My Blog List

Thursday, April 1, 2010

ಇಂದಿನ ಇತಿಹಾಸ History Today ಫೆಬ್ರುವರಿ 25

ಇಂದಿನ ಇತಿಹಾಸ

ಫೆಬ್ರುವರಿ 25

ಪಾಕಿಸ್ಥಾನದ ವಿರೋಧ ಪಕ್ಷ ಪಿಎಂಎಲ್-ಎನ್‌ನ ನಾಯಕ ನವಾಜ್ ಷರೀಫ್ ಅವರನ್ನು ಚುನಾವಣೆಗೆ ಸ್ಪರ್ಧಿಸುವುದರಿಂದ ಅನರ್ಹಗೊಳಿಸಿದ ಕೆಳ ನ್ಯಾಯಾಲಯದ ತೀರ್ಪನ್ನು ಪಾಕಿಸ್ಥಾನ ಸುಪ್ರೀಂ ಕೋರ್ಟ್ ಎತ್ತಿಹಿಡಿಯಿತು. ಷರೀಫ್ ಅವರ ಸಹೋದರ ಶಾಬಾಜ್ ಷರೀಫ್ ಅವರ ವಿಷಯದಲ್ಲೂ ಇದೇ ಬಗೆಯ ತೀರ್ಪು ಹೊರಬಿದ್ದಿತು.

2009: ದೇಶವನ್ನೇ ನಡುಗಿಸಿದ ಮುಂಬೈ ದಾಳಿ ಘಟನೆಯಲ್ಲಿ ಜೀವಂತವಾಗಿ ಸೆರೆಸಿಕ್ಕ ಉಗ್ರ ಮೊಹಮ್ಮದ್ ಅಜ್ಮಲ್ ಅಮೀರ್ ಉರುಫ್ ಕಸಾಬ್ ವಿರುದ್ಧ ಮುಂಬೈ ಪೊಲೀಸರು 11,280 ಪುಟಗಳ ಸುದೀರ್ಘ ಆರೋಪಪಟ್ಟಿ ಸಲ್ಲಿಸಿದರು. ಛತ್ರಪತಿ ಶಿವಾಜಿ ಟರ್ಮಿನಸ್‌ನಿಂದ (ಸಿಟಿಎಸ್) ಕೂಗಳತೆಯ ದೂರದಲ್ಲಿರುವ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಉಜ್ವಲ್ ನಿಕ್ಕಂ ಈ ಆರೋಪಪಟ್ಟಿ ಸಲ್ಲಿಸಿದರು. ಈ ಬೃಹತ್ ಆರೋಪಪಟ್ಟಿ ಸಲ್ಲಿಕೆಯಿಂದ ಭಯೋತ್ಪಾದನೆ ಘಟನೆಗೆ ಸಂಬಂಧಿಸಿದಂತೆ ಮೊದಲ ಹಂತದ ತನಿಖೆ ಪೂರ್ಣಗೊಂಡಂತಾಯಿತು. ಕಸಾಬ್ ಹೊರತಾಗಿ ಬಂಧಿತ ಲಷ್ಕರ್ ಉಗ್ರರಾದ ಫಾಹಿಮ್ ಅನ್ಸಾರಿ ಹಾಗೂ ಸಲಾವುದ್ದೀನ್ ಮೊಹಮ್ಮದ್ ಸೇರಿದಂತೆ 19 ಆರೋಪಿಗಳ ಹೆಸರುಗಳು ಆರೋಪಪಟ್ಟಿಯಲ್ಲಿ ಇವೆ. ಆರೋಪಪಟ್ಟಿಯನ್ನು ಇಂಗ್ಲಿಷ್, ಮರಾಠಿ ಹಾಗೂ ಉರ್ದು ಭಾಷೆಯಲ್ಲಿ ಸಲ್ಲಿಸಲಾಯಿತು. ಆದರೆ, ಕಸಾಬ್‌ನ ತಪ್ಪೊಪ್ಪಿಗೆ ಹೇಳಿಕೆಯನ್ನು ಪೊಲೀಸರು ನ್ಯಾಯಾಲಯದಿಂದ ಪಡೆಯದ ಕಾರಣ ಇದರಲ್ಲಿ ಸೇರಿಸಲಿಲ್ಲ ಎಂದು ಮುಂಬೈ ಜಂಟಿ ಪೊಲೀಸ್ ಆಯುಕ್ತ ರಾಕೇಶ್ ಮರಿಯಾ ಹೇಳಿದರು.

2009: ಪಿ.ವಿ. ನರಸಿಂಹ ರಾವ್ ಪ್ರಧಾನಿಯಾಗಿದ್ದ ಅವಧಿಯಲ್ಲಿ ಆದಾಯ ಮೂಲ ಮೀರಿದ ಆಸ್ತಿ ಸಂಗ್ರಹಿಸಿದ್ದಕ್ಕಾಗಿ ಕೇಂದ್ರದ ಮಾಜಿ ಸಚಿವ ಸುಖರಾಮ್‌ಗೆ ಸಿಬಿಐ ನ್ಯಾಯಾಲಯ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿತು. ಜೈಲು ಶಿಕ್ಷೆ ಜೊತೆಗೆ 2 ಲಕ್ಷ ರೂಪಾಯಿ ದಂಡ ವಿಧಿಸಿದ ನ್ಯಾಯಾಲಯ, 4.25 ಕೋಟಿ ರೂಪಾಯಿ ಮೌಲ್ಯದ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆಯೂ ಆದೇಶ ನೀಡಿತು. ತಲಾ 50,000 ರೂಪಾಯಿಗಳ ಬಾಂಡ್ ಹಾಗೂ ಭದ್ರತಾ ಠೇವಣಿಯನ್ನು ಕೋರ್ಟ್‌ಗೆ ಸಲ್ಲಿಸಿದ ನಂತರ ವಿಶೇಷ ಸಿಬಿಐ ನ್ಯಾಯಾಧೀಶ ವಿ.ಕೆ. ಮಹೇಶ್ವರಿ 82 ವರ್ಷದ ಈ ಕಾಂಗ್ರೆಸ್ ನಾಯಕನಿಗೆ ಜಾಮೀನು ನೀಡಿದರು. ಆದಾಯ ಮೂಲ ಮೀರಿದ ಆಸ್ತಿ ಸಂಗ್ರಹಿಸಿದ್ದಕ್ಕಾಗಿ ಸಿಬಿಐ 1996ರ ಆಗಸ್ಟ್ 27ರಂದು ಸುಖರಾಮ್ ವಿರುದ್ಧ ಪ್ರಕರಣ ದಾಖಲಿಸಿತ್ತು. ಸುಖರಾಮ್ ಅವರ ದೆಹಲಿ ಬಂಗ್ಲೆ ಹಾಗೂ ಹಿಮಾಚಲ ಪ್ರದೇಶದಲ್ಲಿರುವ ಮನೆಗಳ ಮೇಲೆ 1996ರ ಆಗಸ್ಟ್ 16ರಂದು ದಾಳಿ ನಡೆಸಲಾಗಿತ್ತು.

