Monday, May 10, 2010

ಇಂದಿನ ಇತಿಹಾಸ History Today ಮೇ 09

ಇಂದಿನ ಇತಿಹಾಸ

ಮೇ 09

ಜೆಡಿ (ಯು) ನಾಯಕ ನಿತೀಶ್ ಕುಮಾರ್ ಅವರ ಮೇಲೆ ಅಚ್ಚರಿಯ ದಾಳಿ ನಡೆಸಿದ ಎಂ. ವೀರಪ್ಪ ಮೊಯಿಲಿ ಅವರನ್ನು ಕಾಂಗ್ರೆಸ್ ವರಿಷ್ಠ ಮಂಡಳಿಯು ಹಠಾತ್ತನೆ ಕಾಂಗ್ರೆಸ್ ಮಾಧ್ಯಮ ವಿಭಾಗದ ಅಧ್ಯಕ್ಷ ಸ್ಥಾನದಿಂದ ಕಿತ್ತು ಹಾಕಿತು. ಹಿಂದೆ ಇದೇ ಹುದ್ದೆ ನಿಭಾಯಿಸುತ್ತಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಜನಾರ್ದನ ದ್ವಿವೇದಿ ಅವರನ್ನು ಮೊಯಿಲಿ ಸ್ಥಾನಕ್ಕೆ ನೇಮಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿದವು.

2009: ಸತತ ಪರಿಶ್ರಮ, ಗುರಿ ಸಾಧಿಸುವ ಛಲವಿದ್ದರೆ ಯಶಸ್ಸು ಸಾಧಿಸಬಹುದು ಎಂಬುದಕ್ಕೆ ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ರಾಂಕ್ ಗಳಿಸುವ ಮೂಲಕ ಎಸ್.ಕೆ. ಶ್ರುತಿ ಸಾಕ್ಷಿಯಾದಳು. ಸರ್ಕಾರಿ ಬಸ್‌ಗಳಿಲ್ಲದೆ ಖಾಸಗಿ ಬಸ್ ಮತ್ತು ಟೆಂಪೋಗಳಲ್ಲಿ ಪ್ರತಿದಿನ ಕಾಲೇಜಿಗೆ ಪ್ರಯಾಣ ಮಾಡಿ ಕಡುಬಡತನದಲ್ಲಿ ಅಭ್ಯಾಸ ಮಾಡಿದ ಹರಪನಹಳ್ಳಿ ಎಸ್‌ಯುಜೆಎಂ ಕಾಲೇಜಿನ ವಿದ್ಯಾರ್ಥಿನಿ ಶ್ರುತಿ ಕನ್ನಡ 94, ಸಂಸ್ಕೃತ 92, ಇತಿಹಾಸ 92, ಐಚ್ಛಿಕ ಕನ್ನಡ 98, ರಾಜ್ಯಶಾಸ್ತ್ರ 97, ಶಿಕ್ಷಣ 91, ಒಟ್ಟು 564 (ಶೇ.94) ಅಂಕಗಳನ್ನು ಗಳಿಸಿ ಪ್ರಥಮ ರಾಂಕ್ ಪಡೆದು ತಾಲ್ಲೂಕಿನ ಹೆಮ್ಮೆಯ ಪುತ್ರಿ ಎನಿಸಿಕೊಂಡಳು. ಹರಪನಹಳ್ಳಿ ತಾಲ್ಲೂಕು ಕೇಂದ್ರದಿಂದ 17 ಕಿ.ಮೀ. ದೂರದ ಜೋಷಿಲಿಂಗಾಪುರ ಗ್ರಾಮದ ಜ್ಯೋತೆಪ್ಪ ಮತ್ತು ಮಂಜಮ್ಮ ದಂಪತಿ ಮಗಳಾದ ಶ್ರುತಿ ಪ್ರಾಥಮಿಕ ಹಂತದಿಂದಲೇ ಯಾವ ಖಾಸಗಿ ಟ್ಯೂಷನ್‌ಗಳ ಗೀಳಿಗೆ ಬೀಳದೆ ಹಾಸ್ಟೆಲ್ ಮತ್ತಿತರ ಸೌಲಭ್ಯಗಳಿಲ್ಲದೆ ಸರ್ಕಾರಿ ಶಾಲೆಗಳಲ್ಲಿ ಅಭ್ಯಾಸ ಮಾಡಿದ ಬಾಲಕಿ. ಕಾನ್ವೆಂಟ್ ಮತ್ತು ವಸತಿ ಶಾಲೆಗಳಲ್ಲಿ ಅಭ್ಯಾಸ ಮಾಡಿದವರಿಗೆ ಮಾತ್ರ ರಾಂಕ್ ಎನ್ನುವವರಿಗೆ ಸವಾಲು ಎಂಬಂತೆ ಶ್ರುತಿ ಸಾಧನೆ ಮಾಡಿ ತೋರಿಸಿದಳು.

2009: ಕನ್ನಡ ಮತ್ತು ತೆಲುಗು ಭಾಷೆಗಳಿಗೆ ಶಾಸ್ತ್ರೀಯ ಸ್ಥಾನಮಾನ ನೀಡಲು ನವದೆಹಲಿಯಲ್ಲಿ ನಡೆದ ಕೇಂದ್ರ ಸಂಪುಟ ಸಭೆ ಒಪ್ಪಿಗೆ ನೀಡಿತು. ಈ ಮೂಲಕ ಶಾಸ್ತ್ರೀಯ ಸ್ಥಾನಮಾನ ಸಿಗಲು ಬೇಕಾಗಿದ್ದ ತಾಂತ್ರಿಕ ಅಗತ್ಯವೊಂದು ಪೂರ್ಣಗೊಂಡಂತಾಯಿತು. 2008ರ ರಾಜ್ಯೋತ್ಸವದ ಸಂದರ್ಭದಲ್ಲೇ ಪ್ರಧಾನಿ ಮನಮೋಹನ್ ಸಿಂಗ್ ಅವರು ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡಲು ಸಮ್ಮತಿ ಸೂಚಿಸಿದ್ದರು. ಆದರೆ ಇದು ಮದ್ರಾಸ್ ಹೈಕೋರ್ಟಿನಲ್ಲಿ ಸಲ್ಲಿಸಲಾದ ಪ್ರಕರಣವೊಂದರ ಫಲಶ್ರುತಿಯನ್ನು ಆಧರಿಸಿರುತ್ತದೆ ಎಂದು ತಿಳಿಸಲಾಗಿತ್ತು. ಈದಿನ ನಡೆದ ಸಂಪುಟ ಸಭೆ ಪ್ರಧಾನಿ ಅವರು ನೀಡಿದ ಒಪ್ಪಿಗೆಗೆ ಸಮ್ಮತಿ ನೀಡಿತು.

