My Blog List

Tuesday, December 3, 2019

ಶಬರಿಮಲೈ: ಸುಪ್ರೀಂ ಮೆಟ್ಟಿಲೇರಿದ ಬಿಂದು ಅಮ್ಮಿನಿ

ಶಬರಿಮಲೈ: ಸುಪ್ರೀಂ ಮೆಟ್ಟಿಲೇರಿದ ಬಿಂದು ಅಮ್ಮಿನಿ
ನವದೆಹಲಿ: ಶಬರಿಮಲೈ ಅಯ್ಯಪ್ಪಸ್ವಾಮಿ ದೇಗುಲ ಪ್ರವೇಶಿಸಬಯಸುವ ಎಲ್ಲ ಮಹಿಳೆಯರಿಗೆ ವಯಸ್ಸು ಅಥವಾ ಧರ್ಮವನ್ನು ಪರಿಗಣಿಸದೆ ಸುರಕ್ಷಿತ ಸಂಚಾರ ವ್ಯವಸ್ಥೆಯನ್ನು  ಒದಗಿಸುವಂತೆ ಕೋರಿ, ಕಳೆದ ವರ್ಷ ಶಬರಿಮಲೈ ದೇವಾಲಯವನ್ನು ಸಂದರ್ಶಿಸಿದ್ದ ಇಬ್ಬರು ಮಹಿಳಾ ಕಾರ್ಯಕರ್ತರ ಪೈಕಿ ಒಬ್ಬರಾದ ಬಿಂದು ಅಮ್ಮಿನಿ 2019 ಡಿಸೆಂಬರ್ 02ರ ಸೋಮವಾರ ಸುಪ್ರೀಂಕೋರ್ಟಿನ ಮೆಟ್ಟಿಲೇರಿದರು.
ಋತುಮತಿ ವಯೋಮಾನದ ಮಹಿಳೆಯರು ಸೇರಿದಂತೆ ಎಲ್ಲ ವಯಸ್ಸಿನ ಮಹಿಳೆಯರಿಗೆ ದೇವಾಲಯ ಪ್ರವೇಶಿಸಲು ಅವಕಾಶ ಕಲ್ಪಿಸಿದ ೨೦೧೮ರ ತೀರ್ಪಿನ ವಿರುದ್ಧ ಸಲ್ಲಿಸಲಾಗಿದ್ದ ಪುನರ್ ಪರಿಶೀಲನಾ ಅರ್ಜಿಯ ವಿಚಾರಣೆ ಕಾಲದಲ್ಲಿ ಪೀಠವು ತನ್ನ ತೀರ್ಪಿಗೆ ಯಾವುದೇ ತಡೆಯಾಜ್ಞೆಯನ್ನೂ ನೀಡಿಲ್ಲ, ಆದ್ದರಿಂದ ಕೇರಳ ಸರ್ಕಾರವು ದೇವಾಲಯಕ್ಕೆ ಬರುವ ಎಲ್ಲ ಮಹಿಳೆಯರಿಗೂ ರಕ್ಷಣೆ ಒದಗಿಸಲೇ ಬೇಕು ಎಂದು ಬಿಂದು ಅಮ್ಮಿನಿ ತಮ್ಮ ಅರ್ಜಿಯಲ್ಲಿ ತಿಳಿಸಿದರು.
ಋತುಮತಿ ವಯೋಮಾನದ ಮಹಿಳೆಯರೂ ಸೇರಿದಂತೆ ಎಲ್ಲ ಮಹಿಳೆಯರಿಗೆ ಪ್ರವೇಶ ಅವಕಾಶ ಕಲ್ಪಿಸಿ ಸುಪ್ರೀಂಕೋರ್ಟ್ ೨೦೧೮ರ ಸೆಪ್ಟೆಂಬರಿನಲ್ಲಿ ತೀರ್ಪು ನೀಡಿದ ಬಳಿಕ, ಬಿಂದು ಅಮ್ಮಿನಿ ಅವರು ಕನಕದುರ್ಗ ಎಂಬ ಇನ್ನೊಬ್ಬ ಮಹಿಳೆಯ ಜೊತೆಗೆ ವರ್ಷ ಜನವರಿ ೨ರಂದು ಶಬರಿಮಲೈಯ ಅಯ್ಯಪ್ಪ ಸ್ವಾಮಿ ದೇವಾಲಯವನ್ನು ಪ್ರವೇಶಿಸಿದ್ದರು. ಮಹಿಳೆಯರಿಬ್ಬರಿಗೂ ಪೊಲೀಸರು ಬೆಂಗಾವಲು ರಕ್ಷಣೆ ಒದಗಿಸಿದ್ದರು.

ಆದಾಗ್ಯೂ, ವರ್ಷ ನವೆಂಬರ್ ೧೪ರಂದು ಸುಪ್ರೀಂಕೋರ್ಟ್ ತನ್ನ ತೀರ್ಪಿನ ಪುನರ್ ಪರಿಶೀಲನಾ ಅರ್ಜಿಗಳನ್ನು ಸಪ್ತ ಸದಸ್ಯರ ವಿಸ್ತೃತ ಸಂವಿಧಾನ ಪೀಠಕ್ಕೆ ವಹಿಸಲು ತೀರ್ಮಾನಿಸಿದ ಬಳಿಕ ಕೇರಳ ಸರ್ಕಾರವು ತನ್ನ ನಿಲುವನ್ನು ಬದಲಾಯಿಸಿತು. ಮುಸ್ಲಿಮ್ ಮಹಿಳೆಯರಿಗೆ ಮಸೀದಿಗೆ ಪ್ರವೇಶಾವಕಾಶ ಕಲ್ಪಿಸುವುದು ಮತ್ತು ದಾವೂದಿ ಬೋಹ್ರಾ ಸಮುದಾಯದಲ್ಲಿನ ಮಹಿಳಾ ಜನನಾಂಗ ಛೇದನ ಪ್ರಕರಣಗಳನ್ನೂ ಶಬರಿಮಲೈ ಪ್ರಕರಣದ ಜೊತೆಗೆ ಸೇರಿಸಿ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ನವೆಂಬರ್ ೧೪ರಂದು ನಿರ್ಧರಿಸಿತ್ತು.

ಸುಪ್ರೀಂಕೋರ್ಟ್ ತನ್ನ ೨೦೧೮ರ ಆದೇಶಕ್ಕೆ ತೀರ್ಪು ನೀಡಿರದೇ ಇದ್ದುದರ ಹೊರತಾಗಿಯೂ ಕೇರಳ ಪೊಲೀಸರು ತಾವು ನ್ಯಾಯಾಲಯ ಸೂಚಿಸದ ವಿನಃ ತಾವು ಯಾರೇ ಮಹಿಳೆಯರಿಗೂ ರಕ್ಷಣೆ ಒದಗಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು.

ಪುಣೆಯ ಮಹಿಳಾ ಕಾರ್ಯಕರ್ತೆ ತೃಪ್ತಿ ದೇಸಾಯಿ ಜೊತೆಗೆ ದೇವಾಲಯ ಪ್ರವೇಶಿಸುವ ಸಲುವಾಗಿ ಹೊರಟಿದ್ದ ಬಿಂದು ಅಮ್ಮಿನಿ ಮೇಲೆ ನವೆಂಬರ್ ೨೬ರಂದು ಮಾರ್ಗ ಮಧ್ಯದಲ್ಲೇ ಖಾರದ ಪುಡಿ (ಮೆಣಸಿನ ಪುಡಿ) ಎರಚಿ ದಾಳಿ ನಡೆಸಲಾಗಿತ್ತು.

ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಸ್ಪಷ್ಟತೆ ಇಲ್ಲ ಎಂಬ ನೆಪದಲ್ಲಿ ಮಹಿಳೆಯರಿಗೆ ಪೊಲೀಸ್ ರಕ್ಷಣೆ ಒದಗಿಸಲು ನಿರಾಕರಿಸುವ ಮೂಲಕ ಕೇರಳ ಸರ್ಕಾರವು ತನ್ನ ಕರ್ತವ್ಯದಿಂದ ಜಾರಿಕೊಂಡಿದೆ ಎಂದು ಬಿಂದು ಅಮ್ಮಿನಿ ಭಾನುವಾರ ಪತ್ರಿಕಾಗೋಷ್ಠಿಯಲಿ ಕೇರಳ ಸರ್ಕಾರದ ವಿರುದ್ಧ ಹರಿಹಾಯ್ದಿದ್ದರು.

No comments:

Advertisement