My Blog List

Tuesday, November 26, 2019

ಬುಧವಾರ ಸಂಜೆಯ ಒಳಗೆ ವಿಶ್ವಾಸಮತ : ಸುಪ್ರೀಂ ‘ಮಹಾ’ ತೀರ್ಪು

ಬುಧವಾರ ಸಂಜೆಯ ಒಳಗೆ ವಿಶ್ವಾಸಮತ :
  
ಸುಪ್ರೀಂಮಹಾತೀರ್ಪು
ನವದೆಹಲಿ: ಬಿಜೆಪಿಗೆ ಸರ್ಕಾರ ರಚಿಸಲು ಆಹ್ವಾನ ನೀಡಿದ್ದ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ  ಅವರ ಕ್ರಮವನ್ನು ಪ್ರಶ್ನಿಸಿ ಶಿವಸೇನೆ, ಕಾಂಗ್ರೆಸ್, ಎನ್ಸಿಪಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, 2019 ನವೆಂಬರ್ 27 ಬುಧವಾರ ಸಂಜೆಯ ಒಳಗಾಗಿ ವಿಶ್ವಾಸ ಮತ ಯಾಚಿಸುವಂತೆ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರಿಗೆ 2019 ನವೆಂಬರ್ 26 ಮಂಗಳವಾರ ಆಜ್ಞಾಪಿಸಿತು.

ನ್ಯಾಯಮೂರ್ತಿ ಎನ್.ವಿ. ರಮಣ, ನ್ಯಾಯಮೂರ್ತಿ ಅಶೋಕ್ ಭೂಷಣ್ ಮತ್ತು ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರನ್ನು ಒಳಗೊಂಡ ತ್ರಿಸದಸ್ಯ ಸುಪ್ರೀಂ ನ್ಯಾಯಪೀಠದ ತೀರ್ಪಿನೊಂದಿಗೆ ವಿರೋಧ ಪಕ್ಷಗಳಿಗೆ ನಿರಾಳತೆ  ಲಭಿಸಿದಂತಾಗಿದೆ.

ಬುಧವಾರ ಸಂಜೆ 5 ಗಂಟೆಯ ಒಳಗಾಗಿ ವಿಶ್ವಾಸಮತ ಯಾಚನೆ ನಡೆಯಬೇಕು. ಪ್ರಕ್ರಿಯೆ ಪಾರದರ್ಶಕವಾಗಿದ್ದು, ಗುಪ್ತ ಮತದಾನವಲ್ಲ, ಬಹಿರಂಗ ಮತದಾನ ಆಗಿರಬೇಕು ಮತ್ತು ಸಂಪೂರ್ಣ ಪ್ರಕ್ರಿಯೆಯ  ವಿಡಿಯೋ ಚಿತ್ರೀಕರಣದ ಜೊತೆಗೆ ನೇರ ಪ್ರಸಾರ ಆಗಬೇಕುಎಂದು ಸುಪ್ರೀಂಕೋರ್ಟ್ ಆದೇಶ ನೀಡಿತು.

ಕಾರ್ಯಾಂಗದಲ್ಲಿ ನ್ಯಾಯಾಂಗವು  ಹಸ್ತಕ್ಷೇಪ ಮಾಡಬಾರದು. ಆದರೆ ಕೆಲವು  ವಿಶೇಷ ಸಂದರ್ಭಗಳಲ್ಲಿ ನಿಗಾ ವಹಿಸಬೇಕಾಗುತ್ತದೆ. ಅಧಿಕಾರಗಳ ಮೊಟಕು ಆದಾಗ ಕೋರ್ಟ್ ಮಧ್ಯಪ್ರವೇಶ ಮಾಡಬೇಕಾಗುತ್ತದೆ ಎಂದು ಪೀಠ ಹೇಳಿತು.

