Wednesday, March 17, 2010

ಇಂದಿನ ಇತಿಹಾಸ History Today ಮಾರ್ಚ್ 17

ಇಂದಿನ ಇತಿಹಾಸ

ಮಾರ್ಚ್ 17

ಕೋಮುದ್ವೇಷಕ್ಕೆ ಪ್ರಚೋದನೆ ನೀಡುವ ಉದ್ರೇಕಕಾರಿ ಭಾಷಣ ಮಾಡಿದ್ದಕ್ಕಾಗಿ ಪಿಲಿಭಿಟ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವರುಣ್ ಗಾಂಧಿ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಯಿತು. ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಐಪಿಸಿ ಹಾಗೂ ಜನಪ್ರತಿನಿಧಿಗಳ ಕಾಯ್ದೆ (ಆರ್‌ಪಿಎ) ಅಡಿ ಬರ್ಕೆರಾ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ, ವರುಣ್ ವಿರುದ್ಧ ಚುನಾವಣಾ ಆಯೋಗದ ನಿರ್ದೇಶನದಂತೆ ಪ್ರಕರಣ ದಾಖಲಿಸಿಕೊಂಡರು.

2009: ಇನ್ನು ಮುಂದೆ ತಂಬಾಕು (ಸಿಗರೇಟ್) ಕಂಪೆನಿಗಳು ಪ್ರಶಸ್ತಿ ಪ್ರದಾನ ಸಮಾರಂಭ, ಕ್ರೀಡಾಕೂಟಗಳನ್ನು ಪ್ರಾಯೋಜಿಸುವಂತಿಲ್ಲ. ತಂಬಾಕು ಕಂಪೆನಿಗಳು ಪ್ರಚಾರ ಗಿಟ್ಟಿಸುವುದನ್ನು ತಡೆಯುವ ನಿಟ್ಟಿನಲ್ಲಿ ಈ ಕಂಪೆನಿಗಳು ಕಾರ್ಯಕ್ರಮಗಳ ಪ್ರಾಯೋಜಕತ್ವ ವಹಿಸುವುದನ್ನು ಕೇಂದ್ರ ಸರ್ಕಾರ ನಿಷೇಧಿಸಿತು. ಶೌರ್ಯ ಪ್ರಶಸ್ತಿ ಪ್ರದಾನದಂತಹ ಕಾರ್ಯಕ್ರಮಗಳನ್ನು ಬಳಸಿಕೊಂಡು ತಂಬಾಕು ಕಂಪೆನಿಗಳು ತಮ್ಮ ಉತ್ಪನ್ನಗಳಿಗೆ ಪ್ರಚಾರ ಪಡೆಯುತ್ತವೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹೇಳಿತು. ಫೆಬ್ರುವರಿ 27ರಂದೇ ನಿರ್ಬಂಧ ವಿಧಿಸಿ ಸಚಿವಾಲಯ ಅಧಿಸೂಚನೆಯನ್ನು ಹೊರಡಿಸಿತ್ತು.

2009: ಕೋಮುದ್ವೇಷಕ್ಕೆ ಪ್ರಚೋದನೆ ನೀಡುವ ಉದ್ರೇಕಕಾರಿ ಭಾಷಣ ಮಾಡಿದ್ದಕ್ಕಾಗಿ ಪಿಲಿಭಿಟ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವರುಣ್ ಗಾಂಧಿ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಯಿತು. ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಐಪಿಸಿ ಹಾಗೂ ಜನಪ್ರತಿನಿಧಿಗಳ ಕಾಯ್ದೆ (ಆರ್‌ಪಿಎ) ಅಡಿ ಬರ್ಕೆರಾ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ, ವರುಣ್ ವಿರುದ್ಧ ಚುನಾವಣಾ ಆಯೋಗದ ನಿರ್ದೇಶನದಂತೆ ಪ್ರಕರಣ ದಾಖಲಿಸಿಕೊಂಡರು.

2009: ನಾಸಾದ ಸ್ಪಿಜರ್ ಖಗೋಳ ದೂರದರ್ಶಕ ರವಾನಿಸಿದ ಗ್ಯಾಲೆಕ್ಸಿ (ನಕ್ಷತ್ರಪುಂಜ) 'ಎನ್‌ಜಿಸಿ 6240'ಗಳ ಅಪೂರ್ವ ಸಮ್ಮಿಲನ ದೃಶ್ಯವನ್ನು ಎಪಿ ಪ್ರಕಟಿಸಿತು.

