Friday, May 21, 2010

ಇಂದಿನ ಇತಿಹಾಸ History Today ಮೇ 21

ಇಂದಿನ ಇತಿಹಾಸ

ಮೇ 21

ಜಾಗತಿಕ ಆರ್ಥಿಕ ಹಿಂಜರಿತ ಎಲ್ಲರ ವೇತನದ ಮೇಲೆ ಪರಿಣಾಮ ಬೀರಿದರೆ, ಭಾರತೀಯ ಐಟಿ ದೈತ್ಯ ಕಂಪೆನಿ ವಿಪ್ರೊ ಮುಖ್ಯಸ್ಥ ಅಜೀಂ ಪ್ರೇಮ್‌ಜಿ ತಮ್ಮ ವಾರ್ಷಿಕ ವೇತನದಲ್ಲಿ ಸುಮಾರು ಶೇ.10ರಷ್ಟು ಕಡಿತ ಮಾಡಿಕೊಳ್ಳುವ ಮೂಲಕ ಇತರರಿಗೆ ಮಾದರಿಯಾದರು. 2008-09ರ ಹಣಕಾಸು ವರ್ಷದಲ್ಲಿ ಪ್ರೇಮ್‌ಜಿ ಅವರಿಗೆ ನೀಡಲಾದ ಒಟ್ಟು ವೇತನ 32,414 ಡಾಲರ್‌ಗಳಷ್ಟು ಎಂದರೆ ಸುಮಾರು ರೂ.14 ಲಕ್ಷದಷ್ಟು ಕಡಿಮೆಯಾಯಿತು.

2009: ಸಚಿವ ಸ್ಥಾನ ಹಂಚಿಕೆಯಿಂದ ಅಸಮಾಧಾನಗೊಂಡ ಡಿಎಂಕೆ ಸಂಪುಟದಲ್ಲಿ ಪಾಲ್ಗೊಳ್ಳದೆ ಬಾಹ್ಯ ಬೆಂಬಲವಷ್ಟೇ ನೀಡುವ ಬೆದರಿಕೆಯೊಡ್ಡುವುದರೊಂದಿಗೆ ಸರ್ಕಾರ ರಚನೆಯ ಮೊದಲೇ ಯುಪಿಎ ಸಂಕಷ್ಟಕ್ಕೆ ಸಿಲುಕಿತು. 2004ರಲ್ಲಿ ಈ ರೀತಿಯ ಚೌಕಾಸಿಯಿಂದಲೇ ಏಳು ಸಚಿವ ಸ್ಥಾನಗಳನ್ನು ಮಾತ್ರವಲ್ಲ ತಾನು ಬಯಸಿದ್ದ ನೌಕಾ ಮತ್ತು ರಸ್ತೆಸಾರಿಗೆ ಖಾತೆಯನ್ನು ಡಿಎಂಕೆ ಪಡೆದಿತ್ತು. ಅಸಮಾಧಾನಗೊಂಡಿದ್ದ ಡಿಎಂಕೆ ನಾಯಕ ಕರುಣಾನಿಧಿ ತಂಗಿದ್ದ ಹೋಟೆಲ್ ಕೋಣೆಗೆ ಖುದ್ದಾಗಿ ಹೋಗಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಮನವೊಲಿಸಿದ್ದರು. ಅದೇ ಹಳೆಯ ನಾಟಕದ ದೃಶ್ಯಗಳು ಈದಿನ ಸಂಜೆ ಪುನರಾವರ್ತನೆಯಾದವು.

2009: ಬೆಳಗಾವಿ ಜಿಲ್ಲೆಯಲ್ಲಿ ಪ್ರತ್ಯೇಕವಾಗಿ ಸಂಭವಿಸಿದ ಎರಡು ಅಪಘಾತಗಳಲ್ಲಿ ಎಂಟು ಜನರು ಸಾವನ್ನಪ್ಪಿ, 19 ಮಂದಿ ಗಾಯಗೊಂಡರು. ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲ್ಲೂಕು ಸಂಕೇಶ್ವರ ಸಮೀಪದ ಶಿಪ್ಪೂರ ಕ್ರಾಸ್ ಬಳಿ ಬೆಳಗಿನ ಜಾವ 6 ಗಂಟೆಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ 'ಐರಾವತ' ಬಸ್ ಪಲ್ಟಿಯಾಗಿ ಇನ್ಫೋಸಿಸ್ ಕಂಪೆನಿಯ ಐವರು ಉದ್ಯೋಗಿಗಳು ಸಾವನ್ನಪ್ಪಿದರು. ಮತ್ತೊಂದು ಪ್ರತ್ಯೇಕ ಘಟನೆಯಲ್ಲಿ ಬೈಲಹೊಂಗಲ ತಾಲ್ಲೂಕಿನ ನೇಸರಗಿ ಬಳಿ ಮೋಟರ್ ಸೈಕಲ್ ಹಾಗೂ ಟೆಂಪೊ ನಡುವೆ ನಡೆದ ಅಪಘಾತದಲ್ಲಿ ಮೂವರು ಅಸು ನೀಗಿದರು.

