My Blog List

Thursday, February 25, 2010

ಇಂದಿನ ಇತಿಹಾಸ History Today ಜನವರಿ 23


ಇಂದಿನ ಇತಿಹಾಸ

ಜನವರಿ 23

ಲಾರ್ಡ್ ಇರ್ವಿನ್ ಮೊತ್ತ ಮೊದಲ ಬಾರಿಗೆ ನವದೆಹಲಿಯ `ವೈಸ್ ರಾಯ್ ಹೌಸ್' ನಲ್ಲಿ ವಾಸ್ತವ್ಯ ಹೂಡಿದರು. ಈ ಕಟ್ಟಡ ಈಗ `ರಾಷ್ಟ್ರಪತಿ ಭವನ' ಆಗಿದೆ. ಎಡ್ವಿನ್ ಲ್ಯುಟಿಯೆನ್ಸ್ ಈ ಕಟ್ಟಡದ ವಿನ್ಯಾಸಕಾರರಾಗಿದ್ದು, 1913ರಲ್ಲಿ ಕಟ್ಟಡ ನಿರ್ಮಾಣ ಆರಂಭವಾಯಿತು. 18,580 ಚದರ ಅಡಿಗಳಷ್ಟು ವ್ಯಾಪ್ತಿಯಲ್ಲಿ ನಿರ್ಮಾಣಗೊಂಡ ಈ ಕಟ್ಟಡದ ಒಟ್ಟು ವೆಚ್ಚ 1.40 ಕೋಟಿ ರೂಪಾಯಿಗಳು. ಲ್ಯೂಟಿಯನ್ಸನ ಶುಲ್ಕ 5000 ಪೌಂಡುಗಳು.

2009: ಮತ್ತೆ ಭ್ರಷ್ಟ ಅಧಿಕಾರಿಗಳ ಕೋಟೆಯನ್ನು ಬೇಧಿಸಿದ ಕರ್ನಾಟಕ ಲೋಕಾಯುಕ್ತ ಪೊಲೀಸರು ಇದೇ ಮೊದಲ ಬಾರಿಗೆ ಡಿಐಜಿ ದರ್ಜೆಯ ಐಪಿಎಸ್ ಅಧಿಕಾರಿಯೊಬ್ಬರನ್ನು ಬಲೆಗೆ ಕೆಡವಿದರು. ಅರಣ್ಯ ಇಲಾಖೆ ಸಿಐಡಿ ಘಟಕದ ಡಿಐಜಿ ಎಂ.ಸಿ. ನಾರಾಯಣಗೌಡ ಸೇರಿದಂತೆ ರಾಜ್ಯದ ವಿವಿಧೆಡೆ ಏಳು ಅಧಿಕಾರಿಗಳ ಮನೆ ಮೇಲೆ ದಾಳಿ ನಡೆದು, ಒಂಬತ್ತು ಕೋಟಿ ರೂಪಾಯಿಗೂ ಹೆಚ್ಚು ಅಕ್ರಮ ಆಸ್ತಿ ಪತ್ತೆಯಾಯಿತು. ಆದಾಯಕ್ಕಿಂತ ಹೆಚ್ಚು ಆಸ್ತಿ ಸಂಪಾದನೆ ಆರೋಪದ ಮೇಲೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪನಿರ್ದೇಶಕ ಎಸ್.ಪಿ. ರಾಜು, ಬೆಂಗಳೂರು ಸಿಸಿಬಿ ಇನ್ಸ್‌ಪೆಕ್ಟರ್ ರೇವಣ್ಣ, ಬಿಬಿಎಂಪಿ ಸಹಾಯಕ ಎಂಜಿನಿಯರ್ ಶಿವರಾಂ, ಹೊಸಪೇಟೆಯ ವಾಣಿಜ್ಯ ತೆರಿಗೆ ಇನ್ಸ್‌ಪೆಕ್ಟರ್ ಷಣ್ಮುಖಪ್ಪ ಕೃಷ್ಣಪ್ಪ ದೊಂಬರ, ಗದಗಿನ ಆಹಾರ ಮತ್ತು ನಾಗರಿಕ ಸರ್ಗರಾಜು ಇಲಾಖೆ ವ್ಯವಸ್ಥಾಪಕ ಶಿವಪ್ಪ ಮಲ್ಲೇಶಪ್ಪ ಗಡ್ಡದವರ್ ಮತ್ತು ಪಂಚಾಯತ್ ರಾಜ್ ಇಲಾಖೆ ದೇವದುರ್ಗ ವಿಭಾಗದ ಕಿರಿಯ ಎಂಜಿನಿಯರ್ ಸೈಯದ್ ನಸರತ್ ಅಲಿ ಅವರ ಮನೆ ಮೇಲೂ ದಾಳಿ ನಡೆಯಿತು.

2009: ಎರಡನೇ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಾಗೂ ಸಾಹಿತಿ ಎಂ.ವೀರಪ್ಪ ಮೊಯಿಲಿ ಅವರು ಬರೆದ 'ರಾಮಾಯಣ ಮಹಾನ್ವೇಷಣಂ' ಕೃತಿಯ ಎರಡನೇ ಸಂಪುಟದ ಹಿಂದಿ ಅನುವಾದದ ಬಿಡುಗಡೆ ನವದೆಹಲಿಯಲ್ಲಿ ಈ ದಿನ ನಡೆಯಿತು. ಪ್ರಧಾನ ಗುರುದತ್ತ ಅವರು ಹಿಂದಿಗೆ ಅನುವಾದಿಸಿದ ಗ್ರಂಥವನ್ನು ಕರ್ನಾಟಕ ರಾಜ್ಯಪಾಲ ರಾಮೇಶ್ವರ ಠಾಕೂರ್ ಬಿಡುಗಡೆ ಮಾಡಿದರು.

