Thursday, January 30, 2020

ತಾರಾ ಪ್ರಚಾರಕರ ಪಟ್ಟಿಯಿಂದ ಸಚಿವ ಠಾಕೂರ್, ಸಂಸದ ಪರ್ವೇಶ್ ವರ್ಮಾಗೆ ಕೊಕ್

ತಾರಾ ಪ್ರಚಾರಕರ ಪಟ್ಟಿಯಿಂದ ಸಚಿವ ಠಾಕೂರ್,
ಸಂಸದ ಪರ್ವೇಶ್ ವರ್ಮಾಗೆ  ಕೊಕ್
ಆದರೆ ಅವರ ಪ್ರಚಾರ ಕಾರ್ಯಕ್ಕೆ ಇಲ್ಲ ಯಾವುದೇ ಅಡ್ಡಿ: ಬಿಜೆಪಿ
ನವದೆಹಲಿ: ಕೇಂದ್ರ ಹಣಕಾಸು ಸಹಾಯಕ ಸಚಿವ ಅನುರಾಗ್ ಠಾಕೂರ್ ಮತ್ತು ದೆಹಲಿ ಸಂಸದ ಪರ್ವೇಶ್ ವರ್ಮಾ ಅವರನ್ನು ದೆಹಲಿ ಚುನಾವಣೆಯ ತಾರಾ ಪ್ರಚಾರಕರ ಪಟ್ಟಿಯಿಂದ ಕೈಬಿಡುವಂತೆ ಭಾರತೀಯ ಜನತಾ ಪಕ್ಷಕ್ಕೆ ಚುನಾವಣಾ ಆಯೋಗವು 2020 ಜನವರಿ 29ರ ಬುಧವಾರ  ಆದೇಶ ನೀಡಿತು. ಆದರೆ, ಚುನಾವಣಾ ಆಯೋಗದ ನಿರ್ದೇಶನವು ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರದಿಂದ ಅವರನ್ನು ತಡೆಯುವುದಿಲ್ಲ ಎಂದು ದೆಹಲಿ ಬಿಜೆಪಿ ಮುಖಂಡರು ಸ್ಪಷ್ಟ ಪಡಿಸಿದರು.

ಚುನಾವಣಾ ಆಯೋಗವು ಇಬ್ಬರ ಹೆಸರನ್ನು ತಾರಾ ಪ್ರಚಾರಕರ ಪಟ್ಟಿಯಿಂದ ತೆಗೆದುಹಾಕುವಂತೆ ಪಕ್ಷಕ್ಕೆ ನಿರ್ದೇಶನ  ನೀಡಿದೆ. ಆದರೆ ಅವರು ಪ್ರಚಾರ ಮಾಡಲು ಸಾಧ್ಯವಿಲ್ಲ ಎಂದು ಇದರ ಅರ್ಥವಲ್ಲ" ಎಂದು ಚುನಾವಣಾ ಆಯೋಗವು ತನ್ನ ನಿರ್ಧಾರವನ್ನು ಘೋಷಿಸಿದ ಬೆನ್ನಲ್ಲೇ ಎಂದು ರಾಜ್ಯ ಬಿಜೆಪಿಯ ಮಾಧ್ಯಮ ಪ್ರಮುಖರಾದ ಅಶೋಕ್ ಗೋಯೆಲ್ ಹೇಳಿದರು.

ಚುನಾವಣಾ ಆಯೋಗವು ಪ್ರಚಾರವನ್ನು ನಿಲ್ಲಿಸುವಂತೆ ಸೂಚಿಸಿಲ್ಲವಾದ ಕಾರಣ ಅನುರಾಗ್ ಠಾಕೂರ್ ಮತ್ತು ಪರ್ವೇಶ್ ವರ್ಮಾ ಅವರು ಪಕ್ಷದ ಪರ ಪ್ರಚಾರವನ್ನು ಮುಂದುವರಿಸಲಿದ್ದಾರೆ ಎಂದು ಅವರು ಒತ್ತಿ ಹೇಳಿದರು.

