My Blog List

Sunday, May 23, 2010

ಇಂದಿನ ಇತಿಹಾಸ History Today ಮೇ 23

ಇಂದಿನ ಇತಿಹಾಸ

ಮೇ 23

ನೇಪಾಳದ ನೂತನ ಪ್ರಧಾನಿಯಾಗಿ ಕಮ್ಯುನಿಸ್ಟ್ ನಾಯಕ ಮಾಧವ ಕುಮಾರ್ ನೇಪಾಳ್ (56) ಅವಿರೋಧವಾಗಿ ಆಯ್ಕೆಯಾದರು. ಈ ಮೂಲಕ ದೇಶದ ಮೂರು ವಾರಗಳ ರಾಜಕೀಯ ಅನಿಶ್ಚಿತತೆ ಕೊನೆಗೊಂಡಿತು. ಮಾವೋವಾದಿ ಪಕ್ಷದ ನಾಯಕ ಪುಷ್ಪ ಕಮಲ್ ದಹಾಲ್ ಪ್ರಚಂಡ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ, 22 ಪಕ್ಷಗಳ ಬೆಂಬಲ ಹೊಂದಿರುವ ಸಿಪಿಎನ್- ಯುಎಂಎಲ್ ಮುಖಂಡ ನೇಪಾಳ್ ಅವರು ಬೆಳಿಗ್ಗೆ ನಾಮಪತ್ರ ಸಲ್ಲಿಸಿದ್ದರು.

2009: ಸಚಿವ ಸ್ಥಾನ ಮತ್ತು ಖಾತೆಗಳ ವಿಚಾರದಲ್ಲಿ ಮಿತ್ರ ಪಕ್ಷ ಡಿಎಂಕೆಯೊಂದಿಗಿನ ಬಿಕ್ಕಟ್ಟು ಮುಂದುವರಿದ ಕಾರಣ ಪ್ರಮಾಣ ವಚನ ಸ್ವೀಕರಿಸಿದ ಎಲ್ಲ ಸಚಿವರಿಗೂ ಖಾತೆಗಳ ಹಂಚಿಕೆಯಾಗಲಿಲ್ಲ. ಆರು ಮಂದಿ ಪ್ರಮುಖರಿಗೆ ಮಾತ್ರ ಪ್ರಧಾನಿ ಮನಮೋಹನ್ ಸಿಂಗ್ ಅವರು ಖಾತೆಗಳನ್ನು ಹಂಚಿದರು. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ರಾಜ್ಯಸಭಾ ಸದಸ್ಯ ಎಸ್.ಎಂ.ಕೃಷ್ಣ ಅವರಿಗೆ ಮಹತ್ವದ ವಿದೇಶಾಂಗ ಖಾತೆಯ ಜವಾಬ್ದಾರಿ ನೀಡಲಾಯಿತು. ಹಣಕಾಸು ಸಚಿವರಾಗಿ ಪ್ರಣವ್ ಮುಖರ್ಜಿ ಹಾಗೂ ಚಿದಂಬರಂ ಗೃಹ ಇಲಾಖೆ ಹೊಣೆಯನ್ನು ಮತ್ತೆ ಹೊತ್ತುಕೊಂಡರು. ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಅವರು ರೈಲ್ವೆ ಖಾತೆಯನ್ನು, ಶರದ್ ಪವಾರ್ ಕೃಷಿ, ಆಹಾರ, ನಾಗರಿಕ ಸರಬರಾಜು, ಗ್ರಾಹಕ ವ್ಯವಹಾರಗಳ ಖಾತೆ ಮತ್ತು ಎ.ಕೆ.ಆಂಟನಿ ಅವರು ರಕ್ಷಣಾ ಖಾತೆ ಪಡೆದರು.

2009: ಮಳೆಯಾಶ್ರಿತ ಜಮೀನಿನ ಫಲವತ್ತತೆ ಅರಿಯದೆ ರೈತರು ನಿರೀಕ್ಷಿತ ಉತ್ಪಾದನೆ ಪಡೆಯಲು ಸಾಧ್ಯವಾಗುತ್ತಿಲ್ಲ. ರಾಜ್ಯ ಸರ್ಕಾರವು ಈ ಸಮಸ್ಯೆಗೆ ಪರಿಹಾರವಾಗಿ ದೇಶಕ್ಕೆ ಮಾದರಿಯಾಗಬಲ್ಲ 'ಭೂ-ಚೇತನ' ಯೋಜನೆಯನ್ನು ಜಾರಿಗೆ ತಂದಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾವೇರಿಯಲ್ಲಿ ಹೇಳಿದರು. ಒಣ ಬೇಸಾಯದಲ್ಲಿ ತಾಂತ್ರಿಕತೆ ಅಳವಡಿಕೆ ಹಾಗೂ ಉತ್ಪಾದನೆ ಹೆಚ್ಚಿಸುವ 'ಭೂ-ಚೇತನ' ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.