2009: ಪ್ರಸಿದ್ಧ ರಂಗ ನಿರ್ದೇಶಕ ಹಾಗೂ ಹಾಸ್ಯ ಕಲಾವಿದ ಬಾಲಕೃಷ್ಣ ಪೈ (78) ಯಾನೆ ಕುಳ್ಳಪ್ಪು ಹೃದಯಾಘಾತದಿಂದ ಕುಂದಾಪುರದಲ್ಲಿ ನಿಧನರಾದರು. ರಾಜ್ಯನಾಟಕ ಆಕಾಡೆಮಿ, ಕೊಂಕಣಿ ನಾಟಕ ಆಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದ ಬಾಲಕೃಷ್ಣ ಪೈ ತಮ್ಮ ಕುಳ್ಳನೆ ದೇಹಕಾಯದಿಂದಾಗಿ ಕುಳ್ಳಪ್ಪು ಎಂದೇ ಜನಾನುರಾಗಿಯಾಗಿಯಾಗಿದ್ದರು. ಹಲವು ನಾಟಕಗಳನ್ನು ನಿರ್ದೇಶಿಸಿದ್ದ ಅವರು ಕೆಲವೊಂದು ನಾಟಕಗಳನ್ನು ರಚಿಸಿದ್ದರು. ನಟನೆಯಲ್ಲಿಯೂ ಸೈ ಎನಿಸಿಕೊಂಡಿದ್ದ ಅವರು ತಮ್ಮ ಹಾಸ್ಯಾಭಿನಯದಿಂದ ಆಪಾರ ಅಭಿಮಾನಿಗಳನ್ನು ಹೊಂದಿದ್ದರು. ಜಿಲ್ಲೆಯ ಪ್ರಸಿದ್ಧ ರಂಗ ಸಂಸ್ಥೆ ರೂಪಕಲಾ ನಾಟಕ ಸಂಸ್ಥೆ ಹಾಗೂ ಲಕ್ಷ್ಮೀ ವೆಂಕಟೇಶ ಕೊಂಕಣಿ ನಾಟಕ ಸಭಾದ ಸಂಸ್ಥಾಪಕರಾಗಿದ್ದ ಅವರು 70 ರ ದಶಕದಲ್ಲಿ ನಾಟಕ ಕಂಪೆನಿಯನ್ನು ಕಟ್ಟಿ ಅದರ ಉಳಿವಿಗಾಗಿ ಸಾಕಷ್ಟು ಹೋರಾಟ ನಡೆಸಿದ್ದರು. ಅವರ 'ಮೂರು ಮುತ್ತುಗಳು' ನಾಟಕ ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಸೇರಿ ಒಟ್ಟು 600 ಕ್ಕಿಂತಲೂ ಹೆಚ್ಚಿನ ಪ್ರಯೋಗಗಳನ್ನು ಕಂಡಿತ್ತು..

2009: ಚಲನಚಿತ್ರಗಳಲ್ಲಿ ಧೂಮಪಾನ ದೃಶ್ಯಗಳನ್ನು ನಿಷೇಧಿಸಿ ಕೇಂದ್ರ ಸರ್ಕಾರ ಹೊರಡಿಸಿದ ಅಧಿಸೂಚನೆಯನ್ನು ದೆಹಲಿ ಹೈಕೋರ್ಟ್ ರದ್ದು ಪಡಿಸಿತು. 'ಸರ್ಕಾರದ ಇಂತಹ ಕ್ರಮ ಚಿತ್ರ ನಿರ್ಮಾಪಕರ ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲಭೂತ ಹಕ್ಕಿಗೆ ಚುತ್ಯಿ ತರುತ್ತದೆ' ಎಂದು ಹೈಕೋರ್ಟ್ ಸಮನ್ವಯ ಪೀಠ ಹೇಳಿತು. 2006ರ ಅಕ್ಟೋಬರಿನಲ್ಲಿ ಕೇಂದ್ರ ಸರ್ಕಾರ ಹೊರಡಿಸಿದ್ದ 'ತೆರೆ ಮೇಲೆ ಧೂಮಪಾನ ಸಲ್ಲದು' ಎಂಬ ನಿಬಂಧನೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ಸಮನ್ವಯ ಪೀಠದ ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಅವರು, ಸರ್ಕಾರದ ಈ ಕ್ರಮ ನಿರ್ದೇಶಕರು ಹಾಗೂ ನಿರ್ಮಾಪಕರ ಕತ್ತು ಹಿಸುಕುವ ಕೆಲಸವಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದರು. ಹಿಂದಿನ ವರ್ಷ ಬಾಲಿವುಡ್ ನಿರ್ದೇಶಕ ಮಹೇಶ್ ಭಟ್ ಅವರು ಸರ್ಕಾರದ ಕ್ರಮವನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ಹೈಕೋರ್ಟ್ ವಿಭಾಗೀಯ ಪೀಠದ ನ್ಯಾಯಮೂರ್ತಿಗಳಾದ ಮುಕುಲ್ ಮುದ್ಗಲ್ ಹಾಗೂ ಸಂಜೀವ್ ಖನ್ನಾ ಅವರು ತೀರ್ಪಿನಲ್ಲಿ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ ಕಾರಣ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯವರು ಸಮನ್ವಯ ನ್ಯಾಯಮೂರ್ತಿಯಾಗಿ ಸಂಜಯ್ ಕಿಶನ್ ಕೌಲ್ ಅವರನ್ನು ನೇಮಕ ಮಾಡಿದ್ದರು.

2009: ಚೀನಾದ ಆಟಿಕೆಗಳ ಆಮದು ಮೇಲೆ ಮುಂದಿನ 6 ತಿಂಗಳ ಅವಧಿಗೆ ಭಾರತ ನಿಷೇಧ ಹೇರಿತು. ಅಗ್ಗದ ದರದಲ್ಲಿ ಕೆಳ ದರ್ಜೆಯ ಆಟಿಕೆಗಳನ್ನು ರವಾನಿಸಿ ದೇಶೀಯ ಮಾರುಕಟ್ಟೆಗೆ ಕಂಟಕವಾಗಿದ್ದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಕೇಂದ್ರ ಸರ್ಕಾರ ಈ ಕಠಿಣ ಕ್ರಮ ಕೈಗೊಂಡಿತು. ನಿಷೇಧಕ್ಕೆ ಆಟಿಕೆ ಆಮದು ಹೆಚ್ಚಳದ ಕಾರಣವನ್ನಷ್ಟೇ ತೋರಲಾಯಿತು. ಈ ಮೊದಲೇ ಚೀನಾದ ಕ್ಷೀರ , ಕ್ಷೀರೋತ್ಪನ್ನಗಳಿಗೆ ನಿಷೇಧ ವಿಧಿಸಲಾಗಿತ್ತು.

