Saturday, May 15, 2010

ಇಂದಿನ ಇತಿಹಾಸ History Today ಮೇ 15

ಇಂದಿನ ಇತಿಹಾಸ

ಮೇ 15

ಹಲವಾರು ಚಲನಚಿತ್ರ, ಕಿರುತೆರೆಗಳಲ್ಲಿ ಅಭಿನಯಿಸಿರುವ ನಟಿ ಅಭಿನಯ, ಗೃಹಸ್ಥಾಶ್ರಮಕ್ಕೆ ಕಾಲಿಟ್ಟರು. ಕಿರುತೆರೆ ಛಾಯಾಗ್ರಾಹಕ ಉಮಾಕಾಂತ್ ಮತ್ತು ಅಭಿನಯ ಅವರ ವಿವಾಹ ಧರ್ಮಸ್ಥಳದ ಮಂಜುನಾಥನ ಸನ್ನಿಧಿಯಲ್ಲಿ ವಿಜೃಂಭಣೆಯಿಂದ ನೆರವೇರಿತು. 15ನೇ ವಯಸ್ಸಿನಲ್ಲಿ ನಿರ್ದೇಶಕ ಕಾಶೀನಾಥ್ ಅವರ 'ಅನುಭವ' ಚಿತ್ರದ ಮೂಲಕ ಅಭಿನಯ ಪ್ರಪಂಚಕ್ಕೆ ಕಾಲಿಟ್ಟ ಇವರು ಎಲ್ಲ ಪಾತ್ರಗಳಲ್ಲೂ ಸೈ ಎನಿಸಿಕೊಂಡವರು.

2009: ದೇಶದ ನ್ಯಾಯಾಂಗ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಸತಿಪತಿಗಳಿಬ್ಬರು ನ್ಯಾಯಮೂರ್ತಿಗಳಾಗಿ ದೆಹಲಿ ಹೈಕೋರ್ಟಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಇಂದರ್‌ಮೀತ್ ಕೌರ್ ಕೊಚ್ಚರ್ ಮತ್ತು ಅವರ ಪತಿ ಎ.ಕೆ.ಪಾಠಕ್ ಅವರಿಗೆ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ನೇಮಕ ಆದೇಶವನ್ನು ವಾರದ ಆರಂಭದಲ್ಲಿ ನೀಡಿದ್ದರು. ದೆಹಲಿ ಹೈಕೋರ್ಟಿನಲ್ಲಿ ವಕೀಲಿ ವೃತ್ತಿ ಆರಂಭಿಸಿದ್ದ ಇವರಿಬ್ಬರು ನ್ಯಾಯಾಂಗ ಸೇವೆಗೆ ಸೇರಿದ ನಂತರ ವಿವಾಹವಾಗಿದ್ದರು. ಇವರ ಜೊತೆಗೆ ಅಜಿತ್ ಬರಿಹೋಕ್‌ಮತ್ತು ವಿ.ಕೆ. ಜೈನ್ ಅವರೂ ನ್ಯಾಯಮೂರ್ತಿಗಳಾಗಿ ಪ್ರಮಾಣ ಸ್ವೀಕರಿಸಿದರು. ಈ ನಾಲ್ವರು ನ್ಯಾಯಮೂರ್ತಿಗಳ ನೇಮಕದೊಂದಿಗೆ ದೆಹಲಿ ಹೈಕೋರ್ಟಿನ ನ್ಯಾಯಮೂರ್ತಿಗಳ ಸಂಖ್ಯೆ 44ಕ್ಕೆ ಏರಿತು.

2009: ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನಲ್ಲಿ ವೇದಾವತಿ ನದಿಯ ಪಕ್ಕ ಯಾದಲಗಟ್ಟೆ, ದೊಡ್ಡೇರಿ, ಹಿರಿಯೂರು ಹಾಗೂ ಹರ್ತಿಕೋಟೆ ನೆಲೆಗಳಲ್ಲಿ ಅಪರೂಪದ ಹವಳ ಮಣಿಗಳು ದೊರೆತವು. ಮೈಸೂರಿನ ಕುವೆಂಪು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಎಸ್.ಜಿ.ರಾಮದಾಸ ರೆಡ್ಡಿ ನೇತೃತ್ವದ ತಂಡ ಕ್ಷೇತ್ರ ಕಾರ್ಯ ಮಾಡುವಾಗ ಈ ಅಪರೂಪದ ಹವಳ ಮಣಿಗಳು ಪತ್ತೆಯಾದವು. ಇವು ಶಾತವಾಹನರ ಕಾಲದಲ್ಲಿ ಅಲಂಕಾರಕ್ಕಾಗಿ ಬಳಸುತ್ತಿದ್ದ ಬಹು ಉಪಯೋಗಿ ಹವಳ ಮಣಿಗಳು ಎಂದು ಹೇಳಲಾಯಿತು.

