My Blog List

Monday, March 22, 2010

ಇಂದಿನ ಇತಿಹಾಸ History Today ಫೆಬ್ರುವರಿ 16

ಇಂದಿನ ಇತಿಹಾಸ

ಫೆಬ್ರುವರಿ 16

2002 ರಲ್ಲಿ ಗುಜರಾತ್‌ನಲ್ಲಿ ನಡೆದ ಜನಾಂಗೀಯ ಹಿಂಸೆಯನ್ನು ಆಧಾರವಾಗಿಟ್ಟುಕೊಂಡು ನಟಿ ನಂದಿತಾ ದಾಸ್ ನಿರ್ದೇಶಿಸಿದ 'ಫಿರಾಕ್', ಕರಾಚಿ ಚಿತ್ರೋತ್ಸವದಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಪಾತ್ರವಾಯಿತು. ಕರಾಚಿ ಚಿತ್ರೋತ್ಸವದಲ್ಲಿ ಈ ಚಿತ್ರ ಪ್ರಥಮ ಪ್ರದರ್ಶನ ಕಂಡಿತು.

2009: ಲಲಿತ ಕಲಾ ಅಕಾಡೆಮಿಯು 2008ರ ಗೌರವ ಪ್ರಶಸ್ತಿ ಹಾಗೂ ಕಲಾ ಬಹುಮಾನಗಳನ್ನು ಗುಲ್ಬರ್ಗದಲ್ಲಿ ಅಕಾಡೆಮಿ ಅಧ್ಯಕ್ಷ ನಾಡೋಜ ಖಂಡೇರಾವ್ ಪ್ರಕಟಿಸಿದರು. ಈ ಸಾಲಿನ ಗೌರವ ಪ್ರಶಸ್ತಿಯನ್ನು ಈಶ್ವರಪ್ಪ ಜೀವಪ್ಪ ಹಮೀದ್ ಖಾನ್ (ಬಿಜಾಪುರ), ಎಲ್.ಶಿವಲಿಂಗಪ್ಪ (ಮೈಸೂರು) ಹಾಗೂ ಕೆ.ಎನ್ ರಾಮಚಂದ್ರನ್ (ಬೆಂಗಳೂರು) ಇವರಿಗೆ ಗೌರವ ಪ್ರಶಸ್ತಿಯನ್ನು ನೀಡಲಾಗಿದೆ ಎಂದು ಅವರು ಹೇಳಿದರು. ವಾರ್ಷಿಕ ಕಲಾಪ್ರದರ್ಶನಕ್ಕೆ ಆಯ್ಕೆಯಾದ 95 ಕಲಾಕೃತಿಗಳಲ್ಲಿ 10 ಜನರಿಗೆ ಕಲಾ ಬಹುಮಾನವನ್ನೂ ಘೋಷಿಸಲಾಯಿತು. ಶಿವಾನಂದ ಬಸವಂತಪ್ಪ (ಬೆಂಗಳೂರು), ಸುಬ್ರಮಣಿ ಜೆ. (ಬೆಂಗಳೂರು), ಸೈಯದ್ ಆಸಿಫ್ ಅಲಿ (ಮಂಗಳೂರು), ಗುರುರಾಜ ಆರ್. ಅಲಗೊಂಡ (ಬೆಂಗಳೂರು), ಶಫಿಕ್ ಜಿ.ಮಶಾಳಕರ್ (ಗುಲ್ಬರ್ಗ), ಪ್ರಭಾಕರ್ ಮಂಕಾಲ್ (ರಾಯಚೂರು), ಅರುಣಾ ಭಟ್ (ಯಲ್ಲಾಪುರ), ಕೆ.ಜೆ ಪ್ರದೀಪ್ (ತುಮಕೂರು), ಮುರಳೀಧರ ಬಿ.ಎಂ. (ಚನ್ನರಾಯ ಪಟ್ಟಣ), ಎಸ್.ನಟರಾಜ್ (ಬೆಂಗಳೂರು).

