My Blog List

Saturday, July 10, 2010

ಇಂದಿನ ಇತಿಹಾಸ History Today ಜೂನ್ 24

ಇಂದಿನ ಇತಿಹಾಸ

ಜೂನ್ 24

ಮಾಜಿ ಕಾನೂನು ಸಚಿವ ಎಚ್.ಆರ್.ಭಾರದ್ವಾಜ್ ಕರ್ನಾಟಕದ ನೂತನ ರಾಜ್ಯಪಾಲರಾಗಿ ನೇಮಕಗೊಂಡರು. ವಿವಿಧ ರಾಜ್ಯಗಳ ರಾಜ್ಯಪಾಲರುಗಳ ನೇಮಕ ಕುರಿತಂತೆ ರಾಷ್ಟ್ರಪತಿ ಭವನ ಅಧಿಕೃತ ಪ್ರಕಟಣೆ ಹೊರಡಿಸಿತು.

2009: ಮಾಜಿ ಕಾನೂನು ಸಚಿವ ಎಚ್.ಆರ್.ಭಾರದ್ವಾಜ್ ಕರ್ನಾಟಕದ ನೂತನ ರಾಜ್ಯಪಾಲರಾಗಿ ನೇಮಕಗೊಂಡರು. ವಿವಿಧ ರಾಜ್ಯಗಳ ರಾಜ್ಯಪಾಲರುಗಳ ನೇಮಕ ಕುರಿತಂತೆ ರಾಷ್ಟ್ರಪತಿ ಭವನ ಅಧಿಕೃತ ಪ್ರಕಟಣೆ ಹೊರಡಿಸಿತು. ಕರ್ನಾಟಕದ  ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರನ್ನು  ಮಧ್ಯಪ್ರದೇಶಕ್ಕೆ ವರ್ಗಾವಣೆ ಮಾಡಲಾಯಿತು.

2009:  ಜಮ್ಮು ಖತ್ರಾ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಬಸ್ ಪಂಥಾಲ್ ಬಳಿ ಪ್ರಪಾತಕ್ಕೆ ಉರುಳಿದ ಪರಿಣಾಮ 25 ಮಂದಿ ಮೃತರಾಗಿ 48 ಜನ ಗಾಯಗೊಂಡರು. ಖತ್ರಾದಿಂದ ಉಧಮ್‌ಪುರಕ್ಕೆ ತೆರಳುತ್ತಿದ್ದ ಬಸ್ ಚಾಲಕನ ನಿಯಂತ್ರಣ ಕಳೆದುಕೊಂಡು ಪ್ರಪಾತಕ್ಕೆ ಉರುಳಿತು ಎಂದು ಖತ್ರಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜುಗಲ್ ಕಿಶೋರ್ ತಿಳಿಸಿದರು.

2009: ಉತ್ತರ ಮಹಾರಾಷ್ಟ್ರದ ನಂದೂರ್‌ಬಾರ್ ಜಿಲ್ಲೆಯಲ್ಲಿ ಅಕ್ರಮವಾಗಿ ಭೂಮಿ ಖರೀದಿಸಿದ  ವಿಷಯಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಐಶ್ವರ್ಯ ರೈ, ಸಜ್ಲಾನ್ ಪವನ ವಿದ್ಯುತ್ ಕಂಪೆನಿಯ ಅಧ್ಯಕ್ಷೆ ತುಳಸಿಬಾಯಿ ಸೇರಿದಂತೆ ಹಲವರ ವಿರುದ್ಧ ದೂರು ದಾಖಲಿಸಲಾಯಿತು. ತಮ್ಮ ಜಮೀನನ್ನು 20,000 ರೂಪಾಯಿಗೆ ಖರೀದಿಸಿ, ಸಜ್ಲಾನ್ ಕಂಪೆನಿ ಹೆಸರಲ್ಲಿ ಅಕ್ರಮವಾಗಿ ವರ್ಗಾಯಿಸಲಾಗಿದೆ ಎಂದು ರೈತ ಆನಂದ ಲಾಲ್ ಠಾಕ್ರೆ ದೂರು ದಾಖಲಿಸಿದರು.  'ಜಮೀನನ್ನು ಸಜ್ಲಾನ್ ಕಂಪೆನಿಯವರು ಅಕ್ರಮವಾಗಿ ವಶಪಡಿಸಿಕೊಂಡು ಗಾಳಿಯಂತ್ರ ಜೋಡಿಸಿದ್ದಾರೆ' ಎಂದು ರೈತ ಠಾಕ್ರೆ ತಾವು ಪೊಲೀಸರಿಗೆ ನೀಡಿರುವ ದೂರಿನಲ್ಲಿ ವಿವರಿಸಿದರು. ಐಶ್ವರ್ಯ ರೈ ಅವರು ಸಜ್ಲಾನ್ ಕಂಪೆನಿಯಲ್ಲಿ ಷೇರುಹೊಂದಿದ್ದಾರೆ.