2009: ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮುರು ತಾಲ್ಲೂಕಿನ ಮಾಚೇನಹಳ್ಳಿ ಬಳಿಯ ಚಿನ್ನ ಹಗರಿಯಲ್ಲಿ ಎತ್ತಿನ ಗಾಡಿ ಉರುಳಿ ಬಿದ್ದ ಘಟನೆಯಲ್ಲಿ ಮೃತರಾದವರ ಸಂಖ್ಯೆ 21ಕ್ಕೆ ಏರಿತು.

2009: ಸಮರಾಂಗಣವಾಗಿದ್ದ ಶ್ರೀಲಂಕಾ ಉತ್ತರ ಭಾಗದಿಂದ ಹೊರ ಬಿದ್ದ ಯುದ್ಧ ಸಂತ್ರಸ್ತರ ಸಂಖ್ಯೆ 2.80 ಲಕ್ಷ ಮುಟ್ಟಿತು. ಮೂರು ದಿನಗಳಲ್ಲೇ ಸುಮಾರು 80 ಸಾವಿರ ಮಂದಿ ಸಂಘರ್ಷ ವಲಯದಿಂದ ಪಾರಾಗಿ ಬಂದರು.

2009: ಜಾಗತಿಕ ಆರ್ಥಿಕ ಹಿಂಜರಿತ ಎಲ್ಲರ ವೇತನದ ಮೇಲೆ ಪರಿಣಾಮ ಬೀರಿದರೆ, ಭಾರತೀಯ ಐಟಿ ದೈತ್ಯ ಕಂಪೆನಿ ವಿಪ್ರೊ ಮುಖ್ಯಸ್ಥ ಅಜೀಂ ಪ್ರೇಮ್‌ಜಿ ತಮ್ಮ ವಾರ್ಷಿಕ ವೇತನದಲ್ಲಿ ಸುಮಾರು ಶೇ.10ರಷ್ಟು ಕಡಿತ ಮಾಡಿಕೊಳ್ಳುವ ಮೂಲಕ ಇತರರಿಗೆ ಮಾದರಿಯಾದರು. 2008-09ರ ಹಣಕಾಸು ವರ್ಷದಲ್ಲಿ ಪ್ರೇಮ್‌ಜಿ ಅವರಿಗೆ ನೀಡಲಾದ ಒಟ್ಟು ವೇತನ 32,414 ಡಾಲರ್‌ಗಳಷ್ಟು ಎಂದರೆ ಸುಮಾರು ರೂ.14 ಲಕ್ಷದಷ್ಟು ಕಡಿಮೆಯಾಯಿತು.

2009: ಪಾಕಿಸ್ತಾನಕ್ಕೆ ನೀಡುವ ಸೇನೇತರ ನೆರವನ್ನು ತ್ರಿಗುಣಗೊಳಿಸುವ ವಿವಾದಾತ್ಮಕ ಒಪ್ಪಂದಕ್ಕೆ ಅಮೆರಿಕ ಕಾಂಗ್ರೆಸ್ ಸಮಿತಿ ಅನುಮೋದನೆ ನೀಡಿತು. ಆದರೆ ಇದಕ್ಕಾಗಿ ನೆರೆಹೊರೆಯ ದೇಶಗಳೊಂದಿಗಿನ ಗಡಿ ದಾಳಿಗಳಿಗೆ ತಡೆ ಒಡ್ಡುವುದೂ ಸೇರಿದಂತೆ ಕಠಿಣ ಷರತ್ತುಗಳನ್ನು ಪಾಕ್ ಮೇಲೆ ವಿಧಿಸಿತು.

2009: ಎಲ್‌ಟಿಟಿಇ ನಾಯಕ ವಿ.ಪ್ರಭಾಕರನ್ ಹತನಾಗಿರುವುದಾಗಿ ಶ್ರೀಲಂಕಾ ಸೇನೆ ಘೋಷಿಸಿದ ಹಿನ್ನೆಲೆಯಲ್ಲಿ ತಮಿಳುನಾಡಿನಾದ್ಯಂತ ಪ್ರತಿಭಟನೆ ಹಿಂಸಾಸ್ವರೂಪ ಪಡೆಯಿತು., ಕಡಲೂರು ಜಿಲ್ಲೆಯಲ್ಲಿ ಪರಿಸ್ಥಿತಿ ನಿಯಂತ್ರಿಸಲು ಕಂಡಲ್ಲಿ ಗುಂಡಿಕ್ಕಲು ಆದೇಶ ಹೊರಡಿಸಲಾಯಿತು.