2009: 2002 ರಲ್ಲಿ ಗುಜರಾತ್‌ನಲ್ಲಿ ನಡೆದ ಜನಾಂಗೀಯ ಹಿಂಸೆಯನ್ನು ಆಧಾರವಾಗಿಟ್ಟುಕೊಂಡು ನಟಿ ನಂದಿತಾ ದಾಸ್ ನಿರ್ದೇಶಿಸಿದ 'ಫಿರಾಕ್', ಕರಾಚಿ ಚಿತ್ರೋತ್ಸವದಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಪಾತ್ರವಾಯಿತು. ಕರಾಚಿ ಚಿತ್ರೋತ್ಸವದಲ್ಲಿ ಈ ಚಿತ್ರ ಪ್ರಥಮ ಪ್ರದರ್ಶನ ಕಂಡಿತು.

2008: ಒರಿಸ್ಸಾದ ಕಡಲು ತೀರ ಪ್ರದೇಶದಲ್ಲಿ ಇದೇ ಮೊದಲ ಬಾರಿಗೆ ಅಟ್ಟಹಾಸ ಗೈದ ನಕ್ಸಲೀಯರು ಜಿಲ್ಲಾ ಶಸ್ತ್ರ ಕೋಠಿಯನ್ನು ಲೂಟಿ ಮಾಡಿ 13 ಮಂದಿ ಪೊಲೀಸರೂ ಸೇರಿದಂತೆ 15 ಮಂದಿಯನ್ನು ಹತ್ಯೆ ಮಾಡಿ, ಇತರ 10 ಮಂದಿಯನ್ನು ಗಾಯಗೊಳಿಸಿದರು. ವ್ಯವಸ್ಥಿತವಾಗಿ ಯೋಜನೆಯನ್ನು ರೂಪಿಸಿಕೊಂಡ 100ಕ್ಕೂ ಹೆಚ್ಚು ಸಂಖ್ಯೆಯ ನಕ್ಸಲೀಯರು ರಾತ್ರಿ ನಯಾಗರ್ತದ ಪೊಲೀಸ್ ಠಾಣೆ, ಪೊಲೀಸ್ ತರಬೇತಿ ಶಾಲೆ, ಶಸ್ತ್ರಾಗಾರ ಹಾಗೂ ದಸಪಲ್ಲಾ ಪೊಲೀಸ್ ಠಾಣೆಯ ಮೇಲೆ ದಾಳಿ ಮಾಡಿದರು. ಪೊಲೀಸರು ಅಪಾರ ಪ್ರಮಾಣದಲ್ಲಿ ವಶಪಡಿಸಿಕೊಂಡಿದ್ದ ಶಸ್ತ್ರಾಸ್ತ್ರಗಳನ್ನು ನಕ್ಸಲೀಯರು ತಾವು ಅಪಹರಿಸಿ ತಂದ ಬಸ್ ಮತ್ತು ಲಾರಿಯಲ್ಲಿ ತುಂಬಿಕೊಂಡು ಪರಾರಿಯಾದರು.

2008: ಶೈಕ್ಷಣಿಕ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳು ಗುಂಡು ಹಾರಿಸಿ ಸಹಪಾಠಿಗಳನ್ನು ಹತ್ಯೆ ಮಾಡುವ ಬಂದೂಕು ಸಂಸ್ಕೃತಿ ಮುಂದುವರೆಯಿತು. 12ನೇ ತರಗತಿಯ ವಿದ್ಯಾರ್ಥಿಯೊಬ್ಬನನ್ನು ಇಬ್ಬರು ಸಹಪಾಠಿಗಳು ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ಗಾಜಿಯಾಬಾದಿಗೆ ಸಮೀಪದ ಮೆಟನಾರ ಗ್ರಾಮದ ಇಂಟರ್ ಕಾಲೇಜಿನಲ್ಲಿ ಘಟಿಸಿತು. ಘಟನೆಯಲ್ಲಿ ವಿಪಿನ್ (19) ಎಂಬ ವಿದ್ಯಾರ್ಥಿ ಹತನಾದ. ಗುಂಡು ಹಾರಿಸಿದವರಲ್ಲಿ ಅತಾರ್ ಸಿಂಗ್ ಎಂಬ ಒಬ್ಬನನ್ನು ಬಂಧಿಸಲಾಯಿತು. ಅತಾರ್ ಸಿಂಗನ ತಂಗಿಯನ್ನು ಚುಡಾಯಿಸಿದ್ದು ಈ ಘಟನೆಗೆ ಕಾರಣ ಎನ್ನಲಾಯಿತು.

2008: ಮಾರ್ಗೋವಾ ವಿಭಾಗದ ಅಧಿಕಾರಿಯು ಮಾನ್ಯತಾ ಅವರಿಗೆ ನೀಡಿದ ವಸತಿ ಪ್ರಮಾಣ ಪತ್ರವನ್ನು ರದ್ದುಪಡಿಸಿದ್ದನ್ನು ಅನುಸರಿಸಿ ಬಾಲಿವುಡ್ ನಟ ಸಂಜಯದತ್ ಮತ್ತು ಮಾನ್ಯತಾ ಅವರ ವಿವಾಹ ನೋಂದಣಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿದರು.

2008: ಸೇತು ಸಮುದ್ರಂ ಕಡಲ್ಗಾಲುವೆ ಯೋಜನೆಯನ್ನು (ಎಸ್ ಎಸ್ ಸಿ ಪಿ) ಜಾರಿಗೆ ತಂದಲ್ಲಿ ಕಡಲತಡಿ ಭಯೋತ್ಪಾದನೆ ಮತ್ತು ಕಡಲುಗಳ್ಳತನಗಳು ಪರಸ್ಪರ ಒಂದಾಗಿ ದೇಶದ ಭದ್ರತೆಗೆ ಧಕ್ಕೆ ತರಬಲ್ಲವು ಎಂದು ನೌಕಾದಳದ ನಿವೃತ್ತ ಅಧಿಕಾರಿ ಕ್ಯಾಪ್ಟನ್ ಎಚ್.ಬಾಲಕೃಷ್ಣನ್ ಹೇಳಿದರು. ಚೆನ್ನೈಯಲ್ಲಿ ಕಡಲತೀರ ಕಾರ್ಯಾಚರಣೆ ಜಾಲ ಏರ್ಪಡಿಸಿದ್ದ ಪತ್ರಿಕಾ ಸಂದರ್ಶನದಲ್ಲಿ ಅವರು ಈ ವಿಷಯ ತಿಳಿಸಿದರು.

2008: ರಾಜ್ಯಸಭಾ ಸದಸ್ಯ ಮತ್ತು ಜ್ಯುಪಿಟರ್ ಕ್ಯಾಪಿಟಲ್ ಸಮೂಹದ ಸಿಇಒ ರಾಜೀವ್ ಚಂದ್ರಶೇಖರ್ ಅವರು ಭಾರತೀಯ ವಾಣಿಜ್ಯ ಮಹಾಸಂಘಗಳ ಒಕ್ಕೂಟ (ಫಿಕ್ಕಿ)ದ ಅಧ್ಯಕ್ಷರಾಗಿ ಆಯ್ಕೆಯಾದರು. ನವದೆಹಲಿಯಲ್ಲಿ ನಡೆದ 80ನೇ ಎಜಿಎಂ ಸಭೆಯಲ್ಲಿ ಜೆ.ಕೆ.ಪೇಪರ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಹರ್ಷಪತಿ ಸಿಂಘಾನಿಯಾ ಅವರನ್ನು ಹಿರಿಯ ಅಧ್ಯಕ್ಷರನ್ನಾಗಿಯೂ ಆಯ್ಕೆ ಮಾಡಲಾಯಿತು.