2009: ನೇಪಾಳದ ನೂತನ ಪ್ರಧಾನಿಯಾಗಿ ಕಮ್ಯುನಿಸ್ಟ್ ನಾಯಕ ಮಾಧವ ಕುಮಾರ್ ನೇಪಾಳ್ (56) ಅವಿರೋಧವಾಗಿ ಆಯ್ಕೆಯಾದರು. ಈ ಮೂಲಕ ದೇಶದ ಮೂರು ವಾರಗಳ ರಾಜಕೀಯ ಅನಿಶ್ಚಿತತೆ ಕೊನೆಗೊಂಡಿತು. ಮಾವೋವಾದಿ ಪಕ್ಷದ ನಾಯಕ ಪುಷ್ಪ ಕಮಲ್ ದಹಾಲ್ ಪ್ರಚಂಡ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ, 22 ಪಕ್ಷಗಳ ಬೆಂಬಲ ಹೊಂದಿರುವ ಸಿಪಿಎನ್- ಯುಎಂಎಲ್ ಮುಖಂಡ ನೇಪಾಳ್ ಅವರು ಬೆಳಿಗ್ಗೆ ನಾಮಪತ್ರ ಸಲ್ಲಿಸಿದ್ದರು. ಪ್ರತಿಯಾಗಿ ಯಾರೊಬ್ಬರೂ ನಾಮಪತ್ರ ಸಲ್ಲಿಸದೇ ಇದ್ದುದು ಅವರ ಅವಿರೋಧ ಆಯ್ಕೆಗೆ ಕಾರಣವಾಯಿತು. ಸದನದಲ್ಲಿ ಅತಿ ಹೆಚ್ಚು ಸದಸ್ಯರನ್ನು ಹೊಂದಿರುವ ಮಾವೋವಾದಿಗಳು ಸಭೆಯನ್ನು ಬಹಿಷ್ಕರಿಸಿ, ಸರ್ಕಾರದಲ್ಲಿ ಪಾಲ್ಗೊಳ್ಳದೆ ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತುಕೊಳ್ಳುವುದಾಗಿ ಸ್ಪಷ್ಟಪಡಿಸಿದರು.

2009: ಬಹು ದೊಡ್ಡ ಲಂಚ ಹಗರಣದ ಸುಳಿಯಲ್ಲಿ ಸಿಲುಕಿದ್ದ ದಕ್ಷಿಣ ಕೊರಿಯಾದ ಮಾಜಿ ಅಧ್ಯಕ್ಷ ರೋಹ್ ಮೂ ಹ್ಯೂನ್ (62) ಅವರು ಸೋಲ್‌ನಲ್ಲಿ ತಮ್ಮ ಮನೆಯ ಸಮೀಪದ ಬೆಟ್ಟದ ಮೇಲಿನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡರು. ಇದಕ್ಕೆ ಮುನ್ನ ತಮ್ಮ ಕುಟುಂಬದವರಿಗಾಗಿ ಪತ್ರ ಬರೆದಿಟ್ಟ ಅವರು ಅದರಲ್ಲಿ, 'ಬದುಕು ತುಂಬಾ ಕಷ್ಟ ಎನಿಸುತ್ತಿದೆ. ಹಾಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಈ ಕೆಲಸದಿಂದ ಬಹಳ ಮಂದಿಗೆ ತೊಂದರೆಯಾಗುತ್ತಿದೆ. ದಯವಿಟ್ಟು ಕ್ಷಮಿಸಿ' ಎಂದು ತಿಳಿಸಿದರು. ರೋಹ್ ಮತ್ತು ಅವರ ಕುಟುಂಬ ಲಂಚ ಪಡೆದಿದ್ದುದು ಕೆಲ ದಿನಗಳ ಹಿಂದೆ ಬೆಳಕಿಗೆ ಬಂದಿತ್ತು. 13 ಗಂಟೆಗಳ ಸುದೀರ್ಘ ವಿಚಾರಣೆಯ ಸಂದರ್ಭದಲ್ಲಿ, ದಕ್ಷಿಣ ಕೊರಿಯಾದ ಬಂಧಿತ ವ್ಯಾಪಾರಿಯೊಬ್ಬನಿಂದ 6 ದಶಲಕ್ಷ ಡಾಲರ್ ಹಣವನ್ನು ಲಂಚದ ರೂಪದಲ್ಲಿ ಪಡೆದಿರುವುದಾಗಿ ರೋಹ್ ಒಪ್ಪಿಕೊಂಡಿದ್ದರು..

2009: ವಿವಿಧ ಸ್ವಾದಗಳಲ್ಲಿ ಎಳನೀರನ್ನು ಪರಿಚಯಿಸುವ ಉದ್ದೇಶದಿಂದ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಹಮ್ಮಿಕೊಂಡ ಎರಡು ದಿನಗಳ 'ಎಳನೀರು ಜಾತ್ರೆ'ಯು ತುಮಕೂರು ಜಿಲ್ಲೆ ತಿಪಟೂರು ತಾಲ್ಲೂಕಿನ ಬಿಳಿಗೆರೆ ಗ್ರಾಮದ ಹೊನ್ನಮ್ಮನ ತೋಪಿನಲ್ಲಿ ಆರಂಭವಾಯಿತು. ರಾಜ್ಯ ರೈತ ಸಂಘ, ಕಾಮಧೇನು ಯುವಕ ರೈತ ಸಂಘ ಸೇರಿದಂತೆ 20ಕ್ಕೂ ಹೆಚ್ಚು ಸಂಘಟನೆಗಳು ಒಟ್ಟಾಗಿ ಹಮ್ಮಿಕೊಂಡ ಈ ಜಾತ್ರೆಯಲ್ಲಿ ಮೊದಲ ದಿನವೇ ಎಂಟು ಸಾವಿರಕ್ಕೂ ಹೆಚ್ಚು ಎಳನೀರು ಮಾರಾಟವಾಯಿತು. ಮೇಳದಲ್ಲಿ ಕಲ್ಲುಸಕ್ಕರೆ, ನಿಂಬೆ ಮತ್ತು ಒಂದು ಚಿಟಿಕೆ ಉಪ್ಪು ಬೆರೆಸಿದ ಎಳನೀರು, ಜೇನುತುಪ್ಪ ಬೆರೆಸಿದ ಎಳನೀರು, ಪೆಪ್ಪರ್ ಬೆರೆಸಿದ ಎಳನೀರು. ಎಳನೀರು ಲಸ್ಸಿ ಲಭ್ಯವಿದ್ದವು. ಶಾಸಕರು, ರೈತಸಂಘದ ಮುಖಂಡರು, ಪ್ರಗತಿಪರ ರೈತ ಪ್ರಮುಖರು ಎಳನೀರು ಕುಡಿಯುವ ಮೂಲಕ ಪರಿಷೆಗೆ ಚಾಲನೆ ನೀಡಿದರು.