2009: ಎಲ್. ಕೆ. ಅಡ್ವಾಣಿ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಿ, ಲೋಕಸಭಾ ಚುನಾವಣೆಯಲ್ಲಿ ಯುಪಿಎಗೆ ತೀವ್ರ ಪೈಪೋಟಿ ನೀಡಲು ಹೊರಟ ಬಿಜೆಪಿಯಲ್ಲಿ ಆಂತರಿಕ ಕಲಹ ಭುಗಿಲೆದ್ದಿತು. ಅರುಣ್ ಜೇಟ್ಲಿ -ರಾಜನಾಥ್ ಸಿಂಗ್ ವಿರಸ ಹಾಗೂ ವರುಣ್ ಗಾಂಧಿ ಅವರ ಮುಸ್ಲಿಮ್ ವಿರೋಧಿ ಪ್ರಚೋದನಾತ್ಮಕ ಭಾಷಣಗಳು ಪಕ್ಷವನ್ನು ತೀವ್ರ ಇಕ್ಕಟ್ಟಿನಲ್ಲಿ ಸಿಲುಕಿಸಿದವು. ಕೇಂದ್ರೀಯ ಚುನಾವಣಾ ಸಮಿತಿಯ (ಸಿಇಸಿ) ಸಭೆಗೆ ಸತತ ಎರಡನೇ ಬಾರಿಗೆ ಗೈರು ಹಾಜರಾದ ಜೇಟ್ಲಿ ಪಕ್ಷದ ಹಿರಿಯ ನಾಯಕರನ್ನು ತೀವ್ರ ಮುಜುಗರಕ್ಕೆ ಸಿಲುಕಿಸಿದರು.

2009: ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಹಾಗೂ ಕೊಲೆ ಮಾಡಿದ ಆರೋಪಿಗಳೂ ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಬಂಧಿತರಾಗಿದ್ದ ಒಟ್ಟು 46 ಆರೋಪಿಗಳಿಗೆ 22 ನಿಮಿಷಗಳಲ್ಲಿ ಜಾಮೀನು ನೀಡಿ ಕರ್ನಾಟಕ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳು ದಾಖಲೆ ಸೃಷ್ಟಿಸಿದರು. ಜಾಮೀನು ಪ್ರಕರಣಗಳನ್ನು ಶೀಘ್ರದಲ್ಲಿ ವಿಲೇ ಮಾಡುವ ಉದ್ದೇಶದಿಂದ ಇದೇ ಮೊದಲ ಬಾರಿಗೆ ಆರು ಮಂದಿ ನ್ಯಾಯಮೂರ್ತಿಗಳು ಪ್ರತ್ಯೇಕವಾಗಿ ವಿಚಾರಣೆ ನಡೆಸಿದರು. ಅದರಲ್ಲಿ ಮುಖ್ಯ ನ್ಯಾಯಮೂರ್ತಿ ಪಿ.ಡಿ.ದಿನಕರನ್ ಅವರದ್ದೇ ಈ ದಾಖಲೆ.

2009: ಮೇಘಾಲಯ ವಿಧಾನಸಭೆಯಲ್ಲಿ ಸ್ಪೀಕರ್ ಬಿ.ಎಂ. ಲಾನೊಂಗ್ ಸರ್ಕಾರದ ಪರವಾಗಿ ಮತ ಚಲಾಯಿಸಿದರು. ಪರಿಣಾಮವಾಗಿ ಮುಖ್ಯಮಂತ್ರಿ ಡೊಂಕುಪರ್ ರಾಯ್ ವಿಶ್ವಾಸಮತ ಗೆದ್ದರು. ಇದರಿಂದಾಗಿ ಮೇಘಾಲಯದಲ್ಲಿ ಉದ್ಭವಿಸಿದ್ದ ರಾಜಕೀಯ ಬಿಕ್ಕಟ್ಟು ತಾತ್ಕಾಲಿಕವಾಗಿ ಕೊನೆಗೊಂಡಿತು.

