My Blog List

Wednesday, May 19, 2010

ಇಂದಿನ ಇತಿಹಾಸ History Today ಮೇ 19

ಇಂದಿನ ಇತಿಹಾಸ

ಮೇ 19

ಬಹುತೇಕ ಭಾರತೀಯ ಭಾಷೆಗಳಿಗೆ ಅನುವಾದಗೊಂಡ `ಘಾಸೀರಾಂ ಕೊತ್ವಾಲ್' ಜನಪ್ರಿಯ ನಾಟಕ ಸೇರಿದಂತೆ 33 ನಾಟಕಗಳನ್ನು ರಚಿಸಿ ಮರಾಠಿ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಹೆಸರಾಂತ ಸಾಹಿತಿ ವಿಜಯ್ ದೊಂಡೋಪಂತ್ ತೆಂಡೂಲ್ಕರ್ ಈದಿನ ಪುಣೆಯಲ್ಲಿ ನಿಧನರಾದರು. ಮೂಳೆ ರೋಗದಿಂದ ಬಳಲುತ್ತಿದ್ದ ಅವರನ್ನು ಕೆಲವು ವಾರಗಳ ಹಿಂದೆ ಪುಣೆಯ ಪ್ರಯಾಗ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಹಿಂದಿನ ದಿನ ಅವರು ಕೋಮಾಕ್ಕೆ ಜಾರಿದರು. ಆಮೇಲೆ ಅವರಿಗೆ ಪ್ರಜ್ಞೆ ಬರಲೇ ಇಲ್ಲ. ಈದಿನ ಬೆಳಿಗ್ಗೆ 8 ಗಂಟೆಗೆ ತೀರಿಕೊಂಡರು.

2009: ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಕೂಟ ಸರ್ಕಾರ ರಚಿಸುವುದು ಖಾತರಿಯಾಗುತ್ತಿದ್ದಂತೆ ನಾ ಮುಂದು ತಾ ಮುಂದು ಎಂದು ಹಲವು ಪಕ್ಷಗಳು ಬೆಂಬಲ ನೀಡಲು ಮುಂದೆ ಬಂದವು. ಚುನಾವಣಾಪೂರ್ವದಲ್ಲಿ ಕಾಂಗ್ರೆಸ್ ಜೊತೆ ಕಚ್ಚಾಡಿದ್ದ 23 ಸಂಸದರನ್ನು ಹೊಂದಿರುವ ಸಮಾಜವಾದಿ ಪಕ್ಷ (ಎಸ್ಪಿ), 4 ಸದಸ್ಯರ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಸೇರಿದಂತೆ 21 ಸಂಸದರಿರುವ ಬಹುಜನ ಸಮಾಜ ಪಕ್ಷ (ಬಿಎಸ್ಪಿ), 1 ಸ್ಥಾನ ಗಳಿಸಿದ ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್ (ಎಸ್‌ಡಿಎಫ್), 3 ಸಂಸದರ ಜೆಡಿಎಸ್ ಬೆಂಬಲ ಸೂಚಿಸಿದವು. ಇದರೊಂದಿಗೆ ಯುಪಿಎ ಸಂಖ್ಯಾಬಲ 300ರ ಗಡಿ ದಾಟಿತು. ಬೆಳಗ್ಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ, ಬಿಎಸ್ಪಿ ಅಧ್ಯಕ್ಷೆ ಮಾಯಾವತಿ ಅವರು ಯುಪಿಎಗೆ ಬಾಹ್ಯ ಬೆಂಬಲ ನೀಡುವುದಾಗಿ ಲಖನೌದಲ್ಲಿ ಘೋಷಿಸುತ್ತಿದ್ದಂತೆಯೇ, ಅಮರ್ ಸಿಂಗ್ ಅವರು ದೆಹಲಿಯಲ್ಲಿ ರಾಷ್ಟ್ರಪತಿ ಅವರನ್ನು ಭೇಟಿ ಮಾಡಿ ತಮ್ಮ ಪಕ್ಷದ ಬೆಂಬಲ ಪತ್ರವನ್ನು ಸಲ್ಲಿಸಿಬಿಟ್ಟರು.

2009: ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕನಾಗಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಹಾಗೂ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆಯಾಗಿ ಸೋನಿಯಾ ಗಾಂಧಿ ಅವರು ಮರು ಆಯ್ಕೆಗೊಂಡರು. ಚುನಾವಣಾ ಪೂರ್ವ ಮಿತ್ರರು, ಮಿತ್ರರಲ್ಲದವರಿಂದಲೂ ಪೈಪೋಟಿ ಮೇಲೆ ಬೋನಸ್ ರೂಪದಲ್ಲಿ ಬೆಂಬಲದ ಮಹಾಪೂರ ಹರಿದು ಬಂದ ಸಂಭ್ರಮದ ಮಧ್ಯೆಯೇ, ಮನಮೋಹನ್ ಸಿಂಗ್ (76) ಅವರ ಪ್ರಧಾನಿ ಪಟ್ಟದ ಎರಡನೇ ಇನಿಂಗ್ಸ್ ಆರಂಭಕ್ಕೆ ಶ್ರೀಕಾರ ಹಾಕಲಾಯಿತು.