2007: ನೊಬೆಲ್ ಪ್ರಶಸ್ತಿ ಪುರಸ್ಕೃತ ಪ್ರೊ. ಅಮರ್ತ್ಯ ಸೆನ್ ಅವರಿಗೆ ಶಾಂತಿನಿಕೇತನದಲ್ಲಿ ಈದಿನ ಆಚಾರ್ಯ ದಿನೇಶ್ ಚಂದ್ರ ಸೆನ್ ಸ್ಮಾರಕ ಪ್ರಶಸ್ತಿಯನ್ನು ಪ್ರದಾನ ಮಾಡಿ ಗೌರವಿಸಲಾಯಿತು. ಸಾಹಿತ್ಯ ಮತ್ತು ಸಮಾಜಕ್ಕೆ ಸಲ್ಲಿಸಿದ ಗಣನೀಯ ಸೇವೆ ಪರಿಗಣಿಸಿ ಸೆನ್ ಅವರನ್ನು ಆಚಾರ್ಯ ದಿನೇಶ್ ಚಂದ್ರ ಸೆನ್ ಸಂಶೋಧನಾ ಸೊಸೈಟಿ ಆಯ್ಕೆ ಮಾಡಿತು. `ನಾನು ಆಚಾರ್ಯ ದಿನೇಶ್ ಚಂದ್ರ ಸೆನ್ ಅವರ ಬರವಣಿಗೆಗಳಿಂದ ಪ್ರೇರೇಪಿತನಾಗಿದ್ದು, ಈ ಗೌರವ ಸ್ವೀಕರಿಸಲು ಹೆಮ್ಮೆ ಪಡುತ್ತೇನೆ' ಎಂದು ಅಮರ್ತ್ಯ ಸೆನ್ ಪ್ರತಿಕ್ರಿಯಿಸಿದರು.

2007: ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ರಾಜ್ಯ ಘಟಕದ ಪ್ರಮುಖರಲ್ಲಿ ಒಬ್ಬರಾದ ಎಚ್. ಕೆ. ಮೋಹನಕುಮಾರ್ (46) ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾದರು. ಅವರ ಇಚ್ಛೆಯಂತೆ ಮೋಹನ ಕುಮಾರ್ ಅವರ ಕಣ್ಣುಗಳನ್ನು ದಾನ ಮಾಡಲಾಯಿತು.

2007: ಧರ್ಮಪುರಿಯಲ್ಲಿ ಏಳು ವರ್ಷಗಳ ಹಿಂದೆ ಮೂವರು ವಿದ್ಯಾರ್ಥಿನಿಯರ ಸಾವಿಗೆ ಕಾರಣವಾದ ಬಸ್ಸಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನೆಡು ಯಾನೆ ನೆಡುಚೆಳಿಯನ್ (41), ಮಧು (44) ಮತ್ತು ಮುನಿಯಪ್ಪನ್ (52) ಅವರಿಗೆ ಸೇಲಂ ನಾಯಾಲಯವು ಮರಣದಂಡನೆ ವಿಧಿಸಿತು. ಹೆಚ್ಚುವರಿ ಪ್ರಥಮ ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಡಿ. ಕೃಷ್ಣರಾಜ ಅವರು ಈ ತೀರ್ಪು ನೀಡಿದರು.

2007: ಕರ್ನಾಟಕದ ಚಾಮರಾಜನಗರ ಜಿಲ್ಲೆಯ ಭದ್ರಯ್ಯನ ಹಳ್ಳಿಯ ಶಿವಮ್ಮ (18) ಎಂಬ ಯುವತಿಯ ಮೇಲೆ 2001ರ ಅಕ್ಟೋಬರ್ 15ರಂದು ಅತ್ಯಾಚಾರ ಎಸಗಿದ್ದ ಶಿವು ಮತ್ತು ಜಡೇಸ್ವಾಮಿ ಎಂಬ ಇಬ್ಬರಿಗೆ ಹೈಕೋರ್ಟ್ ವಿಧಿಸಿದ್ದ ಮರಣದಂಡನೆಯನ್ನು ಸುಪ್ರೀಂಕೋರ್ಟ್ ದೃಢೀಕರಿಸಿತು.