2009: ಢಾಕಾದಲ್ಲಿನ ಬಾಂಗ್ಲಾದೇಶ ಅರೆಸೇನಾ ರೈಫಲ್ಸ್ ಪಡೆ (ಬಿಡಿಆರ್)ಯ ಮುಖ್ಯ ಕೇಂದ್ರದಲ್ಲಿ ಯೋಧರು ಅಧಿಕಾರಿಗಳ ವಿರುದ್ಧ ತೀವ್ರ ಬಂಡಾಯ ಎದ್ದ ಪರಿಣಾಮವಾಗಿ ಪರಸ್ಪರ ಗುಂಡಿನ ಕಾಳಗ ನಡೆಯಿತು. ಪಡೆಯ ವಾರ್ಷಿಕ ಸಮ್ಮೇಳನದಲ್ಲಿ ಮಹಾನಿರ್ದೇಶಕರು ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ ಯೋಧರು ಏಕಾಏಕಿ ಗುಂಡು ಹಾರಿಸಿ ಹಲವಾರು ಹಿರಿಯ ಅಧಿಕಾರಿಗಳನ್ನು ಕೊಂದು ಹಾಕಿದರು ಎಂದು ಹೇಳಲಾಯಿತು. ಕೇಂದ್ರದ ಹೊರಭಾಗದಲ್ಲೂ ಯೋಧರು ನಡೆಸಿದ ಗುಂಡಿನ ಸುರಿಮಳೆಗೆ ಒಬ್ಬ ನಾಗರಿಕ ಮೃತನಾಗಿ 15ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡರು. ಕೆಲವು ಸೈನಿಕರು ಸೇನಾ ಸಂಕೀರ್ಣಕ್ಕೆ ಬೆಂಕಿ ಹಚ್ಚಿ ಪಕ್ಕದ ವಾಣಿಜ್ಯ ಸಂಕೀರ್ಣಕ್ಕೂ ಮುತ್ತಿಗೆ ಹಾಕಿದರು.

2009: ಲೋಕಸಭಾ ಚುನಾವಣೆಗೆ ವಿವಿಧ ಪಕ್ಷಗಳು ಭರದ ಸಿದ್ಧತೆ ಆರಂಭಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ಸಿನ ಚುನಾವಣಾ ತಂತ್ರ ನಿರೂಪಣೆಗೆ ಹೆಚ್ಚಿನ ಸಮಯ ಮೀಸಲಿಡುವ ಉದ್ದೇಶದಿಂದ ಕೇಂದ್ರ ಮಂತ್ರಿ ಜೈರಾಮ್ ರಮೇಶ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಹಾಲಿ ಆಂಧ್ರಪ್ರದೇಶದ ರಾಜ್ಯಸಭಾ ಸದಸ್ಯರೂ ಆದ 54 ವರ್ಷದ ರಮೇಶ್ ವಾಣಿಜ್ಯ ಮತ್ತು ಇಂಧನ ಖಾತೆ ರಾಜ್ಯ ಸಚಿವ ಸ್ಥಾನಕ್ಕೆ ಪಕ್ಷದ ಸೂಚನೆಯಂತೆ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ರಾಜೀನಾಮೆ ಪತ್ರ ಕಳುಹಿಸಿದರು.

2009: ದೋಡಾ ಜಿಲ್ಲೆಯ ನೇರು ನದಿಗೆ ಬಸ್ ಉರುಳಿ 35 ಪ್ರಯಾಣಿಕರು ಮೃತರಾಗಿ 13 ಜನರು ಗಾಯಗೊಂಡ ಘಟನೆ ಸಂಭವಿಸಿತು. ನತ್ತಿ-ಗಲಗಾಂಧರ್ ಸಮೀಪ ಬೆಳಿಗ್ಗೆ 8.15 ಕ್ಕೆ ಬಸ್ಸು ರಸ್ತೆಯ ಮೇಲೆ ನಿಯಂತ್ರಣ ಕಳೆದುಕೊಂಡು ನದಿಗೆ ಬಿತ್ತು.