2009: ದಕ್ಷಿಣ ಕೊರಿಯಾದ ಸುಪ್ರೀಂಕೋರ್ಟ್ ಮೊತ್ತ ಮೊದಲ ಬಾರಿಗೆ 'ದಯಾ ಮರಣ'ಕ್ಕೆ ಅನುಮತಿ ನೀಡಿತು. ಕೋಮಾ ಸ್ಥಿತಿಯಲ್ಲಿ ದೀರ್ಘಕಾಲದವರೆಗೆ 'ಜೀವನ್ಮರಣ ಹೋರಾಟ' ನಡೆಸುವ ರೋಗಿಗಳು 'ಗೌರವದಿಂದ ಸಾವನ್ನಪ್ಪಲು' ಬಯಸಿದರೆ, ವೈದ್ಯರು 'ದಯಾ ಮರಣ' ನೀಡಬಹುದು ಎಂದು ಕೋರ್ಟ್ ಹೇಳಿತು. 76 ವರ್ಷದ ಮಹಿಳೆಯೊಬ್ಬರು 'ದಯಾ ಮರಣ'ಕ್ಕೆ ಅನುಮತಿ ನೀಡಬೇಕೆಂದು ಕೆಳ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ಸ್ವೀಕರಿಸಿದ ನ್ಯಾಯಾಲಯ, ಆಕೆಯ 'ಪರ' ತೀರ್ಪು ನೀಡಿತು. ಕೆಳ ನ್ಯಾಯಾಲಯದ ತೀರ್ಪನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದು 'ದಯಾ ಮರಣ'ಕ್ಕೆ ಅನುಮತಿ ನೀಡಿತು. ಪ್ರಸ್ತುತ ದಕ್ಷಿಣ ಕೋರಿಯಾದ ಕಾನೂನಿನ ಪ್ರಕಾರ, ಮಿದುಳು ಕೋಶಗಳು ನಿಷ್ಕ್ರಿಯಗೊಂಡ ರೋಗಿಯ 'ಉಸಿರು ನಿಲ್ಲಿಸುವುದು' ಆತನನ್ನು ಕೊಲೆ ಮಾಡಿದಂತೆ.

2009: ಜಾರ್ಖಂಡ್ ಮುಕ್ತಿ ಮೋರ್ಚಾ ಮುಖ್ಯಸ್ಥ ಹಾಗೂ ಮಾಜಿ ಮುಖ್ಯಮಂತ್ರಿ ಶಿಬು ಸೊರೇನ್ ಅವರ ಹಿರಿಯ ಪುತ್ರ ದುರ್ಗಾ ಸೊರೇನ್ ಬೊಕಾರೊದ ತಮ್ಮ ನಿವಾಸದಲ್ಲಿ ನಿಧನರಾದರು. ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದ ಅವರು ಈದಿನ ಬೆಳಗ್ಗೆ ಏಳಲೇ ಇಲ್ಲ. ಜೆಎಂಎಂನ ಪ್ರಧಾನ ಕಾರ್ಯದರ್ಶಿಯೂ ಆಗಿದ್ದ ದುರ್ಗಾ 1995 ಹಾಗೂ 2000ದಲ್ಲಿ ಜಾಮಾ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಗೊದ್ದಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅವರು ಬಿಜೆಪಿ ಅಭ್ಯರ್ಥಿ ಎದುರು ಸೋಲು ಅನುಭವಿಸಿದ್ದರು.

2009: ಒರಿಸ್ಸಾದ ನೂತನ ಮುಖ್ಯಮಂತ್ರಿಯಾಗಿ ಬಿಜು ಜನತಾದಳದ ಮುಖ್ಯಸ್ಥ ನವೀನ್ ಪಟ್ನಾಯಕ್ ಸತತ ಮೂರನೇ ಬಾರಿ ಅಧಿಕಾರ ಸ್ವೀಕರಿಸಿದರು. ಭುವನೇಶ್ವರದ ರಾಜಭವನದಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ರಾಜ್ಯಪಾಲ ಎಂ.ಸಿ.ಭಂಡಾರೆ ಮುಖ್ಯಮುಂತ್ರಿ ಸೇರಿ ಇತರ 21 ನೂತನ ಸಚಿವರಿಗೆ ಪ್ರಮಾಣವಚನ ಬೋಧಿಸಿದರು.

2009: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗಳು ಜಂಟಿಯಾಗಿ ದಿನನಿತ್ಯ ಪ್ರಯಾಣಿಸುವವರಿಗಾಗಿ ಸಂಯುಕ್ತ ದೈನಿಕ ಬಸ್‌ಪಾಸ್ ವ್ಯವಸ್ಥೆಯನ್ನು ಜಾರಿಗೊಳಿಸಿತು. ರಾಷ್ಟ್ರದಲ್ಲಿಯೇ ಪ್ರಥಮವಾದ ಈ ವ್ಯವಸ್ಥೆಯಲ್ಲಿ ವಿಶಿಷ್ಟ ಹಾಗೂ ಬಹುಪಯೋಗಿ ರೀತಿಯಲ್ಲಿ ಗ್ರಾಮಾಂತರ ಮತ್ತು ಬೆಂಗಳೂರು ನಗರ ಸಾರಿಗೆ ಬಸ್ಸುಗಳಲ್ಲಿ ಸಂಚರಿಸಲು ಅನುಕೂಲ ಕಲ್ಪಿಸಲಾಯಿತು. ಬೆಂಗಳೂರು ಮಹಾನಗರದ ಸುತ್ತಲಿನ 11 ಪಟ್ಟಣಗಳಿಂದ ಪ್ರಯಾಣಿಸುವವರಿಗೆ ಈ ಯೋಜನೆ ಲಭ್ಯ. ಗೌರಿಬಿದನೂರು, ಕೋಲಾರ, ತುಮಕೂರು, ಶಿಡ್ಲಘಟ್ಟ, ಚಿಕ್ಕಬಳ್ಳಾಪುರ, ಚನ್ನಪಟ್ಟಣ, ಕನಕಪುರ, ಮಾಲೂರು, ವಿಜಯಪುರ, ರಾಮನಗರ ಮತ್ತು ಹಾರೋಹಳ್ಳಿ ಯೋಜನೆಯ ಪ್ರಯೋಜನ ಪಡೆದವು.

