Wednesday, December 4, 2019

ಪ್ರಿಯಾಂಕಾ ಗಾಂಧಿ ನಿವಾಸದ ಭದ್ರತಾ ಲೋಪ ಕಾಕತಾಳೀಯ

ಪ್ರಿಯಾಂಕಾ ಗಾಂಧಿ ನಿವಾಸದ ಭದ್ರತಾ ಲೋಪ ಕಾಕತಾಳೀಯ
ಭದ್ರತಾ ಸಿಬ್ಬಂದಿ ಅಮಾನತು, ಉನ್ನತ ತನಿಖೆಗೆ ಆದೇಶ: ಅಮಿತ್ ಶಾ
ನವದೆಹಲಿ: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ನಿವಾಸದಲ್ಲಿ ಸಂಭವಿಸಿದ ಭದ್ರತಾ ಲೋಪದ ಘಟನೆಯ ಹಿನ್ನೆಲೆಯಲ್ಲಿ ಮೂರು ಮಂದಿ ಭದ್ರತಾ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದ್ದು, ಉನ್ನತ ಮಟ್ಟದ ತನಿಖೆಗೆ ಆಜ್ಞಾಪಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು 2019 ಡಿಸೆಂಬರ್ 03ರ  ಮಂಗಳವಾರ ರಾಜ್ಯಸಭೆಯಲ್ಲಿ ಪ್ರಕಟಿಸಿದರು.

ವಿಶೇಷ ಭದ್ರತಾ ಗುಂಪು (ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್- ಎಸ್ಪಿಜಿ) ಕಾಯ್ದೆ ತಿದ್ದುಪಡಿ ಮೇಲಿನ ಕೋಲಾಹಲಕಾರೀ ಚರ್ಚೆಯ ಕೊನೆಯಲ್ಲಿ ಪ್ರಕಟಣೆ ಮಾಡಿದ ಅಮಿತ್ ಶಾಇದು ಕೇವಲ ಕಾಕತಾಳೀಯ ಘಟನೆಎಂದು ಹೇಳಿದರು.

ಗಾಂಧಿ ಕುಟುಂಬದ ಸದಸ್ಯರ ಭದ್ರತೆಗೆ ಸಂಬಂಧಿಸಿದಂತೆ ಸದನದಲ್ಲಿ ವ್ಯಕ್ತವಾದ ಕಳವಳಕ್ಕೆ ಪ್ರತಿಕ್ರಿಯಿಸಿದ ಅಮಿತ್ ಶಾಸರ್ಕಾರವು ಪೊಲೀಸ್ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಂಡಿದೆ ಮತ್ತು ಉನ್ನತ ಮಟ್ಟದ ತನಿಖೆಗೆ ಆಜ್ಞಾಪಿಸಿದೆ. ಯಾರೂ ಅವಕಾಶಗಳನ್ನು ತೆಗೆದುಕೊಳ್ಳಲು ಸರ್ಕಾರ ಬಯಸುವುದಿಲ್ಲಎಂದು ಅವರು ನುಡಿದರು.

ಪ್ರಿಯಾಂಕಾ ಗಾಂಧಿ ಅವರ ನಿವಾಸಕ್ಕೆ ಕರಿಯ ಟಾಟಾ ಸಫಾರಿ ಇತ್ತೀಚೆಗೆ ಭದ್ರತಾ ಸಿಬ್ಬಂದಿಯಿಂದ ತಪಾಸಣಾ ತಡೆ ಇಲ್ಲದೆ ಪ್ರವೇಶಿಸಿದ್ದು ಹೇಗೆ ಎಂಬುದನ್ನು ಕೂಡಾ ಶಾ ಸದನದಲ್ಲಿ ವಿವರಿಸಿದರು. ಭದ್ರತಾ ಲೋಪ ಎಂಬುದಾಗಿ ಪರಿಗಣಿಸಲಾದ ಘಟನೆ ಬಗ್ಗೆ ಕಾಂಗ್ರೆಸ್ ಪಕ್ಷವು ತೀವ್ರ ಕಳವಳ ವ್ಯಕ್ತ ಪಡಿಸಿತ್ತು.

ಘಟನೆಯು ನವೆಂಬರ್ ೨೫ರಂದು ವರದಿಯಾಗಿತ್ತು ಎಂದು ನುಡಿದ ಶಾ ಘಟನಾವಳಿಗಳ ವಿವರ ನೀಡಿದರು.