2009: ಪ್ರಕೃತಿ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂಬ ಆತಂಕದಿಂದ ಗುಂಡ್ಯ ಜಲ ವಿದ್ಯುತ್ ಯೋಜನೆಗೆ ಪರಿಸರವಾದಿಗಳು, ಸಾರ್ವಜನಿಕರು ಮತ್ತು ಸ್ಥಳೀಯ ರೈತರ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದರೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಈ ಯೋಜನೆಗೆ ಅಡಿಗಲ್ಲನ್ನಿಟ್ಟರು. ಹಾಸನದ ಎತ್ತಿನಹಳ್ಳದಲ್ಲಿ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಹಾಸನದಿಂದ 78 ಕಿಮೀ ದೂರದ ಪಶ್ಚಿಮ ಘಟ್ಟದ ದಟ್ಟ ಅರಣ್ಯದ ನಡುವೆ ಯೋಜನೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಘಟ್ಟದ ಪ್ರಕೃತಿಯ ಮಡಿಲಿನ ನಡುವೆ ನಾಲ್ಕು ಘಟಕಗಳಿಂದ ಎರಡು ಹಂತದಲ್ಲಿ 400 ಮೆಗಾವಾಟ್ ವಿದ್ಯುತ್ ಉತ್ಪಾದಿಸಲಾಗುತ್ತದೆ, ವಾರ್ಷಿಕ 1002 ದಶಲಕ್ಷ ಯೂನಿಟ್ ವಿದ್ಯುತ್ತನ್ನು ನಾಡಿಗೆ ಸರಬರಾಜು ಮಾಡುವ ಉದ್ದೇಶವಿದೆ. ಪ್ರಸ್ತುತ ಯೋಜನೆಗೆ ಒಟ್ಟು 1119.56 ಕೋಟಿ ರೂಪಾಯಿ ವೆಚ್ಚವಾಗುವ ನಿರೀಕ್ಷೆ ಇದೆ ಎಂದು ಹೇಳಿದರು.

2009: ಅಮೆರಿಕದ ಅತ್ಯಂತ ದೊಡ್ಡ ವಿಫಲ ಬ್ಯಾಂಕುಗಳಲ್ಲಿ ಒಂದಾದ ಫ್ಲೋರಿಡಾ ಮೂಲದ ಬ್ಯಾಂಕ್ ಯುನೈಟೆಡ್ ಕೂಡ ಅಂಗಾತ ಮಲಗಿತು. ಇದರೊಂದಿಗೆ 2009ರಲ್ಲಿ ಇಲ್ಲಿಯವರೆಗೆ ಮುಚ್ಚಿದ ಅಮೆರಿಕದ ಬ್ಯಾಂಕುಗಳ ಸಂಖ್ಯೆ 34ಕ್ಕೆ ಏರಿತು. ಬ್ಯಾಂಕನ್ನು ಫೆಡರಲ್ ಡಿಪಾಸಿಟ್ ಇನ್ಶುರೆನ್ಸ್ ಕಾರ್ಪೊರೇಷನ್ (ಎಫ್‌ಡಿಐಸಿ) ಮುಟ್ಟುಗೋಲು ಹಾಕಿಕೊಂಡಿತು. ಬ್ಯಾಂಕಿನ ಆಸ್ತಿ ಮೌಲ್ಯ 12.80 ದಶಲಕ್ಷ ಅಮೆರಿಕ ಡಾಲರ್ ಇದ್ದು ಠೇವಣಿ ಮೊತ್ತ 8.6ದಶಲಕ್ಷ ಅಮೆರಿಕ ಡಾಲರ್. ಆರ್ಥಿಕ ಕುಸಿತದ ಹೊಡೆತಕ್ಕೆ ಸಿಲುಕಿದ ಅಮೆರಿಕದ ಸುಮಾರು 48 ಬ್ಯಾಂಕುಗಳ ವಹಿವಾಟಿನಲ್ಲಿ ತೀವ್ರ ಕುಸಿತ ಕಂಡುಬಂದು, ಇವುಗಳ ಭವಿಷ್ಯವೂ ಅತಂತ್ರವಾಗಿದೆ ಎಂದು ಶಂಕಿಸಲಾಯಿತು.

