My Blog List

Thursday, January 30, 2020

ನಿರ್ಭಯಾ ಪ್ರಕರಣ: ಫೆಬ್ರುವರಿ ೧ರಂದು ಗಲ್ಲು ಜಾರಿ ಅಸಂಭವ?

ನಿರ್ಭಯಾ ಪ್ರಕರಣ: ಫೆಬ್ರುವರಿ ೧ರಂದು ಗಲ್ಲು ಜಾರಿ ಅಸಂಭವ?
ಮುಕೇಶ್ ಸಿಂಗ್ ಅರ್ಜಿ ವಜಾ, ಸುಪ್ರೀಂ, ರಾಷ್ಟ್ರಪತಿ ಭವನದ  ಮೆಟ್ಟಿಲೇರಿದ  ಇಬ್ಬರು
ನವದೆಹಲಿ: ೨೦೧೨ರ ದೆಹಲಿ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಮರಣದಂಡನೆಗೆ ಗುರಿಯಾಗಿರುವ ನಾಲ್ವರು ಶಿಕ್ಷಿತರ ಗಲ್ಲು ಶಿಕ್ಷೆಯು ನಿಗದಿಯಂತೆ ಫೆಬ್ರುವರಿ ೧ರಂದು ಜಾರಿಯಾಗುವುದು ಅಸಂಭವ ಎನ್ನಲಾಗುತ್ತಿದೆ. ಇನ್ನಿಬ್ಬರು ಅಪರಾಧಿಗಳ ಪೈಕಿ ಒಬ್ಬ  ಅಪರಾಧಿ ಸುಪ್ರೀಂಕೋಟ್ ಮೆಟ್ಟಿಲೇರಿದ್ದರೆ, ಇನ್ನೊಬ್ಬ ರಾಷ್ಟ್ರಪತಿ ಭವನದ ಮೆಟ್ಟಿಲು ತುಳಿದಿರುವುದು  ಇದಕ್ಕೆ ಕಾರಣ ಎಂದು ಹೇಳಲಾಯಿತು.

ತನ್ನ ಕ್ಷಮಾದಾನ ಕೋರಿಕೆ ಅರ್ಜಿಯನ್ನು ರಾಷ್ಟ್ರಪತಿಯವರು ತಿರಸ್ಕರಿಸಿದ್ದನ್ನು ಪ್ರಶ್ನಿಸಿ ತಪ್ಪಿತಸ್ಥ ಮುಕೇಶ್ ಸಿಂಗ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್  2020 ಜನವರಿ 29ರ ಬುಧವಾರ ವಜಾಗೊಳಿಸಿದ ಬೆನ್ನಲ್ಲೇ, ಇನ್ನೊಬ್ಬ ಶಿಕ್ಷಿತ ಅಪರಾಧಿ ಅಕ್ಷಯ್ ಸಿಂಗ್ (೩೧) ಗಲ್ಲು ಶಿಕ್ಷೆಯನ್ನು ಪ್ರಶ್ನಿಸಿ ಸುಪ್ರೀಂಕೋರ್ಟಿಗೆ  ಕ್ಯುರೇಟಿವ್ ಅರ್ಜಿ ಸಲ್ಲಿಸಿದರೆ, ವಿನಯ್ ಶರ್ಮ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ  ಕ್ಷಮಾದಾನ ಕೋರಿಕೆ ಅರ್ಜಿ ಸಲ್ಲಿಸಿದ.

ಕಳೆದ ತಿಂಗಳು ಆಕ್ಷಯ್ ಸಿಂಗ್ ಸಲ್ಲಿಸಿದ್ದ ಮರಣದಂಡನೆ ಪುನರ್ ಪರಿಶೀಲನಾ ಕೋರಿಕೆ ಅರ್ಜಿಯನ್ನು  ಸುಪ್ರೀಂಕೋರ್ಟ್ ತಿರಸ್ಕರಿಸಿತ್ತು.  ಹಿಂದೂ ಧಾರ್ಮಿಕ ಗ್ರಂಥಗಳು ಮತ್ತು ದೆಹಲಿ ಮಾಲಿನ್ಯ ಬಿಕಟ್ಟನ್ನು ಉಲ್ಲೇಖಿಸಿ ತನ್ನ ಮರಣದಂಡನೆಯನ್ನು ಜಾರಿಗೊಳಿಸಬಾರದು ಎಂಬ ವಿಚಿತ್ರ ವಾದವನ್ನು ಅಕ್ಷಯ್ ಸಿಂಗ್ ಸುಪ್ರೀಂಕೋರ್ಟಿನಲ್ಲಿ ಮಂಡಿಸಿದ್ದ.

ಇದೀಗ ಅಕ್ಷಯ್ ಸಿಂಗ್ ಸಲ್ಲಿಸಿರುವ ಕ್ಯುರೇಟಿವ್ ಅರ್ಜಿಯನ್ನು ನ್ಯಾಯಮೂರ್ತಿಗಳು ಮುಕ್ತ ನ್ಯಾಯಾಲಯದ ಬದಲು ತಮ್ಮ ಕೊಠಡಿಯಲ್ಲೇ ಆಲಿಸಲಿದ್ದಾರೆ. ಕ್ಯೂರೇಟಿವ್ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದ ಬಳಿಕ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಕ್ಷಮಾದಾನ ಕೋರಿಕೆ ಅರ್ಜಿಯನ್ನು ಸಲ್ಲಿಸಲು ಅವಕಾಶವಿದೆ.

ಭಾರತದ ರಾಷ್ಟ್ರಪತಿಯವರು ತನ್ನ ಕ್ಷಮಾದಾನ ಕೋರಿಕೆ ಅರ್ಜಿಯನ್ನು ಮನಸ್ಸನ್ನು ಅನ್ವಯಿಸದೇ ತಿರಸ್ಕರಿಸಿದ್ದನ್ನು ಪ್ರಶ್ನಿಸಿ ಶಿಕ್ಷಿತ ಅಪರಾಧಿಗಳಲ್ಲಿ ಒಬ್ಬನಾದ ಮುಕೇಶ್ ಸಿಂಗ್ (೩೨) ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟಿನ ತ್ರಿಸದಸ್ಯ ಪೀಠವು  ಈದಿನ ತಿರಸ್ಕರಿಸಿತು.

ಈ ಮಧ್ಯೆ ಪ್ರಕರಣದ ಇನ್ನೋರ್ವ ಅಪರಾಧಿ ವಿನಯ್ ಶರ್ಮಾ ಮತ್ತೆ ಕ್ಷಮಾದಾನ ಕೋರಿ ರಾಷ್ಟ್ರಪತಿಯವರಿಗೆ  ಈದಿನ  ಅರ್ಜಿಯನ್ನು ಸಲ್ಲಿಸಿದ.

ಅಕ್ಷಯ್ ಮತ್ತು ಮುಕೇಶ್ ಸಿಂಗ್ ಜೊತೆಗೆ ವಿನಯ್ ಶರ್ಮ (೨೬) ಮತ್ತು ಪವನ್ ಗುಪ್ತ (೨೬) ಅವರನ್ನೂ ದೆಹಲಿಯ ತಿಹಾರ್ ಸೆರೆಮನೆಯಲ್ಲಿ ಶನಿವಾರ (ಫೆಬ್ರುವರಿ ) ಗಲ್ಲಿಗೆ ಏರಿಸಲು ದಿನಾಂಕ ನಿಗದಿಯಾಗಿದೆ. ಐದನೇ ಅಪರಾಧಿಯನ್ನು ಅಪರಾಧ ಸಂಭವಿಸಿದ ವೇಳೆಯಲ್ಲಿ ಅಪ್ರಾಪ್ತ ವಯಸ್ಕನಾಗಿದ್ದ ಎಂಬ ನೆಲೆಯಲ್ಲಿ ಮೂರು ವರ್ಷಗಳ ಸುಧಾರಣಾ ಗೃಹದ ವಾಸವನ್ನು ವಿಧಿಸಿ ಬಳಿಕ ಅಜ್ಞಾತ ಸ್ಥಳದಲ್ಲಿ ಬಿಡುಗಡೆ ಮಾಡಲಾಗಿತ್ತು. ಪ್ರಕರಣದ ಆರನೇ ಆರೋಪಿ ರಾಮ್ ಸಿಂಗ್ ವಿಚಾರಣೆಯ ಕಾಲದಲ್ಲೇ ತಿಹಾರ್ ಸೆರೆಮನೆಯಲ್ಲಿ ಆತ್ಮ ಹತ್ಯೆ ಮಾಡಿಕೊಂಡಿದ್ದ ಎಂದು ಆಪಾದಿಸಲಾಗಿತ್ತು.

ಗಲ್ಲು ಶಿಕ್ಷೆಗೆ ಗುರಿಯಾದ ಶಿಕ್ಷಿತ ಅಪರಾಧಿಗಳು ಕೊನೆಯ ಕ್ಷಣಗಳಲ್ಲಿ ಸಲ್ಲಿಸುತ್ತಿರುವ ಅರ್ಜಿಗಳನ್ನು ಗಲ್ಲು ಶಿಕ್ಷೆ ಜಾರಿ ತಡೆಯಲು ನಡೆಸಲಾಗುತ್ತಿರುವ ಭ್ರಮನಿರಸನದಾಯಕ ಪ್ರಯತ್ನಗಳು ಎಂದು ವ್ಯಾಪಕವಾಗಿ ಪರಿಗಣಿಸಲಾಗುತ್ತಿದೆ. ಅಪರಾಧದಲ್ಲಿ ದಾರುಣವಾಗಿ ಸಾವನ್ನಪ್ಪಿದ ನತದೃಷ್ಟ ಯುವತಿಯ ಪೋಷಕರು ಸೇರಿದಂತೆ ಸಾರ್ವಜನಿಕರಿಂದ ಗಲ್ಲು ಶಿಕ್ಷೆ ಜಾರಿ ವಿಳಂಬಕ್ಕೆ ತೀವ್ರ ಟೀಕೆ ವ್ಯಕ್ತವಾಗಿದೆ.

ಮರಣದಂಡನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಶಿಕ್ಷಿತ ಅಪರಾಧಿಗಳು ಕಾನೂನುಬದ್ಧ ಪರಿಹಾರ ಬಳಸಿಕೊಳ್ಳುವ ನೆಪದಲ್ಲಿ ದಂಡನೆ ಜಾರಿಯನ್ನು ವಿಳಂಬಗೊಳಿಸಲು ಸಾಧ್ಯವಾಗದಂತೆ ಮಾರ್ಗದರ್ಶಿ ನಿಯಮಾವಳಿಗಳನ್ನು ಬದಲಾಯಿಸಬೇಕು ಎಂದು ಕೇಂದ್ರ ಸರ್ಕಾರವು ಕಳೆದ ವಾರ ಸುಪ್ರೀಂಕೋರ್ಟಿಗೆ ಮನವಿ ಮಾಡಿತ್ತು.

ಪ್ರಸ್ತುತ ನಿಯಮಾವಳಿಗಳು ಅಪರಾಧಿಗಳ ಕಾನೂನು ಬದ್ದ ಸವಲತ್ತು ಕೇಂದ್ರಿತವಾಗಿದ್ದು, ಗಲ್ಲು ಜಾರಿಯನ್ನು ವಿಳಂಬಗೊಳಿಸಲು ಕಾನೂನಿನ ಜೊತೆ ಆಟವಾಡಲು ಅಪರಾಧಿಗಳಿಗೆ ಅವಕಾಶ ನೀಡಿದೆ ಎಂದು ಕೇಂದ್ರವು ತನ್ನ ಅರ್ಜಿಯಲ್ಲಿ ಹೇಳಿತ್ತು.

ನ್ಯಾಯಾಲಯವು ಗಲ್ಲು ಶಿಕ್ಷೆಗೆ ಗುರಿಯಾದ ಅಪರಾಧಿಗಳ ಹಕ್ಕುಗಳನ್ನಷ್ಟೇ ಅಲ್ಲ, ನೊಂದವರ ಹಕ್ಕುಗಳನ್ನೂ ಗಮನಿಸಬೇಕಾಗುತ್ತದೆ ಎಂದು ಭಾರತದ ಮುಖ್ಯನ್ಯಾಯಮೂರ್ತಿ ಶರತ್ ಅರವಿಂದ ಬೋಬ್ಡೆ ಅವರೂ ಪ್ರಕರಣದ ವಿಚಾರಣೆ ಒಂದರ ಕಾಲದಲ್ಲಿ ಹೇಳಿದ್ದರು.

೨೦೧೨ರ ಡಿಸೆಂಬರ್ ೧೬ರ ರಾತ್ರಿ, ದಕ್ಷಿಣ ದೆಹಲಿಯಲ್ಲಿ ಚಲಿಸುವ ಬಸ್ಸಿನಲ್ಲಿ ಆರು ಮಂದಿ ಆರೋಪಿಗಳು ೨೩ರ ಹರೆಯದ  ಫಿಸಿಯೋಥೆರೆಪಿ ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಲ್ಲದೆ, ಕ್ರೂರವಾಗಿ ಚಿತ್ರಹಿಂಸೆ ನೀಡಿ ಬಸ್ಸಿನಿಂದ ಹೊರಕ್ಕೆ ಎಸೆದಿದ್ದರು.

ತೀವ್ರ ಗಾಯಗಳೊಂದಿಗೆ ಚಳಿಗಾಲದ ರಾತ್ರಿಯಲ್ಲಿ ಅರೆನಗ್ನಾವಸ್ಥೆಯಲ್ಲಿ ರಸ್ತೆಯಲ್ಲಿ ಪತ್ತೆಯಾದ ತರುಣಿ ಜೀವನ್ಮರಣ ಹೋರಾಟದ ಬಳಿಕ ಸಿಂಗಾಪುರದ ಆಸ್ಪತ್ರೆಯಲ್ಲಿ ಪಕ್ಷದ ಬಳಿಕ ಮೃತರಾಗಿದ್ದರು. ಘಟನೆ ದೇಶಾದ್ಯಂತ ಭಾರೀ ಸಾರ್ವಜನಿಕ ಪ್ರತಿಭಟನೆಗೆ ಕಾರಣವಾಗಿತ್ತು. ಪತ್ರಿಕೆಗಳುಮತ್ತು ಮಾಧ್ಯಮಗಳು ಮೃತ ತರುಣಿಯನ್ನು ನಿರ್ಭಯಾಎಂಬುದಾಗಿ ಪರಿಚಯಿಸಿದ್ದವು.

No comments:

Advertisement