My Blog List

Saturday, June 12, 2010

ಇಂದಿನ ಇತಿಹಾಸ History Today ಜೂನ್ 06

ಇಂದಿನ ಇತಿಹಾಸ

ಜೂನ್ 06

 'ಆಲ್ ರಷ್ಯನ್' ಫೈನಲ್‌'ನಲ್ಲಿ ಸ್ವೆಟ್ಲಾನಾ ಕುಜ್ನೆಟ್ಸೋವಾ ಗೆದ್ದರೆ, ದಿನಾರ ಸಫಿನಾ ಬಿದ್ದರು. ಪ್ಯಾರಿಸ್ಸಿನಲ್ಲಿ ನಡೆದ ಫ್ರೆಂಚ್ ಓಪನ್ ಗ್ರ್ಯಾಂಡ್ ಸ್ಲಾಮ್ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ವಿಭಾಗದ ಫೈನಲ್‌ನಲ್ಲಿ ಅಧಿಕಾರಯುತ ಗೆಲುವು ಪಡೆದ ಕುಜ್ನೆಟ್ಸೋವಾ ಚಾಂಪಿಯನ್ ಪಟ್ಟ ತಮ್ಮದಾಗಿಸಿದರು.

2009: 'ಆಲ್ ರಷ್ಯನ್' ಫೈನಲ್‌'ನಲ್ಲಿ ಸ್ವೆಟ್ಲಾನಾ ಕುಜ್ನೆಟ್ಸೋವಾ ಗೆದ್ದರೆ, ದಿನಾರ ಸಫಿನಾ ಬಿದ್ದರು. ಪ್ಯಾರಿಸ್ಸಿನಲ್ಲಿ ನಡೆದ ಫ್ರೆಂಚ್ ಓಪನ್ ಗ್ರ್ಯಾಂಡ್ ಸ್ಲಾಮ್ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ವಿಭಾಗದ ಫೈನಲ್‌ನಲ್ಲಿ ಅಧಿಕಾರಯುತ ಗೆಲುವು ಪಡೆದ ಕುಜ್ನೆಟ್ಸೋವಾ ಚಾಂಪಿಯನ್ ಪಟ್ಟ ತಮ್ಮದಾಗಿಸಿದರು. ರೋಲಂಡ್ ಗ್ಯಾರೋಸ್‌ನ ಸೆಂಟರ್ ಕೋರ್ಟಿನಲ್ಲಿ ನಡೆದ ಪಂದ್ಯದಲ್ಲಿ ಟೂರ್ನಿಯ ಏಳನೇ ಶ್ರೇಯಾಂಕದ ಆಟಗಾರ್ತಿ ರಷ್ಯಾದ ಕುಜ್ನೆಟ್ಸೋವಾ 6-4, 6-2 ರಲ್ಲಿ ತಮ್ಮದೇ ದೇಶದ ದಿನಾರ ಸಫಿನಾ ಅವರನ್ನು ಮಣಿಸಿ, ಮಿರುಗುವ ಟ್ರೋಫಿಗೆ ಮುತ್ತಿಕ್ಕಿದರು.

