Sunday, March 14, 2010

ಇಂದಿನ ಇತಿಹಾಸ History Today ಮಾರ್ಚ್ 14

ಇಂದಿನ ಇತಿಹಾಸ

ಮಾರ್ಚ್ 14

ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ತೀರ್ಮಾನಿಸಿದ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ನವದೆಹಲಿಯಲ್ಲಿ ಅಧಿಕೃತವಾಗಿ ಆ ಪಕ್ಷ ಸೇರಿದರು. ಇದರಿಂದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮಗ ಬಿ.ವೈ.ರಾಘವೇಂದ್ರ ವಿರುದ್ಧ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷಕ್ಕೆ ಅನಾಯಾಸವಾಗಿ ಒಬ್ಬ ಅಭ್ಯರ್ಥಿ ಸಿಕ್ಕಿದಂತಾಯಿತು.

2009: ರಾಜ್ಯ ಬಿಜೆಪಿಯಲ್ಲಿ ಎದ್ದಿದ್ದ ಬಿರುಗಾಳಿ ಬಂದ ವೇಗದಲ್ಲೇ ತಣ್ಣಗಾಗಿದೆಯೇನೋ ಎಂಬಂತೆ ಬಿಜೆಪಿಯ ಎಲ್ಲ ಮುಖಂಡರೂ ಬೆಂಗಳೂರಿನಲ್ಲಿ ಒಂದೇ ವೇದಿಕೆಯ ಮೇಲೆ ನಿಂತು ಮತದಾರರತ್ತ ಕೈಬೀಸುವುದರೊಂದಿಗೆ ಬಿಜೆಪಿ, ಲೋಕಸಭಾ ಚುನಾವಣೆಯ ಮತಯಾಚನೆಗೆ ಚಾಲನೆ ನೀಡಿತು. ಎಲ್.ಕೆ.ಅಡ್ವಾಣಿ ಅವರ ಸಮರ್ಥ ನಾಯಕತ್ವ, ಸುರಕ್ಷತೆ ಮತ್ತು ಸ್ಪಷ್ಟ ನೀತಿಯನ್ನು ಒಳಗೊಂಡ ನಿರ್ಣಾಯಕ ಸರ್ಕಾರ ನೀಡುವುದಾಗಿ ಬಿಜೆಪಿ ಭರವಸೆ ನೀಡಿತು. ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರದ ತಾರತಮ್ಯ ಧೋರಣೆ, ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ಸಾಧನೆಗಳನ್ನು ಜನರ ಮುಂದಿಡಲು ಸಹ ನಿರ್ಧರಿಸಿತು.

2009: ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ತೀರ್ಮಾನಿಸಿದ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ನವದೆಹಲಿಯಲ್ಲಿ ಅಧಿಕೃತವಾಗಿ ಆ ಪಕ್ಷ ಸೇರಿದರು. ಇದರಿಂದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮಗ ಬಿ.ವೈ.ರಾಘವೇಂದ್ರ ವಿರುದ್ಧ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷಕ್ಕೆ ಅನಾಯಾಸವಾಗಿ ಒಬ್ಬ ಅಭ್ಯರ್ಥಿ ಸಿಕ್ಕಿದಂತಾಯಿತು.. 2004ರ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗೆ ಮುನ್ನ ಬಂಗಾರಪ್ಪ ಕಾಂಗ್ರೆಸ್ ತ್ಯಜಿಸಿ ಬಿಜೆಪಿ ಸೇರಿದ್ದರು. ಆದರೆ ಒಂದೇ ವರ್ಷದ ಅವಧಿಯಲ್ಲಿ ಆ ಪಕ್ಷವನ್ನೂ ತೊರೆದು ಸಮಾಜವಾದಿ ಪಕ್ಷ ಸೇರಿದ್ದರು.

2009: ಈಶಾನ್ಯ ಸಿರಿಯಾದ ವಸಾಹತು ಪ್ರದೇಶವೊಂದರಲ್ಲಿ ಸುಮಾರು 9000 ವರ್ಷಗಳಷ್ಟು ಪುರಾತನವಾದದ್ದು ಎಂದು ನಂಬಲಾದ ಬಾವಿಯೊಂದರ ಅವಶೇಷಗಳನ್ನು ಪುರಾತತ್ವ ಸಂಶೋಧಕರು ಪತ್ತೆ ಹಚ್ಚಿದರು. ಈ ಬಾವಿಯನ್ನು ಆ ಕಾಲದಲ್ಲಿ ನೀರು ಶುದ್ಧಿಕರಣಕ್ಕಾಗಿ ಬಳಸುತ್ತಿದ್ದಿರಬಹುದು ಎಂದು ನಂಬಲಾಯಿತು. ಬಹುಶ: ನೀರು ಶುದ್ಧಿಕರಣದ ಉದ್ದೇಶಕ್ಕಾಗಿಯೇ ಬಳಸುತ್ತಿದ್ದ ಅತ್ಯಂತ ಪುರಾತನ ಬಾವಿ ಇದು ಎಂದು ಟೋಕಿಯೋ ವಿಶ್ವ ವಿದ್ಯಾಲಯದ ವಸ್ತುಸಂಗ್ರಹಾಲಯದ ಪ್ರೊಫೆಸರ್ ಯೊಶಿಹಿರೊ ನಿಶಿಯಾಕಿ ಹೇಳಿದರು. ಜನರಲ್ಲಿ ನೀರು ಶುದ್ಧೀಕರಣದ ವಿಚಾರಗಳು ಹೇಗೆ ಬೆಳೆದು ಬಂದವು ಎಂಬುದನ್ನು ಈ ಬಾವಿ ತೋರಿಸುತ್ತದೆ ಎಂದು ಅವರು ನುಡಿದರು. ಇಸ್ರೇಲಿನಲ್ಲಿ ಪತ್ತೆಯಾಗಿದ್ದ 6000 ವರ್ಷಗಳಷ್ಟು ಪುರಾತನವಾದ ಬಾವಿಯೇ ನೀರು ಶುದ್ಧಿಕರಣ ಸಲುವಾಗಿ ನಿರ್ಮಿಸಲಾಗಿದ್ದ ಅತ್ಯಂತ ಪುರಾತನ ಬಾವಿ ಎಂಬುದಾಗಿ ನಂಬಲಾಗಿತ್ತು ಎಂದು ಪುರಾತತ್ವ ಸಂಶೋಧಕರ ತಂಡ ಹೇಳಿತು. ಕಳೆದ ಆಗಸ್ಟ್ ತಿಂಗಳಲ್ಲಿ ಪತ್ತೆಯಾದ ಸಿರಿಯಾದ ಈ ಪುರಾತನ ಬಾವಿ ಸುಮಾರು 2.5 ಮೀಟರ್ ಸುತ್ತಳತೆ ಹೊಂದಿದ್ದು, ಅಂದಾಜು 4 ಮೀಟರ್ ಆಳವಿದೆ. ಜನಸಂಖ್ಯೆ ಹೆಚ್ಚಿದಾಗ ಕಲುಷಿತ ನೀರಿನ ಬಳಕೆಯಿಂದ ಸಾಂಕ್ರಾಮಿಕ ರೋಗಗಳು ಹರಡಬಹುದು ಎಂಬ ಭೀತಿಯಿಂದ ಈ ವಸತಿ ಪ್ರದೇಶದ ಜನ ಶುದ್ಧ ನೀರು ಪಡೆಯ ಬಯಸಿದ್ದಿರಬಹುದು ಎಂದು ನಿಶಿಯಾಕಿ ನುಡಿದರು. ಯೂಪ್ರೆಟಿಸ್ ನದಿಯ ಉಪನದಿಯೊಂದು ಈ ಬಾವಿಯಿಂದ ಸುಮಾರು 100 ಮೀಟರ್ ದೂರದಲ್ಲಿ ಹರಿಯುತ್ತದೆ. ಇದರರ್ಥ ಇಲ್ಲಿನ ನಿವಾಸಿಗಳು ನೀರು ಪಡೆಯುವ ಉದ್ದೇಶವನ್ನಷ್ಟೇ ಹೊಂದಿರಲಿಲ್ಲ, ಬದಲಾಗಿ ಶುದ್ಧ ನೀರು ಪಡೆಯುವ ಉದ್ದೇಶ ಹೊಂದಿದ್ದರು ಎಂಬುದನ್ನು ಈ ಬಾವಿ ತೋರಿಸುತ್ತದೆ ಎಂಬುದು ಪುರಾತತ್ವ ತಜ್ಞರ ತಂಡದ ಅಭಿಪ್ರಾಯ.