2009: ಶ್ರೀಲಂಕಾದಲ್ಲಿ ಮುಂದುವರಿದ ಘೋರ ಕಾಳಗದಲ್ಲಿ ಒಂದೆಡೆ ಭೂಸೇನೆಯು ಇನ್ನಷ್ಟು ಮುನ್ನುಗ್ಗಿ 66 ತಮಿಳು ಉಗ್ರರ ಹತ್ಯೆ ಮಾಡಿದರೆ, ಇನ್ನೊಂದೆಡೆ ನೌಕಾಪಡೆಯು ವೈರಿಗಳ ಎರಡು ದೋಣಿಗಳನ್ನು ಹೊಡೆದುರುಳಿಸಿ 14 ಬಂಡುಕೋರರನ್ನು ಹತ್ಯೆ ಮಾಡಿತು. ಯುದ್ಧ ನಿರ್ಬಂಧ ವಲಯದಲ್ಲಿ ಎಲ್‌ಟಿಟಿಇ ಹಿಡಿತದಲ್ಲಿ ಅಳಿದುಳಿದ ಪ್ರದೇಶವನ್ನೂ ಸೇನಾ ಪಡೆಗಳು ವಶಪಡಿಸಿಕೊಳ್ಳತೊಡಗಿದವು. 'ಈ ಸಂದರ್ಭದಲ್ಲಿ 14 ಕಡಲು ವ್ಯಾಘ್ರರು ಸೇರಿ ಕನಿಷ್ಠ 80 ತಮಿಳು ಉಗ್ರರು ಹತರಾಗಿದ್ದಾರೆ' ಎಂದು ರಕ್ಷಣಾ ಸಚಿವಾಲಯ ಹೇಳಿತು.

2009: ಜೆಡಿ (ಯು) ನಾಯಕ ನಿತೀಶ್ ಕುಮಾರ್ ಅವರ ಮೇಲೆ ಅಚ್ಚರಿಯ ದಾಳಿ ನಡೆಸಿದ ಎಂ. ವೀರಪ್ಪ ಮೊಯಿಲಿ ಅವರನ್ನು ಕಾಂಗ್ರೆಸ್ ವರಿಷ್ಠ ಮಂಡಳಿಯು ಹಠಾತ್ತನೆ ಕಾಂಗ್ರೆಸ್ ಮಾಧ್ಯಮ ವಿಭಾಗದ ಅಧ್ಯಕ್ಷ ಸ್ಥಾನದಿಂದ ಕಿತ್ತು ಹಾಕಿತು. ಹಿಂದೆ ಇದೇ ಹುದ್ದೆ ನಿಭಾಯಿಸುತ್ತಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಜನಾರ್ದನ ದ್ವಿವೇದಿ ಅವರನ್ನು ಮೊಯಿಲಿ ಸ್ಥಾನಕ್ಕೆ ನೇಮಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿದವು. ನಿತೀಶ್ ಕುಮಾರ್ ಅವರನ್ನು 'ಹೀರೋ' ಮಾಡಲು ಕಾಂಗ್ರೆಸ್ ಪಕ್ಷವು ಹೊರಡುವುದಿಲ್ಲ ಎಂದು ಮೊಯಿಲಿ ಹೇಳಿದ್ದರು.

2009: ಬೆಂಗಳೂರು ವಿಶ್ವವಿದ್ಯಾಲಯದ ಸಂವಹನ ವಿಭಾಗದ ಪ್ರಾಧ್ಯಾಪಕ ಪ್ರೊ.ಬಿ.ಎ.ಶ್ರೀಧರ (59) ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೂಲತಃ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದವರಾದ ಶ್ರೀಧರ ಅವರು ಹತ್ತು ದಿನಗಳ ಹಿಂದೆ ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. 'ಪ್ರಜಾವಾಣಿ'ಯಲ್ಲಿ ಕೆಲವು ತಿಂಗಳುಗಳ ಕಾಲ 'ಟಿವಿ ಲೋಕ' ಅಂಕಣ ಬರೆದಿದ್ದ ಶ್ರೀಧರ್ ಅವರ ಮೂರು ಕೃತಿಗಳು ಇತ್ತೀಚೆಗೆ ಪ್ರಕಟವಾಗಿದ್ದವು. ಜಗತ್ತಿನ ಶ್ರೇಷ್ಠ ಚಿಂತಕರನ್ನು ಕುರಿತ 'ಇಳೆಯ ಬೆಳಗು', ಇಪ್ಪತ್ತನೇ ಶತಮಾನದ ವಿದ್ಯಮಾನಗಳನ್ನು ಕುರಿತ 'ಪಲ್ಲಟ ಪರ್ವ', ಮಹಾತ್ಮ ಗಾಂಧೀಜಿ ಚಿಂತನೆಗಳನ್ನು ಕುರಿತ 'ಬಾಪೂ ಚಿಂತನೆ' ಎಂಬ ಬರಹ ಸಂಕಲನಗಳು ಬಿಡುಗಡೆಯಾಗಿದ್ದವು.

