My Blog List

Tuesday, November 5, 2019

ಅನರ್ಹ ಶಾಸಕರ ಪ್ರಕರಣ, ತೀರ್ಪು ಸಿದ್ಧವಿದೆ, ಅದಕ್ಕಾಗಿ ಕಾಯಿರಿ: ಸುಪ್ರೀಂ

ಅನರ್ಹ ಶಾಸಕರ ಪ್ರಕರಣ,  ತೀರ್ಪು ಸಿದ್ಧವಿದೆ,
  ಅದಕ್ಕಾಗಿ ಕಾಯಿರಿ: ಸುಪ್ರೀಂ
ಬಿಎಸ್ವೈ ಆಡಿಯೋ ದಾಖಲೆಗೆ: ಕಾಂಗ್ರೆಸ್ ಮನವಿ ಪರಿಶೀಲನೆಗೆ ಅಸ್ತು
ನವದೆಹಲಿ: ಕರ್ನಾಟಕದ ಅನರ್ಹ ಶಾಸಕರ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ಸಿದ್ಧವಿದೆ ಎಂದು 2019 ನವೆಂಬರ್ 05ರ ಮಂಗಳವಾರ ಹೇಳಿದ ಸುಪ್ರೀಂಕೋರ್ಟ್, ತೀರ್ಪಿಗಾಗಿ ಕಾಯುವಂತೆ ಕಾಂಗ್ರೆಸ್ ಪಕ್ಷಕ್ಕೆ ಸೂಚಿಸಿತು. ಆದಾಗ್ಯೂ, ೧೭ ಶಾಸಕರ ಅನರ್ಹತೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಹೇಳಿಕೆಯಿರುವ ಆಡಿಯೋ ಟೇಪನ್ನು ದಾಖಲೆಗೆ ತೆಗೆದುಕೊಳ್ಳಬೇಕು ಎಂಬ ಕಾಂಗ್ರೆಸ್ ಮನವಿಯನ್ನು ಪರಿಶೀಲಿಸುವುದಾಗಿ ಕೋರ್ಟ್ ಹೇಳಿತು.

ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮಾತುಗಳು ಇವೆ ಎನ್ನಲಾಗಿರುವ ಆಡಿಯೋ ಟೇಪನ್ನು ಶಾಸಕರ ಅನರ್ಹತೆಗೆ ಸಂಬಂಧಿಸಿದ ಪ್ರಕರಣದಲ್ಲಿ ಸಾಕ್ಷಿಯಾಗಿ ದಾಖಲೆಗೆ ತೆಗೆದುಕೊಳ್ಳಬೇಕು ಎಂಬುದಾಗಿ ಕಾಂಗ್ರೆಸ್ ವಕೀಲ ಕಪಿಲ್ ಸಿಬಲ್ ಅವರ ಸಲ್ಲಿಸಿದ ಮನವಿ ಮೇಲಿನ ವಿಚಾರಣೆಯನ್ನು ಸುಪ್ರೀಂಕೋರ್ಟ್ ಪೀಠವು ಈದಿನ  ನಡೆಸಿತು.

ಈದಿನ,  ಅರ್ಜಿದಾರ ದಿನೇಶ ಗುಂಡೂರಾವ್ ಅವರ ಪರವಾಗಿ ಹಾಜರಾದ ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಮುಖ್ಯಮಂತ್ರಿಯವರು ಇತ್ತೀಚೆಗೆ ಬಿಜೆಪಿಯ ಕೋರ್ ಸಮಿತಿ ಸಭೆಯಲ್ಲಿ ಸಂಪೂರ್ಣ ಪ್ರಕರಣ ಕೇಂದ್ರ ಗೃಹ ಸಚಿವರ ಸೂಚನೆ ಮೇರೆಗೆ ನಡೆದಿದೆ ಎಂಬುದಾಗಿ ಹೇಳಿದ್ದರು ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಕಾಂಗ್ರೆಸ್ ವಕೀಲ ಕಪಿಲ್ ಸಿಬಲ್ ಅವರು ಸಲ್ಲಿಸಿದ ಆಡಿಯೋ ಟೇಪಿನ ಪ್ರಸ್ತುತತೆ ಏನು ಎಂಬುದಾಗಿ ಸುಪ್ರೀಂಕೋರ್ಟ್ ಆರಂಭದಲ್ಲೇ ಪ್ರಶ್ನಿಸಿತು. ’ನಾವು ವಿಸ್ತೃತವಾಗಿ ಎಲ್ಲವನ್ನೂ ಪರಿಶೀಲಿಸಿದ್ದೇವೆ. ಈಗ ಇದರ ಪ್ರಸ್ತುತತೆ ಏನು?’ ಎಂದು ನ್ಯಾಯಮೂರ್ತಿ ಎನ್ವಿ ರಮಣ ನೇತೃತ್ವದ ನ್ಯಾಯಪೀಠವು ಕೇಳಿತು.

