My Blog List

Thursday, June 24, 2010

ಇಂದಿನ ಇತಿಹಾಸ History Today ಜೂನ್ 17

ಇಂದಿನ ಇತಿಹಾಸ 

ಜೂನ್ 17

 ಬೆಂಬಲಿಗರ ರಂಪಾಟ, ತೀವ್ರ ವಿರೋಧದ ನಡುವೆ ಮುಜರಾಯಿ ಮತ್ತು ವಸತಿ ಖಾತೆ ಸಚಿವ ಎಸ್.ಎನ್.ಕೃಷ್ಣಯ್ಯ ಶೆಟ್ಟಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು.

2009: ರೈಲಿನಲ್ಲಿದ್ದ ಪ್ರಯಾಣಿಕರನ್ನು ಮಾರಕಾಸ್ತ್ರಗಳಿಂದ ಬೆದರಿಸಿ ಡಕಾಯತಿ ನಡೆಸಿದ್ದ ಆರು ಜನರ ಪೈಕಿ ಇಬ್ಬರನ್ನು ಧಾರವಾಡದ ರೈಲ್ವೆ ನಿಲ್ದಾಣದಲ್ಲಿ ಹಾಗೂ ಇನ್ನಿಬ್ಬರನ್ನು ಲೋಂಡಾದಲ್ಲಿ ಪೊಲೀಸರು  ನಸುಕಿನ ಜಾವ ಬಂಧಿಸಿದರು. ಧಾರವಾಡ ರೈಲ್ವೆ ನಿಲ್ದಾಣದಲ್ಲಿ ನಾಲ್ವರು ಡಕಾಯಿತರು ಕಲ್ಲು ತೂರಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಪೊಲೀಸರು ಗುಂಡು ಹಾರಿಸಿ ಇಬ್ಬರನ್ನು ಬಂಧಿಸಿದರು. ಬಂಧಿತರಿಂದ ಎರಡು ಮೊಬೈಲ್ ಸೆಟ್‌ಗಳು, 2000 ರೂ. ನಗದು ಹಾಗೂ ಮಾರಕಾಸ್ತ್ರಗಳನ್ನು ವಶಪಡಿಸಿ ಕೊಳ್ಳಲಾಯಿತು. ಹುಬ್ಬಳ್ಳಿಯ ರಾಮನಗರದ ನಾಗರಾಜ ಬಾಬು ಪವಾರ (18), ಧಾರವಾಡ ತಾಲ್ಲೂಕಿನ ಪುಡಕಲಟ್ಟಿ ಗ್ರಾಮದ ಸಂತೋಷ ಬಸಯ್ಯ ಪೂಜಾರ (19) ಬಂಧಿತರು. ಪವಾರ ಕಾಲಿಗೆ ಎರಡು ಗುಂಡುಗಳು ತಾಗಿದರೆ, ಸಂತೋಷನ ಕಾಲಿಗೆ ಒಂದು ಗುಂಡು ತಾಗಿತು.

2009: ರಾಜ್ಯದ ವಿವಿಧೆಡೆ ಸುರಿದ ಮಳೆ ಹಾಗೂ ಸಿಡಿಲಿನ ಅಬ್ಬರಕ್ಕೆ ಒಟ್ಟು ಏಳು ಮಂದಿ ಬಲಿಯಾದರು. ಗುಲ್ಬರ್ಗ ಜಿಲ್ಲೆಯಲ್ಲಿ ಸಿಡಿಲು ಬಡಿದು ಐವರು ಮೃತರಾದರು. ಬಾಗಲಕೋಟೆಯ ಗದ್ದನಕೇರಿಯಲ್ಲಿ ಒಬ್ಬ ವೃದ್ಧೆ ಮನೆ ಕುಸಿತದಿಂದ ಸಾವಿಗೀಡಾದರು. ವಿಜಾಪುರ ಜಿಲ್ಲೆಯ ಬಸವನ ಬಾಗೇವಾಡಿಯ ಬ್ಯಾಕೋಡ ಗ್ರಾಮದ ಬಳಿ ಬಾಲಕನೊಬ್ಬ ಹಳ್ಳ ದಾಟುವಾಗ ನೀರು ಪಾಲಾದ. ಗುಲ್ಬರ್ಗ ತಾಲ್ಲೂಕಿನ ಭೂಪಾಲತೆಗನೂರ ಹೊಲವೊಂದರಲ್ಲಿ ಕೆಲಸ ಮಾಡುತ್ತಿದ್ದ  ಚಂದ್ರಕಾಂತ ಜಟ್ಟೆಪ್ಪ (25) ಹಾಗೂ ಅನಿಲ್ ಕುಪೇಂದ್ರ (19) ಎಂಬವರು ಮಳೆಯಿಂದ ರಕ್ಷಣೆ ಪಡೆಯಲು ಮರದ ಕೆಳಗೆ ಆಶ್ರಯ ಪಡೆದಾಗ ಸಿಡಿಲು ಬಡಿದು ಸ್ಥಳದಲ್ಲಿಯೇ ಮೃತರಾದರು. ಅಫಜಲಪೂರ ತಾಲ್ಲೂಕಿನ ಚಿಂಚೋಳಿ ಗ್ರಾಮದಲ್ಲಿ ಮದುವೆ ಸಮಾರಂಭದಲ್ಲಿ ಪಾಲ್ಗೊಂಡು ಮರಳುತ್ತಿದ್ದ ಮಾಶಾಳ ಗ್ರಾಮದ ಕಾಶಿನಾಥ ಭೀಮಶಾ ಭಜಂತ್ರಿ (55) ಹಾಗೂ ಗುಲ್ಬರ್ಗ ಸಂತ್ರಸವಾಡಿಯ ರಾಣಪ್ಪ ಭೀಮಶಾ ಚೌಧ (56) ಸಿಡಿಲಿಗೆ ಬಲಿಯಾದರು.