2009: ಪಾಕಿಸ್ಥಾನದ ವಿರೋಧ ಪಕ್ಷ ಪಿಎಂಎಲ್-ಎನ್‌ನ ನಾಯಕ ನವಾಜ್ ಷರೀಫ್ ಅವರನ್ನು ಚುನಾವಣೆಗೆ ಸ್ಪರ್ಧಿಸುವುದರಿಂದ ಅನರ್ಹಗೊಳಿಸಿದ ಕೆಳ ನ್ಯಾಯಾಲಯದ ತೀರ್ಪನ್ನು ಪಾಕಿಸ್ಥಾನ ಸುಪ್ರೀಂ ಕೋರ್ಟ್ ಎತ್ತಿಹಿಡಿಯಿತು. ಷರೀಫ್ ಅವರ ಸಹೋದರ ಶಾಬಾಜ್ ಷರೀಫ್ ಅವರ ವಿಷಯದಲ್ಲೂ ಇದೇ ಬಗೆಯ ತೀರ್ಪು ಹೊರಬಿದ್ದಿತು. ಇದರಿಂದ ದೇಶದ ಅತ್ಯಂತ ಜನಪ್ರಿಯ ಪ್ರದೇಶವಾಗಿರುವ ಪಂಜಾಬ್‌ನ ಮುಖ್ಯಮಂತ್ರಿ ಸ್ಥಾನದಿಂದ ಶಾಬಾಜ್ ಷರೀಫ್ ಅವರು ಕೆಳಗಿಳಿಯುವುದು ಅನಿವಾರ್ಯವಾಯಿತು.

2009: ಚಿತ್ರ ನಿರ್ಮಾಪಕಿ ಪಾರ್ವತಮ್ಮ ರಾಜ್‌ಕುಮಾರ್ ಸೇರಿದಂತೆ ಎಂಟು ಮಂದಿ ಮಹಿಳೆಯರು ಮತ್ತು ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ ಆರು ಸಂಸ್ಥೆಗಳನ್ನು ರಾಜ್ಯ ಸರ್ಕಾರವು 'ಕಿತ್ತೂರು ರಾಣಿ ಚನ್ನಮ್ಮ' ಪ್ರಶಸ್ತಿಗೆ ಆಯ್ಕೆ ಮಾಡಿತು. ಮಹಿಳಾ ಅಭಿವೃದ್ಧಿ, ಕಲೆ, ಕ್ರೀಡೆ, ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಕೆಲಸ ಮಾಡಿದ ಎಂಟು ಮಂದಿ ಮಹಿಳೆಯರಿಗೆ ತಲಾ ರೂ 10 ಸಾವಿರ ನಗದು ಮತ್ತು ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ ಆರು ಸಂಸ್ಥೆಗಳಿಗೆ ತಲಾ ರೂ 25 ಸಾವಿರ ನಗದು ಬಹುಮಾನ ನೀಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ವಿವರಿಸಿದರು. ಮಹಿಳೆಯರ ಹೆಸರು: ಹುಲಿಗೆಮ್ಮ-ಬಳ್ಳಾರಿ; ಲೋಕೇಶ್ವರಿ ವಿನಯಚಂದ್ರ- ದಕ್ಷಿಣ ಕನ್ನಡ; ವಿಜಯ ವಿಷ್ಣುಭಟ್- ಕೊಡಗು; ಅನ್ನಪೂರ್ಣ ವೆಂಕಟ ನಂಜಪ್ಪ- ತುಮಕೂರು; ಮೀರಾ ಶಿವಲಿಂಗಯ್ಯ- ಮಂಡ್ಯ; ವಿದ್ಯಾ ಎಸ್.ವಾರೇಕರ್- ತುಮಕೂರು; ಸುವರ್ಣ ಸಂಬು ಬಡಿಗೇರ್- ರಾಯಭಾಗ. ಸಂಸ್ಥೆಗಳು: ಶಂಕರಿ ಬಳಗ- ಬೆಂಗಳೂರು; ಎಸ್.ಜೆ.ಎಂ ವಿದ್ಯಾಪೀಠ- ಚಿತ್ರದುರ್ಗ; ಸ್ವಯಂ ಉದ್ಯೋಗ ತರಬೇತಿ ಘಟಕ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ- ಗದಗ; ಸುರಕ್ಷಿತ ಮಹಿಳೆಯರ ಮತ್ತು ಮಕ್ಕಳ ವಿವಿಧೋದ್ದೇಶ ಕಲ್ಯಾಣ ಸಾಂಸ್ಕೃತಿಕ ಸಾಮಾಜಿಕ ದತ್ತಿ ಸಂಘ- ಹಾಸನ; ವಿನೂತನ ಶಿಕ್ಷಣ ಸೇವಾ ಸಂಸ್ಥೆ-ಕೊಪ್ಪಳ; ಸರ್ಚ್ ಸ್ವಯಂ ಸೇವಾ ಅಭಿವೃದ್ಧಿ ಸಂಸ್ಥೆ- ಬಾಗಲಕೋಟೆ. ಸ್ತ್ರೀಶಕ್ತಿ ಗುಂಪುಗಳಿಗೆ: ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವ ರಾಜ್ಯದ ಮೂರು ಸ್ತ್ರೀಶಕ್ತಿ ಗುಂಪುಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಿತು: ಮೊದಲ ಅತ್ಯುತ್ತಮ ಸ್ತ್ರೀಶಕ್ತಿ ಗುಂಪಾದ ಪುತ್ತೂರು ತಾಲ್ಲೂಕಿನ ದೀಕ್ಷಾ ಸ್ತ್ರೀಶಕ್ತಿ ಗುಂಪು, 2ನೇ ಅತ್ಯುತ್ತಮ ಸಂಸ್ಥೆಯಾಗಿ ಬಳ್ಳಾರಿ ಜಿಲ್ಲೆಯ ದುರ್ಗಾಂಬಿಕ ಸ್ತ್ರೀ ಶಕ್ತಿ ಗುಂಪು, ಮತ್ತು 3ನೇ ಅತ್ಯುತ್ತಮ ಸಂಸ್ಥೆಯಾಗಿ ಹಾಸನ ಜಿಲ್ಲೆಯ ಧನಲಕ್ಷ್ಮಿ ಸ್ತ್ರೀ ಶಕ್ತಿ ಗುಂಪು.