ಹಂಗಾಮಿ ಸಭಾಧ್ಯಕ್ಷರನ್ನು ನೇಮಕ ಮಾಡಿ, ಬುಧವಾರ ಸಂಜೆ 5 ಗಂಟೆಯ ಒಳಗಾಗಿ ಶಾಸಕರ ಪ್ರಮಾಣ ವಚನ ಸ್ವೀಕಾರ ಆಗಬೇಕು. ಪ್ರಮಾಣ ವಚನ ಮುಗಿದ ಬೆನ್ನಲ್ಲೇ ಬಹಿರಂಗ ವಿಶ್ವಾಸ ಮತ ಯಾಚನೆ ನಡೆಯಬೇಕು. ಕರ್ನಾಟಕ, ಬಿಹಾರ ಮಾದರಿಯಲ್ಲಿ ಸಂಪೂರ್ಣ ಪ್ರಕ್ರಿಯೆಯ ವಿಡಿಯೋ ಚಿತ್ರೀಕರಣ ಮಾಡಬೇಕು ಮತ್ತು ಅದು ನೇರ ಪ್ರಸಾರ ಆಗಬೇಕು ಎಂದು ಪೀಠ ಸೂಚಿಸಿತು.

24 ಗಂಟೆಯೊಳಗೆ  ಸದನದಲ್ಲಿ ಬಹುಮತ ಪರೀಕ್ಷೆ ನಡೆಸುವಂತೆ ನಿರ್ದೇಶನ ನೀಡುವಂತೆ ಕೋರಿ ಮೂರು ಪಕ್ಷಗಳು ಸುಪ್ರೀಂಕೋರ್ಟಿಗೆ  ಅರ್ಜಿ ಸಲ್ಲಿಸಿದ್ದವು.

ಸೋಮವಾರ ವಿಚಾರಣೆಯಲ್ಲಿ ಶಿವಸೇನೆ, ಕಾಂಗ್ರೆಸ್ ಮತ್ತು ಎನ್ಸಿಪಿ ಪಕ್ಷಗಳ ಪರವಾಗಿ ಕಪಿಲ್ ಸಿಬಲ್ ಮತ್ತು ಅಭಿಷೇಕ್ ಮನು ಸಿಂಘ್ವಿ ವಾದ ಮಂಡನೆ ಮಾಡಿದ್ದರು. ಮಹಾರಾಷ್ಟ್ರ ಸರ್ಕಾರ, ರಾಜ್ಯಪಾಲರು ಮತ್ತು ಬಿಜೆಪಿ ಪರ ಇರುವ ಶಾಸಕರ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹಾಗೂ ಹಿರಿಯ ವಕೀಲ ಮುಕುಲ್ ರೋಹಟಗಿ ವಾದಿಸಿದ್ದರು.

ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡ್ನವಿಸ್ ನೇತೃತ್ವದ ಸರ್ಕಾರ ರಚನೆ ಹಿನ್ನೆಲೆಯಲ್ಲಿ ವಿಧಾನಸಭೆಯಲ್ಲಿ ಬಲಾಬಲ ಪರೀಕ್ಷೆ ನಡೆಸುವ ಬಗ್ಗೆ ಸುಪ್ರೀಂಕೋರ್ಟಿನ ತ್ರಿಸದಸ್ಯ ಪೀಠವು 2019 ನವೆಂಬರ್ ೨೬ರ ಮಂಗಳವಾರ ಬೆಳಗ್ಗೆ ೧೦.೩೦ ಗಂಟೆಗೆ ತನ್ನ ತೀರ್ಪನ್ನು ನೀಡುವುದಾಗಿ ವಿಚಾರಣೆಯ ಬಳಿಕ 25 ಸೋಮವಾರ ಪ್ರಕಟಿಸಿತ್ತು..

ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು ತಮ್ಮನ್ನು ಆಹ್ವಾನಿಸಬೇಕು ಎಂಬುದಾಗಿ ಶಿವಸೇನೆ-ಎನ್ಸಿಪಿ-ಕಾಂಗ್ರೆಸ್ ಮೈತ್ರಿಕೂಟ ಮಾಡಿದ ಮನವಿಯನ್ನು ತಾನು ಪರಿಗಣಿಸುತ್ತಿಲ್ಲ ಎಂಬುದಾಗಿಯೂ ಸುಪ್ರೀಂಕೋರ್ಟ್ ಪೀಠ ಸ್ಪಷ್ಟ ಪಡಿಸಿತ್ತು.
ರಾಜ್ಯದ ರಾಜಕೀಯ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ರಾಜ್ಯಪಾಲರ ಕಚೇರಿ ಮತ್ತು ಉಭಯ ಕಕ್ಷಿದಾರರು ಬಹುಮತ ನಿರ್ಧಾರಕ್ಕೆ ಸದನದಲ್ಲಿ ಬಲಾಬಲ ಪರೀಕ್ಷೆ ಅನಿವಾರ್ಯ ಎಂಬುದಾಗಿ ನ್ಯಾಯಾಲಯದಲ್ಲಿ ಒಪ್ಪಿಕೊಂಡವು ಆದರೆ ಅದು ಯಾವಾಗ ನಡೆಯಬೇಕು ಎಂಬ ಬಗ್ಗೆ ಭಿನ್ನ ಅಭಿಪ್ರಾಯಗಳನ್ನು ವ್ಯಕ್ತ ಪಡಿಸಿದ್ದವು.

ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರನ್ನು ಪ್ರತಿನಿಧಿಸಿದ ಹಿರಿಯ ವಕೀಲ ಮುಕುಲ್ ರೋಹ್ಟಗಿ೨೪ ಗಂಟೆಗಳ ಒಳಗಾಗಿ ಸದನದಲ್ಲಿ ಬಲಾಬಲ ಪರೀಕ್ಷೆ ಸಾಧ್ಯವೇ ಇಲ್ಲ. ನ್ಯಾಯಾಲಯವು ರಾಜ್ಯಪಾಲರಿಗೆ ಆಜ್ಞಾಪಿಸಲು ಸಾಧ್ಯವಿಲ್ಲಎಂದು ಪೀಠಕ್ಕೆ ತಿಳಿಸಿದ್ದರು.

ಆದರೆ
ನ್ಯಾಯಮೂರ್ತಿ ಸಂಜೀವ ಖನ್ನಾ ಅವರು ವಿಷಯವನ್ನು ಬೇರೆ ದೃಷ್ಟಿಕೋನದಿಂದ ವೀಕ್ಷಿಸಿದ್ದರು.ಪ್ರತಿ ಪ್ರಕರಣದಲ್ಲೂ ನ್ಯಾಯಾಲಯವು ೨೪ ಗಂಟೆಗಳ ಒಳಗಾಗಿ ಸದನದಲ್ಲಿ ಬಲಾಬಲ ಪರೀಕ್ಷೆ ನಡೆಯಬೇಕು ಎಂದು ಆದೇಶ ಕೊಟ್ಟಿದೆ.. ಬಹುಮತವನ್ನು ರಾಜ್ಯಪಾಲರು ನಿರ್ಧರಿಸಲು ಬರುವುದಿಲ್ಲ, ಅದು ನಿರ್ಧಾರವಾಗುವುದು ಸದನದಲ್ಲಿ. ಮುಖ್ಯಮಂತ್ರಿಯವರು ಸದನದಲ್ಲಿ ಬಹುಮತ ಹೊಂದಿದ್ದಾರೆಯೇ ಎಂಬುದು ಇಂದಿನ ಪ್ರಶ್ನೆ. ಆದ್ದರಿಂದ ಸದನದಲ್ಲಿ ಬಲಾಬಲ ಪರೀಕ್ಷೆ ನಡೆಯಲೇ ಬೇಕುಎಂದು ನ್ಯಾಯಮೂರ್ತಿ ಖನ್ನಾ ಮೌಖಿಕ ಅಭಿಪ್ರಾಯ ವ್ಯಕ್ತ ಪಡಿಸಿದ್ದರು.
ವಿಚಾರಣೆ
ಕಾಲದಲ್ಲಿ ರೋಹ್ಟಗಿ ಅವರುನ್ಯಾಯೋಚಿತ ವೇಳೆಯಲ್ಲಿ ಸದನದಲ್ಲಿ ಬಲಾಬಲ ಪರೀಕ್ಷೆ ನಡೆಸಲು ಕ್ರಮ ಕೈಗೊಳ್ಳುವಂತೆ ನ್ಯಾಯಾಲಯವು ಈಗ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರಿಗೆ ಮನವಿ ಮಾಡಬಹುದಷ್ಟೆಎಂದು ಹೇಳಿದ್ದರು.