2008: ಸರಿಯಾಗಿ ಮಧ್ಯರಾತ್ರಿ 12.05ಕ್ಕೆ ಏರ್ ಇಂಡಿಯಾ ವಿಮಾನವು ಬೆಂಗಳೂರಿನಿಂದ ಸಿಂಗಾಪುರಕ್ಕೆ ಪ್ರಯಾಣ ಬೆಳೆಸುವುದರೊಂದಿಗೆ ದೇವನಹಳ್ಳಿ ಸಮೀಪ ನಿರ್ಮಿಸಿದ ನೂತನ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಅಧಿಕೃತವಾಗಿ ಕಾರ್ಯಾರಂಭ ಮಾಡಿತು. ಮುಂಬೈಯಿಂದ ಏರ್ ಇಂಡಿಯಾದ (ಐಸಿ 609) ಮೊದಲ ವಿಮಾನವು ಇದಕ್ಕೆ ಮುನ್ನ ರಾತ್ರಿ 10ಕ್ಕೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದು ಇಳಿಯುತ್ತಿದ್ದಂತೆಯೇ ಪ್ರಯಾಣಿಕರನ್ನು ಸಂಭ್ರಮದಿಂದ ಸ್ವಾಗತಿಸಲಾಯಿತು. ನೂತನ ವಿಮಾನ ನಿಲ್ದಾಣದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಪ್ರಯಾಣಿಕರು ಎಚ್ ಎ ಎಲ್ ವಿಮಾನ ನಿಲ್ದಾಣಕ್ಕಿಂತ ಇದು ತುಂಬಾ ಚೆನ್ನಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ವಿಮಾನ ನಿಲ್ದಾಣ ಕಾರ್ಯಾರಂಭದ ಕ್ಷಣಗಳು: ರಾತ್ರಿ 10ಕ್ಕೆ ಮುಂಬೈನಿಂದ ಏರ್ ಇಂಡಿಯಾದ ಮೊದಲ ವಿಮಾನ ಆಗಮನ. 12.05ಕ್ಕೆ ಏರ್ ಇಂಡಿಯಾ ವಿಮಾನ ಸಿಂಗಪುರಕ್ಕೆ ನಿರ್ಗಮನ. ರಾತ್ರಿ 11.30ಕ್ಕೆ ಎಚ್ಎಎಲ್ ವಿಮಾನನಿಲ್ದಾಣದಿಂದ ಸಿಂಗಪುರ ಏರ್ಲೈನ್ಸ್ ವಿಮಾನದ ಕೊನೆಯ ಪ್ರಯಾಣ. ಇದರೊಂದಿಗೆ ಎಚ್ಎ ಎಲ್ ವಿಮಾನ ನಿಲ್ದಾಣ ಸ್ಥಗಿತಗೊಂಡಿತು. ದೇವನಹಳ್ಳಿ ನಿಲ್ದಾಣದ ಕಾರ್ಯಾರಂಭ ಸಮಾರಂಭಕ್ಕಾಗಿ ವಿಮಾನ ನಿಲ್ದಾಣವನ್ನು ನವ ವಧುವಿನಂತೆ ಸಿಂಗರಿಸಲಾಗಿತ್ತು. ಇದಕ್ಕೆ ಮೊದಲು ಈ ಸಮಾರಂಭ ಮೂರು ಬಾರಿ ಮುಂದೂಡಿಕೆಯಾಗಿತ್ತು.

2008: ಸ್ಥಗಿತಗೊಂಡ ವಿವಾದಿತ ಹೊಗೇನಕಲ್ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ಆರಂಭದ ಇಂಗಿತವನ್ನು ನೀಡಿದ ತಮಿಳನಾಡು ಮುಖ್ಯಮಂತ್ರಿ ಎಂ.ಕರುಣಾನಿಧಿ ಅವರು, ಕಾಮಗಾರಿಯನ್ನು ನಿಗದಿತ ಸಮುಯ 2011ರ ಹೊತ್ತಿಗೆ ಮುಗಿಸಬೇಕೆಂದು ಈದಿನ ಅಧಿಕಾರಿಗಳಿಗೆ ಸೂಚನೆ ನೀಡಿದರು. ತಮಿಳುನಾಡು ವ್ಯಾಪ್ತಿಯಲ್ಲಿ ಹರಿಯುವ ಕಾವೇರಿನದಿಗೆ ಕಟ್ಟೆ ಕಟ್ಟಿ ಧರ್ಮಪುರಿ ಮತ್ತು ಕೃಷ್ಣಗಿರಿ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ 1,334 ಕೋಟಿ ರೂಪಾಯಿಯ ಯೋಜನೆಯನ್ನು ಕರ್ನಾಟಕದಲ್ಲಿ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾಗಿತ್ತು.
ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳ ಗಡಿಯಲ್ಲಿ ಕೈಗೆತ್ತಿಕೊಂಡ ಈ ಯೋಜನೆ, ಕರುಣಾನಿಧಿ ಮತ್ತು ಯೋಜನೆ ವಿರೋಧಿಸುವ ಕರ್ನಾಟಕದ ರಾಜಕಾರಣಿಗಳ ನಡುವೆ ಮಾತಿನ ಸಮರಕ್ಕೆ ಕಾರಣವಾಗಿತ್ತು. ಕನ್ನಡಪರ ಸಂಘಟನೆಗಳೂ ಈ ಯೋಜನೆ ಜಾರಿಗೆ ಆಕ್ಷೇಪ ವ್ಯಕ್ತಪಡಿಸಿದ್ದವು.