2009: ವಿಶ್ವದ ಅತ್ಯಂತ ಬಲಿಷ್ಠ ಉಗ್ರ ಕಾರ್ಯಜಾಲದ ರೂವಾರಿ, ವ್ಯಾಘ್ರ ಪಡೆ ಎಲ್‌ಟಿಟಿಇಯ ಅಧಿನಾಯಕ ವೇಲುಪಿಳ್ಳೈ ಪ್ರಭಾಕರನ್ ಸಾವನ್ನು ಶ್ರೀಲಂಕಾದ ರಕ್ಷಣಾ ಸಚಿವಾಲಯ ದೃಢ ಪಡಿಸಿತು. ಇದಕ್ಕೆ ಪೂರಕವೆಂಬಂತೆ ಗುಂಡೇಟಿನಿಂದ ಗಾಯ ಗೊಂಡ ಆತನ ಮೃತದೇಹದ ಚಿತ್ರಗಳನ್ನು ಸರ್ಕಾರಿ ಸ್ವಾಮ್ಯದ ಟಿವಿಗೆ ಬಿಡುಗಡೆ ಮಾಡಿತು. 'ಪ್ರಭಾಕರನ್ ಶವ ನಂದಿಕಡಲ್ ಲಗೂನ್‌ನಲ್ಲಿ ಪತ್ತೆಯಾಗಿದೆ. ಎಲ್‌ಟಿಟಿಇಯ ಸಮವಸ್ತ್ರದಲ್ಲಿದ್ದ ಆತನ ತಲೆಗೆ ಗುಂಡಿನ ಗಾಯಗಳಾಗಿವೆ' ಎಂದು ಸೇನಾ ವಕ್ತಾರ ಬ್ರಿಗೇಡಿಯರ್ ಉದಯ ನನಯಕ್ಕಾರ ತಿಳಿಸಿದರು. ಇದಕ್ಕೆ ಮುನ್ನ ಅಧ್ಯಕ್ಷ ಮಹಿಂದ ರಾಜಪಕ್ಸೆ ಅವರು ಸಂಸತ್ತನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ, ಬಂಡು ಕೋರ ಸಂಘಟನೆಯ ವಿರುದ್ಧ ಸೇನೆಯ ದಿಗ್ವಿಜಯವನ್ನು ಘೋಷಿಸಿದ್ದರೂ, ಒಮ್ಮೆಯೂ ಪ್ರಭಾಕರನ್ ಸಾವಿನ ಪ್ರಸ್ತಾಪ ಮಾಡಿರಲಿಲ್ಲ. ಜತೆಗೆ ಎಲ್‌ಟಿಟಿಇ ಪರ ವೆಬ್‌ಸೈಟ್ ಸಹ ತನ್ನ ನಾಯಕ ಇನ್ನೂ ಬದುಕುಳಿದಿದ್ದಾನೆ ಎಂದೇ ಪ್ರತಿಪಾದಿಸಿತ್ತು. ಇದು ಪ್ರಭಾಕರನ್ ಸಾವಿನ ಸುತ್ತ ಸಂಶಯದ ಪ್ರಶ್ನೆಗಳನ್ನು ಹುಟ್ಟುಹಾಕಿತ್ತು. ಆದರೆ ರಕ್ಷಣಾ ಸಚಿವಾಲಯ ಬಿಡುಗಡೆ ಮಾಡಿದ ವಿಡಿಯೊ ದೃಶ್ಯಗಳಲ್ಲಿ, ಮುತ್ತುತ್ತಿದ್ದ ನೊಣಗಳ ನಡುವೆ ಬಿಟ್ಟ ಕಣ್ಣು ಬಿಟ್ಟಂತೆಯೇ ಸೇನೆಯ ಸ್ಟ್ರೆಚರ್ ಮೇಲೆ ನಿಶ್ಚೇಷ್ಟಿತವಾಗಿದ್ದ ಆತನ ದೇಹ ಈ ಎಲ್ಲಾ ಸಂದೇಹಗಳಿಗೂ ಒಂದೇ ಕ್ಷಣದಲ್ಲಿ ಅಂತ್ಯ ಹಾಡಿತು. ಇದರೊಂದಿಗೆ ಪ್ರತ್ಯೇಕ ತಮಿಳು ರಾಷ್ಟ್ರಕ್ಕಾಗಿ ತನ್ನ ಜೀವವನ್ನೇ ಮುಡುಪಾಗಿಟ್ಟ ಪ್ರಭಾಕರನ್‌ನ ಬದ್ಧತೆ ಸಹ ಜಗಜ್ಜಾಹೀರಾಯಿತು. ಗುಂಡೇಟು ತಗುಲಿದ್ದ ಆತನ ನೆತ್ತಿಗೆ ಕರವಸ್ತ್ರ ಸುತ್ತಿ ಮುಖ ಸ್ಪಷ್ಟವಾಗಿ ಕಾಣುವಂತೆ ಕೊಂಚ ಎತ್ತಿ ಹಿಡಿದ ಭಂಗಿಯಲ್ಲಿ, ಸೈನಿಕರು ದೇಹವನ್ನು ಟಿವಿ ಕ್ಯಾಮೆರಾಗೆ ಪ್ರದರ್ಶಿಸುತ್ತಿದ್ದಂತೆಯೇ ಕುಖ್ಯಾತ ನಾಯಕನ ದುರಂತ ಅಂತ್ಯಕ್ಕೆ ಬೇರೆ ಯಾವುದೇ ಸಾಕ್ಷಿ ಬೇಕಾಗಲಿಲ್ಲ. ಆದರೂ ಡಿಎನ್‌ಎ ಪರೀಕ್ಷೆ ನಡೆಸಿ ಆತನ ಸಾವನ್ನು ನಿಖರಪಡಿಸುವುದಾಗಿ ಸೇನೆಯ ವಕ್ತಾರರು ಹೇಳಿದರು. ಅತ್ತ ಭಾರತದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆಯ ರೂವಾರಿ ಮತ್ತು ಆ ಕಾರಣಕ್ಕಾಗೇ ವಿಶ್ವದಲ್ಲೇ ಮೊದಲ ಬಾರಿ ಮಹಿಳಾ ಆತ್ಮಹತ್ಯಾ ದಳ ಬಳಸಿದ ಅಪಖ್ಯಾತಿಗೆ ಗುರಿಯಾಗಿದ್ದ ವ್ಯಕ್ತಿ ಅರಣ್ಯ ಮಧ್ಯದ ಕೆಸರಿನಲ್ಲಿ ಇಹದ ಗೊಡವೆ ಇಲ್ಲದೆ ಮಲಗಿದ್ದರೆ, ಇತ್ತ ಭಾರತದಲ್ಲಿ ರಾಜೀವ್ ಅವರ ಪತ್ನಿ ಸೋನಿಯಾ ಮತ್ತು ಪುತ್ರ ರಾಹುಲ್ ಗಾಂಧಿ ಹೊಸ ಸರ್ಕಾರ ರಚನೆಯ ಗುಂಗಿನಲ್ಲಿ ಮುಳುಗಿಹೋಗಿದ್ದರು. ಕಾಕತಾಳೀಯವೆಂಬಂತೆ ಭಾರತದ ಟಿವಿ ವಾಹಿನಿಗಳು ಇಡೀ ದಿನ ಈ ಎರಡೂ ಸುದ್ದಿಗಳನ್ನು ಒಂದರ ನಂತರ ಒಂದು ಬಿತ್ತರಿಸುತ್ತಲೇ ಇದ್ದವು.

2009: 2008ರ ಕೊಂಕಣಿ ಸಾಹಿತ್ಯ ಅಕಾಡಮಿ ಪ್ರಶಸ್ತಿಯನ್ನು ಆರು ಜನರಿಗೆ ನೀಡಲಾಗಿದೆ ಎಂದು ಅಕಾಡೆಮಿ ಅಧ್ಯಕ್ಷ ಕೆ. ನಾರಾಯಣ ಖಾರ್ವಿ ಮಂಗಳೂರಿನಲ್ಲಿ ಪ್ರಕಟಿಸಿದರು. ಕೊಂಕಣಿ ಸಾಹಿತ್ಯ ಪ್ರಶಸ್ತಿಗೆ (ಸಾಹಿತ್ಯ) ಲೇಖಕ ಜೆ.ಬಿ. ಮೊರಾಯಿಸ್, ಕೊಂಕಣಿ ಜಾನಪದ ಪ್ರಶಸ್ತಿಗೆ ವಾಸುದೇವ ನಾಯಕ್, ಕೊಂಕಣಿ ಸಂಘಟಕ ಪ್ರಶಸ್ತಿಗೆ ಬಸ್ತಿ ವಾಮನ ಶೆಣೈ ಅವರನ್ನು ಆಯ್ಕೆ ಮಾಡಲಾಗಿದೆ. ಕೊಂಕಣಿ ಪುಸ್ತಕ ಪುರಸ್ಕಾರಕ್ಕೆ ಪಾಲ್ ಮೊರಾಸ್ ಹಾಗೂ ಎಡ್ವರ್ಡ್ ಸೆರಾವೊ ಅವರು ಪಾತ್ರರಾಗಿದ್ದಾರೆ. ಮಾಲತಿ ಕಾಮತ್ ಅವರಿಗೆ ಕೊಂಕಣಿ ವಿಶೇಷ ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದು ಖಾರ್ವಿ ಹೇಳಿದರು.