2009: 'ರಾಗಿ, ಜೋಳ, ಸಜ್ಜೆ, ನವಣೆ ಬೆಳೆಯಿರಿ. ಜಾಗತಿಕ ತಾಪಮಾನ ಕಡಿಮೆ ಮಾಡಿ'. ಏಕೆಂದರೆ ಕಿರುಧಾನ್ಯಗಳನ್ನು ಹೆಚ್ಚಾಗಿ ಬೆಳೆಯುವುದರಿಂದ ಜಾಗತಿಕ ತಾಪಮಾನ, ಹವಾಮಾನ ವೈಪರಿತ್ಯ ಕಡಿಮೆ ಮಾಡಬಹುದು ಎಂಬ ಅಂಶವನ್ನು ಹೈದರಾಬಾದಿನ ಡೆಕ್ಕನ್ ಡೆವಲಪ್‌ಮೆಂಟ್ ಸೊಸೈಟಿಯ ವಿಜ್ಞಾನಿ ಡಾ.ಸತೀಶ್ ಪೆರಿಯಾಪಟ್ಟಣ ಬಹಿರಂಗ ಪಡಿಸಿದರು. ಈ ಬಗ್ಗೆ ಹೆಚ್ಚಿನ ಸಂಶೋಧನೆ ನಡೆದಿದೆ. ಈಗ ಎಲ್ಲೆಲ್ಲೂ ಕೇಳಿಬರುತ್ತಿರುವ ಮಾತೆಂದರೆ ಜಾಗತಿಕ ತಾಪಮಾನ. ವಿಶ್ವವೆಲ್ಲ ಕಾದ ದೋಸೆ ಕಾವಲಿಯಂತಾಗಿದ್ದು, ಜೀವ ಸಂಕುಲ ತತ್ತರಿಸಿ ಹೋಗುತ್ತಿದೆ. ಇದರ ಪರಿಹಾರಕ್ಕಾಗಿ ಹಲವಾರು ತಜ್ಞರು ಸಂಶೋಧನೆ ನಡೆಸಿ, ಜಾಗತಿಕ ತಾಪಮಾನ ಕಡಿಮೆ ಮಾಡಲು ಸರ್ಕಸ್ ನಡೆಸುತ್ತಲೇ ಇದ್ದಾರೆ. ಕಿರುಧಾನ್ಯಗಳನ್ನು ಬೆಳೆಯುವ ಮೂಲಕ ತಾಪಮಾನವನ್ನು ತಡೆಗಟ್ಟಬಹುದು ಎಂಬ ಸಂಶೋಧನೆಯೂ ಈಗ ಹೊರಬಿದ್ದಿತು. ಡಾ.ಸತೀಶ್ ಪೆರಿಯಾಪಟ್ಟಣ ಅವರು ಆಂಧ್ರಪ್ರದೇಶದ ಮೇಡಕ್ ಜಿಲ್ಲೆಯ ಅರೆ ಮರುಭೂಮಿ ಪ್ರದೇಶದ 5 ಸಾವಿರ ಎಕರೆ ಪಾಳು ಬಿದ್ದ ಪ್ರದೇಶದಲ್ಲಿ 1996ರಿಂದ ಈ ಪ್ರಯೋಗ ಮಾಡಿದ್ದರು. ಇದರಿಂದ 20 ಲಕ್ಷ ಕೆಜಿಯಷ್ಟು ಹೆಚ್ಚುವರಿ ಆಹಾರಧಾನ್ಯ ಉತ್ಪಾದನೆಯಾಯಿತು. ಕಿರುಧಾನ್ಯ ಬೆಳೆಗಳು ಒಣಭೂಮಿ ಮತ್ತು ಮರುಭೂಮಿ ಪ್ರದೇಶಗಳ ಕಠಿಣ ಹವಾಮಾನವನ್ನು ಎದುರಿಸುತ್ತವೆ ಎನ್ನುವುದನ್ನು ಅವರು ಸಾಬೀತು ಪಡಿಸಿದರು. ಭಾರತದಲ್ಲಿ ಹಲವಾರು ಭಾಗದಲ್ಲಿ ಖುಷ್ಕಿ ಭೂಮಿಯ ವ್ಯವಸಾಯವೇ ಹೆಚ್ಚು. ಆದರೂ ನೀರಾವರಿ ಪ್ರದೇಶದ ಬೆಳೆಗಳಾದ ಭತ್ತ, ಗೋಧಿ ಬೆಳೆಯುವುದೇ ಕೃಷಿಯೆಂದು ಪರಿಗಣಿತವಾಗಿ ಬಿಟ್ಟಿದೆ. ಎಲ್ಲರೂ ಭತ್ತ-ಗೋಧಿಯನ್ನೇ ಬೆಳೆಯುತ್ತಾರೆ. ಇದರಿಂದ ಅಧಿಕ ಪ್ರಮಾಣದ ನೀರು ವ್ಯಯವಾಗುತ್ತದೆ. ನೀರಿಲ್ಲದೆ ಭತ್ತದ ಬೆಳೆ ಉಳಿಯುವುದಿಲ್ಲ. ಆದರೆ ಭತ್ತದ ಗದ್ದೆಯಲ್ಲಿ ನಿಂತ ನೀರಿನಿಂದ ಮಿಥೇನ್‌ನಂತಹ ಅನಿಲ ಉತ್ಪಾದನೆಯಾಗುತ್ತದೆ. ಈ ಅನಿಲ ವಾತಾವರಣದಲ್ಲಿ ಹರಡಿ ಸುತ್ತಮುತ್ತಲ ಪರಿಸರವನ್ನು ಕವಚದಂತೆ ಮುಚ್ಚಿಕೊಳ್ಳುತ್ತದೆ. ಇದರಿಂದಾಗಿ ಹವಾಮಾನ ವೈಪರಿತ್ಯ ಹಾಗೂ ತಾಪಮಾನ ಹೆಚ್ಚಾಗುವ ಪ್ರಕ್ರಿಯೆ ಜಾಸ್ತಿಯಾಗುತ್ತದೆ ಎಂಬುದು ಪೆರಿಯಾಪಟ್ಟಣ ವಿಶ್ಲೇಷಣೆ. ಇದೇ ಸ್ಥಿತಿ ಮುಂದುವರಿದರೆ ಐದಾರು ವರ್ಷದಲ್ಲಿ ಉಷ್ಣಾಂಶ 2ರಿಂದ3 ಡಿಗ್ರಿ ಸೆಲ್ಷಿಯಸ್ ಏರಲಿದೆ. ಇದು ಭತ್ತ ಮತ್ತು ಗೋಧಿ ಬೆಳೆಗೆ ಪೂರಕವಲ್ಲ. ಇದರ ಪ್ರಭಾವದಿಂದ ಆಹಾರ ಉತ್ಪಾದನೆಯಲ್ಲಿ ಶೇ.20ರಷ್ಟು ಕಡಿಮೆಯಾದರೂ ಗಂಭೀರ ಪರಿಣಾಮ ಉಂಟಾಗುತ್ತದೆ ಎನ್ನುವುದು ಅವರ ಆತಂಕ. ಇದಕ್ಕೆ ಒಂದೇ ಅತ್ಯುತ್ತಮ ಪರಿಹಾರ: ದೇಶದಲ್ಲಿ ಆಹಾರ ಭದ್ರತೆ ಸಾಧಿಸಲು ಹಾಗೂ ತಾಪಮಾನ ತಡೆಗಟ್ಟಲು ಕಿರುಧಾನ್ಯ ಬೆಳೆಯುವುದು ಪರಿಹಾರ ಎನ್ನುತ್ತಾರೆ ಡಾ.ಸತೀಶ್. ಕಿರುಧಾನ್ಯಗಳಿಗೆ ಹೆಚ್ಚು ನೀರು ಬೇಕಾಗಿಲ್ಲ. ಸ್ಥಳೀಯವಾಗಿ ಬಿತ್ತನೆ ಬೀಜಗಳು ದೊರೆಯುತ್ತವೆ. ಪೌಷ್ಟಿಕಾಂಶವೂ ಅಧಿಕವಾಗಿರುತ್ತದೆ. ಅಲ್ಲದೆ ಸಾಮಾನ್ಯವಾಗಿ ಕಿರುಧಾನ್ಯಗಳನ್ನು ಮಿಶ್ರಬೆಳೆ ಪದ್ಧತಿಯಲ್ಲಿ ಬೆಳೆಯುತ್ತಾರೆ. ಇವುಗಳ ಮಧ್ಯದಲ್ಲಿ ದ್ವಿದಳ ಧಾನ್ಯಗಳನ್ನು ಎಡೆ ಬೆಳೆಯಾಗಿ ಬೆಳೆಯುತ್ತಾರೆ. ಈ ದ್ವಿದಳ ಧಾನ್ಯಗಳು ಸಾಕಷ್ಟು ಎಲೆಗಳನ್ನು ಉದುರಿಸುವುದರಿಂದ ಹೊಲದಲ್ಲಿ ಇಂಗಾಲದ ಅಂಶ ಸ್ಥಿರವಾಗಿರುತ್ತದೆ. ಇದರಿಂದ ಹವಾಮಾನ ವೈಪರಿತ್ಯ ಸ್ವಲ್ಪವಾದರೂ ಕಡಿಮೆಯಾಗುತ್ತದೆ ಎನ್ನುವುದು ಅವರ ಪ್ರತಿಪಾದನೆ.