2009: ಬಿಂಬಗಳು ಅಥವಾ ವಿಡಿಯೋಗಳನ್ನು ಹಿಡಿದು ಇರಿಸಿಕೊಳ್ಳಬಲ್ಲಷ್ಟು ಸಾಮರ್ಥ್ಯದ ಹೊಸ 'ಬಾರ್ ಕೋಡ್'ಗಳನ್ನು ತಾವು ಅಭಿವೃದ್ಧಿ ಪಡಿಸಿರುವುದಾಗಿ ವಾಷಿಂಗ್ಟನ್ ವಿಜ್ಞಾನಿಗಳು ಪ್ರತಿಪಾದಿಸಿದರು. ಈ ಹೊಸ ಬಾರ್ ಕೋಡ್‌ಗಳಲ್ಲಿನ ಬಿಂಬ ಅಥವಾ ವಿಡಿಯೋಗಳನ್ನು ನಂತರ ಕ್ಯಾಮರಾ ಫೋನ್‌ಗಳ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದು. ಬಹುಮಾಧ್ಯಮ ಮಾಹಿತಿಯನ್ನು ಬಾರ್ ಕೋಡ್‌ಗಳಲ್ಲಿ ಶೇಖರಿಸಿ ಇಡಬಹುದಾದಂತಹ ಮಾರ್ಗವನ್ನು ತಾವು ಪರಿಶೀಲಿಸುತ್ತಿರುವುದಾಗಿ ಎಡಿತ್ ಕೊವಾನ ವಿಶ್ವ ವಿದ್ಯಾಲಯದ ವಿಜ್ಞಾನಿಗಳ ತಂಡವೊಂದು ಹೇಳಿತು. ಮೊಬೈಲ್ ಫೋನ್ ಕ್ಯಾಮರಾದ ಮೂಲಕ ಭಾವಚಿತ್ರ ತೆಗೆಯುವಂತೆ ಮ್ಯಾಗಜಿನ್‌ಗಳಂತಹ ಮಾಧ್ಯಮಗಳಿಂದ ರಿಂಗ್ ಟೋನ್‌ನ್ನು ಡೌನ್‌ಲೋಡ್ ಮಾಡಲು ಅನುವು ಮಾಡಿಕೊಡುವಂತಹ ಮಾದರಿಯ ಸಾಫ್ಟ್‌ವೇರ್‌ನ್ನು ಒಳಗೊಂಡ ಯಾವುದಾದರೂ ವಿಧಾನದ ಮೂಲಕ ಬಹುಮಾಧ್ಯಮ ಮಾಹಿತಿಯನ್ನು ಬಾರ್ ಕೋಡ್‌ಗಳಲ್ಲಿ ಶೇಖರಿಸಿ ಇಡುವ ಬಗ್ಗೆ ತಂಡ ಪರಿಶೀಲನೆ ನಡೆಸಿದೆ ಎಂದು ವಿಜ್ಞಾನಿಗಳು ಹೇಳಿದರು. ಈ ಹೊಸ ಬಾರ್ ಕೋಡ್‌ಗೆ 'ಮೊಬೈಲ್ ಮಲ್ಟಿ ಕಲರ್ ಕಂಪೋಸಿಟ್ (ಎಂಎಂಸಿಸಿ) 2ಡಿ - ಬಾರ್‌ಕೋಡ್' ಎಂದು ವಿಜ್ಞಾನಿಗಳು ಹೆಸರಿಟ್ಟರು. 'ಎಂಎಂಸಿಸಿಯು ಎರಡು ಆಯಾಮದ ವರ್ಣ ಬಾರ್‌ಕೋಡ್. ಇದನ್ನು ಮುದ್ರಣ ಮಾಧ್ಯಮದಲ್ಲಿ ಮುದ್ರಿಸಬಹುದಾಗಿದ್ದು ಮಾಹಿತಿ ಶೇಖರಣೆಯ ಅತ್ಯುನ್ನತ ಸಾಮರ್ಥ್ಯ ಹೊಂದಿರುತ್ತದೆ ಮತ್ತು ಮೊಬೈಲ್ ಫೋನ್‌ಗೆ ತತ್ ಕ್ಷಣ ಅನ್ವಯಿಸುವಂತಿರುತ್ತದೆ' ಎಂದು ಮುಂಚೂಣಿಯ ವಿಜ್ಞಾನಿ ಡಾ. ಅಲ್ಫ್ರೆಡ್ ಟಾನ್ ನುಡಿದರು. ಎಂಎಂಸಿಸಿ ಬಳಸುವ ಮೂಲಕ ಬಳಕೆದಾರನು ಡಿಜಿಟಲ್ ಮಾಹಿತಿಯನ್ನು ತನ್ನ ಕ್ಯಾಮರಾ ಮೊಬೈಲ್ ಫೋನ್ ಮೂಲಕ ಬಾರ ಕೋಡ್ ಬಿಂಬವನ್ನು ಸೆರೆ ಹಿಡಿದು ಮೊಬೈಲ್ ಮೂಲಕ ನೇರವಾಗಿ ಅದರೊಳಗಿರುವ ವಿಡಿಯೋವನ್ನು ನೋಡಬಹುದು ಎಂದು ಅವರು ಹೇಳಿದರು.