2009: ಪಾಕಿಸ್ಥಾನದ ದಕ್ಷಿಣ ಸಿಂಧ್ ಪ್ರಾಂತ್ಯದಲ್ಲಿ ಪ್ರಾಚೀನ ಮೊಹೆಂಜೊದಾರೊಕ್ಕಿಂತಲೂ ಹಳೆಯದಾದ, ಸುಮಾರು 5,500 ವರ್ಷಗಳ ಇತಿಹಾಸವಿರುವ ನಾಗರಿಕತೆಯ ಕುರುಹು ಪತ್ತೆಯಾಯಿತು. 22 ಪುರಾತತ್ವಶಾಸ್ತ್ರಜ್ಞರನ್ನು ಒಳಗೊಂಡ ತಂಡವೊಂದು ಸಿಂಧ್ ಪ್ರಾಂತ್ಯದ ಸುಕ್ಕರ್ ಜಿಲ್ಲೆಯ ಲಖಿಯಾ ಜೊ ದರೊದಲ್ಲಿ ಕೈಗೊಂಡ ಉತ್ಖನನದ ವೇಳೆ ಅಮೂಲ್ಯ ಹರಳುಗಳು, ಗೃಹೋಪಯೋಗಿ ಮಡಕೆಗಳು, ತಾಮ್ರ ಮತ್ತು ಇತರ ಲೋಹಗಳು ಪತ್ತೆಯಾದವು. 'ಇದು ಮೊಹೆಂಜೊದಾರೊ ನಾಗರಿಕತೆಗಿಂತ ಹಳೆಯದು ಎಂದು ನಾವು ಸದ್ಯ ಹೇಳಬಲ್ಲೆವು' ಎಂದು ಲಖಿಯಾ ಜೊ ದರೊ ಉತ್ಖನನ ಯೋಜನೆ ನಿರ್ದೇಶಕ ಗುಲಾಂ ಮುಸ್ತಫಾ 'ಡಾನ್' ಪತ್ರಿಕೆಗೆ ತಿಳಿಸಿದರು. ಮಣ್ಣಿನ ಪಾತ್ರೆಗಳು ಅಥವಾ ತವರ ಲೇಪಿತ ಪಾತ್ರೆಗಳು ಈ ಸ್ಥಳದಲ್ಲಿ ಪತ್ತೆಯಾದವು.

2008: ತಳಿಸಂಕರದಿಂದ ನಿರ್ಮಾಣವಾದ ಅಂಗಗಳಿಂದ (ಜಿನಟಿಕಲೀ ಎಂಜಿನಿಯರ್ಡ್ ಆರ್ಗನ್ಸ್) ಮನುಷ್ಯ ಈಗಿನ ಜೀವಿತಾವಧಿಗಿಂತ 10 ಪಟ್ಟು ಅಧಿಕ ಎಂದರೆ ಸುಮಾರು 800 ವರ್ಷ ಬದುಕುವುದು ಸಾಧ್ಯವಿದೆ ಎಂದು ಖ್ಯಾತ ಸಂಶೋಧಕ ವಾಲ್ಟರ್ ಲಾಂಗೋ ಹೇಳಿದರು. ಸಂಶೋಧಕರು ಈ ಮಾತನ್ನು ಸಾಬೀತುಪಡಿಸುವುದಕ್ಕಾಗಿ ಸಾಮಾನ್ಯವಾಗಿ ಒಂದೇ ವಾರದಲ್ಲಿ ನಾಶವಾಗುವ ಕಿಣ್ವ ಪಾಚಿ (ಈಸ್ಟ್ ಫಂಗಸ್) 10 ವಾರ ಅಥವಾ ಅದಕ್ಕಿಂತಲೂ ಹೆಚ್ಚು ಸಮಯ ಬದುಕುಳಿಯುವುದನ್ನು ತೋರಿಸಿಕೊಟ್ಟರು. ಈಸ್ಟ್ ನಲ್ಲಿನ ಎರಡು ತಳಿಗಳನ್ನು ಹೊರತೆಗೆದು ಅದನ್ನು ಕ್ಯಾಲೊರಿ ನಿಷೇಧಿತ ವಲಯದಲ್ಲಿ ಇರಿಸಿದಾಗ ಈ ಬೆಳವಣಿಗೆ ಕಂಡುಬಂತು. ಮನುಷ್ಯನ ಆಯುಷ್ಯವನ್ನೂ ಇದೇ ರೀತಿಯಲ್ಲಿ ಹೆಚ್ಚಿಸುವುದು ಸಾಧ್ಯವಿದೆ, ಆದರೆ ಯುವ ಜನತೆಗೆ ಅವಕಾಶ ಮಾಡಿಕೊಡಲಿಕ್ಕಾಗಿ ವಯೋವೃದ್ಧರು ಸಾಯುವಂತೆ ನೋಡಿಕೊಳ್ಳುವ ತಳಿಗುಣ ಮನುಷ್ಯನಲ್ಲಿ ಸಹಜವಾಗಿ ಬೆಳೆದು ಬಂದಿರಬೇಕು ಎಂದು ಅವರು ಅಂದಾಜಿಸಿದರು.