2008: ಕಳ್ಳಬಟ್ಟಿ ದುರಂತದ ಸಾವಿನ ಸಂಖ್ಯೆ ಇನ್ನಷ್ಟು ಏರಿದ್ದು ಈದಿನ ಬೆಂಗಳೂರು, ಕೋಲಾರ, ಕೃಷ್ಣಗಿರಿ, ಆನೇಕಲ್, ಹೊಸಕೋಟೆಯಲ್ಲಿ 35 ಮಂದಿ ಸಾವನ್ನಪ್ಪುವುದರೊಂದಿಗೆ ಪ್ರಾಣ ತೆತ್ತವರ ಸಂಖ್ಯೆ 189 ತಲುಪಿತು.

2008: ಹುಜಿ ಉಗ್ರಗಾಮಿ ಸಂಘಟನೆಗೆ ಸೇರಿದ ಉಗ್ರಗಾಮಿ ಅಬ್ದುಲ್ ರೆಹಮಾನ್ ಎಂಬಾತನನ್ನು ನವದೆಹಲಿಯ ಪೊಲೀಸರು ಕನಾಟ್ ಪ್ರದೇಶದಲ್ಲಿ ಬಂಧಿಸಿದರು. ಆತನಿಂದ ಜನಕ ಪುರಿ ಪ್ರದೇಶದಲ್ಲಿ ದಾಸ್ತಾನು ಮಾಡಿದ್ದ 3.1 ಕಿ.ಲೋ ಆರ್ ಡಿ ಎಕ್ಸ್ ಸ್ಫೋಟಕ, ಮತ್ತು ಸ್ಫೋಟ ಸಂಬಂಧಿ ವಸ್ತುಗಳನ್ನು ವಶಪಡಿಸಿಕೊಳ್ಳಲಾಯಿತು.

2008: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಬಿಐಎಎಲ್) ನಾಡಪ್ರಭು ಕೆಂಪೇಗೌಡರ ಹೆಸರು ಇಡುವುದು ಸೇರಿದಂತೆ ಇತರೆ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಮತ್ತು ವಿವಿಧ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಬೆಂಗಳೂರಿನಲ್ಲಿ ಬೃಹತ್ ರ್ಯಾಲಿ ನಡೆಸಿದರು.

2008: ಹಿಂದಿನ ದಿನ ನಡೆದ ಬೀದಿ ಕಾಳಗದ ಹಿನ್ನೆಲೆಯಲ್ಲಿ ಕರ್ನಾಟಕ ಅಥ್ಲೆಟಿಕ್ ಸಂಸ್ಥೆಯ ಉಪಾಧ್ಯಕ್ಷ ಆರ್. ಕೆ. ಗೋಪಾಲಕೃಷ್ಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ವಿಶ್ವ ಅಥ್ಲೆಟಿಕ್ ದಿನಾಚರಣೆ ಸಂದರ್ಭದಲ್ಲಿ ವೇದಿಕೆಯ ಮೇಲೆ ಉಪಾಧ್ಯಕ್ಷ ಗೋಪಾಲಕೃಷ್ಣ ಹಾಗೂ ಕಾರ್ಯದರ್ಶಿ ಸತ್ಯನಾರಾಯಣ ಕೈಕೈ ಮಿಲಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಕರ್ನಾಟಕ ಅಥ್ಲೆಟಿಕ್ ಸಂಸ್ಥೆ ಕಾರ್ಯಕಾರಿ ಸಮಿತಿಯ ತುರ್ತು ಸಭೆ ನಡೆಸಿ ಗೋಪಾಲಕೃಷ್ಣ ಅವರ ರಾಜೀನಾಮೆಯನ್ನು ಕೋರಿತು.

2008: ಜೈಪುರ ನಗರದಲ್ಲಿ 2008ರ ಮೇ 13ರಂದು ನಡೆದ ಸರಣಿ ಸ್ಫೋಟ ಘಟನೆಯಲ್ಲಿ ಸಂತ್ರಸ್ತರಾದವರಿಗೆ ಸರ್ಕಾರವು ಪರಿಹಾರ ಹಾಗೂ ಪುನರ್ ವಸತಿ ಪ್ಯಾಕೇಜ್ ಪ್ರಕಟಿಸಿತು. ವಿಶೇಷವಾಗಿ ಮಕ್ಕಳ ಶಿಕ್ಷಣ, ಹೆಣ್ಣುಮಕ್ಕಳ ಮದುವೆ ಹಾಗೂ ಘಟನೆಯಲ್ಲಿ ಮೃತರಾದವರ ಮಕ್ಕಳಿಗೆ ನಗದು ಹಣ ನೀಡುವುದು ಈ ಪ್ಯಾಕೇಜಿನಲ್ಲಿ ಒಳಗೊಂಡಿದೆ ಎಂದು ರಾಜ್ಯ ಸಂಸದೀಯ ಸಚಿವ ಆರ್.ಎಸ್. ರಾಠೋಡ್ ತಿಳಿಸಿದರು.