2009: ವೈದ್ಯಕೀಯ ನಿರ್ಲಕ್ಷ್ಯದಿಂದ ಶಾಶ್ವತವಾಗಿ ಅಂಗವೈಕಲ್ಯ ಹೊಂದಿದ ಬೆಂಗಳೂರು ಇನ್‌ಫೋಸಿಸ್ ಸಂಸ್ಥೆಯ ಸಾಫ್ಟ್‌ವೇರ್ ಎಂಜಿನಿಯರ್ ಪ್ರಶಾಂತ್ ಎಸ್. ಧನಂಕ (39) ಅವರಿಗೆ ಒಂದು ಕೋಟಿ ರೂ. ಪರಿಹಾರ ನೀಡುವಂತೆ ಸುಪ್ರೀಂ ಕೋರ್ಟ್ ಹೈದರಾಬಾದಿನ ನಿಜಾಮ್ ವೈದ್ಯ ವಿಜ್ಞಾನ ಸಂಸ್ಥೆಗೆ ಆದೇಶ ನೀಡಿತು. ದೇಶದಲ್ಲಿ ಇಂತಹ ಪ್ರಸಂಗದಲ್ಲಿ ಒದಗಿಸಲಾದ ಅತ್ಯಂತ ಗರಿಷ್ಠ ಮೊತ್ತದ ಪರಿಹಾರ ಇದು. ನ್ಯಾಯಮೂರ್ತಿಗಳಾದ ಬಿ. ಎನ್. ಅಗರ್‌ವಾಲ್, ಜಿ. ಎಸ್. ಸಿಂಘ್ವಿ ಮತ್ತು ಎಚ್. ಎಸ್. ಬೇಡಿ ಅವರನ್ನು ಒಳಗೊಂಡ ಪೀಠವು ಆಂಧ್ರಪ್ರದೇಶ ಹೈಕೋರ್ಟ್ ನೀಡಿದ್ದ 15 ಲಕ್ಷ ಪರಿಹಾರ ಮೊತ್ತವನ್ನು ಒಂದು ಕೋಟಿ ರೂಪಾಯಿಗೆ ಹೆಚ್ಚಿಸಿತು. ಪ್ರಶಾಂತ್ ಅವರು ನಿಜಾಮ್ ವೈದ್ಯ ವಿಜ್ಞಾನ ಸಂಸ್ಥೆಯಲ್ಲಿ 1990ರ ಅಕ್ಟೋಬರ್ 23ರಂದು ಹೃದಯದಲ್ಲಿನ ಗಡ್ಡೆಯೊಂದನ್ನು ತೆಗೆಸುವುದಕ್ಕಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆದರೆ ಆಸ್ಪತ್ರೆಯ ನಿರ್ಲಕ್ಷ್ಯದಿಂದ ಶಸ್ತ್ರಚಿಕಿತ್ಸೆ ಸೂಕ್ತವಾಗಿ ನಡೆಯದೆ ಅವರು ಪಕ್ಷವಾತ ಮತ್ತು ಇತರ ಹಲವು ತೊಂದರೆಗೆಸಿಲುಕಿ ಶಾಶ್ವತ ಅಂಗವೈಕಲ್ಯ ಅನುಭವಿಸುವಂತಾಯಿತು. 1993ರಲ್ಲಿ ರಾಷ್ಟ್ರೀಯ ಗ್ರಾಹಕ ನ್ಯಾಯಾಲಯವು ಧನಂಕ ಅವರಿಗೆ 15.5 ಲಕ್ಷ ರೂಪಾಯಿ ಪರಿಹಾರ ನೀಡಲು ಆದೇಶಿಸಿತ್ತು. ಆದರೆ ಇದನ್ನು ಪ್ರಶ್ನಿಸಿ ಆಸ್ಪತ್ರೆ ಕೋರ್ಟ್ ಮೆಟ್ಟಿಲು ಏರಿತ್ತು. ಸುಪ್ರೀಂ ಕೋರ್ಟ್ ಈಗ ಪ್ರಕಟಿಸಿದ 1 ಕೋಟಿ ರೂಪಾಯಿ ಪರಿಹಾರಕ್ಕೆ 1999ರ ಮಾರ್ಚ್ 1ರಿಂದ ಅನ್ವಯವಾಗುವಂತೆ ಶೇ 6ರ ಬಡ್ಡಿದರದೊಂದಿಗೆ ಪರಿಹಾರ ಮೊತ್ತ ನೀಡಬೇಕಾಗುತ್ತದೆ. ಹೀಗಾಗಿ ಪರಿಹಾರದ ಒಟ್ಟು ಮೊತ್ತ 1.60 ಕೋಟಿ ರೂಪಾಯಿಗೆ ಹೆಚ್ಚುತ್ತದೆ. ಇದರ ಜತೆಗೆ ನತದೃಷ್ಟನ ಹೆತ್ತವರಿಗೆ 1.5 ಲಕ್ಷ ರೂ.ಪರಿಹಾರ ನೀಡಬೇಕೆಂದೂ ನ್ಯಾಯಪೀಠ ಹೇಳಿತು. ಕಳೆದ 14 ವರ್ಷಳ ಕಾಲ ನ್ಯಾಯಾಲಯದಲ್ಲಿ ಸೆಣಸಾಡಿದ ಧನಂಕ ಅವರಿಗೆ ಕೋರ್ಟ್ ವೆಚ್ಚದ ರೂಪದಲ್ಲಿ 50 ಸಾವಿರ ರೂಪಾಯಿ ನೀಡಲು ಸಹ ಆದೇಶ ನೀಡಲಾಯಿತು.