ಶಾಸಕರನ್ನು ಮುಂಬೈಗೆ ಒಯ್ಯಲಾಗಿತ್ತು ಎಂದು ನೀವು ಈಗಾಗಲೇ ವಾದಿಸಿದ್ದೀರಿ. ನಾವು ಎಲ್ಲವನ್ನೂ ಗಮನಕ್ಕೆ ತೆಗೆದುಕೊಂಡಿದ್ದೇವೆ. ನಾವು ಅದನ್ನು ಪರಿಶೀಲಿಸುತ್ತೇವೆ ಎಂದು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಕೃಷ್ಣ ಮುರಾರಿ ಅವರನ್ನೂ ಒಳಗೊಂಡ ಪೀಠ ಹೇಳಿತು.

ರಾಜೀನಾಮೆ ನೀಡುವಂತೆ ಬಂಡಾಯ ಶಾಸಕರ ಒತ್ತಡ ಹೇರುವಲ್ಲಿ ಬಿಜೆಪಿಯ ಪಾತ್ರ ಇರುವುದನ್ನು  ಸೋಮವಾರ ನ್ಯಾಯಾಲಯಕ್ಕೆ ಸಲ್ಲಿಸಲಾಗಿರುವ ಆಡಿಯೋ ಟೇಪ್ ಮತ್ತು ಪತ್ರಿಕಾ ವರದಿಗಳು ಸಾಬೀತು ಪಡಿಸಿವೆ ಎಂದು ಕಪಿಲ್ ಸಿಬಲ್ ಅವರು ವಾದಿಸಿದರು.

ನವೆಂಬರ್ 01ರ ಶುಕ್ರವಾರ ಸಂಜೆ ಬಹಿರಂಗಗೊಂಡಿರುವ ವಿಡಿಯೋ ಕರ್ನಾಟಕದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ರಾಷ್ಟ್ರೀಯ ನಾಯಕರ ಸೂಚನೆ ಮೇರೆಗೆಆಪರೇಷನ್ ಕಮಲಕಾರ್ಯಾಚರಣೆ ನಡೆಸಿದ್ದನ್ನು ಒಪ್ಪಿಕೊಂಡಿರುವುದನ್ನು ತೋರಿಸುತ್ತದೆಎಂದು ಅವರು ಹೇಳಿದರು.

ಕಾಂಗ್ರೆಸ್ ಪಕ್ಷವು ಆಡಿಯೋ ಟೇಪಿನ ಪ್ರತಿಗಳನ್ನು ಸುಪ್ರೀಂಕೋರ್ಟಿಗೆ ಸಲ್ಲಿಸಿದೆ.

ನಾವು ಅದನ್ನು ನೋಡುತ್ತೇವೆ. ಇದು ಪರಿಣಾಮಗಳನ್ನು ಬೀರಬಹುದು ಮತ್ತು ತೀರ್ಪನ್ನು ವಿಳಂಬಗೊಳಿಸಬಹುದು. ನಾವು ನೋಟಿಸ್ ನೀಡಬೇಕಾಗುತ್ತದೆ. ಪ್ರಭಾವ ಬೀರಿದ ವಿಷಯವನ್ನು ವಾದಗಳಲ್ಲೂ ಪ್ರಸ್ತಾಪಿಸಲಾಗಿದೆಎಂದು ನ್ಯಾಯಾಲಯ ಹೇಳಿತು.

ಅನರ್ಹ ಶಾಸಕರ ಪರ ಹಾಜರಾಗಿದ್ದ ಹಿರಿಯ ವಕೀಲ ಸಿಎ ಸುಂದರಂ ಅವರು ಕಾಂಗ್ರೆಸ್ ನಾಯಕರು ವಿಷಯವನ್ನುಸೆನ್ಸೇಷನ್ಮಾಡಲು ಬಯಸಿದ್ದಾರೆ. ಮುಖ್ಯಮಂತ್ರಿ ಈಗಾಗಲೇ ಅದನ್ನು ನಿರಾಕರಿಸಿದ್ದಾರೆ ಎಂದು ಹೇಳಿದರು.

