Tuesday, November 5, 2019

ದೆಹಲಿಯಲ್ಲಿ ವಾರದ ಉಸಿರಾಟ ೧೪೮ ಸಿಗರೇಟ್ ಸೇದಿದ್ದಕ್ಕೆ ಸಮ!

ದೆಹಲಿಯಲ್ಲಿ ವಾರದ ಉಸಿರಾಟ ೧೪೮ ಸಿಗರೇಟ್ ಸೇದಿದ್ದಕ್ಕೆ ಸಮ!
ವಾಯುಮಾಲಿನ್ಯ ತೋರಿಸುವ ಆಪ್‌ನಿಂದ ಮಾಹಿತಿ ಬಹಿರಂಗ
ನವದೆಹಲಿ: ದೆಹಲಿಯಲ್ಲಿ ಒಂದು ವಾರ ಉಸಿರಾಡಿದರೆ ಸಾಕು, ಅದು ೧೪೮ ಸಿಗರೇಟ್ ಸೇದಿದ್ದಕ್ಕೆ ಸಮವಾಗುತ್ತದೆ. ಹೌದು ವಾಯುಮಾಲಿನ್ಯ ಮಟ್ಟವನ್ನು ಸೂಚಿಸುವ ಆಪ್ ಇದನ್ನು ಬಹಿರಂಗ ಗೊಳಿಸಿದೆ.

ದೆಹಲಿ-ರಾಷ್ಟ್ರೀಯ ರಾಜಧಾನಿ ಪ್ರದೇಶದ ವಾಯುಮಾಲಿನ್ಯ ತೀವ್ರಗೊಂಡಿದ್ದು,  ವಾಯುಗುಣಮಟ್ಟ ಸೂಚ್ಯಂಕವು (ಎಕ್ಯೂಐ) ಸೋಮವಾರ ೫೦೦ ಅಂಕಗಳಿಗೆ ತಲುಪಿದೆ.

ವಾರಾಂತ್ಯದಲ್ಲಿ ಸುರಿದ ಮಳೆ ಪರಿಸರವನ್ನು ಸ್ವಚ್ಛಗೊಳಿಸುವ ನಿಟ್ಟಿನಲ್ಲಿ ಏನೇನೂ ಅನುಕೂಲ ಮಾಡಿಕೊಟ್ಟಿಲ್ಲ ಎಂಬುದು ರಾಜಧಾನಿಯಲ್ಲಿ ಕರಿಯ ಹೊಗೆ ಮತ್ತು ದೂಳಿನ ಪದರ ಹೆಚ್ಚುತ್ತಲೇ ಇರುವುದರಿಂದ ಖಚಿತಗೊಂಡಿದೆ.

ದಿನದಿಂದ ದಿನಕ್ಕೆ ಕುಸಿಯುತ್ತಲೇ ಇರುವ ವಾಯುಗುಣಮಟ್ಟ ಸಹಜ ಬದುಕನ್ನು ಅಸ್ತವ್ಯಸ್ತಗೊಳಿಸಿದ್ದು,  ಸರ್ಕಾರಿ ಹಾಗೂ ಖಾಸಗಿ ಶಾಲೆಗಳಿಗೆ ರಜೆ ಸಾರಲಾಗಿದೆ. ವಿಮಾನ ನಿಲ್ದಾಣಗಳಲ್ಲಿ ದಟ್ಟ ಹೊಗೆ, ದೂಳಿನ ಪದರದಿಂದಾಗಿ ಉಂಟಾಗಿರುವ ಪ್ರತಿಕೂಲ ಹವಾಮಾನದಲ್ಲಿ ಇಳಿಯಲು ಸಾಧ್ಯವಾಗದೆ ವಿಮಾನಗಳ ಹಾರಾಟ ಮಾರ್ಗಗಳನ್ನೇ ಬದಲಿಸಲಾಗುತ್ತಿದೆ.

ದೆಹಲಿಯಿಂದ ಹೊರಡಬೇಕಾದ ಹಲವಾರು ವಿಮಾನಗಳ ಹಾರಾಟ ವಿಳಂಬಗೊಂಡಿದೆ.
ಉಸಿರಾಟಕ್ಕೇ ಪರದಾಡಬೇಕಾದ ಸನ್ನಿವೇಶದಲ್ಲಿ ನಗರದಿಂದ ಹೊರಕ್ಕೆ ಹೋಗುವುದೇ ಬುದ್ಧಿವಂತಿಕೆಯ ಕ್ರಮ ಎಂದು ಹಲವರು ಸಲಹೆ ಮಾಡಲಾರಂಭಿಸಿದ್ದಾರೆ.

ಕಣ್ಣುಗಳಲ್ಲಿ ಉರಿ, ತುರಿಕೆ, ಗಂಟಲು ಒಣಗುವಿಕೆ ಮತ್ತು ಉಸಿರಾಟದ ಸಮಸ್ಯೆ ನಗರದಾದ್ಯಂತ ಮಾತುಕತೆಯ ಪ್ರಮುಖ ವಿಷಯವಾಗಿ ಬದಲಾಗುತ್ತಿದೆ.

‘ದೆಹಲಿಯಲ್ಲಿ ಸುರಕ್ಷಿತವಾಗಿ ಬದುಕುವುದು ಹೇಗೆ?’ ಎಂಬುದಾಗಿ ಅಂತರ್ಜಾಲದಲ್ಲಿ ಹುಡುಕಾಟ ಕಳೆದ ಕೆಲವು ದಿನಗಳಿಂದ ಗೂಗಲ್‌ನಲ್ಲಿ ಟ್ರೆಂಡ್ ಆಗಿದೆ. ದೂಮಪಾನ ಮಾಡದವರಿಗೆ ದಿನದ ೨೪ ಗಂಟೆಯೂ ಸಿಗರೇಟು ಸೇದುವುದರಿಂದ ಉಂಟಾಗುವ ದುಷ್ಪರಿಣಾಮಗಳ ಅನುಭವವಾಗುತ್ತಿದೆ.