2009: ಸರ್ಕಾರದ ಮಾಧ್ಯಮ ನೀತಿ ಕುರಿತಂತೆ ಹಿರಿಯ ನಾಯಕರೊಂದಿಗೆ ನಾಯಕರಲ್ಲಿ ಭಿನ್ನಾಭಿಪ್ರಾಯ ಮೂಡಿದ ಹಿನ್ನೆಲೆಯಲ್ಲಿ ಪಾಕಿಸ್ಥಾನದ ವಾರ್ತಾ ಸಚಿವೆ ಶೆರ್ರಿ ರಹಮಾನ್ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ಕೊಟ್ಟಿದ್ದಾರೆ ಎಂದು ಜಿಯೋ ಟಿವಿ ವರದಿ ಮಾಡಿತು.

2008: ಕರ್ನಾಟಕ ಹೈಕೋರ್ಟಿನಲ್ಲಿ ಪ್ರಥಮ ಬಾರಿಗೆ ಕನ್ನಡದಲ್ಲಿ ತೀರ್ಪು ನೀಡುವ ಮೂಲಕ ನ್ಯಾಯಮೂರ್ತಿ ಅರಳಿ ನಾಗರಾಜ್ ಚಾರಿತ್ರಿಕ ದಾಖಲೆ ನಿರ್ಮಿಸಿದರು. ಸುವರ್ಣ ವರ್ಷಾಚರಣೆ ಸಂತಸದ ಮಧ್ಯೆ ಹೈಕೋರ್ಟ್ ಈ ಐತಿಹಾಸಿಕ ದಾಖಲೆ ನಿರ್ಮಿಸಿ ಈ ದಿನವನ್ನು ಸುವರ್ಣಾಕ್ಷರದಲ್ಲಿ ಬರೆದಿಡುವ ದಿನವಾಗಿ ಮಾರ್ಪಡಿಸಿತು. ಭೂ ನ್ಯಾಯಮಂಡಳಿಯ ವಿವಾದವೊಂದಕ್ಕೆ ಸಂಬಂಧಿಸಿದಂತೆ ಸುಮಾರು ಎಂಟು ಪುಟಗಳ ತೀರ್ಪನ್ನು ನ್ಯಾಯಮೂರ್ತಿ ಅರಳಿ ನಾಗರಾಜ್ ಅವರು ಕನ್ನಡದಲ್ಲಿಯೇ ನೀಡಿ ಕೋರ್ಟ್ ಆವರಣದಲ್ಲಿ ನೆರೆದಿದ್ದ ವಕೀಲ ಸಮೂಹವನ್ನು ನಿಬ್ಬೆರಗಾಗಿಸಿದರು. ಬಳ್ಳಾರಿ ಜಿಲ್ಲೆ ಸಿರಗುಪ್ಪದ ಎಲ್. ಗೋವಿಂದರಾಜು ಹಾಗೂ ಇತರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳು ನಡೆಸಿದರು. `ಉಳುವವನೆ ಭೂಮಿಯ ಒಡೆಯ' ಎಂಬ ಸರ್ಕಾರದ ಆದೇಶದಂತೆ ಸಿರಗುಪ್ಪದಲ್ಲಿರುವ 3.25 ಎಕರೆ ಜಮೀನನ್ನು ತಮ್ಮ ಹೆಸರಿಗೆ ಮಾಡಿಸುವಂತೆ ಅವರು ಮಾಡಿಕೊಂಡ ಕೋರಿಕೆಯನ್ನು 1986ರಲ್ಲಿ ಭೂ ನ್ಯಾಯಮಂಡಳಿ ತಿರಸ್ಕರಿಸಿತ್ತು. ಈ ಆದೇಶವನ್ನು ಅವರು ಹೈಕೋರ್ಟಿನಲ್ಲಿ ಪ್ರಶ್ನಿಸಿದ್ದರು. ವಿಚಾರಣೆಯನ್ನು ಭೂ ನ್ಯಾಯಮಂಡಳಿಗೆ ಹಿಂದಿರುಗಿಸಿದ ನ್ಯಾಯಮೂರ್ತಿಗಳು ಈ ಕುರಿತು ಹೊಸದಾಗಿ ಪರಿಶೀಲಿಸುವಂತೆ ಸೂಚಿಸಿ ಅರ್ಜಿ ವಿಲೇವಾರಿ ಮಾಡಿದರು. ಕೋಲಾರ ಮೂಲದ ನ್ಯಾಯಮೂರ್ತಿ ಅರಳಿ ನಾಗರಾಜ್ ಅವರು ಈ ಹಿಂದೆ ಬೆಳಗಾವಿ, ಮಂಗಳೂರು, ವಿಜಾಪುರ ಹಾಗೂ ಬೆಂಗಳೂರಿನಲ್ಲಿ ಸೆಷನ್ಸ್ ಕೋರ್ಟುಗಳಲ್ಲಿ ನ್ಯಾಯಾಧೀಶರಾಗಿ ಕಾರ್ಯ ನಿರ್ವಹಿಸುತ್ತಿದ್ದಾಗ ಅನೇಕ ಆದೇಶಗಳನ್ನು ಕನ್ನಡದಲ್ಲಿಯೇ ನೀಡಿದ್ದರು. ಕಾನೂನಿಗೆ ಸಂಬಂಧಿಸಿದ ಅನೇಕ ಪುಸ್ತಕಗಳನ್ನು ಕೂಡಾ ಅವರು ಕನ್ನಡದಲ್ಲಿ ಬರೆದಿದ್ದಾರೆ. 2007ರ ಜುಲೈ 7ರಂದು ಹೈಕೋರ್ಟ್ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸುವ ಸಂದರ್ಭದಲ್ಲೂ ಇವರು ಕನ್ನಡದಲ್ಲಿಯೇ ಭಾಷಣ ಮಾಡಿ ಕನ್ನಡ ಪ್ರೇಮ ಮೆರೆದಿದ್ದರು.

2008: ಒಲ್ಲದ ಮನಸ್ಸಿನಿಂದಲೇ ರಾಜಕಾರಣಕ್ಕೆ ಬಂದು, ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ಹತ್ತು ವರ್ಷ ಕಾಲ ಯಶಸ್ವಿಯಾಗಿ ನಿಭಾಯಿಸಿ ಸಕ್ರಿಯ ರಾಜಕಾರಣದಲ್ಲಿ ದಶಮಾನೋತ್ಸವ ಆಚರಿಸಿದ ಸೋನಿಯಾ ಗಾಂಧಿ ಅವರನ್ನು ಪ್ರಧಾನಿ ಮನಮೋಹನ ಸಿಂಗ್ ಸೇರಿದಂತೆ ಕಾಂಗ್ರೆಸ್ಸಿನ ಹಲವು ಗಣ್ಯರು ಅಭಿನಂದಿಸಿದರು. ಪ್ರಧಾನಿ ಮನಮೋಹನ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ವಿಶೇಷ ಸಭೆಯಲ್ಲಿ ಸೋನಿಯಾ ಗಾಂಧಿ ಅವರನ್ನು ಪ್ರಶಂಸಿಸುವ ನಿರ್ಣಯವನ್ನು ಸ್ವೀಕರಿಸಲಾಯಿತು. `ಕಾಂಗೆಸ್ಸಿನ 122 ವರ್ಷಗಳ ಇತಿಹಾಸದಲ್ಲಿ ಇದೊಂದು ಮೈಲಿಗಲ್ಲು. ಪಕ್ಷಕ್ಕೆ ಬೆನ್ನೆಲುಬಿನಂತೆ ನಿಂತ ನಿಮಗೆ ನಾವು ಕೃತಜ್ಞರು' ಎಂಬ ನಿರ್ಣಯವನ್ನು ಅಂಗೀಕರಿಸಲಾಯಿತು.