2007: ಅಬುಧಾಬಿಯಿಂದ ಮಂಗಳೂರಿಗೆ ನೇರ ವಿಮಾನ ಸಂಚಾರ ಆರಂಭದೊಂದಿಗೆ ಮಂಗಳೂರಿನ ವೈಮಾನಿಕ ಇತಿಹಾಸದಲ್ಲಿ ಚಾರಿತ್ರಿಕ ಅಧ್ಯಾಯ ಆರಂಭಗೊಂಡಿತು. ಅಬುಧಾಬಿ-ಮಸ್ಕತ್- ಮಂಗಳೂರು ನಡುವಣ ಈ ವಿಮಾನ ಪಯಣದ ಅವಧಿ ಕೇವಲ 6 ಗಂಟೆ. ಅಬುಧಾಬಿಯಿಂದ ಹೊರಟ ವಿಮಾನ ರಾತ್ರಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು.

2006: ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯು 2005ನೇ ಸಾಲಿನ ವಿಶೇಷ ಪ್ರಶಸ್ತಿಗಳಾದ ಡಾ. ಬಿ.ಎನ್. ಗದ್ಗೀಮಠ ಪ್ರಶಸ್ತಿಗೆ ಗುಲ್ಬರ್ಗದ ಡಾ. ವೀರಣ್ಣ ದಂಡೆ, ಡಾ. ಜೀಶಂ ಪ್ರಶಸ್ತಿಗೆ ಉಡುಪಿಯ ಡಾ. ರಾಘವ ನಂಬಿಯಾರ್ ಅವರನ್ನು ಆಯ್ಕೆ ಮಾಡಿತು.

2006: ಅಮೆರಿಕನ್ ಸೇನೆಯು ತನ್ನ ಸಂಚಾರಿ ಸೇನಾ ಶಸ್ತ್ರಚಿಕಿತ್ಸಾ ಆಸ್ಪತ್ರೆಯ (ಮೊಬೈಲ್ ಆರ್ಮಿ ಸರ್ಜಿಕಲ್ ಹಾಸ್ಪಿಟಲ್ - ಎಂ ಎ ಎಸ್ ಎಚ್) ಕೊನೆಯ ಘಟಕವನ್ನು ಮುಚ್ಚಿತು. 1945ರ ಆಗಸ್ಟಿನಲ್ಲಿ ಶಸ್ತ್ರಚಿಕಿತ್ಸಕ ಮೈಕೆಲ್ ಡಿ ಬೆಕೆ ಮತ್ತು ಇತರ ಶಸ್ತ್ರಚಿಕಿತ್ಸಾ ತಜ್ಞರು ಈ ಸಂಚಾರಿ ಸೇನಾ ಶಸ್ತ್ರಚಿಕಿತ್ಸಾ ಆಸ್ಪತ್ರೆ ಘಟಕವನ್ನು ಆರಂಭಿಸಿದ್ದರು.

1968: ಅಮೆರಿಕಾದ ಮೊದಲ 911 ತುರ್ತು ದೂರವಾಣಿ ವ್ಯವಸ್ಥೆಯನ್ನು ಅಲಬಾಮಾದ ಹ್ಯಾಲೀವಿಲ್ನಲ್ಲಿ ಉದ್ಘಾಟಿಸಲಾಯಿತು.

1963: ಕಲಾವಿದ ಟಿ.ಕೆ. ರಾಮಸಿಂಗ್ ಜನನ.

1956: ಭಾರತೀಯ ಖಭೌತತಜ್ಞ ಮೇಘನಾದ ಸಹಾ ಅವರು ನವದೆಹಲಿಯಲ್ಲಿ ತಮ್ಮ 62ನೇ ವಯಸ್ಸಿನಲ್ಲಿ ನಿಧನರಾದರು.

1954: ಕಲಾವಿದ ಎಚ್. ಎಂ. ಅಂಕಯ್ಯ ಜನನ.