2008: ನೈಋತ್ಯ ಚೀನಾದಲ್ಲಿ ಸಂಭವಿಸಿದ ಭೀಕರ ಭೂಕಂಪಕ್ಕೆ ಸಿಲುಕಿದ್ದ 60 ವರ್ಷದ ವಾಂಗ್ ಯುಕುನ್ ಎಂಬ ಮಹಿಳೆಯೊಬ್ಬರು ಮಳೆ ನೀರನ್ನೇ ಕುಡಿದು 196 (8 ದಿನ 4ಗಂಟೆ) ಗಂಟೆಗಳ ಕಾಲ ತಮ್ಮ ಜೀವವನ್ನು ಉಳಿಸಿಕೊಂಡ ಆಶ್ಚರ್ಯಕರ ಘಟನೆ ಬೆಳಕಿಗೆ ಬಂತು. ರಕ್ಷಣಾ ಕಾರ್ಯಕರ್ತರು ಆಕೆಯನ್ನು ಸುರಕ್ಷಿತವಾಗಿ ಹೊರಗೆ ತೆಗೆದರು. ಚೆಂಗ್ಡುವಿನ ಪರ್ವತ ಪ್ರದೇಶದಲ್ಲಿ ದೇವಸ್ಥಾನ ವೊಂದರಲ್ಲಿ ವಾಂಗ್ ಪ್ರಾರ್ಥನೆ ಸಲ್ಲಿಸುತ್ತಿದ್ದಾಗ ಭೂಕಂಪ ಸಂಭವಿಸಿ ಅವಶೇಷಗಳಡಿ ಸಿಲುಕಿದ್ದರು.
ಇದೇ ರೀತಿ ಯಾನ್ ಜಿ ಯಾಂಗ್ ಎಂಬಾತನೊಬ್ಬ ಭೂಕಂಪ ಅವಶೇಷಗಳಡಿ 179ಗಂಟೆಗಳ ಕಾಲ ಇದ್ದರೂ ಸುರಕ್ಷಿತವಾಗಿ ಹೊರಗೆ ಬಂದ.

2008: ದೆಹಲಿ ವಿಶ್ವವಿದ್ಯಾಲಯವು ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಇತರೆ ಹಿಂದುಳಿದ ವರ್ಗಗಳಿಗೆ (ಒಬಿಸಿ) ಶೇಕಡಾ 18ರ ಮೀಸಲಾತಿ ಸೌಲಭ್ಯ ಕಲ್ಪಿಸಲು ನಿರ್ಧರಿಸಿತು.

2008: ಮುಂಗಾರು ದೆಹಲಿ ತಲುಪಲು ಇನ್ನೂ ಕೆಲದಿನಗಳು ಬಾಕಿಯಿರುವಂತೆಯೇ ಈದಿನ ಸುರಿದ ದಾಖಲೆಯ ಮಳೆ ಪೂರ್ಣ ದೆಹಲಿಯನ್ನು ತೊಯ್ಯಿಸಿ ತಂಪಾಗಿಸಿತು. ಹಿಂದಿನ 5 ವರ್ಷಗಳಲ್ಲಿ ಮೇ ತಿಂಗಳಿನಲ್ಲಿ ಇಷ್ಟೊಂದು ಮಳೆ ಸುರಿದ ದಾಖಲೆಯೇ ಇರಲಿಲ್ಲ.

2008: ಇಂತಿಷ್ಟೇ ಗಂಟೆ ಅಥವಾ ದಿನ ಅಥವಾ ತಿಂಗಳಲ್ಲಿ ಪೂರ್ಣಗೊಳಿಸುವುದಾಗಿ ಪ್ರಕಟಿಸದೇ ಆರಂಭವಾದ ಬಿಡಿಎ ಜಂಕ್ಷನ್ ಬಳಿಯ ಸರ್ಫೇಸ್ ಪಾಸ್ ಕಾಮಗಾರಿ ಕೊನೆಗೂ ಪೂರ್ಣಗೊಂಡು, ಈದಿನ ಸಂಜೆ 5.15ಕ್ಕೆ ಅಧಿಕೃತವಾಗಿ ಈ ರಸ್ತೆಯನ್ನು ಯಾವುದೇ ಉದ್ಘಾಟನಾ ಸಮಾರಂಭವೂ ಇಲ್ಲದೆಯೇ ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಯಿತು.