ಪ್ರಿಯಾಂಕಾ ಗಾಂಧಿ ನಿವಾಸದಲ್ಲಿ ನಿಯೋಜಿತರಾಗಿದ್ದ ಭದ್ರತಾ ಸಿಬ್ಬಂದಿಗೆ ರಾಹುಲ್ ಗಾಂಧಿಯವರು ಕರಿಯ ಟಾಟಾ ಸಫಾರಿಯಲ್ಲಿ ಬರುತ್ತಿದ್ದಾರೆ ಎಂಬ ಸಂದೇಶ ಬಂದಿತ್ತು. ಅದೇ ವೇಳೆಗೆ ಇನ್ನೊಂದು ಟಾಟಾ ಸಫಾರಿ ಸಮುಚ್ಚಯವನ್ನು ಪ್ರವೇಶಿಸಿತು.  ಬಂದದ್ದು ಮನೆಗೆ ಅನಿರ್ಬಂಧಿತ ಪ್ರವೇಶಾವಕಾಶ ಹೊಂದಿದ್ದ ರಾಹುಲ್ ಗಾಂಧಿ ಎಂಬುದಾಗಿ ಭಾವಿಸಿ ಭದ್ರತಾ ಸಿಬ್ಬಂದಿ ಅದನ್ನು ತಡೆಯಲಿಲ್ಲ ಎಂದು ಗೃಹ ಸಚಿವರು ವಿವರಿಸಿದರು.

ಅದೊಂದು ಕಾಕತಾಳೀಯ ಘಟನೆಯಾಗಿತ್ತುಎಂದು ಅಮಿತ್ ಶಾ ಹೇಳಿದರು.

ಪ್ರಿಯಾಂಕಾ ಗಾಂಧಿ ಅವರ ಲೋಧಿ ಎಸ್ಟೇಸ್ ನಿವಾಸವನ್ನು ಪ್ರವೇಶಿಸಿದ ಕರಿಯ ಎಸ್ಯುವಿ ಮೀರತ್ ಕಾಂಗ್ರೆಸ್ ನಾಯಕಿ ಶಾರ್ದಾ ತ್ಯಾಗಿ ಅವರದಾಗಿತ್ತು ಮತ್ತು ನಾಲ್ವರು ಪಕ್ಷ ಕಾರ್ಯಕರ್ತರು ಆಕೆಯ ಜೊತೆಗಿದ್ದರು ಎಂದು ಶಾ ವಿವರಿಸಿದರು.

ಸರ್ಕಾರವು ಪ್ರಿಯಾಂಕಾ ಗಾಂಧಿ, ಅವರ ಸಹೋದರ ರಾಹುಲ್ ಗಾಂಧಿ ಮತ್ತು ತಾಯಿ ಸೋನಿಯಾ ಗಾಂಧಿ ಅವರಿಗೆ ಇದ್ದ ವಿಶೇಷ ಭದ್ರತಾ ಗುಂಪು ಅಥವಾ ಎಸ್ಪಿಜಿ ಕಮಾಂಡೋ ರಕ್ಷಣೆಯನ್ನು ಹಿಂತೆಗೆದುಕೊಂಡು ಸಿಆರ್ಪಿಎಫ್ ಯೋಧರ ರಕ್ಷಣೆ ಒದಗಿಸಿದ ಕೆಲವೇ ವಾರಗಳ ಒಳಗಾಗಿ ಸಂಭವಿಸಿದ ಭದ್ರತಾ ಲೋಪದ ಬಗ್ಗೆ ಕಾಂಗ್ರೆಸ್ ನಾಯಕರು ತೀವ್ರ ಕಳವಳ ವ್ಯಕ್ತ ಪಡಿಸಿದರು.

೧೯೮೪ರಲ್ಲಿ ಪ್ರಧಾನಿ ಇಂದಿರಾಗಾಂಧಿ ಹತ್ಯೆಯ ಬಳಿಕ ರಚಿಸಲಾದ ವಿಶೇಷ ಪಡೆಯ ರಕ್ಷಣೆಯನ್ನು ಪ್ರಧಾನಿ ಮತ್ತು ಅವರ ಅಧಿಕೃತ ನಿವಾಸದಲ್ಲಿ ವಾಸವಾಗಿರುವ ಕುಟುಂಬದ ಸಮೀಪ ಸಂಬಂಧಿಗಳಿಗೆ ಮಾತ್ರವೇ ಸೀಮಿತಗೊಳಿಸುವ ಸಲುವಾಗಿ ಸರ್ಕಾರವು ಎಸ್ಪಿಜಿ ಕಾಯ್ದೆಗೆ ತಿದ್ದುಪಡಿ ತಂದಿದೆ. ತಿದ್ದುಪಡಿಯ ಪ್ರಕಾರ ಪ್ರಧಾನಿಯ ಹೊರತಾಗಿ ಮಾಜಿ ಪ್ರಧಾನಿಗಳಿಗೆ ಐದು ವರ್ಷಗಳಿಗೆ ಎಸ್ಪಿಜಿ ರಕ್ಷಣೆ ಒದಗಿಸಲಾಗುತ್ತದೆ.

ಘಟನೆಯನ್ನು ಸೋರಿಕೆ ಮಾಡಿದ್ದಕ್ಕಾಗಿ ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡ ಅಮಿತ್ ಶಾ, ಭದ್ರತಾ ಲೋಪದ ಘಟನಾವಳಿಗಳ ಕುರಿತ ವಿವರಣೆಗೆ ಆದ್ಯತೆ ನೀಡಿದರು. ಕಾಂಗ್ರೆಸ್ ನಾಯಕರಿಗೆ ಪ್ರಿಯಾಂಕಾ ಗಾಂಧಿ ಅವರ ಭದ್ರತೆ ಬಗ್ಗೆ ನಿಜವಾಗಿಯೂ ಕಾಳಜಿ ಇದ್ದಿದ್ದರೆ ಅವರು ಮಾಹಿತಿಯನ್ನು ಸೋರಿಕೆ ಮಾಡಬಾರದಾಗಿತ್ತು ಎಂದು ಅಮಿತ್ ಶಾ ಹೇಳಿದರು.

ಆದರೆ ಇದರಲ್ಲೂ ರಾಜಕೀಯ ಮಾಡಲು ನೀವು ಬಯಸುವುದಾದರೆ ಅದು ಬೇರೆ ವಿಷಯಎಂದು ಶಾ ಚುಚ್ಚಿದರು.

ಎಸ್ಪಿಜಿ ಕಾನೂನಿಗೆ ಮಾಡಲಾಗುತ್ತಿರುವ ಬದಲಾವಣೆ ಕೇವಲ ಒಂದು ಕುಟಂಬವನ್ನು ಗುರಿಯಾಗಿಟ್ಟುಕೊಂಡು ಮಾಡುತ್ತಿರುವುದಲ್ಲ ಎಂದು ಶಾ ಸ್ಪಷ್ಟ ಪಡಿಸಿದರು.

ನಾವು ಪರಿವಾರವನ್ನು (ಕುಟುಂಬ) ವಿರೋಧಿಸುತ್ತಿಲ್ಲ, ಆದರೆ ಪರಿವಾರ-ವಾದವನ್ನು (ಸ್ವಜನಪಕ್ಷಪಾತ) ವಿರೋಧಿಸುತ್ತಿದ್ದೇವೆ. ಭಾರತದ ಪ್ರಜಾಪ್ರಭುತ್ವ ರೀತಿ ನಡೆಯಲು ಸಾಧ್ಯವಿಲ್ಲ. ಕೇವಲ ಗಾಂಧಿ ಕುಟುಂಬದ ಭದ್ರತೆ ಬಗ್ಗೆ ಮಾತನಾಡುವುದು ಏಕೆ? ಗಾಂಧಿ ಕುಟುಂಬ ಸೇರಿದಂತೆ ೧೩೦ ಕೋಟಿ ಭಾರತೀಯರ ಭದ್ರತೆ ಸರ್ಕಾರದ ಹೊಣೆಗಾರಿಕೆಯಾಗಿದೆಎಂದು ಗೃಹ ಸಚಿವರು ನುಡಿದರು.

ಗೃಹ ಸಚಿವರ ಉತ್ತರದ ಬಳಿಕ ಸದನವು ಎಸ್ಪಿಜಿ (ತಿದ್ದುಪಡಿ) ಕಾಯ್ದೆಗೆ ತನ್ನ ಅನುಮೋದನೆ ನೀಡಿತು.

No comments:

Advertisement