2009: ಈದಿನ ಬಿಡುಗಡೆಯಾಗಬೇಕಾಗಿದ್ದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಬರೆದಿರುವರು ಎನ್ನಲಾದ ಪುಸ್ತಕವು ತಮ್ಮ ಸಂಶೋಧನಾ ಪ್ರಬಂಧದಿಂದ ಯಥಾವತ್ ನಕಲು ಪಟ್ನಾದ ಸಂಶೋಧಕರೊಬ್ಬರು ದೂರುವುದರೊಂದಿಗೆ ಇಲ್ಲಿನ ರಾಜಕೀಯ ವಲಯದಲ್ಲಿ ತಲ್ಲಣ ಉಂಟಾಯಿತು. ನವದೆಹಲಿಯಲ್ಲಿನ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ (ಜೆಎನ್‌ಯು) ಹಿರಿಯ ಸಂಶೋಧಕ ಅತುಲ್ ಕುಮಾರ್ ಸಿಂಗ್ ಅವರು, ಜೆಡಿಯು ಅಧ್ಯಕ್ಷರೂ ಆಗಿರುವ ಬಿಹಾದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ತಮ್ಮ ಕೃತಿಯನ್ನು ಕದ್ದು ತಮ್ಮ ಹೆಸರಲ್ಲಿ ಪ್ರಕಟಿಸುತ್ತಿರುವುದನ್ನು ಸಾಬೀತುಪಡಿಸಲು ತಮ್ಮ ಮೂಲ ಸಂಶೋಧನ ಪ್ರಬಂಧವನ್ನು ಪ್ರಕಟಿಸಿದರು. 'ಸ್ಟೇಷಲ್ ಕೆಟಗರಿ ಸ್ಟೇಟಸ್ - ಎ ಕೇಸ್ ಫಾರ್ ಬಿಹಾರ' ಹೆಸರಿನಲ್ಲಿ ನಿತೀಶ್ ಕುಮಾರ್ ಅವರು 80 ಪುಟಗಳ ಪುಸ್ತಕ ಬರೆದಿರುವುದಾಗಿ ದಿನಗಳಿಂದ ಸ್ಥಳೀಯ ಪತ್ರಿಕೆಗಳಲ್ಲಿ ಸುದ್ದಿಗಳು ಪ್ರಕಟವಾಗಿದ್ದವು. ಸರ್ಕಾರ ಈ ಸುದ್ದಿಗಳನ್ನು ಅಲ್ಲಗಳೆದಿರಲಿಲ್ಲ.

2009: ಹಲವಾರು ಚಲನಚಿತ್ರ, ಕಿರುತೆರೆಗಳಲ್ಲಿ ಅಭಿನಯಿಸಿರುವ ನಟಿ ಅಭಿನಯ, ಗೃಹಸ್ಥಾಶ್ರಮಕ್ಕೆ ಕಾಲಿಟ್ಟರು. ಕಿರುತೆರೆ ಛಾಯಾಗ್ರಾಹಕ ಉಮಾಕಾಂತ್ ಮತ್ತು ಅಭಿನಯ ಅವರ ವಿವಾಹ ಧರ್ಮಸ್ಥಳದ ಮಂಜುನಾಥನ ಸನ್ನಿಧಿಯಲ್ಲಿ ವಿಜೃಂಭಣೆಯಿಂದ ನೆರವೇರಿತು. 15ನೇ ವಯಸ್ಸಿನಲ್ಲಿ ನಿರ್ದೇಶಕ ಕಾಶೀನಾಥ್ ಅವರ 'ಅನುಭವ' ಚಿತ್ರದ ಮೂಲಕ ಅಭಿನಯ ಪ್ರಪಂಚಕ್ಕೆ ಕಾಲಿಟ್ಟ ಇವರು ಎಲ್ಲ ಪಾತ್ರಗಳಲ್ಲೂ ಸೈ ಎನಿಸಿಕೊಂಡವರು. ಕಿರುತೆರೆಯಲ್ಲಿ ಬಹು ಬೇಡಿಕೆಯ ನಟಿ. ಚಿತ್ರರಂಗದ ಅನೇಕ ಗಣ್ಯರು ಇವರ ವಿವಾಹಕ್ಕೆ ಸಾಕ್ಷಿಯಾದರು.

2008: ಉಡುಪಿ ಜಿಲ್ಲೆಯ ಕಾರ್ಕಳ ತಾಲ್ಲೂಕಿನ ಸೀತಾನದಿಯ ಶಿಕ್ಷಕ ಭೋಜ ಶೆಟ್ಟಿ ಮತ್ತಹ ಸುರೇಶ ಶೆಟ್ಟಿ ಎಂಬ ಇಬ್ಬರನ್ನು ವಿಧಾನಸಭೆಯ ಎರಡನೇ ಹಂತದ ಚುನಾವಣೆಯ ಮುನ್ನಾದಿನ ನಕ್ಸಲೀಯರು ಸೋಮೇಶ್ವರದಲ್ಲಿ ಗುಂಡಿನ ಮಳೆಗರೆದು ಕೊಂದು ಹಾಕಿದರು.

2008: ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯಾವತಿ ಅವರ ಅಕ್ರಮ ಆಸ್ತಿ ಗಳಿಕೆಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಯನ್ನು ಜುಲೈ 14 ರವರೆಗೆ ಸ್ಥಗಿತಗೊಳಿಸಲಾಗುವುದು ಎಂದು ಕೇಂದ್ರ ತನಿಖಾ ಘಟಕ (ಸಿಬಿಐ) ಸುಪ್ರೀಂ ಕೋರ್ಟಿಗೆ ಭರವಸೆ ನೀಡಿತು. ತನಿಖೆಯನ್ನು ಪ್ರಶ್ನಿಸಿ ಮಾಯಾವತಿ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್ ಮತ್ತು ಎಂ.ಕೆ.ಶರ್ಮ ಅವರನ್ನು ಒಳಗೊಂಡ ಪೀಠವು ಸಿಬಿಐಗೆ ನೋಟಿಸ್ ಜಾರಿಗೊಳಿಸಿತು.

2008: ಚೀನಾ ಭೂಕಂಪದಲ್ಲಿ ಮಡಿದವರ ಸಂಖ್ಯೆ 50 ಸಾವಿರಕ್ಕೆ ಏರಿದೆ ಎಂದು ಬೀಜಿಂಗ್ ಮಾಧ್ಯಮಗಳು ವರದಿ ಮಾಡಿದವು.

2008: `ಹೊಗೇನಕಲ್ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ವಿಷಯಕ್ಕೆ ಸಂಬಂಧಿಸಿದಂತೆ ನನ್ನಿಂದ ಏನೂ ತಪ್ಪಾಗಿಲ್ಲ. ಆದಾಗ್ಯೂ ಕ್ಷಮೆ ಯಾಚಿಸುತ್ತೇನೆ. ಹೊಗೇನಕಲ್ ವಿಚಾರವಾಗಿ ಕನ್ನಡ ಪರ ಸಂಘಟನೆಗಳು ಇನ್ನು ಮೈಸೂರಿನಿಂದಲೇ ಪ್ರತಿಭಟನೆಯನ್ನು ಆರಂಭಿಸಲಿದ್ದು ನಾನೂ ಸಕ್ರಿಯವಾಗಿ ಭಾಗವಹಿಸುತ್ತೇನೆ' ಎಂದು ಹಿರಿಯ ನಟ ಡಾ. ವಿಷ್ಣುವರ್ಧನ್ ಮೈಸೂರಿನಲ್ಲಿ ಪ್ರಕಟಿಸಿದರು.