2008: ಕರ್ನಾಟಕ ರಾಜ್ಯದಲ್ಲಿಯೇ `ಮತದಾರರ ಮಿನಿಯೇಚರ್ ಷೀಟ್' ತಯಾರಿಸಿದ ಮೊದಲ ಜಿಲ್ಲೆ ಎಂಬ ಹೆಗ್ಗಳಿಕೆಗೆ ಬೀದರ್ ಪಾತ್ರವಾಯಿತು. ವಿಧಾನಸಭಾ ಚುನಾವಣೆಯ ಮೂರನೇ ಹಂತದ ಮತದಾನದಲ್ಲಿ ಬರುವ ಬೀದರ್ ಜಿಲ್ಲೆಯ ಮತದಾರರ ಮಿನಿಯೇಚರ್ ಷೀಟ್ ತಯಾರಿಸುವ ಮೂಲಕ ಜಿಲ್ಲಾಡಳಿತವು ವಿನೂತನ ಮಾದರಿ ಅಳವಡಿಸಿತು. ಚುನಾವಣಾ ಆಯೋಗವು ವಿತರಿಸುವ ಮತದಾರರ ಗುರುತಿನ ಚೀಟಿಯಲ್ಲಿನ ವಿವರಗಳನ್ನೇ ಚಿಕ್ಕಗಾತ್ರದಲ್ಲಿ ಅಡಕಗೊಳಿಸಿ ಅಳವಡಿಸುವ ಮೂಲಕ ಈ ಮಿನಿಯೇಚರ್ ಷೀಟ್ ತಯಾರಿಸಲಾಗಿತ್ತು. ಒಂದು ಷೀಟಿನಲ್ಲಿ ಭಾವಚಿತ್ರ ಸಮೇತ 50 ಮತದಾರರ ವಿವರಗಳು ಇರುತ್ತವೆ. ಹೆಸರು, ವಯಸ್ಸು, ಲಿಂಗ, ವಿಳಾಸ ಸೇರಿದಂತೆ ಎಂಟು ಮಾಹಿತಿಗಳು ಷೀಟಿನಲ್ಲಿ ಲಭ್ಯವಿರುತ್ತವೆ. ನಕಲಿ ಮತದಾನ ತಡೆಯುವ ನಿಟ್ಟಿನಲ್ಲಿ `ಮಿನಿಯೇಚರ್ ಷೀಟ್'ಗಳ ಮೂಲಕ ಒಂದು ಪ್ರಮುಖ ಹೆಜ್ಜೆ ಇರಿಸಿದಂತಾಯಿತು.

2008: ಉತ್ತರಖಂಡದ ಪಿಥೋರಗಢ ಜಿಲ್ಲೆಯಲ್ಲಿ ಬಸ್ಸೊಂದು ಕಂದಕಕ್ಕೆ ಉರುಳಿದ ಪರಿಣಾಮವಾಗಿ ಅದರಲ್ಲಿ ಪ್ರಯಾಣ ಮಾಡುತ್ತಿದ್ದ 18 ಮಂದಿ ಮೃತರಾಗಿ ಇತರ 12 ಮಂದಿ ಗಾಯಗೊಂಡರು. ಬಸ್ಸು ಪಿಥೋರಗಢದಿಂದ ಬಾಗೇಶ್ವರಕ್ಕೆ ಹೋಗುತ್ತಿದ್ದಾಗ ಈ ದುರಂತ ಸಂಭವಿಸಿತು.

2007: ಕಲಾನಿಧಿ ಮಾರನ್ ಮಾಲೀಕತ್ವದ `ಸನ್ ಟಿವಿ ನೆಟ್ ವರ್ಕ್' ಪ್ರತಿಸ್ಪರ್ಧಿ `ರಾಜ್ ಟಿವಿ'ಯು `ಕಳೈಗನಾರ್ ಟಿವಿ' ಎಂಬ ಹೊಸ ಚಾನೆಲನ್ನು ಶೀಘ್ರವೇ ಆರಂಭಿಸುವುದಾಗಿ ಪ್ರಕಟಿಸಿತು.

2007: ಕಾರ್ಯನಿರತ ಪತ್ರಕರ್ತರು ಮತ್ತು ಸುದ್ದಿ ಸಂಸ್ಥೆಗಳ ನೌಕರರ ವೇತನ ಪರಿಷ್ಕರಣೆಗೆ ಕೇಂದ್ರ ಸರ್ಕಾರವು ಎರಡು ಪ್ರತ್ಯೇಕ ಹೊಸ ವೇತನ ಮಂಡಳಿಗಳನ್ನು ನ್ಯಾಯಮೂರ್ತಿ ಕೆ. ನಾರಾಯಣ ಕುರುಪ್ ಅಧ್ಯಕ್ಷತೆಯಲ್ಲಿ ರಚಿಸಿತು.

2007: ನಟ ಸಂಜಯದತ್ ನಿವಾಸದಿಂದ ಎಕೆ 47 ಬಂದೂಕು ಹಾಗೂ ಮದ್ದು ಗುಂಡುಗಳನ್ನು ಹೊರಗೆ ಸಾಗಿಸಿದ್ದ ಆರೋಪಿ ಮನ್ಸೂರ್ ಅಹಮದ್ ಎಂಬಾತನಿಗೆ ವಿಶೇಷ ಟಾಡಾ ನ್ಯಾಯಾಲಯವು 10 ವರ್ಷಗಳ ಕಠಿಣ ಶಿಕ್ಷೆ ಮತ್ತು 50,000 ರೂಪಾಯಿಗಳ ದಂಡ ವಿಧಿಸಿತು.

2007: ವಿದೇಶಕ್ಕೆ ಅಕ್ರಮವಾಗಿ ಭಾರಿ ಮೊತ್ತದ ಹಣವನ್ನು ಸಾಗಿಸುತ್ತಿದ್ದ ಆರೋಪದ ಮೇಲೆ ನೈಜೀರಿಯಾದ ರಾಜತಾಂತ್ರಿಕನೊಬ್ಬನನ್ನು ಆದಾಯ ತೆರಿಗೆ ಅಧಿಕಾರಿಗಳು ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿ ಆತನಿಂದ 2.27 ದಶಲಕ್ಷ (22.7 ಕೋಟಿ) ಅಮೆರಿಕನ್ ಡಾಲರುಗಳನ್ನು (ಅಂದಾಜು 10 ಕೋಟಿ ರೂಪಾಯಿ) ವಶ ಪಡಿಸಿಕೊಂಡರು.

2006: ಯುರೋಪಿನಲ್ಲಿ ತನ್ನ ಪ್ರತಿಸ್ಪರ್ಧಿಯಾಗಿರುವ ಆರ್ಸೆಲರ್ ಸಂಸ್ಥೆಯನ್ನು ಸ್ವಾಧೀನಕ್ಕೆ ತೆಗೆದುಕೊಂಡು ವಿಶ್ವದಲ್ಲಿಯೇ ಅತಿ ದೊಡ್ಡದಾದ ಉಕ್ಕು ತಯಾರಿಕೆಯ ಪ್ರಶ್ನಾತೀತ ಸಂಸ್ಥೆಯಾಗುವ ನಿರ್ಧಾರವನ್ನು ಮಿತ್ತಲ್ ಸ್ಟೀಲ್ ಸಂಸ್ಥೆ ಪ್ರಕಟಿಸಿತು.

2006: ಭಾರತದ ತಾರಾಪುರ ಪರಮಾಣು ವಿದ್ಯುತ್ ಯೋಜನೆಯ ಎರಡನೆಯ ಅತಿದೊಡ್ಡ ರಿಯಾಕ್ಟರ್ ಘಟಕವು ಮಹಾರಾಷ್ಟ್ರದ ತಾರಾಪುರದಲ್ಲಿ ಈದಿನ ಬೆಳಗ್ಗೆ 10.44 ಗಂಟೆಗೆ ಕಾರ್ಯಾರಂಭ ಮಾಡಿತು. ತಾರಾಪುರ ಪರಮಾಣು ವಿದ್ಯುತ್ ಯೋಜನೆಯ ಆವರಣವು ಒಟ್ಟು 4 ಪರಮಾಣು ರಿಯಾಕ್ಟರ್ ಘಟಕಗಳನ್ನು ಹೊಂದಿದೆ.

1994: ಮನಿಲಾದಲ್ಲಿ `ಮಿಸ್ ಯುನಿವರ್ಸ್' (ಭುವನ ಸುಂದರಿ) ಕಿರೀಟ ಧರಿಸಿದ ಸುಶ್ಮಿತಾ ಸೇನ್ ಈ ಸಾಧನೆ ಮಾಡಿದ ಪ್ರಥಮ ಭಾರತೀಯರೆಂಬ ಹೆಗ್ಗಳಿಕೆಗೆ ಪಾತ್ರರಾದರು.

1991: ಭಾರತದ ಮಾಜಿ ಪ್ರಧಾನಿ ರಾಜೀವ ಗಾಂಧಿ ಅವರನ್ನು ಎಲ್ ಟಿ ಟಿ ಇ ಆತ್ಮಾಹುತಿ ದಳದ ಸದಸ್ಯೆಯೊಬ್ಬಳು ಚೆನ್ನೈ ಸಮೀಪದ ಶ್ರೀಪೆರಂಬದೂರಿನಲ್ಲಿ ಬಾಂಬ್ ಸ್ಫೋಟಿಸಿ ಹತ್ಯೆಗೈದಳು. ಲೋಕಸಭಾ ಚುನಾವಣಾ ಪ್ರಚಾರ ಕಾಲದಲ್ಲಿ ಈ ಘಟನೆ ನಡೆಯಿತು.

1964: ಅತಿ ಕಿರಿಯ ವಯಸಿನಲ್ಲೇ ಸುಗಮ ಸಂಗೀತ ಕ್ಷೇತ್ರವನ್ನು ಶ್ರೀಮಂತಗೊಳಿಸಲು ಶ್ರಮಿಸಿದ ವಿಜಯ ಕುಮಾರ ಅತ್ರಿ (21-5-1964ರಿಂದ 30-5-2000) ಅವರು ಎನ್. ಗಣೇಶ್- ಬಿ.ಎನ್. ನಾಗರತ್ನಮ್ಮ ದಂಪತಿಯ ಮಗನಾಗಿ ಕನಕಪುರದಲ್ಲಿ ಜನಿಸಿದರು. ರಾಮಕೃಷ್ಣಾಶ್ರಮದ ಕಾರ್ಯಕ್ರಮಗಳಿಂದ ಹಾಡುಗಾರಿಕೆ ಆರಂಭಿಸಿದ ಅವರು 300ಕ್ಕೂ ಹೆಚ್ಚು ಕ್ಯಾಸೆಟ್ಟುಗಳಲ್ಲಿ ಹಾಡಿದ್ದಾರೆ. ಹಲವಾರು ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ. ಹೆಂಡತಿಯ ಊರಾದ ಶೃಂಗೇರಿಯ ಬಳಿ `ಉಳುಮೆ ಬೈಲು' ಜೈ ಶಂಕರ್ ಯುವಕ ಸಂಘದ ಕಾರ್ಯಕ್ರಮದಲ್ಲಿ ಹಾಡಿದ ಮರುದಿನ ತುಂಗಾನದಿಯಲ್ಲಿ ಆಕಸ್ಮಿಕಕ್ಕೆ ಒಳಗಾಗಿ ಕುಟುಂಬದ ಐವರು ಸದಸ್ಯರೊಂದಿಗೆ ಅಸು ನೀಗಿದ್ದು ಒಂದು ದೊಡ್ಡ ದುರಂತ.