ಕೇಂದ್ರ ಗೃಹ ಸಚಿವ ಅಮಿತ್ ಅವರು ಪಕ್ಷಾಂತರ ಮಾಡಿಸುವಲ್ಲಿ ಶಾಮೀಲಾಗಿದ್ದರು ಎಂಬುದನ್ನು ಕೂಡಾ ಆಡಿಯೋ ಟೇಪ್ ಸಾಬೀತು ಪಡಿಸಿದೆ ಎಂದೂ ಸಿಬಲ್ ನ್ಯಾಯಾಲಯಕ್ಕೆ ವಿವರಿಸಿದರು.
ಅಹವಾಲನ್ನು ತಾನು ಗಮನಕ್ಕೆ ತೆಗೆದುಕೊಳ್ಳುವುದಾಗಿ ನ್ಯಾಯಾಲಯ ಹೇಳಿತು.

2019 ಅಕ್ಟೋಬರ್ ೨೬ರಂದು ನ್ಯಾಯಾಲಯವು ಪ್ರಕರಣದ ಮೇಲಿನ ತೀರ್ಪನ್ನು ಕಾಯ್ದಿರಿಸಿದ್ದು, ಮುಂದಿನ ಕೆಲದಿನಗಳಲ್ಲಿ  ಅದು ಪ್ರಕಟಗೊಳ್ಳುವ ನಿರೀಕ್ಷೆ ಇದೆ.

ಕರ್ನಾಟಕ ವಿಧಾನಸಭೆಯ ಹಿಂದಿನ ಸಭಾಧ್ಯಕ್ಷ ಕೆ.ಆರ್. ರಮೇಶ ಕುಮಾರ್ ಅವರು ತಮ್ಮನ್ನು ಅನರ್ಹಗೊಳಿಸಿ ನೀಡಿದ ಆದೇಶವನ್ನು ರದ್ದು ಪಡಿಸುವಂತೆ ಕೋರಿ ಬಂಡಾಯ ಶಾಸಕರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.

ತಾವು ಸ್ವ ಇಚ್ಛೆಯಿಂದ ರಾಜೀನಾಮೆ ನೀಡಿದ್ದು, ಕಾಂಗ್ರೆಸ್- ಜನತಾದಳ (ಎಸ್) ಮೈತ್ರಿ ಸರ್ಕಾರಕ್ಕೆ ನೀಡಿದ್ದ ಬೆಂಬಲ ಹಿಂತೆಗೆದುಕೊಳ್ಳುವಂತೆ ಯಾರೂ ತಮ್ಮ ಮೇಲೆ ಒತ್ತಡ ಹೇರಿಲ್ಲ ಎಂದು ಬಂಡಾಯ ಶಾಸಕರು ಪ್ರತಿಪಾದಿಸಿದ್ದರು.

ಸಂಭಾಷಣೆಯು ಕರ್ನಾಟಕದ ಅನರ್ಹ ಶಾಸಕರು ಸಲ್ಲಿಸಿದ ಅರ್ಜಿಗಳನ್ನು ಇತ್ಯರ್ಥ ಪಡಿಸುವಲ್ಲಿ ಪರಿಣಾಮ ಬೀರುತ್ತದೆ ಎಂದು  ಗುಂಡೂರಾವ್ ಅವರು 2019 ನವೆಂಬರ್ 04ರ ಸೋಮವಾರ ಸಲ್ಲಿಸಿದ್ದ ಅರ್ಜಿಯು ಹೇಳಿತ್ತು.

ಆಡಿಯೋ ಟೇಪಿನ  ಲಿಪ್ಯಂತರವು (ಟ್ರಾನ್ಸ್ ಕ್ರಿಪ್ಟ) ಸ್ಪಷ್ಟವಾಗಿ ಅನರ್ಹ ಶಾಸಕರು ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಸರ್ಕಾರವನ್ನು ಪತನಗೊಳಿಸುವ ಸಲುವಾಗಿಯೇ ಪಕ್ಷಾಂತರ ಮಾಡಿದ್ದರು ಎಂಬುದನ್ನು ತೋರಿಸುತ್ತದೆ. ಮೂಲಕ ಇದು ಸಂವಿಧಾನದ ೧೦ನೇ ಶೆಡ್ಯೂಲಿನ (ಪಕ್ಷಾಂತರ ನಿಷೇಧ) ವಿಧಿಗಳನ್ನು ಆಕರ್ಷಿಸುತ್ತದೆ ಎಂದು ಗುಂಡೂರಾವ್ ಅವರು ಸಲ್ಲಿಸಿದ್ದ ಅರ್ಜಿ ಹೇಳಿತ್ತು.

ಸುಪ್ರೀಂಕೋರ್ಟಿಗೆ ರಿಟ್ ಅರ್ಜಿಗಳನ್ನು ಸಲ್ಲಿಸಿದ್ದೇ ಬಿಜೆಪಿ ನಾಯಕರ ಪ್ರಚೋದನೆ, ಮೇಲ್ವಿಚಾರಣೆ ಮತ್ತು ನಿರ್ದೇಶನಗಳ ಮೇರೆಗೆ ಎಂದು ಅರ್ಜಿದಾರರು ಪ್ರತಿಪಾದಿಸಿದ್ದರು.

ಬಿಎಸ್ ಯಡಿಯೂರಪ್ಪ ಮತ್ತು ಅಮಿತ್ ಶಾ ಅವರು ರಾಜೀನಾಮೆಗಳನ್ನು ಕೊಡಿಸುವಲ್ಲಿ ಶಾಮೀಲಾಗಿದ್ದಾರೆ ಎಂಬುದನ್ನು ತೋರಿಸುವ ದಾಖಲೆ ಇದು. ಶಾಸಕರಿಗೆ ಹಣ ಮತ್ತು ಅಧಿಕಾರದ ಭರವಸೆ ನೀಡಿ ಒತ್ತಡ ಹಾಕಿರುವುದು ಸ್ಪಷ್ಟವಾಗಿದೆ. ಸಲ್ಲಿಸಿದ ಸಾಕ್ಷ್ಯವನ್ನು ಪರಿಗಣಿಸಲು ಸುಪ್ರೀಂಕೋರ್ಟ್ ನಿರ್ಧರಿಸಿದೆ. ಸತ್ಯ ಗೆಲ್ಲುತ್ತದೆಎಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಕಾನೂನು ಘಟಕದ ಸದಸ್ಯ ಪ್ರಕಾಶ ರಾಥೋಡ್ ಬಳಿಕ ಹೇಳಿದರು.

ಕಾಂಗ್ರೆಸ್ ಮತ್ತು ಜನತಾದಳದ ೧೭ ಮಂದಿ ಬಂಡಾಯ ಶಾಸಕರನ್ನು ಸೆಳೆಯಲು ಯತ್ನಿಸಿದ್ದನ್ನು ಯಡಿಯೂರಪ್ಪ ಒಪ್ಪಿಕೊಂಡಿದ್ದು, ಶಾಸಕರ ಬೆಂಬಲ ವಾಪಸಾತಿ ಪರಿಣಾಮವಾಗಿ ಮೈತ್ರಿ ಸರ್ಕಾರ ಪತನಗೊಂಡಿದೆ ಎಂದು ಕಾಂಗ್ರೆಸ್ ಆಪಾದಿಸಿದೆ.

ಬಂಡಾಯಶಾಸಕರನ್ನು ಅನರ್ಹಗೊಳಿಸಿ ಹಾಲಿ ವಿಧಾನಸಭೆಯ ಉಳಿದ ಅವಧಿಗೆ ಉಪಚುನಾವಣೆಗೆ ಸ್ಪರ್ಧಿಸದಂತೆ ಅನರ್ಹಗೊಳಿಸಿದ ಮಾಜಿ ವಿಧಾನಸಭಾಧ್ಯಕ್ಷ ಕೆ.ಆರ್. ರಮೇಶ ಕುಮಾರ್ ಅವರ ಆದೇಶವನ್ನು ಎತ್ತಿ ಹಿಡಿಯುವಂತೆ ಕಾಂಗ್ರೆಸ್ ಸುಪ್ರೀಂಕೋರ್ಟಿಗೆ ಮನವಿ ಮಾಡಿದೆ.

ವಿಧಾನಸಭಾಧ್ಯಕ್ಷರ ಆದೇಶವನ್ನು ಎತ್ತಿ ಹಿಡಿಯದೇ ಇದ್ದರೆ ಸಂವಿಧಾನದ ೧೦ನೇ ವಿಧಿಯ (ಪಕ್ಷಾಂತರ ನಿಷೇಧ ಕಾಯ್ದೆ) ಉಲ್ಲಂಘನೆಯಾಗುತ್ತದೆ ಎಂದು ಕಪಿಲ್ ಸಿಬಲ್ ನ್ಯಾಯಾಲಯಕ್ಕೆ ಹೇಳಿದ್ದರು.

ಏನಿದ್ದರೂ, ವೈರಲ್ ಆದ ಆಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಯಡಿಯೂರಪ್ಪ ಶನಿವಾರ ಸ್ಪಷ್ಟನೆ ನೀಡಿದ್ದರು. ’ಹೌದು, ನಾನು ಹುಬ್ಬಳ್ಳಿಯಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದೇನೆ ಮತ್ತು ಅನರ್ಹ ಶಾಸಕರಿಗೆ ಸಂಬಂಧಿಸಿದ ಒಳ್ಳೆಯ ವಿಚಾರಗಳನ್ನು ಅವರಿಗೆ ಹೇಳಿದ್ದೇನೆಎಂದು ಯಡಿಯೂರಪ್ಪ ಹೇಳಿದ್ದರು.

No comments:

Advertisement