My Blog List

Tuesday, January 28, 2020

ಚಾರಿತ್ರಿಕ ಬೊಡೋ ಒಪ್ಪಂದಕ್ಕೆ ಸಹಿ, ದಶಕಗಳ ಹಿಂಸಾತ್ಮಕ ಆಂದೋಲನಕ್ಕೆ ತೆರೆ

ಚಾರಿತ್ರಿಕ ಬೊಡೋ ಒಪ್ಪಂದಕ್ಕೆ ಸಹಿ, ದಶಕಗಳ ಹಿಂಸಾತ್ಮಕ ಆಂದೋಲನಕ್ಕೆ ತೆರೆ
ಬೋಡೋ ಜನರ ಅಭಿವೃದ್ಧಿಗೆ ೧೫೦೦ ಕೋಟಿ ರೂ ಪ್ಯಾಕೇಜ್
ನವದೆಹಲಿ: ಅಸ್ಸಾಮಿನ ಕಟ್ಟಾ ಉಗ್ರಗಾಮಿ ಸಂಘಟನೆ ’ನ್ಯಾಷನಲ್ ಡೆಮಾಕ್ರಟಿಕ್ ಫ್ರಂಟ್ ಆಫ್ ಬೋಡೋಲ್ಯಾಂಡ್ ಜೊತೆಗೆ ಚಾರಿತ್ರಿಕ ಒಪ್ಪಂದಕ್ಕೆ ಸರ್ಕಾರವು 2020 ಜನವರಿ 27ರ ಸೋಮವಾರ ಸಹಿ ಹಾಕಿತು. ಇದರೊಂದಿಗೆ ರಾಜ್ಯ ಸ್ಥಾನಮಾನಕ್ಕಾಗಿ ನಡೆಯುತ್ತಿದ್ದ ದಶಕಗಳ ಕಾಲದ ಹಿಂಸಾತ್ಮಕ ಚಳವಳಿಗೆ ತೆರೆ ಬಿದ್ದಿತು.

ಒಪ್ಪಂದವು ಅಸ್ಸಾಮಿನ ಪ್ರಾದೇಶಿಕ ಸಮಗ್ರತೆಯನ್ನು ಹಾಗೇಯೇ ಉಳಿಸಿಕೊಳ್ಳುವುದರ ಜೊತೆಗೆ, ೧೫೦೦ ಕೋಟಿ ರೂ.ಗಳ ಹಣಕಾಸು ಕೊಡುಗೆಯೊಂದಿಗೆ ಬೋಡೋ ಜನರ ಸರ್ವತೋಮುಖ ಅಭಿವೃದ್ಧಿಯನ್ನು ಖಾತರಿ ಪಡಿಸುತ್ತದೆ ಎಂದು  ಎಂದು ಅಸ್ಸಾಂ ಸಚಿವ ಹಾಗೂ ಈಶಾನ್ಯದ ಬಿಜೆಪಿಯ ಪ್ರಮುಖ ನಾಯಕ ಹಿಮಂತ ಬಿಸ್ವಾ ಶರ್ಮಾ ಹೇಳಿದರು.

ಒಪ್ಪಂದಕ್ಕೆ ಸಹಿ ಹಾಕುವ ಸಂದರ್ಭದಲ್ಲಿ ಹಾಜರಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಒಪ್ಪಂದವನ್ನು ’ಐತಿಹಾಸಿಕ ಎಂಬುದಾಗಿ ಬಣ್ಣಿಸಿ, "ಇದು ಬೋಡೋ ಪ್ರದೇಶ ಮತ್ತು ಅಸ್ಸಾಂ ಅಭಿವೃದ್ಧಿಗೆ ಸಹಾಯ ಮಾಡಲಿದೆ ಎಂದು ಹೇಳಿದರು. ಹಿಂದಿನ ಸಲಕ್ಕಿಂತ ಭಿನ್ನವಾಗಿ ಈ ಬಾರಿ ಎಲ್ಲ ಪಾಲುದಾರರೂ ಸಹಿ ಹಾಕಿರುವುದರಿಂದ ಈ ಒಪ್ಪಂದ ಶಾಶ್ವತ ಒಪ್ಪಂದವಾಗಲಿದೆ. ಕಳೆದ ಬಾರಿ ಮೂರು ಗುಂಪುಗಳು ಒಪ್ಪಂದ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿರಲಿಲ್ಲ ಎಂದು ಅಮಿತ್ ಶಾ ನುಡಿದರು.

ತ್ರಿಪಕ್ಷೀಯ ಒಪ್ಪಂದಕ್ಕೆ ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್, ಎನ್‌ಡಿಎಫ್‌ಬಿ ಮತ್ತು ಎಬಿಎಸ್‌ಯು ಸಂಘಟನೆಗಳ ನಾಲ್ಕು ಬಣಗಳ ನಾಯಕತ್ವ ಮತ್ತು ಕೇಂದ್ರ ಸರ್ಕಾರ ಸಹಿ ಹಾಕಿವೆ. ರಾಜ್ಯ ಸ್ಥಾನಮಾನ ಚಳವಳಿಯ ಮುಂಚೂಣಿಯಲ್ಲಿದ್ದ ಆಲ್ ಬೋಡೋ ವಿದ್ಯಾರ್ಥಿ ಸಂಘ ಕೂಡಾ ಒಪ್ಪಂದಕ್ಕೆ ಸಹಿ ಹಾಕಿತು.

ಒಪ್ಪಂದದ ಪ್ರಕಾರ, ರಾಜ್ಯ ಸ್ಥಾನಮಾನಕ್ಕಾಗಿ ನಡೆದ ಆಂದೋಲನದಲ್ಲಿ ಶಸ್ತ್ರಾಸ್ತ್ರ ಕೈಗೆತ್ತಿಕೊಂಡವರ ಬಗ್ಗೆ ಕೇಂದ್ರವು ಸಹಾನುಭೂತಿಯ ದೃಷ್ಟಿಕೋನವನ್ನು ಹೊಂದಲಿದೆ ಎಂದು ಮೂಲಗಳು ತಿಳಿಸಿದವು.

ಒಪ್ಪಂದದ ಹಿನ್ನೆಲೆಯಲ್ಲಿ ಜನವರಿ ೩೦ ರಂದು ೧,೫೦೦ ಕ್ಕೂ ಹೆಚ್ಚು ಬೊಡೋ ಉಗ್ರಗಾಮಿಗಳು ಶರಣಾಗತರಾಗುವ ನಿರೀಕ್ಷೆಯಿದೆ. "ಅವರು ಈಗ ಉಗ್ರರಲ್ಲ, ಎಲ್ಲರೂ ನಮ್ಮ ಸಹೋದರರು" ಎಂದು ಅಮಿತ್ ಶಾ ಹೇಳಿದರು.

‘ಶರಣಾಗತರಾಗುವ ಉಗ್ರರ ಪೈಕಿ ಶುದ್ಧ ಹಿನ್ನೆಲೆ ಹೊಂದಿರುವವರನ್ನು ಅರೆಸೈನಿಕ ಪಡೆಗಳಿಗೆ ಸೇರ್ಪಡೆ ಮಾಡಿಕೊಳ್ಳಲಾಗುವುದು. ಬೋಡೋ ಚಳವಳಿಯಲ್ಲಿ ಮೃತರಾದವರ ಕುಟುಂಬಗಳಿಗೆ ಪರಿಹಾರವಾಗಿ ೫ ಲಕ್ಷ ರೂಪಾಯಿಗಳನ್ನು ಒದಗಿಸಲಾಗುವುದು ಎಂದು ಶಾ ನುಡಿದರು.

ಒಪ್ಪಂದದ ಪ್ರಕಾರ, ಬಿಟಿಎಡಿ ಎಂಬುದಾಗಿ ಗುರುತಿಸಲಾಗುವ ಪ್ರದೇಶವನ್ನು ’ಬೋಡೋಲ್ಯಾಂಡ್ ಪ್ರಾದೇಶಿಕ ಪ್ರದೇಶ ಎಂದು ಮರುನಾಮಕರಣ ಮಾಡಲಾಗುವುದು ಮತ್ತು ಅಸ್ಸಾಮಿನ ಬೆಟ್ಟ ಪ್ರದೇಶದ ಜಿಲ್ಲೆಗಳಲ್ಲಿ ವಾಸಿಸುವ ಬೋಡೋ ಜನರಿಗೆ ಕೇಂದ್ರವು ’ಬೆಟ್ಟಗಳ ಬುಡಕಟ್ಟು ಸ್ಥಾನಮಾನವನ್ನು ತ್ವರಿತವಾಗಿ ಒದಗಿಸಿಕೊಡಲಿದೆ. ದೇವನಾಗರಿ ಲಿಪಿಯನ್ನು ಹೊಂದಿರುವ ಬೋಡೋ ಭಾಷೆ ಇಡೀ ಅಸ್ಸಾಮಿಕ ಅಧಿಕೃತ ಸಹ ಭಾಷೆಯಾಗಲಿದೆ.

ಒಪ್ಪಂದವು ಭಾರಿ ಹಣಕಾಸು ನೆರವಿನ ಕೊಡುಗೆಯನ್ನು ಕೂಡಾ ಒಳಗೊಂಡಿದೆ. ಈ ಪ್ರದೇಶವನ್ನು ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರವು ೩ ವರ್ಷಗಳವರೆಗೆ ೨೫೦ ಕೋಟಿ ರೂಪಾಯಿಗಳನ್ನು ಒದಗಿಸಲಿದ್ದು, ಕೇಂದ ಸರ್ಕಾರ ಕೂಡಾ  ಸಮಾನ ಮೊತ್ತವನ್ನು  ಅದಕ್ಕೆ ಸೇರಿಸಲಿದೆ. ಪ್ರದೇಶದ ಅಭಿವೃದ್ಧಿಗೆ ಮೂರು ವರ್ಷಗಳಲ್ಲಿ ಒಟ್ಟು ೧೫೦೦ ಕೋಟಿ ರೂ. ಲಭ್ಯವಾಗಲಿದೆ.

ಉದ್ಯಮಗಳ ಸ್ಥಾಪನೆ ಮತ್ತು ಉದ್ಯೋಗ ಪ್ಯಾಕೇಜ್ ಮತ್ತು ಪರಿಸರ ಪ್ರವಾಸೋದ್ಯಮವನ್ನು ಉತ್ತೇಜಿಸಲು ಈ ಹಣವನ್ನು ಬಳಸಲಾಗುತ್ತದೆ. ಸಾಮಾಜಿಕ-ಸಾಂಸ್ಕೃತಿಕ ಪ್ಯಾಕೇಜ್ ಅಡಿಯಲ್ಲಿ ಸರ್ಕಾರವು ಉಪೇಂದ್ರನಾಥ್ ಹೆಸರಿನಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯ ಮತ್ತು ರಾಷ್ಟ್ರೀಯ ಕ್ರೀಡಾ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಿದೆ.

ಇತರ ಯೋಜನೆಗಳಲ್ಲಿ ಪ್ರಾದೇಶಿಕ ವೈದ್ಯಕೀಯ ಸಂಸ್ಥೆ, ಹೋಟೆಲ್ ನಿರ್ವಹಣಾ ಕ್ಯಾಂಪಸ್, ಮದರ್ ಡೈರಿ ಘಟಕ, ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ ಮತ್ತು ಹೆಚ್ಚಿನ ನವೋದಯ ವಿದ್ಯಾಲಯಗಳ ಸ್ಥಾಪನೆ ಸೇರಿವೆ.

"ಒಪ್ಪಂದವನ್ನು ಕಾರ್ಯಗತಗೊಳಿಸಲು ನಾವು ಯಾವುದೇ ಶತ ಪ್ರಯತ್ನ ಮಾಡುತ್ತೇವೆ. ಎಲ್ಲ ಭರವಸೆಗಳೂ ಕಾಲಮಿತಿಯಲ್ಲಿ ಈಡೇರಲಿವೆ ಎಂದು ಅಮಿತ್ ಶಾ ಹೇಳಿದರು.

ಒಪ್ಪಂದದ ಮುಖ್ಯಾಂಶಗಳು
* ತ್ರಿಪಕ್ಷೀಯ ಒಪ್ಪಂದ, ಕೇಂದ್ರ, ರಾಜ್ಯ ಸರ್ಕಾರ ಮತ್ತು ಚಳವಳಿ ನಿರತ ಎಲ್ಲ ಸಂಘಟನೆಗಳ ನಾಯಕರ ಸಹಿ
* ಬೊಡೋ ಜನರ ಸರ್ವತೋಮುಖ ಅಭಿವೃದ್ಧಿಗಾಗಿ ೧೫೦೦ ಕೋಟಿ ರೂಪಾಯಿಗಳ ಪ್ಯಾಕೇಜ್
* ಬೊಡೋ ಭಾಷೆಗೆ ಇಡೀ ಅಸ್ಸಾಮಿನ ಅಧಿಕೃತ ಸಹ ಭಾಷಾ ಸ್ಥಾನಮಾನ
* ಜನವರಿ ೩೦ರಂದು ೧೫೦೦ ಉಗ್ರಗಾಮಿಗಳ ಶರಣಾಗತಿ ನಿರೀಕ್ಷೆ
* ಚಳವಳಿಯಲ್ಲಿ ಸಾವನ್ನಪ್ಪಿದವರ ಕುಟುಂಬಗಳಿಗೆ ತಲಾ ೫ ಲಕ್ಷ ರೂಪಾಯಿ ಪರಿಹಾರ
* ಬಿಟಿಎಡಿ ಪ್ರದೇಶ ಇನ್ನು ಮುಂದೆ ಬೋಡೋಲ್ಯಾಂಡ್ ಪ್ರಾದೇಶಿಕ ಪ್ರದೇಶ
* ಬೆಟ್ಟ ಪ್ರದೇಶದ ಬೋಡೋ ಜನರಿಗೆ ’ಬೆಟ್ಟಗಳ ಬುಡಕಟ್ಟು ಜನಾಂಗದ ಸ್ಥಾನಮಾನ
* ಉದ್ಯಮ ಸ್ಥಾಪನೆ, ಉದ್ಯೋಗ, ಪರಿಸರ ಪ್ರವಾಸೋದ್ಯಮಕ್ಕೆ ಒತ್ತು
* ಉಪೇಂದ್ರನಾಥ್ ಕೇಂದ್ರೀಯ ವಿಶ್ವವಿದ್ಯಾಲಯ ಮತ್ತು ರಾಷ್ಟ್ರೀಯ ಕ್ರೀಡಾ ವಿಶ್ವವಿದ್ಯಾಲಯ ಸ್ಥಾಪನೆ

No comments:

Advertisement