2008: ಕರಡಿ ಕೈ ಹಿಡಿತಕ್ಕೆ ಸಿಲುಕಿದ ಮುಂಬೈ ಷೇರುಪೇಟೆಯ ಸಂವೇದಿ ಸೂಚ್ಯಂಕವು, ಮತ್ತೆ 951 ಅಂಶಗಳ ಭಾರಿ ಕುಸಿತವನ್ನು ಕಂಡಿತು. ಜಾಗತಿಕ ಅರ್ಥ ವ್ಯವಸ್ಥೆಗೆ ಸ್ಪಂದಿಸಿದ ದೇಶದ ಷೇರು ಸೂಚ್ಯಂಕವು, ಹೂಡಿಕೆದಾರರಲ್ಲಿ ಭೀತಿ ಮೂಡಿಸಿತು. 15060 ಅಂಶಗಳಿಂದ ಆರಂಭವಾದ ವಹಿವಾಟು, ಶೇ 6.03 ರಷ್ಟು ಅಂದರೆ 951 ಅಂಶಗಳನ್ನು ಕಳೆದುಕೊಂಡು ದಿನದ ಅಂತ್ಯದ ವಹಿವಾಟನ್ನು 14809 ಅಂಶಗಳಿಗೆ ಕೊನೆಗೊಳಿಸಿತು.

2008: ಪಾಕಿಸ್ಥಾನ ರಾಷ್ಟ್ರೀಯ ಅಸೆಂಬ್ಲಿಯ (ಸಂಸತ್) ಕೆಳಮನೆಗೆ ನೂತನವಾಗಿ ಆಯ್ಕೆಯಾದ ಸದಸ್ಯರು ಪ್ರಮಾಣವಚನ ಸ್ವೀಕರಿಸಿದರು. ಒಟ್ಟು 342 ಸದಸ್ಯ ಬಲದ ರಾಷ್ಟ್ರೀಯ ಅಸೆಂಬ್ಲಿಯಲ್ಲಿ 328 ಸದಸ್ಯರಿಗೆ ನಿರ್ಗಮನ ಸ್ಪೀಕರ್ ಚೌಧುರಿ ಅಮೀರ್ ಹುಸೇನ್ ಪ್ರಮಾಣ ವಚನ ಬೋಧಿಸಿದರು. ಆನಂತರ ಮೃತ ನಾಯಕಿ ಬೆನಜೀರ್ ಭುಟ್ಟೋ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

2008: ವಿಜಯವಾಡ ಜಿಲ್ಲೆಯ ಮುರಗಲ್ಲು ಗ್ರಾಮದಲ್ಲಿ ಹತ್ತು ಅಡಿ ಉದ್ದದ ಕೊಳವೆ ಬಾವಿಗೆ ಬಿದ್ದಿದ್ದ ಮೂರು ವರ್ಷದ ಗೋಪಿ ಎಂಬ ಬಾಲಕನನ್ನು ಸುರಕ್ಷಿತವಾಗಿ ಮೇಲಕ್ಕೆತ್ತಲಾಯಿತು. ಪೊಲೀಸ್ ಹಾಗೂ ಕಂದಾಯ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಕೈಗೊಂಡ ಕ್ರಮದಿಂದಾಗಿ ಎರಡು ಗಂಟೆಗಳಿಗೂ ಹೆಚ್ಚು ಕಾಲ ಬಾವಿಯೊಳಗಿದ್ದ ಬಾಲಕನನ್ನು ಯಾವುದೇ ಅಪಾಯವಿಲ್ಲದೇ ಮೇಲಕ್ಕೆತ್ತಲು ಸಾಧ್ಯವಾಯಿತು.