2008: ಹಾಲಿವುಡ್ಡಿನ ಕೊಡಕ್ ಥಿಯೇಟರಿನಲ್ಲಿ ನಡೆದ ಎಂಬತ್ತನೇ ವಾರ್ಷಿಕ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅತ್ಯುತ್ತಮ ಚಲನಚಿತ್ರ ಮತ್ತು ಅತ್ಯುತ್ತಮ ನಿರ್ದೇಶನಕ್ಕಾಗಿ (ಗೋಯೆನ್ ಬ್ರದರ್ಸ್) ನೀಡಲಾಗುವ `ಆಸ್ಕರ್ ಪ್ರಶಸ್ತಿ'ಗಳನ್ನು `ನೋ ಕಂಟ್ರಿ ಫಾರ್ ಓಲ್ಡ್ ಮೆನ್' ಚಿತ್ರವು ಗೆದ್ದುಕೊಂಡಿತು. ಈ ಚಿತ್ರವು `ಆಸ್ಕರ್' ಚಲನಚಿತ್ರ ಪ್ರಶಸ್ತಿಗಳ ಪೈಕಿ ನಾಲ್ಕನ್ನು ತನ್ನದಾಗಿಸಿಕೊಂಡು ವಿಜೃಂಭಿಸಿತು. ಎರಡನೇ ಅತ್ಯುತ್ತಮ ನಟ ಪ್ರಶಸ್ತಿಯು `ದೇರ್ ವಿಲ್ ಬಿ ಬ್ಲಡ್' ಚಿತ್ರದ ನಟನೆಗಾಗಿ ಡೇನಿಯಲ್ ಡೇ -ಲೆವಿಸ್ ಅವರಿಗೆ ಲಭಿಸಿದರೆ, `ಲಾ ವೀ ಎನ್ ರೋಸ್'ದ ನಟನೆಗಾಗಿ ನಟಿ ಮಾರಿಯೋನ್ ಕೊಟಿಲ್ಲಾಡ್ ಅವರು ಅತ್ಯುತ್ತಮ ನಟಿ ಪ್ರಶಸ್ತಿ ಗೆದ್ದುಕೊಂಡರು. ಅತ್ಯುತ್ತಮ ಚೊಚ್ಚಲ ನಟನೆಗಾಗಿ ನೀಡಲಾಗುವ ಪ್ರಶಸ್ತಿಯು ಸ್ಪೇನಿನ ಜೇವಿಯರ್ ಬಾರ್ಡೆಮ್ ಅವರಿಗೆ ಲಭಿಸಿದ್ದು ಸ್ಪೇನಿಗೆ ಮೊತ್ತ ಮೊದಲ ಆಸ್ಕರ್ ಪ್ರಶಸ್ತಿಯನ್ನು ತಂದುಕೊಟ್ಟಿತು. `ನೋ ಕಂಟ್ರಿ ಫಾರ್ ಓಲ್ಡ್ ಮೆನ್' ಚಿತ್ರದಲ್ಲಿನ ನಟನೆ ಅವರಿಗೆ ಈ ಪ್ರಶಸ್ತಿಯನ್ನು ತಂದುಕೊಟ್ಟತು. ಡೇನಿಯಲ್ ಡೇ ಲೆವಿಸ್ ಅವರು `ದೇರ್ ವಿಲ್ ಬಿ ಬ್ಲಡ್' ಚಿತ್ರದ ತೈಲ ದೊರೆಯ ಪಾತ್ರಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ತಮ್ಮ ಹೆಗಲಿಗೆ ಏರಿಸಿಕೊಂಡರು. ಈ ಪಾತ್ರವು ಅವರಿಗೆ ಈ ಮೊದಲೇ `ಗೋಲ್ಡನ್ ಗ್ಲೋಬ್' ಮತ್ತು `ಬಾಫ್ಟಾ' ಪ್ರಶಸ್ತಿಗಳನ್ನು ತಂದು ಕೊಟ್ಟಿತ್ತು. 32ರ ಹರೆಯದ ಫ್ರಾನ್ಸ್ನ ನಟಿ ಮಾರಿಯೋನ್ ಕೊಟಿಲ್ಲಾಡ್ ಅವರು `ಲಾ ವೀ ಎನ್ ರೋಸ್' ಚಿತ್ರದಲ್ಲಿನ ತಮ್ಮ ದುರಂತ ಪಾತ್ರದ ನಟನೆಗಾಗಿ ಅತ್ಯುತ್ತಮ ನಟಿ ಪ್ರಶಸ್ತಿ ಗೆದ್ದುಕೊಂಡರು. ಇದರೊಂದಿಗೆ 1960ರ ಬಳಿಕ ಅತ್ಯುತ್ತಮ ಆಸ್ಕರ್ ಪ್ರಶಸ್ತಿ ಗೆದ್ದ ಫ್ರಾನ್ಸಿನ ಪ್ರಪ್ರಥಮ ನಟಿ ಎಂಬ ಹೆಗ್ಗಳಿಕೆ ಅವರದಾಯಿತು. 1960ರಲ್ಲಿ ಫ್ರಾನ್ಸಿನ ಸೀಮೋನೆ ಸಿಗ್ನೊರೆಟ್ ಈ ಪ್ರಶಸ್ತಿ ಗೆದ್ದಿದ್ದರು. ಅತ್ಯುತ್ತಮ ಅನಿಮೇಶನ್ ಚಿತ್ರಕ್ಕೆ ನೀಡಲಾಗುವ ಪ್ರಶಸ್ತಿಯು ಪಿಕ್ಸರ್-ಡಿಸ್ನಿ ಚಿತ್ರ `ರಟಟೌಯಿಲ್' ಚಿತ್ರಕ್ಕೆ ಲಭಿಸಿತು.