ರಾಷ್ಟ್ರದ ರಾಜಧಾನಿ ದೆಹಲಿಯ ರಸ್ತೆಗಳಲ್ಲಿನ ವಾಯುಮಾಲಿನ್ಯದ ಮಧ್ಯೆ ನಡೆದಾಡುವುದರಿಂದ ನೀವು ಸೇದುವ ಪರೋಕ್ಷ ಸಿಗರೇಟುಗಳು ಎಷ್ಟು? ನಿಮ್ಮ ಹೃದಯವನ್ನು ಪ್ರವೇಶಿಸುತ್ತಿರುವ ’ಹೊಗೆ ಎಷ್ಟು ಎಂಬುದನ್ನು ಹೇಳುವ ಆಪ್‌ಗಳೂ ಇದೀಗ ಬಿಡುಗಡೆಯಾಗಿವೆ.

‘ಶಿಟ್, ಐ ಸ್ಮೋಕ್ ಹೆಸರಿನ ಆಪ್ ಒಂದನ್ನು ಮಾರ್ಸೆಲೊ ಕೊಯೆಲ್ಹೋ ಮತ್ತು ಅಮೌರಿ ಮಾರ್ಟಿನಿ ಕಳೆದ ವರ್ಷ ಅಭಿವೃದ್ಧಿ ಪಡಿಸಿದ್ದವು.

ಮೂಲತಃ ಐಒಎಸ್ ಮತ್ತು ಆಂಡ್ರಾಯಿಡ್‌ನಲ್ಲಿ ಲಭ್ಯವಿರುವ ಈ ಆಪ್  ವಿವಿಧ ಸ್ಥಳಗಳಲ್ಲಿ ಗಾಳಿಯ ಗುಣಮಟ್ಟದ ಮೇಲೆ ನಿಗಾ ಇಡುತ್ತದೆ, ಮತ್ತು ನಿರ್ದಿಷ್ಟ ಸ್ಥಳದ ವಾಯುಗುಣಮಟ್ಟದ ವಿಶ್ಲೇಷಣೆಗೆ ಸಹಾಯ ಮಾಡುತ್ತದೆ. ವಿಷಾನಿಲಗಳನ್ನು ಒಳಗೊಂಡ ಮಾಲಿನ್ಯ ಭರಿತವಾದ ನಗರದ ಗಾಳಿಯನ್ನು ಸೇವಿಸುವುದರಿಂದ ಎಷ್ಟು ಸಿಗರೇಟುಗಳನ್ನು ನೀವು ಪರೋಕ್ಷವಾಗಿ ಸೇದಿದಂತಾಗುತ್ತದೆ ಎಂದು ಈ ಆಪ್‌ಗಳು ಮಾಹಿತಿ ನೀಡುತ್ತವೆ.

ಕೇವಲ ಉಸಿರಾಟದಿಂದ ನೀವು ಮಾಲಿನ್ಯ ಭರಿತವಾದ ಗಾಳಿಯಲ್ಲಿನ ಪರ್ಟಿಕ್ಯುಲೇಟ್ ಮ್ಯಾಟರ್‌ನ್ನು (ಕಣ್ಣಿಗೆ ಕಾಣದ ಅತಿಸೂಕ್ಷ್ಮ ಕಣಗಳು) ಎಷ್ಟು ಪ್ರಮಾಣದಲ್ಲಿ ಸೇವಿಸುತ್ತೀರಿ ಎಂಬುದನ್ನು ಆಧರಿಸಿ ಒಬ್ಬ ವ್ಯಕ್ತಿ ಸೇದುವ ಸಿಗರೇಟು ಎಷ್ಟು ಎಂಬುದನ್ನು ಲೆಕ್ಕಹಾಕಲು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಪ್ರೊಫೆಸರ್‌ಗಳು ಬಳಸಿದ ಗಣಿತದ ಮಾದರಿಯನ್ನು ಆಧರಿಸಿ ಈ ಆಪ್ ಅಭಿವೃದ್ಧಿ ಪಡಿಸಲಾಗಿದೆ.

ಅತಿಯಾದ ವಾಯುಮಾಲಿನ್ಯಕ್ಕೆ ತುತ್ತಾಗಿರುವ ದೆಹಲಿಯಲ್ಲಿ ನೀವು ಪರೋಕ್ಷವಾಗಿ ಸೇದುತ್ತಿರುವ ಸಿಗರೇಟಿನ ಹೊಗೆ ಎಷ್ಟು ಎಂಬುದನ್ನು ತಿಳಿಯಲು ಈ ಆಪ್ ಬಳಸಿದರೆ ಸಾಕು ನೀವು ದಂಗಾಗಿ ಬಿಡುತ್ತೀರಿ.

ಏಕೆಂದರೆ, ಆಪ್ ಪ್ರಕಾರ, ಸೋಮವಾರ ಬೆಳಗ್ಗೆ ೮.೫೧ ಗಂಟೆಗೆ ಯಾರಾದರೂ ಒಬ್ಬರು ನೋಯ್ದಾದಲ್ಲಿ ಮನೆಯಿಂದಾಚೆ ಬಂದು ಕೆಲವೇ ಕೆಲವು ನಿಮಿಷಗಳ ಕಾಲ ರಸ್ತೆಯಲ್ಲಿ ಸುತ್ತಾಡಿದರೆ ಅವರು ದೈನಿಕ ೨೫.೬ ಸಿಗರೇಟು ಸೇದಿದಂತಾಗುತ್ತದೆ!

No comments:

Advertisement