2008: ಹಸಿರು ಮನೆ ಅನಿಲಗಳಾದ ಇಂಗಾಲದ ಡೈಆಕ್ಸೈಡ್ ಹಾಗೂ ಮಿಥೇನ್ ಹೊರಸೂಸುವಿಕೆ ಪ್ರಮಾಣ ಇತ್ತೀಚೆಗೆ ಅತಿ ಹೆಚ್ಚಾಗಿದೆ ಎಂಬುದು ದಕ್ಷಿಣ ಧ್ರುವ ಅಂಟಾರ್ಟಿಕಾದ ಹಿಮಪದರಗಳಲ್ಲಿ ಅಡಗಿರುವ ಅನಿಲಗಳ ಅಧ್ಯಯನದಿಂದ ಸಾಬೀತಾಯಿತು. ಹಿಮಪದರಗಳ ನಡುವಿನ ಅನಿಲಗಳ ಅಧ್ಯಯನ ನಡೆಸಿದ ವಿಜ್ಞಾನಿಗಳು ಕಳೆದ 8 ಲಕ್ಷ ವರ್ಷಗಳಿಗೆ ಹೋಲಿಸಿದಾಗ ಈ ಅನಿಲ ಹೊರಸೂಸುವಿಕೆ ಪ್ರಮಾಣ ಇತ್ತೀಚಿನ ವರ್ಷಗಳಲ್ಲಿ ಅತಿ ಹೆಚ್ಚಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಮಾಲಿನ್ಯಕಾರಕ ಹಸಿರು ಮನೆ ಅನಿಲಗಳ ಪ್ರಮಾಣಕ್ಕೂ ಜಾಗತಿಕ ತಾಪಮಾನ ಹೆಚ್ಚಳಕ್ಕೂ ನೇರ ಸಂಬಂಧವಿದೆ ಎಂಬುದನ್ನು ಈ ಅಧ್ಯಯನ ಇನ್ನಷ್ಟು ದೃಢಗೊಳಿಸಿತು. ಹಿಮಪದರಗಳ ನಡುವೆ ಲಕ್ಷಗಟ್ಟಲೆ ವರ್ಷಗಳಿಂದ ಸಿಲುಕಿಕೊಂಡಿರುವ ಅನಿಲ ಕಣಗಳಲ್ಲಿ ಇಂಗಾಲದ ಡೈಆಕ್ಸೈಡ್ ಪ್ರಮಾಣ ಹತ್ತು ಲಕ್ಷ ವಾಯು ಕಣಗಳಲ್ಲಿ 200-300ರಷ್ಟು ಇದ್ದರೆ, ಇತ್ತೀಚಿನ ವರ್ಷಗಳಲ್ಲಿ ವಾತಾವರಣದಲ್ಲಿ ಹತ್ತು ಲಕ್ಷ ವಾಯು ಕಣಗಳಲ್ಲಿ 380ರಷ್ಟು ಇಂಗಾಲದ ಡೈಆಕ್ಸೈಡ್ ಅಣುಗಳು ಕಾಣಿಸುತ್ತಿವೆ. ಲಕ್ಷ ವರ್ಷ ಹಿಂದೆ ಮಿಥೇನ್ ಪ್ರಮಾಣ ಒಂದು ಶತಕೋಟಿ ವಾಯು ಕಣಗಳಲ್ಲಿ 400-700ರಷ್ಟು ಇದ್ದರೆ, ಈಗ ವಾತಾವರಣದಲ್ಲಿ ಒಂದು ಶತಕೋಟಿ ವಾಯು ಕಣಗಳಲ್ಲಿ 1,800ರಷ್ಟು ಮಿಥೇನ್ ಅಣುಗಳು ಇವೆ ಎಂಬುದು ವಿಜ್ಞಾನಿಗಳ ವಿವರಣೆ.