2008: ದೇಶದ ಮೊದಲ ಮಹಿಳಾ ರಾಷ್ಟ್ರಪತಿಯಾಗಿ ಜುಲೈ ತಿಂಗಳಲ್ಲಿ ಆಯ್ಕೆಯಾದ ಪ್ರತಿಭಾ ಪಾಟೀಲ್ ಅವರು ಸಂಸತ್ತಿನ ಜಂಟಿಸದನಗಳನ್ನು ಉದ್ದೇಶಿಸಿ ಚೊಚ್ಚಲ ಭಾಷಣ ಮಾಡಿದರು. 50 ನಿಮಿಷ ಅವಧಿಯಲ್ಲಿ 19 ಪುಟಗಳ ಅವರ ಲಿಖಿತ ಭಾಷಣವನ್ನು ಅತಿ ಗಣ್ಯರ ಗ್ಯಾಲರಿಯಲ್ಲಿ ಕುಳಿತ ಅವರ ಪತಿ ದೇವಿ ಸಿಂಗ್ ಶೆಖಾವತ್ ಅವರೂ ಆಲಿಸಿದರು.

2008: ಅರಬ್ಬಿ ಸಮುದ್ರದ ಸುಪ್ತ ದ್ವೀಪಗಳಲ್ಲಿ ಆಶ್ರಯ ಪಡೆದು ಕರ್ನಾಟಕ ರಾಜ್ಯದ ಪ್ರಮುಖ ಕೇಂದ್ರಗಳಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಪಾಕಿಸ್ಥಾನ ಮೂಲದ ಭಯೋತ್ಪಾದಕ ಸಂಘಟನೆಗಳು ಹವಣಿಸುತ್ತಿವೆ ಎಂದು ರಾಜ್ಯದ ಪೊಲೀಸ್ ಇಲಾಖೆ ಮತ್ತು ಕರಾವಳಿ ರಕ್ಷಣಾ ಪಡೆಗೆ ಕೇಂದ್ರ ಗುಪ್ತಚರ ಇಲಾಖೆ ತಿಳಿಸಿತು. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ವ್ಯಾಪ್ತಿಯ ಅರಬ್ಬಿ ಸಮುದ್ರದಲ್ಲಿ ಇರುವ ದ್ವೀಪಗಳಲ್ಲಿ ಸುಮಾರು 26 ದ್ವೀಪಗಳನ್ನು ಉಗ್ರರು ತಮ್ಮ ನೆಲೆಯಾಗಿ ಗುರುತಿಸಿಕೊಂಡಿದ್ದಾರೆ. ಇಲ್ಲಿ ಮಾರಕಾಸ್ತ್ರಗಳನ್ನು ಬಚ್ಚಿಡಲು ಅವರು ಸಿದ್ಧತೆ ನಡೆಸಿದ್ದು, ಎಚ್ಚರಿಕೆ ವಹಿಸಬೇಕು ಎಂದು ಕೇಂದ್ರ ಗುಪ್ತಚರ ಇಲಾಖೆ ಹೇಳಿತು.

2008: ಉಗ್ರರ ವಿರುದ್ಧ ಕಾರ್ಯಾಚರಣೆ ಮುಂದುವರೆಸಿದ ಸಿಓಡಿ ಪೊಲೀಸರು ಮತ್ತೊಬ್ಬ ಶಂಕಿತ ಉಗ್ರ ಸೈಯದ್ ಸಾದಿಕ್ ಸಮೀರ್ ಎಂಬಾತನನ್ನು ಬೆಂಗಳೂರಿನ ಗುರಪ್ಪನ ಪಾಳ್ಯದಲ್ಲಿ ಬಂಧಿಸಿದರು.

2008: ಮುಳ್ಳೇರಿಯಾ ಸಮೀಪದ ಕೋಟೂರು ಎರಿಂಜೇರಿಯ ಚೆಂಡೆಮೂಲೆಯ ಸುಧಾಮ ಮಣಿಯಾಣಿ (69) ಎಂಬುವವರು ಮನೆಯ ಸಮೀಪದ ಸುರಂಗವೊಂದರ ಕೆಸರಿನಲ್ಲಿ ಸಿಲುಕಿಕೊಂಡು ಅದೃಷ್ಟವಶಾತ್ ಬದುಕಿ ಬಂದರು.
ತಮ್ಮ ಮನೆಯ ಹಿತ್ತಲಿನಲ್ಲಿರುವ ಸುರಂಗದಿಂದ ಕೃಷಿಗೆ ಸಾಕಾಗುವಷ್ಟು ನೀರು ಹರಿಯುತ್ತಿಲ್ಲ ಎಂದು, ನೀರಿನ ಹರಿಯುವಿಕೆಗೆ ಅಡ್ಡವಾಗುವ ಕಸಕಡ್ಡಿಗಳನ್ನು ತೆಗೆಯಲು ಸುರಂಗ ಪ್ರವೇಶಿಸಿದರು. ನಂತರ ಸುರಂಗದಲ್ಲಿನ ಕೆಸರಿನಲ್ಲಿ ಹೂತು ಹೋದರು. ಒಳ ಹೋದ ಸುಧಾಮರು ಎರಡು ಗಂಟೆಯಾದರೂ ಹೊರಬಾರದಿರುವುದನ್ನು ಗಮನಿಸಿದ ಅವರ ಮಕ್ಕಳು, ಕೂಡಲೇ ಅಪಾಯವನ್ನರಿತು ಸುರಂಗದ ಒಳ ಪ್ರವೇಶಿಸಿದರು. ಒಳಗೆ ಕುತ್ತಿಗೆ ತನಕ ಕೆಸರಿನಲ್ಲಿ ಹೂತು ಹೋಗಿದ್ದ ತಂದೆಯನ್ನು ಕಂಡು ದಿಗಿಲಿನಿಂದ ಊರವರಿಗೆ ವಿಷಯ ತಿಳಿಸಿದರು. ನಂತರ ಪಾತನಡ್ಕದ ಸುರಂಗ ಕಾಮಗಾರಿ ಪ್ರವೀಣರಾದ ಚರಳಿಮೂಲೆ ಕೃಷ್ಣ ನಾಯ್ಕ ಹಾಗೂ ಅಗ್ನಿಶಾಮಕ ದಳ ನಡೆಸಿದ ಕಾರ್ಯಾಚರಣೆಯಲ್ಲಿ ಸುಧಾಮ ಮಣಿಯಾಣಿ ಬದುಕಿ ಬಂದರು. ಏಕ ಮುಖವಾಗಿದ್ದ ಸುಮಾರು 80 ಮೀಟರ್ ಆಳದ ಸುರಂಗದೊಳಗೆ ಕುತ್ತಿಗೆ ತನಕ ಹೂತು ಹೋಗಿದ್ದ ಸುಧಾಮರು ಸುರಕ್ಷಿತವಾಗಿ ಹೊರ ಬಂದಾಗ ರಾತ್ರಿಯಾಗಿತ್ತು. ಸುಮಾರು ಐದು ಗಂಟೆಗಳ ಕಾಲ ನಡೆದ ಕಾರ್ಯಾಚರಣೆಯಲ್ಲಿ ಉಸಿರಾಟಕ್ಕಾಗಿ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿತ್ತು. ಅಗ್ನಿಶಾಮಕ ದಳದ ಮನೋಜ್ ಹಾಗೂ ರಜೀಶ್ ಕಾರ್ಯಾಚರಣೆಯಲ್ಲಿ ಸಹಕರಿಸಿದ್ದರು.