2008: ರಾಷ್ಟ್ರದ ರಾಜಧಾನಿ ದೆಹಲಿ ಸುತ್ತಮುತ್ತ ತಲ್ಲಣ ಎಬ್ಬಿಸಿದ್ದ ಬಾಲಕಿ ಮತ್ತು ಮನೆ ಕೆಲಸಗಾರನ ಕೊಲೆ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಬಾಲಕಿಯ ತಂದೆ, ಹೆಸರಾಂತ ದಂತವೈದ್ಯ ರಾಜೇಶ್ ತಲ್ವಾರ್ ಅವರನ್ನು ಬಂಧಿಸಿದರು. ಘಟನೆ ಬಗ್ಗೆ ಪ್ರಾಥಮಿಕ ತನಿಖೆ ನಡೆಸಿ ತಲ್ವಾರ್ ಅವರನ್ನು ಬಂಧಿಸಲಾಗಿದೆ ಎಂದು ಮೀರತ್ ವಲಯದ ಐಜಿಪಿ ಗುರುದರ್ಶನ್ ಸಿಂಗ್ ತಿಳಿಸಿದರು. 2008ರ ಮೇ 15-16ರ ನಡುವಿನ ರಾತ್ರಿ ನೋಯ್ಡಾದಲ್ಲಿ ನಡೆದ ಘಟನೆಯಲ್ಲಿ ದೆಹಲಿ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿ ಆಋಷಿಯನ್ನು (14) ಮಲಗುವ ಕೊಠಡಿಯಲ್ಲಿ ಗಂಟಲು ಸೀಳಿ ಕೊಲೆ ಮಾಡಲಾಗಿತ್ತು. ಆರಂಭದಲ್ಲಿ ಈ ದುಷ್ಕೃತ್ಯವನ್ನು ನಾಪತ್ತೆಯಾಗಿದ್ದ ಮನೆ ಕೆಲಸಗಾರ ಹೇಮರಾಜ್ (45) ಎಸಗಿರಬೇಕೆಂದು ಶಂಕಿಸಲಾಗಿತ್ತು. ಆದರೆ ಮರುದಿನವೇ ಹೇಮರಾಜನ ಶವ ಅದೇ ಮನೆಯ ಛಾವಣಿ ಮೇಲೆ ಪತ್ತೆಯಾದ ನಂತರ ಪ್ರಕರಣ ತಿರುವು ಪಡೆದುಕೊಂಡಿತ್ತು.

2008: `ಪೃಥ್ವಿ' ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗ ಒರಿಸ್ಸಾದ ಬಾಲಸೋರಿನ ಚಂಡೀಪುರದಲ್ಲಿ ಯಶಸ್ವಿಯಾಗಿ ನಡೆಯಿತು. ಒಂದು ಭೂಪ್ರದೇಶದಿಂದ ಸುಮಾರು 150ರಿಂದ 250 ಕಿ.ಮೀ. ದೂರದವರೆಗೆ ನೆಗೆಯಬಲ್ಲ `ಪೃಥ್ವಿ' ಕ್ಷಿಪಣಿಯು ಒಂದು ಸಾವಿರ ಕೆಜಿ ಸ್ಫೋಟಕಗಳನ್ನು ಸಾಗಿಸಬಲ್ಲುದು. ಈಗಾಗಲೇ ಈ ಕ್ಷಿಪಣಿ ದೇಶದ ಸೇನಾ ಬತ್ತಳಿಕೆ ಸೇರಿದೆ. ದೇಶೀಯವಾಗಿ ನಿರ್ಮಾಣವಾದ ಪೃಥ್ವಿ ಕ್ಷಿಪಣಿಯನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಅಭಿವೃದ್ಧಿ ಪಡಿಸಿದೆ.

2008: ದೀರ್ಘ ಕಾಲದಿಂದ ಅಸ್ವಸ್ಥರಾಗಿದ್ದ ಹಿರಿಯ ಕಾರ್ಮಿಕ ನಾಯಕ ಹಾಗೂ ಮಾಜಿ ಲೋಕಸಭಾ ಸದಸ್ಯ ಗೋಪೇಶ್ವರ (88) ಅವರು ಹಿಂದಿನ ದಿನ ರಾತ್ರಿ ಜಮ್ಷೆಡ್ ಪುರದಲ್ಲಿ ನಿಧನರಾದರು. ಟೆಲ್ಕೊ ಕಾರ್ಮಿಕರ ಸಂಘಟನೆಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಗೋಪೇಶ್ವರ ಅಂತಾರಾಷ್ಟ್ರೀಯ ಕಾರ್ಮಿಕ ಸಮಾವೇಶ ಸೇರಿದಂತೆ ಹಲವು ದೇಶಗಳಲ್ಲಿ ನಡೆದ ಕಾರ್ಮಿಕ ಸಮಾವೇಶಗಳಲ್ಲಿ ಭಾರತದ ಕಾರ್ಮಿಕರನ್ನು ಪ್ರತಿನಿಧಿಸಿದ್ದರು. 1984ರಲ್ಲಿ ಕಾಂಗ್ರೆಸ್ ಸದಸ್ಯರಾಗಿ ಲೋಕಸಭೆಗೆ ಆಯ್ಕೆಯಾಗಿದ್ದರು.

2008: ಉಭಯ ದೇಶಗಳ ದ್ವಿಪಕ್ಷೀಯ ಮಾತುಕತೆಗೆ ಮುನ್ನ ತಿಳಿಸಿದ್ದಂತೆ ಪಾಕಿಸ್ಥಾನ ಸರ್ಕಾರ ಭಾರತದ 96 ಮೀನುಗಾರರು ಮತ್ತು ಮೂವರು ನಾಗರಿಕರನ್ನು ಬಿಡುಗಡೆ ಮಾಡಿತು.

2008: ಒಂದು ವಾರದ ಹಿಂದೆ ಅಪಹರಿಸಲಾಗಿದ್ದ 10 ಜನ ಭಾರತೀಯ ಸಿಬ್ಬಂದಿ ಇದ್ದ ಜೋರ್ಡಾನ್ ಹಡಗನ್ನು ಅಪಹರಣಕಾರರು ಬಿಡುಗಡೆ ಮಾಡಿದರು. ಒತ್ತೆಯಲ್ಲಿದ್ದ `ಎಂವಿ- ವಿಕ್ಟೋರಿಯಾ' ಹಡಗನ್ನು ಅಪಹರಣಕಾರರು ಸ್ಥಳೀಯ ಸಮಯ ಮಧ್ಯಾಹ್ನ 12.50ಕ್ಕೆ ಬಿಡುಗಡೆ ಮಾಡಿದರು ಎಂದು ನೈರೋಬಿಯ ಸಮುದ್ರ ವಹಿವಾಟು ಅಧಿಕಾರಿ ಆಂಡ್ರ್ಯೂ ತಿಳಿಸಿದರು. 4200 ಟನ್ ಸಕ್ಕರೆ ಹೊತ್ತೊಯ್ಯುತ್ತಿದ್ದ ಈ ಹಡಗನ್ನು ಮೊಗದಿಶು ಬಳಿ ಸೊಮಾಲಿಯಾ ಅಪಹರಣಕಾರರು ಅಪಹರಿಸಿದ್ದರು. ಇದರಲ್ಲಿ 10 ಜನ ಭಾರತೀಯ ಸಿಬ್ಬಂದಿಯಲ್ಲದೆ ಬಾಂಗ್ಲಾದೇಶ, ಪಾಕಿಸ್ಥಾನ, ತಾಂಜಾನಿಯಾಕ್ಕೆ ಸೇರಿದ ಸಿಬ್ಬಂದಿಯೂ ಇದ್ದರು.