ರಾಜ್ಯಪಾಲರ
ಪರವಾಗಿ ಹಾಜರಾಗಿದ್ದ ಸಾಲಿಸಿಟರ್ ಜನರಲ್ ತುಷಾರ ಮೆಹ್ತ ಅವರುಇಂದು ಅಥವಾ ನಾಳೆಸದನದಲ್ಲಿ ಬಲಾಬಲ ಪರೀಕ್ಷೆ ನಡೆಸುವ ಯೋಚನೆಯನ್ನು ವಿರೋಧಿಸಿದ್ದರು. ನವೆಂಬರ್ ೨೩ರಂದು ಫಡ್ನವಿಸ್-ಅಜಿತ್ ಪವಾರ್  ಸರ್ಕಾರ ರಚಿಸಿದ್ದನ್ನು ಪ್ರಶ್ನಿಸಿ ಶಿವವಸೇನಾ-ಎನ್ಸಿಪಿ-ಕಾಂಗ್ರೆಸ್ ಮೈತ್ರಿಕೂಟ ದಾಖಲಿಸಿರುವ ಅರ್ಜಿಗೆ ಉತ್ತರ ನೀಡಲು  ತನಗೆ ಎರಡು ಅಥವಾ ಮೂರು ದಿನಗಳ ಕಾಲಾವಕಾಶವನ್ನು ನ್ಯಾಯಾಲಯವು ಮೊದಲು ನೀಡಬೇಕುಎಂದು ಅವರು ಹೇಳಿದ್ದರು.

ಶಿವಸೇನೆಯ ಇಡೀ ಗುಂಪೇ ಬಿಜೆಪಿ ಜೊತೆಗಿನ ಚುನಾವಣಾ ಪೂರ್ವ ಮೈತ್ರಿಯನ್ನು ಹಳ್ಳಕ್ಕೆ ತಳ್ಳಿ ಇನ್ನೊಂದು ಕಡೆಗೆ ಹೋಗಿದೆ. ತತ್ ಕ್ಷಣದ ಸದನ ಬಲಾಬಲ ಪರೀಕ್ಷೆ ಕುದುರೆ ವ್ಯಾಪಾರಕ್ಕೆ ಪ್ರಚೋದನೆ ನೀಡುತ್ತದೆಎಂದು ಮೆಹ್ತ ಹೇಳಿದ್ದರು.

ಎನ್ಸಿಪಿ, ಶಿವಸೇನೆ ಮತ್ತು ಕಾಂಗ್ರೆಸ್ ಪರ ಹಾಜರಾಗಿದ್ದ ಹಿರಿಯ ವಕೀಲ .ಎಂ. ಸಿಂಘ್ವಿ ಅವರು ತುರ್ತು ಸದನ ಪರೀಕ್ಷೆಯು ಕುದುರೆ ವ್ಯಾಪಾರಕ್ಕೆ ಪ್ರಚೋದನೆಯಲ್ಲ, ತಡೆಯಾಗಿ ಕೆಲಸ ಮಾಡುತ್ತದೆಎಂದು ಹೇಳಿದ್ದರು.

ಉಭಯ ಕಡೆಗಳೂ ಸದನದಲ್ಲಿ ಬಲಾಬಲ ಪರೀಕ್ಷೆಯನ್ನು ಒಪ್ಪಿವೆ. ಅಫಿಡವಿಟ್ಗಳಿಗೆ ಉತ್ತರಕ್ಕಾಗಿ ಈಗ ಕಾಯುವುದು ಏಕೆ? ಕಡುಬು ಎಂಬುದಕ್ಕೆ ತಿನ್ನುವುದೇ ಸಾಕ್ಷಿಎಂದು ಎಂದು ಸಿಂಘ್ವಿ ಹೇಳಿದ್ದರು.