2008: ಹದಿನೆಂಟು ವರ್ಷಗಳ ಹಿಂದೆ ಪಾಕಿಸ್ಥಾನದಲ್ಲಿ ನಾಲ್ಕು ಬಾಂಬ್ ಸ್ಫೋಟಗಳ ಪ್ರಕರಣದಲ್ಲಿ ಭಾಗಿಯಾದ ಆರೋಪದ ಹಿನ್ನೆಲೆಯಲ್ಲಿ ಗಲ್ಲುಶಿಕ್ಷೆಗೆ ಗುರಿಯಾದ ಭಾರತದ ಸರಬ್ಜಿತ್ ಸಿಂಗ್ ಗೆ ಕ್ಷಮಾದಾನ ನೀಡಬೇಕೆಂದು ಪಾಕಿಸ್ಥಾನ ಸರ್ಕಾರಕ್ಕೆ ಭಾರತ ಮನವಿ ಮಾಡಿತು. ಸರಬ್ಜಿತ್ ಸಿಂಗ್ ನನ್ನು ಭೇಟಿ ಮಾಡಲು ಭಾರತದ ರಾಯಭಾರಿ ಕಚೇರಿಯ ಸಿಬ್ಬಂದಿಗೆ ಅವಕಾಶ ನೀಡಬೇಕೆಂದೂ ಭಾರತ ಸರ್ಕಾರ ಕೋರಿತು. 17 ವರ್ಷಗಳಿಂದ ಲಾಹೋರಿನ ಕೋಟ್ಲಖ್ ಪತ್ ಜೈಲಿನಲ್ಲಿರುವ ಸರಬ್ಜಿತ್ ಸಿಂಗ್ ನನ್ನು ಏಪ್ರಿಲ್ 1ರಂದು ಲಾಹೋರ್ ಜೈಲಿನಲ್ಲಿ ಮರಣದಂಡನೆಗೆ ಗುರಿಪಡಿಸಲು ಆದೇಶ ನೀಡಲಾಗಿತ್ತು.

2008: 1996ರ ಅಪಘಾತ ಪ್ರಕರಣವೊಂದರಲ್ಲಿ ತೀವ್ರ ಸ್ವರೂಪದಲ್ಲಿ ಗಾಯಗೊಂಡಿದ್ದ ಚಿತ್ರನಟಿ ಮಾಲಾಶ್ರಿ ಅವರು ಪರಿಹಾರ ಕೋರಿ 2002ನೇ ಸಾಲಿನಲ್ಲಿ ಸಲ್ಲಿಸಿದ ಅರ್ಜಿಯನ್ನು ಹೈಕೋರ್ಟ್ ವಿಚಾರಣೆಗೆ ಅಂಗೀಕರಿಸಿತು.
ಮೋಟಾರು ಅಪಘಾತ ಪರಿಹಾರ ನ್ಯಾಯಮಂಡಳಿಯು (ಎಂಎಸಿಟಿ) ನೀಡಿರುವ ಕಡಿಮೆ ಪರಿಹಾರದ ಮೊತ್ತವನ್ನು ಪ್ರಶ್ನಿಸಿ ಮಾಲಾಶ್ರಿ ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಿದರು. 1996ರ ಜುಲೈ 29ರಂದು ಮಾಲಾಶ್ರಿಯವರು ನಟ ಸುನಿಲ್ ಹಾಗೂ ಇತರರ ಜೊತೆ ಬಾಗಲಕೋಟೆಯಿಂದ ಬೆಂಗಳೂರಿಗೆ ಕಾರಿನಲ್ಲಿ ಆಗಮಿಸುತ್ತಿದ್ದಾಗ, ಚಿತ್ರದುರ್ಗದ ಬಳಿ ಎದುರಿನಿಂದ ವೇಗವಾಗಿ ಬಂದ ಲಾರಿಯೊಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಸುನಿಲ್ ಅವರು ಸಾವನ್ನಪ್ಪಿ, ಮಾಲಾಶ್ರಿ ತೀವ್ರವಾಗಿ ಗಾಯಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಅವರು ಎಂಎಸಿಟಿಗೆ ನ್ಯಾಷನಲ್ ಇನ್ಶ್ಯೂರೆನ್ಸ್ ಕಂಪೆನಿ ವಿರುದ್ಧ ಅರ್ಜಿ ಸಲ್ಲಿಸಿ, 5 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಕೋರಿದ್ದರು. 2002ರ ಮಾರ್ಚ್ 6ರಂದು ಎಂಎಸಿಟಿಯು 59,670 ರೂಪಾಯಿ ಪರಿಹಾರಕ್ಕೆ ಆದೇಶ ನೀಡಿತು. ಈ ಆದೇಶವನ್ನು ಅವರು ಹೈಕೋರ್ಟಿನಲ್ಲಿ ಪ್ರಶ್ನಿಸಿದ್ದರು.