2008: ಖ್ಯಾತ ಗೀತ ರಚನೆಕಾರ ಆರ್. ಎನ್. ಜಯಗೋಪಾಲ್ (73) ಅವರು ಈದಿನ ಬೆಳಗ್ಗೆ ಚೆನ್ನೈಯ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು. ಕನ್ನಡ ಚಲನಚಿತ್ರೋದ್ಯಮದಲ್ಲಿ ಅರ್ಧ ಶತಮಾನದಷ್ಟು ಕಾಲ ಚಿತ್ರಗೀತೆಗಳನ್ನು ನೀಡಿ ರಂಜಿಸಿದ ಜಯಗೋಪಾಲ್ ಅವರು ಖ್ಯಾತ ಚಿತ್ರ ನಿರ್ದೇಶಕ ಹಾಗೂ ನಿರ್ಮಾಪಕ ಆರ್. ನಾಗೇಂದ್ರರಾವ್ ಅವರ ಪುತ್ರ. ತಂದೆಯ ಚಿತ್ರ `ಪ್ರೇಮದ ಪುತ್ರಿ' ಚಿತ್ರಕ್ಕಾಗಿ 1957ರಲ್ಲಿ ತಮ್ಮ ಚೊಚ್ಚಲ `ತ್ರಿಭುವನ ಜನನಿ ಜಗನ್ಮೋಹಿನಿ' ಗೀತೆಯನ್ನು ರಚಿಸಿದ್ದ ಜಯಗೋಪಾಲ್ ಅವರು `ಕರ್ಪೂರದ ಗೊಂಬೆ ನಾನು, ಮಿಂಚಂತೆ ಬಳಿ ಬಂದೆ ನೀನು', `ಹೂವು ಚೆಲುವೆಲ್ಲಾ ನಂದೆಂದಿತು', `ನೀರಿನಲ್ಲಿ ಅಲೆಯ ಉಂಗುರ', `ಹಾಡೊಂದ ಹಾಡುವೆ ನೀ ಕೇಳು ಮಗುವೇ'. `ಗಗನವು ಎಲ್ಲೋ ಭೂಮಿಯು ಎಲ್ಲೋ' ಇತ್ಯಾದಿ ಜನಪ್ರಿಯ ಗೀತೆಗಳು ಸೇರಿದಂತೆ 1650ಕ್ಕೂ ಅಧಿಕ ಚಿತ್ರಗೀತೆಗಳನ್ನು ರಚಿಸಿದವರು. ಚಿ. ಉದಯಶಂಕರ್, ಪುಟ್ಟಣ್ಣ ಕಣಗಾಲ್, ಡಾ. ರಾಜಕುಮಾರ್ ಸಮಕಾಲೀನರಾಗಿ ಮಿಂಚಿದ ಜಯಗೋಪಾಲ್ ಅವರು ಸರಳವಾಗಿ ಜನರಿಗೆ ಅರ್ಥವಾಗುವಂತೆ ಚಿತ್ರಗೀತೆ ಬರೆಯುವ ಕಲೆಯನ್ನು ಅದ್ಭುತವಾಗಿ ರೂಢಿಸಿಕೊಂಡಿದ್ದರು. ಜಯಗೋಪಾಲ್ ಅವರ ಸಹೋದರ ಆರ್.ಎನ್. ಸುದರ್ಶನ್ ಹಾಗೂ ಆರ್.ಎನ್.ಕೆ ಪ್ರಸಾದ್ ಸಹ ಚಿತ್ರರಂಗದಲ್ಲಿ ದುಡಿದವರು. ಕನ್ನಡ ಚಲನಚಿತ್ರಗಳ ಗೀತರಚನೆಕಾರರಾಗಿ ಹೆಸರು ಮಾಡಿದ ಜಯಗೋಪಾಲ್ ನಿರ್ದೇಶಕರಾಗಿಯೂ ಕೆಲಸ ಮಾಡಿದವರು. `ಜನನಿ' ಮೆಗಾ ಧಾರಾವಾಹಿ ನಿರ್ಮಿಸುವ ಮೂಲಕ ಕಿರುತೆರೆಯ ಮಾಧ್ಯಮವನ್ನು ಕೂಡ ದುಡಿಸಿಕೊಂಡ ಜಯಗೋಪಾಲ್ ಅವರ ನಿರ್ಮಾಣ ನಿರ್ದೇಶನದ `ರಾಮಾಯಣ' ಧಾರಾವಾಹಿಯು ಉದಯ ವಾಹಿನಿಯಲ್ಲಿ ವಾರಕ್ಕೊಮ್ಮೆ ಬೆಳಕು ಕಂಡಿತು. `ತ್ರಿಭುವನ ಜನನಿ' (ಪ್ರೇಮದ ಪುತ್ರಿ), `ದೋಣಿಯೊಳಗೆ ನೀನು' (ಉಯ್ಯಾಲೆ), `ಹಾಡೊಂದ ಹಾಡುವೆ ನೀ ಕೇಳು ಮಗುವೇ' (ನಾಂದಿ), `ಗಗನವು ಎಲ್ಲೋ ಭೂಮಿಯು ಎಲ್ಲೋ' (ಗೆಜ್ಜೆಪೂಜೆ), `ಹೂವು ಚೆಲುವೆಲ್ಲ ತಂದೆಂದಿತು' (ಹಣ್ಣೆಲೆ ಚಿಗುರಿದಾಗ), `ನಗುವ ನಯನ ಮಧುರ ಮೌನ' (ಪಲ್ಲವಿ ಅನುಪಲ್ಲವಿ) ಹಾಡುಗಳು ಅವರ ನೂರಾರು ಹಾಡುಗಳ ಪೈಕಿ ಸದಾ ನೆನಪಿನಲ್ಲಿ ಉಳಿಯುವಂತಹವು. ತಂದೆ ಎರ್.ಎನ್. ನಾಗೇಂದ್ರ ರಾಯರ ಮಾರ್ಗದರ್ಶನದಲ್ಲಿ ಬೆಳೆದ ಜಯಗೋಪಾಲ್, ಬೆಂಗಳೂರಿನ ಪೀಣ್ಯದಲ್ಲಿ ಅಪ್ಪನ ಹೆಸರಿನಲ್ಲೇ ಸ್ಟುಡಿಯೋ ಒಂದನ್ನು ಕಷ್ಟಪಟ್ಟು ನಿರ್ಮಿಸಿ ಬಹುಕಾಲದ ಕನಸನ್ನು ನನಸಾಗಿಸಿಕೊಂಡಿದ್ದರು. ರಾಜ್ ಕುಮಾರ್ ಅಭಿನಯದ `ಧೂಮಕೇತು', `ನಾ ಮೆಚ್ಚಿದ ಹುಡುಗ' ಸೇರಿದಂತೆ ಎಂಟು ಚಿತ್ರಗಳನ್ನು ಜಯಗೋಪಾಲ್ ನಿರ್ದೇಶಿಸಿದ್ದರು. ರಾಜ್ಯ ಚಲನಚಿತ್ರ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಹಾಗೂ ತಮಿಳುನಾಡು ಸರ್ಕಾರ ಜೀವಮಾನದ ಸಾಧನೆಗೆ ನೀಡುವ ಕಲೈಮಾಮಣಿ ಪುರಸ್ಕಾರ ಸೇರಿದಂತೆ ಅನೇಕ ಸಮ್ಮಾನಗಳು ಜಯಗೋಪಾಲ್ ಅವರಿಗೆ ಸಂದಿದ್ದವು.