ತಾರಾ ಪ್ರಚಾರಕರ ಪಟ್ಟಿಯಿಂದ ಕೈಬಿಟ್ಟದ್ದರಿಂದ ಪಕ್ಷದ ಅಭ್ಯರ್ಥಿಗಳಿಗೆ ಆರ್ಥಿಕವಾಗಿ ಸ್ವಲ್ಪ ಹೊರೆಯಾಗಲಿದೆ.   ಏಕೆಂದರೆ ನಿಗದಿತ ತಾರಾ ಪ್ರಚಾರಕ ಮತ್ತು ಇತರ ಪ್ರಚಾರಕರ ನಡುವಿನ ವ್ಯತ್ಯಾಸವು ಮುಖ್ಯವಾಗಿ ಚುನಾವಣಾ ಲೆಕ್ಕಪತ್ರ ನಿರ್ವಹಣೆ ಮತ್ತು ಖರ್ಚು ಮೇಲ್ವಿಚಾರಣೆಯ ಅಂಶವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಮಾನ, ಹೆಲಿಕಾಪ್ಟರ್ ಅಥವಾ ಇನ್ನಾವುದೇ ಮಾರ್ಗವನ್ನು ಬಳಸಿ ತಾರಾ ಪ್ರಚಾರಕರು ಮಾಡುವ ವೆಚ್ಚವನ್ನು ಆಯಾ ರಾಜಕೀಯ ಪಕ್ಷಗಳ ಖಾತೆಗೆ ಸೇರಿಸಲಾಗುತ್ತದೆ. ಇತರ ಪ್ರಚಾರಕರ ಪಯಣದ ವೆಚ್ಚವನ್ನು ಸಂಬಂಧಪಟ್ಟ ಅಭ್ಯರ್ಥಿಯ ವೆಚ್ಚಕ್ಕೆ ಸೇರಿಸಲಾಗುತ್ತದೆ. ಆತ ಅಥವಾ ಆಕೆ ೨೮ ಲಕ್ಷ ರೂ.ಗಿಂತ ವೆಚ್ಚ ಮಿತಿಯನ್ನು ಮೀರಿ ಖರ್ಚು ಮಾಡಿದ್ದಾರೆಯೇ ಎಂದು ಲೆಕ್ಕಹಾಕುವಾಗ ಇತರ ಇತರ ಪ್ರಚಾರಕರ ಖರ್ಚನ್ನು ಅಭ್ಯಥಿಗಳ: ವೆಚ್ಚಕ್ಕೆ ಸೇರಿಸಲಾಗುತ್ತದೆ. ಚುನಾವಣಾ ಆಯೋಗವು ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳ ಪ್ರಚಾರ ವೆಚ್ಚಕ್ಕೆ ೨೮ ಲಕ್ಷ ರೂಪಾಯಿಗಳಿಗೆ ಮಿತಿಯನ್ನು ವಿಧಿಸಿದೆ.

ಕಳೆದ ವಾರ ದೆಹಲಿ ಚುನಾವಣಾ ಪ್ರಚಾರದಲ್ಲಿ ಬಿಜೆಪಿ ನಾಯಕರು ಬಳಸಿದ ಭಾಷೆಯು ಕೋಮು ವಿಭಜಕ ವಾಕ್ಚಾತುರ್ಯದ ಭಾಗ ಎಂದು ಪ್ರತಿಸ್ಪರ್ಧಿಗಳು ಆಪಾದಿಸಿದ್ದರು.

ದೆಹಲಿಯ ಚುನಾವಣಾ ಪ್ರಚಾರದಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ್ದ ವರ್ಮಾ ಶಾಹೀನ್ಬಾಗ್ನಲ್ಲಿ ಕಳೆದ ಒಂದು ತಿಂಗಳಿನಿಂದ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಲು ಜಮಾಯಿಸಿದ ಭಾರೀ ಸಂಖ್ಯೆಯ ಪ್ರತಿಭಟನಾಕಾರರು ಕಾಶ್ಮೀರದಂತೆ ಇಲ್ಲಿಯೂ ಮನೆಗಳಿಗೆ ಪ್ರವೇಶಿಸಿ ಅತ್ಯಾಚಾರ ಹಾಗೂ ಜನರನ್ನು ಕೊಲ್ಲುವ ಕೆಲಸ ಮಾಡಬಹುದು. ಫೆಬ್ರುವರಿ ೮ರ ಚುನಾವಣೆಯಲ್ಲಿ ಬಿಜೆಪಿಯನ್ನು ಚುನಾಯಿಸುವ ಮೂಲಕ ಇದನ್ನು ತಡೆಯಬಹುದು ಎಂದು ಹೇಳಿದ್ದರು.

ಇನ್ನೊಂದೆಡೆಯಲ್ಲಿ ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು ಪ್ರಚಾರ ಸಭೆಯೊಂದರಲ್ಲಿದೇಶ್ ಕೆ ಗದ್ದಾರೋಂ ಕೋ...’ ಎಂಬುದಾಗಿ ಜನರನ್ನು ಉದ್ದೇಶಿಸಿ ಹೇಳುತ್ತಿರುವ ಮತ್ತು  ಅದಕ್ಕೆ ಪ್ರತಿಕ್ರಿಯೆಯಾಗಿ ಜನರು ’... ಗೋಲಿ ಮಾರೊ ಎಸ್ * *** ಎನ್ ಕೊಎಂಬುದಾಗಿ ಕೂಗಿದ ವಿಡಿಯೋವನ್ನು ಪರಿಗಣನೆಗೆ ತೆಗೆದುಕೊಂಡ ಚುನಾವಣಾ ಆಯೋಗ ಸಚಿವರಿಗೆ ನೋಟಿಸ್ ಜಾರಿ ಮಾಡಿತ್ತು. ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಖಂಡಿತವಾಗಿಯೂ ಇಬ್ಬರೂ ನಾಯಕರು ಪಕ್ಷದ ಪರವಾಗಿ ಪ್ರಚಾರ ಮುಂದುವರೆಸಲಿದ್ದಾರೆಎಂದು ಅಶೋಕ ಗೋಯೆಲ್ ಹೇಳಿದರೆ, "ನನಗೆ ಪ್ರಚಾರ ಮಾಡಲು ಅವಕಾಶವಿದೆ" ಎಂದು ಪರ್ವೇಶ್ ವರ್ಮಾ ನುಡಿದರು.

ಆದರೆ ಉಭಯ ನಾಯಕರೂ, ಚುನಾವಣಾ ಆಯೋಗದ ನೋಟಿಸಿಗೆ ಉತ್ತರ ನೀಡಬೇಕಾಗಿದೆ.
ವಿವಾದಾತ್ಮಕ ಹೇಳಿಕೆಗಳ ಬಗೆಗಿನ ನೋಟಿಸಿಗೆ ಉತ್ತರ ನೀಡಲು ಪಶ್ಚಿಮ ದೆಹಲಿಯ ಸಂಸದ ಪರ್ವೆಶ್ ವರ್ಮಾ ಅವರಿಗೆ ಆಯೋಗವು ಗುರುವಾರ ಮಧ್ಯಾಹ್ನದವರೆಗೆ ಕಾಲಾವಕಾಶ ನೀಡಿದೆ.

ಭಾಷಣವು ಸಾಮರಸ್ಯವನ್ನು ಭಂಗಗೊಳಿಸುವ ಮತ್ತು ಸಾಮಾಜಿಕ ಮತ್ತು ಧಾರ್ಮಿಕ ಸಮುದಾಯಗಳ ನಡುವೆ ಅಸ್ತಿತ್ವದಲ್ಲಿರುವ ಅಂತರವನ್ನು ಇನ್ನಷ್ಟು ಉಲ್ಬಣಗೊಳಿಸುವ ಸಾಮರ್ಥ್ಯ ಹೊಂದಿದೆ" ಎಂದು ಆಯೋಗ ಅಭಿಪ್ರಾಯಪಟ್ಟಿತು.
ಬಿಜೆಪಿಯ ಪ್ರಚಾರಕರಿಬ್ಬರನ್ನುತಾರಾ ಪ್ರಚಾರಕ ಪಟ್ಟಿಯಿಂದ ಕೈಬಿಟ್ಟರೂ, ಪಕ್ಷಕ್ಕೆ ಮತ ನೀಡುವಂತೆ ಕೋರಿ ಚುನಾವಣಾ ಪ್ರಚಾರ ಮಾಡುವುದಕ್ಕೆ ಯಾವುದೇ ಅಡ್ಡಿಯೂ ಆಗುವುದಿಲ್ಲ. ಚುನಾವಣಾ ಆಯೋಗವು ಅಂತಿಮ ತೀರ್ಮಾನ ಕೈಗೊಳ್ಳುವವರೆಗೂ ಪಕ್ಷ ಮತ್ತು ಅಭ್ಯರ್ಥಿಗಳು ತಾರಾ ಪ್ರಚಾರಕರಿಗೆ ಅನುಮತಿ ನೀಡಲಾಗಿರುವ ವಿವಿಧ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ ಎಂದಷ್ಟೇ ಚುನಾವಣಾ ಆಯೋಗದ ಕ್ರಮದ ಅರ್ಥವಾಗಿದೆ.

ಅಭ್ಯರ್ಥಿಗಳ ವೆಚ್ಚದ ಪಟ್ಟಿಯಿಂದ ತಾರಾ ಪ್ರಚಾರಕರ ಪ್ರಚಾರ ವೆಚ್ಚದಿಂದ ವಿನಾಯ್ತಿ ಅವಕಾಶ ಇದೆ. ತಾರಾ ಪ್ರಚಾರಕರು ಇತರ ಪ್ರಚಾರಕರ ಪಟ್ಟಿಗೆ ಸೇರ್ಪಡೆಯಾದರೆ ಅವರ ಪ್ರಚಾರದ ವೆಚ್ಚ ಪಕ್ಷದ ಬದಲಿಗೆ ಅಭ್ಯರ್ಥಿಯ ವೆಚ್ಚಕ್ಕೆ ಸೇರ್ಪಡೆಯಾಗುತ್ತದೆ ಎಂದು ಚುನಾವಣಾ ಆಯೋಗದ ಮಾಜಿ ಸಲಹೆಗಾರ ಎಸ್.ಕೆ. ಮೆಂಡಿರಟ್ಟಾ ಅವರು ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದರು.

ಠಾಕೂರ್ ಮತ್ತು ವರ್ಮಾ ಅವರಿಗಿಂತ ಮೊದಲು, ಬಿಜೆಪಿಯ ಅಭ್ಯರ್ಥಿ ಕಪಿಲ್ ಮಿಶ್ರ ಅವರು ತಮ್ಮ ಪ್ರಚೋದನಾಕಾರಿ ಭಾಷಣಕ್ಕಾಗಿ ಚುನಾವಣಾ ಆಯೋಗದ ಕೆಂಗಣ್ಣು ಎದುರಿಸಬೇಕಾಗಿ ಬಂದಿತ್ತು. ಅವರಇಂಡಿಯಾ ವರ್ಸಸ್ ಪಾಕಿಸ್ತಾನ್ಟ್ವೀಟ್ ಸರಣಿಗಾಗಿ ಆಯೋಗವು ಕಪಿಲ್ ಮಿಶ್ರ  ಮೇಲೆ ೪೮ ಗಂಟೆಗಳ ಅವಧಿಗೆ ಪ್ರಚಾರ ನಿಷೇಧ ವಿಧಿಸಿತ್ತು.

ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಪ್ರಚಾರ ಅಭಿಯಾನವು ಮುಖ್ಯವಾಗಿ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧದ ಪ್ರತಿಭಟನೆಗಳನ್ನು ಕೇಂದ್ರೀಕರಿಸಿದೆ.  ಮೇಲೆ ಕೇಂದ್ರೀಕೃತವಾಗಿದೆ,  ತನ್ಮೂಲಕ ಹಿಂದೂ ಮತಗಳನ್ನು ಕ್ರೋಡೀಕರಿಸಲು ಸಾಧ್ಯ ಎಂಬುದಾಗಿ ಬಿಜೆಪಿ ಲೆಕ್ಕ ಹಾಕಿದೆ.

ಬಿಜೆಪಿ ನಾಯಕರ ಹೇಳಿಕೆಗಳು ವಿರೋಧ ಪಕ್ಷದ  ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ದೆಹಲಿಯ ಚುನಾವಣಾ ಮುಖ್ಯಸ್ಥರು ಬಿಜೆಪಿ ನಾಯಕರ ಭಾಷಣಗಳ ಕುರಿತು ವರದಿ ಸಲ್ಲಿಸಿದ ಬಳಿಕ ಚುನಾವಣಾ ಆಯೋಗವು ಅವರ ವಿರುದ್ಧ ಕ್ರಮ ಕೈಗೊಂಡಿದೆ.

ಚುನಾವಣಾ ಆಯೋಗದ ಅಧಿಕಾರಿಗಳನ್ನು ಬುಧವಾರ ಭೇಟಿ ಮಾಡಿದ ಆಮ್ ಆದ್ಮಿ ಪಕ್ಷದ ಮುಖಂಡ ಸಂಜಯ್ ಸಿಂಗ್ ಅವರು ಗೃಹ ಸಚಿವ ಅಮಿತ್ ಷಾ ಅವರನ್ನು ಪ್ರಚಾರದಿಂದ ನಿಷೇಧಿಸುವಂತೆ ಒತ್ತಾಯಿಸಿದ್ದರು.

ಮುಂದಿನ ೪೮ ಗಂಟೆಗಳ ಅವಧಿಗೆ ಅಮಿತ್ ಷಾ ಅವರನ್ನು ಪ್ರಚಾರದಿಂದ ನಿಷೇಧಿಸುವಂತೆ ನಾವು ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದೇವೆಎಂದು ಅವರು ನುಡಿದರು.

ನಕಲಿ ವಿಡಿಯೋಗಳ ವಿರುದ್ಧ ಎಫ್ಐಆರ್ ದಾಖಲಿಸಬೇಕು. ಸಾಮಾಜಿಕ ಮಾಧ್ಯಮದಿಂದ ನಕಲಿ ವಿಡಿಯೋಗಳನ್ನು ಅಳಿಸಬೇಕು" ಎಂದೂ ಸಂಜಯ್ ಸಿಂಗ್ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದರು.

ಕೇಂದ್ರ ಗೃಹ ಸಚಿವರು ತಮ್ಮ ಸಂಸದರೊಂದಿಗೆ ದೆಹಲಿಯ ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರನ್ನು ಅವಮಾನಿಸುತ್ತಿದ್ದಾರೆ ಎಂದು ಸಂಜಯ್ ನುಡಿದರು.

No comments:

Advertisement