2008: ಚಲನಚಿತ್ರ ರಂಗಕ್ಕೆ ನೀಡಿದ ಶ್ರೇಷ್ಠ ಕೊಡುಗೆಗಾಗಿ ಹಿರಿಯ ನಟ ಧರ್ಮೇಂದ್ರ ಅವರಿಗೆ ಮುಂಬೈಯಲ್ಲಿ ಮುಕ್ತಾಯಗೊಂಡ ಮಾಮಿ (ಮುಂಬೈ ಅಕಾಡೆಮಿ ಆಫ್ ಮೂವಿಂಗ್ ಇಮೇಜ್) ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಜೀವಮಾನದ ಸಾಧನೆಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ವರ್ಣರಂಜಿತ ಕಾರ್ಯಕ್ರಮದಲ್ಲಿ 35 ವರ್ಷಗಳಿಂದ ಬೆಳ್ಳಿಪರದೆಯ ಮೇಲೆ ಜನರನ್ನು ರಂಜಿಸಿದ ರಿಷಿ ಕಪೂರ್ ಅವರಿಗೆ ವಿಶೇಷ ಪ್ರಶಸ್ತಿಯನ್ನು ನೀಡಲಾಯಿತು. ಸ್ಪೇನಿನ ಚಲನಚಿತ್ರ ನಿರ್ದೇಶಕ ಕಾರ್ಲೋಸ್ ಸಾರಾ ಅವರಿಗೂ ಜೀವಮಾನದ ಸಾಧನೆಗಾಗಿ ಮೊದಲ ಜಾಗತಿಕ ಪ್ರಶಸ್ತಿ, ಸಾಹಿತಿ ಗುಲ್ಜಾರ್ ಅವರಿಗೆ ಭಾರತ ಸಿನೆಮಾ ಸಂಗೀತಕ್ಕೆ ನೀಡಿದ ಕೊಡುಗೆಗಾಗಿ ವಿಶೇಷ ಪ್ರಶಸ್ತಿ ನೀಡಲಾಯಿತು. ಚಿತ್ರರಂಗದ ದಿಗ್ಗಜರಾದ ದೇವ್ ಆನಂದ್, ಯಶ್ ಚೋಪ್ರಾ, ಐಶ್ವರ್ಯ ರೈ ಪ್ರಶಸ್ತಿ ಪ್ರದಾನ ಮಾಡಿದರು. ಭಾರತೀಯ ಸಿನೆಮಾ ವಿಭಾಗದಲ್ಲಿ ತಾರೆ ಜಮೀನ್ ಪರ್ ಚಿತ್ರದಲ್ಲಿನ ಉತ್ತಮ ಅಭಿನಯಕ್ಕಾಗಿ ದರ್ಶೀಲ್ ಸಫಾರಿ ಉತ್ತಮ ನಟ ಮತ್ತು `ಅಂತರ್ ದ್ವಂದ್ವ' ಚಿತ್ರದಲ್ಲಿನ ಅಭಿನಯಕ್ಕಾಗಿ ಸ್ವಾತಿ ಸೇನ್ ಉತ್ತಮ ನಟಿ ಪ್ರಶಸ್ತಿ ಪಡೆದರು. ವಿಮರ್ಶಕರ ಪ್ರಶಸ್ತಿಯನ್ನು ಮರಾಠಿ ಚಿತ್ರ `ಟಿಂಗ್ಯಾ' ಚಿತ್ರವು ಪಡೆದುಕೊಂಡಿತು. ಮಾರ್ಚ್ 6ರಿಂದ 13ರವರೆಗೆ ನಡೆದ ಚಲನಚಿತ್ರೋತ್ಸವದಲ್ಲಿ 45 ರಾಷ್ಟ್ರಗಳ 140 ಸಿನಿಮಾಗಳನ್ನು ಪ್ರದರ್ಶಿಸಲಾಯಿತು ಎಂದು `ಮಾಮಿ' ಚಲನಚಿತ್ರೋತ್ಸವದ ಅಧ್ಯಕ್ಷ ಶ್ಯಾಮ್ ಬೆನೆಗಲ್ ಹೇಳಿದರು.

2008: ಇಂಗ್ಲೆಂಡಿನಲ್ಲಿ ಇತ್ತೀಚೆಗೆ ವಲಸೆ ನಿಯಮಗಳಿಗೆ ತರಲಾದ ಬದಲಾವಣೆಗಳನ್ನು ಪ್ರತಿಭಟಿಸಿ ಲಂಡನ್ನಿನ ಭಾರತೀಯ ರೆಸ್ಟೋರೆಂಟುಗಳ ಮಾಲೀಕರು ಎಡಿನ್ ಬರೋದ ಸ್ಕಾಟಿಷ್ ಪಾರ್ಲಿಮೆಂಟ್ ಹೊರಭಾಗದಲ್ಲಿ ಪ್ರದರ್ಶನ ನಡೆಸಿದರು. ಇಂಗ್ಲೆಂಡಿನಲ್ಲಿ ವಲಸೆ ನಿಯಮಾವಳಿಗಳಿಗೆ ಮಾಡಲಾಗಿರುವ ಬದಲಾವಣೆಗಳು ಇಲ್ಲಿನ ಭಾರತೀಯ ಆಹಾರ ಉದ್ಯಮದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ ಎಂದು ಅವರು ಆಪಾದಿಸಿದರು. ಹೊಸ ನಿಯಮಾವಳಿಗಳು ಭಾರತೀಯ ರೆಸ್ಟೋರೆಂಟುಗಳು ಭಾರತ ಉಪಖಂಡದಿಂದ ಚೆಫ್ಗಳ ನೇಮಕ ಮಾಡುವುದನ್ನು ನಿರ್ಬಂಧಿಸುತ್ತವೆ. ಇದು ಇಂಗ್ಲೆಂಡಿನಲ್ಲಿ ಇರುವ ಸಹಸ್ರಾರು ಭಾರತೀಯ ರೆಸ್ಟೋರೆಂಟುಗಳ ಅಸ್ತಿತ್ವಕ್ಕೆ ಧಕ್ಕೆ ಉಂಟು ಮಾಡುತ್ತದೆ. ಚೆಫ್ಗಳ ಅಭಾವ ಕಾರಣ ಹಲವಾರು ರೆಸ್ಟೋರೆಂಟುಗಳು ಈಗಾಗಲೇ ಬಾಗಿಲು ಎಳೆದುಕೊಂಡಿವೆ.