2009:  ಪಾಕಿಸ್ಥಾನದಲ್ಲಿ 1990ರಲ್ಲಿ ನಾಲ್ಕು ಬಾಂಬ್ ಸ್ಫೋಟ ಕೃತ್ಯಗಳಲ್ಲಿ ಶಾಮೀಲಾದ ಆರೋಪದ ಮೇರೆಗೆ ಗಲ್ಲು ಶಿಕ್ಷೆಗೆ ಗುರಿಯಾದ ಭಾರತೀಯ ಪ್ರಜೆ ಸರಬ್ಜಿತ್ ಸಿಂಗ್ ಅವರು ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ಪಾಕಿಸ್ಥಾನದ ಸುಪ್ರೀಂ ಕೋರ್ಟ್ ತಿರಸ್ಕರಿಸಿತು. ನ್ಯಾಯಮೂರ್ತಿ ರಾಜಾ ಫಯಾಜ್ ಅಹ್ಮದ್ ನೇತೃತ್ವದ ಮೂವರು ಸದಸ್ಯ ಪೀಠದ ಎದುರು ಸರಬ್ಜಿತ್ ಪರ ವಕೀಲರು ಹಾಜರಾಗದ ಹಿನ್ನೆಲೆಯಲ್ಲಿ ಪೀಠವು ಮರಪರಿಶೀಲನಾ ಅರ್ಜಿಯನ್ನು ತಿರಸ್ಕರಿಸಿ, 1991ರಲ್ಲಿ ಭಯೋತ್ಪಾದನಾ ವಿರೋಧಿ ನ್ಯಾಯಾಲಯ ನೀಡಿದ್ದ ಗಲ್ಲು ಶಿಕ್ಷೆಯನ್ನು ಎತ್ತಿಹಿಡಿಯಿತು. ಸರಬ್ಜಿತ್‌ಗೆ ರಾಣಾ ಅಬ್ದುಲ್ ಹಮೀದ್ ಎಂಬುವವರು ವಕೀಲರಾಗಿದ್ದರು.. ಕಳೆದ ವರ್ಷ ಅವರನ್ನು ಪಂಜಾಬ್ ಪ್ರಾಂತ್ಯದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಆಗಿ ನಿಯುಕ್ತಿಗೊಳಿಸಲಾಗಿತ್ತು. ಅವರ ಬದಲಿಗೆ ಇನ್ನೊಬ್ಬ ವಕೀಲರನ್ನು ನಿಯೋಜಿಸಲಾಗಿತ್ತು.  ವಿಚಾರಣೆ ವೇಳೆ ಕೂಡಾ ಕೆಲವು ವಿಚಾರಣೆ ಸಂದರ್ಭದಲ್ಲಿ ಅವರು ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. 1990ರಲ್ಲಿ ಪಾಕಿಸ್ಥಾನದಲ್ಲಿ ನಡೆದ ನಾಲ್ಕು ಬಾಂಬ್ ಸ್ಫೋಟ ಕೃತ್ಯಗಳಲ್ಲಿ 14 ಮಂದಿ ಸತ್ತಿದ್ದರು. ಇದರ ಹಿಂದೆ ಸರಬ್ಜಿತ್ ಸಿಂಗ್ ಪಾತ್ರ ಇದೆ ಎಂದು ಆರೋಪಿಸಿ ಅವರಿಗೆ ಗಲ್ಲು ಶಿಕ್ಷೆ ವಿಧಿಸಲಾಗಿತ್ತು. ಇದರ ವಿರುದ್ಧ ಸಲ್ಲಿಸಿದ್ದ ಅರ್ಜಿಯನ್ನು ಲಾಹೋರ್ ಹೈಕೋರ್ಟ್ 2003ರಲ್ಲಿ ತಿರಸ್ಕರಿಸಿತ್ತು. 2005ರಲ್ಲಿ ಸುಪ್ರೀಂಕೋರ್ಟ್ ಸಹ ಈ ಶಿಕ್ಷೆಯನ್ನು ಎತ್ತಿ ಹಿಡಿದಿತ್ತು. 2008ರಲ್ಲಿ ಆತ ಸಲ್ಲಿಸಿದ್ದ ದಯಾ ಅರ್ಜಿಯನ್ನು ಅಧ್ಯಕ್ಷ ಪರ್ವೆಜ್ ಮುಷರಫ್ ತಳ್ಳಿಹಾಕಿದ್ದರು. ಬಳಿಕ 2008ರ ಏಪ್ರಿಲ್‌ನಲ್ಲೇ ಅವರಿಗೆ ಗಲ್ಲು ಶಿಕ್ಷೆ ವಿಧಿಸುವ ದಿನಾಂಕ ನಿಗದಿಯಾಗಿತ್ತು.  ಆದರೆ ಭಾರತದ ಒತ್ತಡದ ಹಿನ್ನೆಲೆಯಲ್ಲಿ ಪ್ರಧಾನಿ ಯೂಸೂಫ್ ರಜಾಕ್ ಗಿಲಾನಿ ಮಧ್ಯಪ್ರವೇಶಿಸಿ ಶಿಕ್ಷೆ ಜಾರಿಯಾಗುವುದನ್ನು ತಡೆದಿದ್ದರು. ಇದೀಗ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ಅವರ ಕೈಯಲ್ಲೇ ಸರಬ್ಜಿತ್ ಜೀವ ನಿಂತಂತಾಯಿತು.