2008: ಇದೇ ಮೊದಲ ಬಾರಿಗೆ ಭಾರತೀಯ ಮೂಲದ ಅಮೆರಿಕದ ಪ್ರಜೆ ನವಜೀತ್ ಕೇ. ಬಾಲ್ ಎಂಬ ಮಹಿಳೆ ಮೆಸಾಚುಸೆಟ್ಸಿನ ಕಂದಾಯ ಇಲಾಖೆಯ ಮುಖ್ಯಸ್ಥರಾಗಿ ನೇಮಕಗೊಂಡರು. ಅಮೆರಿಕದಲ್ಲಿ ಅಲ್ಪಸಂಖ್ಯಾತ ಸಮುದಾಯದ ಒಬ್ಬರು ಕಂದಾಯ ಇಲಾಖೆಯ ಮುಖ್ಯಸ್ಥರಾಗಿ ನೇಮಕವಾದದ್ದು ಇದೇ ಪ್ರಥಮ.

2008: ಅನುಚಿತ ವರ್ತನೆ ತೋರಿದ ಕಾರಣಕ್ಕಾಗಿ ಭಾರತ ತಂಡದ ವೇಗದ ಬೌಲರ್ ಇಶಾಂತ್ ಶರ್ಮ ಮೇಲೆ ಹೊಬಾರ್ಟಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಮ್ಯಾಚ್ ರೆಫರಿ ಜೆಫ್ ಕ್ರೋವ್ ಪಂದ್ಯ ಸಂಭಾವನೆಯ ಶೇಕಡಾ ಹದಿನೈದರಷ್ಟು ಮೊತ್ತದ ದಂಡ ವಿಧಿಸಿದರು. ಆದರೆ ಮಹೇಂದ್ರ ಸಿಂಗ್ ದೋನಿ ಬಳಗವು ಕ್ರೋವ್ ಈ ತೀರ್ಮಾನವನ್ನು ಆಕ್ಷೇಪಿಸಿತು. ಇಶಾಂತ್ ಆ ರೀತಿಯಲ್ಲಿ ವರ್ತಿಸಿದ್ದು ಎದುರಾಳಿ ಪಡೆಯವರು ಕೀಟಲೆ ಮಾಡಿ ಕೆಣಕಿದ್ದರಿಂದ ಎಂದು ಪ್ರತಿದೂರು ಕೂಡ ನೀಡಿತು.

2007: ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಕರ್ನಾಟಕದ ಗುಲ್ಬರ್ಗದಿಂದ 12 ಕಿ.ಮೀ. ದೂರದ ಸರಡಗಿ ಗ್ರಾಮದಲ್ಲಿ ತಮ್ಮ ಕನಸಿನ ಕೂಸಾದ ಸುವರ್ಣ ಗ್ರಾಮೋದಯ ಯೋಜನೆಗೆ ನಗಾರಿ ಬಾರಿಸುವ ಮೂಲಕ ಚಾಲನೆ ನೀಡಿದರು.

2007: ಭದ್ರಾವತಿಯ ಬೈಪಾಸ್ ರಸೆಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ 7 ಮಂದಿ ಸೇರಿದಂತೆ 9 ಮಂದಿ ಮೃತರಾದರು. ಮಾರುತಿ ವ್ಯಾನ್ ಮತ್ತು ಟ್ಯಾಂಕರ್ ಮುಖಾಮುಖಿ ಡಿಕ್ಕಿಯಾಗಿ ಈ ದುರಂತ ಸಂಭವಿಸಿತು.

2007: ಪಾನ್ ಮಸಾಲ ಖ್ಯಾತಿಯ ಮಾಣಿಕ್ ಚಂದ್ ಸಮೂಹವು ತನ್ನ ಕುಡಿಯುವ ನೀರು ಬ್ರ್ಯಾಂಡ್ ಉತ್ಪನ್ನವಾದ `ಆಕ್ಸಿರಿಚ್'ನ ಆಮ್ಲಜನಕೀಕರಣ ಪ್ರಕ್ರಿಯೆಗೆ ಭಾರತೀಯ ಹಕ್ಕುಸ್ವಾಮ್ಯ (ಪೇಟೆಂಟ್) ಪಡೆದುಕೊಂಡಿತು. ಮಾಣಿಕ್ ಚಂದ್ ಸಮೂಹದ ಅಧ್ಯಕ್ಷ ರಸಿಕ್ ಲಾಲ್ ಮಾಣಿಕ್ ಚಂದ್ ಧಾರಿವಾಲ್ ಅವರು ಬೆಂಗಳೂರಿನಲ್ಲಿ ಈ ವಿಚಾರ ಪ್ರಕಟಿಸಿದರು. ವಿಶೇಷ ತಂತ್ರಜ್ಞಾನದ ಮೂಲಕ ಈ ನೀರಿನಲ್ಲಿ ಶೇಕಡಾ 300ರಷ್ಟು ಕರಗಿದ ಆಮ್ಲಜನಕವನ್ನು ಹೆಚ್ಚುವರಿಯಾಗಿ ಸೇರಿಸಲಾಗುತ್ತದೆ. ಈ ತಂತ್ರಜ್ಞಾನದ ಬಳಕೆ ಇದೇ ಪ್ರಥಮ. ಹಾಗಾಗಿ ಇದರ ಮೇಲೆ ಪೇಟೆಂಟ್ ಪಡೆಯಲಾಯಿತು.