2008: ಲಿಮ್ಕಾ ದಾಖಲೆಗಳ ಪುಸ್ತಕದಲ್ಲಿ ಏಷ್ಯಾದ ಅತಿ ಎತ್ತರದ ಮಹಿಳೆ ಎಂಬುದಾಗಿ ಹೆಸರು ದಾಖಲಿಸಿರುವ ಮೀರತ್ತಿನ ಮಹಿಳೆಯೊಬ್ಬರ ಮಗ ಒಂಬತ್ತು ತಿಂಗಳಿಗೇ ಮೂರಡಿ ಎತ್ತರ ಎಳೆದು ಅಮ್ಮನ ದಾರಿಯಲ್ಲೇ `ಲಿಮ್ಕಾ' ದಾಖಲೆ ಸೇರಲು ಹೊರಟ. ಒಂಬತ್ತು ತಿಂಗಳ ಮಗು ಮೂರು ಅಡಿ ಒಂದು ಅಂಗುಲ ಎತ್ತರ ಹಾಗೂ 22.5 ಕಿ.ಗ್ರಾಂ. ತೂಕ ಹೊಂದಿರುವುದು ಸಾಮಾನ್ಯವಲ್ಲ ಎಂಬುದು ಮೀರತ್ತಿನ ಜಿಂದಾಲ್ ಆಸ್ಪತ್ರೆಯ ವೈದ್ಯ ಮಧು ಹೇಳಿಕೆ. ಮಕ್ಕಳು ತಮ್ಮ ಪಾಲಕರಂತೆಯೇ ಎತ್ತರ ಬೆಳೆಯಬೇಕು ಎಂದೇನೂ ಇಲ್ಲ. ಆದರೆ ಈ ಬಾಲಕ (ಕರಣ್) ತನ್ನ ತಂದೆ ತಾಯಿಯರನ್ನು ಈ ವಿಚಾರದಲ್ಲಿ ಅನುಸರಿಸುವ ಎಲ್ಲ ಲಕ್ಷಣಗಳನ್ನೂ ತೋರುತ್ತಿದ್ದಾನೆ ಎಂಬುದು ಅವರ ಅಭಿಪ್ರಾಯ. ಸ್ವೆಲ್ತಾನ ಸಿಂಗ್ ಮತ್ತು ಸಂಜಯ ಸಿಂಗ್ ಪುತ್ರನಾಗಿ ಕರಣ್ 2007ರ ಜೂನ್ ತಿಂಗಳಲ್ಲಿ ಹುಟ್ಟಿದ್ದಾನೆ. ಹುಟ್ಟಿದಾಗ ಬಾಲಕನ ಎತ್ತರ 63 ಸೆಂಟಿಮೀಟರ್ ಮತ್ತು ತೂಕ 5.5 ಕಿ.ಗ್ರಾಂ. ಇತ್ತು. ಏಳು ಅಡಿ ಆರು ಅಂಗುಲ ಎತ್ತರ ಇರುವ ಸ್ವೆಲ್ತಾನ ಸಿಂಗ್ ಏಷ್ಯಾದ ಅತ್ಯಂತ ಎತ್ತರದ ಮಹಿಳೆ ಎಂಬುದಾಗಿ `ಲಿಮ್ಕಾ' ದಾಖಲೆಗಳ ಪುಸ್ತಕದಲ್ಲಿ ದಾಖಲಾಗಿದ್ದಾರೆ. ಪ್ರಕೃತಿ ಚಿಕಿತ್ಸಕ ಸಂಜಯ್ ಸಿಂಗ್ ಕೂಡಾ ಆರು ಅಡಿ ಆರು ಅಂಗುಲ ಎತ್ತರವಿದ್ದಾರೆ. ಸಿಂಗ್ ದಂಪತಿಗಳು ಮೀರತ್ತಿನ ಡಿಫೆನ್ಸ್ ಕಾಲೋನಿಯ ನಿವಾಸಿಗಳು.

2008: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರನ್ನು ಚುಂಬಿಸಿದ ಪ್ರಕರಣದಲ್ಲಿ ಬಂಧನ ವಾರೆಂಟ್ ಪಡೆದ ಹಾಲಿವುಡ್ ನಟ ರಿಚರ್ಡ್ ಗೇರ್ ವಿರುದ್ಧ ಇದ್ದ ಕ್ರಿಮಿನಲ್ ಅಪರಾಧ ಪ್ರಕರಣವನ್ನು ಸುಪ್ರೀಂಕೋರ್ಟ್ ಅಕ್ಷರಶಃ ಕೈಬಿಟ್ಟಿತು.
ರಿಚರ್ಡ್ ಗೇರ್ ಯಾವುದೇ ಭಯವಿಲ್ಲದೇ ಭಾರತಕ್ಕೆ ಬರಬಹುದು, ಇಲ್ಲಿಂದ ವಾಪಸಾಗಬಹುದು ಎಂದು ಮುಖ್ಯ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ಮತ್ತು ನ್ಯಾಯಮೂರ್ತಿ ಆರ್.ವಿ. ರವೀಂದ್ರನ್ ಅವರನ್ನು ಒಳಗೊಂಡ ಪೀಠ ಗೇರ್ ಅವರಿಗೆ ಅನುಮತಿ ನೀಡಿತು. ಅಲ್ಲದೇ ಗೇರ್ ವಿರುದ್ಧ ಜೈಪುರ ಹೈಕೋರ್ಟ್ ಹೊರಡಿಸಿದ ಬಂಧನ ವಾರಂಟನ್ನು ಸುಪ್ರೀಂಕೋರ್ಟ್ ಪೀಠ ರದ್ದುಪಡಿಸಿತು. ಗೇರ್ ವಿರುದ್ಧ ಅರ್ಜಿ ಸಲ್ಲಿಸಿದ್ದ ವ್ಯಕ್ತಿಯ ಪರ ವಾದಿಸಿದ ವಕೀಲರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಪೀಠ `ಇಂಥ ಕೃತ್ಯಗಳು ಅಗ್ಗದ ಜನಪ್ರಿಯತೆ ಪಡೆಯಲು ವಿನಃ ಬೇರೇನೂ ಸದುದ್ದೇಶಗಳು ಇರುವುದಿಲ್ಲ. ನೀವು ದೇಶಕ್ಕೆ ಕೆಟ್ಟ ಹೆಸರು ತರುತ್ತಿದ್ದೀರಿ. ಯಾರನ್ನಾದರೂ ತಬ್ಬಿಕೊಂಡರೂ ನೀವು ದೂರು ನೀಡುವಿರಾ?' ಎಂದು ಪ್ರಶ್ನಿಸಿತು.