1949: ಇಸ್ರೇಲಿ ಸಂಸತ್ತು `ನೆಸೆಟ್' ಜೆರುಸಲೆಮ್ಮಿನಲ್ಲಿ ಉದ್ಘಾಟನೆಗೊಂಡಿತು. ಚೈಮ್ ವೀಝ್ಮಾನ್ ಇಸ್ರೇಲಿನ ಮೊದಲ ಅಧ್ಯಕ್ಷರಾಗಿ ಆಯ್ಕೆಯಾದರು.

1949: ಗಾಯಕ, ಕವಿ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಘಟನಕಾರ ವೈ.ಎಸ್. ಕೃಷ್ಣಮೂರ್ತಿ ಅವರು ಶ್ರೀನಿವಾಸ ಅಯ್ಯಂಗಾರ್- ಸುಬ್ಬ ಲಕ್ಷ್ಮಮ್ಮ ದಂಪತಿಯ ಮಗನಾಗಿ ಕೋಲಾರ ಜಿಲ್ಲೆಯ ಬಂಗಾರಪೇಟೆಯಲ್ಲಿ ಜನಿಸಿದರು.

1937: ನೈಲಾನ್ ಸಂಶೋಧಿಸಿದ ಡ್ಯೂಪಾಂಟ್ನ ರಾಸಾಯನಿಕ ಸಂಶೋಧನಾ ತಜ್ಞ ವ್ಲಾಲೇಸ್ ಎಚ್. ಕೊರೋಥರ್ಸ್ ಅವರಿಗೆ ಈ ಸಿಂಥೆಟಿಕ್ ಫೈಬರಿಗೆ ಪೇಟೆಂಟ್ ಲಭಿಸಿತು.

1896: ರಿಚರ್ಡ್ ಫೆಲ್ಟನ್ ಔಟ್ ಕಾಲ್ಟ್ ನ `ದಿ ಯೆಲ್ಲೋ ಕಿಡ್' ಮೊತ್ತ ಮೊದಲ ಕಾಮಿಕ್ ಸ್ಟ್ರಿಪ್ `ಹೀಯರ್ಸ್ಟ್ ನ್ಯೂಯಾರ್ಕ್ ಅಮೆರಿಕನ್' ನಲ್ಲಿ ಪ್ರಕಟಗೊಂಡಿತು. ಸ್ಟ್ರಿಪ್ನಲ್ಲಿ ಪಾತ್ರ ಹೇಳುವುದನ್ನು ಬರೆಯಲು `ಬಲೂನ್' ಮಾದರಿಯ ಜಾಗ ಬಳಸಿದ ಮೊತ್ತ ಮೊದಲ ವ್ಯಕ್ತಿ ಔಟ್ ಕಾಲ್ಟ್. `ಕಾಮಿಕ್ ಸ್ಟ್ರಿಪ್' ಎಂಬ ನುಡಿಗಟ್ಟನ್ನು 1900ರ ಸುಮಾರಿನಲ್ಲಿ ಅಮೆರಿಕಾದಲ್ಲಿ ಮೊತ್ತ ಮೊದಲಿಗೆ ಬಳಸಲಾಗಿತ್ತು.

1834: ಜೀವರಕ್ಷಕ ದೋಣಿಯ (ಲೈಫ್ ಬೋಟ್) ಸಂಶೋಧಕ ಬ್ರಿಟನ್ನಿನ ಲಯನೆಲ್ ಲ್ಯೂಕಿನ್ ತನ್ನ 91ನೇ ವಯಸ್ಸಿನಲ್ಲಿ ಮೃತನಾದ.

1659: ಬ್ರಿಟಿಷ್ ಬ್ಯಾಂಕ್ ಒಂದರಿಂದ ಚೆಕ್ ಪಡೆಯಲಾಯಿತು. ಈ ಚೆಕ್ಕಿನ ಮೂಲಪ್ರತಿಯನ್ನು ನ್ಯಾಷನಲ್ ವೆಸ್ಟ್ ಮಿನ್ ಸ್ಟರ್ ಬ್ಯಾಂಕಿನ ಸಂಗ್ರಹಾಲಯದಲ್ಲಿ ಸಂರಕ್ಷಿಸಿ ಇಡಲಾಗಿದೆ.

No comments:

Advertisement