My Blog List

Thursday, November 7, 2019

’ಪಾಕಿಸ್ತಾನದ ರಹಸ್ಯ ಕಾರ್ಯಸೂಚಿ ಬಗ್ಗೆ ನಾನು ಮೊದಲೇ ಹೇಳಿದ್ದೆ’

’ಪಾಕಿಸ್ತಾನದ ರಹಸ್ಯ ಕಾರ್ಯಸೂಚಿ
ಬಗ್ಗೆ ಮೊದಲೇ ಹೇಳಿದ್ದೆ
ಭಿಂದ್ರನ್‌ವಾಲೆ ಪೋಸ್ಟರ್‌ಗೆ ಪಂಜಾಬ್ ಸಿಎಂ ಅಮರೀಂದರ್ ಸಿಂಗ್ ಆಕ್ರೋಶ
ನವದೆಹಲಿ: ’ಪಾಕಿಸ್ತಾನವು ರಹಸ್ಯ ಕಾರ್ಯಸೂಚಿಯನ್ನು ಹೊಂದಿದೆ ಎಂದು ನಾನು ನಿಮಗೆ ಮೊದಲೇ ಹೇಳಿದ್ದೆ ಎಂಬುದಾಗಿ ಹೇಳುವ ಮೂಲಕ ಪಂಜಾಬಿನ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು ಕರ್ತಾರಪುರ ಕಾರಿಡಾರ್ ಉದ್ಘಾಟನೆ ಸಂದರ್ಭಕ್ಕಾಗಿ ಪಾಕಿಸ್ತಾನ ಬಿಡುಗಡೆ ಮಾಡಿದ ವಿವಾದಾತ್ಮಕ ವಿಡಿಯೋ ದೃಶ್ಯಾವಳಿಗೆ ಆಕ್ರೋಶ ವ್ಯಕ್ತ ಪಡಿಸಿದರು.

ಕರ್ತಾರಪುರ ಕಾರಿಡಾರ್ ಉದ್ಘಾಟನೆ ಸಂದರ್ಭಕ್ಕಾಗಿ ಬಿಡುಗಡೆ ಮಾಡಲಾಗಿರುವ ಹಾಡಿನ ವಿವಾದಾತ್ಮಕ ವಿಡಿಯೋದಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದಿ ನಾಯಕರಾದ ಜರ್ನೈಲ್ ಸಿಂಗ್ ಭಿಂದ್ರನ್ ವಾಲೆ, ಮೇಜರ್ ಜನರಲ್ ಶಾಬೆಗ್ ಸಿಂಗ್ ಮತ್ತು ಆಮ್ರಿಕ್ ಸಿಂಗ್ ಖಾಲ್ಸಾ ಅವರ ಭಿತ್ತಿಚಿತ್ರಗಳನ್ನು ಹಿನ್ನೆಲೆಯಲ್ಲಿ ಪ್ರದರ್ಶಿಸಿದ್ದಕ್ಕೆ ಪಂಜಾಬ್ ಮುಖ್ಯಮಂತ್ರಿ ಈ ಪ್ರತಿಕ್ರಿಯೆ ನೀಡಿದರು.

ಪಾಕಿಸ್ತಾನದ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು 2019 ನವೆಂಬರ್ 04ರ ಸೋಮವಾರ ಬಿಡುಗಡೆ ಮಾಡಿದ ಈ ವಿಡಿಯೋದ ಹಾಡಿನ ಹಿನ್ನೆಲೆಯಲ್ಲಿ ಭಾರತೀಯ ಸೇನೆಯು ೧೯೮೪ರಲ್ಲಿ ಸ್ವರ್ಣದೇಗುಲವನ್ನು ಭಯೋತ್ಪಾದಕರಿಂದ ಮುಕ್ತಗೊಳಿಸಲು ನಡೆಸಿದ ಬ್ಲೂಸ್ಟಾರ್ ಕಾರ್ಯಾಚರಣೆಯಲ್ಲಿ ಹತರಾದ  ಮೂವರು ಭಯೋತ್ಪಾದಕರ ಭಿತ್ತಿ ಚಿತ್ರಗಳು ಕಂಡು ಬಂದಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಯಿತು.

‘ಕಾರಿಡಾರ್ ಮುಕ್ತಗೊಳಿಸುವಿಕೆಯ ಹಿಂದೆ ಪಾಕಿಸ್ತಾನಕ್ಕೆ  ಕೀಳು ಉದ್ದೇಶದ ರಹಸ್ಯ ಕಾರ್ಯಸೂಚಿ ಇದೆ ಎಂದು ಮೊದಲ ದಿನದಿಂದಲೇ ನಾನು ಆಗಾಗ ಎಚ್ಚರಿಕೆ ನೀಡುತ್ತಲೇ ಬಂದಿದ್ದೆ ಎಂದು ಅಮರೀಂದರ್ ಸಿಂಗ್ ಹೇಳಿದರು.

ಪವಿತ್ರವಾದ ಕರ್ತಾರಪುರ ಗುರುದ್ವಾರಕ್ಕೆ ಪ್ರವೇಶಾವಕಾಶ ಕಲ್ಪಿಸಬೇಕು ಎಂದು ಸಿಖ್ ಸಮುದಾಯವು ಕಳೆದ ೭೦ ವರ್ಷಗಳಿಂದ ಆಗ್ರಹಿಸುತ್ತಲೇ ಇದೆ. ಈ ಬೇಡಿಕೆಯನ್ನು ಒಪ್ಪಿಕೊಳ್ಳಲು ಪಾಕಿಸ್ತಾನವು ದಿಢೀರ್ ತೀರ್ಮಾನ ಕೈಗೊಂಡಾಗಲೇ, ಧಾರ್ಮಿಕ ಭಾವನೆಗಳ ದುರ್ಬಳಕೆ ಮಾಡಿಕೊಂಡು ಸಿಖ್ ಸಮುದಾಯದ ಜನರನ್ನು ಸೆಳೆಯುವ ರಹಸ್ಯ ಉದ್ದೇಶವು ಪಾಕಿಸ್ತಾನಕ್ಕೆ ಇತ್ತು ಎಂಬುದು ಈಗ ಬಹಿರಂಗಗೊಂಡಿದೆ ಎಂದು ಕ್ಯಾಪ್ಟನ್ ಸಿಂಗ್ ವರದಿಗಾರರ ಜೊತೆ ಮಾತನಾಡುತ್ತಾ ಹೇಳಿದರು.

‘ಕಾರಿಡಾರಿನ ಮೂಲಕ ಯಾವುದೇ ಕುಕೃತ್ಯ ನಡೆಸುವ ಧೈರ್ಯವನ್ನು ಪಾಕಿಸ್ತಾನ ತೋರೀತು ಎಂದು ನಾವು ನಿರೀಕ್ಷಿಸದೇ ಇದ್ದರೂ, ಗಡಿ ರಾಜ್ಯವಾಗಿ ಪಂಜಾಬ್ ಕಟ್ಟೆಚ್ಚರದಲ್ಲಿ ಇರಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ರಾಜ್ಯವು ಪರಿಸ್ಥಿತಿಯ ಮೇಲೆ ಹೆಚ್ಚಿನ ನಿಗಾ ಹಾಗೂ ಎಚ್ಚರವನ್ನು ಇರಿಸಿದೆ’ ಎಂದು ಅಮರೀಂದರ್ ಸಿಂಗ್ ನುಡಿದರು.

ಪ್ರಸ್ತುತ ಪಾಕಿಸ್ತಾನದಲ್ಲಿ ಇರುವ ಕರ್ತಾರಪುರದಲ್ಲಿ ಕೊನೆಯ ದಿನಗಳನ್ನು ಕಳೆದಿದ್ದ ಸಿಖ್ ಪಂಥದ ಸ್ಥಾಪಕ ಗುರು ನಾನಕ್ ಅವರು ನಿರ್ಮಿಸಿದ್ದ ಗುರುದ್ವಾರಕ್ಕೆ ಭೇಟಿ ನೀಡಲು ಯಾತ್ರಿಕರಿಗೆ ವೀಸಾಮುಕ್ತ ಪ್ರವೇಶ ಅವಕಾಶ ಕಲ್ಪಿಸಿದ ಪಾಕಿಸ್ತಾನದ ಕೊನೆ ಕ್ಷಣದ ರಿಯಾಯ್ತಿಗಳು ಪಂಜಾಬಿನಲ್ಲಿ ಉಗ್ರವಾದವನ್ನು ಪುನಶ್ಚೇತನಗೊಳಿಸುವ ವಿಸ್ತೃತ ಸಂಚಿನ ಭಾಗವಾಗಿರಬಹುದು ಎಂದು ಭದ್ರತಾ ಸಂಸ್ಥೆಗಳೂ ಶಂಕಿಸಿರುವುದಾಗಿ ಅಧಿಕಾರಿಗಳು ಹೇಳಿದರು.

ಪಾಕಿಸ್ತಾನಿ ಪ್ರದಾನಿ ಇಮ್ರಾನ್ ಖಾನ್ ಅವರು 2019 ನವೆಂಬರ್ 01ರ ಶುಕ್ರವಾರ, ಕರ್ತಾರಪುರ ಕಾರಿಡಾರ್ ಮೂಲಕ ಪಾಕಿಸ್ತಾನಕ್ಕೆ ಬರಲು ಪಾಸ್ ಪೋರ್ಟ್ ಹೊಂದಿರಬೇಕಾದ ಅಗತ್ಯವಿಲ್ಲ. ಕಾನೂನುಬದ್ಧ ಗುರುತಿನ ಕಾರ್ಡ್ ಇದ್ದರೆ ಸಾಕು ಎಂದು ಪ್ರಕಟಿಸಿದ್ದರು.  ಗುರು ನಾನಕ್ ದೇವ್ ಅವರ ೫೫೦ನೇ ಜನ್ಮದಿನದ ಅಂಗವಾಗಿ, ಕಾರಿಡಾರ್ ಉದ್ಘಾಟನೆಯ ದಿನವಾದ ನವೆಂಬರ್ ೯ರಂದು ಮತ್ತು ಬಳಿಕ ಮೂರು ದಿನಗಳ ಯಾತ್ರಾರ್ಥಿಗಳಿಗೆ ೨೦ ಡಾಲರುಗಳ ಸೇವಾ ಶುಲ್ಕವನ್ನೂ ಮನ್ನಾ ಮಾಡಲಾಗಿದೆ ಎಂದೂ ಖಾನ್ ಹೇಳಿದ್ದರು.

ತಮ್ಮ ಯಾತ್ರೆಗಾಗಿ ಯಾತ್ರಿಗಳು ೧೦ ದಿನ ಮುಂಚಿತವಾಗಿಯೇ ಹೆಸರು ನೋಂದಾಯಿಸಬೇಕಾಗಿಯೂ ಇಲ್ಲ ಎಂದು ಅವರು ತಿಳಿಸಿದ್ದರು.

ಈ ದಿಢೀರ್ ಹೃದಯ ಪರಿವರ್ತನೆಯು ಸಿಕ್ಖರ ಬಗೆಗೆ ’ಪೇಮವನ್ನು ತೋರಿಸುವ ಕಪಟ ಯತ್ನದ ಸ್ವಷ್ಟ ಚಿತ್ರ ಎಂದು ಅಧಿಕಾರಿಯೊಬ್ಬರು ಈ ಪ್ರಕಟಣೆಯನ್ನು ಉಲ್ಲೇಖಿಸಿ ಹೇಳಿದರು.

’ನಿರ್ದಿಷ್ಟವಾಗಿ ಅವರು ಯುವಕರನ್ನು ಗುರಿಯಾಗಿಸಲು ಬಯಸಿದ್ದಾರೆ
ಎಂದು ಪರಿಚಯ ಹೇಳಲು ಇಚ್ಛಿಸದ ಅವರು ನುಡಿದರು.

ಗುರುದಾಸಪುರದ ಡೇರಾ ಬಾಬಾ ನಾನಕ್ ಗುರುದ್ವಾರ ಮತ್ತು ಪಾಕಿಸ್ತಾನದ ಕರ್ತಾರಪುರದ ದರ್ಬಾರ ಸಾಹಿಬ್ ಗುರುದ್ವಾರವನ್ನು ಸಂಪರ್ಕಇಸುವ ಕರ್ತಾರಪುರ ಕಾರಿಡಾರ್ ನವೆಂಬರ್ ೯ರಂದು ಉದ್ಘಾಟನೆಗೆ ಸಜ್ಜಾಗಿದೆ.

No comments:

Advertisement