2008: ನಕಲಿ ಛಾಪಾ ಕಾಗದದ ಪ್ರಮುಖ ಆರೋಪಿ ಅಬ್ದುಲ್ ಕರೀಂ ಲಾಲಾ ತೆಲಗಿಯು ಸರ್ಕಾರಕ್ಕೆ ಕೋಟಿಗಟ್ಟಲೆ ವಂಚನೆ ಮಾಡಿದ ಹಗರಣವನ್ನು ಮೊತ್ತ ಮೊದಲಿಗೆ ಬಯಲಿಗೆಳೆದ ತಮಗೆ ನಿಯಮದ ಪ್ರಕಾರ ಪತ್ತೆಯಾದ ಹಣದ ಪಾಲು ನೀಡಲು ಸರ್ಕಾರಕ್ಕೆ ಆದೇಶಿಸುವಂತೆ ಜಯಂತ್ ತಿನೇಕರ್ ಹೈಕೋರ್ಟ್ ಮೊರೆ ಹೊಕ್ಕರು. ಈ ಸಂಬಂಧ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ನೋಟಿಸ್ ಜಾರಿ ಮಾಡಲು ಮುಖ್ಯ ನ್ಯಾಯಮೂರ್ತಿ ಸಿರಿಯಾಕ್ ಜೋಸೆಫ್ ಹಾಗೂ ನ್ಯಾಯಮೂರ್ತಿ ಬಿ. ಎಸ್. ಪಾಟೀಲ್ ಅವರನ್ನು ಒಳಗೊಂಡ ವಿಭಾಗೀಯ ಪೀಠವು ಆದೇಶಿಸಿತು. ಬೆಳಗಾವಿ ಜಿಲ್ಲೆಯ ಖಾನಾಪುರದ ಬಸ್ ನಿಲ್ದಾಣದ ಬಳಿ ಹಲಸಿನ ಹಣ್ಣು ಮಾರಿಕೊಂಡಿದ್ದ ತೆಲಗಿ ಏಕಾಏಕಿ ಸಿರಿವಂತನಾದುದಕ್ಕೆ ಸಂದೇಹ ಬಂದ ಕಾರಣ, ಅದರ ಬೆನ್ನಟ್ಟಿ ಹೋದ ತಮಗೆ ಆತನ ಜಾಲದ ಬಗ್ಗೆ ತಿಳಿದುಬಂತು ಎಂದು ತಿನೇಕರ್ ಅರ್ಜಿಯಲ್ಲಿ ತಿಳಿಸಿದ್ದಾರೆ. ತೆಲಗಿಯ ಕಾರ್ಯದ ಬಗ್ಗೆ 1996ರಲ್ಲಿಯೇ ಪೊಲೀಸರಲ್ಲಿ ದೂರು ದಾಖಲಿಸಿದ್ದೆ. 1998ರಲ್ಲಿ ಅಂದಿನ ರಾಷ್ಟ್ರಪತಿಗಳಿಗೂ ಈ ಬಗ್ಗೆ ಪತ್ರ ಬರೆದಿದ್ದೆ. ತಾವು ಈ ರೀತಿ ಮಾಡಿದ ಕಾರಣವೇ ತನಿಖೆ ನಡೆಸಲಾಯಿತು. ಸರ್ಕಾರಕ್ಕೆ ಸುಮಾರು 121 ಕೋಟಿ ರೂಪಾಯಿ ತೆರಿಗೆ ವಂಚನೆ ಮಾಡಿರುವ ಹಗರಣ ತನಿಖೆ ನಂತರ ಬೆಳಕಿಗೆ ಬಂತು ಎಂದು ಅವರು ತಿಳಿಸಿದರು. ಇಂತಹ ಪ್ರಕರಣಗಳನ್ನು ಬಹಿರಂಗ ಪಡಿಸಿದರೆ ಆ ಮೊತ್ತದ ಇಂತಿಷ್ಟು ಪಾಲು ಬಹಿರಂಗ ಪಡಿಸಿದ ವ್ಯಕ್ತಿಗೆ ನೀಡಬೇಕು ಎಂದು ಆದಾಯ ತೆರಿಗೆ ಕಾಯ್ದೆಯಲ್ಲಿ ಉಲ್ಲೇಖಿಸಲಾಗಿದೆ. ಆದರೆ ಸರ್ಕಾರ ತಮಗೆ ಕೇವಲ ಎರಡು ಸಾವಿರ ರೂಪಾಯಿಗಳನ್ನು ನೀಡಿ ಕೈತೊಳೆದುಕೊಂಡಿದೆ ಎಂದು ತಿನೇಕರ್ ದೂರಿದರು. ತಮಗೆ ಕನಿಷ್ಠ ಒಂದು ಕೋಟಿ ರೂಪಾಯಿ ನೀಡಲು ಆದೇಶಿಸುವಂತೆ ಏಕಸದಸ್ಯಪೀಠದ ಮುಂದೆ ಅರ್ಜಿ ಸಲ್ಲಿಸಿದಾಗ, ಪೀಠವು 2006ರ ಆಗಸ್ಟಿನಲ್ಲಿ ಸಿವಿಲ್ ಕೋರ್ಟಿನಲ್ಲಿ ದಾವೆ ಹೂಡುವಂತೆ ಆದೇಶಿಸಿತು. ಈ ಆದೇಶವನ್ನು ರದ್ದು ಮಾಡಿ, ತಮಗೆ ಸೂಕ್ತ ಮೊತ್ತ ನೀಡಲು ಸರ್ಕಾರಕ್ಕೆ ಸೂಚಿಸಬೇಕು ಎಂದು ಅವರು ಕೋರಿದರು.

2008: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯಲ್ಲಿ ಅವ್ಯವಹಾರ ನಡೆದಿರುವುದು ಪ್ರಾಥಮಿಕ ತನಿಖೆಯಿಂದ ದೃಢಪಟ್ಟ ಹಿನ್ನೆಲೆಯಲ್ಲಿ ಅಕಾಡೆಮಿಯ ಆಡಳಿತ ಮಂಡಳಿಯನ್ನು ರದ್ದು ಮಾಡಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸರ್ಕಾರಕ್ಕೆ ಶಿಫಾರಸು ಮಾಡಿತು. ವಿಶ್ವ ಕೊಡವ ಮೇಳದ ಹೆಸರಿನಲ್ಲಿ ಸರ್ಕಾರದ ಅನುಮತಿ ಪಡೆಯದೆ ಒಂದು ಸಾವಿರ ರೂಪಾಯಿ ಮುಖ ಬೆಲೆಯ ಲಾಟರಿ ಟಿಕೆಟುಗಳನ್ನು ಮುದ್ರಿಸಿ ಮಾರಾಟ ಮಾಡಿದ್ದಲ್ಲದೆ, ಗಣ್ಯರ ಹೆಸರಿನಲ್ಲಿ ನಕಲಿ ಸಹಿ ಸೃಷ್ಟಿಸಿ ಲಕ್ಷಾಂತರ ರೂಪಾಯಿ ದುರುಪಯೋಗಪಡಿಸಿಕೊಂಡಿರುವ ಆರೋಪಗಳ ಹಿನ್ನೆಲೆಯಲ್ಲಿ ಇಲಾಖೆ ಈ ಕ್ರಮ ಕೈಗೊಂಡಿತು.

2008: ವಿದ್ವಾಂಸರಾದ ಪಂಡಿತ ಸುಧಾಕರ ಚತುರ್ವೇದಿ, ಗುರುಮೂರ್ತಿ ಪೆಂಡಕೂರು, ಸಾಹಿತಿಗಳಾದ ಡಾ. ಬಿ.ನಂ.ಚಂದ್ರಯ್ಯ, ಪ್ರೊ.ಬಸವರಾಜ ಪುರಾಣಿಕ, ಡಾ.ಸರಜೂ ಕಾಟ್ಕರ್ ಅವರು ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿಯ 2007- 08ರ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಗೆ ಆಯ್ಕೆಯಾದರು. ಈಶ್ವರ ಚಂದ್ರ, ಸ್ನೇಹಲತಾ ರೋಹಿಡೇಕರ್ ಸೇರಿದಂತೆ ಐವರ ಕೃತಿಗಳನ್ನು ಅಕಾಡೆಮಿಯ 2006ರ ಸಾಲಿನ ಪುಸ್ತಕ ಬಹುಮಾನಕ್ಕೆ ಆಯ್ಕೆ ಮಾಡಲಾಗಿದೆ ಎಂದೂ ಅಕಾಡೆಮಿ ಅಧ್ಯಕ್ಷ ಡಾ.ಪ್ರಧಾನ್ ಗುರುದತ್ತ ಬೆಂಗಳೂರಿನಲ್ಲಿ ಪ್ರಕಟಿಸಿದರು.