2008: ಮುಂಬೈ ಚಿನಿವಾರ ಪೇಟೆಯಲ್ಲಿ ಪ್ರತಿ ಕಿಲೋ ಬೆಳ್ಳಿ ರೂ 25650ಕ್ಕೆ ಹಾಗೂ ಸ್ಟ್ಯಾಂಡರ್ಡ್ ಚಿನ್ನ ಪ್ರತಿ 10 ಗ್ರಾಮಿಗೆ ರೂ 13495ಕ್ಕೆ ಜಿಗಿದು ಸಾರ್ವಕಾಲಿಕ ದಾಖಲೆ ನಿರ್ಮಿಸಿತು.

2007: ಮಿತ್ರ ಪಕ್ಷಗಳ ಒತ್ತಡಕ್ಕೆ ಮಣಿದು ಪಶ್ಚಿಮ ಬಂಗಾಳದ ಎಡರಂಗ ಸರ್ಕಾರವು ನಂದಿಗ್ರಾಮದಲ್ಲಿ ಭೂಸ್ವಾಧೀನವನ್ನು ತತ್ ಕ್ಷಣ ಸ್ಥಗಿತಗೊಳಿಸಿ, ಪೊಲೀಸ್ ಪಡೆಯನ್ನು ಹಿಂದಕ್ಕೆ ಕರೆಸಿಕೊಳ್ಳಲು ನಿರ್ಧರಿಸಿತು.

2007: ನಾಗಾರ್ಜುನ ವಿದ್ಯುತ್ ಸ್ಥಾವರ ಸ್ಥಾಪನೆ ವಿರೋಧಿಸಿ ರಾಷ್ಟ್ರೀಯ ಹೆದ್ದಾರಿ 17ರಲ್ಲಿ ಯಶಸ್ವಿ ಹೆದ್ದಾರಿ ಬಂದ್ ನಡೆಯಿತು. ಪಡುಬಿದ್ರಿ, ನಂದಿಕೂರು, ಎರ್ಮಾಳು, ಎಲ್ಲೂರು ಪ್ರದೇಶ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿ ಇದ್ದರೂ ಪುರುಷರು, ಮಹಿಳೆಯರಾದಿಯಾಗಿ ನೂರಾರು ಮಂದಿ ರಸ್ತೆ ತಡೆಯಲ್ಲಿ ಪಾಲ್ಗೊಂಡರು.

2007: ಶ್ರವಣ ಬೆಳಗೊಳದ ಗೊಮ್ಮಟನ ದರ್ಶನದಿಂದ ಪುಳಕಿತರಾಗಿ ಭಾವ ಪರಾಕಾಷ್ಠೆ ತಲುಪಿದ ಜಿನಮುನಿ ಆಚಾರ್ಯ ಕೇಶವ ನಂದಿ ಮಹಾರಾಜ್ (85) ವೈರಾಗ್ಯಮೂರ್ತಿಯ ಸಮ್ಮುಖದಲ್ಲಿಯೇ ಇಹಯಾತ್ರೆ ಮುಗಿಸಿದರು. ಮುನಿದೀಕ್ಷೆ ಪಡೆದು ಕಳೆದ ಇಪ್ಪತ್ತೈದು ವರ್ಷಗಳಿಂದ ಕಠಿಣ ವ್ರತಾಧಾರಣೆ ಕೈಗೊಂಡಿದ್ದ ಆಚಾರ್ಯ ಕೇಶವ ನಂದಿ ಮಹಾರಾಜರು ಹುಬ್ಬಳ್ಳಿಯ ವರೂರಿನಲ್ಲಿ ನವಗ್ರಹ ಪೀಠ ಆರಾಧನಾ ಉತ್ಸವ ಮುಗಿಸಿ ಶ್ರೀಕ್ಷೇತ್ರ ಶ್ರವಣ ಬೆಳಗೊಳಕ್ಕೆ ಆಗಮಿಸಿದ್ದರು.