2009: ವಿಶ್ವದ ಬಹುದೊಡ್ಡ ಸೇನಾಪಡೆಯ ಮುಖ್ಯಸ್ಥರೂ ಆದ ಅಧ್ಯಕ್ಷ ಬರಾಕ್ ಒಬಾಮ ಅವರ ಮೇಲೆ 'ಬಂಡುಕೋರ'ನೊಬ್ಬ 'ದಾಳಿ' ನಡೆಸಿದ! ಕೂಡಲೇ 'ಕಠೋರ' ನಿರ್ಧಾರ ಕೈಗೊಂಡ ಅವರು ಆ ಉಗ್ರನನ್ನು ಕ್ಷಣಮಾತ್ರದಲ್ಲಿ ಹೊಸಕಿ ಹಾಕಿದರು! ಈ ಆಕ್ರಮಣ ನಡೆದದ್ದು ಸದಾ ಸರ್ಪಗಾವಲಿರುವ ಶ್ವೇತಭವನದಲ್ಲಿ.  ಈ ಭಯೋತ್ಪಾದಕ ಯಾರು ಗೊತ್ತೆ? ನೊಣದ ಜಾತಿಗೆ ಸೇರಿದ ಒಂದು ಕ್ರಿಮಿ! ಸಿಎನ್‌ಬಿಸಿ ಸುದ್ದಿವಾಹಿನಿಗೆ ಸಂದರ್ಶನ ನೀಡುತ್ತಿದ್ದ ವೇಳೆ ಒಬಾಮ ಅವರನ್ನು ನೊಣ ಸುತ್ತುವರೆಯಿತು.  'ಇಲ್ಲಿಂದ ತೊಲಗು' ಎಂದು ಅವರು 'ಆಜ್ಞೆ'ಯಿತ್ತರೂ ಅದು 'ಕೇರ್' ಮಾಡಲಿಲ್ಲ. ಕೊನೆಗೆ ಒಬಾಮ ಹಿಂಸೆಯ ಹಾದಿ ತುಳಿದು 'ವೈರಿ ಸಂಹಾರ' ನಡೆಸಿದರು. ಕ್ಷಣಾರ್ಧದಲ್ಲಿ ನಡೆದ ಈ 'ಯುದ್ಧ'ವನ್ನು ಇಡಿಯಾಗಿ ಕ್ಯಾಮರಾಗಳು ಸೆರೆಹಿಡಿದವು. ನಂತರ ಸಂದರ್ಶಕರನ್ನು ಉದ್ದೇಶಿಸಿ ಒಬಾಮಾ 'ಈಗ ನಾವು ಯಾವ ಪ್ರಶ್ನೆಯಲ್ಲಿದ್ದೆವು? ಬಹಳಾ ಚೆನ್ನಾಗಿತ್ತಲ್ಲ. ನಾನು ನೊಣ ಹಿಡಿದೆ' ಎಂದರು.

2009: ಬೆಂಬಲಿಗರ ರಂಪಾಟ, ತೀವ್ರ ವಿರೋಧದ ನಡುವೆ ಮುಜರಾಯಿ ಮತ್ತು ವಸತಿ ಖಾತೆ ಸಚಿವ ಎಸ್.ಎನ್.ಕೃಷ್ಣಯ್ಯ ಶೆಟ್ಟಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು.

2009: ಮುಂಬೈ ಸೂಚ್ಯಂಕ ವಹಿವಾಟಿನಲ್ಲಿ 435 ಅಂಶಗಳಷ್ಟು ಕುಸಿತ ಕಂಡಿತು. ಇದು ಈ ವರ್ಷದ ನಾಲ್ಕನೇ ಅತಿ ದೊಡ್ಡ ಕುಸಿತ. ಸದ್ಯದ ಆರ್ಥಿಕ ಬಿಕ್ಕಟ್ಟು ಸರಿಹೋಗಲು ದೀರ್ಘ ಸಮಯ ಬೇಕಾಗಬಹುದು ಎಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ಹೇಳಿದ್ದು ಹೂಡಿಕೆದಾರರಲ್ಲಿ ಮತ್ತಷ್ಟು ಆತಂಕ ಸೃಷ್ಟಿಸಿ ಈ ಕುಸಿತಕ್ಕೆ ಕಾರಣವಾಯಿತು. ದಿನದ ಕೊನೆಯ ಅರ್ಧ ಗಂಟೆ ವಹಿವಾಟಿನಲ್ಲಿ ಒತ್ತಡಕ್ಕೆ ಒಳಗಾದ ಹೂಡಿಕೆದಾರರು ಲಾಭ ಮಾಡಿಕೊಳ್ಳಲು ಭಾರಿ ಪ್ರಮಾಣದಲ್ಲಿ ಷೇರುಗಳನ್ನು ಮಾರಾಟ ಮಾಡಿದರು. 435.07 ಅಂಶಗಳಷ್ಟು ಕುಸಿತ ಕಂಡು 14,522.84 ಅಂಶಗಳಿಗೆ ಸೂಚ್ಯಂಕ ಸ್ಥಿರಗೊಂಡಿತು.