2008: ಬೆಂಗಳೂರಿನ ಬಳಿಯ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮಾರ್ಚ್ 2008ರ 28ರಂದು ಪ್ರಧಾನಿ ಮನಮೋಹನ್ ಸಿಂಗ್ ಉದ್ಘಾಟಿಸುವರು ಎಂದು ರಾಜ್ಯಪಾಲ ರಾಮೇಶ್ವರ ಠಾಕೂರ್ ಪ್ರಕಟಿಸಿದರು.

2008: ಸತತ ಏಳು ವಹಿವಾಟಿನ ದಿನಗಳಲ್ಲಿ ದಾಖಲೆ ಪ್ರಮಾಣದಲ್ಲಿ ಕುಸಿತ ಕಂಡು ಹೂಡಿಕೆದಾರರಲ್ಲಿ ತಲ್ಲಣ ಮೂಡಿಸಿದ್ದ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು, ಈದಿನ ಚೇತರಿಕೆ ಹಾದಿಯಲ್ಲಿ ಸಾಗಿ ವಹಿವಾಟುದಾರರು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿತು. ಏಳು ದಿನಗಳಲ್ಲಿ ಕೊಚ್ಚಿಕೊಂಡು ಹೋಗಿದ್ದ ಒಟ್ಟು ಮಾರುಕಟ್ಟೆ ಮೌಲ್ಯದ ಐದರಲ್ಲಿ ಒಂದು ಭಾಗದಷ್ಟು ಸಂಪತ್ತನ್ನು ಈದಿನ ಮರಳಿ ಪಡೆದಂತಾಗಿದ್ದು ಹೂಡಿಕೆದಾರರ ಮೊಗದಲ್ಲಿ ಮತ್ತೆ ಸಂತಸ ಅರಳಿತು. 7 ದಿನಗಳ ಕುಸಿತದ ಪರಿಣಾಮವಾಗಿ 15.58 ಲಕ್ಷ ಕೋಟಿ ರೂಪಾಯಿಗಳಷ್ಟು ಸಂಪತ್ತು, ಸೂಚ್ಯಂಕ ಕುಸಿತದ ಕಾರಣಕ್ಕೆ ಕೊಚ್ಚಿಕೊಂಡು ಹೋಗಿತ್ತು. ಪೇಟೆಯಲ್ಲಿ ವಹಿವಾಟು ನಡೆಸುವ ಎಲ್ಲ ಷೇರುಗಳ ಒಟ್ಟು ಮಾರುಕಟ್ಟೆ ಮೊತ್ತವು ಹಿಂದಿನ ದಿನ 55,56,177 ಕೋಟಿ ರೂಪಾಯಿಗಳಷ್ಟಿತ್ತು. ಅದು ಈದಿನ 58,92,706 ಕೋಟಿ ರೂಪಾಯಿಗಳಿಗೆ ಏರಿತು.

2008: ಯಾವುದೇ ಒತ್ತಡ ಅಥವಾ ವಾದಕ್ಕೆ ಮಣಿದು ಸೇತುಸಮುದ್ರಂ ಕಡಲು ಕಾಲುವೆ ಯೋಜನೆಯನ್ನು ನಿಲ್ಲಿಸಬಾರದು ಎಂದು ತಮಿಳುನಾಡು ಸರ್ಕಾರವು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿತು. ತಮಿಳುನಾಡು ವಿಧಾನಸಭೆಯಲ್ಲಿ ಸಾಂಪ್ರದಾಯಿಕ ಭಾಷಣ ಮಾಡಿದ ರಾಜ್ಯಪಾಲ ಎಸ್. ಎಸ್. ಬರ್ನಾಲಾ, ಈ ಯೋಜನೆ ತಮಿಳುನಾಡು ಜನರ ದೀರ್ಘಕಾಲೀನ ಕನಸಾಗಿದೆ. 1860ರಿಂದ ಈ ಯೋಜನೆ ಬಗ್ಗೆ ಅಧ್ಯಯನ ನಡೆದಿದೆ. ಎಂಜನಿಯರಿಂಗ್ ಕ್ಷೇತ್ರದ ದಿಗ್ಗಜರೆಲ್ಲ ಸೇತುಸಮುದ್ರಂ ಯೋಜನೆಯ ಕಾರ್ಯ ಸಾಧ್ಯತೆ ಬಗ್ಗೆ ಹೇಳಿದ್ದಾರೆ ಎಂದು ನುಡಿದರು.

2008: ಎಸ್ ಜಿ ಎಫ್ ಪ್ರಾದೇಶಿಕ ಪಕ್ಷವು ಈದಿನ ಕಾಂಗ್ರೆಸ್ ಪಕ್ಷದೊಂದಿಗೆ ವಿಲೀನಗೊಂಡಿತು. ಈ ಬೆಳವಣಿಗೆಯಿಂದಾಗಿ 40 ಆಸನಗಳ ಗೋವಾ ವಿಧಾನ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರ ಸಂಖ್ಯೆ 16ರಿಂದ 18ಕ್ಕೆ ಏರಿದಂತಾಯಿತು. ಎಸ್ ಜಿ ಎಫ್ ವಿಲೀನ ಪ್ರಕ್ರಿಯೆಯಿಂದಾಗಿ ವಿಧಾನ ಸಭೆ ಸದಸ್ಯರಾದ ಚರ್ಚಿಲ್ ಅಲೆಮಾವೊ ಮತ್ತು ಅಲೆಕ್ಸೊ ರೆಜಿನಾಲ್ಡೊ ಲಾರೆನ್ಸ್ ಕಾಂಗ್ರೆಸ್ ಪಕ್ಷ ಸೇರಿದಂತಾಯಿತು.

2008: ದೇಶದಲ್ಲಿನ ಶೇಕಡಾವಾರು ಜನಸಂಖ್ಯೆಯ ಆಧಾರದ ಮೇಲೆ ಮುಸ್ಲಿಂ ಮತ್ತು ಕ್ರೈಸ್ತ ಸಮುದಾಯದ ದಲಿತರಿಗೆ ಮೀಸಲಾತಿ ಸೌಲಭ್ಯ ನೀಡಬೇಕು ಎಂದು ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗವು ಶಿಫಾರಸ್ಸು ಮಾಡಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟಿಗೆ ತಿಳಿಸಿತು. ಪರಿಶಿಷ್ಟರಿಗೆ ಈಗ ನೀಡಲಾಗುತ್ತಿರುವ ಶೇಕಡಾ 15 ಕೋಟಾಕ್ಕೆ ಧಕ್ಕೆ ಬಾರದಂತೆ ಮುಸ್ಲಿಂ ಮತ್ತು ಕ್ರೈಸ್ತ ಸಮುದಾಯದ ದಲಿತರಿಗೆ ಜನಸಂಖ್ಯೆಯ ಅಧಾರದ ಮೇಲೆ ಕೇಂದ್ರ ಸರ್ಕಾರ ಮೀಸಲಾತಿ ನೀಡಬಹುದು ಎಂದು ಆಯೋಗವು ಸರ್ಕಾರಕ್ಕೆ ಬರೆದ ಪತ್ರವನ್ನು ಸರ್ಕಾರದ ಪರ ವಕೀಲರು ನ್ಯಾಯಾಲಯದಲ್ಲಿ ಹಾಜರುಪಡಿಸಿದರು. ಸುಪ್ರೀಂ ಕೋರ್ಟಿನ ಆದೇಶದಂತೆ ಮೀಸಲಾತಿ ಶೇಕಡಾ 50ರಷ್ಟು ಮೀರದಂತೆ ನೋಡಿಕೊಂಡು ಆಯೋಗದ ಶಿಫಾರಸ್ಸುಗಳನ್ನು ಜಾರಿ ಮಾಡಬೇಕು ಎಂದು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಗೆ ತಿಳಿಸಲಾಗಿತ್ತು ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು.

2008: ಮಾವೋವಾದಿಗಳ ಲೇಖನಗಳನ್ನು ಮುದ್ರಿಸುತ್ತಿದ್ದ ಮುದ್ರಣಾಲಯವನ್ನು ಪೊಲೀಸರು ಪತ್ತೆ ಹಚ್ಚಿ ಅದನ್ನು ಮುಟ್ಟುಗೋಲು ಹಾಕಿಕೊಂಡು ಅಪಾರ ಪ್ರಮಾಣದ ದೇಶೀಯ ಬಂದೂಕುಗಳನ್ನು ವಶಪಡಿಸಿಕೊಂಡರು. ಈ ಸಂಬಂಧ ಛತ್ತೀಸಗಢದಲ್ಲಿ ಹಲವರನ್ನು ವಶಕ್ಕೆ ತೆಗೆದುಕೊಂಡು ಡ ತೆಗೆದುಕೊಂಡು ವಿಚಾರಣೆ ನಡೆಸಲಾಯಿತು.

2007: ಬಾಗಲಕೋಟೆಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ 2005-06ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಿರಿಯ ನಟಿ ಜಯಂತಿ ಅವರಿಗೆ ರಾಜ್ ಕುಮಾರ್ ಪ್ರಶಸ್ತಿ, ವಿ. ರವಿಚಂದ್ರನ್ ಅವರಿಗೆ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ, ಛಾಯಾಗ್ರಾಹಕ ಎಸ್. ರಾಮಚಂದ್ರ ಅವರಿಗೆ ಜೀವಮಾನದ ಸಾಧನೆಗಾಗಿ ನೀಡಲಾಗುವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

2007: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಕಲಾವಿದ ಎಂ.ಎಸ್. ಚಂದ್ರಶೇಖರ್ (83) ಬೆಂಗಳೂರಿನಲ್ಲಿ ನಿಧನರಾದರು. ಮೂಲತಃ ಮೈಸೂರಿನವರಾದ ಚಂದ್ರಶೇಖರ್ ಅವರು ಅಜಂತಾ ಗುಹೆಗಳಲ್ಲಿನ ಚಿತ್ರಕಲೆಗಳ ಪ್ರತಿಮಾಡುವಲ್ಲಿ ಖ್ಯಾತಿ ಗಳಿಸಿದ್ದರು. ಅವರ ಕಲಾಕೃತಿಗಳನ್ನು ವಿಧಾನಸೌಧ, ಸಂಸತ್ ಭವನ, ವೆಂಕಟಪ್ಪ ಕಲಾಭವನ ಹಾಗೂ ಅಮೆರಿಕದ ವಸ್ತುಸಂಗ್ರಹಾಲಯಗಳಲ್ಲಿ ಸಂಗ್ರಹಿಸಿ ಇಡಲಾಗಿದೆ.

2007: ಅಂತಾರಾಷ್ಟ್ರೀಯ ಕರೆ, ನಿಮಿಷಕ್ಕೆ ಕೇವಲ 95 ಪೈಸೆ. ಇದು ವರ್ಲ್ಡ್ ಫೋನ್ ಇಂಟರ್ನೆಟ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ಡಿನ ಕೊಡುಗೆ. ಯಾವುದೇ ಶಾಸನಬದ್ಧ ಇಂಟರ್ನೆಟ್ ಟೆಲಿಫೋನಿ ಜಾಲದಲ್ಲಿ ಇದು ಅತ್ಯಂತ ಅಗ್ಗ. ನಿಮಿಷಕ್ಕೆ ಕೇವಲ 95 ಪೈಸೆ ದರದ ಈ ಅಂತಾರಾಷ್ಟ್ರೀಯ ಕರೆ ಸೇವೆಯನ್ನು ವರ್ಲ್ಡ್ ಫೋನ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ ಆರಂಭಿಸಿತು. ಈ ವ್ಯವಸ್ಥೆಯಡಿಯಲ್ಲಿ ಅಮೆರಿಕ, ಇಂಗ್ಲೆಂಡ್, ಕೆನಡಾ, ಫ್ರಾನ್ಸ್, ಜರ್ಮನಿ, ಹಾಂಕಾಂಗ್, ಇಟಲಿ, ಸಿಂಗಪುರ, ಸ್ವಿಟ್ಜರ್ ಲ್ಯಾಂಡ್ ಸೇರಿದಂತೆ 30 ರಾಷ್ಟ್ರಗಳಿಗೆ ಅಂತಾರಾಷ್ಟ್ರೀಯ ಕರೆಗಳನ್ನು ಮಾಡಬಹುದು. ವರ್ಲ್ಡ್ ಫೋನಿನ ವೆಬ್ ಸೈಟಿನಿಂದ (www.worldphone.in) ಡಯಲರನ್ನು ಡೌನ್ ಲೋಡ್ ಮಾಡಿಕೊಂಡು ಗ್ರಾಹಕರು ಈ ಅತೀ ಅಗ್ಗದ ಅಂತಾರಾಷ್ಟ್ರೀಯ ಕರೆಯ ಉಪಯೋಗ ಮಾಡಿಕೊಳ್ಳಬಹುದು. ಬ್ರಾಂಡೆಡ್ ಇಂಟರ್ನೆಟ್ ಪ್ರೊಟೊಕಾಲ್ ಫೋನ್ ಅಳವಡಿಸಿಕೊಳ್ಳುವ ಮೂಲಕವೂ ಈ ಕರೆ ಮಾಡಬಹುದು. ಕಂಪೆನಿಯ ಪೂರ್ವ ಪಾವತಿ ಇಂಟರ್ನೆಟ್ ಟೆಲಿಫೋನಿ ಕಾರ್ಡುಗಳನ್ನು ರೂ. 100, ರೂ. 250, ರೂ. 500 ಮತ್ತು ರೂ. 1000ದ ಮೊತ್ತಗಳಲ್ಲಿ ಒದಗಿಸುತ್ತದೆ. ಇವುಗಳ ಅವಧಿ 100 ದಿನಗಳು. ಕಾರ್ಡುಗಳನ್ನು ವರ್ಲ್ಡ್ ಟೆಲಿಫೋನ್ ವೆಬ್ ಸೈಟ್ ಅಥವಾ ಬಿಗ್ ಬಜಾರ್, ಆಕ್ಸಿಜನ್, ಇ ಪಿ ಆರ್ ಎಸ್ ಮತ್ತು ಪೇ ವರ್ಲ್ಡ್ ಸೇರಿದಂತೆ ಬಿಡಿ ಮಾರಾಟಗಾರರಿಂದ ಪಡೆಯಬಹುದು.

2006: ಬಾಲಿವುಡ್ಡಿನ ಖ್ಯಾತನಟಿ ಶಬಾನಾ ಆಜ್ಮಿ ಪ್ರತಿಷ್ಠಿತ ಕ್ರಿಸ್ಟಲ್ ಪ್ರಶಸ್ತಿಗೆ ಆಯ್ಕೆಯಾದರು. ವಿಶ್ವ ಆಥರ್ಿಕ ವೇದಿಕೆಯ ಈ ಪ್ರಶಸ್ತಿಯನ್ನು ಕಲಾಕ್ಷೇತ್ರದಲ್ಲಿ ಶಬಾನಾ ಅವರು ತೋರಿದ ಅಸಾಧಾರಣ ಸಾಧನೆಗಾಗಿ ನೀಡಲಾಯಿತು. ಹಾಲಿವುಡ್ ಸೂಪರ್ ಸ್ಟಾರ್ ಮೈಕೆಲ್ ಡಗ್ಲಾಸ್ ಅವರ ಜೊತೆಗೆ ಶಬಾನಾ ಈ ಪ್ರಶಸ್ತಿಯನ್ನು ಹಂಚಿಕೊಂಡರು.

2006: ಬೇರೆ ಪಕ್ಷಗಳ ಮುಖಂಡರು ಜೆಡಿ(ಎಸ್) ಒಡೆಯಲು ನಡೆಸಿದ ಸಂಚನ್ನು ವಿಫಲಗೊಳಿಸಿ ಪಕ್ಷದಲ್ಲಿ ಒಗ್ಗಟ್ಟು ಕಾಯ್ದುಕೊಳ್ಳಲು ಎಚ್. ಡಿ. ಕುಮಾರಸ್ವಾಮಿ ಮಾಡಿರುವ ಕೆಲಸವನ್ನು ಶ್ಲಾಘಿಸುವ ಮೂಲಕ ಜೆಡಿ(ಎಸ್) ರಾಷ್ಟ್ರೀಯ ಅಧ್ಯಕ್ಷ ಎಚ್. ಡಿ. ದೇವೇಗೌಡ ತಮ್ಮ ಮಗನ ಕ್ಷಿಪ್ರಕ್ರಾಂತಿಯನ್ನು ಬೆಂಬಲಿಸಿದರು.

2006: ಕ್ಲೀವ್ ಲ್ಯಾಂಡಿನ ವೆಸ್ಟರ್ನ್ ರಿಸರ್ವ್ ಬಿಸಿನೆಸ್ ಸ್ಕೂಲನ್ನು 2003ರಲ್ಲಿ ಏಳೂವರೆ ಗಂಟೆಗಳ ಕಾಲ ಒತ್ತೆಸೆರೆ ಇಟ್ಟುಕೊಂಡು ಒಬ್ಬ ವಿದ್ಯಾರ್ಥಿಯನ್ನು ಕೊಂದು ಇನ್ನಿಬ್ಬರನ್ನು ಗಾಯಗೊಳಿಸಿದ್ದಕ್ಕಾಗಿ ಕೋಲ್ಕತ್ತಾದಲ್ಲಿ ಜನಿಸಿದ ಅಮೆರಿಕದ ನಿವಾಸಿ ಬಿಸ್ವನಾಥ ಹಲ್ದರ್ ಗೆ (65) ಓಹಿಯೋದ ನ್ಯಾಯಾಧೀಶರು ಜೀವಾವಧಿ ಸಜೆಗೆ ಶಿಫಾರಸು ಮಾಡಿದರು. 2003ರ ಮೇ 9ರಂದು ನಡೆದ ಘಟನೆಯಲ್ಲಿ ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡಿನ ಜೊತೆಗೆ ಸ್ಕೂಲಿಗೆ ನುಗ್ಗಿದ್ದ ಹಲ್ದರ್ ಏಳೂವರೆ ಗಂಟೆ ಕಾಲ ಸ್ಕೂಲನ್ನು ವಶಕ್ಕೆ ತೆಗೆದುಕೊಂಡು ಯದ್ವಾತದ್ವ ಗುಂಡು ಹಾರಿಸಿ ನಾರ್ಮನ್ ವ್ಯಾಲೇಸ್ ಎಂಬಾತನನ್ನು ಕೊಂದು ಇನ್ನಿಬ್ಬರನ್ನು ಗಾಯಗೊಳಿಸಿದ್ದ. ಭಾರತದ ಉದ್ಯಮಿಗಳಿಗೆ ನೆರವಾಗುವ ಸಲುವಾಗಿ ತಾನು ರೂಪಿಸಿದ್ದ ವೆಬ್ ಸೈಟನ್ನು ಈ ಶಾಲೆಯ ಕಂಪ್ಯೂಟರ್ ಲ್ಯಾಬೋರೇಟರಿಯ ನೌಕರನೊಬ್ಬ ಹಾಳುಗಡೆವಿದ್ದಾನೆ ಎಂಬ ಶಂಕೆಯಿಂದ ಆತ ಈ ಕೃತ್ಯ ಎಸಗಿದ್ದ.

1977: ಭಾರತದಲ್ಲಿ ಜನತಾ ಪಕ್ಷದ ಉದಯವಾಯಿತು. ಆಳುವ ಕಾಂಗ್ರೆಸ್ ಮತ್ತು ತುರ್ತು ಪರಿಸ್ಥಿತಿಯ ವಿರುದ್ಧ ವಿರೋಧ ಪಕ್ಷಗಳು ಒಟ್ಟಾಗಿ ಜನತಾ ಪಕ್ಷವನ್ನು ಹುಟ್ಟು ಹಾಕಿದವು. ಕಾಂಗ್ರೆಸ್ (ಸಂಸ್ಥಾ), ಜನಸಂಘ, ಭಾರತೀಯ ಲೋಕದಳ ಮತ್ತು ಸಂಯುಕ್ತ ಸಮಾಜವಾದಿ ಪಕ್ಷಗಳು ಈ ಜನತಾ ಪಕ್ಷದಲ್ಲಿ ವಿಲೀನಗೊಂಡವು.

1931: ಲಾರ್ಡ್ ಇರ್ವಿನ್ ಮೊತ್ತ ಮೊದಲ ಬಾರಿಗೆ ನವದೆಹಲಿಯ `ವೈಸ್ ರಾಯ್ ಹೌಸ್' ನಲ್ಲಿ ವಾಸ್ತವ್ಯ ಹೂಡಿದರು. ಈ ಕಟ್ಟಡ ಈಗ `ರಾಷ್ಟ್ರಪತಿ ಭವನ' ಆಗಿದೆ. ಎಡ್ವಿನ್ ಲ್ಯುಟಿಯೆನ್ಸ್ ಈ ಕಟ್ಟಡದ ವಿನ್ಯಾಸಕಾರರಾಗಿದ್ದು, 1913ರಲ್ಲಿ ಕಟ್ಟಡ ನಿರ್ಮಾಣ ಆರಂಭವಾಯಿತು. 18,580 ಚದರ ಅಡಿಗಳಷ್ಟು ವ್ಯಾಪ್ತಿಯಲ್ಲಿ ನಿರ್ಮಾಣಗೊಂಡ ಈ ಕಟ್ಟಡದ ಒಟ್ಟು ವೆಚ್ಚ 1.40 ಕೋಟಿ ರೂಪಾಯಿಗಳು. ಲ್ಯೂಟಿಯನ್ಸನ ಶುಲ್ಕ 5000 ಪೌಂಡುಗಳು.

1927: ಬಾಳಾ ಕೇಶವ ಠಾಕ್ರೆ ಜನಿಸಿದರು. ಇವರು ವ್ಯಂಗ್ಯಚಿತ್ರಕಾರರಾಗಿ ವೃತ್ತಿ ಆರಂಭಿಸಿ ಮಹಾರಾಷ್ಟ್ರದ ಶಿವಸೇನೆ ಸ್ಥಾಪನೆ ಮೂಲಕ ಖ್ಯಾತಿ ಪಡೆದರು.

1897: ಈದಿನ ಜನಿಸಿದ ಸುಭಾಸ್ ಚಂದ್ರ ಬೋಸ್ ಅವರು ಭಾರತೀಯ ಕ್ರಾಂತಿಕಾರಿ ನಾಯಕರಾಗಿ ಎರಡನೇ ಜಾಗತಿಕ ಸಮರ ಕಾಲದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಲು ಭಾರತ ರಾಷ್ಟ್ರೀಯ ಸೇನೆ (ಆಜಾದ್ ಹಿಂದ್ ಫೌಜ್/ ಇಂಡಿಯನ್ ನ್ಯಾಷನಲ್ ಆರ್ಮಿ) ಸ್ಥಾಪಿಸಿದರು. `ನೇತಾಜಿ' ಎಂದೇ ಜನಪ್ರಿಯರಾದ ಇವರು 1945ರಲ್ಲಿ ಸಂಭವಿಸಿದ ವಿಮಾನ ಅಪಘಾತವೊಂದರಲ್ಲಿ ಮೃತರಾದರು ಎಂಬುದಾಗಿ ಸುದ್ದಿ ಪ್ರಸಾರಗೊಂಡರೂ ಇತ್ತೀಚಿನವರೆಗೂ ಅವರು ಬದುಕಿದ್ದರು ಎಂದೇ ಬಹುತೇಕ ಭಾರತೀಯರು ನಂಬಿದ್ದರು.

1893: ಸಂಗೀತ ತಜ್ಞ ರಾಳ್ಲಪಲ್ಲಿ ಅನಂತಕೃಷ್ಣ ಶರ್ಮ (23-1-1893ರಿಂದ 11-3-1979) ಅವರು ಕೃಷ್ಣಮಾಚಾರ್ಯ- ಅಲಮೇಲು ಮಂಗಮ್ಮ ದಂಪತಿಯ ಮಗನಾಗಿ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಕಂಬದೂರು ತಾಲ್ಲೂಕಿಗೆ ಸೇರಿದ ರಾಳ್ಲಪಲ್ಲಿಯಲ್ಲಿ ಜನಿಸಿದರು.

1814: ಅಲೆಗ್ಸಾಂಡರ್ ಕನ್ನಿಂಗ್ ಹ್ಯಾಮ್ (1814-1893) ಹುಟ್ಟಿದ ದಿನ. ಬ್ರಿಟಿಷ್ ಸೇನಾಧಿಕಾರಿ ಹಾಗೂ ಪ್ರಾಕ್ತನ ತಜ್ಞನಾಗಿದ್ದ ಈತ ಸಾರಾನಾಥ, ಸಾಂಚಿ ಸೇರಿದಂತೆ ಭಾರತದ ಹಲವಾರು ಚಾರಿತ್ರಿಕ ಸ್ಥಳಗಳಲ್ಲಿ ಉತ್ಖನನ ನಡೆಸಿದ ವ್ಯಕ್ತಿ. ಭಾರತೀಯ ಪ್ರಾಚ್ಯವಸ್ತು ಸಮೀಕ್ಷಾ ಸಂಸ್ಥೆಯ ಮೊದಲ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದ.

No comments:

Advertisement