2007: ಸೆಲೆಬ್ರಿಟಿ ಬಿಗ್ ಬ್ರದರ್ ಕಾರ್ಯಕ್ರಮದಲ್ಲಿ ಬಾಲಿವುಡ್ ನಟಿ ಶಿಲ್ಪಾಶೆಟ್ಟಿ ವಿರುದ್ಧ ನಡೆದ ವರ್ಣನಿಂದನೆಯನ್ನು ಬ್ರಿಟನ್ ಸಂಸತ್ ಒಕ್ಕೊರಲಿನಿಂದ ಖಂಡಿಸಿತು.

2007: ಹಿರಿಯ ವಿಜ್ಞಾನಿ ಆರ್. ಎ. ಮಶೇಲ್ಕರ್ ಅವರು ತಮ್ಮ ಪ್ರಾಮಾಣಿಕತೆ, ದಕ್ಷತೆ ಬಗ್ಗೆ ಅನುಮಾನ ವ್ಯಕ್ತಗೊಂಡ ಹಿನ್ನೆಲೆಯಲ್ಲಿ ಪೇಟೆಂಟ್ ತಜ್ಞರ ಸಮಿತಿಗೆ ರಾಜೀನಾಮೆ ಸಲ್ಲಿಸಿದರು.

2007: ಅಮಾನತುಗೊಂಡ ಪಾಕಿಸ್ಥಾನದ ಮುಖ್ಯ ನ್ಯಾಯಮೂರ್ತಿ ಇಫ್ತಿಕಾರ್ ಮೊಹಮ್ಮದ್ ಚೌಧುರಿ ಅವರ ಸ್ಥಾನಕ್ಕೆ ರಾಣಾ ಭಗವಾನ್ ದಾಸ್ ಅವರನ್ನು ಹಂಗಾಮಿಯಾಗಿ ನೇಮಿಸುವುದಾಗಿ ಪಾಕಿಸ್ಥಾನ ಸರ್ಕಾರ ಪ್ರಕಟಿಸಿತು. ರಾಣಾ ಭಗವಾನ್ ದಾಸ್ ಅವರು ಪಾಕ್ ಸುಪ್ರೀಂಕೋರ್ಟಿನ ಏಕೈಕ ಹಿಂದೂ ನ್ಯಾಯಾಧೀಶ.

2006: ಕರ್ನಾಟಕದ ಬಿಜೆಪಿಯ ನೂತನ ಅಧ್ಯಕ್ಷರಾಗಿ ಮಂಗಳೂರು ಲೋಕಸಭಾ ಸದಸ್ಯ ಡಿ.ವಿ. ಸದಾನಂದಗೌಡ ನೇಮಕಗೊಂಡರು. ಹೊಸ ಅಧ್ಯಕ್ಷರ ನೇಮಕವನ್ನು ಪಕ್ಷದ ಉಪಾಧ್ಯಕ್ಷ ವೆಂಕಯ್ಯ ನಾಯ್ಡು ನವದೆಹಲಿಯ ಪಕ್ಷ ಕಚೇರಿಯಲ್ಲಿ ಪ್ರಕಟಿಸಿದರು.

2006: ಲಾಭದಾಯಕ ಹುದ್ದೆ ಹೊಂದಿರುವ ನೆಲೆಯಲ್ಲಿ ಚುನಾವಣಾ ಆಯೋಗದ ಶಿಫಾರಸಿನ ಮೇರೆಗೆ ಸಮಾಜವಾದಿ ಪಕ್ಷದ ಸದಸ್ಯೆ ಜಯಾ ಬಚ್ಚನ್ ಅವರನ್ನು ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರು ರಾಜ್ಯಸಭಾ ಸದಸ್ಯತ್ವದಿಂದ ಅನರ್ಹಗೊಳಿಸಿದರು. ಈ ಪ್ರಕಟಣೆಗೆ ಕಲಾಂ ಅವರು ಒಂದು ದಿನ ಮೊದಲೇ (ಮಾರ್ಚ್ 16) ಸಹಿ ಹಾಕಿದ್ದಾರೆ ಎಂದು ಕಾನೂನು ಮತ್ತು ನ್ಯಾಯಾಂಗ ಸಚಿವಾಲಯ ಮೂಲಗಳು ತಿಳಿಸಿದವು. ಉತ್ತರ ಪ್ರದೇಶ ಚಲನಚಿತ್ರ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿ ನೇಮಕಗೊಂಡ 2004ರ ಜುಲೈ 14ರ ದಿನದಿಂದಲೇ ಜಾರಿಗೊಳಿಸುವಂತೆ ಚುನಾವಣಾ ಆಯೋಗವು ಸಂವಿಧಾನದ 102ನೇ ವಿಧಿಯನ್ವಯ ರಾಷ್ಟ್ರಪತಿಗಳಿಗೆ ಶಿಫಾರಸು ಮಾಡಿತ್ತು. ಜಯಾ ಬಚ್ಚನ್ ಅವರು ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ರಾಜ್ಯಸಭೆಗೆ 2004ರಲ್ಲಿ ಆಯ್ಕೆಯಾಗಿದ್ದರು. ಈ ಪ್ರಕರಣ ದೇಶದಾದ್ಯಂತ ಭಾರಿ ಕೋಲಾಹಲ ಸೃಷ್ಟಿಸಿತು.