2009: ವಿಶ್ವದಲ್ಲೇ ಮೊಟ್ಟ ಮೊದಲಬಾರಿಗೆ ದೃಷ್ಟಿದಾಯಿ ಆಕರಕೋಶಗಳನ್ನು (ಸ್ಟೆಮ್ ಸೆಲ್) ಕಂಡುಹಿಡಿದ ಆಸ್ಟ್ರೇಲಿಯಾ ವಿಜ್ಞಾನಿಗಳು ಹೊಸ ಸಂಶೋಧನೆಗೆ ನಾಂದಿ ಹಾಡಿದರು. ನ್ಯೂಸೌತ್‌ವೇಲ್ಸ್ ವಿಶ್ವವಿದ್ಯಾಲಯದ ಸಂಶೋಧಕರ ತಂಡವೊಂದು ದೃಷ್ಟಿ ಕಳೆದುಕೊಂಡ ರೋಗಿಯೊಬ್ಬರಿಗೆ ಅವರದೇ ಆಕರಕೋಶ ಬಳಸಿ ದೃಷ್ಟಿ ನೀಡಿತು. ಮೊದಲು ಕಾಂಟ್ಯಾಕ್ಟ್ ಲೆನ್ಸ್ ಮೇಲೆ ಕೋಶಗಳನ್ನು ಕಸಿ ಮಾಡಿ ಹತ್ತು ದಿನಗಳ ಕಾಲ ಭಗ್ನವಾದ ಕಾರ್ನಿಯಾ ಮೇಲೆ ಕೂರಿಸಲಾಗುತ್ತದೆ. ಆ ಅವಧಿಯಲ್ಲಿ ಕೋಶ ಮತ್ತೆ ಕಾರ್ನಿಯಾದಲ್ಲಿ ಬೆಳೆಯತೊಡಗುತ್ತದೆ. ಈ ವಿಧಾನವನ್ನು ಇತರೆ ಅಂಗಗಳ ಕಸಿಗೆ ಕೂಡ ಬಳಸಬಹುದು ಎಂದು ಸಂಶೋಧಕರು ತಿಳಿಸಿದರು. ಪ್ರಸ್ತುತ ಮೂರು ರೋಗಿಗಳ ಮೇಲೆ ಈ ಪ್ರಯೋಗ ನಡೆಯಿತು. ಇದೊಂದು ಸರಳ ಮತ್ತು ಅತಿ ಕಡಿಮೆ ಬೆಲೆಯ ವಿಧಾನ ಎಂದು ಸಂಶೋಧಕರು ತಿಳಿಸಿದರು. ಈ ವಿಧಾನದಲ್ಲಿ ಬಾಹ್ಯ ನೇತ್ರ ಪಡೆಯುವ ಅವಶ್ಯಕತೆ ಇಲ್ಲದೇ ರೋಗಿಯ ಆಕರ ಕೋಶದಿಂದಲೇ ದೃಷ್ಟಿ ನೀಡಬಹುದು. ರೋಗಿ ಆಸ್ಪತ್ರೆಯಲ್ಲಿ ದಾಖಲಾಗುವ ಅವಶ್ಯಕತೆ ಇಲ್ಲದೆ ಕಾಂಟ್ಯಾಕ್ಟ್ ಲೆನ್ಸ್ ಅಳವಡಿಸಿಕೊಂಡು ಕೆಲವೇ ಗಂಟೆಗಳಲ್ಲಿ ಮನೆಗೆ ತೆರಳಬಹುದು. ಬಡರೋಗಿಗಳಿಗೆ ಇದರಿಂದ ಹೆಚ್ಚಿನ ಲಾಭವಾಗಲಿದೆ ಎಂಬುದು ಸಂಶೋಧಕರ ಅಭಿಪ್ರಾಯ.

2009: ತಮ್ಮ ಜಮೀನಿನಲ್ಲಿ ಸರ್ಕಾರ ನಡೆಸುತ್ತಿರುವ ತೈಲ ಹಾಗೂ ಅನಿಲ ಅನ್ವೇಷಣೆ ವಿರುದ್ಧ ಪೆರುವಿನ ಅಮೆಜಾನ್ ಪ್ರದೇಶದ ಮೂಲನಿವಾಸಿಗಳು (ಇಂಡಿಯನ್) ನಡೆಸಿದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಪರಿಣಾಮ 25 ಪ್ರತಿಭಟನಾಕಾರರು ಹಾಗೂ 9 ಮಂದಿ ಪೊಲೀಸರು ಸಾವನ್ನಪ್ಪಿದ ಘಟನೆ ನಡೆಯಿತು. ಉಟ್ಕುಬಾಂಬಾದ ಉತ್ತರ ಪ್ರಾಂತ್ಯದಲ್ಲಿರುವ -ಡೆವಿಲ್ಸ್ ಕರ್ವ್ ಎಂಬ ಪ್ರದೇಶದಲ್ಲಿ ಸುಮಾರು 5,000 ಇಂಡಿಯನ್ನರು ಮುಚ್ಚಿದ್ದ ರಸ್ತೆಯನ್ನು ಅಧಿಕಾರಿಗಳು ತೆರವುಗೊಳಿಸಿದಾಗ ಈ ಘಟನೆ ಸಂಭವಿಸಿತು.

2009: ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರು ಸಾರ್ವಜನಿಕ ಕ್ಷೇತ್ರಕ್ಕೆ ನೀಡಿರುವ ಸೇವೆಯನ್ನು ಗುರುತಿಸಿ ಬ್ರಿಟನ್ನಿನ ಕ್ವೀನ್ಸ್ ಬೆಲ್‌ಫಾಸ್ಟ್ ವಿಶ್ವವಿದ್ಯಾಲಯ (ಕ್ಯೂಯುಬಿ) ಅವರಿಗೆ ಗೌರವ ಡಾಕ್ಟರೇಟ್ ಪದವಿ ('ಡಿಯುನಿವ್' ಪದವಿ) ನೀಡಲು ನಿರ್ಧರಿಸಿತು.

2008: ಬ್ಯಾಂಕಾಕಿನಲ್ಲಿ ಅಂತಾರಾಷ್ಟ್ರೀಯ ಭಾರತೀಯ ಸಿನಿಮಾ ಅಕಾಡೆಮಿ (ಐಐಎಫ್-ಐಫಾ) ಚಲನ ಚಿತ್ರೋತ್ಸವಕ್ಕೆ ಖ್ಯಾತ ಚಿತ್ರನಟ ಅಮಿತಾಭ್ ಬಚ್ಚನ್ ಚಾಲನೆ ನೀಡಿದರು. ಐಫಾ ಪ್ರಶಸ್ತಿ ಪ್ರದಾನ ಸಮಾರಂಭದ ಉದ್ಘಾಟನೆ ಸಮಾರಂಭದಲ್ಲಿ ಜಯಾ ಬಚ್ಚನ್, ದಿಯಾ ಮಿರ್ಜಾ, ಥಾಯ್ಲೆಂಡಿನಲ್ಲಿನ ಭಾರತದ ರಾಯಭಾರಿ ಲತಾ ರೆಡ್ಡಿ ಮತ್ತಿತರ ಗಣ್ಯರೂ ಭಾಗವಹಿಸಿದ್ದರು.

2007: ದೇಶದಲ್ಲೇ ಮೊದಲ ಜಲ ಸಾಕ್ಷರತಾ ಕೇಂದ್ರ ಎಂಬ ಹಿರಿಮೆಯೊಂದಿಗೆ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲ್ಲೂಕಿನ ನೀರ್ನಹಳ್ಳಿಯಲ್ಲಿ `ಮಲೆನಾಡು ಮಳೆ ಕೇಂದ್ರ ಕೆಂಗ್ರೆ' ಕಾರ್ಯಾರಂಭಗೊಂಡಿತು. ಮಲೆನಾಡಿನ ನೀರ್ನಹಳ್ಳಿ ಮಾಧ್ಯಮಿಕ ಶಿಕ್ಷಣಾಲಯವನ್ನು ಕೇಂದ್ರವಾಗಿ ಇರಿಸಿಕೊಂಡು ರೂಪಿಸಲಾದ ಈ ಕೇಂದ್ರವು ನೆಲ, ಜಲ ಸಂರಕ್ಷಣೆಯ ಪಾಠವನ್ನು ಪ್ರತ್ಯಕ್ಷ ಪ್ರಾತ್ಯಕ್ಷಿಕೆ, ಯಶೋಗಾಥೆಗಳ ಮೂಲಕ ಹೇಳುವ ವಿನೂತನ ಯತ್ನ. ಮಳೆ ಮಾಪನ, ನೀರಿನ ಅಂದಾಜು, ಗುಡ್ಡದಲ್ಲಿ ನೀರಿಂಗಿಸುವ ಸುಲಭ ರಚನೆ, ಕಟ್ ಅಗಳ, ಸಿಲ್ಪಾಲಿನ್ ಟ್ಯಾಂಕ್, ಗಲ್ಲಿಪ್ಲಗ್, ಬಾಂದಾರ, ಛಾವಣಿ ನೀರಿನ ಕೊಯ್ಲು, ತೆರೆದ ಬಾವಿ ಹಾಗೂ ಕೊಳವೆ ಬಾವಿಗೆ ಜಲ ಮರುಪೂರಣ, ಇಂಗು ಕಾಲುವೆ ಸೇರಿದಂತೆ ನೀರುಳಿತಾಯದ ವಿವಿಧ 28 ಮಾದರಿಗಳು ಇಲ್ಲಿವೆ. ಬರಹಗಾರ ಶಿವಾನಂದ ಕಳವೆ ಅವರ ಕನಸಿನ ಕೂಸಾದ ಈ ಮಲೆನಾಡು ಮಳೆ ಕೇಂದ್ರವು ಸೀತಾರಾಮ ಹೆಗಡೆ ನೀರ್ನಹಳ್ಳಿ ಅಧ್ಯಕ್ಷತೆಯಲ್ಲಿ ಕಾರ್ಯ ನಿರ್ವಹಿಸುವುದು. ಸಂಸದ ಅನಂತ ಕುಮಾರ ಹೆಗಡೆ ಈ ಕೇಂದ್ರವನ್ನು ಉದ್ಘಾಟಿಸಿದರು. ಜಲ ತಜ್ಞ ಶ್ರೀಪಡ್ರೆ ವಿಶೇಷ ಉಪನ್ಯಾಸ ನೀಡಿದರು.

2007: ಹೈದರಾಬಾದಿನಲ್ಲಿ ತೃತೀಯ ರಂಗ ಮತ್ತೆ ಚಾಲನೆಗೆ ಬಂತು. ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ತೆಲುಗುದೇಶಂ ವರಿಷ್ಠ ಚಂದ್ರಬಾಬು ನಾಯ್ಡು ಮನೆಯಲ್ಲಿ ಎಂಟು ಪ್ರಾದೇಶಿಕ ಪಕ್ಷಗಳ ನಾಯಕರು ಬಿಜೆಪಿ ಮತ್ತು ಕಾಂಗ್ರೆಸ್ಸಿಗೆ ಪರ್ಯಾಯವಾಗಿ ನೂತನ ರಾಷ್ಟ್ರೀಯ ರಂಗಕ್ಕೆ ಚಾಲನೆ ನೀಡಿದರು. ಚಂದ್ರಬಾಬು ನಾಯ್ಡು, ಜಯಲಲಿತಾ, ಮುಲಾಯಂ ಸಿಂಗ್, ಎಸ್. ಬಂಗಾರಪ್ಪ, ಓಂ ಪ್ರಕಾಶ್ ಚೌಟಾಲ, ಬಾಬುಲಾಲ ಮರಾಂಡಿ, ವೈಕೊ ಈ ನೂತನ ರಂಗದ ನಾಯಕರು.

2007: 1993ರ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಸಾಬೀತಾಗಿದ್ದ ಇನ್ನೂ ಮೂವರಿಗೆ ವಿಶೇಷ ಟಾಡಾ ನ್ಯಾಯಾಲಯ ಶಿಕ್ಷೆಯ ಸ್ವರೂಪವನ್ನು ಪ್ರಕಟಿಸಿತು. ಚಿತ್ರನಟ ಸಂಜಯದತ್ ಅವರಿಗೆ ಎಕೆ -56 ರೈಫಲ್, ಕೈಬಾಂಬ್ ಹಾಗೂ ಮದ್ದುಗುಂಡು ಪೂರೈಸಿದ್ದ ಇಬ್ರಾಹಿಂ ಯಾನೆ ಬಾಬಾ ಮೂಸಾ ಚೌಹಾಣ್ ಇವರಲ್ಲಿ ಒಬ್ಬ ವ್ಯಕ್ತಿಯಾಗಿದ್ದು ಭೂಗತ ದೊರೆ ಅಬು ಸಲೇಂ ಸಹಚರ.

2007: ಮ್ಯಾರಥಾನ್ ನಡಿಗೆ ಮೂಲಕ ಅಚ್ಚರಿ ಹುಟ್ಟಿಸಿದ್ದ ಒರಿಸ್ಸಾದ ಬಾಲಕ ಬುಧಿಯಾ ಸಿಂಗ್ ನ ಇನ್ನೊಂದು ಬಹುಚರ್ಚಿತ ದೀರ್ಘನಡಿಗೆಗೆ ಜಿಲ್ಲಾ ಆಡಳಿತ ತಡೆ ಹಾಕಿದ ಪರಿಣಾಮವಾಗಿ ಈ ನಡಿಗೆ ಆರಂಭವಾಗಲಿಲ್ಲ.

2007: ಡೆಹ್ರಾಡೂನ್ ಮೂಲದ ಹಿಮಾಲಯ ವೈದ್ಯಕೀಯ ವಿಜ್ಞಾನ ಸಂಸ್ಥೆಯ ವೈದ್ಯ ನರರೋಗ ತಜ್ಞ ಡಾ. ಚರಿತೇಶ ಗುಪ್ತ ಅವರು ಡೆಹ್ರಾಡೂನಿನ ವರ್ತಕ ಎಚ್.ಎಸ್. ಅಗರ್ ವಾಲ್ ಅವರ ಮೆದುಳಿನಲ್ಲಿದ್ದ ಒಂಬತ್ತು ಗಡ್ಡೆಗಳನ್ನು ಹೊರತೆಗೆಯುವ ಮೂಲಕ ಸಹೋದ್ಯೋಗಿ ಡಾ. ಕೆ.ಕೆ. ಬನ್ಸಾಲ್ ಅವರು 8 ಮೆದುಳುಗಡ್ಡೆಗಳನ್ನು ಹೊರತೆಗೆಯುವ ಮೂಲಕ ಕಳೆದ ವರ್ಷ ಮಾಡಿದ್ದ ಗಿನ್ನೆಸ್ ದಾಖಲೆಯನ್ನು ಮುರಿದರು.

2006: ಲಾಭದಾಯಕ ಹುದ್ದೆಗೆ ಸಂಬಂಧಿಸಿದ ಕರ್ನಾಟಕ ವಿಧಾನ ಮಂಡಲದ `ಅನರ್ಹತೆ ತಡೆಗಟ್ಟುವ ತಿದ್ದುಪಡಿ ಮಸೂದೆ -2006'ನ್ನು ವಿಧಾನ ಮಂಡಲದ ಉಭಯ ಸದನಗಳು ಅಂಗೀಕರಿಸಿದವು.

2006: ಕ್ಷುಲ್ಲಕ ಕಾರಣಕ್ಕಾಗಿ ಅಪ್ಪ ಹಾಗೂ ಅಮ್ಮನನ್ನು ಬ್ಯಾಟಿನಿಂದ ಹೊಡೆದ ಮಗನಿಗೆ ಕರ್ನಾಟಕ ಹೈಕೋರ್ಟ್ ಒಂದು ಲಕ್ಷ ರೂಪಾಯಿ ದಂಡ ಹಾಗೂ ಮೂರು ತಿಂಗಳ ಕಠಿಣ ಸಜೆಯ ಶಿಕ್ಷೆಯನ್ನು ವಿಧಿಸಿತು. ಬೆಳಗಾವಿಯ ಉಚಗಾಂವ್ನ ಹೊನಗೇಕರ್ ಗಲ್ಲಿಯ ನಿವಾಸಿ ಪರಶುರಾಮ ಎನ್. ಜಾದವ್ ಗೆ ನ್ಯಾಯಮೂರ್ತಿ ಕೆ. ಶ್ರೀಧರರಾವ್ ಈ ಶಿಕ್ಷೆ ವಿಧಿಸಿ ತೀರ್ಪು ನೀಡಿದರು.