2008: ಪಾಕಿಸ್ಥಾನ ಪೀಪಲ್ಸ್ ಪಾರ್ಟಿ ಸಹ-ಅಧ್ಯಕ್ಷ ಮತ್ತು ಮಾಜಿ ಪ್ರಧಾನಿ ದಿವಂಗತ ಬೆನಜೀರ್ ಭುಟ್ಟೊ ಅವರ ಪತಿ ಅಸೀಫ್ ಅಲಿ ಜರ್ದಾರಿ ಅವರು ತಮ್ಮ ವಿರುದ್ಧ ಹೊರಿಸಲಾಗಿದ್ದ ಭ್ರಷ್ಟಾಚಾರ ಆರೋಪಗಳ ಕೊನೆಯ ಪ್ರಕರಣದಿಂದ ಮುಕ್ತಿ ಪಡೆದರು. ಅವರನ್ನು `ನಿರ್ದೋಷಿ' ಎಂಬುದಾಗಿ ಪ್ರಕರಣದ ವಿಚಾರಣೆ ನಡೆಸಿದ ಭ್ರಷ್ಟಾಚಾರ ವಿರೋಧಿ ನ್ಯಾಯಾಲಯ ತೀರ್ಪು ನೀಡಿತು.

2008: ಕಮಲಾ ಗೋಯೆಂಕಾ ಪ್ರತಿಷ್ಠಾನ ನೀಡುವ ಹಿಂದಿ- ಕನ್ನಡ ಶ್ರೇಷ್ಠ ಅನುವಾದ ಪ್ರಶಸ್ತಿಗಾಗಿ ಡಾ.
ತಿಪ್ಪೇಸ್ವಾಮಿ ಮತ್ತು ಡಾ. ವಿ.ವೆಂಕಟೇಶ್ ಅವರನ್ನು ಆಯ್ಕೆ ಮಾಡಲಾಯಿತು. ಅಮೃತಲಾಲ್ ನಗರ್ ಅವರ ಹಿಂದಿ ಉಪನ್ಯಾಸದ ಕನ್ನಡ ಅನುವಾದ ಮಾಡಿರುವ ಡಾ.ತಿಪ್ಪೇಸ್ವಾಮಿ ಅವರು `ಪಿತಾಶ್ರೀ ಗೋಪಿರಾಂ ಗೋಯೆಂಕಾ ಹಿಂದಿ- ಕನ್ನಡ ಅನುವಾದ ಪುರಸ್ಕಾರ'ಕ್ಕೆ ಆಯ್ಕೆಯಾದರು. ಸಾಹಿತಿ ಡಾ.ವಿ.ವೆಂಕಟೇಶ್ ಅವರು `ಗೋಯೆಂಕಾ ಹಿಂದಿ ಸಾಹಿತ್ಯ ಸರಸ್ವತ್ ಸನ್ಮಾನ' ಪುರಸ್ಕಾರಕ್ಕೆ ಆಯ್ಕೆಯಾದರು ಎಂದು ಕಮಲಾ ಗೋಯೆಂಕಾ ಪ್ರತಿಷ್ಠಾನದ ಧರ್ಮದರ್ಶಿ ಶ್ಯಾಮ್ ಸುಂದರ್ ಗೋಯೆಂಕಾ ತಿಳಿಸಿದರು.

2007: ಸಾಹಿತ್ಯ ಸೇವೆಗಾಗಿ ಕರ್ನಾಟಕ ಸರ್ಕಾರವು ನೀಡುವ ಪ್ರತಿಷ್ಠಿತ ಪಂಪ ಪ್ರಶಸ್ತಿಗೆ ಈ ಸಾಲಿಗಾಗಿ ಹಿರಿಯ ವಿಮರ್ಶಕ ಜಿ.ಎಸ್. ಆಮೂರ, ಲೇಖಕಿಯರಿಗೆ ನೀಡಲಾಗುವ `ದಾನ ಚಿಂತಾಮಣಿ ಅತ್ತಿಮಬ್ಬೆ' ಪ್ರಶಸ್ತಿಗೆ ಹಿರಿಯ ಬರಹಗಾರ್ತಿ, ಮಾಜಿ ಸಚಿವೆ ಬಿ.ಟಿ. ಲಲಿತಾನಾಯಕ್ ಆಯ್ಕೆಯಾದರು.

2007: ಇಂಡೋನೇಷ್ಯಾದ ಸಲೀಂ ಸಮೂಹದ ವಿಶೇಷ ಆರ್ಥಿಕ ವಲಯಕ್ಕೆ ಭೂಮಿ ಸ್ವಾಧೀನ ಪ್ರಕ್ರಿಯೆ ವಿರೋಧಿಸಿ ಪೂರ್ವ ಮಿಡ್ನಾಪುರ ಜಿಲ್ಲೆಯ ನಂದಿ ಗ್ರಾಮದಲ್ಲಿ ಪ್ರತಿಭಟನಾ ಪ್ರದರ್ಶನ ನಡೆಸಿದ ರೈತರ ಮೇಲೆ ಪೊಲೀಸರು ಗುಂಡು ಹಾರಿಸಿದಾಗ 18 ಜನ ಮೃತರಾಗಿ, 75ಕ್ಕೂ ಹೆಚ್ಚು ಜನ ಗಾಯಗೊಂಡರು.

2007: ನಾಸಾದ ಕ್ಯಾಸಿನಿ ಬಾಹ್ಯಾಕಾಶ ನೌಕೆಯು ಶನಿ ಗ್ರಹದ ಒಂದು ದೊಡ್ಡ ಚಂದ್ರ `ಟೈಟನ್' ನಲ್ಲಿ ಬೃಹತ್ ಸಮುದ್ರಗಳ ಕುರುಹನ್ನು ಪತ್ತೆ ಹಚ್ಚಿತು. ಈ ಸಮುದ್ರಗಳ ಪೈಕಿ ಒಂದು ಉತ್ತರ ಅಮೆರಿಕದ `ಗ್ರೇಟ್ ಲೇಕ್ಸ್'ಗಿಂತಲೂ ದೊಡ್ಡದಾಗಿದೆ. ಈ ಸಮುದ್ರಗಳಲ್ಲಿ ದ್ರವರೂಪದ ಮಿಥೇನ್ ಅಥವಾ ಇಥೇನ್ ಇರುವ ಸಾಧ್ಯತೆಗಳಿವೆ ಎಂದು ವಿಜ್ಞಾನಿಗಳು ಪ್ರಕಟಿಸಿದರು.

2007: ಹೊಸ ನಗರ ಸಮೀಪದ ಚಕ್ರಾನಗರದಲ್ಲಿ ಗೋ ಪುರ ಪ್ರವೇಶ ಮತ್ತು ವಿಶ್ವ ಗೋ ಸಮ್ಮೇಳನದ ಪೂರ್ವ ಸಿದ್ಧತಾ ಸಮಾವೇಶವನ್ನು ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಉದ್ಘಾಟಿಸಿದರು.