2006: ದೀಪಾ ಮೆಹ್ತಾ ಅವರ `ವಾಟರ್' ಚಿತ್ರದಲ್ಲಿ ಮಾಡಿದ ನಟನೆಗಾಗಿ ಖ್ಯಾತ ನಟಿ ಸೀಮಾ ಬಿಸ್ವಾಸ್ ಅವರಿಗೆ ಕೆನಡಾದಲ್ಲಿ ನಡೆದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ `ಅತ್ಯುತ್ತಮ ನಟಿ' (`ಬೆಸ್ಟ್ ಅ್ಯಕ್ಟ್ರೆಸ್ ಜೆನೀ') ಪ್ರಶಸ್ತಿ ಲಭಿಸಿತು. ಬೇರೊಂದು ರಾಷ್ಟ್ರದಲ್ಲಿ ನಡೆದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾರತೀಯಳೊಬ್ಬಳು `ಅತ್ಯುತ್ತಮ ನಟಿ ಪ್ರಶಸ್ತಿ' ಪಡೆದಿರುವುದು ಬಹುಶಃ ಇದೇ ಪ್ರಥಮ. ಅತ್ಯುತ್ತಮ ಚಿತ್ರ, ಅತ್ಯುತ್ತಮ ನಿರ್ದೇಶನ ಸೇರಿದಂತೆ ಎಂಟು ವರ್ಗಗಳಲ್ಲಿ ಪ್ರಶಸ್ತಿಗಾಗಿ `ವಾಟರ್' ಚಿತ್ರವನ್ನು ಹೆಸರಿಸಲಾಗಿತ್ತು. ಆದರೆ ಅತ್ಯುತ್ತಮ ನಟಿ ಪ್ರಶಸ್ತಿ ಮಾತ್ರವೇ `ವಾಟರ್'ಗೆ ಸಿಕ್ಕಿತು. ಸೀಮಾ ಬಿಸ್ವಾಸ್ ಪರವಾಗಿ `ವಾಟರ್'ನಲ್ಲಿ ಮುಖ್ಯಪಾತ್ರ ವಹಿಸಿರುವ ಲೀಸಾರಾಯ್ ಪ್ರಶಸ್ತಿ ಸ್ವೀಕರಿದರು. ಸೀಮಾ ಈ ಸಂದರ್ಭದಲ್ಲಿ ಚೆನ್ನೈಯಲ್ಲಿ ಬಾಲಾಜಿ ನಿರ್ದೇಶನದ `ತಲೈಮಗನ್' ಚಿತ್ರೀಕರಣದಲ್ಲಿ ಇದ್ದರು.

2006: ಶಾಸಕರ ಭವನದ 4ನೇ ಹಂತದ 2ನೇ ಘಟ್ಟದ ಪ್ಲಾಟುಗಳನ್ನು ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಬೆಂಗಳೂರಿನಲ್ಲಿ ಉದ್ಘಾಟಿಸಿದರು. 5 ಕೋಟಿ 20 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಪ್ಲಾಟುಗಳನ್ನು ನಿರ್ಮಿಸಲಾಗಿತ್ತು. ಇದರಲ್ಲಿ 38 ಸಾಂಸಾರಿಕ ಪ್ಲಾಟುಗಳಿವೆ. 2 ವಿಐಪಿ, 5 ಅತಿಥಿ ಗೃಹಗಳನ್ನು ಇದು ಒಳಗೊಂಡಿದೆ.