1984: ಸಿಖ್ ಉಗ್ರಗಾಮಿಗಳ ವಿರುದ್ಧ ಭಾರತೀಯ ಸೇನೆ `ಆಪರೇಷನ್ ಬ್ಲೂಸ್ಟಾರ್' ಆರಂಭಿಸಿತು. ಅಮೃತಸರದ ಸ್ವರ್ಣಮಂದಿರವನ್ನು ತಮ್ಮ ನೆಲೆಯನ್ನಾಗಿ ಮಾಡಿಕೊಂಡಿದ್ದ ಉಗ್ರಗಾಮಿಗಳನ್ನು ಅಲ್ಲಿಂದ ಹೊರತಳ್ಳಲು ಸ್ವರ್ಣ ಮಂದಿರಕ್ಕೆ ಮುತ್ತಿಗೆ ಹಾಕಿತು. ಉಗ್ರಗಾಮಿ ನಾಯಕ ಜರ್ನೈಲ್ ಸಿಂಗ್ ಭಿಂದ್ರನ್ ವಾಲೆ ಮತ್ತು ಆತನ ಬೆಂಬಲಿಗರು ಈ ಕಾರ್ಯಾಚರಣೆಯಲ್ಲಿ ಹತರಾದರು.

1982: ಕರ್ನಾಟಕದ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸ್ ಈದಿನ ನಿಧನರಾದರು. 1972ರ ಮಾರ್ಚ್ 20ರಿಂದ 1977ರ ಡಿಸೆಂಬರ್ 31ರವರೆಗೆ ಇವರು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದರು. ಉಳುವವನೇ ಹೊಲದೊಡೆಯ ಇವರ ಕಾಲದಲ್ಲಿ ಜಾರಿಯಾದ ಕ್ರಾಂತಿಕಾರಿ ಸುಧಾರಣಾ ಕಾರ್ಯಕ್ರಮ.

1982: ಒರಿಸ್ಸಾ ಕರಾವಳಿಯಲ್ಲಿ ರಾತ್ರಿ ಸಂಭವಿಸಿದ ಭೀಕರ ಚಂಡಮಾರುತ ಹಾವಳಿಗೆ 125 ಮಂದಿ ಬಲಿಯಾಗಿ ನೂರಾರು ಮಂದಿ ಗಾಯಗೊಂಡರು. 6000ಕ್ಕೂ ಹೆಚ್ಚು ಮಂದಿ ಗ್ರಾಮಸ್ಥರು ನಿರ್ವಸಿತರಾದರು.

1945: ಸಾಹಿತಿ ಚಂದ್ರಶೇಖರ ಹೇರ್ಳೆ ಜನನ.

1938: ಸಾಹಿತಿ ಕು.ಗೋ. ಜನನ.

1937: ಸಾಹಿತಿ ನಾ. ಡಿಸೋಜಾ ಜನನ.

1924: ಸಾಹಿತಿ ಡಾ. ಖಡಬಡಿ ಬಿ.ಕೆ. ಜನನ.

1923: ಸಾಹಿತಿ ಆರ್. ಡಿ. ಕಾಮತ್ ಜನನ.

1920: ಎಚ್. ನರಸಿಂಹಯ್ಯ ಜನನ.

1914: ಸಾಹಿತಿ ಮಹಾದೇವ ಅಣ್ಣಿಗೇರಿ ಜನನ.

1914: ಕರ್ನಾಟಕ ಸಂಗೀತಕ್ಕೆ ವಿಶಿಷ್ಟ ಕೊಡುಗೆ ನೀಡಿದ ಗಾಯಕ ಆರ್. ಕೆ. ನಾರಾಯಣಸ್ವಾಮಿ (6-6-1914ರಿಂದ 4-9-2005) ಅವರು ಕೃಷ್ಣ ಶಾಸ್ತ್ರಿಗಳು ಹಾಗೂ ಕನ್ನಡ ಸಂಸ್ಕೃತ ಭಾಷೆಗಳ ಉದ್ಧಾಮ ಪಂಡಿತೆ ಸಣ್ಣಮ್ಮ ದಂಪತಿಯ ಮಗನಾಗಿ ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ರುದ್ರಪಟ್ಟಣದಲ್ಲಿ ಜನಿಸಿದರು.

1891: ಸಣ್ಣ ಕಥೆಗಳ ಜನಕ ಎಂದೇ ಖ್ಯಾತರಾದ ಮಾಸ್ತಿ ವೆಂಕಟೇಶ ಅಯ್ಯಂಗಾರ್ (6-6-1891ರಿಂದ 6-6-1986) ಅವರು ರಾಮಸ್ವಾಮಿ ಅಯ್ಯಂಗಾರ್- ತಿರುಮಲಮ್ಮ ದಂಪತಿಯ ಪುತ್ರನಾಗಿ ಕೋಲಾರ ಜಿಲ್ಲೆಯ ಮಾಸ್ತಿಯಲ್ಲಿ ಜನಿಸಿದರು.