2009: ಕೇಳಿಸಿಕೊಳ್ಳಲು ಬಲಗಿವಿಯನ್ನೇ ಹೆಚ್ಚು ಅವಲಂಬಿಸಲಾಗುತ್ತದೆ ಎಂಬ ಅಂಶ ಹೊಸ ಸಂಶೋಧನೆಯಿಂದ ಬೆಳಕಿಗೆ ಬಂತು. ಇಟಲಿಯ ಗ್ಯಾಬ್ರೆಲ್ ಅನುಂಜಿಯೊ ವಿಶ್ವವಿದ್ಯಾಲಯವು ನಡೆಸಿದ ಮೂರು ಸಂಶೋಧನೆಗಳಿಂದ ಈ ವಿಷಯ ಗೊತ್ತಾಯಿತು. ಬಲಗಿವಿಯಿಂದ ಕೇಳಿಸಿಕೊಂಡ ಮಾತುಗಳನ್ನು ಎಡಭಾಗದ ಮಿದುಳು ತಕ್ಷಣದಲ್ಲಿ ವಿಶ್ಲೇಷಿಸಿ ಅದಕ್ಕೆ ಕೂಡಲೇ ಪ್ರತಿಕ್ರಿಯೆ ನೀಡುತ್ತದೆ ಎಂಬುದು ಈ ಸಂಶೋಧನೆಯಿಂದ ತಿಳಿದುಬಂತು.

2009:  ಗೀತರಚನೆಗೆ 1978ರ ಆಸ್ಕರ್ ಪ್ರಶಸ್ತಿ ಪಡೆದಿದ್ದ ಜೋಸೆಫ್ ಬ್ರೂಕ್ಸ್‌ನನ್ನು (71) ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಬಂಧಿಸಲಾಯಿತು. 11 ಮಂದಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಹೊರಿಸಿ ಆತನನ್ನು ಬಂಧಿಸಲಾಯಿತು. ಆದರೆ 5 ಲಕ್ಷ ಡಾಲರ್ ಮೊತ್ತದ ಠೇವಣಿ ಮೇಲೆ ಆರೋಪಿಯನ್ನು ಬಿಡುಗಡೆ ಮಾಡಲಾಯಿತು. ಧ್ವನಿ ಪರೀಕ್ಷೆ ನೆಪದಲ್ಲಿ ವೆಬ್‌ ಸೈಟ್ ಮೂಲಕ ಮಹಿಳೆಯರನ್ನು ತನ್ನ ಅಪಾರ್ಟ್‌ಮೆಂಟ್‌ಗೆ ಕರೆಸಿ, ಈ ಕೃತ್ಯ ಎಸಗಿರುವುದಾಗಿ ಆಪಾದಿಸಲಾಯಿತು.

2009:  ನಾಟಕ ಕರ್ನಾಟಕ ರಂಗಾಯಣದ ನೂತನ ನಿರ್ದೇಶಕಿಯಾಗಿ ಹೆಸರಾಂತ ರಂಗ ನಿರ್ದೇಶಕಿ, ಗಾಯಕಿ ಬಿ.ಜಯಶ್ರಿ ಮೈಸೂರಿನಲ್ಲಿ ಅಧಿಕಾರ ಸ್ವೀಕರಿಸಿದರು. ಒಂದೂವರೆ ವರ್ಷಗಳಿಂದ ಪ್ರಭಾರ ನಿರ್ದೇಶಕರಾಗಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಕಾ.ತ.ಚಿಕ್ಕಣ್ಣ ಅವರು ಜಯಶ್ರೀ ಅವರಿಗೆ ರಂಗಾಯಣದ ಕಚೇರಿಯಲ್ಲಿ ಅಧಿಕಾರವನ್ನು ಹಸ್ತಾಂತರಿಸಿದರು.

2009:  1990 ರ ಬಾಂಬ್ ಸ್ಫೋಟ ಪ್ರಕರಣದಲ್ಲಿ ಮರಣ ದಂಡನೆ ಶಿಕ್ಷೆಗೆ ಗುರಿಯಾಗಿರುವ ಸರಬ್ಜಿತ್ ಸಿಂಗ್‌ನನ್ನು ಬಿಡುಗಡೆ ಮಾಡಲು ಪಾಕಿಸ್ತಾನ ಸರ್ಕಾರದ ಮೇಲೆ ಒತ್ತಡ ಹೇರುವಂತೆ  ಆತನ ಕುಟುಂಬದ ಸದಸ್ಯರು ಸರ್ಕಾರಕ್ಕೆ ಮನವಿ ಮಾಡಿದರು. 'ನನ್ನ ಪತಿ ನಿರ್ದೋಷಿ ಎಂದು ಭಾರತ ಹಾಗೂ ಪಾಕಿಸ್ಥಾನ ಸರ್ಕಾರಗಳಿಗೆ ನಾನು ಅರಿಕೆ ಮಾಡಿಕೊಳ್ಳುವೆ. ಅವರು ಪಾಕಿಸ್ಥಾನದಲ್ಲಿ ಅನುಭವಿಸಿರುವ ಜೀವಾವಧಿ ಶಿಕ್ಷೆ  ಹೆಚ್ಚಿನದಾಯಿತು. ಅವರ ಬಿಡುಗಡೆಗೆ ವಿಳಂಬವಾಗುತ್ತಿರುವುದು ನಮಗೆ ಅತೀವ ಯಾತನೆಯನ್ನುಂಟು ಮಾಡುತ್ತಿದೆ. ಭಾರತ ಸರ್ಕಾರ ಪಾಕಿಸ್ಥಾನದ ಮೇಲೆ ಈ ಸಂಬಂಧ ಒತ್ತಡ ಹೇರಿದಲ್ಲಿ ಅವರು ಬದುಕುಳಿಯುತ್ತಾರೆ. ಭಾರತ ಸರ್ಕಾರ ಸುಮ್ಮನೆ ಕೂರಬಾರದು' ಎಂದು ಸರಬ್ಜಿತ್ ಪತ್ನಿ ಸುಖ್‌ಪ್ರೀತ್ ಕೌರ್ ಕಣ್ಣೀರಿಡುತ್ತಾ  ಹೇಳಿದರು.

2009:  ಹಿರಿಯ ಪತ್ರಕರ್ತ ಹರೀಶ್ ಖರೆ ಅವರು ಪ್ರಧಾನಿ ಮನಮೋಹನ್ ಸಿಂಗ್ ಅವರ ಮಾಧ್ಯಮ ಸಲಹೆಗಾರರಾಗಿ ಅಧಿಕಾರ ವಹಿಸಿಕೊಂಡರು. ಖ್ಯಾತ ರಾಜಕೀಯ ಅಂಕಣಕಾರ ಖರೆ (62)  'ದಿ ಹಿಂದು' ಪತ್ರಿಕೆಯ ಹಿರಿಯ ಸಹಾಯಕ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದರು.

2009:  ಕುಡಿದು ವಾಹನ ಚಲಾಯಿಸುತ್ತಿದ್ದ ಆರೋಪದ ಮೇರೆಗೆ ಬಿಗ್ ಬಾಸ್ ಟು ವಿಜೇತ ಅಶುತೋಷ್ ಕೌಶಿಕ್‌ಗೆ ಜೈಲುಶಿಕ್ಷೆ ವಿಧಿಸಲಾಯಿತು. ಜೂನ್ 13ರಂದು ಅಂಧೇರಿಯಲ್ಲಿ ಕುಡಿದು ಬೈಕಿನಲ್ಲಿ ತೆರಳುತ್ತಿದ್ದ ವೇಳೆ ಕೌಶಿಕನನ್ನು ಬಂಧಿಸಲಾಗಿತ್ತು.  ಒಂದು ದಿನ ಸೆರೆಮನೆ ವಾಸ, ಎರಡು ವರ್ಷ ಚಾಲನಾ ಪರವಾನಗಿ ರದ್ದು  ಹಾಗೂ  ರೂ. 3100 ದಂಡ ವಿಧಿಸಿ ಕೋರ್ಟ್ ಆದೇಶ ಹೊರಡಿಸಿತು.

2009:  ಉತ್ತರಾಖಂಡದ ಆರೋಗ್ಯ ಸಚಿವ ರಮೇಶ್ ಪೊಖ್ರಿಯಾಲ್ ಅವರು ಆ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾದರು. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ರಾಜ್ಯದಲ್ಲಿ ಸೋತಿರುವುದಕ್ಕೆ  ನೈತಿಕ ಹೊಣೆ ಹೊತ್ತು ಉತ್ತರಾಖಂಡದ ಮುಖ್ಯಮಂತ್ರಿ ಬಿ.ಸಿ.ಖಂಡೂರಿ  ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

2008: ಬಹುಜನ ಸಮಾಜ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ, ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಯಿತು. ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ ಅವರ ನಿರ್ದೇಶನದ ಮೇರೆಗೆ ಈ ಕ್ರಮ ಕೈಗೊಳ್ಳಲಾಯಿತು. ಪಕ್ಷದ ಹಳೆಯ ಪದಾಧಿಕಾರಿಗಳೊಂದಿಗೆ ಹೊಂದಿಕೊಳ್ಳದೆ ನಿಷ್ಕ್ರಿಯವಾಗಿರುವ ಕಾರಣದಿಂದ ಸಿಂಧ್ಯ ಅವರನ್ನು ಉಚ್ಚಾಟಿಸಲು ನಿರ್ಧರಿಸಲಾಯಿತು ಎಂದು ಎಂದು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯಸಭಾ ಸದಸ್ಯ ವೀರ್ಸಿಂಗ್ ಬೆಂಗಳೂರಿನಲ್ಲಿ ಪ್ರಕಟಿಸಿದರು.

2007: ಕರ್ನಾಟಕ ಮತ್ತು ಮಹಾರಾಷ್ಟ್ರದ ಕೆಲವು ಭಾಗ ಸೇರಿದಂತೆ 4 ರಾಜ್ಯಗಳಲ್ಲಿ ಮುಂದುವರೆದ ಮಳೆಯ ಅಬ್ಬರಕ್ಕೆ ಒಟ್ಟು 130ಕ್ಕಿಂತಲೂ ಹೆಚ್ಚು ಮಂದಿ ಅಸು ನೀಗಿದರು. ಆಂಧ್ರಪ್ರದೇಶ, ಕೇರಳದಲ್ಲಿ ಪರಿಸ್ಥಿತಿ ಸ್ವಲ್ಪ ಸುಧಾರಿಸಿತು.

2007: ಡಾ. ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ ಅವರಿಗೆ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ ಹೆಗ್ಡೆ ಅವರು ಬೆಂಗಳೂರಿನಲ್ಲಿ `ಮಾಸ್ತಿ' ಪ್ರಶಸ್ತಿ ಪ್ರದಾನ ಮಾಡಿದರು.

2007: 1980ರಲ್ಲಿ ತಮ್ಮ ವೈರಿಗಳನ್ನು ಕೊಲ್ಲುವ ಆಂದೋಲನದಲ್ಲಿ 1.80 ಲಕ್ಷ ಕುರ್ದ್ ಜನರನ್ನು ಕೊಂದ ಆರೋಪಕ್ಕೆ ಗುರಿಯಾಗಿದ್ದ `ಕೆಮಿಕಲ್ ಅಲಿ' ಎಂದೇ ಕುಖ್ಯಾತಿ ಪಡೆದ ಸದ್ದಾಂ ಹುಸೇನ್ ಸೋದರ ಸಂಬಂಧಿ ಅಲಿ ಹಸನ್ ಅಲ್ ಮಜಿದ್, ಸುಲ್ತಾನ್ ಹಷೀಮ್ ಅಹ್ಮದ್ ಮತ್ತು ಹುಸೇನ್ ರಷೀದ್ ಅಹ್ಮದ್ ಅವರಿಗೆ ನ್ಯಾಯಾಧೀಶ ಮಹಮ್ಮದ್ ಒರೈಬಿ ಅಲ್ - ಖಲೀಫ ಮರಣ ದಂಡನೆ ವಿಧಿಸಿದರು. 140 ಶಿಯಾ ಮುಸ್ಲಿಮರನ್ನು ಕೊಂದ ಮತ್ತು 1982ರ ಹತ್ಯೆಗಳ ಆರೋಪದಲ್ಲಿ ತಪ್ಪಿತಸ್ಥರೆಂದು ಘೋಷಿತರಾದ ಸದ್ದಾಂ ಹುಸೇನರನ್ನು 2006ರ ಡಿಸೆಂಬರ್ 30ರಂದು ಗಲ್ಲಿಗೇರಿಸಲಾಗಿತ್ತು.

2007: ಪಾಕಿಸ್ಥಾನದ ಬಂದರು ನಗರ ಕರಾಚಿ ಭಾರಿ ಮಳೆ ಹಾಗೂ ಬಿರುಗಾಳಿಯಿಂದ ತತ್ತರಿಸಿತು. ವಿವಿಧ ರೀತಿಯ ಅನಾಹುತಗಳಿಂದ ಒಟ್ಟು 220 ಮಂದಿ ಮೃತರಾಗಿ, ಹಲವರು ಗಾಯಗೊಂಡರು. ವಿದ್ಯುತ್ ವ್ಯವಸ್ಥೆ, ಜನಜೀವನ ಅಸ್ತವ್ಯಸ್ತಗೊಂಡಿತು.

2007: ಅಂದಾಜು 1.20 ಕೋಟಿ ಯೂರೋ ವೆಚ್ಚದಲ್ಲಿ ನವೀಕರಣಗೊಂಡ ಫ್ರಾನ್ಸಿನ ಪ್ಯಾರಿಸ್ ಸಮೀಪದ `ಹಾಲ್ ಆಫ ಮಿರರ್ಸ್' ಸಾರ್ವಜನಿಕರ ಪ್ರವೇಶಕ್ಕೆ ಮುಕ್ತಗೊಂಡಿತು. ಫ್ರೆಂಚ್ ಕಲಾವಿದ ಚಾರ್ಲ್ಸ್ ಲೀ ಬ್ರುನ್ (1619-1690) ಕಲಾಕೃತಿಗಳು ಇಲ್ಲಿವೆ. ಸ್ಥಾಪನೆಯಾಗಿ 300 ವರ್ಷಗಳ ಬಳಿಕ ಫ್ರಾನ್ಸಿನ ಮುಂಚೂಣಿಯ ರಿಯಲ್ ಎಸ್ಟೇಟ್ ಕಂಪೆನಿ ಮಿಂಚಿ `ಹಾಲ್ ಆಫ್ ಮಿರರ್ಸ್' ನವೀಕರಣದ ಹೊಣೆ ಹೊತ್ತಿತ್ತು.

2007: ಕೆನಡಾದಲ್ಲಿ ನೆಲೆಸಿದ ಬೆಂಗಳೂರು ಮೂಲದ ವೈದ್ಯೆ ಡಾ.ಶೀಲಾ ಬಸ್ರೂರು ಅವರನ್ನು, ಸಾರ್ವಜನಿಕ ಕ್ಷೇತ್ರಕ್ಕೆ ಸಲ್ಲಿಸಿರುವ ಅತ್ಯುತ್ತಮ ಸೇವೆಯನ್ನು ಪರಿಗಣಿಸಿ ಅಲ್ಲಿನ ಸರ್ಕಾರವು `ಕೆನಡಾ ಪ್ರಶಸ್ತಿ'ಗೆ ಆಯ್ಕೆ ಮಾಡಿತು.

2006: ಮಾನವ ಹಕ್ಕುಗಳ ಖ್ಯಾತ ಹೋರಾಟಗಾರ ಸ್ವಾಮಿ ಅಗ್ನಿವೇಶ್ ಅವರು  `ವಿಜಿಲ್ ಇಂಡಿಯಾ ಮೂವ್ ಮೆಂಟ್' ಸಂಸ್ಥೆಯ `ಎಮ್. ಎ. ಥಾಮಸ್ ರಾಷ್ಟ್ರೀಯ ಮಾನವ ಹಕ್ಕು 2006' ಪ್ರಶಸ್ತಿಗೆ ಆಯ್ಕೆಯಾದರು. ನ್ಯಾಯಮೂರ್ತಿ ವಿ.ಆರ್. ಕೃಷ್ಣ ಅಯ್ಯರ್(1998), ಮೇಧಾ ಪಾಟ್ಕರ್(1999), ನ್ಯಾಯಮೂರ್ತಿ ವಿ. ಎಂ.ತಾರ್ಕುಂಡೆ (2000) ಇವರು ಈ ಹಿಂದೆ ಈ ಪ್ರತಿಷ್ಠಿತ ಪ್ರಶಸ್ತಿಗೆ ಪಾತ್ರರಾಗಿದ್ದರು.

2006: ಬೆಂಗಳೂರಿನ ಬಹು ನಿರೀಕ್ಷಿತ, ಮಹತ್ವಾಕಾಂಕ್ಷೆಯ `ನಮ್ಮ ಮೆಟ್ರೋ' ಯೋಜನೆಗೆ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ಈದಿನ ಬೆಂಗಳೂರಿನ ಪೆರೇಡ್ ಮೈದಾನದಲ್ಲಿ ಶಿಲಾನ್ಯಾಸ ನೆರವೇರಿಸಿದರು.

2002: ರಷ್ಯದ ವ್ಲಾಡಿಮೀರ್ ಕ್ರಾಮ್ನಿಕ್ ಅವರು ಲಿಯೋನಿನಲ್ಲಿ ನಡೆದ ಸ್ಪರ್ಧೆಯಲ್ಲಿ ಭಾರತದ ವಿಶ್ವನಾಥನ್ ಆನಂದ್ ಅವರನ್ನು ಸೋಲಿಸುವ ಮೂಲಕ `ಅಡ್ವಾನ್ಸ್ಡ್ ಚೆಸ್' ಪ್ರಶಸ್ತಿಯನ್ನು ತಮ್ಮ ಬಗಲಿಗೆ ಹಾಕಿಕೊಂಡರು. `ಅಡ್ವಾನ್ಸ್ಡ್ ಚೆಸ್' ಎಂಬುದು ಗ್ಯಾರಿ ಕ್ಯಾಸ್ಪರೋವ್ ಅವರ ಸಂಶೋಧನೆಯಾಗಿದ್ದು ಇದರಲ್ಲಿ ಕಂಪ್ಯೂಟರ್ ನೆರವಿನೊಂದಿಗೆ `ಮೋಸ ಮಾಡಲು' ಅಧಿಕೃತವಾಗಿ ಅನುಮತಿ ನೀಡಲಾಗಿದೆ.

1980: ಭಾರತದ ಮಾಜಿ ರಾಷ್ಟ್ರಪತಿ ವಿ.ವಿ. ಗಿರಿ ಅವರು ತಮ್ಮ 85ನೇ ವಯಸ್ಸಿನಲ್ಲಿ ತಮಿಳ್ನಾಡಿನ ಮದ್ರಾಸಿನಲ್ಲಿ (ಈಗಿನ ಚೆನ್ನೈ) ನಿಧನರಾದರು.

1974: ಇಂಗ್ಲೆಂಡಿನ ಲಾರ್ಡ್ಸ್ ಮೈದಾನದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತವು ಎರಡನೇ ಇನ್ನಿಂಗ್ಸ್ ನಲ್ಲಿ 42 ರನ್ ಗಳಿಗೆ ಆಲೌಟ್ ಆಗಿ ಅತ್ಯಂತ ಹೀನಾಯ ಸೋಲು ಅನುಭವಿಸಿತು. ಇದು ಟೆಸ್ಟ್ ಕ್ರಿಕೆಟಿನಲ್ಲಿ ಭಾರತದ ಅತ್ಯಂತ ಕಡಿಮೆ ಮೊತ್ತದ ಇನ್ನಿಂಗ್ಸ್.

1966: ಕಲಾವಿದ ಪ್ರಕಾಶ ಕೆ. ನಾಯ್ಡು ಜನನ.

1949: ಕಲಾವಿದ ಚಂದ್ರಕುಮಾರ ಸಿಂಗ್ ಜನನ.

1935: ಕಲಾವಿದ ಬಳ್ಳಾರಿ ಎಂ. ಶೇಷಗಿರಿ ಆಚಾರ್ಯ ಜನನ.

1924: ಕರ್ನಾಟಕದಲ್ಲಿ ನಶಿಸುತ್ತಿರುವ ರಥ ನಿರ್ಮಾಣ ಸಂತತಿಯ ನಾಲ್ಕೈದು ಕುಟುಂಬ ವರ್ಗದವರಲ್ಲಿ ಒಬ್ಬರಾದ ರಥ ಶಿಲ್ಪಿ ಪರಮೇಶ್ವರಾಚಾರ್ಯ ಅವರು  ಮಾನಾಚಾರ್ಯರು- ವೀರಮ್ಮ ದಂಪತಿಯ ಮಗನಾಗಿ ಹೊಳಲ್ಕೆರೆ ತಾಲ್ಲೂಕಿನ ನೂಲೇನೂರಿನಲ್ಲಿ ಜನಿಸಿದರು.

1915: ಬ್ರಿಟಿಷ್ ಗಣಿತ ಹಾಗೂ ಖಗೋಳ ತಜ್ಞ ಸರ್ ಫ್ರೆಡ್ ಹೊಯ್ಲ್ ಜನ್ಮದಿನ. ಇವರು ತಮ್ಮ `ವಿಶ್ವ ವಿಕಸನ ಸಿದ್ಧಾಂತ'ಕ್ಕಾಗಿ ಖ್ಯಾತಿ ಪಡೆದಿದ್ದಾರೆ. ಇವರ ಸಿದ್ಧಾಂತದ ಪ್ರಕಾರ ವಿಶ್ವವು ವಿಕಸಿಸುತ್ತಿದೆ ಹಾಗೂ ಈ ವಿಕಸನದಿಂದ ಉಂಟಾಗುವ ಶೂನ್ಯವನ್ನು ತುಂಬಿ ಆಕಾಶದಲ್ಲಿನ ದ್ರವ್ಯದ ಸಾಂದ್ರತೆಯನ್ನು ನಿರಂತರವಾಗಿ ಇರಿಸಲು ಹೊಸ ದ್ರವ್ಯ ಸೃಷ್ಟಿಯಾಗುತ್ತಿರುತ್ತದೆ.

1885: ಅಕಾಲಿದಳದ ನಾಯಕ ಮಾಸ್ಟರ್ ತಾರಾಸಿಂಗ್ (1885-1967) ಜನ್ಮದಿನ. ಸಿಖ್ಖರ ರಾಜಕೀಯ ಹಾಗೂ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆಯಾಗದಂತಹ ಪಂಜಾಬಿ ಭಾಷಿಕರ ರಾಜ್ಯ ಸ್ಥಾಪನೆಯಾಗಬೇಕು ಎಂದು ಚಳವಳಿ ಹೂಡಿದ ಸಿಖ್ ಧುರೀಣರಿವರು. 1966ರಲ್ಲಿ ಈಗಿನ ಪಂಜಾಬ್ ರಾಜ್ಯ ರಚನೆಯೊಂದಿಗೆ ಅವರ ಕನಸು ನನಸಾಯಿತು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement