Wednesday, January 1, 2020

೨೦೨೦ರಲ್ಲಿ ಭಾರತದಿಂದ ಮೂರನೇ ಚಂದ್ರಯಾನ

೨೦೨೦ರಲ್ಲಿ ಭಾರತದಿಂದ ಮೂರನೇ ಚಂದ್ರಯಾನ
ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಪ್ರಕಟಣೆ
ನವದೆಹಲಿ: ೨೦೨೦ರಲ್ಲಿ ಭಾರತವು ಮೂರನೇ ಚಂದ್ರಯಾನವನ್ನು ನಡೆಸಲಿದೆ ಎಂದು ಕೇಂದ್ರದ ಬಾಹ್ಯಾಕಾಶ ಇಲಾಖೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರು 2019 ಡಿಸೆಂಬರ್ 31ರ ಮಂಗಳವಾರ ಇಲ್ಲಿ  ದೃಢ ಪಡಿಸಿದರು.

ಕೇವಲ ಲ್ಯಾಂಡರ್ ಮತ್ತು ರೋವರ್ ಜೊತೆಗೆ ಚಂದ್ರಯಾನ -೩ ಮತ್ತೊಮ್ಮೆ ಚಂದ್ರನ ಅಂಗಳದಲ್ಲಿ ನಿಧಾನವಾಗಿ ಇಳಿಯುವ (ಸಾಫ್ಟ್ ಲ್ಯಾಂಡಿಂಗ್) ಪ್ರಯತ್ನ ಮಾಡಲಿದೆ ಎಂದು ಕೇಂದ್ರ ಸಚಿವರು ನುಡಿದರು.

‘ಹೌದು, ಭಾರತವು ತನ್ನ ಮೂರನೇ ಚಂದ್ರಯಾನವನ್ನು ೨೦೨೦ನೇ ಇಸವಿಯಲ್ಲಿ ನಡೆಸಲಿದೆ. ಆದಾಗ್ಯೂ, ನಾನು ಈ ಹಿಂದೆಯೇ ಹೇಳಿರುವಂತೆ ಚಂದ್ರಯಾನ-೨ನ್ನು ವಿಫಲವೆಂದು ಕರೆಯಲು ಸಾಧ್ಯವಿಲ್ಲ. ನಾವು ಅದರಿಂದ ಹಲವಾರು ವಿಷಯಗಳನ್ನು ಕಲಿತಿದ್ದೇವೆ. ವಿಶ್ವದಲ್ಲಿ ತನ್ನ ಮೊದಲನೇ ಯತ್ನದಲ್ಲೇ ಚಂದ್ರನ ಮೇಲೆ ಇಳಿದ ಯಾವುದೇ ರಾಷ್ಟ್ರವೂ ಇಲ್ಲ, ಅಮೆರಿಕವು ಇದಕ್ಕಾಗಿ ಹಲವಾರು ಪ್ರಯತ್ನಗಳನ್ನು ನಡೆಸಿತ್ತು. ಆದರೆ ನಮಗೆ ಅಂತಹ ಹಲವಾರು ಯತ್ನಗಳು ಬೇಕಾಗಲಾರದು ಎಂದು ಜಿತೇಂದ್ರ ಸಿಂಗ್ ಹೇಳಿದರು.

ಚಂದ್ರಯಾನ-೨ ಯೋಜನೆಯು ಚಂದ್ರನ ಅಂಗಳವನ್ನು ತಲುಪಲು ಭಾರತ ನಡೆಸಿದ್ದ ಚೊಚ್ಚಲ ಯತ್ನವಾಗಿತ್ತು. ಸೆಪ್ಟೆಂಬರ್ ೭ರಂದು ಕೊನೆಯ ೨.೧ ಕಿಮೀ ಪಯಣ ಬಾಕಿ ಉಳಿದಿದ್ದಾಗ ಭೂ ಕೇಂದ್ರದ ಜೊತೆಗಿನ ವ್ಯೋಮನೌಕೆಯ ಸಂಪರ್ಕ ಕಡಿದುಹೋಗಿತ್ತು. ಇಳಿಯಬೇಕಿದ್ದ ತಾಣದಿಂದ ಕೇವಲ ೫೦೦ ಮೀಟರ್ ದೂರದಲ್ಲಿ ವಿಕ್ರಮ್ ಲ್ಯಾಂಡರ್ ಅಪ್ಪಳಿಸಿತ್ತು. ವಿಕ್ರಮ್ ಲ್ಯಾಂಡರ್ ಅಪ್ಪಳಿಸಿದ್ದನ್ನು ಜಿತೇಂದ್ರ ಸಿಂಗ್ ಅವರು ಸಂಸತ್ತಿನಲ್ಲಿ ಅಧಿಕೃತವಾಗಿ ದೃಢಪಡಿಸಿದ್ದರು.

ಚಂದ್ರನ ಅಂಗಳವನ್ನು ತಲುಪಲು ಸಾಧ್ಯವಾಗಿದ್ದಿದ್ದರೆ, ಅಮೆರಿಕ, ಹಿಂದಿನ ಯುಎಸ್‌ಎಸ್‌ಆರ್ ಮತ್ತು ಚೀನಾದ ಬಳಿಕ ಚಂದ್ರನಲ್ಲಿ ಇಳಿದ ನಾಲ್ಕನೇ ರಾಷ್ಟ್ರ ಹಾಗೂ ದಕ್ಷಿಣ ಧ್ರುವಕ್ಕೆ ಅತ್ಯಂತ ಸಮೀಪದಲ್ಲಿ ಇಳಿದ ಪ್ರಥಮ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗುತ್ತಿತ್ತು.

ಲ್ಯಾಂಡರ್‌ನ ವೇಗ ಅಗತ್ಯಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಇಳಿದದ್ದು ಅದು ಅಪ್ಪಳಿಸಲು ಕಾರಣವಾಗಿರಬಹುದು ಎಂದು ಸಂಸತ್ತಿಗೆ ನೀಡಲಾದ ಉತ್ತರದಲ್ಲಿ ತಿಳಿಸಲಾಗಿತ್ತು.

ನಾಸಾವು ಬಳಿಕ ಬಿಡುಗಡೆ ಮಾಡಿದ ಲ್ಯೂನಾರ್ ಅರ್ಬಿಟರ್ ಸೆರೆಹಿಡಿದ ಲ್ಯಾಂಡಿಂಗ್ ಸ್ಥಳದ ಚಿತ್ರಗಳು ಅಲ್ಲಿದ್ದ ೨೧ ತುಂಡುಗಳು ವಿಕ್ರಮ್ ಲ್ಯಾಂಡರ್ ನ ಅವಶೇಷಗಳಾಗಿರಬಹುದು ಎಂದು ದೃಢಪಡಿಸಿದ್ದವು.  ಭಾರತೀಯ ಎಂಜಿನಿಯರ್ ಒಬ್ಬರು ತಿಂಗಳ ಹಿಂದೆ ನೀಡಿದ್ದ ಸುಳಿವನ್ನು  ಅನುಸರಿಸಿ ಅವಶೇಷಗಳನ್ನು ನಾಸಾ ಗುರುತಿಸಿತ್ತು

No comments:

Advertisement