2008: ಮಂಗಳ ಗ್ರಹದಲ್ಲಿ ಹಿಂದೊಮ್ಮೆ ಬಿಸಿನೀರ ಚಿಲುಮೆಗಳು, ಬುಗ್ಗೆಗಳು ಇದ್ದಿರುವ ಸಾಧ್ಯತೆಯಿದೆ ಎಂದು ವಿಜ್ಞಾನಿಗಳು ನ್ಯೂಯಾರ್ಕಿನಲ್ಲಿ ತಿಳಿಸಿದರು. ಮಂಗಳ ಗ್ರಹ ಅನ್ವೇಷಣೆಗಾಗಿ `ನಾಸಾ' ಕಳುಹಿಸಿದ್ದ ಸ್ಪಿರಿಟ್ ರೋವರ್ ನೌಕೆ ಅಗೆದು ತೆಗೆದಿರುವ ಸಿಲಿಕಾ ಪದರಗಳನ್ನು ಅಂತಾರಾಷ್ಟ್ರೀಯ ವಿಜ್ಞಾನಿಗಳ ತಂಡ ವಿಶ್ಲೇಷಣೆಗೆ ಒಳಪಡಿಸಿ ಈ ತೀರ್ಮಾನಕ್ಕೆ ಬಂದಿತು. ಜ್ವಾಲಾಮುಖಿಯಿಂದ ಚಿಮ್ಮಿದ ಹಬೆ ಅಥವಾ ಬಿಸಿ ನೀರು ಮಂಗಳ ಗ್ರಹದ ಗರ್ಭಕ್ಕೆ ಇಳಿದು ಇಂಗುವಾಗ ಈ ಸಿಲಿಕಾ ಪದರಗಳು ಉಂಟಾಗಿವೆ. ಅಲ್ಲದೆ `ಸಿಲಿಕಾ'ದ ಪದರಗಳು ಕೋಟ್ಯಂತರ ವರ್ಷಗಳ ಹಿಂದೆ ಮಂಗಳನಲ್ಲಿ ಜೀವಿ ಇದ್ದಿರಬಹುದಾದ ಸಾಧ್ಯತೆಗೆ ಪುರಾವೆ ಒದಗಿಸಿವೆ ಎಂದು ವಿಜ್ಞಾನಿಗಳು ಹೇಳಿದರು. ಭೂಮಿಯ ಮೇಲೆ ಈ ರೀತಿ ಬಿಸಿನೀರ ಚಿಲುಮೆಗಳು ಕಾಣಿಸಿದಲ್ಲೆಲ್ಲ ಸಿಲಿಕಾ ಪದರಗಳು ಉಂಟಾಗಿದ್ದು, ಈ ಪದರಗಳಲ್ಲಿ ಪುರಾತನ ಜೀವಿಗಳ ಅವಶೇಷಗಳು ಪತ್ತೆಯಾಗಿವೆ.

2008: ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆ ಅನುಷ್ಠಾನದಲ್ಲಿ ಕರ್ನಾಟಕ ರಾಜ್ಯವು 2007-08ನೇ ಸಾಲಿನಲ್ಲಿ ಮೊದಲ ಸ್ಥಾನ ಗಳಿಸಿತು. ನಂತರದ ಸ್ಥಾನಗಳನ್ನು ಮಹಾರಾಷ್ಟ್ರ, ಆಂಧ್ರಪ್ರದೇಶ, ಕೇರಳ ಹಾಗೂ ತಮಿಳುನಾಡು ರಾಜ್ಯಗಳು ಗಳಿಸಿದವು ಎಂದು ತೋಟಗಾರಿಕೆ ಇಲಾಖೆಯ ಕಾರ್ಯದರ್ಶಿ ಪಿ.ಗಣೇಶನ್ ತಿಳಿಸಿದರು.

2007: ಎಂಭತ್ತೇಳರ ಹರೆಯದ ಅಜ್ಜ ಅಬ್ದುಲ್ ಅಜೀಜ್ ಹಾರಿ ಘರತಕ್ಕರ್ ಗೆ ಮುಂಬೈ ಸರಣಿ ಬಾಂಬ್ ಸ್ಫೋಟದ ಪ್ರಕರಣಗಳ ವಿಚಾರಣೆ ನಡೆಸಿರುವ ವಿಶೇಷ ಟಾಡಾ ನ್ಯಾಯಾಲಯವು 6 ವರ್ಷಗಳ ಕಠಿಣಶಿಕ್ಷೆ ಹಾಗೂ 50,000 ರೂಪಾಯಿಗಳ ದಂಡವನ್ನು ವಿಧಿಸಿತು.