2008: ಬಹುತೇಕ ಭಾರತೀಯ ಭಾಷೆಗಳಿಗೆ ಅನುವಾದಗೊಂಡ `ಘಾಸೀರಾಂ ಕೊತ್ವಾಲ್' ಜನಪ್ರಿಯ ನಾಟಕ ಸೇರಿದಂತೆ 33 ನಾಟಕಗಳನ್ನು ರಚಿಸಿ ಮರಾಠಿ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಹೆಸರಾಂತ ಸಾಹಿತಿ ವಿಜಯ್ ದೊಂಡೋಪಂತ್ ತೆಂಡೂಲ್ಕರ್ ಈದಿನ ಪುಣೆಯಲ್ಲಿ ನಿಧನರಾದರು. ಮೂಳೆ ರೋಗದಿಂದ ಬಳಲುತ್ತಿದ್ದ ಅವರನ್ನು ಕೆಲವು ವಾರಗಳ ಹಿಂದೆ ಪುಣೆಯ ಪ್ರಯಾಗ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಹಿಂದಿನ ದಿನ ಅವರು ಕೋಮಾಕ್ಕೆ ಜಾರಿದರು. ಆಮೇಲೆ ಅವರಿಗೆ ಪ್ರಜ್ಞೆ ಬರಲೇ ಇಲ್ಲ. ಈದಿನ ಬೆಳಿಗ್ಗೆ 8 ಗಂಟೆಗೆ ತೀರಿಕೊಂಡರು. 1928ರ ಜನವರಿ 6ರಂದು ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ವಿಜಯ್ ಜನಿಸಿದ್ದರು. ಗುಮಾಸ್ತರಾಗಿದ್ದ ಅವರ ತಂದೆ ಸಣ್ಣಮಟ್ಟದ ಪ್ರಕಾಶಕರೂ ಆಗಿದ್ದರು. ಸಾಹಿತ್ಯದ ವಾತಾವರಣದಲ್ಲಿ ಬೆಳೆದ ವಿಜಯ್ ತಮ್ಮ 6ನೇ ವಯಸ್ಸಿನಲ್ಲೇ ಮೊದಲ ಕತೆ ಬರೆದರು. `ಮರಾಠ' ದಿನಪತ್ರಿಕೆಯಲ್ಲಿ ಪತ್ರಕರ್ತರಾಗಿ ವೃತ್ತಿ ಆರಂಭಿಸಿದ ಅವರು ಆಮೇಲೆ ನಾಟಕಗಳ ರಚನೆಯಲ್ಲಿ ಗಂಭೀರವಾಗಿ ತೊಡಗಿಸಿಕೊಂಡರು. ಫ್ರೆಂಚ್ ಸಣ್ಣಕತೆಯೊಂದರ ಪ್ರಭಾವದಿಂದ ಅವರು ಬರೆದ ನಾಟಕ `ಶಾಂತತಾ! ಕೋರ್ಟ್ ಚಾಲೂ ಆಹೇ' ಭಾರೀ ಹೆಸರು ಮಾಡಿತ್ತು. 1967ರಲ್ಲಿ ಮೊದಲ ಪ್ರಯೋಗ ಕಂಡ ಈ ನಾಟಕವನ್ನು ಆಮೇಲೆ ಸತ್ಯದೇವ್ ದುಬೆ ಸಿನಿಮಾ ಮಾಡಿದರು. ಈ ನಾಟಕವನ್ನು `ಸದ್ದು! ವಿಚಾರಣೆ ನಡೀತಾ ಇದೆ' ಎಂಬ ಹೆಸರಿನಲ್ಲಿ ಚಂದ್ರಕಾಂತ ಕುಸುನೂರ, ಘಾಸೀರಾಂ ಕೊತ್ವಾಲ್ ನಾಟಕವನ್ನು ಮುದೇನೂರು ಸಂಗಣ್ಣ, ಕನ್ಯಾದಾನ ನಾಟಕವನ್ನು ವೀಣಾ ಕುಲಕರ್ಣಿ ಮರಾಠಿಯಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ಮತ್ತೊಂದು ಹೆಸರಾಂತ ನಾಟಕ ಸಖಾರಾಂ ಬೈಂಡರ್ ಕೂಡ ಕನ್ನಡದಲ್ಲಿ ಪ್ರಕಟವಾಗಿ ಪ್ರಯೋಗಗೊಂಡಿದೆ. ಇವರ ಬಹುತೇಕ ನಾಟಕಗಳು ವಿವಿಧ ಭಾರತೀಯ ಭಾಷೆಗೆ ಅನುವಾದಗೊಂಡಿವೆ. ಶ್ರೀರಾಮ್ ಲಾಗೂ, ಮೋಹನ್ ಅಗಾಶೆ ಮತ್ತು ಸುಲಭಾ ದೇಶಪಾಂಡೆ ಅವರಂತಹ ಹೆಸರಾಂತ ಕಲಾವಿದರು ತೆಂಡೂಲ್ಕರ್ ನಾಟಕಗಳನ್ನು ಭಾರಿ ಜನಪ್ರಿಯಗೊಳಿಸಿದರು. ತಮಗೆ ಜ್ಞಾನಪೀಠ ಪ್ರಶಸ್ತಿ ಪ್ರಕಟವಾದಾಗ `ಇದು ವಿಜಯ್ ತೆಂಡೂಲ್ಕರ್ ಗೆ ಸಿಗಬೇಕಿತ್ತು' ಎಂದು ಗಿರೀಶ ಕಾರ್ನಾಡ್ ಪ್ರತಿಕ್ರಿಯಿಸಿದ್ದರು.

2008: ಮುಂಬೈಯಲ್ಲಿ ನೆಲೆಸಿದ್ದ ಕನ್ನಡದ ಪ್ರಖ್ಯಾತ ಕವಿ ಅರವಿಂದ ನಾಡಕರ್ಣಿ (77) ನಿಧನರಾದರು. ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲ್ಲೂಕಿನ ಬಂಕಿಕೊಡ್ಲ ಗ್ರಾಮದವರಾದ ಅವರು ಕೊಲ್ಲಾಪುರ ಹಾಗೂ ಮುಂಬೈಯಲ್ಲಿ ಶಿಕ್ಷಣ ಮುಗಿಸಿ ಆಮೇಲೆ ಮುಂಬೈಯಲ್ಲಿ ತೆರಿಗೆ ತಜ್ಞರಾಗಿದ್ದರು. ಅವರು ವೈದ್ಯ ಪತ್ನಿ ಗಾಯತ್ರಿ ಅವರನ್ನು ಅಗಲಿದರು. ಕನ್ನಡ ಸಾರಸ್ವತ ಲೋಕಕ್ಕೆ 14ಕ್ಕೂ ಹೆಚ್ಚು ಕವನ ಸಂಕಲನಗಳನ್ನು ಅವರು ಕೊಡುಗೆಯಾಗಿ ನೀಡಿದ್ದರು. `ಕಾವ್ಯಾರ್ಪಣ', `ಮಾಯಾವಿ', `ನಗರಾಯಣ', `ಆತ್ಮ ಭಾರತ', `ಸಲೂನಿನಲ್ಲಿ ಹುಡುಗ' ಈ ಸಂಕಲನಗಳಲ್ಲಿ ಸೇರಿವೆ. `ಆಹತ' ಎಂಬ ವಿಮರ್ಶಾ ಸಂಕಲನವನ್ನೂ ಅವರು ಪ್ರಕಟಿಸಿದ್ದರು. ಕಾವ್ಯಕ್ಕೆ ಮಾತ್ರ ಮೀಸಲಾಗಿದ್ದ `ಸೃಜನದೇವಿ' ಎಂಬ ತ್ರೈಮಾಸಿಕ ಪತ್ರಿಕೆಯನ್ನು ನಾಲ್ಕು ವರ್ಷಗಳ ಕಾಲ ಅವರು ಸಂಪಾದಕರಾಗಿ ಮುಂಬೈಯಿಂದ ಹೊರತಂದಿದ್ದರು. ಪುರಾಣ ಪ್ರತಿಮೆಗಳನ್ನು ಬಳಸಿ ನಗರ ಜೀವನದ `ಮನುಜ ವಿನ್ಯಾಸ'ಗಳನ್ನು ಅನ್ವೇಷಿಸುವುದು ಅವರ ಕಾವ್ಯದ ಮುಖ್ಯ ಲಕ್ಷಣವಾಗಿತ್ತು. ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ರಾಜ್ಯ ಪ್ರಶಸ್ತಿ, ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನದ ಗೌರವಗಳು ಅವರಿಗೆ ಲಭಿಸಿದ್ದವು.