2008: ಬೇಲೂರು ತಾಲ್ಲೂಕಿನ ಹೆಬ್ಬಾಳು ಗ್ರಾಮದ ಒಂದೇ ಮನೆಯ ಐವರು ಅಣ್ಣತಮ್ಮಂದಿರು ಈದಿನ ಒಂದೇ ಮಂಟಪದಲ್ಲಿ ವಿವಾಹವಾದರು. ಗ್ರಾಮದ ಅವಿಭಕ್ತ ಕುಟುಂಬದ ಮುಖ್ಯಸ್ಥ ಮಲ್ಲೇಗೌಡರ ಐವರು ಸಹೋದರರು ಒಂದೇ ಮನೆಯಲ್ಲಿ ವಾಸವಾಗಿದ್ದು ಅವರು, ಗ್ರಾಮದ ಹೆಬ್ಬಾಳು ಮಂಜಯ್ಯ ಅವರ ನಾಲ್ವರು ಗಂಡುಮಕ್ಕಳು 2007ರ ನವೆಂಬರಿನಲ್ಲಿ ಒಂದೇ ಮನೆಯ ನಾಲ್ವರು ಸಹೋದರಿಯರನ್ನು ಮದುವೆಯಾದ ಘಟನೆಯಿಂದ ಸ್ಫೂರ್ತಿ ಪಡೆದು ಈದಿನ ಒಂದೇ ಮಂಟಪದಲ್ಲಿ ತಮ್ಮ ಐವರು ಮಕ್ಕಳಿಗೂ ಮದುವೆ ಮಾಡಿಸಿದರು. ಮಲ್ಲೇಗೌಡರ ಮಕ್ಕಳಾದ ಚಂದ್ರಶೇಖರ್ ಹಾಗೂ ಕುಮಾರ್, ನಂಜೇಗೌಡರ ಮಕ್ಕಳಾದ ಗಿರೀಶ್ ಹಾಗೂ ಹಾಲಪ್ಪ ಮತ್ತು ಪುಪ್ಪೇಗೌಡರ ಮಗ ದಿನೇಶ್ ಅವರು ಕ್ರಮವಾಗಿ ಶಕುಂತಲ, ಚಂದ್ರಕಲಾ, ಗುಣ, ರೇಖಾ ಮತ್ತು ದೊಡ್ಡ ಪವಿತ್ರರಿಗೆ ಒಂದೇ ಮಂಪಟದಲ್ಲಿ 10.20 ರಿಂದ 11.50ರವರೆಗೆ ಕುಳೀರ ಲಗ್ನದಲ್ಲಿ ತಾಳಿ ಕಟ್ಟುವುದರ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

2008: ಅಸ್ಸಾಮಿನ ಉತ್ತರ ಕಾಚಾರ್ ಹಿಲ್ಸ್ ಜಿಲ್ಲೆಯಲ್ಲಿ ದಿಮಾ ಹಾಲಮ್ ಡೌಗಹ್ (ಜೆವೆಲ್) ಗುಂಪಿನ ಉಗ್ರರು ಇಬ್ಬರು ರೈಲ್ವೆ ನೌಕರರು ಸೇರಿದಂತೆ 12 ಮಂದಿಯನ್ನು ಗುಂಡಿಟ್ಟು ಕೊಂದು ರೈಲಿಗೆ ಬೆಂಕಿ ಹಚ್ಚಿದರು. ಲುಂಡಿಂಗ್ ಮತ್ತು ಹಫ್ಲೊಂಗ್ ಬಳಿ ಈ ಘಟನೆ ನಡೆಯಿತು.

2008: ಹಿರಿಯ ವೈದ್ಯ ಡಾ. ಟಿ.ಎಲ್.ದೇವರಾಜ್ ಅವರಿಗೆ ಪ್ರಸಕ್ತ ವರ್ಷದ ಶ್ರೀರಾಮ ನಾರಾಯಣ ವೈದ್ಯಶ್ರೀ ಪ್ರಶಸ್ತಿ ಲಭಿಸಿತು. ಆಯುರ್ವೇದ ಇಲಾಖೆಯ ನಿವೃತ್ತ ಉಪನಿರ್ದೇಶಕ ದೇವರಾಜ್ ಅವರು ಈ ಪ್ರಶಸ್ತಿಗೆ ಆಯ್ಕೆಯಾದ ಪ್ರಥಮ ಕನ್ನಡಿಗ ಎಂಬ ಹೆಗ್ಗಳಿಗೆ ಪಾತ್ರರಾಗಿದ್ದಾರೆ ಎಂದು ಭಾರತೀಯ ವೈದ್ಯಕೀಯ ಮಂಡಳಿಯ ಸದಸ್ಯ ಡಾ. ಕೆ.ಸಿ.ಬಲ್ಲಾಳ ತಿಳಿಸಿದರು. ದೇವರಾಜ್ ಅವರು 36ಕ್ಕೂ ಹೆಚ್ಚು ಕೃತಿಗಳನ್ನು ಬರೆದಿದ್ದು, ಅದರಲ್ಲಿ ಕೆಲ ಕೃತಿಗಳು ಇಂಗ್ಲಿಷ್, ಹಿಂದಿ ಮತ್ತು ರಷ್ಯನ್ ಭಾಷೆಗಳಿಗೆ ಅನುವಾದಗೊಂಡಿವೆ. `ಆಯುರ್ವೇದದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ' ಎಂಬ ಕೃತಿಗೆ ನಾರಾಯಣ ವೈದ್ಯ ಆಯುರ್ವೇದ ಸಂಶೋಧನಾ ಟ್ರಸ್ಟ್ ಈ ಪ್ರಶಸ್ತಿ ಲಭಿಸಿದೆ.

2008: ಕರ್ನಾಟಕ ಲೇಖಕಿಯರ ಸಂಘವು ಲೇಖಕಿ ಮಾಲತಿ ಪಟ್ಟಣಶೆಟ್ಟಿ ಅವರನ್ನು 2008ನೇ ಸಾಲಿನ `ಅನುಪಮಾ ಪ್ರಶಸ್ತಿ'ಗೆ ಆಯ್ಕೆ ಮಾಡಿತು. ಮಾಲತಿ ಪಟ್ಟಣಶೆಟ್ಟಿ ಅವರ ಒಟ್ಟು ಸಾಹಿತ್ಯ ಸಾಧನೆ ಮತ್ತು ಮಹಿಳಾ ಸಾಹಿತ್ಯಕ್ಕೆ ಅವರ ಕೊಡುಗೆ, ಸಂಸ್ಕೃತಿ ಕ್ಷೇತ್ರದಲ್ಲಿ ಅವರು ಗಳಿಸಿದ ಮನ್ನಣೆ ಮತ್ತು ಕ್ರಿಯಾಶೀಲತೆಯನ್ನು ನಿರಂತರವಾಗಿ ಉಳಿಸಿಕೊಂಡು ಬಂದಿರುವ ಅಂಶಗಳನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಸಂಘದ ಅಧ್ಯಕ್ಷೆ ಡಾ. ಕೆ.ಆರ್.ಸಂಧ್ಯಾರೆಡ್ಡಿ ಪ್ರಕಟಿಸಿದರು.