2007: ಮೊಬೈಲ್ ಫೋನಿನಲ್ಲಿ ದೂರದರ್ಶನ ಕಾರ್ಯಕ್ರಮ ವೀಕ್ಷಣೆ ಸೌಲಭ್ಯವು ಈದಿನ ನವದೆಹಲಿಯಲ್ಲಿ ಚಾಲನೆಗೊಂಡಿತು. ಇದರೊಂದಿಗೆ ದೂರದರ್ಶನವು ತನ್ನ ಸಾಧನೆಗೆ ಮತೊಂದು ಗರಿ ಸೇರಿಸಿಕೊಂಡಿತು.

2007: ತಮಿಳುನಾಡಿನ ತಿರುಪುರದಲ್ಲಿ ನಿರ್ಮಾಣ ಹಂತದಲ್ಲಿದ್ದ ಕಾರ್ಖಾನೆಯೊಂದರ ಗೋಡೆಯು ಪಕ್ಕದ ಸಾರಾಯಿ ಅಂಗಡಿ ಮೇಲೆ ಕುಸಿದು ಬಿದ್ದು 27 ಜನ ಮೃತರಾಗಿ ಇತರ ಐವರು ಗಾಯಗೊಂಡರು.

2007: ಮಾಹಿತಿ ಹಕ್ಕು ಅಧಿನಿಯಮವನ್ನು ಕಟ್ಟು ನಿಟ್ಟಾಗಿ ಅನುಷ್ಠಾನಗೊಳಿಸುವ ಸಲುವಾಗಿ ಕರ್ನಾಟಕ ಶಿಕ್ಷಣ ಇಲಾಖೆಯು `ಇ- ಆಡಳಿತ ವಿಭಾಗ'ದ ವತಿಯಿಂದ `ಕೇಂದ್ರೀಕೃತ ಶಿಕ್ಷಣ ಇಲಾಖೆ'ಯ ಮಾಹಿತಿ ಕೇಂದ್ರವನ್ನು ಆರಂಭಿಸಿತು.

2007: ಪ್ರೊಬೆಬಿಲಿಟಿ ಸಿದ್ಧಾಂತದ ಮೇಲೆ ಸಂಶೋಧನೆ ನಡೆಸಿದ ಓಸ್ಲೋದ ಭಾರತೀಯ ಮೂಲದ ಅಧ್ಯಾಪಕ 67 ವರ್ಷದ ಶ್ರೀನಿವಾಸ ವರದನ್ ಅವರಿಗೆ ಒಂದು ದಶಲಕ್ಷ ಡಾಲರ್ ಮೊತ್ತದ ಬಹುಮಾನ ದೊರಕಿತು. ಈ ಬಹುಮಾನದ ಬಹುತೇಕ ಹಣವನ್ನು ಅವರು ಚೆನ್ನೈ ಬಳಿಯಲ್ಲಿರುವ ತಮ್ಮ ತವರೂರು ತಂಬರಂನಲ್ಲಿ ಶೈಕ್ಷಣಿಕ ಅಭಿವೃದ್ಧಿಗೆ ಬಳಸುವುದಾಗಿ ಪ್ರಕಟಿಸಿದರು. ವರದನ್ ಅವರು ಮುಂದೆ ನಡೆಯಬಹುದಾದ ಅಪಘಾತಗಳ ಸಂಖ್ಯೆಯನ್ನು ಅಂದಾಜು ಮಾಡಲು ಕಾರು ವಿಮಾ ಕಂಪೆನಿಗಳಿಗೆ ನೆರವಾಗುವುದರಿಂದ ಹಿಡಿದು, ನೂರು ವರ್ಷಗಳ ಕಾಲ ಸಮುದ್ರದ ಅಲೆಗಳ ಹೊಡೆತವನ್ನು ಸಹಿಸಿಕೊಳ್ಳುವ ತೈಲ ಘಟಕ ಸ್ಥಾಪನೆಯವರೆಗೆ ಬಳಸಲು ಸಾಧ್ಯವಾಗುವಂತೆ ಪ್ರೊಬೆಬಿಲಿಟಿ ಸಿದ್ಧಾಂತವನ್ನು ರೂಪಿಸಿದ್ದರು.

2006: ವೈದ್ಯ ವಿದ್ಯಾರ್ಥಿಗಳು ಮತ್ತು ಇತರ ವಿದ್ಯಾರ್ಥಿಗಳ ಮೀಸಲು ವಿರೋಧಿ ಮುಷ್ಕರವನ್ನು ನಿರ್ಲಕ್ಷಿಸಿ, 2007ರ ಜೂನ್ ತಿಂಗಳಿನಿಂದ ಉನ್ನತ ಕೇಂದ್ರೀಯ ಶಿಕ್ಷಣ ಸಂಸ್ಥೆಗಳಲ್ಲಿ ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ಶೇಕಡಾ 27ರಷ್ಟು ಮೀಸಲಾತಿ ಜಾರಿಗೊಳಿಸಲು ಕೇಂದ್ರದ ಯುಪಿಎ ಸರ್ಕಾರ ನಿರ್ಧರಿಸಿತು. ಸಾಮಾನ್ಯ ವರ್ಗಕ್ಕೆ ತೊಂದರೆಯಾಗದಂತೆ ಸೀಟುಗಳ ಸಂಖ್ಯೆಯನ್ನು ಹೆಚ್ಚಿಸಲೂ ಅದು ತೀರ್ಮಾನಿಸಿತು. ಯುಪಿಎ ಸಮನ್ವಯ ಸಮಿತಿ ಸಭೆಯಲ್ಲಿ ಎಡಪಕ್ಷಗಳು ಸರ್ಕಾರದ ಕ್ರಮವನ್ನು ಸಂಪೂರ್ಣವಾಗಿ ಬೆಂಬಲಿಸಿದ ಹಿನ್ನೆಲೆಯಲ್ಲಿ ಆಳುವ ಮೈತ್ರಿಕೂಟ ಈ ನಿರ್ಧಾರಕ್ಕೆ ಬಂದಿತು.

2006: ಭಾರತೀಯ ಗಡಿ ರಕ್ಷಣಾ ಪಡೆಯ ಹಿರಿಯ ಅಧಿಕಾರಿ ಎಸ್.ಸಿ. ನೇಗಿ (56) ಅವರು ಪ್ರಪಂಚದ ಅತಿ ಎತ್ತರದ ಶಿಖರ ಮೌಂಟ್ ಎವರೆಸ್ಟ್ ಏರಿದ ಅತ್ಯಂತ ಹಿರಿಯ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

2006: ವಿಶ್ವದ ಅತಿ ಎತ್ತರದ ಎವರೆಸ್ಟ್ ಪರ್ವತ ಶಿಖರವನ್ನು ಏರಿದ ವಯೋವೃದ್ಧ 70 ವರ್ಷದ ಜಪಾನಿ ಪರ್ವತಾರೋಹಿ ಟಕೊವ್ ಅರಯಾಮ ಅವರಿಗೆ ಕಠ್ಮಂಡುವಿನಲ್ಲಿ ಟಿಬೆಟ್ ಸ್ವಾಯತ್ತ ಪ್ರಾಂತ್ಯದ ಚೀನಾ ಪರ್ವತಾರೋಹಣ ಸಂಘ ಈ ಸಂಬಂಧ ಪ್ರಮಾಣಪತ್ರ ನೀಡಿತು.

1999: `ಸ್ಟಾರ್ ವಾರ್ ಎಪಿಸೋಡ್ 1: ದಿ ಫ್ಯಾಂಟಮ್ ಮೆನೇಸ್' ಚಲನಚಿತ್ರವು ಐದು ದಿನಗಳಲ್ಲಿ 100 ಮಿಲಿಯನ್ ಡಾಲರುಗಳಿಗೂ ಹೆಚ್ಚು ಆದಾಯ ಗಳಿಸಿದ ಪ್ರಥಮ ಚಲನ ಚಿತ್ರವಾಯಿತು.

1984: ಬಚೇಂದ್ರಿಪಾಲ್ ಅವರು ಎವರೆಸ್ಟ್ ಶಿಖರವನ್ನು ಏರುವ ಮೂಲಕ ಜಗತ್ತಿನ ಅತ್ಯುನ್ನತ ಶಿಖರವನ್ನು ಏರಿದ ಪ್ರಥಮ ಭಾರತೀಯ ಮಹಿಳೆ ಎಂಬ ಕೀರ್ತಿಗೆ ಭಾಜನರಾದರು.

1952: ಸಿ.ಡಿ. ದೇಶಮುಖ್ ಅವರು ತಮ್ಮ ಆರು ಮುಂಗಡಪತ್ರಗಳ ಪೈಕಿ ಮೊದಲನೆಯ ಮುಂಗಡಪತ್ರವನ್ನು ಭಾರತದ ಸಂಸತ್ತಿನಲ್ಲಿ ಮಂಡಿಸಿದರು. ಇದು ಭಾರತದ ಸಂಸತಿನಲ್ಲಿ ಮಂಡನೆಯಾದ ಮೊತ್ತ ಮೊದಲನೆಯ ಮುಂಗಡಪತ್ರ.

1934: `ಬೋನಿ' ಮತ್ತು `ಗ್ಲೈಡ್' ಎಂದೇ ಪರಿಚಿತರಾಗಿದ್ದ ಅಮೆರಿಕದ ಕುಖ್ಯಾತ ಅಪರಾಧಿಗಳಾದ ಬೋನಿ ಪಾರ್ಕರ್ ಮತ್ತು ಗ್ಲೈಡ್ ಬ್ಯಾರೋ ಲೌಸಿಯಾನಾ ಸಮೀಪದ ಗಿಬ್ ಲ್ಯಾಂಡಿನಲ್ಲಿ ನಡೆದ ಘರ್ಷಣೆಯೊಂದರಲ್ಲಿ ಮೃತರಾದರು.

1926: ಮೃದಂಗ ಹಾಗೂ ಘಟಂ ವಾದನದಲ್ಲಿ ಖ್ಯಾತರಾಗಿರುವ ಕೆ.ಎನ್. ಕೃಷ್ಣಮೂರ್ತಿ ಅವರು ಕೆ.ಕೆ. ನಾರಾಯಣನ್ ಅಯ್ಯರ್- ಪಾರ್ವತಿ ಅಮ್ಮಾಳ್ ದಂಪತಿಯ ಮಗನಾಗಿ ಪಾಲ್ಘಾಟಿನ ಕೊಯಲ್ ಮನ್ನಂ ಗ್ರಾಮದಲ್ಲಿ ಜನಿಸಿದರು.

1734: ಫ್ರಾಂಜ್ ಆಂಟನ್ ಮೆಸ್ಮರ್ (1734-1815) ಜನ್ಮದಿನ. ಈಗ `ಹಿಪ್ನಾಟಿಸಂ' ಹೆಸರಿನಲ್ಲಿ ಜನಪ್ರಿಯವಾಗಿರುವ ಸಮ್ಮೋಹಿನಿಯನ್ನು `ಮೆಸ್ಮರಿಸಂ' ಹೆಸರಿನಲ್ಲಿ ಖ್ಯಾತಿಗೆ ತಂದಿದ್ದ ಜರ್ಮನಿಯ ವೈದ್ಯನೀತ.

No comments:

Advertisement