2008: ಕೋಲಾರ ತಾಲ್ಲೂಕಿನ ನರಸಾಪುರ, ಮಾಲೂರು ತಾಲ್ಲೂಕಿನ ಟೇಕಲ್, ಆನೇಕಲ್, ಬೆಂಗಳೂರಿನ ದೇವರಜೀವನ ಹಳ್ಳಿ, ಬೆಂಗಳೂರಿಗೆ ಸಮೀಪದ ಹೊಸೂರು ಹಾಗೂ ಕೃಷ್ಣಗಿರಿಯಲ್ಲಿ ಕಳ್ಳಬಟ್ಟಿ ದುರಂತದಲ್ಲಿ ಮೃತರಾದವರ ಸಂಖ್ಯೆ 72ಕ್ಕೆ ಏರಿತು. ದೇವರಜೀವನಹಳ್ಳಿಯ (ಡಿ.ಜೆ ಹಳ್ಳಿ) ರೋಷನ್ ನಗರದಲ್ಲಿ ಹಿಂದಿನ ದಿನ ಕಳ್ಳಬಟ್ಟಿ ಸೇವಿಸಿ ಎಂಟು ಮಂದಿ ಮೃತರಾಗಿ 40 ಮಂದಿ ಆಸ್ಪತ್ರೆಗೆ ದಾಖಲಾಗಿದ್ದರು. ಇವರ್ಲಲಿ 22 ಜನರು ಚಿಕಿತ್ಸೆ ಫಲಕಾರಿಯಾಗದೆ ಈದಿನ ಮೃತರಾದರು.

2008: ಅಪರೂಪದ ಬಿಳಿ ಜಿಂಕೆ ದರ್ಶನವೇ ತೀರಾ ವಿರಳ. ಮೈಮೇಲೆ ಚುಕ್ಕೆಗಳುಳ್ಳ ಇಂತಹ ಬಿಳಿ ಜಿಂಕೆಯೊಂದು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಕಾಣಿಸಿಕೊಂಡದ್ದು ಬೆಳಕಿಗೆ ಬಂತು.
ರಾಜ್ಯದ ಯಾವುದೇ ಅರಣ್ಯ ಪ್ರದೇಶದಲ್ಲಿ ಈ ಅಪರೂಪದ ಬಿಳಿ ಜಿಂಕೆ ಕಂಡ ಉದಾಹರಣೆಯಿಲ್ಲ. ಆದರೆ ನಿವೃತ್ತ ಅರಣ್ಯ ಅಧಿಕಾರಿ ಎಸ್. ಜಿ. ನೇಗಿನಹಾಳ್ ಅವರು ಈ ವಾರ ನಾಗರಹೊಳೆಗೆ ಭೇಟಿ ನೀಡಿದ್ದಾಗ ಈ ಅಪರೂಪದ ಜಿಂಕೆ ಕಾಣಿಸಿಕೊಂಡಿತು.

2008: ಕೇರಳದ ಪಿರವೊಮ್ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದ ಸಿಪಿಎಂ ಶಾಸಕ ಎಂ.ಜೆ. ಜೇಕಬ್ ಅವರ ಅರ್ಹತೆಯನ್ನು ರದ್ದುಗೊಳಿಸಿದ್ದ ಕೇರಳ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿತು. ನ್ಯಾಯಮೂರ್ತಿ ಸಿ.ಕೆ.ಠಕ್ಕರ್ ಹಾಗೂ ಎಲ್. ಎಸ್. ಪಂತ್ ಅವರನ್ನೊಳಗೊಂಡ ರಜಾಕಾಲದ ಪೀಠವು ಈ ಆದೇಶ ನೀಡಿತು. ಏಪ್ರಿಲ್ 29, 2006ರಲ್ಲಿ ನಡೆದ ಕೇರಳ ವಿಧಾನಸಭಾ ಚುನಾವಣೆಗಳಲ್ಲಿ ಎಂ.ಜೆ. ಜೇಕಬ್ ಭ್ರಷ್ಟಾಚಾರ ಎಸಗಿ ಗೆಲುವು ಸಾಧಿಸಿದ್ದಾರೆ, ಇದು ಪ್ರಜಾ ಪ್ರಾತಿನಿಧ್ಯ ಕಾಯ್ದೆಯ (1956) ಕಲಂ 123(4)ಕ್ಕೆ ವಿರುದ್ಧವಾದ ನಡವಳಿಕೆ. ಆದ್ದರಿಂದ ಜೇಕಬ್ ಅವರ ಶಾಸಕತ್ವವನ್ನು ಅನೂರ್ಜಿತಗೊಳಿಸಬೇಕು ಎಂದು ಮತದಾರ ನಾರಾಯಣನ್ ಎಂಬುವವರು ಕೋರ್ಟ್ ಮೇಟ್ಟಿಲೇರಿದ್ದರು.

2008: ನೈಋತ್ಯ ಚೀನಾದಲ್ಲಿ ಎರಡು ದಿನಗಳ ಹಿಂದೆ ಉಂಟಾದ ಭೂಕುಸಿತದಲ್ಲಿ ಸುಮಾರು 200ಕ್ಕೂ ಹೆಚ್ಚು ಪರಿಹಾರ ಕಾರ್ಯಕರ್ತರು ಸಿಲುಕಿ ಜೀವಂತ ಸಮಾಧಿಯಾದರು ಎಂದು ಚೀನಾದ ಸಾರಿಗೆ ಸಚಿವಾಲಯ ತಿಳಿಸಿತು.

2008: ರಿಲಯನ್ಸ್ ಇಂಡಸ್ಟ್ರೀಸ್ ಮಾಲೀಕ ಮುಖೇಶ್ ಅಂಬಾನಿ ಅವರ ಸಂಬಳವು ಶೇ 45ರಷ್ಟು ಹೆಚ್ಚಳಗೊಂಡಿದ್ದು, ಕಳೆದ ಸಾಲಿನಲ್ಲಿ ಅವರು ಕಂಪೆನಿಯಿಂದ ಒಟ್ಟು ರೂ 44 ಕೋಟಿಗಳಷ್ಟು ವಾರ್ಷಿಕ ಸಂಬಳ ಪಡೆದುಕೊಂಡಿದ್ದಾರೆ ಎಂದು ಷೇರು ಹೂಡಿಕೆದಾರರಿಗೆ ಕಂಪೆನಿಯು ನೀಡಿದ ವಾರ್ಷಿಕ ವರದಿ ತಿಳಿಸಿತು. 2006-07ನೇ ಹಣಕಾಸು ವರ್ಷದಲ್ಲಿ ಅತ್ಯಂತ ಗರಿಷ್ಠ ಸಂಬಳದ ಮಾಲೀಕ ಎಂದೂ ಮುಖೇಶ್ ಗುರುತಿಸಿಕೊಂಡಿದ್ದರು. ನಂತರದ ಸ್ಥಾನದಲ್ಲಿ ಮದ್ರಾಸ್ ಸಿಮೆಂಟ್ಸ್ ಕಂಪೆನಿ ಮಾಲೀಕ ಪಿ.ಆರ್.ಆರ್ ರಾಜಾ ಅವರಿದ್ದರು.

2008: ಹಿಂದಿನವಾರ ಸಂಭವಿಸಿದ ಜೈಪುರ ಸ್ಫೋಟದಲ್ಲಿ ಗಾಯಗೊಂಡಿದ್ದ ಇಬ್ಬರು ಹಿಂದಿನ ದಿನ ಮೃತರಾಗುವುದರ ಜೊತೆಗೆ ಸ್ಫೋಟಕ್ಕೆ ಬಲಿಯಾದವರ ಸಂಖ್ಯೆ 65ಕ್ಕೆ ಏರಿತು.

2007: ಖ್ಯಾತ ಪಿಟೀಲುವಾದಕ ಮತ್ತು ಹಿರಿಯ ಹಿರಿಯ ನಿರ್ದೇಶಕ ಎಲ್. ವೈದ್ಯನಾಥನ್ (61) ಅವರು ಹೃದಯಾಘಾತದಿಂದ ಚೆನ್ನೈಯಲ್ಲಿ ನಿಧನರಾದರು. ವೈದ್ಯನಾಥನ್ ಅವರು ಕನ್ನಡ ಮತ್ತು ತಮಿಳು ಚಿತ್ರಗಳಿಗೆ ಗೀತೆಗಳನ್ನು ರಚಿಸಿದ್ದಲ್ಲದೆ ಸಂಗೀತ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದರು. ತಮಿಳು ಚಿತ್ರ `ಎಜಾವತು ಮಣಿತನ್' ಚಿತ್ರಕ್ಕೆ ನೀಡಿದ್ದ ಸಂಗೀತದಿಂದ ಅವರು ಖ್ಯಾತಿ ಪಡೆದಿದ್ದರು. ನಮ್ಮೂರ ಮಂದಾರ ಹೂವೇ, ಇದು ಎಂಥಾ ಲೋಕವಯ್ಯಾ, ಒಲುಮೆ ಪೂಜೆಗೆಂದೇ, ಸಂತಸ ಅರಳುವ ಸಮಯ, ಅಂತರಂಗದ ಹೂ ಬನಕೆ, ಏನೋ ಮಾಡಲು ಹೋಗಿ ಮತ್ತಿತರ ಜನಪ್ರಿಯ ಗೀತೆಗಳಿಗೆ ಅವರು ಸಂಗೀತ ನೀಡಿದ್ದರು.

2007: ಏಷ್ಯಾದಲ್ಲೇ ಪ್ರಪ್ರಥಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ `ಮಿರರ್ ಡೋಂ ಪ್ಲಸ್' ತಾರಾ ಮಂಡಲ ವೀಕ್ಷಣೆಯ ಪ್ರೊಜೆಕ್ಟರಿಗೆ ಬೆಂಗಳೂರಿನ ಜವಾಹರ ಲಾಲ್ ನೆಹರೂ ತಾರಾಲಯದಲ್ಲಿ ರಾಜ್ಯಪಾಲ ಟಿ.ಎಸ್. ಚತುರ್ವೇದಿ ಚಾಲನೆ ನೀಡಿದರು. ಕಂಪ್ಯೂಟರ್, ಡಿ ಎಲ್ ಪಿ ಪ್ರೊಜೆಕ್ಟರ್ ಮತ್ತು ಅತಿ ಹೆಚ್ಚು ಪ್ರತಿಫಲನ ಶಕ್ತಿಯ ಉನ್ನತ ದರ್ಪಣವನ್ನು ಪ್ರೊಜೆಕ್ಟರ್ ಹೊಂದಿದೆ. ಆಸ್ಟ್ರೇಲಿಯಾದ ಸ್ವಿನ್ ಬರ್ನ್ ತಾಂತ್ರಿಕ ವಿಶ್ವ ವಿದ್ಯಾಲಯ ಸಿದ್ಧ ಪಡಿಸಿದ ಈ ಪ್ರತಿಫಲನ ಸಂಬಂಧಿತ ಸಾಫ್ಟ್ ವೇರನ್ನು ಕೂಡಾ ಈ ಪ್ರೊಜೆಕ್ಟರಿಗೆ ಅಳವಡಿಸಲಾಗಿದೆ.

2007: ದಕ್ಷಿಣ ನೈಜೀರಿಯಾದ ಬಂದರು ನಗರ ಹಾರ್ ಕೋರ್ಟಿನಲ್ಲಿ ತೈಲ ಕಂಪೆನಿಯೊಂದರ ಮೂವರು ಭಾರತೀಯ ಉದ್ಯೋಗಿಗಳನ್ನು ಬಂದೂಕುಧಾರಿ ಭಯೋತ್ಪಾದಕರು ಅಪಹರಿಸಿದರು.

2007: ಹುಕ್ಕೇರಿ ತಾಲ್ಲೂಕಿನ ರಕ್ಷಿ ಗ್ರಾಮದ 94 ವರ್ಷಗಳ ಹಿರಿಯಜ್ಜಿ ಗೌರವ್ವ ಚನ್ನಪ್ಪ ಕುರಬೇಟ ಅವರು ಈದಿನ ಬೆಳಗ್ಗೆ ಮೃತಳಾಗಿ ಸಂಜೆ ವೇಳೆಗೆ ಮತ್ತೆ ಬದುಕಿ ಬಂದಳು. ಬೆಳಗ್ಗೆ 11.30ರ ವೇಳೆಗೆ ಆಕೆ ಕಣ್ಮುಚ್ಚಿದಾಗ ವೈದ್ಯರು ತಪಾಸಿಸಿ ಆಕೆ ಮೃತಳಾಗಿರುವುದಾಗಿ ಘೋಷಿಸಿದ್ದರು. ಎಲ್ಲ ಬಂಧುಗಳಿಗೂ ಕರೆ ಹೋಯಿತು. ಸಂಜೆ 4.30ರ ವೇಳೆಗೆ ಅಂತ್ಯ ಸಂಸ್ಕಾರ ವಿಧಿಗಳನ್ನು ನಡೆಸುತ್ತಿದ್ದಾಗ ಅಜ್ಜಿಯ ಮೂಗಿನ ಹೊಳ್ಳೆ, ಭುಜ ಅಲುಗಿತು. ಇದನ್ನು ಗಮನಿಸಿದ ಕುಟುಂಬ ಸದಸ್ಯರು ಆಕೆಗೆ ಪ್ರಥಮ ಚಿಕಿತ್ಸೆ ನೀಡಿ ವೈದ್ಯರನ್ನು ಕರೆಸಿದರು. ನಂತರ ಅಜ್ಜಿ ಎದ್ದು ಕುಳಿತಳು.

