Thursday, January 30, 2020

24ನೇ ತಿಂಗಳಲ್ಲೂ ಗರ್ಭಪಾತಕ್ಕೆ ಅನುಮತಿ: ಕೇಂದ್ರದ ಅಸ್ತು

24ನೇ ತಿಂಗಳಲ್ಲೂ ಗರ್ಭಪಾತಕ್ಕೆ ಅನುಮತಿ: ಕೇಂದ್ರದ   ಅಸ್ತು
ಸಂಸತ್ ಅಧಿವೇಶನದಲ್ಲಿ ಕಾಯ್ದೆ ತಿದ್ದುಪಡಿ ಮಸೂದೆ ಮಂಡನೆ
ನವದೆಹಲಿ: ಗರ್ಭಪಾತಕ್ಕೆ ಅನುಮತಿ ನೀಡುವ ಈಗಿನ ೨೦ ವಾರಗಳ ಗರಿಷ್ಠ ಮಿತಿಯನ್ನು ೨೪ ವಾರಗಳಿಗೆ ವಿಸ್ತರಿಸಲು ಕೇಂದ್ರ ಸಚಿವ ಸಂಪುಟವು  2020 ಜನವರಿ 29ರ ಬುಧವಾರ  ಒಪ್ಪಿಗೆ ನೀಡಿತು.

ಸಂಪುಟ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ವಿಚಾರವನ್ನು ತಿಳಿಸಿದ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರುಇದು ಮಹಿಳೆಯರಿಗೆ ತಮ್ಮ ದೇಹದ ಮೇಲೆ ಸಂತಾನೋತ್ಪತ್ತಿ ಹಕ್ಕುಗಳನ್ನು ನೀಡುವ "ಪ್ರಗತಿಪರ ಸುಧಾರಣೆ" ಎಂದು ಹೇಳಿದರು.

ಸಂತಾನೋತ್ಪತ್ತಿ ಸ್ವಾಯತ್ತತೆಯ ಹಕ್ಕು ಭ್ರೂಣದ ಜೀವವನ್ನು ರಕ್ಷಿಸುವ ರಾಜ್ಯದ ಆಸಕ್ತಿಯನ್ನು ಮೀರಿಸಲು ಸಾಧ್ಯವಿಲ್ಲ, ಆದ್ದರಿಂದ ೨೦ ವಾರಗಳ ಮಿತಿಯನ್ನು ಸಾರಾಸಗಟು ವಿಸ್ತರಿಸಲಾಗದುಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್ಗೆ ತಿಳಿಸಿದ ಸುಮಾರು ನಾಲ್ಕು ತಿಂಗಳ ನಂತರ ಸುದ್ದಿ ಬಂದಿತು.

"ಪ್ರಗತಿಪರ ಸುಧಾರಣೆ ಮತ್ತು ಮಹಿಳೆಯರಿಗೆ ಸಂತಾನೋತ್ಪತ್ತಿ ಹಕ್ಕುಗಳನ್ನು ನೀಡುವ ನಿಟ್ಟಿನಲ್ಲಿ, ವೈದ್ಯಕೀಯವಾಗಿ ಗರ್ಭಪಾತ ಮಾಡುವ ಅವಧಿಯನ್ನು ೨೦ ವಾರಗಳಿಂದ ೨೪ ವಾರಗಳಿಗೆ ಹೆಚ್ಚಿಸಲಾಗಿದೆ" ಎಂದು ಜಾವಡೇಕರ್ ಹೇಳಿದರು.

ಇದು ಸುರಕ್ಷಿತ ವೈದ್ಯಕೀಯ ಗರ್ಭಪಾತವನ್ನು ಖಚಿತಪಡಿಸುತ್ತದೆ ಮತ್ತು ಮಹಿಳೆಯರಿಗೆ ಅವರ ದೇಹದ ಮೇಲೆ ಸಂತಾನೋತ್ಪತ್ತಿ ಹಕ್ಕುಗಳನ್ನು ನೀಡುತ್ತದೆಎಂದು ಸಚಿವರು ನುಡಿದರು.
"ಇದು ಬಹುಮುಖ್ಯವಾದ ವಿಷಯವಾಗಿದೆ. ಏಕೆಂದರೆ ಮೊದಲ ಐದು ತಿಂಗಳಲ್ಲಿ ಸಂಬಂಧಪಟ್ಟ ಹುಡುಗಿ ಪರಿಸ್ಥಿತಿ ಅರಿತುಕೊಳ್ಳದ ಮತ್ತು ನ್ಯಾಯಾಲಯಕ್ಕೆ ಹೋಗಬೇಕಾದ ಸಂದರ್ಭಗಳು ಇರುತ್ತವೆ" ಎಂದು ಸಚಿವರು ವಿವರಿಸಿದರು.

ಇದು ಒಂದು ವರ್ಗದ ಮಹಿಳೆಯರ ಮತ್ತು ವೈದ್ಯರ ಬೇಡಿಕೆಯಾಗಿತ್ತು ಎಂದು ಸಚಿವರು ಹೇಳಿದರು.
ಗರ್ಭಪಾತಕ್ಕೆ ಅನುಮತಿ ನೀಡುವ ಗರಿಷ್ಠ ಮಿತಿಯನ್ನು ೨೦ ವಾರಗಳಿಗೆ ನಿಗದಿಪಡಿಸಿದ ಕಾನೂನಿನ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯೊಂದಕ್ಕೆ ಪ್ರತಿಕ್ರಿಯಿಸಿದ್ದ ಕೇಂದ್ರ ಸರ್ಕಾರವುಗರ್ಭದಲ್ಲಿ ಸ್ಥಿರತೆಯ ಹಂತಕ್ಕೆ ತಲುಪಿದ ಭ್ರೂಣದ ಜೀವವನ್ನು ಕಾಪಾಡಲು ರಾಜ್ಯವು ತನ್ನ ಪೌರರ ರಕ್ಷಕನಾಗಿ ಮತ್ತು ನೈತಿಕವಾಗಿ ಕರ್ತವ್ಯಕ್ಕೆ ಬದ್ಧವಾಗಿದೆಎಂದು ನಾಲ್ಕು ತಿಂಗಳ ಹಿಂದೆ ಹೇಳಿತ್ತು.

ಸದರಿ ಪ್ರಕರಣದಲ್ಲಿ ಅರ್ಜಿದಾರರು ಗರ್ಭಪಾತಕ್ಕೆ ಅನುಮತಿ ನೀಡುವ ಗರಿಷ್ಠ ಮಿತಿಯನ್ನು ೨೬ ವಾರಗಳಿಗೆ ವಿಸ್ತರಿಸಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.

ಇಪ್ಪತ್ತನೇ ವಾರದ ನಂತರ ಗಂಭೀರ ಅಸಹಜತೆಗಳು ಪತ್ತೆಯಾದ ಪ್ರಕರಣಗಳಲ್ಲಿ ಗರ್ಭಾವಸ್ಥೆಯನ್ನು ಪೂರ್ಣಾವಧಿಗೆ ಒಯ್ಯುವುದನ್ನು ಆಯ್ಕೆ ಮಾಡಿದ ಮಹಿಳೆಯರಲ್ಲಿ ಕಂಡು ಬರುವ ಮಾನಸಿಕ ಖಿನ್ನತೆ, ದುಃಖ ಮತ್ತು ಆಘಾತ ಮತ್ತಿತರ ಸಮಸ್ಯೆಗಳಿಗೆ ಹೋಲಿಸಿದರೆ, ಗರ್ಭಧಾರಣೆಯನ್ನು ಕೊನೆಗೊಳಿಸಲು ಆಯ್ಕೆ ಮಾಡಿದ ಮಹಿಳೆಯರಲ್ಲಿ ಇಂತಹ ಸಮಸ್ಯೆಗಳು ಕಡಿಮೆಯಾಗಿದ್ದುದು ಮತ್ತು ಆಘಾತವನ್ನು ಉತ್ತಮವಾಗಿ ನಿಭಾಯಿಸುವ ಮನಸ್ಥಿತಿ ಇದ್ದುದು ಅಧ್ಯಯನಗಳಲ್ಲಿ ಪದೇ ಪದೇ ಕಂಡುಬಂದಿವೆ ಎಂದು ಸಚಿವರು ಹೇಳಿದರು.

ಗರ್ಭಧಾರಣೆಯ ವೈದ್ಯಕೀಯ ಸಮಾಪ್ತಿ ಕಾಯ್ದೆ (೧೯೭೧) ತಿದ್ದುಪಡಿ ಮಾಡುವ ವೈದ್ಯಕೀಯ ಸಮಾಪ್ತಿ (ತಿದ್ದುಪಡಿ) ಮಸೂದೆಯನ್ನು (೨೦೨೦) ಮುಂದಿನ ಸಂಸತ್ತಿನ ಅಧಿವೇಶನದಲ್ಲಿ ಮಂಡಿಸಲಾಗುವುದು ಎಂದು ಸಚಿವರು ನುಡಿದರು.

ಗರ್ಭಪಾತಕ್ಕೆ ಅನುಮತಿ ನೀಡುವ ಗರಿಷ್ಠ ಮಿತಿಯನ್ನು ೨೪ ವಾರಗಳವರೆಗೆ ವಿಸ್ತರಿಸುವುದರಿಂದ ಅತ್ಯಾಚಾರಕ್ಕೆ ಒಳಗಾದವರು, ವಿಕಲಾಂಗ ಬಾಲಕಿಯರು ಮತ್ತು ಅಪ್ರಾಪ್ತ ವಯಸ್ಕರಿಗೆ ಸಹಾಯವಾಗುತ್ತದೆ.

ವಿಷಯದ ಬಗ್ಗೆ ವಿವಿಧ ಪಾಲುದಾರರೊಂದಿಗೆ ಚರ್ಚಿಸಲಾಗಿದೆ. ಇದು ತಾಯಿಯ ಮರಣವನ್ನು ಕಡಿಮೆ ಮಾಡುತ್ತದೆ" ಎಂದು ಜಾವಡೇಕರ್  ಹೇಳಿದರು.

No comments:

Advertisement