ಶಿವಸೇನಾ ಪರ ಹಾಜರಾದ ಕಪಿಲ್ ಸಿಬಲ್ ಅವರು ನವೆಂಬರ್ ೨೨ರ ನಡುರಾತ್ರಿಯಲ್ಲಿ ನಡೆದ ತರಾತುರಿಯ ಘಟನಾವಳಿಗಳು ಮತ್ತು ಫಡ್ನವಿಸ್- ಅಜಿತ್ ಪವಾರ್ ಸರ್ಕಾರದ ಅಧಿಕಾರಾರೋಹಣವನ್ನು ಉಲ್ಲೇಖಿಸಿದ್ದರು.ಕೆಲವರಿಗೆ ರಾತ್ರಿಯ ಕತ್ತಲಿನ ರಕ್ಷಣೆಯಲ್ಲಿ ಅದೃಷ್ಟ ಬಾಗಿಲು ಬಡಿದಿದೆ. ಎಲ್ಲರಿಗೂ ಅದು ಕಾಣುವಂತಾಗಲು ಸದನದಲ್ಲಿ ಬಲಾಬಲ ಪರೀಕ್ಷೆ ನಡೆಯಲಿಎಂದು ಅವರು ಹೇಳಿದ್ದರು.

ತುಷಾರ ಮೆಹ್ತ ಅವರು ಸರ್ಕಾರ ರಚನೆಗೆ ಫಡ್ನವಿಸ್ ಅವರನ್ನು ಆಹ್ವಾನಿಸಿ ರಾಜ್ಯಪಾಲರು ನೀಡಿದ ಆದೇಶದ ಪ್ರತಿಯನ್ನು ಸಲ್ಲಿಸುವುದರೊಂದಿಗೆ ನ್ಯಾಯಾಲಯದಲ್ಲಿ ವಿಚಾರಣೆ ಆರಂಭವಾಗಿತ್ತು. ಅವರು ಸರ್ಕಾರ ರಚನೆಗೆ ಹಕ್ಕು ಮಂಡಿಸಿ ಫಡ್ನವಿಸ್ ಅವರು ಸಲ್ಲಿಸಿದ ಪತ್ರವನ್ನು ಕೂಡಾ ಹಾಜರು ಪಡಿಸಿದ್ದರು. ಫಡ್ನವಿಸ್ ಅವರನ್ನು ಬೆಂಬಲಿಸಿ ೫೪ ಮಂದಿ ಎನ್ಸಿಪಿ ಶಾಸಕರ ಸಹಿ ಇದ್ದ  ಅಜಿತ್ ಪವಾರ್ ಅವರ ಪತ್ರದ ಕಡೆಗೂ ಮೆಹ್ತ ಗಮನ ಸೆಳೆದಿದ್ದರು.