2008: ಹಿಂದೂಗಳ ಮನ ನೋಯಿಸದಿರಲು ಬ್ರಿಟಿಷ್ ಏರ್ವೇಸ್ ತನ್ನ ಅಂತಾರಾಷ್ಟ್ರೀಯ ವಿಮಾನಯಾನದ ಎಕಾನಮಿ ದರ್ಜೆಯ ಪ್ರಯಾಣಿಕರ ಖಾದ್ಯಪಟ್ಟಿಯಿಂದ ಗೋಮಾಂಸವನ್ನು ತೆಗೆದುಹಾಕಿತು. ಬ್ರಿಟಿಷ್ ಏರ್ ವೇಸ್ಗೆ ಭಾರತ ಎರಡನೇ ಅತಿ ದೊಡ್ಡ ಮಾರುಕಟ್ಟೆ. `ಧಾರ್ಮಿಕ ನಿರ್ಬಂಧ'ದ ಅಡಿ ಗೋಮಾಂಸಕ್ಕೆ ಬದಲು ಮೀನು, ಕೋಳಿಮಾಂಸ ನೀಡಲಾಗುವದು ಎಂದು ಏರ್ ವೇಸ್ ತಿಳಿಸಿತು.

2008: ಹೈದರಾಬಾದಿನ ಕೋಶ ಮತ್ತು ಅಣು ಜೀವಶಾಸ್ತ್ರ ಕೇಂದ್ರದ ವಿಜ್ಞಾನಿಗಳು ಗಿಡಗಳ ವಂಶವಾಹಿಯೊಂದರ (ಜೀನ್) ಕಿವಿ ಹಿಂಡಿ ಅದರ ಲಿಂಗ ಪರಿವರ್ತಿಸಲು ಸಾಧ್ಯ ಎಂದು ಕಂಡು ಕೊಂಡಿರುವುದಾಗಿ ಪ್ರಕಟಿಸಿದರು. ಈ ಸಂಶೋಧನೆಯಿಂದ ಬೆಳೆಗಳ ಉತ್ಪಾದನೆ ಹೆಚ್ಚಳ ಸುಸ್ಥಿರಗೊಳ್ಳುವಂತೆ ಮಾಡಬಹುದು ಎಂಬುದು ಈ ವಿಜ್ಞಾನಿಗಳು ಲೆಕ್ಕಾಚಾರ. `ಡ್ಯಾಡ್' ಹೆಸರಿನ ಈ ವಂಶವಾಹಿಯನ್ನು ಗುರುತಿಸಿದವರು ಕೇಂದ್ರದ ಖ್ಯಾತ ಸಂಶೋಧಕ ಇಮ್ರಾನ್ ಸಿದ್ದಿಕಿ. ಅರಬಿಡೋಪ್ಸಿಸ್ ಎಂಬ ಗಿಡದಲ್ಲಿನ ಈ ವಂಶವಾಹಿಯ ವಿಶೇಷ ಗುಣವನ್ನು ಅವರು ಪತ್ತೆ ಮಾಡಿದರು. ಈ ನಿರ್ದಿಷ್ಟ ವಂಶವಾಹಿ ಎಲ್ಲ ಗಿಡಮರಗಳಲ್ಲೂ ಇರುತ್ತದೆ ಎಂಬುದನ್ನು ನಾವು ಪತ್ತೆ ಹಚ್ಚಿದ್ದೇವೆ ಎನ್ನುತ್ತಾರೆ ಸಿದ್ದಿಕಿ. ಈ ಸಂಶೋಧನೆ ಖಚಿತ ಹಂತಕ್ಕೆ ಬಂದರೆ ರೈತರು ಹೈಬ್ರಿಡ್ ಬೀಜಗಳನ್ನು ಖರೀದಿಸದೆಯೇ ಅತಿ ಹೆಚ್ಚು ಬೆಳೆ ಬೆಳೆಯುವ ಸಸಿಗಳನ್ನು ಬೆಳೆಸಿಕೊಳ್ಳಬಹುದು ಎಂಬುದು ಸಿದ್ದಿಕಿ ಮತ್ತು ಇತರ ವಿಜ್ಞಾನಿಗಳು ಅಭಿಪ್ರಾಯ.

2008: ಜಮ್ಮು ವಲಯದ ಸಾಂಬಾ ವಿಭಾಗದಲ್ಲಿ ಬಿ ಎಸ್ ಎಫ್ ತಪಾಸಣಾ ಕೇಂದ್ರದ ಮೇಲೆ ಪಾಕಿಸ್ಥಾನದ ಕಡೆಯಿಂದ ಭಾರಿ ಗುಂಡಿನ ದಾಳಿ ನಡೆಯಿತು. ಉಗ್ರಗಾಮಿಗಳ ನುಸುಳುವಿಕೆ ಯತ್ನ ಇದೆಂದು ವರದಿಗಳು ಹೇಳಿದವು. ರಾತ್ರಿ 10.40ರ ವೇಳೆಯಲ್ಲಿ ಈ ಘಟನೆ ನಡೆಯಿತು. ಬಿ ಎಸ್ ಎಫ್ ನ 112ನೇ ಬೆಟಾಲಿಯನ್ನಿಗೆ ಸೇರಿದ ತಪಾಸಣಾ ಕೇಂದ್ರದ ಮೇಲೆ ಭಾರಿ ಗುಂಡಿನ ದಾಳಿ ನಡೆಯಿತು. ಶಂಕಿತ ಉಗ್ರಗಾಮಿಗಳು ಬಿ ಎಸ್ ಎಫ್ ತಪಾಸಣಾ ಕೇಂದ್ರದ ಮೇಲೆ ಸುಮಾರು 1000 ಸುತ್ತು ಗುಂಡು ಹಾರಿಸಿ 16 ಗ್ರೆನೇಡುಗಳನ್ನು ಎಸೆದರು.