2007: ಸೈನಿಕರಿಗೆ ಗುಣಮಟ್ಟದ ತರಬೇತಿ ನೀಡುವ ಮೂಲಕ ದೇಶಕ್ಕೆ ಉತ್ತಮ ಸೇನಾಧಿಕಾರಿಗಳು ಮತ್ತು ಯೋಧರನ್ನು ಕೊಡುಗೆಯಾಗಿ ನೀಡಿ ಖ್ಯಾತಿ ಪಡೆದಿರುವ ಬೆಳಗಾವಿಯ ಮರಾಠಾ ಲಘು ಪದಾತಿ ದಳದ (ಎಂಎಲ್ ಐ ಆರ್ ಸಿ) ಯೋಧರು ಸೇರಿದಂತೆ 12 ಜನರಿದ್ದ ಭಾರತೀಯ ಯೋಧರ ತಂಡ ಹಾಗೂ 13 ಶೆರ್ಪಾಗಳ ತಂಡ ವಿಶ್ವದ ಅತಿ ಎತ್ತರದ ಮೌಂಟ್ ಎವರೆಸ್ಟ್ ಮೇಲೆ ತ್ರಿವರ್ಣ ಧ್ವಜ ಹಾರಿಸುವ ಮೂಲಕ ಇತಿಹಾಸ ನಿರ್ಮಿಸಿದವು. ಭಾರತೀಯ ಭೂಸೇನೆಯ ಮುಖ್ಯಸ್ಥ ಹಾಗೂ ಮರಾಠಾ ಲಘು ಪದಾತಿದಳದ ಕರ್ನಲ್ ಜನರಲ್ ಜೋಗೀಂದರ್ ಜಸ್ವಂತ್ಸಿಂಗ್ (ಜೆ.ಜೆ.ಸಿಂಗ್) ಮಾರ್ಗದರ್ಶನದಲ್ಲಿ ಲೆಫ್ಟಿನೆಂಟ್ ಕ್ಯಾಪ್ಟನ್ ಥಾಪಾ ಈ ಸಾಹಸ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದರು. ಎರಡು ತಂಡಗಳಾಗಿ ಈ ಸಾಹಸ ನಡೆಸಲಾಯಿತು. ಒಂದು ತಂಡ ಈದಿನ ಹಾಗೂ ಇನ್ನೊಂದು ತಂಡ ಮರುದಿನ (ಮೇ 16) ಮೌಂಟ್ ಎವರೆಸ್ಟ್ ಶಿಖರ ಏರಿತು. ಶೆರ್ಪಾಗಳ ತಂಡದ ನೇತೃತ್ವವನ್ನು ಸಿರ್ಧರ್ ಚಿರೀಂಗ್ ದೋರ್ಜಿ ವಹಿಸಿದ್ದರು.

2007: ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೆ ಅವರು ಮಿಲೆನಿಯಂ ಅಭಿವೃದ್ಧಿ ಗುರಿಗಳಿಗೆ ಹೆಚ್ಚಿನ ಕೊಡುಗೆ ನೀಡಿದ್ದಕ್ಕಾಗಿ ನ್ಯೂಯಾರ್ಕ್ ವಿಶ್ವಸಂಸ್ಥೆ ಕೇಂದ್ರ ಕಚೇರಿಯಲ್ಲಿ ಮೂರನೇ `ಯುಎನ್ ವಿಮೆನ್ ಟುಗೆದರ್ ಅವಾರ್ಡ್' ವಿಶ್ವಸಂಸ್ಥೆ ಮಹಿಳಾ ಪ್ರಶಸ್ತಿ ಪಡೆದರು. ಖಾದಿ ಅಭಿವೃದ್ಧಿ, ನೇಕಾರರ ಅಭಿವೃದ್ಧಿ ಮತ್ತು ಕುಶಲಕರ್ಮಿಗಳ ಅಭಿವೃದ್ಧಿಗಾಗಿ ನೀಡಿದ ಕೊಡುಗೆಗಾಗಿ ವಸುಂಧರಾ ರಾಜೆ ಅವರಿಗೆ ಈ ಪ್ರಶಸ್ತಿ ಲಭಿಸಿತು. ಇದರೊಂದಿಗೆ ಈ ಪ್ರತಿಷ್ಠಿತ ಪ್ರಶಸ್ತಿ ಪಡೆದ ಭಾರತದ ಪ್ರಪ್ರಥಮ ಮಹಿಳಾ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ವಸುಂಧರಾ ಪಾತ್ರರಾದರು.

2007: ದಯಾನಿಧಿ ಮಾರನ್ ರಾಜೀನಾಮೆಯ ಬಳಿಕ ಪರಿಸರ ಖಾತೆಯ ಸಚಿವರಾಗಿದ್ದ ಎ. ರಾಜ ಅವರನ್ನು ಮಾಹಿತಿ ತಂತ್ರಜ್ಞಾನ ಮತ್ತು ಸಂಪರ್ಕ ಖಾತೆಯ ಸಚಿವರನ್ನಾಗಿ ಪ್ರಧಾನಿ ಮನಮೋಹನ್ ಸಿಂಗ್ ನೇಮಕ ಮಾಡಿದರು.

2007: ನ್ಯಾಟೋ ನೇತೃತ್ವದ ಸೇನಾಪಡೆ ಹಿಂದಿನ ರಾತ್ರಿ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ 60 ತಾಲಿಬಾನ್ ಉಗ್ರಗಾಮಿಗಳು ಹತರಾದರು.

2007: ಮೇ 9ರಂದು ಮದುರೈಯಲ್ಲಿ `ದಿನಕರನ್' ದೈನಿಕ ಕಚೇರಿಯ ಮೇಲೆ ನಡೆದ ದಾಳಿಯ ಪ್ರಮುಖ ಆರೋಪಿ `ಅಟ್ಯಾಕ್ ಪಾಂಡಿ' ಮದುರೈ ಗ್ರಾಮಾಂತರ ಪೊಲೀಸರಿಗೆ ಶರಣಾಗತನಾದ.

2007: ಅನಿಲ್ ಶರ್ಮಾ ಅವರ `ಅಪ್ನೆ' ಚಿತ್ರವು ಜೂನ್ 29ರಂದು ದೇಶ - ವಿದೇಶಗಳಲ್ಲಿ 900 ಕಡೆ ಏಕಕಾಲದಲ್ಲಿ ಬಿಡುಗಡೆಯಾಗುವುದು ಎಂದು ಪ್ರಕಟಿಸಲಾಯಿತು. 8 ತಿಂಗಳಲ್ಲಿ ಪೂರ್ಣಗೊಂಡ ಈ ಚಿತ್ರದಲ್ಲಿ ಧರ್ಮೇಂದ್ರ ಅವರ ಮಕ್ಕಳಾದ ಸನ್ನಿ ಡಿಯೋಲ್, ಕತ್ರಿನಾ ಕೈಫ್, ಶಿಲ್ಪಾಶೆಟ್ಟಿ ಅಭಿನಯಿಸಿದ್ದು ಬ್ಯಾಂಕಾಕ್, ನ್ಯೂಯಾರ್ಕ್ ಮತ್ತು ಕೆನಡಾದಲ್ಲಿ ಚಿತ್ರೀಕರಣ ನಡೆಸಲಾಗಿತ್ತು.

2006: ಇಪ್ಪತ್ನಾಲ್ಕು ವರ್ಷಗಳ ಹಿಂದೆ ಪರ್ವತಾರೋಹಣ ಕಾಲದಲ್ಲಿ ಸಂಭವಿಸಿದ ಅಪಘಾತದಲ್ಲಿ ತನ್ನ ಎರಡೂ ಕಾಲುಗಳನ್ನು ಕಳೆದುಕೊಂಡ ನ್ಯೂಜಿಲ್ಯಾಂಡಿನ ಪರ್ವತಾರೋಹಿ ಮಾರ್ಕ್ ಇಂಗ್ಲಿಸ್ ಈದಿನ `ಎವರೆಸ್ಟ್ ಶಿಖರಾರೋಹಣ' ಮಾಡುವ ಮೂಲಕ ವಿಶ್ವದ ಅತ್ಯುನ್ನತ ಪರ್ವತ ಶಿಖರವನ್ನು ಏರಿದ ಮೊತ್ತ ಮೊದಲ `ಕಾಲುಗಳಿಲ್ಲದ ವ್ಯಕ್ತಿ' ಎಂಬ ಹೆಗ್ಗಳಿಕೆಗೆ ಪಾತ್ರರಾದರು. 47 ವರ್ಷದ ಈ ಸಾಧಕ 1982ರಲ್ಲಿ ಫಿಲ್ ಧೂಲೆ ಜೊತೆಗೆ ನ್ಯೂಜಿಲೆಂಡಿನ ಅತ್ಯುನ್ನತ ಶಿಖರ ಮೌಂಟ್ ಕುಕ್ ಏರುತ್ತಿದ್ದಾಗ ಮಂಜುಗಡ್ಡೆಯ ಗುಹೆಯೊಳಗೆ 14 ದಿನಗಳ ಕಾಲ ಸಿಕ್ಕಿಹಾಕಿಕೊಂಡಿದ್ದರು. ಆಗ ಕಾಲುಗಳಲ್ಲಿ ಹಿಮ ಹುಣ್ಣಾಗಿ ತೊಡೆಯಿಂದ ಕೆಳಗಿನ ಎರಡೂ ಕಾಲುಗಳನ್ನು ಕತ್ತರಿಸಿ ಹಾಕಲಾಗಿತ್ತು. ಆ ಬಳಿಕ ಬದುಕನ್ನು ಸವಾಲಾಗಿ ಸ್ವೀಕರಿಸಿದ ಇಗ್ಲಿಸ್ ಕಾಲು ರಹಿತರ ಪರ್ವತಾರೋಹಣ ಸೇರಿದಂತೆ ಹಲವಾರು ಸಾಹಸ ಕೃತ್ಯಗಳಲ್ಲಿ ಪಾಲ್ಗೊಂಡಿದ್ದರು.

2006: ಸಂಗ್ರಹಾಲಯವಾಗಿ ಪರಿವರ್ತನೆಗೊಳ್ಳಲಿರುವ ಐ ಎನ್ ಎಸ್ ಚಪಲ್ ಸಮರನೌಕೆಯು ಆಗ್ರಾ ಐ ಎನ್ ಎಸ್ ಕದಂಬ ನೌಕಾ ನೆಲೆಯಿಂದ ಈದಿನ ಕಾರವಾರದ ರಬೀಂದ್ರನಾಥ ಟ್ಯಾಗೋರ್ ಕರಾವಳಿಗೆ ಆಗಮಿಸಿತು. ಕ್ಷಿಪಣಿ ಉಡಾವಣಾ ವಾಹನವಾಗಿ 28 ವರ್ಷಗಳ ಸೇವೆ ಸಲ್ಲಿಸಿದ್ದ ಈ ಸಮರನೌಕೆ 2005ರ ನವೆಂಬರಿನಲ್ಲಿ ಸೇವೆಯಿಂದ ನಿವೃತ್ತಿ ಪಡೆದಿತ್ತು. 275 ಟನ್ ತೂಕ, 38.5 ಮೀಟರ್ ಎತ್ತರ, 7.2 ಮೀಟರ್ ಅಗಲ ಇರುವ ಈ ನೌಕೆಯು ಈಗ ಕಾರ್ಯಾಚರಣೆ ನಡೆಸುವ ಸಾಮರ್ಥ್ಯವನ್ನು ಕಳೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಕಾರವಾರ ನೌಕಾನೆಲೆಯಲ್ಲಿ ಇದನ್ನು ವಸ್ತುಸಂಗ್ರಹಾಲಯವಾಗಿ ಪರಿವರ್ತಿಸಿ ಇರಿಸಲು ನಿರ್ಧರಿಸಲಾಗಿದೆ.

2006: ಇರಾಕಿನ ಪದಚ್ಯುತ ಅಧ್ಯಕ್ಷ ಸದ್ದಾಂ ಹುಸೇನ್ ವಿರುದ್ಧ ತನಿಖೆ ನಡೆಸುತ್ತಿರುವ ನ್ಯಾಯಾಲಯದಲ್ಲಿ ಗ್ರಾಮಸ್ಥರ ಕೊಲೆ, ಮಕ್ಕಳು ಮಹಿಳೆಯರಿಗೆ ಚಿತ್ರಹಿಂಸೆ ಮತ್ತು 399 ಜನರನ್ನು ಅಕ್ರಮವಾಗಿ ಬಂಧಿಸಿ ದೌರ್ಜನ್ಯ ನಡೆಸಿದ ಆರೋಪಗಳನ್ನು ಹೊರಿಸಲಾಯಿತು. 1982ರಲ್ಲಿ ದುಜೈಲ್ನಲ್ಲಿ ಸದ್ದಾಂ ಹತ್ಯೆಗೆ ದಾಳಿ ನಡೆದ ಹಿನ್ನೆಲೆಯಲ್ಲಿ ಅಲ್ಲಿನ ಭದ್ರತಾ ಪಡೆಗಳು ನೂರಾರು ಮಂದಿಯನ್ನು ಬಂಧಿಸಿ ಹಿಂಸೆಗೆ ಗುರಿಪಡಿಸಿದ್ದವು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಆರೋಪ ಪಟ್ಟಿ ಸಲ್ಲಿಸಲಾಯಿತು.

