My Blog List

Wednesday, December 25, 2019

ಎನ್ ಆರ್ ಸಿ ಚರ್ಚೆ ಸಧ್ಯಕ್ಕೆ ಇಲ್ಲ: ಅಮಿತ್ ಶಾ ಸ್ಪಷ್ಟನೆ

ಎನ್ಪಿಆರ್ ಮಾಹಿತಿ ಎನ್ ಆರ್ ಸಿಗೆ ಬಳಸುವುದಿಲ್ಲ, ಸಂಬಂಧವೂ ಇಲ್ಲ
ಎನ್ ಆರ್ ಸಿ ಚರ್ಚೆ ಸಧ್ಯಕ್ಕೆ ಇಲ್ಲ: ಅಮಿತ್ ಶಾ ಸ್ಪಷ್ಟನೆ
ನವದೆಹಲಿ: ರಾಷ್ಟ್ರೀಯ ಪೌರ ನೋಂದಣಿ (ಎನ್ಆರ್ಸಿ) ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್ಪಿಆರ್) ಮಧ್ಯೆ ಯಾವುದೇ ಸಂಬಂಧ ಇಲ್ಲ. ಎನ್ಪಿಆರ್ನಲ್ಲಿ ಸಂಗ್ರಹಿಸಲಾಗುವ ಮಾಹಿತಿಯನ್ನು ಎನ್ಆರ್ಸಿಗಾಗಿ ಬಳಸಲಾಗುವುದಿಲ್ಲ ಮತ್ತು ಎನ್ ಆರ್ ಸಿ ವಿಚಾರ ಸಧ್ಯಕ್ಕೆ ಚರ್ಚೆ ಇಲ್ಲ ಎಂದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು 2019 ಡಿಸೆಂಬರ್ 24ರ ಮಂಗಳವಾರ ಇಲ್ಲಿ ಸ್ಪಷ್ಟ ಪಡಿಸಿದರು.

ಭಾರತದಲ್ಲಿ ವಾಸವಾಗಿರುವ ಎಲ್ಲರ ಸಮಗ್ರ ಗುರುತು ಮಾಹಿತಿ ನೆಲೆಯಾಗಿ ರಾಷ್ಟ್ರೀಯ ಜನಸಂಖ್ಯಾ ನೋಂದಣಿಯ (ಎನ್ಪಿಆರ್) ಡಿಜಿಟಲ್ ನವೀಕರಣ ಪ್ರಕ್ರಿಯೆಗೆ ಕೇಂದ್ರ ಸಚಿವ ಸಂಪುಟವು ಒಪ್ಪಿಗೆ ನೀಡಿದ ಕೆಲವೇ ಗಂಟೆಗಳಲ್ಲಿ ಗೃಹ ಸಚಿವರು ಸ್ಪಷ್ಟನೆ ನೀಡಿದರು.

ಪಶ್ಚಿಮ ಬಂಗಾಳ ಮತ್ತು ಕೇರಳದ ಸಚಿವರು ಎನ್ಪಿಆರ್ ಮಾಹಿತಿ ಸಂಗ್ರಹ ಪ್ರಕ್ರಿಯೆಯಿಂದ ಹಿಂದೆ ಸರಿಯುವುದಾಗಿ ಪ್ರಕಟಿಸಿದ ಹಿನ್ನೆಲೆಯಲ್ಲಿ ಸುದ್ದಿ ಸಂಸ್ಥೆ ಒಂದರ ಜೊತೆಗಿನ ಸಂದರ್ಶನದಲ್ಲಿ ಮಾತನಾಡುತ್ತಾ ಗೃಹಸಚಿವರು ಹೇಳಿಕೆ ನೀಡಿದರು.

ಕೇರಳ
ಮತ್ತು ಪಶ್ಚಿಮ ಬಂಗಾಳ ಸರ್ಕಾರಗಳ ನಿರ್ಧಾರವನ್ನು ಆಲ್ ಇಂಡಿಯಾ ಮಜ್ಲಿಸ್ --ಇತ್ತೇಹಾದುಲ್ ಮುಸ್ಲಿಮೀನ್ ನಾಯಕ ಅಸದುದ್ದೀನ್ ಓವೈಸಿ ಕೂಡಾ ಸಮರ್ಥಿಸಿದ್ದರು.

ನಿರ್ಧಾರವನ್ನು ಪುನರ್ ಪರಿಶೀಲಿಸಿ ಎಂಬುದು ಉಭಯ ರಾಜ್ಯಗಳ ಮುಖ್ಯಮಂತ್ರಿಗಳಿಗೂ ನನ್ನ ಸರಳವಾದ ಮನವಿಎಂದು ಅಮಿತ್ ಶಾ ಹೇಳಿದರು. ಉಭಯ ರಾಜ್ಯಗಳ ಮುಖ್ಯಮಂತ್ರಿಗಳ ನಿರ್ಧಾರವು ಸರ್ಕಾರಿ ಯೋಜನೆಗಳ ಲಾಭ ಪಡೆಯುವ ಬಡವರಿಗೆ ಘಾಸಿ ಉಂಟು ಮಾಡಲಿದೆ ಎಂದು ಶಾ ಹೇಳಿದರು.

ಅಗತ್ಯವಿದ್ದಲ್ಲಿ ಮನವೊಲಿಸುವ ಸಲುವಾಗಿ ನಾನು ಉಭಯ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಇತರರನ್ನು ಭೇಟಿಮಾಡುವೆಎಂದೂ ಗೃಹ ಸಚಿವರು ನುಡಿದರು.

ಇಂತಹ ಕ್ರಮ ಕೈಗೊಳ್ಳಬೇಡಿ, ನಿಮ್ಮ ನಿರ್ಧಾರ ಪುನರ್ ಪರಿಶೀಲಿಸಿ.  ಕೇವಲ ನಿಮ್ಮ ರಾಜಕೀಯಕ್ಕಾಗಿ ಬಡವರನ್ನು ಅಭಿವೃದ್ಧಿ ಕಾರ್ಯಕ್ರಮಗಳಿಂದ ಹೊರಗಿಡಬೇಡಿ ಎಂದು ಉಭಯ ಮುಖ್ಯಮಂತ್ರಿಗಳಿಗೂ ನಾನು ವಿನಮ್ರ ಮನವಿ ಮಾಡುತ್ತೇನೆಎಂದು ಅಮಿತ್ ಶಾ ಹೇಳಿದರು.

ಜನಸಂಖ್ಯಾ ನೋಂದಣಿಯು ನಾವು ಜಾರಿಗೊಳಿಸುತ್ತಿರುವ ಅಭಿವೃದ್ಧಿ ಚಟುವಟಿಕೆಗಳಿಗೆ ಅಡಿಪಾಯವಾಗಲಿದೆಎಂದು ಅವರು ನುಡಿದರು.

ಜನಸಂಖ್ಯಾ ನೋಂದಣಿಯು ಬೇರೆಯೇ ಹೆಸರಿನಲ್ಲಿ ಜಾರಿ ಮಾಡಲಾಗುತ್ತಿರುವ ಎನ್ಆರ್ಸಿಯಾಗಿದೆ ಎಂಬುದಾಗಿ ಓವೈಸಿ ಒತ್ತಿ ಹೇಳಿರುವ ಬಗ್ಗೆ ಕೇಳಲಾದ ಪ್ರಶ್ನೆಗೆಎಐಎಂಐಎಂ ನಾಯಕ ಯಾವಾಗಲೂ ಬಿಜೆಪಿ ಏನನ್ನು ಹೇಳಿದರೂ ವಿರೋಧಿಸುತ್ತಾರೆಎಂದು ಶಾ ಉತ್ತರಿಸಿದರು.

ನಾವು ಸೂರ್ಯ ಪೂರ್ವದಿಂದ ಉದಯಿಸುತ್ತಾನೆ ಎಂದು ಹೇಳಿದರೆ ಅವರು ಸೂರ್ಯ ಪಶ್ಚಿಮದಿಂದ ಉದಯಿಸುತ್ತಾನೆ ಎಂದು ಹೇಳುತ್ತಾರೆ. ಇದು ಅವರ ಧೋರಣೆ. ಆದರೆ ಇದಕ್ಕೂ (ಎನ್ಪಿಆರ್) ಎನ್ಆರ್ಸಿಗೂ ಯಾವ ಸಂಬಂಧವೂ ಇಲ್ಲ ಎಂದು ನಾನು ಓವೈಸಿಜಿ ಅವರಿಗೂ ಭರವಸೆ ನೀಡುತ್ತೇನೆಎಂದು ಗೃಹ ಸಚಿವರು ನುಡಿದರು.

ಎನ್ಪಿಆರ್ ಬಿಜೆಪಿಯ ಪ್ರಣಾಳಿಕೆಯಲ್ಲಿ ಕೂಡಾ ಇಲ್ಲ, ಆದರೆ ಸರ್ಕಾರವು ಕಾಂಗ್ರೆಸ್ ಆರಂಭಿಸಿದ ಒಳ್ಳೆಯ ಪ್ರಕ್ರಿಯೆಯನ್ನು ಮುಂದುವರೆಸುತ್ತಿದೆ ಅಷ್ಟೆಎಂದು ಶಾ ಹೇಳಿದರು.

ಪ್ರಧಾನಿ
ನರೇಂದ್ರ ಮೋದಿಯವರು ದೆಹಲಿಯ ಸಭೆಯೊಂದರಲ್ಲಿ  ಒಂದರಲ್ಲಿ ತಮ್ಮ ಸರ್ಕಾರವು ಎನ್ಆರ್ಸಿ ಬಗ್ಗೆ ಚರ್ಚೆ ನಡೆಸಿಯೇ ಇಲ್ಲ, ಪೌರರ ಡಿಜಿಟಲ್ ನೋಂದಣಿ ಬಗ್ಗೆ ಸಂಸತ್ತಿನಲ್ಲಾಗಲಿ, ಸಂಪುಟದಲ್ಲಾಗಲೀ ಮಾತನಾಡಿಯೇ ಇಲ್ಲ ಎಂಬುದಾಗಿ ಹೇಳಿದ ಎರಡು ದಿನಗಳ ಬಳಿಕ ಅಮಿತ್ ಶಾ ಅವರೂ ಮಂಗಳವಾರ ದೇಶದಲ್ಲಿ ಸಧ್ಯಕ್ಕೆ ಎನ್ ಆರ್ ಸಿ ಕುರಿತು ಚರ್ಚೆ ಇಲ್ಲ ಎಂದು ನುಡಿದರು..

ಪ್ರಧಾನಿ ಮೋದಿ ಅವರು ಸರಿಯಾದುದನ್ನೇ ಹೇಳಿದ್ದಾರೆ. ರಾಷ್ಟ್ರೀಯ ಪೌರ ನೋಂದಣಿ ಬಗ್ಗೆ ಸಧ್ಯಕ್ಕೆ ಚರ್ಚೆ ಮಾಡಲಾಗುವುದಿಲ್ಲ, ಸಂಪುಟ, ಸಂಸತ್ತು ಸೇರಿದಂತೆ ಸರ್ಕಾರ ಎಲ್ಲೂ ಅದರ ಬಗ್ಗೆ ಚರ್ಚಿಸಿಲ್ಲಎಂದೂ  ಅಮಿತ್ ಶಾ ಹೇಳಿದರು.

ಸಚಿವ ಸಂಪುಟ ಸಭೆಯ ನಿರ್ಣಯಗಳನ್ನು ಪತ್ರಿಕಾಗೋಷ್ಠಿಯಲ್ಲಿ ವಿವರಿಸುತ್ತಾ ಕೇಂದ್ರ ಸಚಿವ ಪ್ರಕಾಶ ಜಾವಡೇಕರ್ ಅವರೂ ಪ್ರಧಾನಿ ನರೇಂದ್ರ ಮೋದಿ ಅವರ ಮಾತುಗಳನ್ನು ಪ್ರತಿಧ್ವನಿಸಿದ್ದರು.

No comments:

Advertisement