2008: ಐಪಿಎಲ್ ಪಂದ್ಯವೊಂದರಲ್ಲಿ ಆಫ್ ಸ್ಪಿನ್ನರ್ ಹರಭಜನ್ ಸಿಂಗ್ ಅವರು ವೇಗಿ ಎಸ್. ಶ್ರೀಶಾಂತ್ ಕೆನ್ನೆಗೆ ಬಾರಿಸಿದ ಪ್ರಕರಣದ ವಿಚಾರಣೆಯನ್ನು ಆಯುಕ್ತ ಸುಧೀರ್ ನಾನಾವತಿ ಅವರು ಮುಗಿಸಿದರು.

2008: ಪಾಕಿಸ್ಥಾನದ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೊ ಅವರು 1993ರಲ್ಲಿ ತಾವು ಪ್ರಧಾನಿ ಆಗಿದ್ದಾಗ ಪರಮಾಣು ತಂತ್ರಜ್ಞಾನದ ರಹಸ್ಯವನ್ನು ಉತ್ತರ ಕೊರಿಯಾಕ್ಕೆ ತಮ್ಮ ಕೋಟಿನೊಳಗೇ ಇರಿಸಿ ರವಾನಿಸಿದ ಅಂಶ ಬಯಲಾಯಿತು. ಭುಟ್ಟೊ ಅವರ ಆಪ್ತ ಗೆಳೆಯ ಹಾಗೂ ಆಕ್ಸ್ ಫರ್ಡ್ ಸಹಪಾಠಿ ಶ್ಯಾಮ್ ಭಾಟಿಯಾ ಅವರು ಬರೆದಿರುವ `ಗುಡ್ ಬೈ ಶಹಜಾದಿ' ಜೀವನ ಚರಿತ್ರೆ ಕೃತಿ ಈ ಸ್ಫೋಟಕ ಅಂಶವನ್ನು ಬಹಿರಂಗಪಡಿಸಿತು. ಕ್ಷಿಪಣಿ ಪಡೆಯುವ ಸಲುವಾಗಿ ಪಾಕಿಸ್ಥಾನವು ಉತ್ತರ ಕೊರಿಯಾಕ್ಕೆ ಯುರೇನಿಯಮ್ಮನ್ನು ಇಂಧನವಾಗಿ ಬಳಸುವ (ಎನ್ರಿಚ್ ಮೆಂಟ್) ತಂತ್ರಜ್ಞಾನವನ್ನು ಹಸ್ತಾಂತರಿಸಿತ್ತು. ಭುಟ್ಟೊ ಅವರೇ ಇದರಲ್ಲಿ ನೇರ ಪಾತ್ರ ವಹಿಸಿದ್ದರು ಎಂದು ಕೃತಿ ತಿಳಿಸಿತು. ಶ್ಯಾಮ್ ಭಾಟಿಯಾ ಅವರೊಂದಿಗೆ ಸಂಭಾಷಣೆ ನಡೆಸುತ್ತಿದ್ದಾಗ ಸ್ವತಃ ಬೆನಜೀರ್ ಭುಟ್ಟೊ ಅವರೇ ಈ ಮಾಹಿತಿ ನೀಡಿದ್ದರು ಎಂದು ಕೃತಿ ತಿಳಿಸಿತು. ಪಾಕಿಸ್ಥಾನದ ಸೇನಾ ಸಂಶೋಧನೆಯ ಪ್ರತಿಯೊಂದು ನಡೆಯನ್ನೂ ಭಾರತ, ರಷ್ಯ ಮತ್ತು ಕೆಲವು ಪಾಶ್ಚಾತ್ಯ ರಾಷ್ಟ್ರಗಳು ಸೂಕ್ಷ್ಮವಾಗಿ ಗಮನಿಸುತ್ತಿದ್ದವು. ಇವರೆಲ್ಲರ ಕಣ್ಣು ತಪ್ಪಿಸಲು ಭುಟ್ಟೊ ಅವರು ಸ್ವತಃ ತಾವೇ ಈ ಸೂಕ್ಷ್ಮ ಮಾಹಿತಿ ರವಾನೆಯ ಹೊಣೆ ಹೊತ್ತುಕೊಂಡರು ಎಂದು ಪುಸ್ತಕ ತಿಳಿಸಿತು. `ಭುಟ್ಟೊ ಅವರು 1993ರ ಕೊನೆಯಲ್ಲಿ ಉತ್ತರ ಕೊರಿಯಾಕ್ಕೆ ಭೇಟಿ ನೀಡುವ ಕಾರ್ಯಕ್ರಮ ನಿಗದಿಯಾಗಿತ್ತು. ಪರಮಾಣು ತಂತ್ರಜ್ಞಾನದ ಮಾಹಿತಿಯನ್ನು ತಾವೇ ತರಲಿದ್ದು, ಪೆಂಗ್ಯಾಂಗಿಗೆ ತಲುಪಿದ ತಕ್ಷಣ ಅದನ್ನು ಹಸ್ತಾಂತರಿಸುವುದಾಗಿ ಅವರು ಉತ್ತರ ಕೊರಿಯಾಕ್ಕೆ ತಿಳಿಸಿದರು. ಇಸ್ಲಾಮಾಬಾದಿನಿಂದ ತೆರಳುವ ಮೊದಲು ಅವರು ಆಳವಾದ ಜೇಬು ಇರುವ ಓವರ್ ಕೋಟ್ ಒಂದನ್ನು ಖರೀದಿಸಿದರು. ಉತ್ತರ ಕೊರಿಯಾ ಬಯಸಿದ್ದ ಯುರೇನಿಯಂ ಎನ್ರಿಚ್ ಮೆಂಟ್ ತಂತ್ರಜ್ಞಾನದ ಬಗ್ಗೆ ಮಾಹಿತಿ ಇದ್ದ ಸಿ.ಡಿ.ಗಳನ್ನು ಜೇಬಿನಲ್ಲಿ ಇಟ್ಟರು' ಎಂದು ಪುಸ್ತಕ ವಿವರಿಸಿತು. ವಾಪಸ್ ಬರುವಾಗ ಅವರು ಉತ್ತರ ಕೊರಿಯಾದ ಕ್ಷಿಪಣಿ ಮಾಹಿತಿಗಳನ್ನು ಸಿ.ಡಿ.ಗಳಲ್ಲಿ ತಂದಿದ್ದರು' ಎಂದು ಶ್ಯಾಮ್ ಭಾಟಿಯಾ ಕೃತಿ ಹೇಳಿತು.