2006: ನೇತಾಜಿ ಸುಭಾಶ್ ಚಂದ್ರ ಬೋಸ್ ಅವರ ಅಜಾದ್ ಹಿಂದ್ ಫೌಜ್ ನಲ್ಲಿ ಚಾಲಕ ಹಾಗೂ ಅಂಗರಕ್ಷಕರಾಗಿದ್ದರೆನ್ನಲಾದ ಉತ್ತರ ಪ್ರದೇಶದ ಅಜಂಗಢದ 102 ವರ್ಷ ವಯಸ್ಸಿನ ನಿಜಾಮುದ್ದೀನ್ ಎಂಬ ವ್ಯಕ್ತಿ, 1945ರಲ್ಲಿ ತೈಪೆಯಲ್ಲಿ ಅಪಘಾತಕ್ಕೆ ಈಡಾದ ವಿಮಾನದಲ್ಲಿ ನೇತಾಜಿ ಇರಲೇ ಇಲ್ಲ, ಅವರು ಕೆಲವು ವರ್ಷಗಳ ಹಿಂದೆ ಫೈಜಾಬಾದಿನಲ್ಲಿ ಗುಮ್ನಾಮಿ ಬಾಬಾ ಹೆಸರಿನಲ್ಲಿ ಮೃತರಾದರು ಎಂದು ಈದಿನ ಅಜಂಗಢದಲ್ಲಿ ಹೇಳಿದರು. 1946ರಲ್ಲಿ ಥಾಯ್ಲೆಂಡಿನ ನದಿಯ ಸೇತುವೆಯೊಂದರ ಮೇಲೆ ತಾನು ನೇತಾಜಿ ಮತ್ತು ಅವರ ಸಹೋದರ ಶರತ್ ಚಂದ್ರ ಬೋಸ್ ಅವರನ್ನು ಭೇಟಿ ಮಾಡಿದ್ದುದಾಗಿ ನಿಜಾಮುದ್ದೀನ್ ನುಡಿದರು.

1947: ವೃತ್ತಿ ರಂಗಭೂಮಿ, ಹವ್ಯಾಸಿ ರಂಗಭೂಮಿ ಮತ್ತು ಚಲನಚಿತ್ರ ಹೀಗೆ ಎಲ್ಲ ಕ್ಷೇತ್ರಗಳಲ್ಲಿಯೂ ಪ್ರಖ್ಯಾತರಾಗಿದ್ದ ಲೋಕೇಶ್ (19-03-1947ರಿಂದ 14-10-2004) ಅವರು ಎಂ.ವಿ. ಸುಬ್ಬಯ್ಯನಾಯ್ಡು- ವೆಂಕಟಮ್ಮ ದಂಪತಿಯ ಮಗನಾಗಿ ಬೆಂಗಳೂರಿನಲ್ಲಿ ಜನಿಸಿದರು.

1938: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡ ನಟ, ಸಾಹಿತಿ ಗಿರೀಶ್ ಕಾರ್ನಾಡ್ ಜನ್ಮದಿನ. ಗಿರೀಶ್ ಕಾರ್ನಾಡ್ ಅವರು ಈ ದಿನ ಮಹಾರಾಷ್ಟ್ರದ ಮ್ಯಾಥೆರಾನಿನಲ್ಲಿ ಡಾ. ರಘುನಾಥ ಕಾರ್ನಾಡ್ - ಕೃಷ್ಣಾಬಾಯಿ ಮಗನಾಗಿ ಜನಿಸಿದರು.

1919: ಕಲಾವಿದ ಭಾಗವತ ನೀಲಾವರ ರಾಮಕೃಷ್ಣಯ್ಯ ಜನನ.

1911: ಮಹಾತ್ಮ ಗಾಂಧೀಜಿಯವರ ಹಂತಕ ನಾಥೂರಾಮ್ ಗೋಡ್ಸೆ ಹುಟ್ಟಿದ ದಿನ. ಗಾಂಧೀಜಿಯವರು ನವದೆಹಲಿಯ ಬಿರ್ಲಾ ಮಂದಿರದಲ್ಲಿ ಪ್ರಾರ್ಥನಾ ಸಭೆಯಲ್ಲಿದ್ದಾಗ ಅವರನ್ನು ಗೋಡ್ಸೆ ಗುಂಡು ಹೊಡೆದು ಕೊಂದ.

1890: ವಿಯೆಟ್ನಾಮಿನ ಧುರೀಣ ಹೊ.ಚಿ. ಮಿನ್ಹ್ (1890-1969) ಜನ್ಮದಿನ. ಮೂರು ದಶಕಗಳ ಕಾಲ ವಿಯೆಟ್ನಾಂ ರಾಷ್ಟ್ರೀಯ ಚಳವಳಿಯ ನೇತೃತ್ವ ವಹಿಸಿದ್ದ ಇವರು 1945ರಿಂದ 1969ರವರೆಗೆ ಉತ್ತರ ವಿಯೆಟ್ನಾಮಿನ ಅಧ್ಯಕ್ಷರಾಗಿದ್ದರು.

1795: ಜಾನ್ಸ್ ಹಾಪ್ ಕಿನ್ಸ್ (1795-1873) ಜನ್ಮದಿನ. ಅಮೆರಿಕದ ದಾನಿಗಳಲ್ಲೊಬ್ಬರಾದ ಇವರು ನೀಡಿದ 7 ದಶಲಕ್ಷ ಡಾಲರ್ ಹಣದಿಂದ ಜಾನ್ಸ್ ಹಾಪ್ ಕಿನ್ಸ್ ಆಸ್ಪತ್ರೆ ಹಾಗೂ ಜಾನ್ಸ್ ಹಾಪ್ ಕಿನ್ಸ್ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಯಿತು.

1536: ಇಂಗ್ಲೆಂಡಿನ ದೊರೆ ಎಂಟನೇ ಹೆನ್ರಿಯ ದ್ವಿತೀಯ ಪತ್ನಿ, ರಾಣಿ ಮೊದಲನೇ ಎಲಿಜಬೆತ್ ಳ ತಾಯಿಯ ತಲೆಯನ್ನು ಎಂಟನೇ ಹೆನ್ರಿಯ ವಿವಾಹದ ಹಿಂದಿನ ದಿನ ಕಡಿಯಲಾಯಿತು. ಆಕೆ ವ್ಯಭಿಚಾರ ನಡೆಸಿದ ಆರೋಪಕ್ಕಾಗಿ ಈ ಶಿಕ್ಷೆ ವಿಧಿಸಲಾಯಿತು.

No comments:

Advertisement