Monday, November 25, 2019

ಬಹುಮತ ಸಾಬೀತಿಗೆ ಬಿಜೆಪಿ ಸಿದ್ಧತೆ, ಶಾಸಕರ ಸ್ಥಳಾಂತರ ಇಲ್ಲ

ಬಹುಮತ ಸಾಬೀತಿಗೆ ಬಿಜೆಪಿ ಸಿದ್ಧತೆ, ಶಾಸಕರ ಸ್ಥಳಾಂತರ ಇಲ್ಲ
ಮುಂಬೈ: ಮಹಾರಾಷ್ಟ್ರ ರಾಜ್ಯದಲ್ಲಿ ಮುಖ್ಯಮಂತ್ರಿ ಆಗಿ ದೇವೇಂದ್ರ ಫಡ್ನವಿಸ್ ಹಾಗೂ ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ನಡೆಯಲಿರುವ ಸದನ ಬಲಾಬಲ ಪರೀಕ್ಷೆ ಎದುರಿಸಲು ಬಿಜೆಪಿ ಸಿದ್ಧತೆ ಆರಂಭಿಸಿತು.

ದಾದರಿನ ವಸಂತ ಸ್ಮಾರಕದಲ್ಲಿ 2019 ನವೆಂಬರ್ 24ರ ಭಾನುವಾರ ಮುಖ್ಯಮಂತ್ರಿ ಫಡ್ನವಿಸ್ ಮತ್ತು ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರನ್ನು ಅಭಿನಂದಿಸಲು ಬಿಜೆಪಿಯ ಶಾಸಕರು ಆಯೋಜಿಸಿದ್ದ ಸಮಾರಂಭದ ಬಳಿಕ ಬಿಜೆಪಿ ಶಾಸಕ ಆಶೀಸ್ ಶೇಲಾರ್ ವಿಚಾರವನ್ನು ತಿಳಿಸಿದರು.

ಸಭೆಯ ಅನಂತರ ಮಾಧ್ಯಮಗಳ ಜತೆ ಮಾತನಾಡಿದ ಬಿಜೆಪಿ ಶಾಸಕ ಆಶಿಶ್ ಶೇಲಾರ್ ಅವರು, ಸಭೆಯಲ್ಲಿ ನವೆಂಬರ್ ೩೦ರಂದು ವಿಧಾನಸಭೆಯಲ್ಲಿ ನಡೆಯುವ ವಿಶ್ವಾಸ ಮತದ ವೇಳೆ ಬಹುಮತ ಸಾಬೀತುಪಡಿಸಲು ಹಾಗೂ ಗೆಲ್ಲುವ ಕುರಿತು ಪಕ್ಷವು ಕಾರ್ಯತಂತ್ರಗಳನ್ನು ರೂಪಿಸಿದೆ ಎಂದು ಹೇಳಿದರು.

2019ರ ನವೆಂಬರ್ ೩೦ ರಂದು ವಿಧಾನಸಭೆಯಲ್ಲಿ ಬಹುಮತವನ್ನು ಸಾಬೀತುಪಡಿಸುವಲ್ಲಿ ನಾವು ಯಶಸ್ವಿಯಾಗುತ್ತೇವೆ. ಭಾನುವಾರದ ಸಭೆಯಲ್ಲಿ ಕುರಿತು ನಿರ್ಧರಿಸಲಾಯಿತು ಎಂದು ಆಶಿಶ್ ಶೇಲಾರ್ ಹೇಳಿದರು.

ರಾಜ್ಯದಲ್ಲಿ ಫಡ್ನವಿಸ್ ಮತ್ತು ಅಜಿತ್ ಪವಾರ್ ಅವರ ನೇತೃತ್ವದಲ್ಲಿ ಸ್ಥಿರ ಮತ್ತು ಪ್ರಬಲ ಸರಕಾರ ನೀಡಲಾಗುವುದು. ರಾಜ್ಯದ ಅಭಿವೃದ್ಧಿ ವೇಗ ಪಡೆಯಲಿದೆ ಎಂದೂ ಅವರು ಸ್ಪಷ್ಟಪಡಿಸಿದರು. ಫಡ್ನವಿಸ್ - ಪವಾರ್ ಅವರು ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ ರಾಜ್ಯದ ಜನರಲ್ಲಿ ಸಂತೋಷದ ವಾತಾವರಣ ಮೂಡಿತು ಎಂದು ಅವರು ನುಡಿದರು.

ಬಿಜೆಪಿ ನಾಯಕರನ್ನು ಎಲ್ಲಿಗೂ ಸ್ಥಳಾಂತರಿಸುವುದಿಲ್ಲ. ನಮಗೆ ನಮ್ಮ ಶಾಸಕರ ಮೇಲೆ ನಂಬಿಕೆಯಿದೆ. ಅವರಿಗೆ ಪಕ್ಷದ ಬಗ್ಗೆ ನಿಷ್ಠೆ ಇದೆ. ಆದರೆ ಬೇರೆ ಪಕ್ಷಗಳ ನಾಯಕರಿಗೆ ತಮ್ಮ ಶಾಸಕರ ಮೇಲೆ ವಿಶ್ವಾಸವಿಲ್ಲ. ಆದ್ದರಿಂದ ಹೋಟೆಲುಗಳಿಗೆ ಕರೆದುಕೊಂಡು ಹೋಗಿ ಇರಿಸಲಾಗುತ್ತದೆ. ಎನ್ಸಿಪಿ ಶಿವಸೇನಾ ಶಾಸಕರನ್ನು ಹೋಟೆಲುಗಳಲ್ಲಿ ಬಂಧಿಸಿ ಇಡಲಾಗಿದೆ. ಆದರೆ ಬಿಜೆಪಿ ಶಾಸಕರನ್ನು ಎಲ್ಲಿಗೂ ಸ್ಥಳಾಂತರಗೊಳಿಸುವುದಿಲ್ಲ ಎಂದು ಶೇಲಾರ್ ಹೇಳಿದರು.

ರಾಜ್ಯದಲ್ಲಿ ಆಪರೇಷನ್ ಕಮಲ ಆಗಲಿ, ಆಪರೇಶನ್ ದೇವೇಂದ್ರ ಆಗಲಿ ಮತ್ತು ಆಪರೇಷನ್ ಅಜಿತ್ ಪವಾರ್ ಆಗಲೀ ಕಾರ್ಯಾಚರಣೆಯಲ್ಲಿಲ್ಲ ಎಂದು ಅವರು ಹೇಳಿದರು.

No comments:

Advertisement