1963: ಕಲಾವಿದ ಶೇಖನ ಗೌಡ ಕೆ.ಪಿ. ಜನನ.

1954: ಕಲಾವಿದ ಚಂದ್ರಕಾಂತ್ ಎಂ. ಜನನ.

1943: ಕಲಾವಿದ ವಿ.ಎಂ. ನಾಗರಾಜ್ ಜನನ.

1932: ಕಾದಂಬರಿಗಾರ್ತಿ ಸುನೀತಾ ಕೃಷ್ಣಸ್ವಾಮಿ (21-5-1932ರಿಂದ 14-8-2000) ಅವರು ಮೈಸೂರಿನಲ್ಲಿ ಸುಬ್ಬರಾವ್- ಪಾರ್ವತಮ್ಮ ದಂಪತಿಯ ಮಗಳಾಗಿ ಈದಿನ ಜನಿಸಿದರು.

1928: ಕಲಾವಿದ ಶ್ರೀನಿವಾಸಯ್ಯ ಕೆ.ಟಿ. ಜನನ.

1927: ಅಟ್ಲಾಂಟಿಕ್ ಸಾಗರದ ಮೇಲಿನಿಂದ ಮೂವತ್ತಮೂರುವರೆ ತಾಸುಗಳಲ್ಲಿ ಏಕವ್ಯಕ್ತಿ ವಿಮಾನ ಹಾರಾಟವನ್ನು ಪೂರ್ಣಗೊಳಿಸಿದ ಚಾರ್ಲ್ಸ್ ಎ ಲಿಂಡ್ ಬರ್ಗ್ ತಮ್ಮ `ಸ್ಪಿರಿಟ್ ಆಫ್ ಸೇಂಟ್ ಲೂಯಿ' ವಿಮಾನವನ್ನು ಲೆ ಬರ್ಗರ್ ವಿಮಾನ ನಿಲ್ದಾಣದಲ್ಲಿ ಇಳಿಸಿದರು.

1921: ಸೋವಿಯತ್ ಒಕ್ಕೂಟದ ವಿಜ್ಞಾನಿ ನೊಬೆಲ್ ಪ್ರಶಸ್ತಿ ಪುರಸ್ಕೃತ ಆಂದ್ರೇಯಿ ಸಖರೋವ್ (1921-89) ಜನ್ಮದಿನ. ಇವರು ಸೋವಿಯತ್ ಒಕ್ಕೂಟದ ಕಮ್ಯೂನಿಸ್ಟ್ ಸರ್ಕಾರದ ಜೊತೆಗಿನ ತಮ್ಮ ಭಿನ್ನಮತದಿಂದಾಗಿ ಜಾಗತಿಕ ಖ್ಯಾತಿ ಗಳಿಸಿದ್ದರು.

1960: ರಷ್ಯದ ಈಜುಗಾರ್ತಿ ವ್ಲಾಡಿಮೀರ್ ಸಾಲ್ನಿಕೋವ್ ಜನ್ಮದಿನ. ನಾಲ್ಕು ಒಲಿಂಪಿಕ್ಸ್ ಚಿನ್ನದ ಪದಕಗಳನ್ನು ಗೆದ್ದ ಈಕೆ 1500 ಮೀಟರ್ ಫ್ರೀಸ್ಟೈಲ್ ಈಜು ಸ್ಪರ್ಧೆಯಲ್ಲಿ 15 ನಿಮಿಷಗಳ ಒಳಗೆ ಕ್ರಮಿಸಿದ ಮೊದಲಿಗರೆನಿಸಿದರು.

1787: ಲಾರ್ಡ್ಸ್ಸ್ ಕ್ರಿಕೆಟ್ ಮೈದಾನದಲ್ಲಿ ಮೊತ್ತ ಮೊದಲ ಕ್ರಿಕೆಟ್ ಪಂದ್ಯ ನಡೆಯಿತು. ಈ ಪಂದ್ಯ ವೈಟ್ ಕಂಡ್ಯೂಟ್ ಕ್ಲಬ್ ಹಾಗೂ ಮಿಡ್ಲ್ ಸೆಕ್ಸ್ ಮಧ್ಯೆ ನಡೆಯಿತು.

No comments:

Advertisement