1832: ಇಂಗ್ಲಿಷ್ ತತ್ವಜ್ಞಾನಿ ಹಾಗೂ ಅರ್ಥತಜ್ಞ ಜೆರೆಮಿ ಬೆಂಥಮ್ ತನ್ನ 84ನೇ ವಯಸ್ಸಿನಲ್ಲಿ ಮೃತನಾದ. ಆತನ ಅಪೇಕ್ಷೆಯಂತೆ ಆತನ ಅಸ್ಥಿಪಂಜರವನ್ನು ಮರುಜೋಡಣೆ ಮಾಡಿ, ಬಟ್ಟೆ ಸುತ್ತಿ, ವ್ಯಾಕ್ಸ್ ತಲೆಯನ್ನು ಅದಕ್ಕೆ ಜೋಡಿಸಿ ಗಾಜಿನ ಪೆಟ್ಟಿಗೆಯಲ್ಲಿ ಇರಿಸಲಾಯಿತು. ಆತನ ಶವ ಹಾಗೂ ತಲೆಯನ್ನು ಲಂಡನ್ನಿನ ಯುನಿವರ್ಸಿಟಿ ಕಾಲೇಜಿನಲ್ಲಿ ರಕ್ಷಿಸಿ ಇಡಲಾಗಿದೆ.

1829: ಅಲನ್ ಒಕ್ಟೇವಿಯನ್ ಹ್ಯೂಮ್ (1829-1912) ಜನ್ಮದಿನ. ಭಾರತದಲ್ಲಿ ಬ್ರಿಟಿಷ್ ಆಡಳಿತಗಾರನಾಗಿದ್ದ ಈತ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ ವ್ಯಕ್ತಿ.

1683: ಬ್ರಿಟನ್ನಿನ ಪ್ರಪ್ರಥಮ ಮ್ಯೂಸಿಯಂ `ಆಶ್ಮೋಲಿಯನ್ ಮ್ಯೂಸಿಯಂ'ನ್ನು ಸಾರ್ವಜನಿಕರ ವೀಕ್ಷಣೆಗಾಗಿ ತೆರೆಯಲಾಯಿತು. ಆಕ್ಸ್ ಫರ್ಡಿನ ಬ್ರಾಡ್ ಸ್ಟ್ರೀಟಿನಲ್ಲಿ ಇರುವ ಈ ಮ್ಯೂಸಿಯಂನ್ನು ಎಲಿಯಾಸ್ ಅಶ್ಮೋಲೆ ಸ್ಥಾಪಿಸಿದರು.

1674: ರಾಯಗಢ ಕೋಟೆಯಲ್ಲಿ ಮರಾಠಾ ವೀರ ಶಿವಾಜಿಯ ಕಿರೀಟಧಾರಣೆ ನಡೆಯಿತು. `ಛತ್ರಪತಿ' ಬಿರುದನ್ನೂ ಈ ಸಂದರ್ಭದಲ್ಲಿ ಶಿವಾಜಿಗೆ ನೀಡಲಾಯಿತು. ಈ ಘಟನೆ ಹದಿನೇಳನೇ ಶತಮಾನದ ಪ್ರಮುಖ ರಾಜಕೀಯ ಘಟನೆಗಳಲ್ಲಿ ಒಂದು ಎಂದು ಪರಿಗಣಿತವಾಯಿತು. ಮೊಘಲರ ಆಳ್ವಿಕೆ ವಿರುದ್ಧ ಬಂಡ್ದೆದ ಶಿವಾಜಿ ತನ್ನದು ಸ್ವತಂತ್ರ ರಾಜ್ಯ ಎಂದು ಘೋಷಿಸಿ, ಹೊಸ ರಾಜಕೀಯ ಸಂಸ್ಕೃತಿಗೆ ನಾಂದಿ ಹಾಡಿದ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement