My Blog List

Saturday, December 21, 2019

ಉನ್ನಾವ್ ಅತ್ಯಾಚಾರ ಪ್ರಕರಣ : ಕುಲದೀಪ್ ಸಿಂಗ್ ಸೆಂಗರ್ ಗೆ ಜೀವಾವಧಿ ಶಿಕ್ಷೆ

ಉನ್ನಾವ್ ಅತ್ಯಾಚಾರ ಪ್ರಕರಣ : ಕುಲದೀಪ್ ಸಿಂಗ್
ಸೆಂಗರ್ ಗೆ ಜೀವಾವಧಿ ಶಿಕ್ಷೆ
ನವದೆಹಲಿ: ಉನ್ನಾವ್ ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ದೆಹಲಿಯ ತೀಸ್ ಹಜಾರಿ ನ್ಯಾಯಾಲಯದಿಂದ ದೋಷಿ ಎಂದು ಘೋಷಿಸಲ್ಪಟ್ಟಿದ್ದ ಬಿಜೆಪಿಯ ಉಚ್ಛಾಟಿತ ಶಾಸಕ ಕುಲದೀಪ್ ಸಿಂಗ್ ಸೆಂಗರ್ ಗೆ ಜೀವಾವಧಿ ಶಿಕ್ಷೆಯಾಗಿದೆ. ಜೀವಾವಧಿ ಶಿಕ್ಷೆಯ ಜೊತೆಯಲ್ಲಿ ಸೆಂಗರ್ ಅವರಿಗೆ ನ್ಯಾಯಾಲಯವು ೨೫ ಲಕ್ಷರೂಪಾಯಿಗಳ ದಂಡವನ್ನೂ ಸಹ ವಿಧಿಸಿದೆ. ಇದಲರಲ್ಲಿ ೧೦ ಲಕ್ಷ ರೂಪಾಯಿಗಳನ್ನು ಅತ್ಯಾಚಾರ ಸಂತ್ರಸ್ತೆಗೆ ನೀಡುವಂತೆ ನ್ಯಾಯಾಲವು  2019 ಡಿಸೆಂಬರ್ 20ರ ಶುಕ್ರವಾರ ತನ್ನ ಆದೇಶದಲ್ಲಿ ತಿಳಿಸಿತು.

ದೆಹಲಿಯ ಜಿಲ್ಲಾ ನ್ಯಾಯಾಲಯವು ಡಿಸೆಂಬರ್ ೧೬ರಂದು ನೀಡಿದ್ದ ತನ್ನ ತೀರ್ಪಿನಲ್ಲಿ ಸೆಂಗರ್ ಅವರನ್ನು ದೋಷಿ ಎಂದು ಘೋಷಿಸಿತ್ತು ಮತ್ತು ಅವರ ಶಿಕ್ಷೆಯ ಪ್ರಮಾಣವನ್ನು 2019 ಡಿಸೆಂಬರ್ 20ರ ಶುಕ್ರವಾರ  ಘೋಷಿಸುವುದಾಗಿ ತನ್ನ ತೀರ್ಪಿನಲ್ಲಿ ತಿಳಿಸಿತ್ತು.

೨೦೧೭ರಲ್ಲಿ ಅಪ್ರಾಪ್ತೆಯೊಬ್ಬಳನ್ನು ಅಪಹರಿಸಿ ಅತ್ಯಾಚಾರ ಮಾಡಿದ್ದ ಪ್ರಕರಣದಲ್ಲಿ ಸೆಂಗರ್ ಅವರ ಮೇಲೆ ಫೋಕ್ಸೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿತ್ತು ಮತ್ತು ಪ್ರಕರಣದ ತನಿಖೆಯನ್ನು ಸಿಬಿಐ ನಡೆಸಿತ್ತು. ತೀಸ್ ಹಜಾರಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಧರ್ಮೇಶ್ ಶರ್ಮಾ ಅವರು ಸೆಂಗರ್ ಅವರ ಶಿಕ್ಷೆಯ ಪ್ರಮಾಣವನ್ನು ಘೋಷಿಸಿದರು.

ಪ್ರಕರಣವು ನ್ಯಾಯಕ್ಕಾಗಿ ವ್ಯವಸ್ಥೆಯ ವಿರುದ್ಧ ಒಬ್ಬ ವ್ಯಕ್ತಿಯ ಹೋರಾಟವಾಗಿದ್ದ ಕಾರಣ ಇಲ್ಲಿ ಅಪರಾಧಿಗೆ ಜೀವಾವಧಿ ಶಿಕ್ಷೆಯನ್ನು ನೀಡಬೇಕೆಂದು ಸಿಬಿಐ ನ್ಯಾಯಾಲಯದಲ್ಲಿ ವಾದ ಮಂಡಿಸಿತ್ತು.
ಸಂತ್ರಸ್ತೆಗೆ ಪ್ರಕರಣದಲ್ಲಿ ದೀರ್ಘಕಾಲೀನ ಕಹಿ ಅನುಭವ ಆಗಿರುವುದರಿಂದ ಅಪರಾಧಿಗೆ ಗರಿಷ್ಠ ಪ್ರಮಾಣದ ಶಿಕ್ಷೆಯನ್ನು ನೀಡಬೇಕು ಎಂಬ ವಾದವನ್ನು ಸಂತ್ರಸ್ತೆಯ ಪರ ವಕೀಲರೂ ಸಹ ಅನುಮೋದಿಸಿದ್ದರು ಮಾತ್ರವಲ್ಲದೇ ಸಂತ್ರಸ್ತೆಗೆ ಸೂಕ್ತ ಪರಿಹಾರವನ್ನೂ ನೀಡಬೇಕೆಂದು ಅವರು ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದರು.

ತನ್ನ ಕಕ್ಷಿದಾರರಿಗೆ ಹಿಂದೆ ಯಾವುದೆ ಕ್ರಿಮಿನಲ್ ಚಟುವಟಿಕೆಯ ಹಿನ್ನಲೆ ಇಲ್ಲದೇ ಇರುವುದರಿಂದ ಅವರಿಗೆ ೧೦ ವರ್ಷಗಳ ಜೈಲುವಾಸದ  ಕನಿಷ್ಠ ಶಿಕ್ಷೆಯನ್ನು ವಿಧಿಸಬೇಕು ಎಂದು ಸೆಂಗರ್ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.

ಭಾರತೀಯ ದಂಡ ಸಂಹಿತೆ ಮತ್ತು ಪೋಸ್ಕೋ ಕಾಯ್ದೆಗಳ ಅಡಿಯಲ್ಲಿ ಅಪ್ರಾಪ್ತೆಯ ಮೇಲೆ ಅತ್ಯಾಚಾರ ನಡೆಸಿರುವ ಆರೋಪ ಸಾಬೀತುಗೊಂಡ ಹಿನ್ನಲೆಯಲ್ಲಿ ನ್ಯಾಯಾಲಯವು ಸೆಂಗರ್ ಅವರನ್ನು ದೋಷಿ ಎಂದು ಘೋಷಿಸಿತ್ತು. ಉತ್ತರಪ್ರದೇಶದಿಂದ ದೆಹಲಿಯ ನ್ಯಾಯಾಲಯಕ್ಕೆ ವರ್ಗಾವಣೆಗೊಂಡಿದ್ದ ಒಟ್ಟು ಐದು ಪ್ರಕರಣಗಳಲ್ಲಿ ಒಂದರಲ್ಲಿ ದೋಷಿ ಎಂದು ಘೋಷಿಸಲ್ಪಟ್ಟಿದ್ದರು.

ಅತ್ಯಾಚಾರ ಸಂತ್ರಸ್ತೆಯ ತಂದೆಯನ್ನು ಅಕ್ರಮ ಶಸ್ತ್ರಾಸ್ತ್ರ ಪ್ರಕರಣದಲ್ಲಿ ಸಿಲುಕಿಸಿದ್ದು ಮತ್ತು ಅವರು ನ್ಯಾಯಾಂಗ ಬಂಧನದಲ್ಲಿದ್ದಾಗಲೇ ಸಾವನ್ನಪ್ಪಿದ್ದು, ಅತ್ಯಾಚಾರ ಸಂತ್ರಸ್ತೆಯನ್ನು ಕೊಲೆ ಮಾಡಲು ಇತರರೊಂದಿಗೆ ಸೇರಿ ಅಪಘಾತದ ಸಂಚು ರೂಪಿಸಿದ್ದು ಮತ್ತು ತನ್ನ ಮೇಲೆ ಸಾಮೂಹಿಕ ಅತ್ಯಾಚಾರವಾಗಿದೆ ಎಂದು ಸಂತ್ರಸ್ತೆ ಮಾಡಿರುವ ಪ್ರತ್ಯೇಕ ಆರೋಪ ಸೇರಿದಂತೆ ಇನ್ನಿತರ ನಾಲ್ಕು ಪ್ರಕರಣಗಳು ಸೆಂಗರ್ ಮೇಲೆ ದಾಖಲಾಗಿದ್ದವು.

No comments:

Advertisement