2006: ಬಾಂಗ್ಲಾದೇಶದ ರಾಜಧಾನಿ ಢಾಕಾ ನಗರದ ಮಧ್ಯಭಾಗದ ಆರು ಮಹಡಿಯ ಕಟ್ಟಡ ಕುಸಿದು ಕನಿಷ್ಠ 16 ಮಂದಿ ಮೃತರಾಗಿ ಇತರ ಹಲವರು ಅವಶೇಷಗಳ ಅಡಿ ಸಿಲುಕಿದರು.

2006: `ಬ್ಲ್ಯಾಕ್' ಮತ್ತು `ಪರಿಣೀತಾ' ತಾಂತ್ರಿಕ ವರ್ಗದ ಫಿಲ್ಮಫೇರ್ ಪ್ರಶಸ್ತಿಗಳನ್ನು ಪಡೆದುಕೊಂಡವು. ಉತ್ತಮ ನಟ ಪ್ರಶಸ್ತಿ ಅಮಿತಾಭ್ ಬಚ್ಚನ್ ಅವರಿಗೂ ಉತ್ತಮ ನಟಿ ಪ್ರಶಸ್ತಿ ರಾಣಿ ಮುಖರ್ಜಿ ಅವರಿಗೂ ಲಭಿಸಿತು.

2005: ನೋಬೆಲ್ ಪ್ರಶಸ್ತಿ ವಿಜೇತ ಮಾನವ ಹಕ್ಕುಗಳ ಸಂಘಟನೆ `ಅಮ್ನೆಸ್ಟಿ ಇಂಟರ್ ನ್ಯಾಷನಲ್' ಸ್ಥಾಪಕ ಪೀಟರ್ ಬೆನೆನ್ಸನ್ ತಮ್ಮ 83ನೇ ವಯಸ್ಸಿನಲ್ಲಿ ನಿಧನರಾದರು.

2001: ಜಗತ್ತಿನ ಖ್ಯಾತ ಬ್ಯಾಟ್ಸ್ ಮನ್ ಎಂದು ಹೆಸರು ಪಡೆದ ಸರ್ ಡೊನಾಲ್ಡ್ ಜಾರ್ಜ್ ಬ್ರಾಡ್ಮನ್ (1908-2001) ನಿಧನರಾದರು. ಸರಾಸರಿ 99.94 ರನ್ನುಗಳು, 10 ದ್ವಿಶತಕಗಳು, ಎರಡು ತ್ರಿಶತಕಗಳನ್ನು ಸಿಡಿಸುವ ಮೂಲಕ ಇಪ್ಪತ್ತನೇ ಶತಮಾನದ ಶ್ರೇಷ್ಠ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದರು.

1993: ದಕ್ಷಿಣ ಆಫ್ರಿಕಾದ ಕೇಪ್ ಟೌನಿನಲ್ಲಿ ನಡೆದ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 19.5 ಓವರುಗಳಲ್ಲಿ 43 ರನ್ನುಗಳನ್ನು ಗಳಿಸಿದ ಪಾಕಿಸ್ಥಾನ 2001ರ ವರೆಗಿನ ದಾಖಲೆಗಳಲ್ಲಿ ಅತ್ಯಂತ ಕಡಿಮೆ ರನ್ ಗಳಿಕೆಯ ದಾಖಲೆ ಮಾಡಿತು.

1988: ಭಾರತದ ಮೊತ್ತ ಮೊದಲ ನೆಲದಿಂದ ನೆಲಕ್ಕೆ ಚಿಮ್ಮುವ `ಪೃಥ್ವಿ' ಕ್ಷಿಪಣಿಯನ್ನು ಮೊದಲ ಬಾರಿಗೆ ಯಶಸ್ವಿಯಾಗಿ ಪರೀಕ್ಷಾರ್ಥ ಹಾರಿಸಲಾಯಿತು.

1986: ಫಿಲಿಪ್ಪೀನ್ಸ್ ಅಧ್ಯಕ್ಷ ಫರ್ಡಿನಾಂಡ್ ಮಾರ್ಕೋಸ್ ರಾಷ್ಟ್ರ ಬಿಟ್ಟು ಓಡಿ ಹವಾಯಿಯಲ್ಲಿ ಆಶ್ರಯ ಪಡೆದರು.

1964: ಮಹಮ್ಮದ್ ಅಲಿ (ಕ್ಯಾಸಿಯಸ್ ಕ್ಲೇ) ಮಿಯಾಮಿಯಲ್ಲಿ ಸೋನಿ ಲಿಸ್ಟನ್ ಅವರನ್ನು ಸೋಲಿಸಿ ಮೊತ್ತ ಮೊದಲ ಬಾರಿಗೆ ವಿಶ್ವ ಹೆವಿ ವೇಯ್ಟ್ ಬಾಕ್ಸಿಂಗ್ ಪ್ರಶಸ್ತಿ ಗೆದ್ದುಕೊಂಡರು.

1953: ಸಲಾಖೆಯ ಗೊಂಬೆಯಾಟದ ಕಲೆಗೆ ಅಂತರರಾಷ್ಟ್ರೀಯ ಮನ್ನಣೆ ತಂದುಕೊಟ್ಟ ದತ್ತಾತ್ರೇಯ ಅರಳಿಕಟ್ಟೆ ಅವರು ಅರಳಿಕಟ್ಟೆ ರಾಮರಾಯರು- ಲಲಿತಮ್ಮ ದಂಪತಿಯ ಮಗನಾಗಿ ಶೃಂಗೇರಿ ಸಮೀಪದ ಅರಳಿಕಟ್ಟೆ ಎಂಬ ಸ್ಥಳದಲ್ಲಿ ಜನಿಸಿದರು. ಅಂದಾಜು 9-10 ಕಿಲೋಗ್ರಾಂ ತೂಕದ ಗೊಂಬೆಗಳನ್ನು ಸಲಾಖೆಯಿಂದ ಹತೋಟಿಗೆ ಒಳಪಡಿಸಿ ಪೌರಾಣಿಕ ಪ್ರಸಂಗಗಳಿಗೆ ಕರ್ನಾಟಕ ಸಂಗೀತ, ನೃತ್ಯ, ನಾಟಕದ ಲೇಪ ಹಚ್ಚಿ, ಸರಳ ಮಾತುಗಾರಿಕೆಯ ಮೂಲಕ ಪ್ರೇಕ್ಷಕರ ಎದುರು ಕಥೆ ಬಿಚ್ಚುವ ಕಲೆಯಲ್ಲಿ ಅದ್ವಿತೀಯ ಸಾಧನೆ ಮಾಡಿದ ದತ್ತಾತ್ರೇಯ ಅವರಿಗೆ ದೇಶ ವಿದೇಶಗಳಲ್ಲೂ ಮನ್ನಣೆ, ಪ್ರಶಸ್ತಿಗಳು ಲಭಿಸಿವೆ. ಡಿಡಿ, ಇಂಟರ್ ನ್ಯಾಷನಲ್ ಟಿವಿ ಚಾನೆಲ್ಲುಗಳಲ್ಲೂ ಇವರ ಸಂದರ್ಶನ, ಗೊಂಬೆಯಾಟಗಳ ಸಾಕ್ಷ್ಯಚಿತ್ರಗಳು ಪ್ರದರ್ಶನಗೊಂಡಿವೆ.

1938: ಭಾರತದ ವಿಕೆಟ್ ಕೀಪಿಂಗ್ ಬ್ಯಾಟ್ಸ್ ಮನ್ ಫರೂಖ್ ಎಂಜಿನಿಯರ್ ಹುಟ್ಟಿದರು. ವಿಶ್ವಕಪ್ ಪಂದ್ಯದಲ್ಲಿ `ಪಂದ್ಯ ಶ್ರೇಷ್ಠ' ಪ್ರಶಸ್ತಿ ಪಡೆದ ಮೊದಲ ವಿಕೆಟ್ ಕೀಪಿಂಗ್ ಬ್ಯಾಟ್ಸ್ ಮನ್ ಎಂಬ ಖ್ಯಾತಿಗೆ ಇವರು ಪಾತ್ರರಾದರು.

1914: ಇಂಗ್ಲಿಷ್ ಕಲಾವಿದ ಹಾಗೂ `ಅಲೀಸ್ ಇನ್ ವಂಡರ್ ಲ್ಯಾಂಡ್' ಇಲ್ಲಸ್ಟ್ರೇಟರ್ ಜಾನ್ ಟೆನ್ನೀಲ್ ನಿಧನರಾದರು.

1894: ಮೆರ್ವಾನ್ ಷೆರಿಯರ್ ಇರಾನಿ (1894-1969) ಹುಟ್ಟಿದ ದಿನ. `ಮೆಹರ್ ಬಾಬಾ' ಎಂದೇ ಪಶ್ಚಿಮ ಭಾರತದಲ್ಲಿ ಖ್ಯಾತರಾಗಿರುವ ಈ ಈ ಆಧ್ಯಾತ್ಮಿಕ ಗುರು ತಮ್ಮ ಬದುಕಿನ 44 ವರ್ಷಗಳ ಕಾಲ `ಮೌನ' ಆಚರಿಸಿದರು.

1862: ಅಮೆರಿಕದ ಬ್ಯಾಂಕ್ ನೋಟುಗಳಾದ `ಗ್ರೀನ್ ಬ್ಯಾಕ್ಸ್' ಗಳನ್ನು ಅಂತರ್ಯುದ್ಧ ಕಾಲದಲ್ಲಿ ಅಧ್ಯಕ್ಷ ಅಬ್ರಹಾಂ ಲಿಂಕನ್ ಮೊತ್ತ ಮೊದಲ ಬಾರಿಗೆ ಬಿಡುಗಡೆ ಮಾಡಿದರು.

1778: ಜೋಸ್ ಡೆ ಸಾನ್ ಮಾರ್ಟಿನ್ (1778-1850) ಹುಟ್ಟಿದ ದಿನ. ಅರ್ಜೆಂಟೀನಾದ ಯೋಧ, ಮುತ್ಸದ್ಧಿ ಹಾಗೂ ರಾಷ್ಟ್ರೀಯ ನಾಯಕನಾದ ಈತ 1812ರಲ್ಲಿ ಅರ್ಜೆಂಟೀನಾ, 1818ರಲ್ಲಿ ಚಿಲಿ, 1821ರಲ್ಲಿ ಪೆರುವಿನಲ್ಲಿ ಸ್ಪಾನಿಷ್ ಆಳ್ವಿಕೆ ವಿರುದ್ಧ ಕ್ರಾಂತಿಗಳನ್ನು ಮುನ್ನಡೆಸಲು ನೆರವಾದರು.

No comments:

Advertisement