Thursday, January 30, 2020

ಜನತಾದಳದಿಂದ (ಯು) ಪ್ರಶಾಂತ ಕಿಶೋರ್, ಪವನ್ ವರ್ಮಾ ಉಚ್ಚಾಟನೆ

ಜನತಾದಳದಿಂದ (ಯು) ಪ್ರಶಾಂತ ಕಿಶೋರ್,
  ಪವನ್ ವರ್ಮಾ ಉಚ್ಚಾಟನೆ
ನವದೆಹಲಿ: ಬಿಹಾರ ರಾಜ್ಯದ ಒಳಗೆ ಮತ್ತು ಹೊರಗೆ ಬಿಜೆಪಿ ಜೊತೆಗಿನ ಪಕ್ಷದ ಸಖ್ಯವನ್ನು ಖಚಿತ ಪಡಿಸುವ ಸ್ಪಷ್ಟ ಸೂಚನೆಯಾಗಿ ಮುಖ್ಯಮಂತ್ರಿ ನಿತೀಶ್ ಕುಮಾರ್  ನೇತೃತ್ವದ ಜನತಾದಳವು (ಯುನೈಟೆಡ್)  2020 ಜನವರಿ 29ರ ಬುಧವಾರ ಬಂಡಾಯ ನಾಯಕರಾದ ಪ್ರಶಾಂತ್ ಕಿಶೋರ್ ಮತ್ತು ಪವನ್ ವರ್ಮಾ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಿತು.

ಉಭಯ ನಾಯಕರು ಬಿಹಾರದ ಹೊರಗೆ ಬಿಜೆಪಿಯೊಂದಿಗಿನ ಜೆಡಿಯು ಮೈತ್ರಿ  ಹಾಗೂ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ಪೌರ ನೋಂದಣಿ (ಎನ್ಆರ್ಸಿ) ಕುರಿತ ಪಕ್ಷದ ನಿಲುವನ್ನು ತೀವ್ರವಾಗಿ ಪ್ರಶ್ನಿಸಿದ್ದರು.

ಫೆಬ್ರುವರಿ ರಂದು ದೆಹಲಿಯಲ್ಲಿ ನಡೆಯಲಿರುವ ಚುನಾವಣಾ ಪ್ರಚಾರ ಸಭೆಯಲ್ಲಿ ನಿತೀಶ್ ಕುಮಾರ್ ಅವರು ಕೇಂದ್ರ  ಗೃಹ ಸಚಿವ ಅಮಿತ್ ಶಾ ಅವರ ಜೊತೆಗೆ ವೇದಿಕೆ ಹಂಚಿಕೊಳ್ಳುವ ಮತ್ತು ಮುಂದಿನ ವಾರ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ಬಿಜೆಪಿ ಅಭ್ಯರ್ಥಿಗಳ ಪ್ರಚಾರ ನಡೆಸುವ ನಿರೀಕ್ಷೆಯಿದೆ.

ಉಭಯ ಧುರೀಣರೂ ಪಕ್ಷದ ನಿರ್ಧಾರ ಮತ್ತು ಅದರ ಕಾರ್ಯವೈಖರಿಗೆ ವಿರುದ್ಧವಾಗಿ ವರ್ತಿಸುತ್ತಿದ್ದಾರೆ. ಇದು ಶಿಸ್ತಿನ ಉಲ್ಲಂಘನೆಯಾಗಿದೆ. ಪ್ರಶಾಂತ ಕಿಶೋರ್ ಅವರು ಬಿಹಾರ ಮುಖ್ಯಮಂತ್ರಿ ವಿರುದ್ಧ "ಅವಮಾನಕರ ಪದಗಳನ್ನು" ಬಳಸಿದ್ದಾರೆ ಎಂದು ಪಕ್ಷದ ಮುಖ್ಯ ಪ್ರಧಾನ ಕಾರ್ಯದರ್ಶಿ ಕೆ.ಸಿ. ತ್ಯಾಗಿ ಹೊರಡಿಸಿದ ಜೆಡಿಯು ಹೇಳಿಕೆ ಆರೋಪಿಸಿದೆ.

ಇನ್ನಷ್ಟು ಕೀಳ್ಮಟ್ಟಕ್ಕೆ ಇಳಿಯದಂತೆ  ನೋಡಿಕೊಳ್ಳಲು ಕಿಶೋರ್ ಅವರನ್ನು ಪಕ್ಷದಿಂದ ಉಚ್ಚಾಟಿಸುವುದು ಅನಿವಾರ್ಯವಾಗಿದೆಎಂದು ಜೆಡಿಯು ಹೇಳಿಕೆ ತಿಳಿಸಿತು.
ಉಚ್ಚಾಟನೆಗೆ ಪ್ರತಿಕ್ರಿಯಿಸಿದ ಪ್ರಶಾಂತ ಕಿಶೋರ್ ಅವರು ನಿತೀಶ್ ಕುಮಾರ್ ಅವರಿಗೆ ಧನ್ಯವಾದಗಳನ್ನು ಸಲ್ಲಿಸಿ ಟ್ವೀಟ್ ಮಾಡಿದರು.

ಕಿಶೋರ್ ಮತ್ತು ಕುಮಾರ್ ನಡುವೆ ನಡೆದ ವಾಕ್ ಸಮರದ ಒಂದು ದಿನದ ಬಳಿಕ ಉಭಯ ಬಂಡಾಯ ನಾಯಕರನ್ನು ಉಚ್ಚಾಟಿಸಲಾಗಿದೆ. ಅಮಿತ್ ಶಾ ನಿರ್ದೇಶನದ ಮೇರೆಗೆ ತಮ್ಮನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಗಿತ್ತು ಎಂಬುದಾಗಿ ನಿತೀಶ್ ಕುಮಾರ್ ಹೇಳಿದ್ದನ್ನು ಪ್ರಶಾಂತ ಕಿಶೋರ್ನಕಲಿ ಪ್ರತಿಪಾದನೆಎಂಬುದಾಗಿ ಟೀಕಿಸಿದ್ದರು.

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ಪೌರ ನೋಂದಣಿ (ಎನ್ಆರ್ಸಿ) ವಿರುದ್ಧ ಪ್ರಶಾಂತ ಕಿಶೋರ್ ತೆಗೆದುಕೊಂಡ ಬಲವಾದ ನಿಲುವಿನ ಹಿನ್ನೆಲೆಯಲ್ಲಿ, ಅವರ ಜೊತೆಗಿನ ಸಂಪರ್ಕ ಕಡಿದುಕೊಳ್ಳಲು ಇಚ್ಛಿಸಿದ್ದ ನಿತೀಶ್ ಕುಮಾರ್ ಮಂಗಳವಾರತಮ್ಮ ಇಷ್ಟದಂತೆ ಪಕ್ಷದಲ್ಲಿ ಉಳಿಯಲು ಅಥವಾ ಹೊರಹೋಗಲು ಜನರು ಮುಕ್ತರಾಗಿದ್ದಾರೆಎಂದು ಕಟುವಾಗಿ ಹೇಳಿದ್ದರು.

ಕಳೆದ ತಿಂಗಳು, ಅಮಿತ್ ಶಾ ಸೇರಿದಂತೆ ಹಿರಿಯ ಬಿಜೆಪಿ ನಾಯಕರನ್ನು ಟೀಕಿಸಿದ್ದ ಪ್ರಶಾಂತ ಕಿಶೋರ್ ಅವರು ಪೌರತ್ವ ಕಾನೂನಿನ ಬಗ್ಗೆ ಸರ್ಕಾರದ ನಿಲುವನ್ನು ಪ್ರಶ್ನಿಸಿದ್ದರು.

"ಧೈರ್ಯದಿಂದ ಘೋಷಿಸಿದ್ದ ರೀತಿ ಮತ್ತು ಅದೇ ಕಾಲಾನುಕ್ರಮದಲ್ಲಿ ಸಿಎಎ ಮತ್ತು ಎನ್ಆರ್ಸಿಯನ್ನು ಕಾರ್ಯಗತಗೊಳಿಸಿಎಂದು ಪ್ರಶಾಂತ ಕಿಶೋರ್ ಅವರು ಗೃಹ ಸಚಿವ ಅಮಿತ್ ಶಾ ಅವರಿಗೆ ಸವಾಲು ಹಾಕಿದ್ದರು.

ದೆಹಲಿ ವಿಧಾನಸಭಾ ಚುನಾವಣೆಯ ಪ್ರಚಾರದ ಕಾವಿನ ನಡುವೆ, ಪ್ರಶಾಂತ ಕಿಶೋರ್ ಮತ್ತು ನಿತೀಶ್ ಕುಮಾರ್ ನಡುವಣ ಬಹಿರಂಗ ವಾಕ್ಸಮರವೂ ತೀವ್ರಗೊಂಡಿತ್ತು.

ದೆಹಲಿಯಲ್ಲಿ ಉಭಯ ನಾಯಕರೂ ಪರಸ್ಪರ ಎದುರಾಳಿಗಳಾಗಿದ್ದಾರೆ. ಪ್ರಶಾಂತ ಕಿಶೋರ್ ಅವರು ಆಮ್ ಆದ್ಮಿ ಪಕ್ಷದ (ಎಎಪಿ) ಪರವಾಗಿ ಚುನಾವಣಾ ಪ್ರಚಾರ ಅಭಿಯಾನವನ್ನು ನಿರ್ವಹಿಸುತ್ತಿದ್ದರೆ, ನಿತೀಶ್ ಕುಮಾರ್ ಅವರ ಪಕ್ಷವು ಎರಡು ಸ್ಥಾನಗಳಲ್ಲಿ ಸ್ಪರ್ಧಿಸಲು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದೆ.

ಸಿಎಎ ಮತ್ತು ದೆಹಲಿಯ ಚುನಾವಣಾ ಮೈತ್ರಿಯ ಬಗ್ಗೆ ಪಕ್ಷದ ಅಧಿಕೃತ ನಿಲುವನ್ನು ಬಹಿರಂಗವಾಗಿ ವಿರೋಧಿಸಿದ್ದ ಪವನ್ ವರ್ಮಾ ಅವರೊಂದಿಗೆ ಕೂಡಾ  ನಿತೀಶ್ ಕುಮಾರ್ ತೀಕ್ಷ್ಣ ಮಾತುಗಳ ವಿನಿಮಯ ಮಾಡಿಕೊಂಡಿದ್ದಾರೆ.

ನಿಲುವು ಮರುಪರಿಶೀಲನೆ ಮಾಡುವಂತೆ ವರ್ಮಾ ಅವರು ಮುಖ್ಯಮಂತ್ರಿಗೆ ಬಹಿರಂಗ ಪತ್ರ ಬರೆದ ನಂತರ, ’ಪಕ್ಷ ತ್ಯಜಿಸಲು ನೀವು ಸ್ವತಂತ್ರರಾಗಿದ್ದೀರಿಎಂದು ನಿತೀಶ್ ಕುಮಾರ್ ಎದಿರೇಟು ನೀಡಿದ್ದರು.

No comments:

Advertisement