2008: ವಿಶ್ವ ಚೆಸ್ ಚಾಂಪಿಯನ್ ಭಾರತದ ವಿಶ್ವನಾಥನ್ ಆನಂದ್ ಅವರು ಚೆಸ್ ಆಟಗಾರರಿಗೆ ನೀಡಲಾಗುವ ಅತ್ಯುನ್ನತ ಪದವಿ `ಆಸ್ಕರ್' ಪ್ರಶಸ್ತಿಯನ್ನು ಐದನೇ ಬಾರಿ ಪಡೆದರು. 2007ರಲ್ಲಿ ಆನಂದ್ ತೋರಿದ ಶ್ರೇಷ್ಠ ಸಾಧನೆಗಾಗಿ ಈ ಪ್ರಶಸ್ತಿ ನೀಡಲಾಯಿತು. ಆನಂದ್ ಈ ಮೊದಲು 1997, 1998, 2003 ಹಾಗೂ 2004ರಲ್ಲಿ ಈ ಗೌರವ ಪಡೆದಿದ್ದರು.

2008: ಇಟಲಿಯ ಪ್ರಧಾನಿಯಾಗಿ ಸಿಲ್ವಿಯೊ ಬೆರ್ಲುಸ್ ಕೋನಿ (71) ಅವರು ಮೂರನೇ ಬಾರಿಗೆ ಅಧಿಕಾರ ವಹಿಸಿಕೊಂಡರು. ಏಪ್ರಿಲ್ 13-14ರಂದು ನಡೆದ ಚುನಾವಣೆಯಲ್ಲಿ ಸಿಲ್ವಿಯೊ ಅವರ ಕನ್ಸರ್ವೇಟಿವ್ ಪಕ್ಷ ಬಹುಮತ ಗಳಿಸಿತ್ತು.

2007: ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರ ಹಿರಿಯ ಪುತ್ರ ಎಂ.ಕೆ. ಅಳಗಿರಿ ಅವರ ಬೆಂಬಲಿಗರು ಮದುರೆಯಲ್ಲಿ ಜನಪ್ರಿಯ ತಮಿಳು ದೈನಿಕ `ದಿನಕರನ್' ಕಚೇರಿ ಮೇಲೆ ದಾಳಿ ಮಾಡಿ ಇಬ್ಬರು ನೌಕರರು ಹಾಗೂ ಭದ್ರತಾ ಸಿಬ್ಬಂದಿಯನ್ನು ಕೊಂದು ಹಾಕಿದರು. ಇದರೊಂದಿಗೆ ಆಡಳಿತಾರೂಢ ಡಿಎಂಕೆಯ ಸಂಭಾವ್ಯ ಉತ್ತರಾಧಿಕಾರಿ ಸಮರ ಬಹಿರಂಗವಾಗಿ ಬೀದಿಗೆ ಬಂತು. ಕರುಣಾನಿಧಿಯ ಕಿರಿಯ ಪುತ್ರ ಎಂ.ಕೆ. ಸ್ಟಾಲಿನ್ ಅವರನ್ನು 84ರ ಹರೆಯದ ಕರುಣಾನಿಧಿ ಅವರ ರಾಜಕೀಯ ಉತ್ತರಾಧಿಕಾರಿ ಎಂಬುದಾಗಿ ಬಿಂಬಿಸಿ `ದಿನಕರನ್' ಪ್ರಕಟಿಸಿದ ಸಮೀಕ್ಷೆಗೆ ಪ್ರತಿಭಟನೆಯಾಗಿ ಈ ದಾಳಿ ನಡೆಯಿತು.

2007: ಮೂಲಸೌಕರ್ಯಗಳಿಲ್ಲದ ಕಾರಣಕ್ಕಾಗಿ 27 ನರ್ಸಿಂಗ್ ಕಾಲೇಜುಗಳ ಮಾನ್ಯತೆಯನ್ನು (ಸಂಯೋಜನೆ) ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವ ವಿದ್ಯಾಲಯವು ರದ್ದುಪಡಿಸಿತು. ಹೈಕೋರ್ಟ್ ನೀಡಿರುವ ತೀರ್ಪಿನ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವಿ.ವಿ. ಕುಲಪತಿ ಡಾ.ಪಿ.ಎಸ್. ಪ್ರಭಾಕರನ್ ಪ್ರಕಟಿಸಿದರು.

2007: ಮಹಿಳಾ ನೌಕರರಿಗೆ ರಾತ್ರಿ ಪಾಳಿಯನ್ನು ನಿಷೇಧಿಸುವ ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆ ಕಾಯ್ದೆ- 1961ರ ತಿದ್ದುಪಡಿಗೆ ರಾಜ್ಯ ಸರ್ಕಾರವು ಸಮ್ಮತಿ ನೀಡಿದ್ದು, ರಾಜ್ಯಪಾಲರ ಮುದ್ರೆ ಪಡೆದ ನಂತರ ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಕಾಯ್ದೆ 2007 ನ್ನು ಏಪ್ರಿಲ್ 30ರಂದು ರಾಜ್ಯಪತ್ರದಲ್ಲಿ (ಗೆಜೆಟ್) ಪ್ರಕಟಿಸಿದೆ, ಈ ಸಂಬಂಧ ಅಧಿಸೂಚನೆ 15 ದಿನಗಳ ಒಳಗೆ ಜಾರಿಯಾಗಲಿದೆ ಎಂದು ಕಾರ್ಮಿಕ ಸಚಿವ ಇಕ್ಬಾಲ್ ಅನ್ಸಾರಿ ಪ್ರಕಟಿಸಿದರು.

