Saturday, January 4, 2020

೧೧ ಮುಖ್ಯಮಂತ್ರಿಗಳಿಗೆ ಕೇರಳ ಸಿಎಂ ಪಿಣರಾಯಿ ವಿಜಯನ್ ಪತ್ರ

೧೧ ಮುಖ್ಯಮಂತ್ರಿಗಳಿಗೆ ಕೇರಳ ಸಿಎಂ ಪಿಣರಾಯಿ ವಿಜಯನ್ ಪತ್ರ
ಪೌರತ್ವ (ತಿದ್ದುಪಡಿ) ಕಾಯ್ದೆ ವಿರುದ್ಧ ಒಂದಾಗಲು ಆಗ್ರಹ
ನವದೆಹಲಿ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ೧೧ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಒಂದಾಗುವಂತೆ  2020 ಜನವರಿ 03ರ  ಶುಕ್ರವಾರ ಆಗ್ರಹಿಸಿದರು. ಡಿಸೆಂಬರ್ ತಿಂಗಳಲ್ಲಿ ಸಂಸತ್ತು ಅಂಗೀಕರಿಸಿದ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ರದ್ದು ಪಡಿಸುವಂತೆ ಒತ್ತಡ ತರಬೇಕು ಎಂದು ವಿವಿಧ ಮುಖ್ಯಮಂತ್ರಿಗಳಿಗೆ ವಿಜಯನ್ ಮನವಿ ಮಾಡಿದರು.

೨೦೧೯ರ ಪೌರತ್ವ ತಿದ್ದುಪಡಿ ಕಾಯ್ದೆಯ ಪರಿಣಾಮವಾಗಿ ನಮ್ಮ ಸಮಾಜದ ವಿಶಾಲ ವರ್ಗದಲ್ಲಿ ಭೀತಿಗಳು ಹುಟ್ಟಿವೆ. ಪ್ರಜಾಪ್ರಭುತ್ವ ಮತ್ತು ಜಾತ್ಯತೀತತೆಯನ್ನ ರಕ್ಷಿಸಬಯಸುವ ಎಲ್ಲ ಭಾರತೀಯರಲ್ಲಿ ಒಗ್ಗಟ್ಟು ಮೂಡಬೇಕಾದದ್ದು ಸಮಯದ ಅಗತ್ಯವಾಗಿದೆಎಂದು ಪಿಣರಾಯಿ ತಮ್ಮ ಪತ್ರದಲ್ಲಿ ಹೇಳಿದರು.

೨೦೧೯ರ
ಡಿಸೆಂಬರ್ ೩೧ರಂದು ಕೇರಳ ವಿಧಾನಸಭೆಯಲ್ಲಿ ಅಂಗೀಕರಿಸಲಾದ ನಿರ್ಣಯದ ಬಗ್ಗೆ ಕೂಡಾ ವಿಜಯನ್ ಅವರು ಪತ್ರದಲ್ಲಿ ಗಮನ ಸೆಳೆದಿದ್ದಾರೆ. ಕೇರಳ ವಿಧಾನಸಭೆಯು ಅಂಗೀಕರಿಸಿದ ನಿರ್ಣಯವು ನಮ್ಮ ರಾಷ್ಟ್ರದ ಜಾತ್ಯತೀತ ನೆಲೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳು ಇರುವ ಬಗ್ಗೆ ಕಳವಳ ವ್ಯಕ್ತ ಪಡಿಸಿದ ನಿರ್ಣಯವು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ರದ್ದು ಪಡಿಸುವಂತೆ ಕೇಂದ್ರಕ್ಕೆ ಮನವಿ ಮಾಡಿತ್ತು.

೧೨
ರಾಜ್ಯಗಳ ಮುಖ್ಯಮಂತ್ರಿಗಳು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿದ್ದು, ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಅವರ ಪೈಕಿ ಮುಂಚೂಣಿಯಲ್ಲಿದ್ದಾರೆ.

ಸಿಲಿಗುರಿಯಲ್ಲಿ ಶುಕ್ರವಾರ ನಡೆದ ರ್ಯಾಲಿಯಲ್ಲಿ ಬ್ಯಾನರ್ಜಿ ಅವರು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಅಂಗೀಕರಿಸಿದ್ದಕ್ಕಾಗಿ ಕೇಂದ್ರದ ಮೇಲೆ ಹರಿಹಾಯ್ದು, ಅದರ ವಿರುದ್ಧ ಒಂದಾಗುವಂತೆ ರಾಜ್ಯಗಳಿಗೆ ಕರೆ ನೀಡಿದರು.

ನಾನು ರಾಷ್ಟ್ರೀಯ ಪೌರ ನೋಂದಣಿ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಹೋರಾಡುತ್ತಿದ್ದೇನೆ ಮತ್ತು ನನ್ನ ಜೊತೆ ಕೈಜೋಡಿಸುವಂತೆ ಮತ್ತು ನಮ್ಮ ಪ್ರಜಾಪ್ರಭುತ್ವದ ರಕ್ಷಣೆಗೆ ಮುಂದಾಗುವಂತೆ ಜನತೆಗೆ ಮನವಿ ಮಾಡುತ್ತಿದ್ದೇನೆಎಂದು ಬ್ಯಾನರ್ಜಿ ಹೇಳಿದರು.

ಕೇರಳವು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ರದ್ದು ಪಡಿಸುವಂತೆ ಕೇಂದ್ರವನ್ನು ಒತ್ತಾಯಿಸಿ ನಿರ್ಣಯವನ್ನು ಅಂಗೀಕರಿಸಿದ ಮೊದಲ ರಾಜ್ಯವಾಗಿದ್ದು, ಆಡಳಿತ ಮತ್ತು ವಿರೋಧ ಪಕ್ಷಗಳು ನಿರ್ಣಯವನ್ನು ಬೆಂಬಲಿಸಿದ್ದವು.

ಕೇಂದ್ರ ಕಾನೂನು ಸಚಿವ ರವಿಶಂಕರ ಪ್ರಸಾದ್ ಅವರು ನಿರ್ಣಯ ಅಂಗೀಕರಿಸಿದ ಬಳಿಕ ಕೇರಳ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡುವಿಜಯನ್ ಅವರು ಉತ್ತಮ ಕಾನೂನು ಸಲಹೆ ಪಡೆಯಬೇಕು ಎಂದು ಸಲಹೆ ಮಾಡಿದ್ದರು. ಕೇರಳದ ರಾಜ್ಯಪಾಲ ಅರಿಫ್ ಮೊಹಮ್ಮದ್ ಖಾನ್ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ರಾಜ್ಯ ವಿಧಾನಸಭೆ ಅಂಗೀಕರಿಸಿರುವ ನಿರ್ಣಯಕ್ಕೆ ಯಾವುದೇ ಕಾನೂನುಬದ್ಧ ಮಾನ್ಯತೆ ಇಲ್ಲ ಮತ್ತು ಅದು ಸಂವಿಧಾನಬಾಹಿರ ನಿರ್ಣಯವಾಗಿದೆ ಎಂದು ಹೇಳಿದ್ದರು.

ಏನಿದ್ದರೂ
ಕೇರಳ ವಿಧಾನಸಭೆ ನಿರ್ಣಯ ಕುರಿತ ಟೀಕೆಗಳನ್ನು ತಿರಸ್ಕರಿಸಿದ ವಿಜಯನ್ ರಾಜ್ಯ ವಿಧಾನಸಭೆಗಳಿಗೆ ತಮ್ಮದೇ ಹಕ್ಕುಗಳಿವೆ ಎಂದು ಹೇಳಿದ್ದಾರೆ.

ರಾಜ್ಯ ವಿಧಾನಸಭೆಗಳಿಗೆ ತಮ್ಮದೇ ಆದ ಹಕ್ಕುಗಳಿವೆ. ಇಂತಹ ಕ್ರಮಗಳು ಎಲ್ಲೂ ಕೇಳಿ ಬರುವುದೇ ಇಲ್ಲ. ಆದರೆ ನಮ್ಮ ರಾಷ್ಟ್ರದಲ್ಲಿ ಈಗಿನ ದಿನಗಳಲ್ಲಿ ಸಂಭವಿಸುತ್ತಿರುವ ಘಟನಾವಳಿಗಳು ಅಭೂತಪೂರ್ವವಾಗಿರುವುದರಿಂದ ಪ್ರಸ್ತುತ ಪರಿಸ್ಥಿತಿಗಳನ್ನು ಸಾಮಾನ್ಯವೆಂದು ನಾವು ತಳ್ಳಿಹಾಕುವಂತಿಲ್ಲಎಂದು ವಿಜಯನ್ ಬುಧವಾರ ಹೇಳಿದ್ದರು.

No comments:

Advertisement