ಆದರೆ ಎನ್ಸಿಪಿ ಶಾಸಕರು ತಮ್ಮ ಸಹಿ ಹಾಕಿದ ಸಂದರ್ಭವನ್ನೇ ಸಿಂಘ್ವಿ ಅವರು ಪ್ರಶ್ನಿಸಿದ್ದರು.ಅವರು ನಿಮಗೆ (ಸುಪ್ರೀಂಕೋರ್ಟಿಗೆ) ಏನನ್ನು ತೋರಿಸಿದ್ದಾರೋ ಅದು ಅಜಿತ್ ಪವಾರ್ ಅವರನ್ನು ಶಾಸಕಾಂಗ ಪಕ್ಷ ನಾಯಕರಾಗಿ ಆಯ್ಕೆ ಮಾಡಲು ಎಲ್ಲ ಎನ್ಸಿಪಿ ಶಾಸಕರು ಹಾಕಿದ ಸಹಿಗಳು. ಅವರು ಸರ್ಕಾರ ರಚನೆಗೆ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಳ್ಳಲು ಬೆಂಬಲ ನೀಡಿ ಸಹಿ ಹಾಕಿಲ್ಲ. ಬಿಜೆಪಿ ಅತಿಯಾದ ಅರೆಬುದ್ದಿವಂತಿಕೆ ಪ್ರದರ್ಶನ ಮಾಡಿದೆ. ಇದು ಸ್ಪಷ್ಟವಾದ ಸುಳ್ಳುಸಾಕ್ಷಿ. ಒಬ್ಬನೇ ಒಬ್ಬ ಎನ್ಸಿಪಿ ಶಾಸಕನೂ ಸರ್ಕಾರ ರಚಿಸಲು ಬಿಜೆಪಿ ಜೊತೆಗೆ ಸೇರುವುದಾಗಿ ಹೇಳಿಲ್ಲ. ಇದನ್ನು ಹೇಳುತ್ತಿರುವ ಪತ್ರ ಇದೆಯೇ? ಇದು ಪ್ರಜಾಪ್ರಭುತ್ವದ ವಿರುದ್ಧ ಎಸಗಿರುವ ವಂಚನೆಎಂದು ಸಿಂಘ್ವಿ ಹೇಳಿದ್ದರು.

ಅಜಿತ್
ಪವಾರ್ ಅವರನ್ನು ಪ್ರತಿನಿಧಿಸಿದ ಹಿರಿಯ ವಕೀಲ ಮಣೀಂದರ್ ಸಿಂಗ್ ಅವರು, ತಾವು ನವೆಂಬರ್ ೨೨ರಂದು ಎನ್ಸಿಪಿ ಶಾಸಕಾಂಗ ಪಕ್ಷದ ನಾಯಕರಾಗಿ ಕ್ರಮ ಕೈಗೊಂಡಿರುವುದಾಗಿ ಹೇಳಿದ್ದರು. ಇದಕ್ಕೆ ವಿರುದ್ಧವಾಗಿ ಬೇರೇ ಏನನ್ನೂ ತೋರಿಸಲು ಆದಿನ ಏನೂ ಇರಲಿಲ್ಲ. ರಾಜ್ಯಪಾಲರು ತಮ್ಮ ವಿವೇಚನೆಯಂತೆ ಕ್ರಮ ಕೈಗೊಂಡಿದ್ದಾರೆ. ನಾನು ಎನ್ಸಿಪಿಎಂದು ಅವರು ಘೋಷಿಸಿದರು. ರಾಜ್ಯಪಾಲರ ಕ್ರಮ ಸರಿಯಾಗಿಯೇ ಇದೆ ಎಂದು ಅವರು ನುಡಿದಿದ್ದರು.ಅಜಿತ್ ಪವಾರ್ ಅವರಿಗೆ ಎನ್ಸಿಪಿಯನ್ನು ಪ್ರತಿನಿಧಿಸಲು ಅಧಿಕಾರ ನೀಡಿರಲಿಲ್ಲ ಎಂಬುದನ್ನು ತೋರಿಸಲು ನಮ್ಮ ಬಳಿ ೧೫೪ ಶಾಸಕರ ಮೂಲ ಪ್ರಮಾಣ ಪತ್ರಗಳೇ (ಅಫಿಡವಿಟ್) ಇವೆ. ಆದ್ದರಿಂದ ೨೪ ಗಂಟೆಯೊಳಗೆ ಸದನದಲ್ಲಿ ಬಲಾಬಲ ಪರೀಕ್ಷೆ ನಡೆಸಿ. ಸದನದ ಅತ್ಯಂತ ಹಿರಿಯ ಸದಸ್ಯರನ್ನು ಹಂಗಾಮೀ ಸಭಾಧ್ಯಕ್ಷರನ್ನಾಗಿ ಮಾಡಿ. ಸದನದ ಬಲಾಬಲ ಪರೀಕ್ಷೆಯ ವಿಡಿಯೋ ದಾಖಲೀಕರಣ ಆಗಲಿಎಂದು ಸಿಬಲ್ ಪ್ರತಿಕ್ರಿಯಿಸಿದ್ದರು.