2006: ರಾಸಾಯನಿಕಗಳನ್ನು ಬಳಸದೆ ನೈಸರ್ಗಿಕವಾಗಿ ಸಿಗುವ ಜಾಯಿಕಾಯಿ, ಲವಂಗ, ಏಲಕ್ಕಿ ಮತ್ತು ನೀಲಗಿರಿ ತೈಲದಿಂದ ತಯಾರಿಸಲಾದ ಹೊಸ `ಎಫರ್ ಮೆಂಟ್' ಹೆಸರಿನ ಟ್ರೂ ದೇಸಿ (ಟೂತ್) ಪೇಸ್ಟನ್ನು ಕ್ಯಾಂಪ್ಕೊ ಬೆಂಗಳೂರಿನಲ್ಲಿ ಬಿಡುಗಡೆ ಮಾಡಿತು.

2006: ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ ಸಪ್ತ ಸದಸ್ಯ ಸಮಿತಿಯು ಯೋಜನೆಯ ಅನುಷ್ಠಾನದಲ್ಲಿ `ಅನುಚಿತ ವರ್ತನೆಗಾಗಿ'ಗಾಗಿ ನಾಲ್ವರು ಸಂಸದರನ್ನು 2005 ಡಿಸೆಂಬರ್ 20ರಿಂದ 2006 ಮಾರ್ಚ್ 22ರವರೆಗೆ ಮೂರು ತಿಂಗಳ ಅವಧಿಗೆ ಅಮಾನತುಗೊಳಿಸಲು ಶಿಫಾರಸು ಮಾಡಿತು. `ಚರ್ಚಿಲ್ ಅಲೆಮಾವೊ (ಕಾಂಗ್ರೆಸ್), ಪಾರಸ್ ನಾಥ್ ಯಾದವ್ (ಎಸ್ ಪಿ), ಫಗನ್ ಸಿಂಗ್ ಕುಲಸ್ತೆ ಹಾಗೂ ರಾಮಸ್ವರೂಪ್ ಕೋಲಿ (ಇಬ್ಬರೂ ಬಿಜೆಪಿ) ಈ ನಾಲ್ಕೂ ಮಂದಿಗೆ ವಾಗ್ದಂಡನೆ ವಿಧಿಸುವಂತೆಯೂ ವಿ. ಕಿಶೋರ ಚಂದ್ರ ಎಸ್. ದೇವ್ ನೇತೃತ್ವದ ಸಂಸದೀಯ ಸಮಿತಿಯು ತನ್ನ 51 ಪುಟಗಳ ಸರ್ವಾನುಮತದ ವರದಿಯಲ್ಲಿ ಸೂಚಿಸಿತು. ಟೆಲಿವಿಷನ್ನಿನಲ್ಲಿ ತೋರಿಸಲಾದ `ಆಪರೇಷನ್ ಚಕ್ರವ್ಯೂಹ' (ಕುಟುಕು ಕಾರ್ಯಾಚರಣೆ) ಹಿನ್ನೆಲೆಯಲ್ಲಿ ತನಿಖೆ ಪೂರ್ಣಗೊಳ್ಳುವವರೆಗೆ ಸದನಕ್ಕೆ ಹಾಜರಾಗಬೇಡಿ ಎಂದು ಸಭಾಧ್ಯಕ್ಷರು ಈ ನಾಲ್ಕೂ ಮಂದಿ ಸಂಸದರಿಗೆ ಸೂಚಿಸಿದ್ದರು.

1990: ಸೋವಿಯತ್ ಕಾಂಗ್ರೆಸ್ ಮಿಖಾಯಿಲ್ ಗೊರ್ಬಚೆವ್ ಅವರನ್ನು ರಾಷ್ಟ್ರದ ಹೊಸ ಶಕ್ತಿಶಾಲಿ `ಆಧ್ಯಕ್ಷ' ಹುದ್ದೆಗೆ ಆಯ್ಕೆ ಮಾಡಿತು. ಹುದ್ದೆಯನ್ನು ಸೃಷ್ಟಿಸಿದ ಮರುದಿನ ಈ ಆಯ್ಕೆ ನಡೆಯಿತು.

1965: ಹಿಂದಿ ಚಿತ್ರನಟ ಅಮೀರ್ ಖಾನ್ ಹುಟ್ಟಿದ ದಿನ.

1959: ಕಲಾವಿದ ಡಾ. ಹನುಮಂತ ಬುರ್ಲಿ ಜನನ.

1949: ಕಲಾವಿದ ಎಂ.ಎಸ್. ಕೇಶವನ್ ಜನನ.

1948: ಈದಿನ ಜವಾಹರಲಾಲ್ ನೆಹರೂ ಅವರು ಸಿಂಧಿಯಾ ನೆವಿಗೇಷನ್ ಕಂಪೆನಿಯ ಎಸ್. ಎಸ್. ಜಲ ಉಷಾ ಹಡಗಿಗೆ ಚಾಲನೆ ನೀಡಿದರು. ಭಾರತದಲ್ಲೇ ನಿರ್ಮಿಸಲಾದ ಮೊತ್ತ ಮೊದಲ ಹಡಗು (ಸ್ಟೀಮರ್) ಇದು. ಇದನ್ನು ವಿಶಾಖಪಟ್ಟಣದಲ್ಲಿ ನಿರ್ಮಿಸಲಾಯಿತು.

1944: ಕಲಾವಿದ ಕೆ.ಪಿ. ಉಪಾಧ್ಯಾಯ ಜನನ.

1941: ಉಭಯಗಾನ ವಿದುಷಿ ಎಂದೇ ಹೆಸರು ಪಡೆದಿರುವ ಶ್ಯಾಮಲಾ ಜಿ. ಭಾವೆ ಅವರು ಗ್ವಾಲಿಯರ್ ಘರಾನಾ ಗಾಯಕ ಗೋವಿಂದ ವಿಠ್ಠಲ ಭಾವೆ ಮತ್ತು ಗಾಯಕಿ ಲಕ್ಷ್ಮೀ ಗೋವಿಂದ ಭಾವೆ ದಂಪತಿಯ ಮಗಳಾಗಿ ಬೆಂಗಳೂರಿನಲ್ಲಿ ಜನಿಸಿದರು. ತಂದೆಯಿಂದಲೇ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದಲ್ಲಿ ಶಿಕ್ಷಣ ಜೊತೆಗೆ ಕರ್ನಾಟಕ ಸಂಗೀತವನ್ನೂ ಕಲಿತ ಇವರು ಮುಂಬೈ ಕರ್ನಾಟಕ ಸಂಘದಿಂದ ಗಾನಕೋಗಿಲೆ, ರಾಜ್ಯೋತ್ಸವ ಪ್ರಶಸ್ತಿ, ರಾಜ್ಯ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ, ಸುರ್ ಸಿಂಗಾರ್ನ ಸುರಮಣಿ ಪ್ರಶಸ್ತಿ, ನ್ಯೂಯಾರ್ಕಿನ ಕೊಲಂಬಿಯಾ ವಿವಿಯ ನೈಟಿಂಗೇಲ್ ಆಫ್ ಇಂಡಿಯಾ ಪ್ರಶಸ್ತಿ, ಹೂಸ್ಟನ್ ವಿವಿಯ ಗೌರವ ಡಾಕ್ಟರೇಟ್ ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ ಭಾಜನರಾದವರು.

1938: ಕಲಾವಿದೆ ಇಂದಿರಾ ಆರ್. ಜನನ.

1935: ಕಲಾವಿದ ಬಸವರಾಜ ಸಿ. ಅಕ್ಕಿ ಜನನ.

1934: ಈಜೆನ್ ಸೆರ್ನಾನ್ ಹುಟ್ಟಿದ ದಿನ. ಅಮೆರಿಕಾದ ಗಗನಯಾನಿಯಾದ ಇವರು 1972ರಲ್ಲಿ ಚಂದ್ರನ ಮೇಲೆ ಇಳಿದ ಕೊನೆಯ ಮಾನವ. ಭೂಗರ್ಭತಜ್ಞ ಹ್ಯಾರಿಸನ್ ಸ್ಮಿಟ್ ಜೊತೆಗೆ ಚಂದ್ರನ ಮೇಲೆ ಇಳಿದ ಇವರು ಚಂದ್ರನ ನೆಲದ ಮೇಲೆ ಹೆಚ್ಚು ಸಮಯ ಕಳೆದ ಗಗನಯಾನಿ.

1932: ಕೊಡಕ್ ಕ್ಯಾಮರಾದ ಸಂಶೋಧಕ ಜಾರ್ಜ್ ಈಸ್ಟ್ ಮನ್ ಆತ್ಮಹತ್ಯೆ ಮಾಡಿಕೊಂಡ.

1931: ಭಾರತದ ಮೊದಲ ಟಾಕಿ ಚಿತ್ರ `ಆಲಂ ಅರಾ' ಬಾಂಬೆಯ (ಈಗಿನ ಮುಂಬೈ) ಮೆಜೆಸ್ಟಿಕ್ ಥಿಯೇಟರಿನಲ್ಲಿ ಬಿಡುಗಡೆಗೊಂಡಿತು. ಅರ್ಡೆಶಿರ್ ಎಂ. ಇರಾನಿ ನಿರ್ದೇಶನದ ಈ ಚಿತ್ರವನ್ನು ಇಂಪೀರಿಯಲ್ ಕಂಪೆನಿ ನಿರ್ಮಿಸಿತು. (ಅಂದು ಭಾರತದಲ್ಲಿ ಮೊತ್ತ ಮೊದಲ ಬಾರಿಗೆ ತೆರೆಯ ಮೇಲೆ ಚಲನಚಿತ್ರ ಮಾತಾಡಿತು. ಅದು `ಆಲಂ ಆರಾ'. ಮೂಕಿಯಿಂದ ಟಾಕಿಗೆ ಜಿಗಿದ ಮಹತ್ತರ ಗಳಿಗೆ. ಭಾರತೀಯ ಸಿನಿಮಾ ಜಗತಿನಲ್ಲಿ ಹೊಸದೊಂದು ಅಲೆಯನ್ನೇ ಎಬ್ಬಿಸಿದ `ಆಲಂ..'ನಿಂದ ಜನ ನಿಜಕ್ಕೂ ನಿಬ್ಬೆರಗಾದರು. `ಚಿತ್ರಗಳು ಮಾತನಾಡುತ್ತವೆ ಎಂದರೆ ಏನು?' ಎಂದು ಮುಂಬೈನ ಗಲ್ಲಿಗಲ್ಲಿಗಳಲ್ಲಿ ಜನ ನಿಂತು ಮಾತನಾಡತೊಡಗಿದರು. ಅದೊಂದು ಅದ್ಭುತವಾಗಿತ್ತು. ಆಶ್ಚರ್ಯವಾಗಿತ್ತು. ಸಿನೆಮಾ ಮಂದಿರಕ್ಕೆ ಜನತೆ ಮುಗಿಬಿತ್ತು. ತೆರೆಯ ಮೇಲೆ ತಮ್ಮ ಭಾಷೆಯನ್ನೇ ಮಾತನಾಡುವ ಮಾಸ್ಟರ್ ವಿಠಲ್, ಜುಬೇದಾ, ಪೃಥ್ವಿರಾಜ್ ಕಪೂರ್ ಅವರನ್ನು ನೋಡಲು ದೊಡ್ಡ ಗಲಾಟೆಯೇ ನಡೆಯಿತು. ಆ ಪರಿಯ ಜನಪ್ರವಾಹದಿಂದ ಬಾಕ್ಸ್ ಆಫೀಸೇ ಕಕ್ಕಾಬಿಕ್ಕಿಯಾಗುವ ಪರಿಸ್ಥಿತಿ. ಆ ದಿನದಲ್ಲೂ ಬ್ಲ್ಯಾಕ್ ಟಿಕೆಟ್ 50 ರೂಪಾಯಿಗೆ ಮಾರಾಟವಾದವು . ಅಂದು ಬಾಂಬೆ ರೋಮಾಂಚನಗೊಂಡಿತ್ತು.)

1928: ಫ್ರಾಂಕ್ ಬೋರ್ಮನ್ ಹುಟ್ಟಿದ ದಿನ. ಅಮೆರಿಕದ ಗಗನಯಾನಿಯಾದ ಇವರು ಜೇಮ್ಸ್ ಎ ಲೋವೆಲ್ ಮತ್ತು ವಿಲಿಯಂ ಅವರ ಜೊತೆಗೆ ಅಪೋಲೊ 8 ರ ಮೂಲಕ 1968ರಲ್ಲಿ ಚಂದ್ರನಿಗೆ ಸುತ್ತು ಹಾಕಿದರು. ಮಾನವ ಸಹಿತವಾಗಿ ಬಾಹ್ಯಾಕಾಶ ನೌಕೆ ಮೂಲಕ ಚಂದ್ರನಿಗೆ ಪ್ರದಕ್ಷಿಣೆ ಹಾಕಿದ ಮೊದಲ ಗಗನಯಾನ ಇದು.

1920: ಹ್ಯಾಂಕ್ ಕೆಚಮ್ (Hank Ketcham) (1920-2001) ಹುಟ್ಟಿದರು. ಅಮೆರಿಕಾದ ವ್ಯಂಗ್ಯಚಿತ್ರಕಾರರಾದ ಇವರು `ಡೆನ್ಸಿಸ್ ದಿ ಮಿನೇಸ್' ಸೃಷ್ಟಿ ಮೂಲಕ ಖ್ಯಾತರಾದರು.

1883 ಜರ್ಮನ್ ತತ್ವಜ್ಞಾನಿ ಕಾರ್ಲ್ ಮಾರ್ಕ್ಸ್ ಹುಟ್ಟಿದ ದಿನ.

1879: ಆಲ್ಬರ್ಟ್ ಐನ್ ಸ್ಟೀನ್ ಹುಟ್ಟಿದ ದಿನ. ಜರ್ಮನ್- ಅಮೆರಿಕನ್ ವಿಜ್ಞಾನಿಯಾದ ಇವರು `ಟೈಮ್' ಮ್ಯಾಗಜಿನ್ನಿನ `ಶತಮಾನದ ವ್ಯಕ್ತಿ' ಎನಿಸಿಕೊಂಡರು.

No comments:

Advertisement