1969: ಗೋಲ್ಡಾ ಮೀರ್ ಅವರು ತಮ್ಮ 70ನೇ ವಯಸ್ಸಿನಲ್ಲಿ ಇಸ್ರೇಲ್ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡರು. ಈ ಹುದ್ದೆಗೆ ಏರಿದ ಪ್ರಪ್ರಥಮ ಮಹಿಳೆ ಈಕೆ.

1963: ಭಾರತದ ಪ್ರಪ್ರಥಮ ರುದ್ರ ವೀಣಾ ವಾದಕಿ ಜ್ಯೋತಿ ಹೆಗಡೆ ಅವರು ಸತ್ಯನಾರಾಯಣ ದೇವಗುಡಿ- ಶಾಂತಾ ದೇವಗುಡಿ ದಂಪತಿಯ ಮಗಳಾಗಿ ಧಾರವಾಡದಲ್ಲಿ ಜನಿಸಿದರು. ಕರ್ನಾಟಕ ರುದ್ರವೀಣಾ ವಾದನದ ನಾಲ್ವರಲ್ಲಿ ಅಗ್ರಗಣ್ಯರೆಂಬ ಹೆಗ್ಗಳಿಕೆ ಇವರದು.

1959: ದಲೈ ಲಾಮಾ ಅವರು ಟಿಬೆಟ್ ತ್ಯಜಿಸಿ ಭಾರತಕ್ಕೆ ಬಂದರು. 1959ರ ಮಾರ್ಚ್ 31ರಂದು ಅವರಿಗೆ ಭಾರತದಲ್ಲಿ ರಾಜಕೀಯ ಆಶ್ರಯ ನೀಡಲಾಯಿತು.

1950: ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ವಿಜ್ಞಾನಿಗಳು ತಾವು ಹೊಸ `ರೇಡಿಯಾಕ್ಟಿವ್' ಕಂಡು ಹಿಡಿದಿರುವುದಾಗಿ ಬರ್ಕೆಲಿಯಲ್ಲಿ ಪ್ರಕಟಿಸಿದರು. ಇದಕ್ಕೆ ಅವರು `ಕ್ಯಾಲಿಫೋರ್ನಿಯಂ' ಎಂದು ಹೆಸರಿಟ್ಟರು.

1942: ಜನರಲ್ ಡೊಗ್ಲಾಸ್ ಮ್ಯಾಕ್ ಅರ್ಥರ್ ಅವರು ಎರಡನೇ ವಿಶ್ವ ಸಮರ ಸಂದರ್ಭದಲ್ಲಿ ನೈಋತ್ಯ ಫೆಸಿಫಿಕ್ ಭಾಗದಲ್ಲಿದ್ದ ಮಿತ್ರ ಪಡೆಗಳ ಸುಪ್ರೀಂ ಕಮಾಂಡರ್ ಹುದ್ದೆ ವಹಿಸಿಕೊಳ್ಳಲು ಆಸ್ಟ್ರೇಲಿಯಕ್ಕೆ ಆಗಮಿಸಿದರು.

1920: ಷೇಖ್ ಮುಜಿಬುರ್ ರಹಮಾನ್ (1920-75) ಜನ್ಮದಿನ. ಬಂಗಾಳಿ ನಾಯಕ ಹಾಗೂ ಬಾಂಗ್ಲಾದೇಶದ ಪ್ರಥಮ ಪ್ರಧಾನಿ ಹಾಗೂ ನಂತರ ಅಧ್ಯಕ್ಷರಾದ ಇವರನ್ನು 1975ರಲ್ಲಿ ಕೊಲೆಗೈಯಲಾಯಿತು.

1834: ಗೋಟ್ಲಬ್ (ವಿಲ್ಹೆಮ್) ಡೈಂಬ್ಲರ್ (1834-1900) ಹುಟ್ಟಿದ ದಿನ.ಜರ್ಮನ್ ಮೆಕ್ಯಾನಿಕಲ್ ಎಂಜಿನಿಯರ್ ಆದ ಈತ ಪ್ರಪ್ರಥಮ ಮರ್ಸಿಡಿಸ್ ಕಾರನ್ನು ನಿರ್ಮಿಸಿದ.

No comments:

Advertisement