2006: ರಾಯ್ ಬರೇಲಿ ಕ್ಷೇತ್ರದಿಂದ ಸಂಸತ್ ಸದಸ್ಯರಾಗಿ ಆಯ್ಕೆಯಾದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಲೋಕಸಭೆಯಲ್ಲಿ ಈದಿನ ಪ್ರಮಾಣವಚನ ಸ್ವೀಕರಿಸಿದರು. ತಿರುವನಂತಪುರದಲ್ಲಿ ಸಿಪಿಎಂ ಹಿರಿಯ ಮುಖಂಡ ವಿ.ಎಸ್. ಅಚ್ಯುತಾನಂದನ್ (82) ಕೇರಳದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾದರು.

1993: ಭಾರತದ ನಿವೃತ್ತ ಸೇನಾ ಪ್ರಮುಖ ಕೆ.ಎಂ. ಕಾರ್ಯಪ್ಪ ಅವರು ಈದಿನ ನಿಧನರಾದರು. 1899ರ ಜನವರಿ 28ರಂದು ಮಡಿಕೇರಿಯಲ್ಲಿ ಜನಿಸಿದ ಕಾರ್ಯಪ್ಪ 1918ರಲ್ಲಿ ಮೊದಲ ಮಹಾಯುದ್ಧ ಮುಗಿದ ಸಮಯಲ್ಲಿ ಕಿಂಗ್ಸ್ ಕಮಿಷನ್ ಸೈನಿಕರಿಗಾಗಿ ಭಾರತದಲ್ಲಿ ಆಯ್ಕೆ ನಡೆಸಿದಾಗ ಆಯ್ಕೆಯಾದ ಕಾರ್ಯಪ್ಪ ಕಿಂಗ್ಸ್ ಕಮಿಷನ್ಡ್ ಇಂಡಿಯನ್ ಆಫೀಸರ್ಸ್ (ಕೆಸಿಐಒ) ಮೊದಲ ತಂಡದ ತರಬೇತಿ ಪಡೆದರು. ಕ್ರೀಡೆ ಮತ್ತು ಸಂಗೀತದಲ್ಲಿ ಇವರಿಗೆ ಅಪಾರ ಆಸಕ್ತಿ ಇತ್ತು.

1966: ಕಲಾವಿದೆ ರಾಧಿ ರಂಜಿನಿ ಜನನ.

1952: ಕಲಾವಿದ ಶಿವರುದ್ರಯ್ಯ ಕೆ. ಜನನ.

1951: ಕಲೆಯ ಹಲವು ಪ್ರಕಾರಗಳಾದ ಕಲಾ ಇತಿಹಾಸ, ಕಲಾ ಬರಹ, ಕಲಾ ಸಂಘಟನೆ ಮುಂತಾದುವುಗಳಲ್ಲಿ ತೊಡಗಿಸಿಕೊಂಡ ಕಲಾವಿದ ಎನ್. ಮರಿಶಾಮಾಚಾರ್ ಅವರು ಸಿ.ಎಂ. ನಂಜುಂಡಾಚಾರ್- ಲಿಂಗಮ್ಮ ದಂಪತಿಯ ಮಗನಾಗಿ ದೇವನಹಳ್ಳಿ ಬಳಿಯ ವಿಜಯಪುರದಲ್ಲಿ ಜನಿಸಿದರು.

1941: ಕಲಾವಿದ ಟಿ.ಎ.ಎಸ್. ಮಣಿ ಜನನ.

1918: ಅಮೆರಿಕವು ನ್ಯೂಯಾರ್ಕ್ ನಗರ ಮತ್ತು ವಾಷಿಂಗ್ಟನ್ ಡಿ.ಸಿ. ಮಧ್ಯೆ ನಿಯಮಿತ ಏರ್ ಮೇಲ್ ಸೇವೆಯನ್ನು ಆರಂಭಿಸಿತು. ಇದು ಜಗತ್ತಿನಲ್ಲೇ ಪ್ರಪ್ರಥಮ ನಿಯಮಿತ ಏರ್ ಮೇಲ್ ಸೇವೆಯಾಗಿತ್ತು.

1914: ತೇನ್ ಸಿಂಗ್ ನೋರ್ಗೆ (1914-84) ಜನ್ಮದಿನ. ಇವರು ನ್ಯೂಜಿಲೆಂಡಿನ ಸರ್ ಎಡ್ಮಂಡ್ ಹಿಲರಿ ಜೊತೆಗೆ ಮೊತ್ತ ಮೊದಲ ಬಾರಿಗೆ ಜಗತ್ತಿನ ಅತಿ ಎತ್ತರದ ಎವರೆಸ್ಟ್ ಪರ್ವತವನ್ನು ಏರಿದರು.

1859: ಪಿಯರ್ ಕ್ಯೂರಿ (1859-1906) ಹುಟ್ಟಿದ ದಿನ. ಫ್ರೆಂಚ್ ಭೌತ ರಸಾಯನ ತಜ್ಞನಾದ ಈತ ತನ್ನ ಪತ್ನಿ ಮೇಡಂ ಕ್ಯೂರಿ ನೆರವಿನೊಂದಿಗೆ ರೇಡಿಯಂ ಮತ್ತು ಪೊಲೋನಿಯಂನ್ನು ಸಂಶೋಧಿಸಿದ.

1845: ಮುಂಬೈಯ ಜೆಮ್ ಸೆಟ್ ಜಿ ಜೀಜೆಭಾಯ್ ಆಸ್ಪತ್ರೆಯು ಗವರ್ಮರ್ ಸರ್ ಜಾರ್ಜ್ ಆರ್ಥರ್ ಬಾರ್ಟ್ ಅವರಿಂದ ಉದ್ಘಾಟನೆಗೊಂಡಿತು.

1817: ಮಹರ್ಷಿ ದೇಬೇಂದ್ರನಾಥ ಟ್ಯಾಗೋರ್ (1817-1905) ಜನ್ಮದಿನ. ಹಿಂದೂ ತತ್ವಜ್ಞಾನಿ ಹಾಗೂ ಧಾರ್ಮಿಕ ಸುಧಾರಕರಾಗಿದ್ದ ಇವರು 1863ರಲ್ಲಿ `ಶಾಂತಿ ನಿಕೇತನ'ವನ್ನು ಸ್ಥಾಪಿಸಿದರು. ಇವರ ಪುತ್ರ ರಬೀಂದ್ರನಾಥ ಟ್ಯಾಗೋರ್ ಅವರು ಶಾಂತಿನಿಕೇತನಕ್ಕೆ ಖ್ಯಾತಿಯನ್ನು ತಂದುಕೊಟ್ಟರು.

No comments:

Advertisement