್ 2007-08ನೇ ಸಾಲಿನ ನಬಾರ್ಡ್ 3ನೇ ಹಾಗೂ ಧರ್ಮಸ್ಥಳ ಶಾಖೆ 2ನೇ ಬಹುಮಾನಕ್ಕೆ ಆಯ್ಕೆಯಾಯಿತು..

2008: ನವದೆಹಲಿಯ ವೈದ್ಯರ ತಂಡವೊಂದು ಚಳಿಗಾಲದಲ್ಲಿ ಹೃದಯಾಘಾತದ ಪ್ರಮಾಣ ಹೆಚ್ಚು ಎಂಬ ಸಂಗತಿಯನ್ನು ಬಹಿರಂಗಪಡಿಸಿತು. ಹೃದಯಾಘಾತಕ್ಕೆ ಸಂಬಂಧಿಸಿದಂತೆ ಡಿಸೆಂಬರ್ 25ರಿಂದ ಜನವರಿ 25ರವರೆಗಿನ ಅವಧಿ ಅತಿ ಅಪಾಯಕಾರಿ, ಹಿಂದಿನ ವರ್ಷ ಈ ಅವಧಿಯಲ್ಲಿ ದೆಹಲಿಯ ಆಸ್ಪತ್ರೆಗಳಲ್ಲಿ ಹೃದ್ರೋಗಕ್ಕೆ ಸಂಬಂಧಿಸಿದ ರೋಗಿಗಳ ಪ್ರಮಾಣ ಶೇ 25ರಿಂದ 30ರಷ್ಟು ಹೆಚ್ಚಾಗಿತ್ತು ಎಂದು ವರದಿ ಹೇಳಿತು. ಚಳಿಗಾಲದಲ್ಲಿ ಹೃದಯ ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ. ಹೃದಯದ ಮೇಲಿನ ಹೊರೆ ಹೆಚ್ಚುತ್ತದೆ. ಏಕೆಂದರೆ ಈ ಅವಧಿಯಲ್ಲಿ ರಕ್ತನಾಳಗಳು ದೇಹದ ಬಿಸಿ ಕಾಯ್ದುಕೊಳ್ಳಲು ಸಂಕುಚಿತವಾಗುತ್ತವೆ. ಜೊತೆಗೆ ಆಸ್ತಮಾ, ಫ್ಲೂನಂತಹ ಕಾಯಿಲೆಗಳು ಇದೇ ಋತುವಿನಲ್ಲಿ ಹೆಚ್ಚುತ್ತವೆ ಎನ್ನುತ್ತಾರೆ ಉಮ್ಕಲ್ ಆಸ್ಪತ್ರೆಯ ಹಿರಿಯ ಹೃದ್ರೋಗ ತಜ್ಞ ಉಮೇಶ್ ಗುಪ್ತಾ. ಚಳಿಗಾಲದಲ್ಲಿ ದೇಹ ಬೆಚ್ಚಗಿಟ್ಟುಕೊಳ್ಳಲು ಹಲವಾರು ಮಂದಿ ಹೆಚ್ಚು ಮದ್ಯ ಸೇವಿಸುತ್ತಾರೆ. ಇದು ಸಹ ಹೃದಯದ ಮೇಲಿನ ಒತ್ತಡ ಹೆಚ್ಚಿಸುತ್ತದೆ. ಹಾಗಾಗಿ ಚಳಿಗಾಲದಲ್ಲಿ ಹೃದ್ರೋಗಿಗಳು ಹೊರಗಿನ ಚಟುವಟಿಕೆಗಳು, ವ್ಯಾಯಾಮದ ಪ್ರಮಾಣ ಕಡಿಮೆ ಮಾಡಬೇಕು. ಮದ್ಯ ಸೇವಿಸುತ್ತಿದ್ದಲ್ಲಿ ಆ ಪ್ರಮಾಣವನ್ನೂ ಕಡಿಮೆಗೊಳಿಸಬೇಕು ಎಂಬುದು ಅವರ ಸಲಹೆ. ಚಳಿಗಾಲದಲ್ಲಿ ಸದಾ ಮೋಡ ಕವಿದ ವಾತಾವರಣ ಇರುವುದರಿಂದ ಅದು ಸಹ ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ. ಸೂರ್ಯನ ಕಿರಣಗಳು ಮೈಮೇಲೆ ಬೀಳದೇ ಇರುವುದರಿಂದ ಖಿನ್ನತೆ ಆವರಿಸುತ್ತದೆ. `ವಿಂಟರ್ ಬ್ಲೂ' ಎಂದು ಸಾಮಾನ್ಯವಾಗಿ ಕರೆಯುವ ಈ ಮಾನಸಿಕ ಸ್ಥಿತಿ ಹೃದ್ರೋಗಿಗಳ ಮೇಲೆ ಇನ್ನಷ್ಟು ದುಷ್ಪರಿಣಾಮ ಬೀರುತ್ತದೆ ಎನ್ನುತ್ತಾರೆ ಮ್ಯಾಕ್ಸ್ ಹೆಲ್ತ್ ಕೇರ್ ಮನಃಶಾಸ್ತ್ರಜ್ಞ ಸಮೀರ್ ಪಾರೀಖ್. ಮಧ್ಯಾಹ್ನದ ಸಮಯ ಸೂರ್ಯನ ಬಿಸಿಲಿಗೆ ಮೈ ಒಡ್ಡುವುದರಿಂದ, ಸ್ನೇಹಿತರ ಜೊತೆ ಬೆರೆಯುವುದರಿಂದ, ಲಘು ವ್ಯಾಯಾಮ ಮಾಡುವುದರಿಂದ ಈ ಖಿನ್ನತೆಯಿಂದ ಪಾರಾಗಬಹುದು ಎನ್ನುತ್ತಾರೆ ಡಾ. ಪಾರೀಖ್. ಮೊಣಕಾಲು, ಮೂಳೆಗಳ ಮೇಲೂ ಈ ಚಳಿ ದುಷ್ಪರಿಣಾಮ ಬೀರುತ್ತದೆ. ಕೀಲು ನೋವಿನಿಂದ ಬಳಲುತ್ತಿರುವವರು ಮಧ್ಯಾಹ್ನದ ಹೊತ್ತಿನಲ್ಲಿ ಸೂರ್ಯ ನೆತ್ತಿಯ ಮೇಲೆ ಬಂದಾಗಲಾದರೂ ವ್ಯಾಯಾಮ ಮಾಡಬೇಕು. ಬೆಚ್ಚನೆಯ ಕೊಠಡಿಗಳಲ್ಲಿ ಮಲಗಬೇಕು ಎನ್ನುತ್ತಾರೆ ಸರ್ ಗಂಗಾ ರಾಮ್ ಆಸ್ಪತ್ರೆಯ ಮೂಳೆ ತಜ್ಞ ಡಾ. ಸಂಜಯ್ ಸರೂಪ್. ಈ ಪ್ರಮುಖ ರೋಗಗಳ ಹೊರತಾಗಿ ಚಳಿಗಾಲದಲ್ಲಿ ಚರ್ಮ ಸಂಬಂಧಿ ರೋಗಗಳೂ ಸಾಕಷ್ಟು ಪೀಡಿಸುತ್ತವೆ ಎನ್ನುತ್ತಾರೆ ತಜ್ಞರು.

2008: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಲಾರಿ, ಖಾಸಗಿ ಬಸ್ಸು, ಟೂರಿಸ್ಟ್ ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್ ಮಾಲೀಕರು ಮತ್ತು ಚಾಲಕರು ಕರೆ ನೀಡಿರುವ ಅನಿದರ್ಿಷ್ಟಾವಧಿ ಮುಷ್ಕರ ಈದಿನ ಮಧ್ಯರಾತ್ರಿಯಿಂದ ಕರ್ನಾಟಕದಾದ್ಯಂತ ಆರಂಭಗೊಂಡಿತು. ಕರ್ನಾಟಕ ರಾಜ್ಯ ಲಾರಿ ಮಾಲೀಕರು ಮತ್ತು ಏಜೆಂಟರ ಒಕ್ಕೂಟದಲ್ಲಿರುವ 1.75 ಲಕ್ಷ ಲಾರಿಗಳು, 25 ಸಾವಿರ ಖಾಸಗಿ ಬಸ್ಸು, 75 ಸಾವಿರ ಮ್ಯಾಕ್ಸಿ ಕ್ಯಾಬ್ ಮತ್ತು ಟೂರಿಸ್ಟ್ ಟ್ಯಾಕ್ಸಿ ಸೇರಿದಂತೆ ಸುಮಾರು 2.75 ಲಕ್ಷ ವಾಹನಗಳ ಸಂಚಾರ ರಾತ್ರಿಯಿಂದಲೇ ಸ್ಥಗಿತಗೊಂಡಿತು.

2008: ಮಹಾರಾಷ್ಟ್ರದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಸಪ್ತಶೃಂಗಿಯಿಂದ ನಾಸಿಕಕ್ಕೆ ಹಿಂತಿರುಗುತ್ತಿದ್ದ ಖಾಸಗಿ ಐಷರಾಮಿ ಬಸ್ಸೊಂದು ಈದಿನ ರಾತ್ರಿ 10.30ಕ್ಕೆ ನಂದುರಿ ಎಂಬಲ್ಲಿ ಆಳ ಕಮರಿಗೆ ಬಿದ್ದುದರಿಂದ ಸುಮಾರು 38 ಜನ ಭಕ್ತರು ಮೃತರಾಗಿ, 40ಕ್ಕೂ ಹೆಚ್ಚು ಪ್ರಯಾಣಿಕರು ಗಾಯ ಗೊಂಡರು. ಬಸ್ಸಿನಲ್ಲಿ 81 ಜನ ಪ್ರಯಾಣಿಕರಿದ್ದರು. ಘಟ್ಟ ಪ್ರದೇಶದ ಹೇರ್ ಪಿನ್ ತಿರುವಿನಲ್ಲಿ ಸಾಗುತ್ತಿದ್ದ ಬಸ್ಸು ಚಾಲಕನ ನಿಯಂತ್ರಣ ತಪ್ಪಿ 600 ಅಡಿ ಆಳದ ಕಮರಿಗೆ ಬಿದ್ದು ಎರಡು ತುಂಡಾಯಿತು.

2008: ಮಲೇಷ್ಯಾ ಸರ್ಕಾರವು ಹಿಂದೂಗಳ ಹಬ್ಬವಾದ `ತೈಪೂಸಂ'ಗೆ ರಾಷ್ಟ್ರೀಯ ರಜಾ ದಿನ ಘೋಷಿಸಿತು. ಭಾರತೀಯ ಹಿಂದೂಗಳ ಮನವಿ ಮೇರೆಗೆ ಈ ನಿರ್ಧಾರ ತೆಗೆದುಕೊಳ್ಳಲಾಯಿತು ಎಂದು ಪ್ರಧಾನ ಮಂತ್ರಿ ಅಬ್ದುಲ್ಲಾ ಬದಾವಿ ಪ್ರಕಟಿಸಿದರು. ಕ್ವಾಲಾಲಂಪುರದಲ್ಲಿ ಹಿಂದೂಗಳ ಪೊಂಗಲ್ ಹಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ 20 ಸಾವಿರ ಭಾರತೀಯರ ಸಮ್ಮುಖದಲ್ಲಿ ಅವರು ಪ್ರಕಟಣೆ ಮಾಡಿದಾಗ ಹರ್ಷೋದ್ಘಾರವಾಯಿತು. ಇಲ್ಲಿ ನೆಲೆಸಿರುವ ಭಾರತೀಯ ಮೂಲದವರು ವಿಶೇಷವಾಗಿ ತಮಿಳುನಾಡಿನವರು ತೈಪೂಸಂ ಹಬ್ಬವನ್ನು ವ್ಯಾಪಕವಾಗಿ ಆಚರಿಸುತ್ತಾರೆ. ಪ್ರತಿವರ್ಷ ಈ ಹಬ್ಬದಂದು ಸಾವಿರಾರು ಜನರು ರಾಜಧಾನಿಯ ಹೊರಪ್ರದೇಶದಲ್ಲಿರುವ ಮುರುಘಾ ದೇವಸ್ಥಾನಕ್ಕೆ 172 ಮೆಟ್ಟಿಲು ಕ್ರಮಿಸಿ ತೆರಳುತ್ತಾರೆ.

2008: ಭಾರತದಲ್ಲಿ ಕೋಳಿಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಭಾರತದಿಂದ ಕೋಳಿಗಳು ಮತ್ತು ಅವುಗಳ ಉತ್ಪನ್ನಗಳ ಆಮದು ನಿಷೇಧಿಸಿರುವುದಾಗಿ ದುಬೈ ಕೃಷಿ ಸಚಿವ ಶೇಖ್ ಸಲೀಮ್ ಬಿನ್ ಹಿಲಾಲ್ ಅಲ್ ಖಲೀಲಿ ಪ್ರಕಟಿಸಿದರು. ಪಶುಸಂಗೋಪನಾ ಇಲಾಖೆ ಅಧಿಕಾರಿಗಳ ಶಿಫಾರಸನ್ನು ಆಧರಿಸಿ ಈ ನಿರ್ಧಾರ ತೆಗೆದುಕೊಳ್ಳಲಾಯಿತು. ವಾರದ ಹಿಂದೆ ಪಶ್ಚಿಮ ಬಂಗಾಳದಲ್ಲಿ ಕೋಳಿಜ್ವರ ಹರಡಿರುವುದು ಖಚಿತವಾದ ಮೇಲೆ ಕೋಳಿ, ಕೋಳಿ ಮೊಟ್ಟೆ ಹಾಗೂ ಸಂಬಂಧಿತ ಉತ್ಪನ್ನಗಳನ್ನು ಭಾರತದಿಂದ ಆಮದುಮಾಡಿಕೊಳ್ಳುವುದನ್ನು ಖತಾರ್ ನಿಷೇಧಿಸಿತ್ತು.

2008: ಇರಾನಿನ ಮೊದಲ ಅಣುಶಕ್ತಿ ಯೋಜನೆಗೆ ರಷ್ಯಾದಿಂದ 4ನೇ ಬಾರಿ ಅಣು ಇಂಧನವನ್ನು ಸರಬರಾಜು ಮಾಡಲಾಯಿತು. ಈ ಯೋಜನೆ ಪೂರ್ಣಗೊಳ್ಳಲು ಇನ್ನೂ 4 ಬಾರಿ ಅಣು ಇಂಧನವನ್ನು ರಷ್ಯಾ ಸರಬರಾಜು ಮಾಡಲಿದೆ ಎಂದು ಇರಾನ್ ಸುದ್ದಿ ಸಂಸ್ಥೆಯ ಅಧಿಕಾರಿ ಹೇಳಿದರು.

2008: ಶ್ರೀಲಂಕಾ ಸೇನಾಪಡೆ ಐದು ಎಲ್ ಟಿ ಟಿ ಇ ದೋಣಿಗಳ ಮೇಲೆ ದಾಳಿ ನಡೆಸಿ 41 ಬಂಡುಕೋರರನ್ನು ಹತ್ಯೆ ಮಾಡಿತು. ಈ ಸಂದರ್ಭದಲ್ಲಿ ಒಬ್ಬ ಯೋಧ ಹತನಾದ. ಶ್ರೀಲಂಕಾ ಸರ್ಕಾರ ಮತ್ತು ಎಲ್ ಟಿ ಟಿ ಇ ನಡುವೆ ಇದ್ದ 6 ವರ್ಷಗಳ ಕದನ ವಿರಾಮ ಮೂರು ದಿನಗಳ ಹಿಂದೆ ಅಂತ್ಯಗೊಂಡಿದ್ದು, ಎಲ್ ಟಿ ಟಿ ಇ ಬಲವಾಗಿ ನೆಲೆಯೂರಿರುವ ಉತ್ತರ ಭಾಗದಲ್ಲಿ ಶ್ರೀಲಂಕಾ ಸೇನಾಪಡೆ ದಾಳಿ ನಡೆಸಿತು.

2008: ಅತಿಯಾದ ಮೊಬೈಲ್ ಫೋನ್ ಬಳಕೆಯಿಂದ ಕ್ಯಾನ್ಸರ್ ಬರುತ್ತದೆ ಎಂಬುದು ಹಳೆಯ ಸುದ್ದಿ. ಆದರೆ ಮೊಬೈಲ್ ಫೋನನ್ನು ಅತಿಯಾಗಿ ಬಳಸಿದರೆ ರಾತ್ರಿ ವೇಳೆ ನಿದ್ರೆಯಲ್ಲೂ ಏರುಪೇರಾಗುತ್ತದೆ ಎಂಬುದು ಹೊಸ ಸಂಶೋಧನೆಯ ಫಲಿತಾಂಶ. ಮೊಬೈಲ್ ಫೋನುಗಳಿಂದ ಹೊರಸೂಸುವ ಕಿರಣಗಳು ನಿದ್ರೆಯನ್ನು ಕಡಿಮೆ ಮಾಡುತ್ತವೆ ಎಂದು ಅಮೆರಿಕ ಮತ್ತು ಯುರೋಪಿನ ಸಂಶೋಧಕರ ತಂಡ ನಡೆಸಿದ ಅಧ್ಯಯನದಲ್ಲಿ ಬೆಳಕಿಗೆ ಬಂತು. ಇದರಿಂದ ತಲೆನೋವು, ಗೊಂದಲದ ಮನಸ್ಥಿತಿಯೂ ಉಂಟಾಗುತ್ತದೆ ಎಂದು ದಿ ಇಂಡಿಪೆಂಡೆಂಟ್ ಪತ್ರಿಕೆ ವರದಿ ಮಾಡಿತು. ಹಾಸಿಗೆಗೆ ಹೋಗುವ ಮುನ್ನ ನೀವು ಸೆಲ್ ಫೋನುಗಳನ್ನು ಬಳಸಿದ್ದೇ ಆದಲ್ಲಿ ಶಾಂತ ನಿದ್ರೆ ನಿಮ್ಮಿಂದ ದೂರವಾಗುತ್ತದೆ. ಇದರಿಂದ ಹಗಲು ಹೊತ್ತಿನಲ್ಲಿ ನಿಮ್ಮ ದೈಹಿಕ ಸುಸ್ಥಿತಿ ಅಸ್ತವ್ಯಸ್ತವಾಗುತ್ತದೆ. ಮೊಬೈಲ್ ಕಿರಣಗಳು ಮೆದುಳಿನ ಮೇಲೂ ಗಂಭೀರ ಪರಿಣಾಮ ಉಂಟು ಮಾಡುತ್ತವೆ, ಅಲ್ಲದೆ ಮೆದುಳಿನ ಒತ್ತಡವನ್ನು ಹೆಚ್ಚಿಸುತ್ತವೆ ಎಂಬುದು ಅಧ್ಯಯನಕಾರ ಪ್ರೊ. ಬೆಂಗ್ಟ್ ಆರ್ನೆಸ್ಟ್ ಅಭಿಪ್ರಾಯ.

2008: ಸರ್ಕಾರಿ ನೌಕರನ ಕಾನೂನು ಬಾಹಿರ ಕೆಲಸಕ್ಕೂ ಕರ್ತವ್ಯ ನಿರ್ವಹಣೆಗೂ ಸಂಬಂಧವಿಲ್ಲ, ಆದ್ದರಿಂದ ತಪ್ಪಿತಸ್ಥ ನೌಕರನ ವಿರುದ್ಧ ಪ್ರಕರಣ ದಾಖಲು ಮಾಡಲು ಅಪರಾಧ ಪ್ರಕ್ರಿಯಾ ಸಂಹಿತೆಯ ಕಲಂ 197ರ ಅನ್ವಯ ಪೂರ್ವಾನುಮತಿ ಪಡೆಯುವ ಅಗತ್ಯವಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿತು. ನಾಗಪುರ ಸರ್ಕಾರಿ ಆಸ್ಪತ್ರೆಗೆ ಎಚ್ ಐ ವಿ ಸೋಂಕು ತಗುಲಿದ ರಕ್ತವನ್ನು ಪೂರೈಕೆ ಮಾಡಿದ ಹಗರಣಗಳ ಆಪಾದಿತರ ವಿಚಾರಣೆಯನ್ನು ಮುಂದುವರೆಸಬೇಕು ಎಂದು ನ್ಯಾಯಮೂರ್ತಿ ಜಿ. ಪಿ. ಮಾಥೂರ್ ಮತ್ತು ಅಲ್ತಾಬ್ ಅಲಂ ಅವರನ್ನು ಒಳಗೊಂಡ ನ್ಯಾಯಪೀಠವು ವಿಚಾರಣೆ ನಡೆಸುತ್ತಿರುವ ಕೆಳ ಹಂತದ ನ್ಯಾಯಾಲಯಕ್ಕೆ ಸೂಚಿಸಿತು. ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಎಚ್ ಐ ವಿ ಸೋಂಕು ತಗುಲಿದ ರಕ್ತವನ್ನು ಪೂರೈಕೆ ಮಾಡಿದ ಹಗರಣದಲ್ಲಿ ರಕ್ತ ನಿಧಿಯ ವೈದ್ಯರಾದ ಡಾ. ಪಿ. ಪಿ. ಸಂಚೇತಿ, ಡಾ. ಪ್ರಕಾಶ್ ಚಂದ್ರ ಅವರ ಜತೆ ಇನ್ನೂ ಐವರು ಶಾಮಿಲಾಗಿದ್ದು, ಇವರ್ಲೆಲರೂ ರಕ್ತ ನಿಧಿಯ ದಾಖಲೆಗಳನ್ನು ತಿದ್ದಿದ್ದಾರೆ ಎಂದು ಪೊಲೀಸರು ದೋಷಾರೋಪ ಹೊರಿಸಿದ್ದರು. ದಾಖಲೆಗಳನ್ನು ನಾಶ ಪಡಿಸಿದ ಸಾಕ್ಷಾಧಾರಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದರೂ ಈ ಸರ್ಕಾರಿ ವೈದ್ಯರನ್ನು ವಿಚಾರಣೆಗೆ ಗುರಿಪಡಿಸಲು ಅಪರಾಧ ಪ್ರಕ್ರಿಯಾ ಸಂಹಿತೆ ಕಲಂ 197ರ ಪ್ರಕಾರ ಪೂರ್ವಾನುಮತಿ ಪಡೆಯಲಿಲ್ಲ ಎಂಬ ಕಾರಣಕ್ಕೆ ಹೆಚ್ಚುವರಿ ಚೀಫ್ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಅವರು ಪ್ರಕರಣವನ್ನು ವಜಾಗೊಳಿಸಿದ್ದರು. ಆದರೆ ಸೆಷನ್ಸ್ ನ್ಯಾಯಾಲಯವು ಈ ಆದೇಶವನ್ನು ರದ್ದುಪಡಿಸಿತ್ತು. ಚೀಫ್ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಅವರ ಆದೇಶವನ್ನು ಬಾಂಬೆ ಹೈಕೋರ್ಟ್ ಎತ್ತಿ ಹಿಡಿದದ್ದರಿಂದ ಮಹಾರಾಷ್ಟ್ರ ಸರ್ಕಾರ ಸುಪ್ರೀಂಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನ್ಯಾಯಪೀಠವು, ಕಾನೂನು ಬಾಹಿರ ಕೆಲಸ ಮಾಡಿದ ನೌಕರನ ನಿರ್ವಹಣೆಗೆ ಸಂಬಂಧ ಕಲ್ಪಿಸಿ ವಿಚಾರಣೆಗೆ ಪೂರ್ವಾನುಮತಿ ಪಡೆಯಬೇಕು ಎಂಬ ಕಾರಣ ನೀಡುವುದು ಸರಿಯಲ್ಲ ಎಂದು ತಿಳಿಸಿತು.

2008: ಇಥಿಯೋಪಿಯಾದ ಮುಲು ಸೆಬೊಕಾ ಅವರು ಮುಂಬೈಯಲ್ಲಿ ನಡೆದ ಸ್ಟ್ಯಾಂಡರ್ಡ್ ಚಾರ್ಟರ್ಡ್ ಮುಂಬೈ ಮ್ಯಾರಥಾನ್ ಸ್ಪರ್ಧೆಯ ಮಹಿಳೆಯರ ವಿಭಾಗದಲ್ಲಿ ಸತತ ಮೂರನೇ ಬಾರಿ ಪ್ರಶಸ್ತಿ ಗೆದ್ದು `ಹ್ಯಾಟ್ರಿಕ್' ಸಾಧಿಸಿದರು.

2008: ಬೆಂಗಳೂರಿನ ಕಾವೇರಿ ಜಂಕ್ಷನ್ನಿನಲ್ಲಿ `ಪ್ರೀಕಾಸ್ಟ್' ಅಂಡರ್ ಪಾಸ್ ಕಾಮಗಾರಿ ಚುರುಕುಗೊಂಡು, ಸಿಮೆಂಟ್ ಎಲಿಮೆಂಟ್ಗಳನ್ನು ಅಳವಡಿಸುವ ಕೆಲಸ ಪ್ರಾರಂಭವಾಯಿತು.

2007: ರಾಷ್ಟ್ರೀಯ ಲೋಕದಳ ಸದಸ್ಯೆಯಾಗಿ 2002ರಲ್ಲಿ ರಾಜ್ಯಸಭೆಗೆ ಆಯ್ಕೆಯಾಗಿದ್ದ ರಾಜ್ಯಸಭಾ ಸದಸ್ಯೆ, ಹರ್ಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಮಹಾಜನ್ ಅವರ ಪತ್ನಿ, ಸಾಮಾಜಿಕ ಕಾರ್ಯಕರ್ತೆ ಸುಮಿತ್ರಾ ಮಹಾಜನ್ ದೆಹಲಿಯಲ್ಲಿ ನಿಧನರಾದರು.

2007: ಹೃದಯಾಘಾತಕ್ಕೆ ಒಳಗಾದ ಕ್ಯಾನ್ಸರ್ ರೋಗಿಗಳಲ್ಲಿ `ಆಸ್ಪಿರಿನ್' ಜೀವರಕ್ಷಕವಾಗಿ ಕೆಲಸ ಮಾಡುತ್ತದೆ ಎಂಬುದು ವೈದ್ಯರು ಕೈಗೊಂಡ ಹೊಸ ಸಂಶೋಧನೆಯಿಂದ ಬೆಳಕಿಗೆ ಬಂದಿತು. ಈ ಮೊದಲು ಕ್ಯಾನ್ಸರ್ ರೋಗಿಗಳಿಗೆ ಆಸ್ಪಿರಿನ್ ಮಾತ್ರೆ ನೀಡುವುದು ಮಾರಕ ಎಂದು ತಿಳಿದಿದ್ದುದು ದೊಡ್ಡ ತಪ್ಪಾಗಿದೆ ಎಂದು ಟೆಕ್ಸಾಸ್ ವಿವಿ ಕ್ಯಾನ್ಸರ್ ಕೇಂದ್ರದ ಎಂ.ಡಿ.ಆ್ಯಂಡರ್ಸನ್ ಹೂಸ್ಟನ್ನಿನಲ್ಲಿ ಪ್ರಕಟಿಸಿದರು. ಆಸ್ಪಿರಿನ್ ರಕ್ತಸ್ರಾವಕ್ಕೆ ಕಾರಣವಾಗುತ್ತದೆ ಎಂದು ಈ ಮೊದಲು ಸಾಮಾನ್ಯ ವೈದ್ಯಕೀಯ ಅಧ್ಯಯನದಲ್ಲಿ ಕಂಡುಕೊಳ್ಳಲಾಗಿತ್ತು. ಆದರೆ, ಅದಕ್ಕೆ ವ್ಯತಿರಿಕ್ತವಾದ ಸತ್ಯವನ್ನು ಈಗ ಕಂಡುಕೊಳ್ಳಲಾಗಿದೆ. ಹತ್ತು ಕ್ಯಾನ್ಸರ್ ರೋಗಿಗಳು ಹೃದಯಾಘಾತಕ್ಕೊಳಗಾದ ಸಂದರ್ಭದಲ್ಲಿ ಆಸ್ಪಿರಿನ್ ಮಾತ್ರೆ ತೆಗೆದುಕೊಳ್ಳದೆ ಮೃತರಾಗಿದ್ದಾರೆ. ಆದರೆ, ಇದೇ ರೀತಿಯ 17 ರೋಗಿಗಳು ಆಸ್ಪಿರಿನ್ ಮಾತ್ರೆ ಸೇವಿಸಿದಾಗ ಅವರಲ್ಲಿ ಒಬ್ಬನೇ ಮೃತನಾದುದು ಸಂಶೋಧನೆ ಸಂದರ್ಭದಲ್ಲಿ ಬೆಳಕಿಗೆ ಬಂತು ಎಂದು ಆ್ಯಂಡರ್ಸನ್ ಹೇಳಿದರು.

2007: ಅತ್ಯಂತ ಹಳೆಯದಾದ, 1903ರಲ್ಲಿ ತಯಾರಾದ ಸುಸ್ಥಿತಿಯಲ್ಲಿರುವ ಫೋರ್ಡ್ ಕಾರು 630,000 ಫೋನಿಕ್ಸಿನಲ್ಲಿ ನಡೆದ ಹರಾಜಿನಲ್ಲಿ ಅಮೆರಿಕ ಡಾಲರುಗಳಿಗೆ ಮಾರಾಟವಾಯಿತು. ಅಮೆರಿಕದಲ್ಲಿ ತಯಾರಾದ ಈ ಕಾರು ಫೋರ್ಡ್ ಕಂಪೆನಿ ಮಾರಾಟ ಮಾಡಿದ ಮೊದಲು ಮೂರು ಕಾರುಗಳಲ್ಲಿ ಇದೂ ಒಂದು. ಹೂಸ್ಟನ್ನಿನ ಖ್ಯಾತ ವಕೀಲ ಜಾನ್ ಓ ಕ್ವಿನ್ ಈ ಕಾರಿನ ನೂತನ ಒಡೆಯರಾದರು.

2007: ಬ್ರಿಟನ್ನಿನ `ಚಾನೆಲ್ 4 ರಿಯಾಲಿಟಿ ಟಿವಿ ಷೋ ಸೆಲೆಬ್ರಿಟಿ ಬಿಗ್ ಬ್ರದರ್' ಕಾರ್ಯಕ್ರಮದಲ್ಲಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರಿಗೆ ಜನಾಂಗೀಯ ನಿಂದನೆ ಮತ್ತು ಮಾನಸಿಕ ಕಿರುಕುಳ ನೀಡುವುದರ ಮೂಲಕ ಅಂತಾರಾಷ್ಟ್ರೀಯ ಚರ್ಚೆಗೆ ಗ್ರಾಸವಾಗಿದ್ದ ಬ್ರಿಟಿಷ್ ಟಿವಿ ನಟಿ ಜೇಡ್ ಗೂಡಿ ಅವರ ವಿರುದ್ಧ ಶೇ 82ರಷ್ಟು ಪ್ರೇಕ್ಷಕರು ಮತ ಚಲಾಯಿಸಿ ಮುಂದಿನ ಪ್ರದರ್ಶನದಿಂದ ಹೊರಹಾಕಿದರು. 25 ವರ್ಷದ ಮಾಜಿ ದಂತ ವೈದ್ಯಕೀಯ ದಾದಿಯಾದ ಜೇಡ್ ಗೂಡಿ ಅವರು 31 ವರ್ಷದ ಶಿಲ್ಪಾ ಶೆಟ್ಟಿ ಅವರನ್ನು ನಿಂದಿಸಿದ ಬಳಿಕ ಟಿವಿಯ ಕಾವಲುಸಂಸ್ಥೆ `ಆಫ್ ಕಾಮ್' ಗೆ ಪ್ರದರ್ಶನದ ಬಗ್ಗೆ ಪ್ರೇಕ್ಷಕರಿಂದ ಸುಮಾರು 40,000 ದೂರುಗಳು ಬಂದಿದ್ದವು. ಈ ಪ್ರಕರಣದ ನಂತರ 20 ಲಕ್ಷ ಹೆಚ್ಚುವರಿ ಪ್ರೇಕ್ಷಕರು ಟಿವಿ ಕಾರ್ಯಕ್ರಮ ವೀಕ್ಷಿಸಿದ್ದರು. ಶಿಲ್ಪಾ ಅವರಿಗೆ ವಿಶ್ವದ ನಾನಾ ಭಾಗಗಳಿಂದ ಅಂತರ್ಜಾಲದ ಮೂಲಕ ಭಾರಿ ಪ್ರಮಾಣದ ಅಭಿಮಾನಿಗಳ ಬೆಂಬಲ ಹರಿದುಬಂದಿತ್ತು. ಸುದ್ದಿ ವಾಹಕಗಳ ಪ್ರಸಾರ, ಅಂತರ್ಜಾಲದ ವಿಚಾರ ವಿನಿಮಯ ಹಾಗೂ ವೃತ್ತಪತ್ರಿಕೆಗಳ ಬರವಣಿಗೆಗಳಲ್ಲಿ ಜನಾಂಗೀಯ ನಿಂದನೆ ಮತ್ತು ಬಿಗ್ ಬ್ರದರ್ ಕಾರ್ಯಕ್ರಮ ಕುರಿತು ವ್ಯಾಪಕ ಚರ್ಚೆ ನಡೆದಿತ್ತು.

2007: ಕಂಪ್ಯೂಟರಿಗೆ ಯಾವುದೇ ರೀತಿಯ ವೈರಸ್ಗಳಿಂದ ಸಮಗ್ರ ರಕ್ಷಣೆ ನೀಡಬಲ್ಲಂತಹ `ರುದ್ರ ಪ್ರೊಟೆಕ್ಟರ್' ನ್ನು ಇಸ್ರೋ ಉಪಾಧ್ಯಕ್ಷ ಎಸ್. ರಮಣಿ ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದರು. ಭಾರತೀಯ ಮೂಲದವರು ಅಭಿವೃದ್ಧಿ ಪಡಿಸಿರುವ ಈ ಪ್ರೊಟೆಕ್ಟರ್ ವಿಶ್ವದಲ್ಲೇ ಪ್ರಪ್ರಥಮ ಕಂಪ್ಯೂಟರ್ ಪ್ರೊಟೆಕ್ಟರ್ ಎನ್ನಲಾಗಿದೆ. ಸಿಂಗಾಪುರ ಮೂಲದ ರುದ್ರ ಟೆಕ್ನಾಲಜೀಸ್ ಸಂಸ್ಥೆಯು ಇಂಟೆನ್ಷನ್ ಬೇಸ್ಡ್ ಟೆಕ್ನಾಲಜಿ ಆಧರಿಸಿ ಇದನ್ನು ನಿರ್ಮಿಸಿದೆ.

2006: ಫಾರ್ಗೊಟ್ಟನ್ ಹೀರೋ (ಮರೆತ ನಾಯಕ) ಚಿತ್ರಕ್ಕಾಗಿ ಶ್ಯಾಮ್ ಬೆನೆಗಲ್ ಅವರಿಗೆ 2006ರ ಸಾಲಿನ ನೇತಾಜಿ ಪ್ರಶಸ್ತಿಯನ್ನು ಪ್ರಕಟಿಸಲಾಯಿತು. ನೇತಾಜಿ ಸುಭಾಶ್ ಚಂದ್ರ ಬೋಸ್ ಪಾತ್ರದಲ್ಲಿ ಅಸಾಧಾರಣ ಅಭಿನಯ ಮಾಡಿದ್ದಕ್ಕಾಗಿ ಸಚಿನ್ ಖೇಡೇಕರ್ ಅವರಿಗೂ ಈ ಪ್ರಶಸ್ತಿ ಲಭಿಸಿದೆ.

2006: ಕೊಂಕಣ ರೈಲ್ವೆಯು ಅಭಿವೃದ್ಧಿ ಪಡಿಸಿದ ಅಪಘಾತ ನಿಯಂತ್ರಣ ಸಾಧನ ರಕ್ಷಾ ಕವಚಕ್ಕೆ ಭಾರತ ಹಾಗೂ ದಕ್ಷಿಣ ಆಫ್ರಿಕಾದಲ್ಲಿ ಪೇಟೆಂಟ್ ಲಭಿಸಿತು. ರಕ್ಷಾ ಕವಚ ಪೇಟೆಂಟಿಗಾಗಿ ಕೊಂಕಣ ರೈಲ್ವೆಯು ಅಮೆರಿಕ, ಯುರೋಪ್ ಮತ್ತು ಏಷ್ಯಾದ ರಾಷ್ಟ್ರಗಳಿಗೂ ಅರ್ಜಿ ಸಲ್ಲಿಸಿತು.

2006: ಭಾರತ ಮತ್ತು ಪಾಕಿಸ್ತಾನದ ನಡುವಣ ಜನರ ಸಂಪರ್ಕ ವೃದ್ಧಿಯ ಯತ್ನವಾಗಿ ಉಭಯರಾಷ್ಟ್ರಗಳ ಮಧ್ಯೆ ಮೂರನೇ ಬಸ್ಸಿಗೆ ಚಾಲನೆ ನೀಡಲಾಯಿತು. ಲಾಹೋರ್- ಅಮೃತಸರ ನಡುವೆ ಇದೇ ಪ್ರಥಮ ಬಾರಿಗೆ ಬಸ್ ಸಂಚಾರ ಆರಂಭವಾಯಿತು.

2005: ಚಿತ್ರನಟಿ ಪರ್ವೀನ್ ಬಾಭಿ ನಿಧನ.

1988: `ಗಡಿನಾಡ ಗಾಂಧಿ' ಎಂದೇ ಖ್ಯಾತರಾಗಿದ್ದ ಖಾನ್ ಅಬ್ದುಲ್ ಗಫಾರ್ ಖಾನ್ (1890-1988) ಆಫ್ಘಾನಿಸ್ಥಾನದ ಪೇಷಾವರದ ಲೇಡಿ ರೀಡಿಂಗ್ ಆಸ್ಪತ್ರೆಯಲ್ಲಿ ತಮ್ಮ 98ನೇ ವಯಸ್ಸಿನಲ್ಲಿ ನಿಧನರಾದರು. ಮಹಾತ್ಮಾ ಗಾಂಧೀಜಿಯವರ ಅನುಯಾಯಿಯಾಗಿದ್ದ ಅವರು `ಖುದಾಯಿ ಖಿದ್ಮತ್ಗಾರ್' ನ (ರೆಡ್ ಶರ್ಟ್ ಮೂವ್ ಮೆಂಟ್) ಸ್ಥಾಪಕ.

1982: ಕುಖ್ಯಾತ ಕೊಲೆಗಾರರಾದ ಬಿಲ್ಲಾ ಮತ್ತು ರಂಗ ಅವರನ್ನು ಗಲ್ಲಿಗೇರಿಸುವುದಕ್ಕೆ ಸಂಬಂಧಿಸಿದಂತೆ ನೀಡಲಾಗಿದ್ದ ತಡೆಯಾಜ್ಞೆಯನ್ನು ಸುಪ್ರೀಂಕೋರ್ಟ್ ರದ್ದು ಪಡಿಸಿತು.

1982: ನಿಕೋಬಾರ್ ದ್ವೀಪದಲ್ಲಿ ಈದಿನ ಬೆಳಗ್ಗೆ ತೀವ್ರ ಭೂಕಂಪ ಸಂಭವಿಸಿ ನೌಕಾದಳದ ಹಡಗುಕಟ್ಟೆ ಮತ್ತು ಕ್ಯಾಂಪ್ ಬೆಲ್ ಬೇನಲ್ಲಿನ ಕೆಲವು ಕಟ್ಟಡಗಳಿಗೆ ಹಾನಿ ಉಂಟಾಯಿತು.

1981: ಅಮೆರಿಕಾದ ಅಧ್ಯಕ್ಷ ಪದವು ರೊನಾಲ್ಡ್ ರೇಗನ್ ಅವರಿಂದ ಜಿಮ್ಮಿ ಕಾರ್ಟರ್ ಅವರಿಗೆ ಹಸ್ತಾಂತರಗೊಂಡ ಕೆಲವೇ ನಿಮಿಷಗಳಲ್ಲಿ ತಾನು ಒತ್ತೆಸೆರೆಯಾಗಿ ಇಟ್ಟುಕೊಂಡಿದ್ದ 52 ಮಂದಿ ಅಮೆರಿಕನ್ನರನ್ನು ಇರಾನ್ ಬಿಡುಗಡೆ ಮಾಡಿತು. ಇವರನ್ನು ಅದು 444 ದಿನಗಳ ಕಾಲ ತನ್ನ ಸೆರಯಲ್ಲಿ ಇಟ್ಟುಕೊಂಡಿತ್ತು. 1980ರ ಏಪ್ರಿಲ್ 25ರಂದು ಅಮೆರಿಕಾವು `ಆಪರೇಷನ್ ಈಗಲ್ ಕ್ಲಾ' ಗುಪ್ತಸಂಕೇತದ ಕಾರ್ಯಾಚರಣೆಯನ್ನು ಈ ಒತ್ತೆಯಾಳುಗಳ ಬಿಡುಗಡೆಗಾಗಿ ಕೈಗೊಂಡಿತ್ತು. ಆದರೆ ಇದಕ್ಕಾಗಿ ನಿಯೋಜಿಸಲಾದ ನೌಕಾಪಡೆಗೆ ಸೇರಿದ 8 ಹೆಲಿಕಾಪ್ಟರುಗಳ ಪೈಕಿ ಮೂರು ಹೆಲಿಕಾಪ್ಟರುಗಳು ವ್ಯವಸ್ಥೆಯ ದೋಷದಿಂದಾಗಿ ವಿಫಲಗೊಂಡು ಈ ಕಾರ್ಯಾಚರಣೆಯೂ ಅಯಶಸ್ವಿಯಾಗಿತ್ತು.

1959: ಭಾರತೀಯ ನ್ಯಾಯವಾದಿ, ಮುತ್ಸದ್ಧಿ ಸರ್ ತೇಜ್ ಬಹಾದುರ್ ಸಪ್ರು (1875-1959) ತಮ್ಮ 73ನೇ ವಯಸ್ಸಿನಲ್ಲಿನಿಧನರಾದರು.

1957: ಟ್ರಾಂಬೆಯ ಪರಮಾಣು ಇಂಧನ ಸಂಸ್ಥೆ ಔಪಚಾರಿಕವಾಗಿ ಉದ್ಘಾಟನೆಗೊಂಡಿತು. 1967ರ ಜನವರಿಯಲ್ಲಿ ಅದಕ್ಕೆ ಭಾಭಾ ಪರಮಾಣು ಸಂಶೋಧನಾ ಕೇಂದ್ರ ಎಂದು ಪುನರ್ ನಾಮಕರಣ ಮಾಡಲಾಯಿತು. ಭಾರತದ ಅಣುಶಕ್ತಿ ಕಾರ್ಯಕ್ರಮಕ್ಕೆ ಬೆಂಬಲವಾಗಿ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸುವುದು ಈ ಕೇಂದ್ರದ ಉದ್ದೇಶ.

1972: ಮೇಘಾಲಯವು ರಾಜ್ಯವಾಯಿತು. ಮತ್ತು ಅರುಣಾಚಲ ಪ್ರದೇಶವು ಭಾರತದ ಕೇಂದ್ರಾಡಳಿತ ಪ್ರದೇಶವಾಯಿತು. ಅರುಣಾಚಲ ಪ್ರದೇಶವು 1987ರಲ್ಲಿ ರಾಜ್ಯವಾಯಿತು.

1934: ಸಮಕಾಲೀನ ಶಿಲ್ಪಕಲೆಯಲ್ಲಿ ನಿಷ್ಣಾತರಾದ ಧನಂಜಯಶಿಲ್ಪಿ ಅವರು ಶಿವಬಸಪ್ಪ- ಮಾಣಿಕ್ಕಮ್ಮ ದಂಪತಿಯ ಮಗನಾಗಿ ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನಲ್ಲಿ ಜನಿಸಿದರು.

1929: ಕಲಾವಿದೆ ಆರ್. ಲೀಲಾಬಾಯಿ ಜನನ.

1892: ಕೆನಡಾದ ವೈದ್ಯ ಜೇಮ್ಸ್ ನೈಸ್ಮಿತ್ ಕಂಡು ಹಿಡಿದ `ಬಾಸ್ಕೆಟ್ ಬಾಲ್' ಆಟವನ್ನು ಮೊತ್ತ ಮೊದಲ ಬಾರಿಗೆ ಮೆಸಾಚ್ಯುಸೆಟ್ಸ್ ಸ್ಪ್ರಿಂಗ್ ಫೀಲ್ಡಿನ ವೈಎಂಸಿಎಯಲ್ಲಿ ಆಡಲಾಯಿತು.

1818: ಕಲ್ಕತ್ತಾದ (ಈಗಿನ ಕೋಲ್ಕತ) ಗಹ್ರನ್ ಹಟ್ಟಾದಲ್ಲಿ (ಮುಂದೆ ಇದು 304 ಚಿತ್ಪುರ್ ರಸ್ತೆ ಎಂಬುದಾಗಿ ಹೆಸರಾಯಿತು) ಹಿಂದು ಕಾಲೇಜ್ (ಈಗ ಪ್ರೆಸಿಡೆನ್ಸಿ ಕಾಲೇಜ್) ಸ್ಥಾಪನೆ. ರಾಜಾ ರಾಮ್ ಮೋಹನ್ ರಾಯ್ ಅವರು ಸಮಿತಿಯ ಮುಖ್ಯಸ್ಥರಾಗಿದ್ದರು. ಕಾಲೇಜು 1855ರ ಏಪ್ರಿಲ್ 15ರಂದು ಮುಚ್ಚಿತು. ಅದೇ ವರ್ಷ ಜೂನ್ 15ರಂದು ಪ್ರೆಸಿಡೆನ್ಸಿ ಕಾಲೇಜ್ ಆರಂಭವಾಯಿತು.

No comments:

Advertisement