2007: ಕರ್ನಾಟಕದಲ್ಲಿ ಸುಮಾರು 1728.68 ಕೋಟಿ ರೂಪಾಯಿ ಹೂಡಿಕೆಯ ಎರಡು ವಿಶೇಷ ವಿತ್ತ ವಲಯಗಳಿಗೆ ಕೇಂದ್ರ ಸರ್ಕಾರವು ಮಂಜೂರಾತಿ ನೀಡಿತು. ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲ್ಲೂಕಿನ ತುಂಬೆ ಗ್ರಾಮದ ಬಳಿ 432.84 ಕೋಟಿ ರೂಪಾಯಿ ಹೂಡಿಕೆಯೊಂದಿಗೆ ಮಾಹಿತಿ ತಂತ್ರಜ್ಞಾನ ವಲಯ ಸ್ಥಾಪನೆ ಹಾಗೂ ಉಡುಪಿ ತಾಲ್ಲೂಕಿನ ಹೆಜಮಾಡಿ, ನಂದಿಕೂರು, ಫಲಿಮಾರು ಹಾಗೂ ನಡ್ಸಾಲು (ಪಡುಬಿದ್ರಿ) ಗ್ರಾಮಗಳ ಬಳಿ ಉನ್ನತ ತಂತ್ರಜ್ಞಾನ ಉತ್ಪನ್ನಗಳು ಹಾಗೂ ಸಂಬಂಧಿತ ಸೇವೆಗಳ ವಿಶೇಷ ಆರ್ಥಿಕ ವಲಯ ಸ್ಥಾಪನೆ ಇವುಗಳಲ್ಲಿ ಸೇರಿವೆ.

2007: ಪ್ರಶಸ್ತಿ ಪ್ರದಾನ ಸಮಾರಂಭ ಒಂದರಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಅವರ ಪಂಚೆ ಎಳೆದ ಆರೋಪ ಹೊತ್ತಿದ್ದ ಕನ್ನಡ ಸಂಘರ್ಷ ಸಮಿತಿಯ ಐವರು ಪದಾಧಿಕಾರಿಗಳನ್ನು ನಿರ್ದೋಷಿಗಳು ಎಂದು ಬೆಂಗಳೂರು ನಗರದ ಒಂದನೇ ಹೆಚ್ಚುವರಿ ಪ್ರಧಾನ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್ ತೀರ್ಪು ನೀಡಿತು.

2007: ಭೂ ಮೇಲ್ಮೈಯಿಂದ ಭೂ ಮೇಲ್ಮೈಗೆ ನೆಗೆಯುವಂತಹ ಅತ್ಯಾಧುನಿಕ ಮಧ್ಯಂತರಗಾಮೀ ಸ್ವದೇಶೀ ನಿರ್ಮಿತ `ಪೃಥ್ವಿ-1' ಕ್ಷಿಪಣಿಯ ಪರೀಕ್ಷಾ ಉಡಾವಣೆಯನ್ನು ಭಾರತವು ಒರಿಸ್ಸಾದ ಬಾಲಸೋರ್ ಸಮೀಪದ 15 ಕಿ.ಮೀ. ದೂರದ ಚಂಡಿಪುರದ ಸಮಗ್ರ ಪರೀಕ್ಷಾ ವಲಯದಿಂದ ಯಶಸ್ವಿಯಾಗಿ ನಡೆಸಿತು.

2007: ಲೇಖಕ ಮತ್ತು ವಿಶ್ವಸಂಸ್ಥೆಯ ಮಾಜಿ ಪ್ರಧಾನ ಕಾರ್ಯದರ್ಶಿ ಶಶಿ ತರೂರ್ ಅವರಿಗೆ ಸಾಗರೋತ್ತರ ಭಾರತೀಯರಿಗೆ ನೀಡುವ ಅತ್ಯುನ್ನತ ಪ್ರಶಸ್ತಿಯಾದ ಪ್ರವಾಸಿ ಭಾರತೀಯ ಸಮ್ಮಾನ್ ಪ್ರಶಸ್ತಿಯನ್ನು ನೀಡಲಾಯಿತು.

2007: ಕನ್ನಡ ಸಾಹಿತ್ಯ ಪರಿಷತ್ ಮತ್ತು ಬಿಎಂಟಿಸಿ ಸಹಯೋಗದಲ್ಲಿ ನೀಡಲಾಗುವ ಪ್ರತಿಷ್ಠಿತ `ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ನೃಪತುಂಗ ಪ್ರಶಸ್ತಿ'ಗೆ ಹಿರಿಯ ಸಾಹಿತಿ ಪ್ರೊ. ದೇ. ಜವರೇಗೌಡ ಅವರನ್ನು ಆಯ್ಕೆ ಮಾಡಲಾಯಿತು.

2006: ಭಾರತದ ಮಹತ್ವಾಕಾಂಕ್ಷೆಯ `ಚಂದ್ರಯಾನ-1' ಯೋಜನೆಯ ಐತಿಹಾಸಿಕ ಒಪ್ಪಂದ ಪತ್ರಕ್ಕೆ ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದ ಜಾಗತಿಕ ದಿಗ್ಗಜ ಸಂಸ್ಥೆಗಳಾದ ಭಾರತದ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಮತ್ತು ಅಮೆರಿಕದ ಬಾಹ್ಯಾಕಾಶ ಸಂಸ್ಥೆ `ನಾಸಾ' ಸಹಿ ಹಾಕಿದವು. ಇದರೊಂದಿಗೆ ಉಭಯ ರಾಷ್ಟ್ರಗಳ ಬಾಹ್ಯಾಕಾಶ ಸಂಶೋಧನೆ ಕ್ಷೇತ್ರದಲ್ಲಿ ಹೊಸ ಅಧ್ಯಾಯ ಆರಂಭಗೊಂಡಿತು. ಭಾರತದ ಶ್ರೀಹರಿಕೋಟಾದಿಂದಲೇ ಮಾನವ ರಹಿತ `ಚಂದ್ರಯಾನ-1' ಉಪಗ್ರಹ ಉಡಾವಣೆಗೊಳ್ಳಲಿದ್ದು, ಚಂದ್ರಲೋಕದ ಪೂರ್ವಾಪರಗಳ ಸಂಶೋಧನೆ ನಡೆಸುವುದು.

2006: ವಿವಾದಾತ್ಮಕ `ಲಾಭದ ಹುದ್ದೆ' ವ್ಯಾಪ್ತಿಯಿಂದ ಇನ್ನಷ್ಟು ಹುದ್ದೆಗಳಿಗೆ ವಿನಾಯ್ತಿ ನೀಡುವ ಸಲುವಾಗಿ ಕಾಯ್ದೆಗೆ ತಿದ್ದುಪಡಿ ತರಲು ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ ನಿರ್ಧರಿಸಿತು.

2006: ವಾರಣಾಸಿ ಸಂಕಟ ಮೋಚನ ಹನುಮಾನ್ ಮಂದಿರದಲ್ಲಿ ನಡೆದ ಬಾಂಬ್ ಸ್ಫೋಟದ ರೂವಾರಿ ಎನ್ನಲಾದ ಜಾವೇದ್ ಯಾನೆ ಜುಬೇರ್ ಜಮ್ಮು-ಕಾಶ್ಮೀರ ಪೊಲೀಸರ ಗುಂಡಿಗೆ ಬಲಿಯಾದ. ಉತ್ತರ ಪ್ರದೇಶದ ಭರೂಜ್ ನಿವಾಸಿ ಜುಬೇರನ ಚಟುವಟಿಕೆಗಳ ಮೇಲೆ ಒಂದು ತಿಂಗಳಿನಿಂದ ಕಣ್ಣಿಡಲಾಗಿತ್ತು.

2006: ಮಾನವ ಹಕ್ಕುಗಳ ಮಂಡಳಿಯ ಸದಸ್ಯತ್ವಕ್ಕೆ ಭಾರತವು ಆಯ್ಕೆಯಾಯಿತು. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಏಷ್ಯಾದ 13 ರಾಷ್ಟ್ರಗಳನ್ನು ಗೌಪ್ಯ ಮತದಾನಕ್ಕೆ ಒಳಪಡಿಸಿದಾಗ ಭಾರತಕ್ಕೆ ಅತೀ ಹೆಚ್ಚು ಅಂದರೆ 173 ಮತಗಳು ಬಂದವು.

2006: ಆಸ್ಟ್ರೇಲಿಯಾದ ಗಣಿಯೊಳಗಿನ ತಂತಿಯ ಪಂಜರದಲ್ಲಿ 14ದಿನಗಳ ಕಾಲ ಸಿಕ್ಕಿ ಹಾಕಿಕೊಂಡಿದ್ದ ಬ್ರಾಂಟ್ ವೆಬ್ (37) ಮತ್ತು ಟಾಡ್ ರಸೆಲ್ (34) ಎಂಬ ಇಬ್ಬರು ಆಸ್ಟ್ರೇಲಿಯಾ ಗಣಿಕಾರ್ಮಿಕರನ್ನು ಬೆಳಗಿನ ಜಾವ ರಕ್ಷಿಸಲಾಯಿತು. ಮೂರನೇ ಗಣಿಕಾರ್ಮಿಕ ಲ್ಯಾರಿ ನೈಟ್ (44) ಭೂಕುಸಿತದಲ್ಲಿ ಸಾವಿಗೀಡಾದ. ಭೂಕಂಪದಿಂದ ಭೂಕುಸಿತ ಉಂಟಾಗಿ ಈ ಗಣಿ ಕಾರ್ಮಿಕರು 925 ಮೀಟರ್ ಆಳದಲ್ಲಿ ಎರಡು ಹಾಸಿಗೆ ಹಾಕುವಷ್ಟು ತಂತಿಯಿಂದ ಮಾಡಿದ ಪಂಜರದಲ್ಲಿ ಏ.25ರಂದು ಸಿಕ್ಕಿಹಾಕಿಕೊಂಡಿದ್ದರು.

2006: ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯ ತಿಂಡಿವನಮ್ಮಿನಲ್ಲಿ ಪಿಎಂಕೆಯಿಂದ ಪಕ್ಷಾಂತರಗೊಂಡ ಎಐಎಡಿಎಂಕೆ ಕಾರ್ಯಕರ್ತ ಮುರುಘನಂದಮ್ ಕೊಲೆಗೆ ಮೇ 8ರ ರಾತ್ರಿ ಪ್ರಚೋದನೆ ನೀಡಿದ ಆಪಾದನೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಡಾ. ಅನ್ಬುಮಣಿ ರಾಮದಾಸ್ ಮತ್ತು ಪಿ ಎಂ ಕೆ ಸ್ಥಾಪಕ ಡಾ. ಎಸ್. ರಾಮದಾಸ್ ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದರು.

1994: ದಕ್ಷಿಣ ಆಫ್ರಿಕಾದ ನೂತನ ಚುನಾಯಿತ ಸಂಸತ್ತು ನೆಲ್ಸನ್ ಮಂಡೇಲಾ ಅವರನ್ನು ರಾಷ್ಟ್ರದ ಪ್ರಥಮ ಕರಿಯ ರಾಷ್ಟ್ರಪತಿಯಾಗಿ ಆಯ್ಕೆ ಮಾಡಿತು.

1986: ಎಡ್ಮಂಡ್ ಹಿಲರಿ ಜೊತೆಗೆ ಮೊತ್ತ ಮೊದಲ ಬಾರಿಗೆ ಎವರೆಸ್ಟ್ ಪರ್ವತವನ್ನು ಏರಿದ್ದ ತೇನ್ ಸಿಂಗ್ ನಾರ್ಗೆ ಡಾರ್ಜಿಲಿಂಗಿನಲ್ಲಿ ತನ್ನ 72ನೇ ಹುಟ್ಟುಹಬ್ಬಕ್ಕೆ 6 ದಿನ ಮುಂಚಿತವಾಗಿ ಮೃತನಾದ.

1984: ಭಾರತದ ಫು ದೋರ್ಜಿ ಆಮ್ಲಜನಕ ಇಲ್ಲದೆಯೇ ಮೌಂಟ್ ಎವರೆಸ್ಟ್ ಏರಿದ ಪ್ರಥಮ ಭಾರತೀಯ ಎನ್ನಿಸಿಕೊಂಡ.

1975: ಕಲಾವಿದೆ ಯಮುನಾ ರಾಣಿ ಜನನ.

1951: ಕಲಾವಿದೆ ಲತಾ ನಾಡಿಗೇರ್ ಜನನ.

1935: ಕಲಾವಿದ ಬಿ.ಆರ್.ಜಿ. ರಾವ್ ಜನನ.

1927: ಸಂಗೀತ, ನೃತ್ಯ, ಭೌತ ವಿಜ್ಞಾನ, ಪುರಾತತ್ವ ಕ್ಷೇತ್ರಗಳಲ್ಲಿ ಖ್ಯಾತಿ ಪಡೆದ ಸಂಗೀತಗಾರರ ಮನೆತನದ ರಾ. ಸತ್ಯನಾರಾಯಣ ಅವರು ರಾಮಯ್ಯ- ವರಲಕ್ಷ್ಮಮ್ಮ ದಂಪತಿಯ ಮಗನಾಗಿ ಮೈಸೂರಿನಲ್ಲಿ ಜನಿಸಿದರು.

1921: ಕಲಾವಿದ ನಾರಾಯಣ ಎಲ್. ನಾಥನ್ ಜನನ.

1915: ಕಲಾವಿದ ಮಣಿ ಅಯ್ಯರ್ ಜನನ.

1908: ಕನ್ನಡನಾಡು, ನುಡಿಯ ಬಗ್ಗೆ ಮುಂಚೂಣಿಯ ಹೋರಾಟಗಾರರಾಗಿ ಕನ್ನಡಿಗರಲ್ಲಿ ಕನ್ನಡತನ ಬಡಿದೆಬ್ಬಿಸಿದ ಅರಕಲಗೂಡು ನರಸಿಂಗರಾಯ ಕೃಷ್ಣರಾಯ (ಅ.ನ.ಕೃ) (1908-1971) ಅವರು ಈದಿನ ಹಾಸನ ಜಿಲ್ಲೆಯ ಅರಕಲಗೂಡಿನಲ್ಲಿ ನರಸಿಂಗರಾಯ- ಅನ್ನಪೂರ್ಣಮ್ಮ ದಂಪತಿಯ ಪುತ್ರರಾಗಿ ಜನಿಸಿದರು. ಶಾಲಾ ದಿನಗಳಿಂದಲೇ ಸಾಹಿತ್ಯದ ಹುಚ್ಚು ಹಚ್ಚಿಕೊಂಡ ಇವರನ್ನು ಮಣಿಪಾಲದ 42ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಮೂಲಕ ನಾಡು ಗೌರವಿಸಿತು. 14 ಐತಿಹಾಸಿಕ ಕಾದಂಬರಿ ಸೇರಿ 116 ಕಾದಂಬರಿ, ನಾಟಕಗಳು, ಸಾಹಿತ್ಯ ವಿಮರ್ಶೆ, ಜೀವನ ಚರಿತ್ರೆ, ಅನುವಾದ, ಸಂಪಾದಿತ ಗ್ರಂಥಗಳು ಇತ್ಯಾದಿ ಸೇರಿ ಒಟ್ಟು 250ಕ್ಕೂ ಹೆಚ್ಚು ಕೃತಿ ರಚಿಸಿದವರು ಅ.ನ.ಕೃ. 1971ರ ಜುಲೈ 8ರಂದು ಅವರು ನಿಧನರಾದರು.

1866: ಗೋಪಾಲ ಕೃಷ್ಣ ಗೋಖಲೆ (1866-1915) ಜನ್ಮದಿನ. ಭಾರತದ ರಾಷ್ಟ್ರೀಯ ನಾಯಕರಾದ ಇವರು ರಾಷ್ಟ್ರದ ಅತ್ಯಂತ ದುರ್ಬಲ ವರ್ಗದ ಜನರ ಏಳಿಗೆಗಾಗಿ `ಸರ್ವೆಂಟ್ಸ್ಸ್ ಆಫ್ ಇಂಡಿಯಾ ಸೊಸೈಟಿ ಸ್ಥಾಪಿಸಿದರು. ಪುಣೆಯಲ್ಲಿ ರಾನಡೆ ಇನ್ ಸ್ಟಿಟ್ಯೂಟ್ ಆಫ್ ಇಕನಾಮಿಕ್ಸ್ ಸ್ಥಾಪಿಸಿದ್ದು ಕೂಡಾ ಇವರೇ.

1800: ಅಮೆರಿಕದ ಗುಲಾಮೀ ಪದ್ಧತಿ ವಿರೋಧಿ ಹೋರಾಟಗಾರ ಜಾನ್ ಬ್ರೌನ್ (1800-1849) ಜನ್ಮದಿನ. ಗುಲಾಮೀ ಪದ್ಧತಿಯನ್ನು ಹೋಗಲಾಡಿಸಲು ಈತ ನಡೆಸಿದ ಪ್ರಯತ್ನಗಳು ಅಮೆರಿಕದ ಅಂತರ್ಯುದ್ಧಕ್ಕೆ ಪ್ರಮುಖ ಕಾರಣಗಳಾದವು.

No comments:

Advertisement