ಫಡ್ನವಿಸ್ ಪರ ಹಾಜರಾಗಿದ್ದ ರೋಹ್ಟಗಿ ಅವರು ಮಧ್ಯಪ್ರವೇಶ ಮಾಡಿ,ಒಬ್ಬ ಪವಾರ್ ಅವರ ಜೊತೆಗಿದ್ದಾರೆ. ಒಬ್ಬ ಪವಾರ್ ನಮ್ಮ ಜೊತೆಗಿದ್ದಾರೆ. ಇದು ಕುಟುಂಬ ಕಲಹ ಆಗಿರಬಹುದು. ನಾನು ಕುದುರೆ ವ್ಯಾಪಾರದಲ್ಲಿ ನಿರತನಾಗಿ ಇಲ್ಲ್ಲ.. ನೋಡಿ ನನ್ನ ಚುನಾವಣಾಪೂರ್ವ ಪಾಲುದಾರನೇ ಹೋಗುತ್ತಿದ್ದಾರೆ. ರಾಷ್ಟ್ರಪತಿ ಆಳ್ವಿಕೆಯನ್ನು ಹೇರಲಾಯಿತು. ಎನ್ಸಿಪಿಯು ಅಜಿತ್ ಪವಾರ ಮೂಲಕ ೫೪ ಶಾಸಕರ ಬೆಂಬಲಕ್ಕೆ ಸಹಿ ಹಾಕಿದೆ. ನಾನು ೧೭೦ ಶಾಸಕರ ಬೆಂಬಲದೊಂದಿಗೆ ಸರ್ಕಾರ ರಚನೆಗಾಗಿ ರಾಜ್ಯಪಾಲರ ಬಳಿಗೆ ಹೋಗಿದ್ದೇನೆ. ನನ್ನ ಪ್ರತಿಪಾದನೆಯನ್ನು ಅಂಗೀಕರಿಸಲಾಗಿದೆ. ರಾಷ್ಟ್ರಪತಿ ಆಳ್ವಿಕೆಯನ್ನು ಹಿಂತೆಗೆದುಕೊಳ್ಳಲಾಗಿದೆ. ನಾನು ಪ್ರಮಾಣವಚನ ಸ್ವೀಕರಿಸಿದ್ದೇನೆಎಂದು ರೋಹ್ಟಗಿ ಹೇಳಿದ್ದರು.

ನವೆಂಬರ್
೨೩ರಂದು ರಾಜ್ಯಪಾಲರು ಗಾಳ ಹಾಕುವ ಕೆಲಸ ಮಾಡಲು ಸಾಧ್ಯವಿರಲಿಲ್ಲ ಎಂದು ಮೆಹ್ತ ಒಪ್ಪಿದ್ದರು.

ಅವರು ವಿವೇಚನೆಯಂತೆ ನಡೆದುಕೊಂಡಿದ್ದಾರೆ. ಅವರಿಗೆ ವಿವೇಚನಾಧಿಕಾರ ಬಳಸುವ ಅಧಿಕಾರವಿದೆಎಂದು ಮೆಹ್ತ ಹೇಳಿದ್ದರು.
ಶನಿವಾರ ನಸುಕಿನಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಹಿಂತೆಗೆದುಕೊಂಡು, ಬಿಜೆಪಿ ನಾಯಕ ಫಡ್ನವಿಸ್ ಅವರಿಗೆ ಮುಖ್ಯಮಂತ್ರಿಯಾಗಿ ಮತ್ತು ಎನ್ಸಿಪಿಯ ಅಜಿತ್ ಪವಾರ್ ಅವರಿಗೆ ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಬೋಧಿಸಿದ ರಾಜ್ಯಪಾಲರ ನಿರ್ಧಾರವನ್ನು ಪ್ರಶ್ನಿಸಿ ಶಿವಸೇನಾ-ಎನ್ಸಿಪಿ-ಕಾಂಗ್ರೆಸ್ ಪಕ್ಷಗಳು ಅರ್ಜಿಯಲ್ಲಿ ಸುಪ್ರೀಂಕೋರ್ಟಿನಲ್ಲಿ ಸಲ್ಲಿಸಿದ್ದವು.
ರಾಜ್ಯಪಾಲರು ತಮ್ಮ ವಿವೇಚನಾಧಿಕಾರವನ್ನು ಬಳಸಿ ನವೆಂಬರ್ ೨೩ರಂದು ದೊಡ್ಡ ಪಕ್ಷವನ್ನು ಸರ್ಕಾರ ರಚನೆಗೆ ಆಹ್ವಾನಿಸಿದ್ದಾರೆ ಎಂದು ಕೇಂದ್ರ ಸರ್ಕಾರವು ತಿಳಿಸಿತ್ತು.

ಯಾವ ಪಕ್ಷದ ಬಳಿ ಸಂಖ್ಯಾಬಲವಿದೆ ಎಂಬುದಾಗಿ ಕಂಡು ಹಿಡಿಯಲು ಗಾಳ ಹಾಕುವ ಕೆಲಸವನ್ನು ಆದಿನ ರಾಜ್ಯಪಾಲರು ಮಾಡಲು ಸಾಧ್ಯವಿರಲಿಲ್ಲ. ಇಲ್ಲಿ ಇರುವ ಪ್ರಶ್ನೆ ಪಕ್ಷವೊಂದು ೨೪ ಗಂಟೆಗಳ ಒಳಗಾಗಿ ಸದನದಲ್ಲಿ ಬಲಾಬಲ ಪರೀಕ್ಷೆ ನಡೆಸುವಂತೆ ನ್ಯಾಯಾಲಯದ ಹಸ್ತಕ್ಷೇಪವನ್ನು ಕೋರಬಹುದೇ ಎಂಬುದು ಇಲ್ಲಿ ಇರುವ ಪ್ರಶ್ನೆಎಂದು ತುಷಾರ ಮೆಹ್ತ ಹೇಳಿದ್ದರು.

ರಾಜ್ಯದಲ್ಲಿ ಚುನಾವಣಾ ಫಲಿತಾಂಶ ಬಳಿಕ ರಾಷ್ಟ್ರಪತಿ ಆಳ್ವಿಕೆ ಹೇರಬೇಕಾಗಿ ಬಂದ ಪರಿಸ್ಥಿತಿಯ ಅರಿವು ಇತ್ತು ಎಂದು ಮೆಹ್ತ ನುಡಿದಿದ್ದರು.

ಫಡ್ನವಿಸ್
ಅವರನ್ನು ಸರ್ಕಾರ ರಚನೆಗೆ ಆಹ್ವಾನಿಸಿದ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರ ಪತ್ರವನ್ನು ಪರಿಶೀಲಿಸಿದ ಬಳಿಕ ನ್ಯಾಯಾಲಯವುಮುಖ್ಯಮಂತ್ರಿಯು ಬಹುಮತ ಹೊಂದಿದ್ದಾನೆಯೇ ಅಥವಾ ಇಲ್ಲವೇ ಎಂಬುದು ಸದನದಲ್ಲಿಯೇ ನಿರ್ಧಾರವಾಗಬೇಕುಎಂದು ಹೇಳಿತ್ತು.

ರಾಜ್ಯಪಾಲರು ಶಿವಸೇನೆ, ಬಿಜೆಪಿ ಮತ್ತು ಎನ್ಸಿಪಿಗೆ ಸರ್ಕಾರ ರಚನೆ ಮಾಡುವಂತೆ ಆಹ್ವಾನಿಸಿದ್ದನ್ನು ಮತ್ತು ಅವರು ವಿಫಲರಾದ ಬಳಿಕವೇ ರಾಷ್ಟ್ರಪತಿ ಆಳ್ವಿಕೆ ಹೇರಿದ್ದನ್ನು ಸಾಲಿಸಿಟರ್ ಜನರಲ್ ನ್ಯಾಯಾಲಯಕ್ಕೆ ವಿವರಿಸಿದ್ದರು.

No comments:

Advertisement