Sunday, January 5, 2020

‘ಭೀತಿ ಸಾಮ್ರಾಜ್ಯ’ದಲ್ಲಿ ಸುತ್ತಾಡಿದ ಪ್ರಿಯಾಂಕಾ ಗಾಂಧಿ ವಾದ್ರಾ

‘ಭೀತಿ ಸಾಮ್ರಾಜ್ಯದಲ್ಲಿ ಸುತ್ತಾಡಿದ  ಪ್ರಿಯಾಂಕಾ  ಗಾಂಧಿ  ವಾದ್ರಾ
ಮುಜಾಫ್ಫರನಗರ ಸಂತ್ರಸ್ಥರ ಭೇಟಿ, ಪೊಲೀಸ್ ದೌರ್ಜನ್ಯಕ್ಕೆ ಖಂಡನೆ
ಮೀರತ್: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು 2020 ಜನವರಿ 04ರ  ಶನಿವಾರ ಉತ್ತರಪ್ರದೇಶದ ಪಶ್ಚಿಮಭಾಗದ ಮುಜಾಫ್ಫರನಗರದಲ್ಲಿ ಕಳೆದ ತಿಂಗಳಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧೀ ಪ್ರತಿಭಟನೆಗಳ ವೇಳೆಯಲ್ಲಿ ಮೃತರಾದವರು, ಗಾಯಗೊಂಡವರು ಮತ್ತು ಬಂಧನಕ್ಕೆ ಒಳಗಾದವರ ಮನೆಗಳಿಗೆ ಭೇಟಿ ನೀಡಿ ಅವರ ಜೊತೆಗೆ ಮಾತುಕತೆ ನಡೆಸಿದರು.

ಪೂರ್ವ ಉತ್ತರಪ್ರದೇಶದ ಉಸ್ತುವಾರಿ ವಹಿಸಿರುವ ಪಕ್ಷದ ಪ್ರಧಾನ ಕಾರ್ಯದರ್ಶಿ ಮೀರತ್ ಹೊರವಲಯದಲ್ಲಿ ಡಿಸೆಂಬರ್ ೨೦ರಂದು ನಡೆದ ಪ್ರತಿಭಟನೆ ಕಾಲದಲ್ಲಿ ಮೃತರಾದ ವ್ಯಕ್ತಿಗಳ ಸಂಬಂಧಿಗಳನ್ನು ಭೇಟಿ ಮಾಡಿದರು. ಮುನ್ನ ಅವರಿಗೆ ಮೃತರ ಬಂಧುಗಳ ಭೇಟಿಗೆ ಅವಕಾಶ ನಿರಾಕರಿಸಲಾಗಿತ್ತು.

ಪ್ರಿಯಾಂಕಾ ಅವರು ದೆಹಲಿಗೆ ವಾಪಸಾಗುವ ಮಾರ್ಗದಲ್ಲಿ ಬೈಪಾಸ್ ರಸ್ತೆಯಲ್ಲಿ ಐವರು ಮೃತರ ಕುಟುಂಬಗಳ ಜೊತೆ ಮಾತನಾಡಿದರು ಎಂದು ಮೀರತ್ ನಗರ ಕಾಂಗ್ರೆಸ್ ಘಟಕದ ಮುಖ್ಯಸ್ಥ ಜಹೀದ್ ಅನ್ಸಾರಿ ಹೇಳಿದರು.

ಪ್ರಿಯಾಂಕಾಗಾಂಧಿ ಅವರು ಮುಜಾಫ್ಫರನಗರಕ್ಕೆ ಶನಿವಾರ ಬೆಳಗ್ಗೆ ಆಗಮಿಸಿ ಮೀನಾಕ್ಷಿ ಚೌಕದ ಬಳಿ ಮದ್ರಸಾ ಹೊಜ್ ಇಲ್ಮಿಯಾ ನಡೆಸುವ ಮೌಲಾನಾ ಅಸದ್ ಹುಸೈನಿ ಅವರನ್ನು ಭೇಟಿ ಮಾಡಿದರು. ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆ ವೇಳೆಯಲ್ಲಿ ಇದೇ ಚೌಕದಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು.

ಸಂತ್ರಸ್ಥರೆಲ್ಲರೂ ಪೊಲೀಸರು ಭೀತಿಯ ಸಾಮ್ರಾಜ್ಯ ಸೃಷ್ಟಿಸಿದ್ದಾರೆ ಮತ್ತು ಮಾಡದ ತಪ್ಪುಗಳಿಗಾಗಿ ತಮ್ಮನ್ನು ಥಳಿಸುತ್ತಿದ್ದಾರೆ ಎಂದು ಆಪಾದಿಸಿದರುಎಂದು ಹುಸೈನಿ ಮತ್ತು ಇತರ ಸಂತ್ರಸ್ಥರ ಜೊತೆಗಿನ ಮಾತುಕತೆಯ ಬಳಿಕ ಪ್ರಿಯಾಂಕಾ ಅವರು ಹೇಳಿದರು. ಪೊಲೀಸರು ಮದ್ರಸಾವನ್ನು ಪ್ರವೇಶಿಸಿ ಮೌಲಾನಾ ಮತ್ತು ಅವರ ವಿದ್ಯಾರ್ಥಿಗಳನ್ನು ಥಳಿಸಿದರು ಎಂದು ಪ್ರಿಯಾಂಕಾ ನುಡಿದರು.

ಪೊಲೀಸರಿಂದ ಕ್ರೂರವಾಗಿ ಥಳಿಸಲ್ಪಟ್ಟ ಮೌಲಾನಾ ಅಸದ್ ಹುಸೈನಿ ಅವರನ್ನು ನಾನು ಭೇಟಿ ಮಾಡಿದ್ದೇನೆ. ಅಪ್ರಾಪ್ತರೂ ಸೇರಿದಂತೆ ಮದ್ರಸಾದ ವಿದ್ಯಾರ್ಥಿಗಳನ್ನು ಯಾವ ಕಾರಣವೂ ಇಲ್ಲದೆ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಅವರಲ್ಲಿ ಕೆಲವರನ್ನು ಬಿಡುಗಡೆ ಮಾಡಲಾಗಿದೆ, ಕೆಲವರು ಇನ್ನೂ ಪೊಲೀಸರ ವಶದಲ್ಲೇ ಇದ್ದಾರೆಎಂದು ಅವರು ವರದಿಗಾರರ ಜೊತೆ ಮಾತನಾಡುತ್ತಾ ಹೇಳಿದರು.

ಪ್ರಿಯಾಂಕಾ ಗಾಂಧಿ ಅವರು ಪ್ರತಿಭಟನೆಗಳ ಕಾಲದಲ್ಲಿ ಸಾವನ್ನಪ್ಪಿದ ನೂರ್ ಮೊಹಮ್ಮದ್ ಮನೆಗೂ ಭೇಟಿ ನೀಡಿದರು. ಒಂದೂವರೆ ವರ್ಷದ ಮಗಳನ್ನೂ ಹೊಂದಿರುವ ಮೃತ ನೂರ್ ಮೊಹಮ್ಮದ್ ಅವರ ಏಳು ತಿಂಗಳ ಗರ್ಭಿಣಿ ಪತ್ನಿ ಜೊತೆಗೂ ಪ್ರಿಯಾಂಕಾ ಮಾತನಾಡಿದರು.

ಶನಿವಾರ
ಮದುವೆಗೆ ಸಜ್ಜಾಗುತ್ತಿದ್ದ ರುಕಿಯಾ ಜೊತೆಗೂ ಪ್ರಿಯಾಂಕಾ ಮಾತನಾಡಿದರು. ಆಕೆಯ ಮನೆಯನ್ನು ಧ್ವಂಸಗೊಳಿಸಿದ ಪೊಲೀಸರು ಮದುವೆಗಾಗಿ ತಂದಿದ್ದ ಸಾಮಗ್ರಿಯನ್ನೂ ಹಾನಿಪಡಿಸಿದ್ದರು.

ಪ್ರತಿಭಟನೆ
ಕಾಲದಲ್ಲಿ ನಡೆದ ಪೊಲೀಸ್ ದೌರ್ಜನ್ಯಗಳನ್ನು ವಿವರಿಸಿ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಅವರಿಗೆ ತಾವು ಮನವಿಯೊಂದನ್ನು ಸಲ್ಲಿಸಿರುವುದಾಗಿ ಪ್ರಿಯಾಂಕಾ ಹೇಳಿದರು.

ತಾನು ಮತ್ತು ತಮ್ಮ ಕಾಂಗ್ರೆಸ್ ಪಕ್ಷವು ಸಂತ್ರಸ್ಥರು ಮತ್ತು ಅವರ ಕುಟುಂಬಗಳ ಪರವಾಗಿ ಸದಾಕಾಲವೂ ನಿಲ್ಲುವ ಬದ್ಧತೆಯನ್ನು ಪುನರುಚ್ಚರಿಸಿದ ಪ್ರಿಯಾಂಕಾ, ಜನರಿಗೆ ಅನ್ಯಾಯವಾದ ಪ್ರತಿಸ್ಥಳಕ್ಕೂ ಹೋಗುವುದಾಗಿ ಹೇಳಿದರು.

ಪ್ರಿಯಾಂಕಾ
ಗಾಂಧಿ ಮತ್ತು ಅವರ ಸಹೋದರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಡಿಸೆಂಬರ್ ಕೊನೆಯ ವಾರ ಸಂತ್ರಸ್ಥರ ಕುಟುಂಬಗಳನ್ನು ಭೇಟಿ ಮಾಡಲು ಯತ್ನಿಸಿದ್ದರು. ಆದರೆ ಅವರಿಗೆ ಅನುಮತಿ ನಿರಾಕರಿಸಿ ನಗರದ ಹೊರವಲಯದಿಂದಲೇ ವಾಪಸ್ ಕಳುಹಿಸಲಾಗಿತ್ತು.

ಲಕ್ನೋ ಮತ್ತು ಬಿಜ್ನೋರಿನಲ್ಲಿ ಹಿಂಸಾತ್ಮಕ ಪ್ರತಿಭಟನೆ ಕಾಲದಲ್ಲಿ ಮೃತರಾದವರು, ಗಾಯಾಳುಗಳು ಅಥವಾ ಬಂಧನಕ್ಕೆ ಒಳಗಾದವರ ಕುಟುಂಬ ಸದಸ್ಯರನ್ನು ಪ್ರಿಯಾಂಕಾ ಗಾಂಧಿ ಭೇಟಿ ಮಾಡುತ್ತಿದ್ದಾರೆ.

ಹಿಂಸಾತ್ಮಕ ಪ್ರತಿಭಟನೆಗಳ ಕಾಲದಲ್ಲಿ ಉತ್ತರ ಪ್ರದೇಶದಲ್ಲಿ ಪೊಲೀಸರೊಂದಿಗೆ ನಡೆದ ಘರ್ಷಣೆಗಳ ವೇಳೆಯಲ್ಲಿ ೨೦ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು ನೂರಾರು ಮಂದಿ ಗಾಯಗೊಂಡಿದ್ದರು. ಬಳಿಕ ಹಿಂಸಾತ್ಮಕ ಪ್ರತಿಭಟನೆಗಳು ರಾಜ್ಯದ ಇತರ ಹಲವಾರು ಪ್ರದೇಶಗಳಿಗೂ ಹರಡಿತ್ತು.

No comments:

Advertisement