2009: ನೀವು ಅಕಾಲ ನರೆ ಸಮಸ್ಯೆಗೆ ತುತ್ತಾಗಿದ್ದೀರಾ? ಅದಕ್ಕೆ ಕಾರಣ ಮಾನಸಿಕ ಒತ್ತಡ ಎಂದು ಸಂಶೋಧನೆಯೊಂದು ತಿಳಿಸಿತು. ತೀವ್ರ ಒತ್ತಡದಿಂದಾಗಿ ಡಿಎನ್‌ಎಗೆ ತೊಂದರೆಯಾಗಿ ಕೂದಲನ್ನು ಕಪ್ಪಗಿರಿಸುವ ಜೀವಕೋಶಗಳು ಉತ್ಪತ್ತಿಯಾಗುವುದಿಲ್ಲ. ಹೀಗಾಗಿ  ಒತ್ತಡದಿಂದ ದೂರವಿದ್ದಷ್ಟೂ ನರೆ  ಆವರಿಸುವುದಿಲ್ಲ ಎಂದು ಟೋಕಿಯೊ ವೈದ್ಯಕೀಯ ಮತ್ತು ದಂತವಿಜ್ಞಾನ ವಿಶ್ವವಿದ್ಯಾಲಯದ ಎಮಿ ನಿಶಿಮುರಾ ಪ್ರಕಟಿಸಿದರು. ಜೀವಕೋಶವೊಂದು ಪ್ರತಿ ದಿನ 1 ಲಕ್ಷಕ್ಕೂ ಹೆಚ್ಚು ಡಿಎನ್‌ಎ ನಾಶಕಗಳ ವಿರುದ್ಧ ಹೋರಾಡುತ್ತದೆ. ಇಂಥ ಜೀವಕೋಶಗಳು ನಾಶವಾದರೆ ಡಿಎನ್‌ಎ ಗುಣಮಟ್ಟ ಕೂಡ ಕುಸಿಯುತ್ತದೆ. ಹೆಚ್ಚಾಗಿ ಒತ್ತಡದಿಂದ ಡಿಎನ್‌ಎ ಶಕ್ತಿ ಕುಗ್ಗುತ್ತದೆ ಎಂದು ನಿಶೀಮೊರಾ ತಿಳಿಸಿದರು. ಈ ಸಂಶೋಧನೆಯ ವರದಿ ಸೆಲ್ ಜರ್ನಲ್‌ನಲ್ಲಿ ಪ್ರಕಟವಾಯಿತು.

2009: ವಿಖ್ಯಾತ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಪ್ರತಿಪಾದಿಸಿದ 'ಹಾಕಿಂಗ್ ವಿಕಿರಣ'ಗಳು ವಾಸ್ತವವಾಗಿಯೂ ಅಸ್ತಿತ್ವದಲ್ಲಿವೆಯೇ ಎಂಬುದನ್ನು ಪತ್ತೆಹಚ್ಚಲು ನೆರವಾಗುವ 'ಕೃತಕ ಕಪ್ಪುಕುಳಿ'ಯನ್ನು ತಾವು ಸೃಷ್ಟಿಸಿರುವುದಾಗಿ ವಿಜ್ಞಾನಿಗಳು ಲಂಡನ್‌ನಲ್ಲಿ  ಪ್ರಕಟಿಸಿದರು. ಶೂನ್ಯಕ್ಕಿಂತ ಅತ್ಯಂತ ಕಡಿಮೆ ಮಟ್ಟಕ್ಕೆ ತಂಪು ಮಾಡಿದ ರುಬಿಡಿಯಮ್ ಪರಮಾಣುಗಳನ್ನು ಶಬ್ದಕ್ಕಿಂತ ಹೆಚ್ಚಿನ ವೇಗದಲ್ಲಿ ಕಾಂತಕ್ಷೇತ್ರದೆಡೆಗೆ ಸೆಳೆಯವ ಮೂಲಕ ಕೃತಕ ಕಪ್ಪುಕುಳಿಗಳನ್ನು ಸೃಷ್ಟಿಸಬಹುದು ಎಂದು ಟೆಕ್ನಿಯಾನ್- ಇಸ್ರೇಲ್ ತಾಂತ್ರಿಕ ಸಂಸ್ಥೆಯ ವಿಜ್ಞಾನಿಗಳು ಹೇಳಿದರು. ವಸ್ತುವಿನ ದ್ರವ್ಯರಾಶಿ ಅತ್ಯಧಿಕ ಮಟ್ಟಕ್ಕೆ ಸಂಚಯವಾಗಿ ಇಡೀ ದ್ರವ್ಯರಾಶಿ ಏಕೈಕ ಬಿಂದುವಿನಲ್ಲಿ ಸಾಂದ್ರವಾದಾಗ ಸೃಷ್ಟಿಯಾಗುವ ಕಪ್ಪು ಕುಳಿಗಳು ಕಾಲಕ್ರಮೇಣ ಅಗೋಚರವಾಗುವ ಗುಣಲಕ್ಷಣ ಹೊಂದಿವೆ ಎಂದು 30 ವರ್ಷಗಳ ಹಿಂದೆ ಹಾಕಿಂಗ್ ಸಿದ್ಧಾಂತ ಮಂಡಿಸಿದ್ದರು.

 2009: ಒಂದು ತಿಂಗಳಿನಿಂದ ತಮ್ಮ ದೇಶದಲ್ಲಿ ಭಾರತೀಯ ವಿದ್ಯಾರ್ಥಿಗಳ ಮೇಲೆ ನಡೆದ ದಾಳಿಗಳಿಗೆ ಜನಾಂಗೀಯ ದ್ವೇಷ ಕಾರಣ ಎಂಬುದನ್ನು ಭಾರತದಲ್ಲಿನ ಆಸ್ಟ್ರೇಲಿಯಾದ ರಾಯಭಾರಿ ಜಾನ್ ಮೆಕಾರ್ತಿ ಒಪ್ಪಿಕೊಂಡರು. ಇಂತಹ ಘಟನೆಗಳನ್ನು ಕೊನೆಗಾಣಿಸಿ ಭವಿಷ್ಯದಲ್ಲಿ ಅವು ಮರುಕಳಿಸದಂತೆ ಮಾಡಲು ಸರ್ಕಾರ ಎಲ್ಲಾ ಅಗತ್ಯ ಕ್ರಮಗಳನ್ನೂ ಕೈಗೊಂಡಿದೆ ಎಂದು ಅವರು ಹೇಳಿದರು.

2009: ವಿಧಾನಪರಿಷತ್ತಿನ ಪ್ರತಿಪಕ್ಷದ ನಾಯಕರಾಗಿದ್ದ ಹಿರಿಯ ಸಮಾಜವಾದಿ ಎಂ.ಪಿ.ಈಶ್ವರಪ್ಪ (81) ಈದಿನ ಹೃದಯಾಘಾತದಿಂದ ನಿಧನರಾದರು. ಕರ್ನಾಟಕ ಸೋಷಿಯಲಿಸ್ಟ್ ಪಕ್ಷದ ಸ್ಥಾಪಕರಲ್ಲಿ ಒಬ್ಬರಾಗಿದ್ದ  ಅವರು 1963ರಿಂದ 67ರವರೆಗೆ ಪರಿಷತ್ತಿನಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದರು. ನಂತರ ಅವರು ಕಾಂಗ್ರೆಸ್ ಪಕ್ಷ ಸೇರಿದರು. ಅವರು ಕರ್ನಾಟಕ ಗೃಹ ಮಂಡಲಿಯ ಅಧ್ಯಕ್ಷರಾಗಿ, ಓಎನ್‌ಜಿಸಿ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು.

2009: ಕಂಪ್ಲಿಗೆ ಸಮೀಪದ ನಂ.10 ಮುದ್ದಾಪುರ ಗ್ರಾಮದ ಬಯಲಾಟ ನಿರ್ದೇಶಕರಾಗಿದ್ದ ಎಚ್. ಪಂಪಾಪತಿ ಮಾಸ್ತರ್ (65) ಹೃದಯಾಘಾತದಿಂದ ಮೃತರಾದರು. ಪಂಪಾಪತಿ ಇಲ್ಲಿಯವರೆಗೆ 150 ಬಯಲಾಟಗಳ ನಿರ್ದೇಶನ ಮಾಡಿದ್ದರು. ಜತೆಗೆ ಸಂಗೀತ ನಿರ್ದೇಶಕರಾಗಿಯೂ ಕೆಲಸ ನಿರ್ವಹಿಸಿದ್ದರು. 30 ಬಯಲಾಟಗಳಲ್ಲಿ ಸ್ವತಃ ಅಭಿನಯಿಸಿದ್ದಲ್ಲದೆ, 30ಕ್ಕೂ ಹೆಚ್ಚು ಬಯಲಾಟಗಳಲ್ಲಿ ಮಹಿಳಾ ಪಾತ್ರಗಳಲ್ಲಿ ಅಭಿನಯಿಸಿ ಈ ಭಾಗದಲ್ಲಿ ಎಲ್ಲಾ ಬಯಲಾಟಪ್ರಿಯರ ಮನಸೂರೆಗೊಂಡಿದ್ದರು.

2009: ಉದ್ದೀಪನಾ ಮದ್ದು ಸೇವಿಸಿದ್ದನ್ನು ಒಪ್ಪಿಕೊಂಡ ಸೈಕ್ಲಿಸ್ಟ್ ಟೇಲರ್ ಹ್ಯಾಮಿಲ್ಟನ್ ಮೇಲೆ ಅಮೆರಿಕಾದ ಉದ್ದೀಪನಾ ಮದ್ದು ತಡೆ ಘಟಕವು (ಯುಎಸ್‌ಎಡಿಎ) ಎಂಟು ವರ್ಷಗಳ ಅವಧಿಗೆ ನಿಷೇಧ ಹೇರಿತು. 38 ವರ್ಷ ವಯಸ್ಸಿನ ಹ್ಯಾಮಿಲ್ಟನ್ ಮದ್ದು ಸೇವಿಸಿ ಸ್ಪರ್ಧಿಸಿದ್ದಾಗಿ ಯುಎಸ್‌ಎಡಿಎ ಮುಂದೆ ತಪ್ಪೊಪ್ಪಿಕೊಂಡಿದ್ದರು. ಆದ್ದರಿಂದ ಅವರ ವಿರುದ್ಧ ಶಿಕ್ಷೆಯನ್ನು ಪ್ರಕಟಿಸಲಾಯಿತು. 8 ವರ್ಷಗಳ ನಿಷೇಧದಿಂದಾಗಿ ಹ್ಯಾಮಿಲ್ಟನ್ ಅವರ ಕ್ರೀಡಾ ಭವಿಷ್ಯವೇ ಕೊನೆಗೊಂಡಂತಾಯಿತು. 2004ರ ಒಲಿಂಪಿಕ್ ಕ್ರೀಡಾಕೂಟದಲ್ಲಿ ಸ್ವರ್ಣ ಗೆದ್ದಿದ್ದ ಹ್ಯಾಮಿಲ್ಟನ್ ಕಳೆದ ಏಪ್ರಿಲ್‌ನಲ್ಲಿಯೇ ತಾವು ಬಳಸುವ ಔಷಧಿಯಲ್ಲಿ ನಿಷೇಧಿತ ಮದ್ದಿನ ಅಂಶವಿದೆ ಎನ್ನುವುದನ್ನು ಪ್ರಕಟಿಸಿದ್ದರು.

2008: ವಿತರಣೆ ಚೀಟಿ ಪಡೆದರೂ ರಸಗೊಬ್ಬರ ನೀಡುತ್ತಿಲ್ಲ ಎಂದು ಆರೋಪಿಸಿ ದಾವಣಗೆರೆಯ ಗಾಂಧಿ ವೃತ್ತದಲ್ಲಿ  ರೈತರು ದಿಡೀರ್ ಪ್ರತಿಭಟನೆ ನಡೆಸಿದರು.

2007: ತೆರೆ ಕಂಡ ಮೊದಲ ದಿನವೇ 60 ಲಕ್ಷ ರೂಪಾಯಿ (5,60,00 ರಿಂಗೆಟ್ಸ್) ಸಂಗ್ರಹಿಸುವ ಮೂಲಕ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ `ಶಿವಾಜಿ' ಮಲೇಷ್ಯಾದಲ್ಲೂ ಹಿಂದಿನ ದಾಖಲೆ ಮುರಿದು ಹೊಸ ದಾಖಲೆ ಸೃಷ್ಟಿಸಿತು.

2007: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರನ್ನು ಎಚ್ಐವಿ/ಏಡ್ಸ್ ಬಗ್ಗೆ ಜಾಗೃತಿ ಉಂಟುಮಾಡಲು ಅವರು ನೀಡಿದ ಕೊಡುಗೆಯನ್ನು ಪರಿಗಣಿಸಿ `ಸಿಲ್ವರ್ ಸ್ಟಾರ್' ಪ್ರಶಸ್ತಿ ನೀಡಿ ಗೌರವಿಸಲಾಯಿತು. ಲಂಡನ್ನಿನ ಬ್ರಿಟನ್ ವಿದೇಶ ಮತ್ತು ಕಾಮನ್ವೆಲ್ತ್ ಕಚೇರಿಯ ದರ್ಬಾರ್ ಕೋರ್ಟಿನಲ್ಲಿ ಈದಿನ ರಾತ್ರಿ ನಡೆದ ಕಾರ್ಯಕ್ರಮದಲ್ಲಿ ಬ್ರಿಟನ್ ಸಂಸತ್ತಿನ ಕೆಳಮನೆನಾಯಕ ಜಾಕ್ ಸ್ಟ್ರಾ 31ರ ಹರೆಯದ ಶಿಲ್ಪಾ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಲೇಬರ್ ಪಕ್ಷದ ಸಂಸದ ಕೀತ್ ವಾಜ್ ಅವರು ಚುನಾಯಿತಗೊಂಡ 20ನೇ ವರ್ಷಾಚರಣೆಯ ಪ್ರಯುಕ್ತ ಸಮಾರಂಭ ಏರ್ಪಡಿಸಲಾಗಿತ್ತು

2007: ಸ್ಕಾಟ್ಲೆಂಡಿನ 22 ವರ್ಷ ವಯಸ್ಸಿನ ಹವ್ಯಾಸಿ ಫುಟ್ಬಾಲ್ ಆಟಗಾರ ಅಲೆಕ್ಸ್ ಮೆಕ್ ಗ್ರೆಗೊರ್ ಅವರು ಪಂದ್ಯದ ಆರಂಭದ ಮೂರೇ ನಿಮಿಷದ ಅವಧಿಯಲ್ಲಿ `ಹ್ಯಾಟ್ರಿಕ್' ಸಾಧನೆ ಮಾಡಿ, ಗಿನ್ನೆಸ್ ವಿಶ್ವ ದಾಖಲೆಗೆ ಸೇರ್ಪಡೆಯಾದರು. ಲಂಡನ್ನಿನ ಫುಟ್ಬಾಲ್ ಲೀಗ್ ಪಂದ್ಯವೊಂದರಲ್ಲಿ ಕುಲ್ಲೆನ್ ಕ್ಲಬ್ ವಿರುದ್ಧ ಬಿಷಪ್ ಮಿಲ್ ವಿಲ್ಲಾ ಕ್ಲಬ್ ತಂಡದ ಪರವಾಗಿ ಆಡಿದ ಅಲೆಕ್ಸ್ ತೀರ ಕಡಿಮೆ ಅವಧಿಯಲ್ಲಿ ಮೂರು ಬಾರಿ ಚೆಂಡನ್ನು ಗುರಿ ಮುಟ್ಟಿಸಿ, ಗಮನ ಸೆಳೆದರು. ಶೌಚಾಲಯ ದುರಸ್ತಿ ಮಾಡುವ ಉದ್ಯೋಗಿಯಾದ ಅಲೆಕ್ಸ್ ಈ ಪಂದ್ಯದಲ್ಲಿ ಒಟ್ಟು ನಾಲ್ಕು ಗೋಲು ಗಳಿಸಿದರು. ವಿಜಯ ಸಾಧಿಸಿದ ಬಿಷಪ್ ಮಿಲ್ ಪರ ಹನ್ನೊಂದು ಗೋಲುಗಳು ದಾಖಲಾದವು. ಈ ಸಾಧನೆಯೊಂದಿಗೆ ಅಲೆಕ್ಸ್ ಹೆಸರು ಗಿನ್ನೆಸ್ ವಿಶ್ವ ದಾಖಲೆ ಪುಸ್ತಕ ಸೇರಿತು.

2007: ಮರಗಳನ್ನು ಸ್ಥಳಾಂತರಿಸುವ ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್ಸಿಎಲ್)ದ ಯೋಜನೆ  ಯಶಸ್ಸಿನತ್ತ ಸಾಗುವ ಸಾಧ್ಯತೆ ಕಂಡುಬಂದಿತು. ಎಂ.ಜಿ.ರಸ್ತೆಯಿಂದ ಪಕ್ಕದ ಮಾಣಿಕ್ ಷಾ ಪೆರೇಡ್ ಮೈದಾನಕ್ಕೆ ಸ್ಥಳಾಂತರಗೊಳಿಸಲಾದ ಐದು ಮರಗಳಲ್ಲಿ ಮೂರರಲ್ಲಿ ಹೊಸ ಚಿಗುರು ಮೂಡಿದ್ದು ಬೆಳಕಿಗೆ ಬಂದಿತು. ಮರಗಳ ಸ್ಥಳಾಂತರ ಕಾರ್ಯ ಮೇ 28ರಿಂದ ಪ್ರಾರಂಭವಾಗಿತ್ತು. ಮೊದಲ ದಿನ ಸತತ ಆರು ಗಂಟೆಗಳ ಕಾಲ ನಡೆದ ಕಾರ್ಯಾಚರಣೆಯಲ್ಲಿ ಕ್ರೇನ್ಗಳ ಸಹಾಯದಿಂದ ತುಬುಯಿಯಾ ರೋಸಾ ಜಾತಿಯ ಒಂದು ಮರವನ್ನು ಸ್ಥಳಾಂತರ ಮಾಡಲಾಗಿತ್ತು. ಬಳಿಕ ಹಂತ ಹಂತವಾಗಿ ಎಂ.ಜಿ. ರಸ್ತೆಯಿಂದ ಈ ಮೈದಾನಕ್ಕೆ ಒಟ್ಟು ಐದು ಮರಗಳನ್ನು ಸ್ಥಳಾಂತರಿಸಲಾಗಿತ್ತು. ಚೆನ್ನೈನ `ಲ್ಯಾಂಡ್ ಸ್ಕೇಪ್ ಆರ್ಕಿಟೆಕ್ಟ್ಸ್' ಸಂಸ್ಥೆಯ ಸಿಬ್ಬಂದಿ ಈ ಕೆಲಸವನ್ನು ನಿರ್ವಹಿಸಿದ್ದರು. ಬೆಂಗಳೂರು ಪರಿಸರ ಸಂಘ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗಳು ಮರಗಳನ್ನು ಸ್ಥಳಾಂತರಿಸುವ ಕಾರ್ಯಕ್ಕೆ ಸಹಭಾಗಿತ್ವ ನೀಡಿದ್ದವು.

2007: ಪುಣೆಯ ಗ್ರಾಮವೊಂದರಲ್ಲಿ ಇಕ್ಕಟ್ಟಾದ ಕೊಳವೆಬಾವಿಯೊಳಗೆ ಬಿದ್ದ ಶಿರೂರ್ ತಾಲ್ಲೂಕಿನ ವಡಗಾಂವ್ ರಸಾಯಿ ಗ್ರಾಮದ ಬಾಲಕ ಸೋನು ಶಿವಾಜಿ ದೇಶಮುಖ್ ಎಂಬ ಐದು ವರ್ಷದ ಬಾಲಕನನ್ನು ಮೇಲಕ್ಕೆ ಕರೆತರಲಾಯಿತು. ಆದರೆ ಆತ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ. ಈತ 150 ಅಡಿ ಆಳದ ಕೊಳವೆಬಾವಿಯಲ್ಲಿ ಬಿದ್ದು, 20 ಅಡಿ ಅಂತರದಲ್ಲೇ ಸಿಕ್ಕಿಹಾಕಿಕೊಂಡ. ಏಳು ತಾಸುಗಳ ಹರಸಾಹಸದ ನಂತರ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಬಾಲಕನನ್ನು ರಕ್ಷಿಸಿ ಮೇಲಕ್ಕೆ  ಕರೆತಂದು ಆಸ್ಪತ್ರೆಗೆ ಸೇರಿಸಲಾಗಿತ್ತು.

2007: ಆಫ್ಘಾನಿಸ್ಥಾನದ ರಾಜಧಾನಿ ಕಾಬೂಲಿನಲ್ಲಿ ಸಂಭವಿಸಿದ ಮೂರು ಸ್ಫೋಟಗಳಲ್ಲಿ ಪೊಲೀಸರು ಸೇರಿ ಒಟ್ಟು 35 ಜನ ಬಲಿಯಾದರು. ಈ ಕೃತ್ಯಕ್ಕೆ ತಾನೇ ಕಾರಣ ಎಂದು ತಾಲಿಬಾನ್ ಉಗ್ರಗಾಮಿಗಳು ಘೋಷಿಸಿದರು.

 2006: ದುಬೈಯಲ್ಲಿ ನಡೆದ ಐಐಎಫ್ಐ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಂಜಯ ಲೀಲಾ ಬನ್ಸಾಲಿ ನಿರ್ದೇಶನದ ಹಿಂದಿ ಚಿತ್ರ `ಬ್ಲ್ಯಾಕ್' ಪ್ರಶಸ್ತಿಗಳನ್ನು ಕೊಳ್ಳೆ ಹೊಡೆಯಿತು. ಉತ್ತಮ ಚಿತ್ರ, ಉತ್ತಮ ನಿದರ್ೆಶಕ, ಉತ್ತಮ ನಟ (ಅಮಿತಾಭ್ ಬಚ್ಚನ್), ಉತ್ತಮ ನಟಿ (ರಾಣಿ ಮುಖರ್ಜಿ), ಉತ್ತಮ ಪೋಷಕ ನಟಿ (ಆಯೇಷಾ ಕಪೂರ್), ಉತ್ತಮ ಛಾಯಾಗ್ರಹಣ, ಉತ್ತಮ ಸಂಕಲನ, ಉತ್ತಮ ಧ್ವನಿ ಗ್ರಹಣ ಮತ್ತು ಉತ್ತಮ ಹಿನ್ನೆಲೆ ಸಂಗೀತ ಪ್ರಶಸ್ತಿಗಳು `ಬ್ಲ್ಯಾಕ್'ಗೆ ಲಭಿಸಿದವು.

2006: ಮರಾಠಿಯ ಹೆಸರಾಂತ ಸಂಗೀತಗಾರ ಸ್ನೇಹಲ್ ಭಾಟ್ಕರ್ ಮತ್ತು ಹಿಂದಿಯ ಪ್ರಸಿದ್ಧ ಹಿನ್ನೆಲೆ ಗಾಯಕ ಮನ್ನಾ ಡೇ ಅವರನ್ನು 2004-05ನೇ ಸಾಲಿನ ಪ್ರತಿಷ್ಠಿತ ಲತಾ ಮಂಗೇಶ್ಕರ್ ಪ್ರಶಸ್ತಿಗೆ ಮಹಾರಾಷ್ಟ್ರ ಸರ್ಕಾರವು ಆಯ್ಕೆ ಮಾಡಿತು.

1980: ಅಮೆರಿಕದ ಟೆನಿಸ್ ಆಟಗಾರ್ತಿ ವೀನಸ್ ವಿಲಿಯಮ್ಸ್ ಜನನ.

1973: ಭಾರತದ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಜನ್ಮದಿನ. ಇವರು ಮಹೇಶ್ ಭೂಪತಿ ಅವರೊಂದಿಗೆ ಫ್ರೆಂಚ್ ಓಪನ್, ವಿಂಬಲ್ಡನ್ ಡಬಲ್ಸ್ ಪ್ರಶಸ್ತಿಗಳನ್ನು ಗೆದ್ದುಕೊಂಡವರು.

1972: ವಾಟರ್ ಗೇಟ್ ಕಟ್ಟಡದಲ್ಲಿದ್ದ ಡೆಮಾಕ್ರಟಿಕ್ ಪಾರ್ಟಿ ನ್ಯಾಷನಲ್ ಕಮಿಟಿಯ ಕೇಂದ್ರ ಕಚೇರಿಗೆ ನುಗ್ಗಿದ್ದಕ್ಕಾಗಿ ಐವರನ್ನು ವಾಷಿಂಗ್ಟನ್ ಪೊಲೀಸರು ಬಂಧಿಸಿದರು. ಈ ಪ್ರಕರಣ ಉಲ್ಬಣಿಸುತ್ತಾ ಹೋಗಿ `ವಾಟರ್ಗೇಟ್ ಹಗರಣ' ಎಂದೇ ಖ್ಯಾತಿ ಪಡೆಯಿತು. ಅಷ್ಟೇ ಅಲ್ಲ 1974ರಲ್ಲಿ ಅಮೆರಿಕದ ಅಧ್ಯಕ್ಷ ರಿಚರ್ಡ್ ನಿಕ್ಸನ್ ರಾಜೀನಾಮೆಯೊಂದಿಗೆ ಪರ್ಯವಸಾನಗೊಂಡಿತು.

1950: ಷಿಕಾಗೋದಲ್ಲಿ ಮೊದಲ ಬಾರಿಗೆ ಮೂತ್ರಪಿಂಡ ಕಸಿ ಚಿಕಿತ್ಸೆ.

1939: ವಿಚಾರವಾದಿ, ಚಿಂತಕ, ಸಾಹಿತಿ ಡಾ. ಜಿ. ರಾಮಕೃಷ್ಣ ಅವರು ಸುಬ್ರಹ್ಮಣ್ಯಂ- ನರಸಮ್ಮ ದಂಪತಿಯ ಪುತ್ರನಾಗಿ ಮಾಗಡಿ ಬಳಿಯ ಕೆಂಪಸಾಗರದಲ್ಲಿ ಜನಿಸಿದರು.

1933: ಭಾರತದಲ್ಲಿ ಅಸಹಕಾರ ಚಳವಳಿ ಮುಕ್ತಾಯ.

1929: ಟೈಗ್ರನ್ ವಿ. ಪೆಟ್ರೋಸಿಯನ್ (1924-84) ಜನ್ಮದಿನ. ಈ ಸೋವಿಯತ್ ಚೆಸ್ ಗ್ರ್ಯಾಂಡ್ ಮಾಸ್ಟರ್ 1963ರಲ್ಲಿ ಜಾಗತಿಕ ಚೆಸ್ ಚಾಂಪಿಯನ್ ಶಿಪ್ ಗೆದ್ದುಕೊಂಡರು. 1969ರಲ್ಲಿ ತನ್ನ ಜನ್ಮದಿನದಂದೇ ಬೋರಿಸ್ ಸ್ಪಾಸ್ಕಿ ಎದುರು ಸೋತು ವಿಶ್ವ ಚೆಸ್ ಚಾಂಪಿಯನ್ ಶಿಪ್ ಕಳೆದುಕೊಂಡರು.

1917: ಅಹಮದಾಬಾದಿನ ಸಬರಮತಿ ಆಶ್ರಮದ ಹೃದಯಕುಂಜದಲ್ಲಿ ಮಹಾತ್ಮ ಗಾಂಧಿ ಮತ್ತು ಕಸ್ತೂರಿಬಾ ವಾಸ ಆರಂಭ.

1867: ಗ್ಲಾಸ್ಗೋದಲ್ಲಿ ಜೋಸೆಫ್ ಲಿಸ್ಟರ್ ತನ್ನ ಸಹೋದರಿ ಇಸಬೆಲ್ಲಾಳಿಗೆ ಸೆಪ್ಟಿಕ್ (ನಂಜು) ನಿರೋಧಕ ನೀಡಿ ಮೊತ್ತ ಮೊದಲ ಶಸ್ತ್ರಚಿಕಿತ್ಸೆ ನಡೆಸಿದ.

1858: ಗ್ವಾಲಿಯರ್ ಸಮೀಪದ ಕೊತಾಹ್-ಕಿ-ಸರಾಯ್ ರಣಾಂಗಣದಲ್ಲಿ ಅಶ್ವದಳ ಸೈನಿಕನಂತೆ ವೇಷ ಧರಿಸಿ ಹೋರಾಡುತ್ತಿದ್ದ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಬ್ರಿಟಿಷ್ ಸೈನಿಕ ಹುಸ್ಸಾರ್ನಿಂದ ಹತರಾದರು. ಹುಸ್ಸಾರ್ ಗೆ ತನ್ನಿಂದ ಹತಳಾದ ವ್ಯಕ್ತಿ ಯಾರೆಂದು ಗೊತ್ತಿರಲಿಲ್ಲ. ಆಕೆ ಲಕ್ಷ್ಮೀಬಾಯಿ ಎಂದು ಅರಿವಾಗುತ್ತಿದ್ದಂತೆಯೇ ಜನರಲ್ ಹ್ಯೂಗ್ ರೋಸ್ `ಇಲ್ಲಿ ಮಲಗಿರುವುದು ಬಂಡುಕೋರರ ನಡುವಿನ ಏಕೈಕ ಪುರುಷ' ಎಂದು ಹೇಳಿ ಆಕೆಗೆ ಗೌರವ ಸಲ್ಲಿಸಿದ.

1674: ಶಿವಾಜಿಯ ತಾಯಿ ಜೀಜಾಬಾಯಿ ನಿಧನ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement