My Blog List

Thursday, January 5, 2012

ಊಟ ಆಯಿತಾ?: ಮುಂಡಾಸು 30 ಮೊಳ..! (Mundasu 30 mola..!)

ಊಟ ಆಯಿತಾ?: ಮುಂಡಾಸು 30 ಮೊಳ..!
 (Mundasu 30 mola..!)


ಊಟ ಆಯಿತಾ ಅಂತ ಕೇಳಿದರೆ ಮುಂಡಾಸು ಮೂವತ್ತು ಮೊಳ ಎಂದೊಬ್ಬ ಉತ್ತರಿಸಿದನಂತೆ. ಬೃಹತ್ ಬೆಂಗಳೂರು  ಮಹಾನಗರ ಪಾಲಿಕೆಯ ಸಿಬ್ಬಂದಿ ಇದೇ ವರ್ಗಕ್ಕೆ ಸೇರಿದವರು. ಏನಾದರೂ ಮಾಹಿತಿ  ಬೇಕು ಎಂದು ನೀವೇನಾದರೂ ಬಿಬಿಎಂಪಿಗೆ ಹೋದಿರೋ ಮುಗಿಯಿತು ಕಥೆ. ಕನಿಷ್ಠ ಹತ್ತಿಪ್ಪತ್ತು ಮೇಜುಗಳಿಗೆ ಸುತ್ತು ಹೊಡೆಯಬೇಕು. ಅಷ್ಟಾದರೂ ನಿಮಗೆ ಬೇಕಾದ ಮಾಹಿತಿ ಸಿಕ್ಕೀತು ಎನ್ನಲಾಗದು.

ಈ ಕಷ್ಟ ಯಾಕೆ ಅಂತ ಮಾಹಿತಿ ಹಕ್ಕು ಕಾಯ್ದೆಯನ್ನು ಬಳಸಿದಿರೋ- ಅಲ್ಲೂ ನಿಮಗೆ ಬೇಕಾದ ಉತ್ತರವೇನೂ ಸಿಕ್ಕುವುದಿಲ್ಲ. ಕಟ್ಟ ಕಡೆಗೆ ನಿಮ್ಮ ತಲೆಯಲ್ಲಿ ಉಳಿಯುವುದು ಮೇಲೆ ತಿಳಿಸಿದಂತೆ 'ಮುಂಡಾಸು ಮೂವತ್ತು ಮೊಳ' ಮಾತ್ರ..!

ಬಿಬಿಎಂಪಿ ರಾಜರಾಜೇಶ್ವರಿ ನಗರ ವ್ಯಾಪ್ತಿಯಲ್ಲಿ ಬರುವ ಸಚ್ಚಿದಾನಂದ ನಗರದ ನಿವೇಶನದಾರರ ಗೋಳಿಗೆ ಈಗ ಎರಡು ದಶಕ.  ಕಾರಣವೇ ಇಲ್ಲದೆ ಈ ನಿವೇಶನದಾರರನ್ನು  ಗೋಳಾಡಿಸುತ್ತಿರುವ ಬಿಬಿಎಂಪಿ ಸಿಬ್ಬಂದಿ, ಅವರಿಗೆ ಕುಮ್ಮಕ್ಕು  ನೀಡುತ್ತಿರುವ ಜನ ಪ್ರತಿನಿಧಿಗಳು.  ಇವರೆಲ್ಲರ ತಕರಾರುಗಳಿಗೆ ಸಿವಿಲ್ ನ್ಯಾಯಾಲಯದಿಂದ ಹಿಡಿದು ಸುಪ್ರೀಂಕೋರ್ಟ್ ವರೆಗೂ ವಿವಿಧ ನ್ಯಾಯಾಲಯಗಳು ನೀಡಿರುವ ತೀರ್ಪುಗಳು  ಸ್ಪಷ್ಟ ಉತ್ತರ. ಈ ನಿವೇಶನದಾರರರಿಂದ ತೆರಿಗೆ ಪಡೆಯಿರಿ, ಖಾತೆ ಕೊಡಿ, ಕಟ್ಟಡ ನಕ್ಷೆ ಮಂಜೂರು  ಮಾಡಿ. ವಸತಿದಾರರಿಗೆ ಸಹ್ಯ ಜೀವನ ನಡೆಸುವುದಕ್ಕೆ ಬೇಕಾದ ಸವಲತ್ತು ಕೊಡಿ ಎಂಬುದಾಗಿ ಸಿವಿಲ್ ನ್ಯಾಯಾಲಯ ನೀಡಿದ ತೀರ್ಪನ್ನು ಹೈಕೋರ್ಟ್, ಸುಪ್ರೀಂಕೋರ್ಟುಗಳು ಎತ್ತಿ ಹಿಡಿದಿವೆ. ಈ ಬಡಾವಣೆ ಶಾಸನಬದ್ಧ ಹಾಗೂ ಅದರ ಭೂ ಮಾಲೀಕತ್ವದ ವಿವಾದ ಅಂತಿಮಗೊಂಡಿದೆ ಎಂಬುದಾಗಿ ಇಡೀ ಪ್ರಕರಣದ ಪರಿಶೀಲನೆ ನಡೆಸಿರುವ ಕರ್ನಾಟಕ ಲೋಕಾಯುಕ್ತರೂ ಸ್ಪಷ್ಟ ಪಡಿಸಿದ್ದಾರೆ. ಸಿವಿಲ್ ನ್ಯಾಯಾಲಯದ ತೀರ್ಪಿಗೆ ಬದ್ಧರಾಗಿ ಎಂಬುದಾಗಿ ರಾಜ್ಯ ಸರ್ಕಾರವೂ ಆದೇಶ ನೀಡಿದೆ. ಆದರೆ ಬಿಬಿಎಂಪಿ ಮತ್ತು  ರೆವೆನ್ಯೂ  ಇಲಾಖೆಯ ಅಧಿಕಾರಿಗಳಿಗೆ ಇದನ್ನು ಪಾಲಿಸುವ ಮನಸ್ಸಿಲ್ಲ.


ಸುಪ್ರೀಂಕೋರ್ಟ್ ತೀರ್ಪು ಅನುಷ್ಠಾನ ನಿಟ್ಟಿನಲ್ಲಿ ಕೈಗೊಂಡಿರುವ ಕ್ರಮ ಏನು ಎಂಬುದಾಗಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳನ್ನು ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಪ್ರಶ್ನಿಸಿದರೆ ಆ ಅರ್ಜಿ ನಗರಾಭಿವೃದ್ಧಿ ಮುಖ್ಯಕಾರ್ಯದರ್ಶಿಗಳಿಗೆ ಹೋಗಿ ಅಲ್ಲಿಂದ ಬಿಬಿಎಂಪಿ ಕಮೀಷನರ್ ಕಚೇರಿ ಸೇರಿ ಮುಂದೆ ಬಿಬಿಎಂಪಿ ರಾಜರಾಜೇಶ್ವರಿ ವಲಯ ಕಚೇರಿಯ ಅಡಿಷನಲ್ ಕಮೀಷನರ್ ಕಚೇರಿಗೆ ಬಿಜಯಂಗೈದು, ಅಸಿಸ್ಟೆಂಟ್ ರೆವೆನ್ಯೂ ಆಫೀಸರ್  (ಎಆರ್ಓ)  ಮೇಜಿಗೆ ತಲುಪಿತು.  ಈ ಎಆ್ಓ ,,ಮಹಾಶಯರು ತೀರ್ಪಿನ ಅನುಷ್ಠಾನ ಕುರಿತ ಮಾಹಿತಿ ಕೊಡುವ ಬದಲು 2002ರಷ್ಟು ಹಳೆಯದಾದ ಜಿಲ್ಲಾಧಿಕಾರಿಗಳ ಪತ್ರ, ಅಸಿಸ್ಟೆಂಟ್ ಕಮೀಷನರ್ ಆದೇಶವನ್ನು ಕಳುಹಿಸಿ ಅದರ ಜೊತೆಗೆ ಮೇಲೆ ತಿಳಿಸಿದ ತೀರ್ಪುಗಳನ್ನೂ ಕಳುಹಿಸುತ್ತಿರುವುದಾಗಿ ಪತ್ರದಲ್ಲಿ ತಿಳಿಸಿದ್ದಾರೆ..

ಈ ಪತ್ರದ ಜೊತೆಗೆ ಮೇಲೆ ತಿಳಿಸಿದ ತೀರ್ಪುಗಳು ಇರಲಿಲ್ಲ ಎಂಬುದನ್ನು ಬಿಟ್ಟು  ಬಿಡೋಣ,  ಆದರೆ ಈ ತೀರ್ಪಿನ ಪ್ರತಿಗಳನ್ನು ಅವರ ಬಳಿ ಕೇಳಿದವರು  ಯಾರು?  ಜಿಲ್ಲಾಧಿಕಾರಿ, ಅಸಿಸ್ಟೆಂಟ್ ಕಮೀಷನರ್  ಪತ್ರಗಳನ್ನು ಕೇಳಿದವರು ಯಾರು? ಸುಪ್ರೀಂಕೋರ್ಟ್ ತೀರ್ಪು ಪಾಲನೆಗೆ ಈ  ಜಿಲ್ಲಾಧಿಕಾರಿಯ ಪತ್ರ, ಅಸಿಸ್ಟೆಂಟ್ ಕಮೀಷನರ್ ಅವರ ಪತ್ರಗಳು  'ತಡೆಯಾಜ್ಞೆ' ಆದ್ದರಿಂದ ಸುಪ್ರೀಂಕೋರ್ಟ್ ತೀರ್ಪು ಪಾಲಿಸಿಲ್ಲ ಎಂಬುದು ಅವರ ಈ  ವರ್ತನೆಯ ಅರ್ಥವೇ?


ಈ ಬಗ್ಗೆ ಬಿಬಿಎಂಪಿ ಕಮೀಷನರ್,  ಮುಖ್ಯ ಕಾರ್ಯದರ್ಶಿಗಳು, ಮುಖ್ಯಮಂತ್ರಿಗಳ ಗಮನ ಸೆಳೆಯೋಣ ಎಂದು ಸರ್ಕಾರದ 'ಇ-ಆಡಳಿತ' ದ ವ್ಯವಸ್ಥೆಯ ಮೊರೆ ಹೊಕ್ಕರೆ ...!  ಒಂದೂ ಪತ್ರಗಳು ಅವರಿಗೆ ತಲುಪಲೇ ಇಲ್ಲ. -ಇ-ಮೇಲ್ ಮೂಲಕ ಕಳುಹಿಸಿದ ಪತ್ರಗಳೆಲ್ಲ, 'ಡೆಲಿವರಿ ಫೈಲ್ಡ್' ಎಂಬ ಷರಾದೊಂದಿಗೆ ನನ್ನ ಮೆಯಿಲ್ ಬಾಕ್ಸಿಗೆ ಮರಳಿ ಬಂದಿವೆ.

ಇದಕ್ಕೆ ಏನು ಹೇಳೋಣ?  

ಅಧಿಕಾರಿಗಳಿಗೆ ಜೈ ಎನ್ನೋಣವೇ?  ಪ್ರಶ್ನೆ ಅರ್ಥ ಮಾಡಿಕೊಳ್ಳಲಾಗದ ಇಲ್ಲವೇ ಅರ್ಥವಾಗದಂತೆ ನಟಿಸುತ್ತಿರುವ ಬಿಬಿಎಂಪಿ ಎ ಆರ್ ಓ ಅವರ  ಜಾಣ ನಿಲುವಿಗೆ ಜೈ ಎನ್ನೋಣವೇ?  ಇ-ಆಡಳಿತ ಮೂಲಕ ಜನರ ಸಮಸ್ಯೆಗಳನ್ನು ಕ್ಷಿಪ್ರವಾಗಿ ನಿವಾರಿಸಬಹುದೆಂಬ ಹವಣಿಕೆಯಲ್ಲಿ ಇರುವ ಬಿಬಿಎಂಪಿ, ಸರ್ಕಾರ, ಮುಖ್ಯಮಂತ್ರಿಗಳ ಹುಮ್ಮಸ್ಸಿಗೆ ಅಡಚಣೆ ಒಡ್ಡುತ್ತಿರುವ '-ಇ-ಆಡಳಿತ ವ್ಯವಸ್ಥೆ'ಗೆ ಜೈ ಎನ್ನೋಣವೇ?

  ಇಷ್ಟೆಲ್ಲ ಕಷ್ಟ ಯಾಕೆ ಸ್ವಾಮೀ?  ಒಂದಷ್ಟು ಕಾಸು  ಬಿಸಾಕಿ ಕೆಲಸ ಮಾಡಿಸಿಕೊಳ್ಳಿ ಎಂದು ಹೇಳೋಣವೇ?

ವಿವರಗಳಿಗಾಗಿ ಚಿತ್ರಗಳನ್ನು ಕ್ಲಿಕ್ಕಿಸಿ 

-ನೆತ್ರಕೆರೆ ಉದಯಶಂಕರ .

No comments:

Advertisement